ಪುಟಗಳು

ಗುರುವಾರ, ಮಾರ್ಚ್ 17, 2022

ಕಾಲ ಪ್ರವಾಹದೊಂದಿಗೆ ಹರಿದು ಬಂದ ಹಿಂದೂ-ಯೆಹೂದಿ ಬೆಸುಗೆ

  ಕಾಲ ಪ್ರವಾಹದೊಂದಿಗೆ ಹರಿದು ಬಂದ ಹಿಂದೂ-ಯೆಹೂದಿ ಬೆಸುಗೆ


ಹಿಂದೂ ಹಾಗೂ ಯೆಹೂದಿಗಳು  ಪ್ರಪಂಚದಲ್ಲಿ ವ್ಯಾಪಕವಾಗಿದ್ದ ಹಳೆಯ ಎರಡು ನಾಗರಿಕತೆಗಳು. ಇವೆರಡರ ನಡುವಿನ ಸಂಬಂಧ ಹಾಗೂ ಸಂವಹನಗಳು ಕೂಡಾ ಪ್ರಾಚೀನವೇ. ಆದರೆ ಓಲೈಕೆಯ ರಾಜಕಾರಣ ಆ ನಮ್ಮ ಮಿತ್ರ ರಾಷ್ಟ್ರವನ್ನು ದೂರವಿಟ್ಟು ನಮ್ಮದೇ ಅಂತಾರಾಷ್ಟ್ರೀಯ ಸ್ಥಾನಕ್ಕೆ ಪೆಟ್ಟುಕೊಟ್ಟಿತು. 


ಹೀಬ್ರೂ ಹಾಗೂ ಹಿಂದೂಗಳ ನಡುವಿನ ವ್ಯಾಪಾರ ಸಂಪರ್ಕವು ಡೇವಿಡ್ ಮತ್ತು ಸೊಲೊಮನ್ ಕಾಲದಷ್ಟು ಹಿಂದಿನದ್ದು(ಕ್ರಿ.ಪೂ. ೯೫೦). "ರಾಜನು ಹಿರಮ್(ಅಹಿರಮ್)ನ(ಟೈರ್ ಅರಸ) ಹಡಗುಗಳೊಂದಿಗೆ ಸಮುದ್ರ ಮಾರ್ಗದ ವ್ಯಾಪಾರಕ್ಕಾಗಿ ತನ್ನ ಹಡಗುಗಳನ್ನು ಕಳುಹಿಸುತ್ತಿದ್ದನು. ಪ್ರತಿ ಮೂರು ವರ್ಷಗಳಿಗೊಮ್ಮೆ ಅದು ಚಿನ್ನ, ಬೆಳ್ಳಿ, ದಂತ, ಕಪಿಗಳು ಮತ್ತು ಬಬೂನ್ಗಳನ್ನು ಹೊತ್ತು ತರುತ್ತಿತ್ತು". ಬೈಬಲ್ (ಕಿಂಗ್ಸ್ 10.22). ಹಳೆಯ ಒಡಂಬಡಿಕೆಯ ಪ್ರಕಾರ, ಓಫಿರ್ ಎಂಬ ಸ್ಥಳ ಸಂಪತ್ತಿಗೆ ಪ್ರಸಿದ್ಧವಾಗಿತ್ತು. ಸೊಲೊಮನ್ ಈ ಸ್ಥಳದಿಂದ ಚಿನ್ನ, ಬೆಳ್ಳಿ, ಶ್ರೀಗಂಧ, ಮುತ್ತುಗಳು, ದಂತ, ಮಂಗಗಳು ಮತ್ತು ನವಿಲುಗಳನ್ನು ತರಿಸುತ್ತಿದ್ದ. ಓಫಿರ್ ಎಂಬುದು ಪಶ್ಚಿಮ ಭಾರತದ ಅಭೀರ ಸಾಮ್ರಾಜ್ಯ ಎಂದು ಆಧುನಿಕ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಆದರೆ ಭಾರತಕ್ಕೆ ದೊಡ್ಡ ಪ್ರಮಾಣದ ಯಹೂದಿ ನಿರಾಶ್ರಿತರ ಮೊದಲ ವಲಸೆ ಆದದ್ದು ಜೆರುಸಲೆಮ್ ಅನ್ನು ರೋಮನ್ನರು ನಾಶಪಡಿಸಿದ ನಂತರ. ಭಾರತೀಯ ಯಹೂದಿ ಸಂಪ್ರದಾಯದ ಪ್ರಕಾರ ಯಹೂದಿ ನಿರಾಶ್ರಿತರ ಮೊದಲ ತಂಡ ಸಾಮಾನ್ಯ ಯುಗ 70ರಲ್ಲಿ ಕೇರಳದ ಕರಾವಳಿಯಾದ ಕೊಡುಂಗಲ್ಲೂರಿನಲ್ಲಿ ಬಂದಿಳಿಯಿತು. ಕೊಡುಂಗಲ್ಲೂರಿನ ಹಿಂದೂ ಮಹಾರಾಜರು ಯಹೂದಿ ನಿರಾಶ್ರಿತರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಆತ ಆ ನಿರಾಶ್ರಿತರಿಗೆ ಭೂಮಿಯ ಜೊತೆಗೆ ತಮ್ಮ ಮತವನ್ನು ಆಚರಿಸುತ್ತಾ ಜೀವಿಸುವ ಸ್ವಾತಂತ್ರ್ಯವನ್ನು ನೀಡಿದ. ಮಟ್ಟಂಚೇರಿಯಲ್ಲಿರುವ ಪರದೇಸಿ ಸಿನಗಾಗ್(Paradesi Synagogue) ಅಲ್ಲಿರುವ ಚಿತ್ರವೊಂದು ಈ ದೃಶ್ಯವನ್ನು ಕಟ್ಟಿಕೊಟ್ಟಿದೆ. ಅದರಲ್ಲಿ ಹಿಂದೂ ರಾಜನು ಯಹೂದಿ ನಿರಾಶ್ರಿತರನ್ನು ಸ್ವಾಗತಿಸುವ ದೃಶ್ಯವಿದೆ. ಕೇರಳದ ಹಿಂದೂ ಮಹಾರಾಜನು ಕರುಣಿಸಿದ ಈ ಅಭಯವು ಪಶ್ಚಿಮದಲ್ಲಿ ಕಿರುಕುಳವನ್ನು ಅನುಭವಿಸಿದ ಯಹೂದ್ಯರು ಶತಮಾನಗಳ ಪರ್ಯಂತ ಭಾರತಕ್ಕೆ ವಲಸೆ ಬರುವಂತೆ ಉತ್ತೇಜಿಸಿತು. ತಮ್ಮ ನಾಯಕ ಜೋಸೆಫ್ ರಬ್ಬನ್ ಹಿಂದೂ ಮಹಾರಾಜರಿಂದ ತೆರಿಗೆ ಮುಕ್ತ ಭೂಮಿಯ ಸಹಿತ ಅನೇಕ ಸವಲತ್ತುಗಳನ್ನು ಪಡೆದುದನ್ನು ಯೆಹೂದಿ ಸಂಪ್ರದಾಯ ಕೃತಜ್ಞತೆಯಿಂದ ಸ್ಮರಿಸಿದೆ. ಭಾಸ್ಕರ ರವಿ ವರ್ಮನ ಕೊಚ್ಚಿನ್ ಶಾಸನ ಯಹೂದಿ ವ್ಯಾಪಾರಿ ಜೋಸೆಫ್ ರಬ್ಬನ್‌ಗೆ ನೀಡಿದ ಅನುದಾನವನ್ನು ದಾಖಲಿಸಿದೆ. ರಬ್ಬನ್ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದುದು ಮಾತ್ರವಲ್ಲದೆ ಅನುವಂಶಿಕ ಉತ್ತರಾಧಿಕಾರವನ್ನು ಕೂಡಾ ಪಡೆದ. ಈ ಶಾಸನದ ವಿಶೇಷತೆ ಏನೆಂದರೆ ಅದು ಯೆಹೂದಿಗಳಿಗೆ ರಾಜ ಮನೆತನದಿಂದ ಸಂರಕ್ಷಣೆಯ ಹಕ್ಕನ್ನು ನೀಡಿತು. ಜೊತೆಗೆ ಬೆಳಗ್ಗೆ ಹಾಗೂ ಮದುವೆಯ ದಿನದಂದು ಮೂರು ಸೆಲ್ಯೂಟ್ ಗಳನ್ನು ಪಡೆಯುವ ಹಕ್ಕನ್ನೂ ಕೊಡಮಾಡಿತು. ಅಂದರೆ ವಾಸ್ತವಿಕವಾಗಿ ರಬ್ಬನ್‌ಗೆ ರಾಜನ ಸ್ಥಾನಮಾನವನ್ನು ಇದು ಕೊಟ್ಟಿತು. ಕೇರಳದ ಯೆಹೂದಿ ಹಾಡುಗಳು ಅವನನ್ನು "ಯಹೂದಿಗಳ ರಾಜ" ಎಂದು ಕರೆದಿರುವುದಕ್ಕೆ ಕಾರಣ ಇದು. ಇದರರ್ಥ ಹಿಂದೂಗಳು ಯೆಹೂದಿಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿದರು. ಸಮಾನ ಗೌರವ, ಸವಲತ್ತುಗಳನ್ನೂ ನೀಡಿದರು. ಯೆಹೂದಿಗಳ ನೆಮ್ಮದಿಗೆ ಕಾರಣವಾದರು. ಶೀಘ್ರದಲ್ಲೇ ಪಶ್ಚಿಮ ಕರಾವಳಿಯ ವ್ಯಾಪಾರ-ವಹಿವಾಟುಗಳಲ್ಲಿ ಅವರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಇದು ಯಹೂದ್ಯರ ಇತಿಹಾಸದಲ್ಲೇ ಅವರು ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗದ ಏಕೈಕ ಉದಾಹರಣೆ.


ಹಿಂದೂ ಭಾರತವು ಯೆಹೂದಿಗಳಿಗೆ ಎಷ್ಟು ಸ್ವಾಗತಾರ್ಹ ನೆಲೆಯಾಯಿತೆಂದರೆ, 15-16 ನೇ ಶತಮಾನದಲ್ಲಿ ಸ್ಪೈನಿನಲ್ಲಿ ಇನ್ಕ್ವಿಷನ್ ಆರಂಭವಾದಾಗ ಸಾವಿರಾರು ಸೆಫಾರ್ಡಿಕ್ ಯೆಹೂದಿಗಳು ಪ್ರಾಣ ರಕ್ಷಣೆಗಾಗಿ ಕೇರಳಕ್ಕೆ ಓಡಿ ಬಂದರು. ಇಂದು ಅವರ ಸಂತತಿಯನ್ನು "ಪರದೇಸಿ ಯೆಹೂದಿಗಳು" (ಬಿಳಿಯರು) ಎಂದು ಕರೆಯಲಾಗುತ್ತದೆ. ಅವರ ಒಂದು ಹಾಡು "ಹಿಂದೂಗಳು ನಮ್ಮ ನಿಜವಾದ ಸಹೋದರರು" ಎನ್ನುವ ಅರ್ಥಭರಿತ ಸಾಲನ್ನು ಹೊಂದಿದೆ. ದುರದೃಷ್ಟವಶಾತ್ ಯೆಹೂದಿಗಳ ಬೆನ್ನಿಗೆ ಅವರ ಶತ್ರುಗಳೂ, ಮನುಕುಲದ ಶತ್ರುಗಳೂ ಭಾರತಕ್ಕೆ ನುಸುಳಿದರು! 1524 ರಲ್ಲಿ ಕರಿಮೆಣಸ್ಸಿನ ವಹಿವಾಟಿನಲ್ಲಿ ನಡೆದ ಜಗಳದಲ್ಲಿ ಮುಸ್ಲಿಮ್ ಗುಂಪು ಕೊಡುಂಗಲ್ಲೂರಿನ ಯೆಹೂದಿ ವಸಾಹತನ್ನು ನಾಶಗೊಳಿಸಿತು. ಆ ಮತಾಂಧರು ಯೆಹೂದಿ ಮನೆಗಳು ಮತ್ತು ಸಿನಗಾಗ್‌ಗಳನ್ನು ಕೂಡಾ ಸುಟ್ಟುಹಾಕಿದರು. ಕೊನೆಯ ಯಹೂದಿ ರಾಜಕುಮಾರ ಕೊಚ್ಚಿಗೆ ಪಲಾಯನಗೈದ. ಕೊಚ್ಚಿ ಬಳಿಕ ಯಹೂದಿಗಳ ಪಟ್ಟಣವಾಯಿತು. ಕೊಚ್ಚಿಯ ಹಿಂದೂ ರಾಜನು ಯಹೂದಿ ನಿರಾಶ್ರಿತರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ರಾಜಭವನ ಮತ್ತು ರಾಜ ದೇವಾಲಯದ ಪಕ್ಕದಲ್ಲಿ ಸಿನಗಾಗ್(ಪ್ರಾರ್ಥನಾ ಸ್ಥಳ)ಅನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟ.


