ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ
"ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||"
ಉತ್ತರದ ಎತ್ತರದಿಂದ ಬಂದು, ವಿಂಧ್ಯನ ಎತ್ತರ ಬೆಳೆಯುವ ಉದ್ಧಟತೆಯನ್ನು ದಕ್ಷಿಣದಲ್ಲೇ ನೆಲೆನಿಂತು ಸಾಮದಿಂದಲೇ ಬಗ್ಗಿಸಿ ಕಾವೇರಿಯ ಉಗಮಕ್ಕೂ, ತಮಿಳಿನ ಉತ್ಕರ್ಷಕ್ಕೂ ಕಾರಣರಾಗಿ, ಸಮುದ್ರದ ನೀರನ್ನೆಲ್ಲಾ ಆಪೋಶನಗೈದು, ವಾತಾಪಿ-ಇಲ್ವಲರೆಂಬ ದುರುಳರ ಮಟ್ಟ ಹಾಕಿ, ಮಳೆಗಾಲ ಆರಂಭವಾಗುವವರೆಗೆ ಶುಭ್ರವಾದ ದಕ್ಷಿಣಾಗಸದಲ್ಲಿ ಉತ್ತರಕ್ಕೆ ಬರಲಾರೆ ಎನ್ನುತ್ತಾ ನಕ್ಷತ್ರವಾಗಿ ಹೊಳೆವ ಋಷಿ ಅಗಸ್ತ್ಯರು ಶಾರದೆಯನ್ನು ಸ್ತುತಿಸಿದ್ದು ಹೀಗೆ. ಬ್ರಹ್ಮಸರವೆಂಬ ಹಿಮಪರ್ವತಗಳ ನಡುವಿನ ಸರಸಿರೆಯಿಂದ ಜಲತರಂಗಿಣಿಯಾಗಿ, ಸನಾತನಿಗಳ ನಾಲಿಗೆಯಲ್ಲಿ ನಲಿವ ವೇದಮಾತೆಯಾಗಿ, ಹಿಂದೂಗಳ ಜೀವನಾಡಿಯಾಗಿ ಸಪ್ತಪವಿತ್ರ ನದಿಗಳಲ್ಲೊಬ್ಬಾಕೆಯಾಗಿ ಹರಿದ ಜ್ಞಾನದಾಯಿನಿ ಸರಸ್ವತಿಗೆ ಅವಳದೇ ಜನ್ಮಭೂಮಿಯ ಕುಂದ(ಮಲ್ಲಿಗೆ) ತುಷಾರ(ಶುಭ್ರಸ್ಫಟಿಕ ಹಿಮರಾಶಿ) ಧವಳ ರಾಶಿಯ ನಡುವೆ ಅವಳಿಗೊಂದು ಪೀಠ ನಿರ್ಮಾಣ ಮಾಡಿ ಮೂರ್ತರೂಪದಲ್ಲಿ ಪ್ರತಿಷ್ಠಾಪಿಸಿ ಅದು ಜ್ಞಾನದ ಉತ್ತುಂಗ ಪೀಠವಾಗುವಂತೆ ಮಾಡಿದ್ದು ಉಪನಿಷತ್ಕಾರ ಋಷಿ ಶಾಂಡಿಲ್ಯ.
ಕಶ್ಯಪ ಬ್ರಹ್ಮನ ಮೊಮ್ಮಗ ಶಾಂಡಿಲ್ಯ ಬಾಲ್ಯದಲ್ಲಿ ಉಪನಯನ ದೀಕ್ಷೆಯಿಂದ ವಂಚಿತನಾದಾಗ ತಂದೆಯ ಆದೇಶದಂತೆ ಶಾರದೆಯ ಕುರಿತು ತಪಸ್ಸಿಗೆ ತೊಡಗಿದ. ಆತ ಕೃಷ್ಣನಾಗ ನದಿಯಲ್ಲಿ ಮಿಂದಾಗ ಆತನ ಅರ್ಧ ದೇಹವೇ ಬಂಗಾರಮಯವಾಗಿ ಶಾರದೆಯ ಸಾಕ್ಷಾತ್ಕಾರದ ಕವಾಟ ತೆರೆವ ಸಂಕೇತವಾಯಿತು. ಮುಂದೆ ಪರ್ವತಗಳ ಹಾದಿಯಲ್ಲಿ ಮುನ್ನಡೆದಾಗ ರಂಗವಾಟಿಕಾ ವನದ ಕಣಿಯಲ್ಲಿ ತಾಯಿ ಶಾರದೆ ನರ್ತಿಸುತ್ತಿದ್ದುದನ್ನು ಕಂಡು ಪುಳಕಗೊಂಡು "ಶಾರದಾ ವರದಾ ದೇವಿ ಮೋಕ್ಷದಾತಾ ಸರಸ್ವತೀ" ಎಂದು ಸ್ತುತಿಸಿದ. ತಾಯಿ ಶಾರದೆಯ ಸೂಚನೆಯಂತೆ ಉತ್ತರಾಭಿಮುಖವಾಗಿ ನಡೆದು ಫಲಪುಷ್ಫಸಮೃದ್ಧವಾಗಿದ್ದ ಶಾರದಾವನದಲ್ಲಿ ಆಕೆಯ ಪೂರ್ಣಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡ. ಹೀಗೆ ಶಾರದೆಯು ಭವ್ಯ ಕುಂಡದಲ್ಲಿ ಪ್ರತ್ಯಕ್ಷವಾದ ಪೀಠವೇ ಶಾರದಾ ಪೀಠವಾಯಿತು. ಅಲ್ಲಿ ಏಳಡಿ ಎತ್ತರದ ದಿವ್ಯವಿಗ್ರಹವು ಭವ್ಯವಾದ ಶಿಲಾಪೀಠದಲ್ಲಿ ಪ್ರತಿಷ್ಠೆಯಾಯಿತು. ಶಾಂಡಿಲ್ಯನ ಪಿತೃಗಳು ಶ್ರಾದ್ಧಕರ್ಮವನ್ನು ನೆರವೇರಿಸಿ ಮೋಕ್ಷ ದೊರಕಿಸಲು ಕೇಳಿಕೊಂಡಾಗ ಆತ ಮಧುಸಿಂಧು(ಕಿಶನ್ ಗಂಗಾ) ನದಿಯಲ್ಲಿ ತರ್ಪಣ ಕೊಟ್ಟ. ಆಗ ಅರ್ಧನದಿಯೇ ಜೇನಾಗಿ ಹರಿದು ಸರ್ವಪಾಪ ನಿವಾರಿಣಿಯೂ ಮೋಕ್ಷದಾತೆಯೂ ಆಗಿ ಪಿತೃ ತರ್ಪಣ ಕೊಡುವ ಪುಣ್ಯ ಮಧುಮತಿಯಾಯಿತು. ಇವೆಲ್ಲವೂ ಶಾಂಡಿಲ್ಯ ರಚಿತ ಶಾರದ ಮಾಹತ್ಮ್ಯಮ್ ಎಂಬ ಕೃತಿಯಲ್ಲಿದೆ. ಶಾಂಡಿಲ್ಯನ ಜೊತೆ ಶಾರದೆಯೂ ಕ್ರಮಿಸಿದ ಜಾಗವೆಲ್ಲಾ ಶಾರದಾ ಭೂಮಿಯಾಗಿ ಆಕೆಯ ಆರಾಧನೆ ಬೆಳೆದು ಬಂತು.
ಕಶ್ಯಪ ಮೇರು ಕೇವಲ ಪ್ರಾಕೃತಿಕ ಭೂಭಾಗವಾಗಿ ಮಾತ್ರ ಮೇರುವಲ್ಲ; ವಿದ್ಯೆಯ ನೆಲೆಯಾಗಿಯೂ ಮೇರುಪರ್ವತವೇ. ಅನೇಕ ಋಷಿಮುನಿಗಳ ತಪಸ್ಸಿಗೆ, ಜ್ಞಾನದಾಹಿಗಳಿಗೆ, ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ ಆಶ್ರಯತಾಣ. ಅಂತಹಾ ವಿದ್ಯಾತಾಣಕ್ಕೆ ವಿದ್ಯಾಧಿದೇವತೆ ಶಾರದೆಯೇ ಅಧಿಪತಿಯಲ್ಲದೆ ಇನ್ನಾರು? ಹಾಗಾಗಿಯೇ
" ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||" ಎಂಬ ಸ್ತುತಿಯೂ ಹುಟ್ಟಿತು. ಅಖಂಡ ಭರತಖಂಡದಲ್ಲಿ ವಿದ್ಯೆಗೆ ಪರಮೋಚ್ಛ ಪರೀಕ್ಷೆಯಿದ್ದ ತಾಣವದು. ಬ್ರಹ್ಮಾಂಡದ ವಿದ್ಯೆಯಿಲ್ಲ ಶಾರದಾ ಎಂಬ ಮೂರಕ್ಷರದಲ್ಲಿ ಅಲ್ಲಿ ನತಮಸ್ತಕವಾಗಿತ್ತು. ಅಲ್ಲಿ ನಡೆಯುತ್ತಿದ್ದ ವಿದ್ವಜ್ಜನರ ವಿದ್ಯೆಯ ಸಂಭ್ರಮದ ನಡೆಯೆಲ್ಲವೂ ಶಾರದೋತ್ಸವವೇ. ಅಲ್ಲಿನ ಲಿಪಿಯೂ ಶಾರದಾ. ಅದು ಶಾರದಾ ದೇಶವೆಂದೇ ಕರೆಯಲ್ಪಟ್ಟಿತು. ಹಾಗೆಂದೇ ಮುತ್ತುಸ್ವಾಮಿ ದೀಕ್ಷಿತರು "ಕಾಶ್ಮೀರ ವಿಹಾರ ವರ ಶಾರದಾ" ಎಂದು ಸ್ತುತಿಸಿದ್ದಾರೆ. ಭರತಮುನಿ, ಆನಂದವರ್ಧನ, ಅಭಿನವಗುಪ್ತ, ಚರಕ, ಕಲ್ಹಣ, ಬಿಲ್ಹಣ, ವಸುಗುಪ್ತ, ಕ್ಷೇಮೇಂದ್ರ,...