ವ್ಯಾಟಿಕನ್ ಇನ್ಕ್ವಿಷನ್ ಸಮಯದಲ್ಲಿ ಭಾರತೀಯ ಯೆಹೂದ್ಯರಿಗೆ ಪೋರ್ಚುಗೀಸರ ಕಿರುಕುಳವೂ ತಪ್ಪಲಿಲ್ಲ. ಆಗಲೂ ಯೆಹೂದ್ಯರು ರಕ್ಷಣೆಗಾಗಿ ಧಾವಿಸಿದ್ದು ಕೊಚ್ಚಿಗೇ. ಮಹಾರಾಜರು ಅವರಿಗೆ ಅನೇಕ ಸಿನಗಾಗ್'ಗಳನ್ನು ಸ್ಥಾಪಿಸಲು ಅವಕಾಶ ಕೊಟ್ಟರು. 1568ರಲ್ಲಿ ಕೊಚ್ಚಿ ಮಹಾರಾಜರ ಮುತುವರ್ಜಿಯಲ್ಲಿ ನಿರ್ಮಿಸಲ್ಪಟ್ಟ ಪರದೇಸಿ ಸಿನಗಾಗ್ ಹಾಗೂ ಕೊಚ್ಚಿಯ ರಾಯಲ್ ಫೋರ್ಟ್ ದೇವಸ್ಥಾನಗಳು ಇಂದಿಗೂ ಪರಸ್ಪರ ಅಕ್ಕಪಕ್ಕದಲ್ಲೇ ಇವೆ.ಇದಲ್ಲದೆ, ಮುಂದೆ ಪರದೇಸಿ ಸಿನಗಾಗ್‌ಗೆ ಚಿನ್ನದ ಕಿರೀಟಗಳನ್ನು ಉಡುಗೊರೆಯಾಗಿ ನೀಡುವುದು ಕೊಚ್ಚಿಯ ಮಹಾರಾಜರ ಸಂಪ್ರದಾಯವಾಗಿ ಬೆಳೆಯಿತು. ಇವೆಲ್ಲವನ್ನೂ ಸಂರಕ್ಷಿಸಿ ಸಿನಗಾಗ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಯೆಹೂದಿ ತಾಯ್ನಾಡನ್ನು ರಚಿಸುವ ಬ್ರಿಟಿಷರ ಉದ್ದೇಶವು 1917ರ ಬಾಲ್ಫೋರ್ ಘೋಷಣೆಯಲ್ಲಿ ದೃಢವಾದಾಗ ಕೇರಳದಲ್ಲಿದ್ದ ಅನೇಕ ಯಹೂದಿಗಳು ಬ್ರಿಟಿಷ್ ಪ್ಯಾಲೆಸ್ಟೈನ್ಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಅಂದಿನ ಕೊಚ್ಚಿಯ ಮಹಾರಾಜ ರಾಮ ವರ್ಮ, 8000 ಯೆಹೂದಿಗಳು ಅವರ ಪವಿತ್ರ ಭೂಮಿಗೆ ವಲಸೆ ಹೋಗಲು ಸಹಾಯ ಮಾಡಿದರು. ಅವರ ಪ್ರಯಾಣದ ಖರ್ಚುವೆಚ್ಚಗಳನ್ನು ಅರಸರೇ ಭರಿಸಿದರು. ವಿದ್ವಾಂಸ ನಾಥನ್ ಹ್ಯಾಟ್ಜ್ ಪ್ರಕಾರ, ಅರಸ ತನ್ನ ಯಹೂದಿ ಪ್ರಜೆಗಳ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಸಬ್ಬತ್‌ ಸಮಯಲ್ಲಿ ಯುದ್ಧಗಳನ್ನು ಕೈಗೊಳ್ಳುತ್ತಿರಲಿಲ್ಲ. ಇದು ಹಿಂದೂ ಸಹಿಷ್ಣುತೆಗೆ ಮಹತ್ತರ ಉದಾಹರಣೆ. 