ಎಂತೆಂಥಾ ಜ್ಞಾನಿಗಳು ಅಲ್ಲಿ ಆಗಿ ಹೋದರು. ಶಾರದಾಪೀಠದಿಂದ ಕೇಸರಪರ್ವತದವರೆಗೂ 50 ಯೋಜನ ಹಬ್ಬಿತ್ತು ಶಾರದಾ ವಿದ್ಯಾವಾಹಿನಿ. ಕಾಶ್ಮೀರೀ ಪಂಡಿತರ ಇಷ್ಟದೈವವಾಗಿ ಶಕ್ತಿಸ್ವರೂಪಿಣಿಯಾಗಿ ಶೈವಸಂಪ್ರದಾಯದಂತೆ ಪೂಜಿಸಲ್ಪಡುತ್ತಿದ್ದ ಶಾರದಾಪೀಠ ಹದಿನೆಂಟು ಮಹಾಶಕ್ತಿ ಪೀಠಗಳಲ್ಲಿ ಒಂದಾಗಿತ್ತು. ಪಂಡಿತರು ತಮ್ಮ ಕೃತಿಗಳನ್ನು ಭೂರ್ಜಪತ್ರದಲ್ಲಿ ಬರೆದು ದೇವಿಯ ಮುಂದೆ ಇಟ್ಟರೆ ಬೆಳಗಿನವರೆಗೆ ಅವು ಕಿಂಚಿತ್ತೂ ಲೋಪಗೊಳ್ಳದೇ ಉಳಿದರೆ ಅವು ಸರ್ವಮಾನ್ಯವಾಗಿಬಿಡುತ್ತಿದ್ದವು. ವಿದ್ಯೆಗೆ, ವಿದ್ವತ್ತಿಗೆ ಮಾತ್ರ ಅಲ್ಲಿ ನೆಲೆ,ಬೆಲೆ. ಆ ಜ್ಞಾನಸಾಮ್ರಾಜ್ಯವನ್ನು ಗೆದ್ದು ಸರ್ವಜ್ಞಪೀಠ ಏರಲು ತವಕಪಡುತ್ತಿದ್ದ ವಿದ್ವಾಂಸರು ಅದೆಷ್ಟು? ಅಂತಹಾ ಶಾರದಾಯತನದಲ್ಲಿ ಸೇರಿಕೊಳ್ಳಲು ದೇಶದ ಮೂಲೆಮೂಲೆಗಳಿಂದ ಶಾರದಾಯಾತ್ರೆಯೇ ನಡೆಯುತ್ತಿತ್ತು.
ಪಾಕಿಸ್ತಾನದ ವಶವಾದ ಮೇಲೂ ಶಾರದಾಪೀಠವಿರುವ ಗ್ರಾಮಕ್ಕೆ ಶಾರದಾ ಅಂತಲೇ ಹೆಸರು ಉಳಿದಿದೆ! ಶಾರದೀ ಮತ್ತು ನಾರದೀ ಎಂಬ ಬೆಟ್ಟಗಳ ನಡುವೆ ಎಲ್.ಓ.ಸಿ.ಯಿಂದ ಕೆಲವೇ ಕಿ.ಮೀಗಳ ದೂರದಲ್ಲಿ ಈ ಊರು ಇದೆ. ಅಲ್ಲಿನ ಕೆಲವು ಮನೆತನಗಳ ಹೆಸರೂ ಶಾರದಾ! ಈ ಮಂದಿರದ ವಾಯುವ್ಯ ದಿಕ್ಕಿನಲ್ಲಿ ಕಿಶನ್ ಗಂಗಾ ಹಾಗೂ ಮಧುಮತಿಗಳು ಸಂಗಮಿಸಿ ವಿತಸ್ತಾ ನದಿಯನ್ನು ಸೇರುತ್ತವೆ. ಶಾರದಾ ಪೀಠದ ಈಗಿನ ಭಗ್ನ ಮಂದಿರವೇ ಸಾಮಾನ್ಯಶಕ 724ಕ್ಕೆ ಸೇರಿದೆ. ಶಾರದಾಪೀಠ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ, ಸಾಹಿತ್ಯ, ಸಂಗೀತ, ಭಾಷೆ, ಕಾನೂನು ಅಲ್ಲದೆ ಖಗೋಳ, ವೈದ್ಯ, ಜ್ಯೋತಿಷ, ಶಿಲ್ಪಕಲಾದಿ ವಿಜ್ಞಾನ ವಿಭಾಗಗಳು ಇದ್ದವು. ದೇಶ ವಿದೇಶಗಳ ವಿದ್ವಾಂಸರು ಇಲ್ಲಿನ ಆಚಾರ್ಯರುಗಳನ್ನು, ಗ್ರಂಥಾಲಯವನ್ನು ಆಶ್ರಯಿಸಿದ್ದರು. ಚೀನಾದ ಬೌದ್ಧಯಾತ್ರಿಕ ಯುವಾನ್ಜಾಂಗ್ ಸಾ.