1948ರಲ್ಲಿ ಇಸ್ರೇಲ್‌ಗೆ ವಲಸೆ ಹೋಗಲು ಭಾರತವನ್ನು ತೊರೆದ ಬಳಿಕ ಭಾರತೀಯ ಯಹೂದಿಗಳು ಅನೇಕ ಕಷ್ಟಗಳನ್ನು ಮತ್ತು ವರ್ಣಭೇದ ನೀತಿಯನ್ನು ಎದುರಿಸಬೇಕಾಯಿತು. ಇವೆಲ್ಲವೂ ಹಿಂದೂ ಸಮುದಾಯ ಯೆಹೂದಿಗಳನ್ನು ಎಷ್ಟು ಸಹಿಷ್ಣುತೆ ಹಾಗೂ ಸಮಾನ ಗೌರವದಿಂದ ಕಂಡಿತು, ಆದರೆ ಉಳಿದ ಮತಗಳು ಹೇಗೆ ಅಟ್ಟಾಡಿಸಿ ಬಡಿದವು ಎಂಬುದಕ್ಕೆ ನಿದರ್ಶನಗಳಾಗಿವೆ.


ಹಿಂದೂಗಳು ಮತ್ತು ಯಹೂದಿಗಳ ನಡುವಿನ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿನಿಮಯದ ಇತಿಹಾಸ ಸುದೀರ್ಘ ಕಾಲದ್ದು. ಯಹೂದಿ ಖಗೋಳಶಾಸ್ತ್ರಜ್ಞ ಸನದ್ ಇಬ್ನ್ ಅಲ್ ಯಹೂದಿ (9ನೇ ಶತಮಾನ) ಸೂರ್ಯ ಸಿದ್ಧಾಂತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದ್ದರು ಮತ್ತು ಸೂರ್ಯ ಸಿದ್ಧಾಂತದ ಮೇಲೆ ಒಂದು ಗ್ರಂಥವನ್ನು ಕೂಡಾ ಬರೆದರು. ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ವಿದ್ವಾಂಸರಾಗಿದ್ದ ರಬ್ಬಿ ಅಬ್ರಹಾಂ ಇಬ್ನ್ ಎಜ್ರಾ (12 ನೇ ಶತಮಾನ) ಪುರಾತನ ಭಾರತೀಯ ವಿಜ್ಞಾನದಿಂದ ತುಂಬಾ ಪ್ರಭಾವಿತರಾಗಿದ್ದರು. ತಮ್ಮ ಪುಸ್ತಕ Sefer ha-mispar ನಲ್ಲಿ, ಅವರು ಅಂಕಿಗಳನ್ನು(0-9) ಜಗತ್ತಿಗೆ ಪರಿಚಯಿಸಿದ ಹಿಂದೂಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತಕ್ಕೆ ಬಂದಿದ್ದ ಆತ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಗ್ರಹಿಸಿದ್ದರು. ವಿಜ್ಞಾನಕ್ಕೆ ಮೂಲ ಭಾರತವೇ ಎಂದು ಗಟ್ಟಿ ದನಿಯಲ್ಲಿ ಪ್ರತಿಪಾದಿಸಿದ್ದ ಆತ, ಭಾರತೀಯ ವಿಜ್ಞಾನವು ಉತ್ಕೃಷ್ಟ ಮಟ್ಟದಲ್ಲಿತ್ತು, ಇಂದು ವಿಜ್ಣಾನಕ್ಕೆ ತಾನೇ ಮೂಲ ಎನ್ನುವ ಯೂರೋಪು ಅದರ ಹತ್ತಿರಕ್ಕೂ ಸುಳಿಯಲಾರದು ಎಂದಿದ್ದರು. ಆತ ತಮ್ಮ ಜ್ಯೋತಿಷ್ಯ ಗ್ರಂಥಗಳಲ್ಲಿ ರಾಶಿ,ಕುಂಡಲಿಗಳನ್ನು ಬಳಸಿದ್ದರು ಕೂಡಾ. 


ಹೈಫಾ ಯುದ್ಧವನ್ನು ಯೆಹೂದ್ಯರಿಗೆ ಗೆದ್ದುಕೊಟ್ಟದ್ದು ಕೂಡಾ ಭಾರತವೇ. ತುರ್ಕರು ಹಾಗೂ ಜರ್ಮನ್ನರ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ದುರ್ಗಮ ಕಣಿವೆಗಳನ್ನು ನೋಡಿ ತಮ್ಮಲ್ಲಿದ್ದ ಈಟಿ, ಭರ್ಜಿಗಳಿಂದ ಕುದುರೆಗಳ ಮೇಲೆ ಕುಳಿತು ಸವಾರಿ ಮಾಡುತ್ತಾ ಈ ಯುದ್ಧವನ್ನು ಗೆಲ್ಲಲಾಗದು ಎಂದರಿತ ಬ್ರಿಟಿಷ್ ಅಧಿಕಾರಿ ವಾವೆಲ್ ಯುದ್ಧದಿಂದ ಹಿಂದೆ ಸರಿಯಲು ನಿರ್ಧರಿಸಿದಾಗ, ನಮ್ಮ ಸೈನಿಕರು (ಮೈಸೂರು ಲ್ಯಾನ್ಸರ್ಸ್, ಜೋಧಪುರದ ಅಶ್ವಪಡೆ, ಹೈದರಾಬಾದ್ ರೆಜಿಮೆಂಟ್) “ನಾವು ಸಾಯಲು ಸಿದ್ಧರಿದ್ದೇವೆಯೇ ಹೊರತೂ ಯುದ್ಧಕ್ಕೆಂದು ಬಂದ ಮೇಲೆ ಯುದ್ಧ ಮಾಡದೆ ಇಲ್ಲಿಂದ ಹೇಡಿಗಳಂತೆ ಹಿಂದೆ ತಿರುಗುವ ಪ್ರಶ್ನೆಯೇ ಇಲ್ಲ” ಎಂದು ತಮ್ಮ ಬಳಿಯಿದ್ದ ಈಟಿ,ಭರ್ಜಿಗಳ ಮೂಲಕವೇ ಶತ್ರು ಬಣವನ್ನೆದುರಿಸಿ, ಅವರ ಸೈನ್ಯದ ಫಿರಂಗಿ, ಮಷಿನ್ ಗನ್‌ಗಳಿಗೆ ಎದೆಯೊಡ್ಡಿ, ನಾನ್ನೂರಕ್ಕೂ ಹೆಚ್ಚು ವರ್ಷಗಳ ಕಾಲದ ಆಳ್ವಿಕೆಯನ್ನು ಕೇವಲ ಹದಿನೈದು ಗಂಟೆಗಳೊಳಗಾಗಿ ಅಂತ್ಯಗೊಳಿಸಿ ಇಸ್ರೇಲ್ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದರು.


ಈ ಎಲ್ಲಾ ಕಾರಣಗಳಿಂದಲೇ ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಗತ್ತಿನ ದೊಡ್ಡಣ್ಣರೆಲ್ಲಾ ನಮ್ಮ ವಿರುದ್ಧವಿದ್ದಾಗ ಇಸ್ರೇಲ್ ನಮ್ಮ ಸಹಾಯಕ್ಕೆ ಬಂದಿತು.. ಬಹುತೇಕ ಸ್ವಾತಂತ್ರ್ಯೋತ್ತರದ ನಮ್ಮ ಸೆಕ್ಯುಲರ್ ರಾಜಕಾರಣ ಇಸ್ರೇಲಿಗೆ ವಿರುದ್ಧವಾಗಿ ವರ್ತಿಸಿದರೂ ಇಸ್ರೇಲ್ ತನಗೆ ಉಪಕಾರ ಮಾಡಿದ ಹಿಂದೂ ರಾಷ್ಟ್ರವನ್ನು ಮರೆಯದೇ ಇಂದಿನವರೆಗೂ ನಮ್ಮ ಬೆನ್ನಿಗೆ ನಿಂತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