ಶ. 632ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ. ವಿನಾಯಕಭಟ್ಟನ ಸಾಂಖ್ಯಾಯಾನ ಭಾಷ್ಯದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಶಾರದಾ ವಿದ್ಯಾಲಯಕ್ಕೆ ಬರುತ್ತಿದ್ದರೆಂಬ ಉಲ್ಲೇಖವಿದೆ. ಹನ್ನೊಂದನೇ ಶತಮಾನದಲ್ಲಿ ಸಿದ್ಧಹೇಮಖಂಡವೆಂಬ ವ್ಯಾಕರಣ ಗ್ರಂಥ ರಚಿಸಿದ ಹೇಮಚಂದ್ರ ಸೂರಿಯ ಗ್ರಂಥ ರಚನೆಯ ನೆರವಿಗೆಂದು ರಾಜಾ ಜಯಸಿಂಗ ಎಂಟು ವ್ಯಾಕರಣ ಗ್ರಂಥಗಳನ್ನು ಹಾಗೂ 70ಸಾವಿರ ತಾಳೆಗರಿ ಗ್ರಂಥಗಳನ್ನು ಶಾರದಾಮಂದಿರದ ಗ್ರಂಥಾಲಯದಿಂದ ತರಿಸಿಕೊಟ್ಟಿದ್ದನೆಂದರೆ ಇಲ್ಲಿ ಬೃಹತ್ತಾದ ವಿಶ್ವವಿದ್ಯಾಲಯವಿದ್ದಿರಲೇಬೇಕು. ಕವಿಗಳು ಹಾಡಿ ಹೊಗಳುವ ಮಧುಮತೀ ತಟದ ಶಾರದೆಯ ರೂಪವನ್ನು ಕಣ್ತುಂಬಿಕೊಳ್ಳಲು ಭಾರತದ ಮೂಲೆಮೂಲೆಯಿಂದ ಯಾತ್ರಿಕರು ನೆರೆಯುತ್ತಿದ್ದರೆಂದು ಕಲ್ಹಣ ವರ್ಣಿಸಿದ್ದಾನೆ. ಬಿಲ್ಹಣನಂತೂ ತನ್ನೆಲ್ಲಾ ಕೃತಿಗಳು ನದಿಯ ಬಂಗಾರದ ಕಣಗಳಿಂದ ನಿರ್ಮಿತವಾಗಿರುವ ಮಕುಟ ಧರಿಸಿರುವ ಶಾರದೆಗೆ ಸಮರ್ಪಿಸಿದ್ದಾನೆ. ಅಶೋಕನ ಕಾಲದಲ್ಲಿ ಇಲ್ಲಿಗೆ ಸನಿಹದಲ್ಲಿ ವಿಶ್ವವಿದ್ಯಾಲಯವೊಂದು ಇತ್ತಂತೆ. ಮಂದಿರದ ಸುತ್ತ ನಡೆದ ಪುರಾತತ್ತ್ವ ಕ್ಷೇತ್ರ ಕಾರ್ಯ ಹಾಗೂ ಉತ್ಖನನದಿಂದ ಅಲ್ಲಿ ಪ್ರಾಚೀನ ಅಧ್ಯಯನ ಪೀಠ, ನಾಲ್ಕು ದಿಕ್ಕುಗಳಲ್ಲೂ ದ್ವಾರವಿರುವ ವಿಶಾಲ ಸಭಾಂಗಣ, ಪ್ರಾಂಗಣ, ವಸತಿ ಶಾಲೆ, ಗ್ರಂಥಾಲಯ, ಗೋಶಾಲೆ, ವಿಪುಲ ಜನವಸತಿ ಇದ್ದುದು ತಿಳಿದುಬಂದಿದೆ. ಶಾರದಾಪೀಠವು ಹಿಂದೂಗಳಿಗೆ ಸೋಮನಾಥ, ಮೂಲಸ್ಥಾನದ ಸೂರ್ಯದೇವಾಲಯಗಳಷ್ಟೇ ಪವಿತ್ರ ಎಂದಿದ್ದಾನೆ ಅಲ್ಬೆರುನಿ. ಶಾರದೆಯ ಕಾಷ್ಠವಿಗ್ರಹ ಪೂಜಿಸಲ್ಪಡುತ್ತಿತ್ತು; ಅದಲ್ಲಿ ಬೆವರು, ಅಂಗಕಂಪನ ಉಂಟಾಗುತ್ತಿತ್ತು ಎಂದು ಆತ ಬರೆದಿದ್ದಾನೆ. "ಮಧುಮತಿ ಎಂಬ ಬಂಗಾರದ ಕಣಗಳುಳ್ಳ ನದಿಯ ದಂಡೆಯ ಮೇಲಿರುವ ಶಾರದೆಯ ಶಿಲಾಮಂದಿರದಲ್ಲಿ ಶುಕ್ಲಪಕ್ಷದ ಅಷ್ಟಮಿಯಂದು ಪವಾಡಗಳು ಜರುಗುತ್ತವೆ. ಇದನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನರು ಬಂದು ಸೇರುತ್ತಾರೆ ಎಂದು ಅಬುಲ್ ಫಜಲ್ ತನ್ನ ಐನೆ-ಇ-ಅಕ್ಬರಿಯಲ್ಲಿ ಉಲ್ಲೇಖಿಸಿದ್ದಾನೆ.
ಇಂತಹಾ ಶಾರದಾಯಾತ್ರೆಗೆ ಮೆರುಗು ಬಂದುದು ಜಗದ್ಗುರು ಆದಿ ಶಂಕರಾಚಾರ್ಯರಿಂದ. ದಕ್ಷಿಣದ ದೇಶದ ಯಾರೊಬ್ಬರೂ ಆವರೆಗೆ ಸರ್ವಜ್ಞಪೀಠವನ್ನು ಏರಿರದ ಕಾರಣ ಅದರ ದಕ್ಷಿಣದ್ವಾರವೇ ತೆರೆದಿರಲಿಲ್ಲ. ದೇಶಾದ್ಯಂತ ಸಂಚರಿಸಿ ವಿವಿಧ ಪಂಥಗಳ ವಿದ್ವಾಂಸರನ್ನು ವಾದದಲ್ಲಿ ಗೆಲ್ಲುತ್ತಾ ದಿಗ್ವಿಜಯ ಸಾಧಿಸುತ್ತಾ ಹೊರಟಿದ್ದ ಶಂಕರರಿಗೆ ಒಂದು ದಿನ ಗಂಗೆಯತಟದಲ್ಲಿ ನಿತ್ಯಾನುಷ್ಠಾನನಿರತರಾಗಿದ್ದಾಗ ಈ ವಿಷಯ ಕಿವಿಗೆ ಬಿತ್ತು. ಶಂಕರರು ಕಾಶ್ಮೀರ ಪಂಡಿತಮಂಡಲವನ್ನು ಮಣಿಸಿ ಶಾರದಾಪೀಠದ ದಕ್ಷಿಣದ್ವಾರವನ್ನು ತೆರೆಯಿಸಿ ಸರ್ವಜ್ಞಪೀಠವನ್ನು ಏರಿಯೇ ಬಿಟ್ಟರು. ಶಂಕರರು ಸರ್ವಜ್ಞಪೀಠಾರೋಹಣಕ್ಕೆ ಅಣಿಯಾಗುತ್ತಿದ್ದಂತೆ ಶಾರದೆಯೇ ಸ್ವತಃ ಪರೀಕ್ಷೆಯೊಡ್ಡಿದಳಂತೆ. ಶಂಕರರು ಅವೆಲ್ಲಕ್ಕೂ ಸಮಾಧಾನ ನೀಡಿ ಸೌಂದರ್ಯಲಹರಿ ಸಹಿತ ಅನೇಕ ದೇವಿಸ್ತೋತ್ರಗಳಿಂದ ದೇವಿಯನ್ನು ಸ್ತುತಿಸಿ ಅದ್ವೈತ ಸಿದ್ಧಾಂತ ದಶದಿಕ್ಕುಗಳಲ್ಲೂ ಮೊಳಗುವಂತೆ ಮಾಡಿದರು. ಶ್ರೀಚಕ್ರಾಂಕಿತವಾಗಿ ಪೂಜೆ ಸಲ್ಲಿಸಿ ಅಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದರು.
ಶಾರದಾಪೀಠಕ್ಕೆ ಮೊದಲ ಹೊಡೆತ ಬಿದ್ದದ್ದು 13-14ನೇ ಶತಮಾನದಲ್ಲಿ. ಕಾಶ್ಮೀರದ ಕಸಾಯಿ ಎಂದ ಕುಖ್ಯಾತಿ ಪಡೆದಿದ್ದ ಸಿಕಂದರ್ ಬುಟ್ಶಿಕಾನ್ ಎನ್ನುವ ಮತಾಂಧ ಈ ಸುಂದರ ದೇವಾಲಯವನ್ನು ಹದಿನೈದನೇ ಶತಮಾನದಲ್ಲಿ ಧ್ವಂಸ ಮಾಡಿಬಿಟ್ಟ. ಬಳಿಕ ಶಾರದಾಪೀಠ ಮೂರು ಶತಮಾನ ಪರ್ಯಂತ ಮೊಘಲರು,ಪಠಾಣರ ದಾಳಿಗೆ ಸಿಕ್ಕು ನಲುಗಿತು. ನಿಧಿಯ ಶೋಧನೆಗೆಂದು ಬಂದ ಮಂಝೂರ್ ಖಾನ್ ದೇವಾಲಯವನ್ನು ಮತ್ತಷ್ಟು ಭಗ್ನಗೊಳಿಸಿದ್ದ ಎಂದಿದ್ದಾನೆ ಸಿ.ಇ.ಬೇಟ್ಸ್. ಗಾಯಕ್ಕೆ ಉಪ್ಪು ಸವರಿದಂತೆ 1947 ರಲ್ಲಿ ಈ ಪ್ರದೇಶ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವಾಗಿ ಹೋಯಿತು.1867ರಲ್ಲಿ ಡೋಗ್ರಾ ದೊರೆ ಗುಲಾಬ್ ಸಿಂಗ್ ಈ ದೇವಾಲಯಕ್ಕೆ ಮೇಲ್ಛಾವಣಿ ಹೊದೆಸಿ ನವೀಕರಿಸಿದ್ದ. ಡೋಗ್ರಾ ದೊರೆಗಳು ಪಕ್ಕದಲ್ಲೇ ಒಂದು ಕೋಟೆ ಕಟ್ಟಿ 60 ಜನ ಯೋಧರನ್ನು ಮಂದಿರದ ರಕ್ಷಣೆಗೆ ನೇಮಿಸಿದ್ದರು. 2005ರಲ್ಲಿ ನಡೆದ ಭೂಕಂಪನವು ಮಂದಿರವನ್ನು ಮತ್ತಷ್ಟು ಜರ್ಝರಿತಗೊಳಿಸಿತು. ಗುಡಿಯ ಪ್ರವೇಶಕ್ಕೆ 9 ಅಡಿ ಅಗಲದ 63 ಮೆಟ್ಟಿಲುಗಳು; ಗರ್ಭಗುಡಿಯಲ್ಲಿ ಏಳಡಿ ಉದ್ದ ಅರ್ಧ ಅಡಿ ದಪ್ಪದಬೃಹತ್ ಛಪ್ಪಡಿಗಲ್ಲು; 142 ಅಡಿ ಉದ್ದ, 95 ಅಡಿ ಅಗಲದ ಷಟ್ಕೋನಾಕೃತಿಯ ಕಾಶ್ಮೀರೀ ವಾಸ್ತುಶಿಲ್ಪದನ್ವಯದ ದೇಗುಲ, ಗರ್ಭಗುಡಿಯಲ್ಲಿ ಎರಡು ಶಿವಲಿಂಗಗಳು, ಮಾರ್ತಾಂಡ ದೇಗುಲದ ವಾಸ್ತುಶಿಲ್ಪ ವಿನ್ಯಾಸವನ್ನು ಹೋಲುವ ಕಂಬಗಳು….ಮುಂತಾದುವನ್ನು ಆಗಲೇ ಭಗ್ನಗೊಂಡಿದ್ದ ಶಾರದಾ ದೇಗುಲಕ್ಕೇ 1892ರಲ್ಲಿ ಭೇಟಿಕೊಟ್ಟ ಇತಿಹಾಸಕಾರ ಡಾ. ಸ್ಟೈನ್ ತನ್ನ ಬರಹಗಳಲ್ಲಿ ದಾಖಲಿಸಿದ್ದಾನೆ.
ಒಂದು ಕಾಲದಲ್ಲಿ ಶಾರದಾಪೀಠಕ್ಕೆ ಜ್ಞಾನಸತ್ರವೇ ಯಾತ್ರೆಯಾಗಿತ್ತು. ಆಗ ಜ್ಞಾನಾರ್ಜನೆಗೆಂದೇ ಅಲ್ಲಿಗೆ ತೆರಳುತ್ತಿದ್ದ ಪರಿವ್ರಾಜಕರು ಅದೆಷ್ಟೋ. ಮತಾಂಧರ ದಾಳಿಯಿಂದ ಅವೆಲ್ಲವೂ ನಿರ್ನಾಮಗೊಂಡರೂ ಭಕ್ತಿಯ ಯಾತ್ರೆ ಉಳಿದಿತ್ತು.ಮತಾಂಧರ ಆಳ್ವಿಕೆ ಕೊನೆಗೊಂಡ ನಂತರ ಡೋಗ್ರಾ ರಾಜರು ಯಾತ್ರಾರ್ಥಿಗಳಿಗೆ ಅನ್ನ, ಪಾನ, ಆಶ್ರಯಗಳನ್ನಿತ್ತು ಶಾರದಾ ಯಾತ್ರೆ ಸಂಪನ್ನವಾಗುವಂತೆ ನೋಡಿಕೊಂಡಿದ್ದರು. ಕಾಲ್ನಡಿಗೆಯ ಮೂಲಕ ನಡೆಯುತ್ತಿದ್ದ ಈ ಯಾತ್ರೆಯಲ್ಲಿ ಶಾಂಡಿಲ್ಯ ಋಷಿ ತಂಗಿದ ಸ್ಥಳಗಳಲ್ಲೆಲ್ಲಾ ತಂಗಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿಯಂದು ಶಾರದಾ ಸಂಗಮದಲ್ಲಿ ತೀರ್ಥಸ್ನಾನ ಮಾಡಿ, ಪಿತೃಗಳಿಗೆ ತರ್ಪಣ ಕೊಟ್ಟು ವೈಭವದ ಉತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದರು. ಪಹಾಡೀಗಳೂ ತಾವು ಬೆಳೆದ ಧಾನ್ಯಗಳನ್ನು, ಹಾಲು ಹಣ್ಣುಗಳನ್ನು ಶಾರದೆಗೆ ಅರ್ಪಿಸಿ ಕೃತಾರ್ಥರಾಗುತ್ತಿದ್ದರಂತೆ. ಸಂತ ನಂದಾಲಾಲ್ ಜೀಯವರ ನೇತೃತ್ವದಲ್ಲಿ 1947ರಲ್ಲಿ ನಡೆದ ಯಾತ್ರೆಯೇ ಕೊನೆಯದು. ವಿಭಜನೆಯ ಸುದ್ದಿ ತಿಳಿಯುತ್ತಿದ್ದಂತೆ ಮಂದಿರದಲ್ಲಿದ್ದ ವಿಗ್ರಹಗಳನ್ನು ಕುದುರೆಯ ಮೇಲೆ ಹೇರಿಕೊಂಡು ಕುಪ್ವಾರದ ಟಿಕ್ಕರ್ ಪ್ರಾಂತ್ಯಕ್ಕೆ ಆತ ಸಾಗಿಸಿದರು. ಆ ಪೈಕಿ ಕೆಲವು ವಿಗ್ರಹಗಳು ವರಾಹಮೂಲ(ಬಾರಾಮುಲ್ಲಾ)ದ ದೇವೀಬಾಲ್'ನಲ್ಲಿವೆ. ಈಗ ಶಾರದಾಷ್ಟಮಿಯ ದಿನದಂದು ಕಣಿವೆಯ ಸನಿಹದ ಐದು ಪವಿತ್ರ ಸ್ಥಳಗಳಲ್ಲಿ ಪಿತೃತರ್ಪಣ, ಹೋಮಗಳು ನಡೆಯುತ್ತವೆ. 2018ರಲ್ಲಿ ಡಾ.ರಮೇಶ್ ವಂಕ್ವಾನಿ ನೇತೃತ್ವದ ಐವರು ಸದಸ್ಯರ ನಿಯೋಗ ಪಾಕಿಸ್ತಾನ ಹಿಂದೂ ಪರಿಷತ್ತಿನ (ಪಿಎಚ್‌ಸಿ) ಸಹಾಯದಿಂದ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಇತ್ತೀಚೆಗೆ ಪಿಒಕೆ ಸುಪ್ರೀಂ ಕೋರ್ಟ್ ಪಂಡಿತ ಸಮುದಾಯದ ಅರ್ಜಿಯನ್ನು ಪರಿಗಣಿಸಿ ದೇವಾಲಯವನ್ನು ರಕ್ಷಿಸುವಂತೆ ತನ್ನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಶಾರದಾ ಪೀಠ ಯಾತ್ರೆ ನಡೆಯುತ್ತಿದ್ದ ಕಾಲದಲ್ಲಿ ಭಕ್ತರು ಕುಪ್ವಾರ ಜಿಲ್ಲೆಯ ಕೃಷ್ಣಗಂಗಾ ನದಿ ತೀರದ ತೀತ್ವಾಲ್ ಹಳ್ಳಿಯ ಧರ್ಮಶಾಲೆಯಲ್ಲಿ ಒಂದೆರಡು ದಿನ ಉಳಿದುಕೊಂಡು, ಪ್ರಯಾಣದ ದಣಿವಾರಿಸಿಕೊಂಡು ಮುಂದೆ ಶಾರದಾ ಪೀಠಕ್ಕೆ ಸಾಗುತ್ತಿದ್ದರಂತೆ. ಅಲ್ಲೊಂದು ಚಿಕ್ಕ ಶಾರದಾಲಯವಿತ್ತು. ಆ ಮರದ ಮಂದಿರ ಮುಂದೆ ಮತಾಂಧರಿಂದ ದಹಿಸಲ್ಪಟ್ಟಿತು. ಗಡಿ ನಿಯಂತ್ರಣ ರೇಖೆಗೆ ಅತಿ ಸಮೀಪದಲ್ಲಿರುವ ಈ ಪ್ರದೇಶದಲ್ಲೇ ಈಗ "ಸೇವ್ ಶಾರದಾ ಕಮಿಟಿ (SSC)" ಶೃಂಗೇರಿ ಶಂಕರ ಪೀಠದ ನೆರವಿನಿಂದ ಶಾರದಾ ಪೀಠದ ಮಾದರಿಯಲ್ಲಿಯೇ ಶಿಲಾಮಯ ಶಾರದಾ ಮಂದಿರವನ್ನು ನಿರ್ಮಿಸಿದೆ. ಪಂಚಲೋಹದ ಶಾರದೆಯ ವಿಗ್ರಹವನ್ನು ಉಭಯ ಜಗದ್ಗುರುಗಳೂ ಪೂಜಿಸಿ ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರ ಯಾತ್ರೆ ಶೃಂಗೇರಿಯಿಂದ ಹೊರಟು ಕಾಶ್ಮೀರ ತಲುಪಿದೆ. ಈ ಹಿಂದಿನ ಶಾರದೆಯ ಕಾಷ್ಠ ಮೂರ್ತಿಯನ್ನು ದಾಳಿಕೋರರಿಂದ ರಕ್ಷಿಸಿ ಕಾಶ್ಮೀರಿ ಪಂಡಿತರು ಶೃಂಗೇರಿಗೆ ತಂದು ಒಪ್ಪಿಸಿದ್ದರು. ಅದೇ ಮಂದಿರದಲ್ಲಿದ್ದ ರಣವೀರ ವಿರಚಿತ 'ಸಂಕ್ರಾಂತಿ ಕಥಾ'ಎಂಬ ಗ್ರಂಥ ಸಹ ಅಮ್ಮನವರೊಂದಿಗೇ ಶೃಂಗೇರಿಗೆ ಬಂದಿತ್ತು. ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದೇ ಈ ಮಂದಿರದ ಪುನರ್ ನಿರ್ಮಾಣವನ್ನು ಆರಂಭಿಸಲಾಗಿದೆ. ಅದರ ಕಾರ್ಯ ಪ್ರಗತಿಯನ್ನು ವೀಕ್ಷಿಸಲು ಮಠದ ಆಡಳಿತಾಧಿಕಾರಿಯವರನ್ನ ಜಗದ್ಗುರುಗಳು ತೀತ್ವಾಲ್ ಗೆ ಕಳಿಸಿಕೊಟ್ಟಿದ್ದರು. ದೇವಸ್ಥಾನದ ಕುಂಭಾಭಿಶೇಕವನ್ನು ಶೃಂಗೇರಿಯ ಜಗದ್ಗುರುಗಳೇ ನೆರವೇರಿಸಬೇಕೆಂಬ ಕೋರಿಕೆಯನ್ನು ಸಮಸ್ತ ಕಾಶ್ಮೀರದ ಪಂಡಿತರ ಪರವಾಗಿ ಸಲ್ಲಿಸಲಾಗಿದೆ. ಶಾರದಾ ಯಾತ್ರೆಯನ್ನು ಕಿಶನ್‌ಗಂಗಾ ನದಿಯ ಮೂಲಕ ಪುನಃ ತೆರೆಯುವ ಪ್ರಯತ್ನದಲ್ಲಿ ರವೀಂದ್ರ ಪಂಡಿತರು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಬಳಿಕ ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ಈ ಪ್ರಯತ್ನ ಕ್ಷಿಪ್ರವಾಗಿ ಯಶಸ್ಸಿನತ್ತ ಸಾಗಿತು. 1965ರಲ್ಲಿ ಶ್ರೀಮದ್ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಹಾಗೂ 1994ರಲ್ಲಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥರು ಶಾರದಾ ಯಾತ್ರೆಯ ಪುನಾರಾರಂಭದ ಬಗ್ಗೆ ಪ್ರಯತ್ನಿಸಿದ್ದರು. ಮೂಲ ಶಾರದೆಯ ಭವ್ಯ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ಕಾಶ್ಮೀರದ ಜ್ಞಾನಪರಂಪರೆಯ ವೈಭವನ್ನು ಮರುಸ್ಥಾಪಿಸಲು ಈ ದೇವಾಲಯವು ಒಂದು ಪ್ರಾರ್ಥನಾ ಬಿಂದುವಾಗಿ ಕಾರ್ಯನಿರ್ವಹಿಸಲಿದೆ. ಶಾರದಾ ಯಾತ್ರೆಯನ್ನು ಕೊನೆಯ ಬಾರಿಗೆ ನಿರ್ವಹಿಸಿದ್ದ ಸಂತ ನಂದಾಲಾಲರ ವಿಗ್ರಹವೂ ಇಲ್ಲಿ ಪೂಜೆಗೊಳ್ಳಲಿದೆ. ಅಂದು ಶಂಕರರ ಕೋರಿಕೆಯ ಮೇರೆಗೆ ಅವರ ಹಿಂದೆ ನಡೆದುಬಂದ ಶಾರದೆ ಶೃಂಗೇರಿಯಲ್ಲಿ ನೆಲೆ ನಿಂತಳು. ಶೃಂಗೇರಿಗೆ ತಾಯಿ ಶಾರದೆಯ ಶ್ರೀಗಂಧದ ಮೂಲ ವಿಗ್ರಹವನ್ನು ಇದೇ ಶಾರದಾ ಪೀಠದಿಂದಲೇ ಜಗದ್ಗುರು ಆದಿ ಶಂಕರಾಚಾರ್ಯರು ತೆಗೆದುಕೊಂಡು ಬಂದಿದ್ದರು. ಇಂದು ರವೀಂದ್ರ ಪಂಡಿತರ ನೇತೃತ್ವದಲ್ಲಿ ಶಂಕರ ಹಾಗೂ ಶಾರದೆಯ ಭಕ್ತರು ಶೃಂಗೇರಿಯಿಂದ ಶಾರದೆಯ ಮೂಲನೆಲೆಗೆ ಒಯ್ಯುತ್ತಿದ್ದಾರೆ. ಶಾರದಾಂಬೆಯ(ಜ್ಞಾನದ) ಈ ಮರು ಪಯಣವು ಸನಾತನ ನಾಗರಿಕತೆಯ ಅನಂತ ಭರವಸೆಯ ಸಂಕೇತವಾಗಿದೆ. ಮಾಧ್ಯಮಗಳು, ಸ್ಥಾಪಿತ ಹಿತಾಸಕ್ತಿಗಳು ಅದನ್ನು ಈ ದೇಶೀಯರಿಗೆ ತಿಳಿಯದಂತೆ ಪ್ರಸಾರ ಮಾಡದಿದ್ದರೇನಂತೆ; ಜ್ಞಾನಯಾತ್ರೆಯಾದ ಈ ಶಾರದಾ ಯಾತ್ರೆಯನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯ.