ಪುಟಗಳು

ಸೋಮವಾರ, ಸೆಪ್ಟೆಂಬರ್ 23, 2013

ಮನಸ್ಸಿದ್ದಲ್ಲಿ.....


ಮನಸ್ಸಿದ್ದಲ್ಲಿ.....

 

                         ಎಲ್ಲ ಸರಕಾರಗಳು ರಸ್ತೆ, ನೀರಾವರಿ, ಕೃಷಿ, ಶಿಕ್ಷಣ, ಆಡಳಿತ ಸುಧಾರಣೆ, ಉದ್ಯೋಗ ಸೃಷ್ಟಿ ಮಾಡಲು ಬಗೆ ಬಗೆಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ ಅವುಗಳ್ಯಾವುವು ಸಮರ್ಪಕ ಅನುಷ್ಟಾನದ ಕೊರತೆಯಿಂದಲೋ ಅಥವಾ ಲಂಚಕೋರತನ, ಭೃಷ್ಟಾಚಾರ,  ಆಲಸ್ಯದಿಂದಲೋ ಜನರಿಗೆ ತಲುಪುವುದೇ ಇಲ್ಲ. ದೂರದೃಷ್ಟಿಯ ಯೋಜನೆಗಳು ಹಾಗೂ ಅವುಗಳ ಸಮರ್ಪಕ ಅನುಷ್ಟಾನ, ಕಾರ್ಯಕ್ಷೇತ್ರದಲ್ಲಿನ ಕ್ಷಿಪ್ರತೆ, ಸರ್ವರೊಂದಿಗೆ ಸಮಗ್ರ ವಿಕಾಸ ಎಂಬ ಧೋರಣೆ, ಕಾಲದ ಬದಲಾವಣೆಗೆ ಹೊಂದಿಕೊಂಡು ಸಾಮಾನ್ಯ ಜನರೊಂದಿಗೆ ಒಡನಾಡುತ್ತಾ ತಾನೊಬ್ಬ ಸಾಮಾನ್ಯನಂತೆ ಸರ್ವರಿಗೂ ಸರ್ವ ಕಾಲಕ್ಕೂ ಒದಗಬಲ್ಲ ವ್ಯಕ್ತಿತ್ವ, ನಿರ್ಧಾರದಲ್ಲಿನ ಧೃಡತೆ, ಅನುಷ್ಟಾನದಲ್ಲಿನ ಕಟ್ಟುನಿಟ್ಟು, ಮನಸ್ಸಿನೊಳಗಿನ ಮುಗ್ಧತೆ, ಶುದ್ಧ ಹಸ್ತ, ತನ್ನ ದೇಶದ ಗತವೈಭವದ ಬಗೆಗಿನ ಜ್ಞಾನ, ದೇಶಕ್ಕಾಗಿ ಕೆಲಸ ಮಾಡಬೇಕೆಂಬ ತುಡಿತ ಇವೇ ನರೇಂದ್ರ ಮೋದಿಯವರನ್ನು ಇತರೆಲ್ಲಾ ರಾಜಕಾರಣಿಗಳಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡಿದ್ದು. ಗುಜರಾತಿನ ಅಭಿವೃದ್ಧಿಯ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಡಿದ್ದೇನೆ...

      

                        ಕಳೆದವರ್ಷ ಇಡೀ ದೇಶ ವಿದ್ಯುತ್ ಇಲ್ಲದೆ 48 ಘಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು. ಆದರೆ ಗುಜರಾತ್ ಮಾತ್ರ ಝಗಮಗಿಸುತ್ತಾ ನಿಂತಿತ್ತು... ಕಾರಣ "ಜ್ಯೋತಿಗ್ರಾಮ" ಎನ್ನುವ ಯೋಜನೆ! ಇದನ್ನು ರೂಪುಗೊಳಿಸಿದ ಮೋದಿ ಇಡೀ ಗುಜರಾತಿಗೆ ದಿನದ 24 ಘಂಟೆಗಳ ಕಾಲವೂ ವಿದ್ಯುತ್ ಪೂರೈಸುತ್ತಿದ್ದಾರೆ. 2002 ಮೊದಲು ಅಲ್ಲಿನ ಜನ ವಿದ್ಯುತ್ ಅಭಾವದಿಂದ ಪರಿತಪಿಸುತ್ತಿದ್ದರು.  ಇದೀಗ ಗುಜರಾತಿನ ಪ್ರತಿ 18,065 ಹಳ್ಳಿಹಳ್ಳಿಗೂ ವರ್ಷದ 365 ದಿನವೂ 3 ಫೇಸ್ ವಿದ್ಯುತ್ ದೊರೆಯುತ್ತಿದೆ. ಇದರ ಅನುಷ್ಠಾನಕ್ಕೆ ಮೋದಿ ಮಾಡಿದ ಮೋಡಿಯಾದರೂ ಏನು? ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯ ಬಗ್ಗೆ ಸಮಗ್ರವಾಗಿ ಚರ್ಚಿಸಿ ಕೆಲವೊಂದು ಖಚಿತ ನಿರ್ಧಾರಕ್ಕೆ ಬರಲಾಯಿತು. ವಿದ್ಯುತ್ ಕಳ್ಳತನ ಮಾಡುವವರನ್ನು ಒದ್ದು ಜೈಲಿಗೆ ಕಳಿಸಲಾಯಿತು, ಸರಕಾರಿ ಲೆಕ್ಕದ ವಿದ್ಯುತ್ತಿನ ಪಾಲನ್ನು ನಿಖರವಾಗಿ ಲೆಕ್ಕಹಾಕುವ ವ್ಯವಸ್ಥೆಮಾಡಲಾಯಿತು ಮತ್ತು ಗ್ರಹಪಯೋಗಿ ಹಾಗು ಕೃಷಿಸಂಬಂಧಿ ವಿದ್ಯುತ್ ಸರಬರಾಜು ಲೈನ್ ಗಳನ್ನು ಬೇರ್ಪಡಿಸಲಾಯಿತು. 16 ಲಕ್ಷ ಹೊಸ ವಿದ್ಯುತ್ ಕಂಬಗಳು, 15,500 ಹೊಸ ಟ್ರಾನ್ಸಫಾರ್ಮರ್ಗಳು ಮತ್ತು 75,000 KM ಉದ್ದದ ಕೇಬಲ್ ಗಳನ್ನು ಹೊಸದಾಗಿ ಹಾಕಲಾಯಿತು. ಯೋಜನೆಗೆ ಒಟ್ಟು ಖರ್ಚಾದ ಮೊತ್ತ ಬರೇ 1100 ಕೋಟಿ ಮಾತ್ರ.

 

                      ನಮ್ಮಲ್ಲೂ ಗ್ರಾಮ ಪಂಚಾಯತ್ ಚುನಾವಣೆಗಳಾಗುತ್ತವೆ. ಪಕ್ಷ, ಪಕ್ಷಗಳ ನಡುವೆ ಹೊಡೆದಾಟ,ಮಾತಿನ ಚಕಮಕಿ, ಕೋಲಾಹಲ... ಕೊನೆಗೆ ಅಭಿವೃದ್ಧಿ ಶೂನ್ಯ. ಜನತೆಗೆ ಹಾಲಾಹಲ! ಅದೇ ಗುಜರಾತಿನಲ್ಲಿ ನೋಡಿ.... ಗ್ರಾಮಸಭಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮಕ್ಕೆ ನರೇಂದ್ರ ಮೋದಿ ಸರಕಾರ "ಸಮರಸ" ಗ್ರಾಮವೆಂದು ಹೆಸರಿಸಿ ಪ್ರೋತ್ಸಾಹ ಧನ ನೀಡುತ್ತಿದೆ. 45 ಪ್ರತಿಶತ ಗ್ರಾಮಸಭೆಗಳು ಯೋಜನೆಯಲ್ಲಿ ಪ್ರಯೋಜನ ಪಡೆಯುತ್ತಿವೆ. ಗ್ರಾಮಸಭಾ ಚುನಾವಣೆಯಲ್ಲಿ ನಡೆಯುವ ದ್ವೇಷ ಸಾಧನೆಗೆ, ರಾಜಕೀಯ ಕಲಹಕ್ಕೆ ಪೂರ್ಣ ವಿರಾಮ. ಗ್ರಾಮಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಪಕ್ಷವನ್ನು ಬೆಳೆಸುವ ಅವಕಾಶವಿರುವ ಸಂದರ್ಭದಲ್ಲಿ ಚುನಾವಣೆಯೇ ನೆಡೆಯದಂತೆ ಮಾಡಿ ಗ್ರಾಮೀಣ ಸಾಮರಸ್ಯವನ್ನು ಮೂಡಿಸುವ ಇಂತಹ ಯೋಜನೆಗಳನ್ನು ನಿಜವಾದ ದೇಶ ಭಕ್ತ ಮಾತ್ರ ಘೋಷಿಸುವ ತಾಕತ್ತು ತೋರಿಸಬಲ್ಲ.

 

                    ಗುಜರಾತ್ ರಾಜ್ಯಕ್ಕೆ ವರ್ಷ ಕೌಶಲ್ಯವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ. ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಐಟಿಐ ಗಳನ್ನು ತೆರೆದು ಪ್ರದೇಶದ ಉದ್ದಿಮೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಉದ್ಯಮಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ಇದು ಸ್ಥಳಿಯರಿಗೆ ಉದ್ಯೋಗ, ಉದ್ದಿಮೆದಾರರಿಗೆ ಕೌಶಲ್ಯಯುತ ಉದ್ಯೋಗಿಗಳನ್ನು ಸರಿಯಾದ ಸಮಯಕ್ಕೆ ಪೂರೈಸಿ, ಉತ್ಪಾದನೆಯನ್ನು ಹೆಚ್ಚಿಸಿ, ಭಾಗದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತದೆ. ಅಂದರೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಯುವಜನರಿಗೆ ಕೋರ್ಸುಗಳನ್ನು ಆಯ್ಕೆ ಮಾಡಿ, ತಮಗಿಷ್ಟಬಂದ ಉದ್ಯೋಗ ಪಡೆಯುವ ಸದವಕಾಶ. ಸಣ್ಣ ಬದಲಾವಣೆಯಾದರೂ ಎಂತಹ ಸುಂದರ ಪರಿಕಲ್ಪನೆ.

 

                     ನಮ್ಮಲ್ಲಿ ಎಲ್ಲೆಲ್ಲೂ ನೋಡಿದರೂ ನೀರಿನ ಅಭಾವ. ಇದ್ದ ಕೆರೆಗಳನ್ನು ಭಾರೀ ಕುಳಗಳು ನುಂಗುತ್ತಿವೆ. ಇತ್ತೀಚೆಗಂತೂ ಅಗಾಧ ಮಳೆ ಸುರಿವ ಮಲೆನಾಡಿನಲ್ಲಿಯೂ ಇದೇ ದುಃಸ್ಥಿತಿ. ಮಹಾರಾಷ್ಟ್ರದ ಒಬ್ಬ ಕಾಂಗ್ರೆಸ್ ಮಂತ್ರಿಯಂತೂ ಕೆರೆಯಲ್ಲಿ ನೀರಿಲ್ಲದೆ ಇದ್ದರೆ ನಾನೇನೂ ಮೂತ್ರಿಸಿ ಅದನ್ನು ತುಂಬಿಸಲೇ ಎಂದು ನೀರಿಲ್ಲದೆ ಪರಿತಪಿಸುತ್ತಿದ್ದ ಜನರನ್ನು ಅಪಹಾಸ್ಯ ಮಾಡಿದ. ಅದೇ ಗುಜರಾತಿನಲ್ಲಿ ಸಮುದ್ರ ಪಾಲಾಗುತ್ತಿದ್ದ ನರ್ಮದಾ ಅಣೆಕಟ್ಟಿನ ಹೆಚ್ಚುವರಿ ನೀರನ್ನು ಸದಾ ನೀರಿನ ಅಭಾವವಿರುವ ಸೌರಾಷ್ಟ್ರ ಪ್ರದೇಶದ ಏಳು ಜಿಲ್ಲೆಗಳಲ್ಲಿ 115 ಚಿಕ್ಕ ಅಣೆಕಟ್ಟುಗಳನ್ನು ಕಟ್ಟಿ 1115 ಕಿ.ಮೀ ಉದ್ದದ ಕಾಲುವೆಯಿಂದ ನೀರನ್ನು ತುಂಬಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯಿಂದ ಹರಿಯುವ ನೀರಿನಿಂದ 10 ಲಕ್ಷ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಲ್ಲಲಿರುವ ಯೋಜನೆ 2017 ರಲ್ಲಿ ಪೂರ್ಣಗೊಂಡಾಗ ಬರೇ 10,000 ಕೋಟಿ ಖರ್ಚಾಗಲಿದೆ. "ಸೌರಾಷ್ಟ್ರ ನರ್ಮದಾ ಅವತರಣ್ ನೀರಾವರಿ ಯೋಜನೆ" ಎಂಬ ಹೆಸರಿನ ಯೋಜನೆ ಕಾರ್ಯಗತಗೊಂಡು ಪಂಡಿತ್ ದೀನ ದಯಾಳ್ ಉಪಾಧ್ಯಾಯರು ಹೇಳಿದಂತೆ "ಪ್ರತಿಯೊಬ್ಬರ ಹೊಲಕ್ಕೂ ನೀರು, ಪ್ರತಿಯೊಬ್ಬರಿಗೂ ಕೆಲಸ" ಸಿಗಲಿದೆ. ಕೃಷಿ ಉತ್ಪನ್ನ ಹೆಚ್ಚಳಗೊಂಡು ದೇಶದ ಬೆಲೆಯೇರಿಕೆ ತಗ್ಗಿಸುವಲ್ಲಿ ತನ್ನ ಪಾಲನ್ನು ಗುಜರಾತ್ ಸಲ್ಲಿಸಲಿದೆ.

 

                       ನರೇಂದ್ರಮೋದಿ 2-3 ವರ್ಷಗಳ ಹಿಂದೆ GIFT [Gujarat International Finance Tech-City] ಎಂಬ ಹೆಸರಿನ ವಾಣಿಜ್ಯ ನಗರವನ್ನು ಕಟ್ಟುವ ಯೋಜನೆಯನ್ನು ಜನತೆಯ ಮುಂದಿರಿಸಿದರು. ಸುಮಾರು 986 ಎಕ್ರೆಯಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯನಗರವು 2020 ಹೊತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರತದಲ್ಲಿ ಸುಮಾರು 1 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತದೆ. ವಿಶ್ವದ ಗಮನ ಸೆಳೆಯಲಿರುವ ನಗರದಲ್ಲಿ ಶ್ರೇಷ್ಠ ರಸ್ತೆಯಲ್ಲದೆ, ಭೂಗತ ಪೈಪ್ ಲೈನಿನ ಮೂಲಕ ತ್ಯಾಜ್ಯವಿಲೇವಾರಿ ವ್ಯವಸ್ಥೆ, ಮೆಟ್ರೋ ರೈಲು, 8 ಪಥಗಳ ರಸ್ತೆ, 50,000 ಕಾರ್ ಪಾರ್ಕಿಂಗ್ ವ್ಯವಸ್ಥೆ, ಭೂಮಿಯಡಿಯಲ್ಲಿ ಏರ್ ಕಂಡೀಶನ್ ಯಂತ್ರ ವ್ಯವಸ್ಥೆಯ, ಕೇಂದ್ರೀಕ್ರತ ನೆಟ್ ವರ್ಕ್ ಕೇಬಲಿಂಗ್ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ, ಶಾಲೆ, ವಸತಿ, ನಳ್ಳಿಯಲ್ಲೇ ಸಿಗುವ ಶುದ್ಧ ಕುಡಿಯುವ ನೀರು,....ಮುಂತಾದ ಸುಸಜ್ಜಿತ ಸೌಲಭ್ಯಗಳಿರಲಿವೆ.

 

                     ಗುಜರಾತ್ ಸರಕಾರಕ್ಕೆ ಅಲ್ಲಿನ ಪ್ರಜೆಗಳು ಅಧಿಕಾರಿಗಳಿಂದ ಪರಿಹರಿಸಲಾಗದ ಸಮಸ್ಯೆಗಳಿಗೆ ಎಲ್ಲಿಂದ ಬೇಕಾದರೂ ಆನ್ ಲೈನ್ ಮೂಲಕ ದೂರು ಸಲ್ಲಿಸಿ ತಮ್ಮ ಸಮಸ್ಯೆಗೆ ಮುಖ್ಯಮಂತ್ರಿಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅದುವೇ 2003ರಲ್ಲಿ ಪ್ರಾರಂಭಗೊಂಡ [SWAGAT - State Wide Attention on Grievances by Application of Technology] ಎಂಬ ಯೋಜನೆ. ಕಳೆದ ಹತ್ತು ವರ್ಷಗಳಲ್ಲಿ ನಾಗರಿಕರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತಿರುವ ಯೋಜನೆಗೆ 2010 ರಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ವಿಭಾಗದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಜವಾಬ್ದಾರಿ ಮತ್ತು ಸಮಾಜ ಸುಧಾರಣೆಯ ಅಡಿಯಲ್ಲಿ ಪ್ರಶಸ್ತಿ ಸಿಕ್ಕಿದೆ. ಪ್ರತಿ ತಿಂಗಳ ನಾಲ್ಕನೇ ಗುರುವಾರದ ಬೆಳಿಗ್ಗೆ SWAGAT ವೆಬ್ ಸೈಟಿನಲ್ಲಿ[http://swagat.gujarat.gov.in/] ನೋಂದಾವಣೆಗೊಂಡ ಎಲ್ಲಾ ದೂರುಗಳನ್ನು ಸಂಬಂಧಪಟ್ಟ ಸಚಿವಾಲಯದ ಕಾರ್ಯದರ್ಶಿಗೂ ಅಥವಾ ಅಯಾ ಜಿಲ್ಲಾಧಿಕಾರಿಗೂ ಕಂಪ್ಯೂಟರ್ ಮೂಲಕ ವಿಲೇವಾರಿ ಮಾಡಿ ಅದೇ ದಿವಸ ಮದ್ಯಾಹ್ನ 3 ಘಂಟೆಯೊಳಗೆ ಸಂಬಂಧಪಟ್ಟ ಅಧಿಕಾರಿಯಿಂದ ಉತ್ತರ ಪಡೆಯಲಾಗುತ್ತದೆ. ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲೇ ಕುಳಿತು ದೂರು ವಿಲೇವಾರಿ ಮಾಡಬೇಕಾದ ರಾಜ್ಯದ ಯಾವ ಮೂಲೆಯಲ್ಲಾದರೂ ಇರುವ ಅಧಿಕಾರಿಯೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚಿಸಿ, ಸ್ಪಷ್ಟ ಸೂಚನೆ ಮತ್ತು ನಿರ್ದೇಶನಗಳನ್ನು ನೀಡುತ್ತಾರೆ. ದೂರುಕೊಟ್ಟ ನಾಗರಿಕರು ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ಮತ್ತು ಯಾವುದೇ ಇಂಟರ್ನೆಟ್ ಕಫೆಗಳಲ್ಲಿ, ತಮ್ಮ ದೂರಿನ ಪ್ರಸಕ್ತ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸರಿಯಾಗಿ ಸ್ಪಂದಿಸಬೇಕು, ಇಲ್ಲವೇ SWAGAT ದೂರು ದಾಖಲಾದಲ್ಲಿ ಮುಖ್ಯಮಂತ್ರಿಗೆ ಉತ್ತರ ಹೇಳಬೇಕು. ಆಗುತ್ತೆ ಇಲ್ಲಾ ಆಗಲ್ಲಾ..ನಾಳೆ ನೋಡುವ, ನಾಡಿದ್ದು ಬನ್ನಿ, ನಮಗೆ ಅಧಿಕಾರ ಇಲ್ಲ, ಮುಖ್ಯಮಂತ್ರಿ ಕಚೇರಿಯಲ್ಲಿ ದುಡ್ಡು ಕೊಟ್ರೆ ಆಗುತ್ತೆ, ನಮ್ಮ ಕೈಬಿಸಿ ಮಾಡಿ ಅನ್ನುವ ಪ್ರಶ್ನೆಯೇ ಇಲ್ಲ. ಎಲ್ಲವೂ ನೇರಾತಿನೇರ, ಪ್ರತಿಯೊಂದಕ್ಕೂ ಪಾರದರ್ಶಕ ದಾಖಲೆ, ಎಲ್ಲರಿಗೂ ನ್ಯಾಯ, ಯಾರ ಜಾತಿ, ಮತ, ಅಪ್ಪನ ಹೆಸರು, ಅಮ್ಮನ ಇರುವು ಕೇಳುವುದಿಲ್ಲ. ನಮ್ಮಲ್ಲಿ ದೂರು ಕೊಡೋದು ಬಿಡಿ, ನಮ್ಮ ದಾಖಲೆ ಪತ್ರಗಳನ್ನು ನಮ್ಮದಾಗಿಸಿಕೊಳ್ಳಲೂ ಕೂಡಾ ವರ್ಷಾನುಗಟ್ಟಲೆ ಅಲೆದಾಡಬೇಕು!

 

                             ಗುಜರಾತ್ ಸರಕಾರ ಪ್ರತಿವರ್ಷ ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಪ್ರತಿಯೊಂದು ಹೆಣ್ಣು ಮಗು ಯಾವುದಾದರೂ ಒಂದು ಶಾಲೆಗೆ ಸೇರುವಂತೆ ಮಾಡಿಸಲು ಹಳ್ಳಿಯ ಕಡೆಗೆ ತನ್ನ ಅಧಿಕಾರಿಗಳೊಂದಿಗೆ ನೆಡೆಯುತ್ತದೆ. ಸ್ವತಃ ಮುಖ್ಯಮಂತ್ರಿ ನರೇಂದ್ರಮೋದಿಯೇ "ಕನ್ಯಾ ಕಲಾವಣಿ" ಯೋಜನೆಯಲ್ಲಿ ಕಳೆದ ಒಂದು ದಶಕದಿಂದ ಭಾಗವಹಿಸುತ್ತಿದ್ದಾರೆ. ವರ್ಷವಂತೂ ಸರಕಾರ, ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರ ಸಹಭಾಗಿತ್ವದಿಂದಾಗಿ "ಕನ್ಯಾ ಕಲಾವಣಿ" ಯೋಜನೆಯ ಮೂಲಕ ಜಾತಿ ಮತಗಳ ಮಿತಿಗಳನ್ನು ಮೀರಿ ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಕಡ್ಡಾಯ ಶಿಕ್ಷಣಕ್ಕೆ ಒಳಪಟ್ಟಿದ್ದಾರೆ. ಇದು ಎಲ್ಲರನ್ನು ಒಗ್ಗೂಡಿಸಿಕೊಂಡು ಸರಕಾರ ನೆಡೆಸುವ ಪ್ರವೃತ್ತಿಗೊಂದು ಸಣ್ಣ ಉದಾಹರಣೆಯಷ್ಟೆ. ಮತದ ಅದಾರದಲ್ಲಿ ಜುಜುಬಿ 400 ರೂಪಾಯಿ ವಿದ್ಯಾರ್ಥಿವೇತನವನ್ನು ಹಂಚಲು ಗುಜರಾತಿಗೆ ಕೇಂದ್ರ ಸರಕಾರ ಕಳಿಸಿದ್ದ ಹಣವನ್ನು ತಡೆಹಿಡಿದು, ರಾಜ್ಯದ ಎಲ್ಲಾ ಅರ್ಹ ಬಡಮಕ್ಕಳಿಗೆ ಬರೋಬ್ಬರಿ ರೂಪಾಯಿ 2500 ರಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ, ಜಾತಿ ಮತಗಳನ್ನು ನೋಡದೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮೋದಿ ಕೋಮುವಾದಿಯಾಗುತ್ತಾರೆ. ಮತ ಮತ್ತು ಜಾತಿಯ ಆಧಾರದಲ್ಲಿ ವಿದ್ಯಾರ್ಥಿವೇತನವನ್ನು ನಿಗದಿ ಮಾಡುವ ಇತರರು ಜಾತ್ಯಾತೀತರಾಗುತ್ತಾರೆ, ಎಂಥಹ ವಿಪರ್ಯಾಸ?

 

                     ವರ್ಷದಲ್ಲಿ ಆರು ತಿಂಗಳು ಮೀನುಗಾರಿಕೆ ಇಲ್ಲದ ಸಮಯದಲ್ಲಿ, ಗುಜರಾತಿನ 10,000 ಬೆಸ್ತ ಕುಟುಂಬದವರು ಸಮುದ್ರ ತೀರದ ಹತ್ತಿರದಲ್ಲೆ ಉಪ್ಪು ನೀರಿನಲ್ಲಿ ಬಿದಿರು ಕೋಲನ್ನು ಮುಳುಗಿಸಿಟ್ಟು "ಸಮುದ್ರಕಳೆ" [Sea Weed] ಎನ್ನುವ ಒಂದು ರೀತಿಯ ಸಸ್ಯವನ್ನು ಬೆಳೆಯುತ್ತಾರೆ. ಗುಜರಾತ್ ಸರಕಾರ ಬೆಸ್ತರಿಗೆ ಬೇಕಾದ ತಂತ್ರಜ್ಞಾನವನ್ನು ಹೊರದೇಶಗಳಿಂದ ತರಿಸಿ, ಸಮುದ್ರ ತೀರ ನಿವಾಸಿಗಳಿಗೆ ತರಬೇತುಗೊಳಿಸಿ, ಅವರ ಕೌಶಲ್ಯ ಅಭಿವೃದ್ಧಿಪಡಿಸಿದೆ. ವರ್ಷದ ಆರುತಿಂಗಳು ಖಾಲಿ ಕುಳಿತಿರುತ್ತಿದ್ದ ಗುಜರಾತ್ ಮೀನುಗಾರರು ಈಗ "ಸಮುದ್ರಕಳೆ" ಯನ್ನು ಔಷಧ ಕಂಪನಿಗಳಿಗೆ, ರಸಗೊಬ್ಬರ ಕಂಪನಿಗಳಿಗೆ ಮಾರಾಟ ಮಾಡಿ, ಅಧಿಕ ಹಣ ಸಂಪಾದಿಸಿ ದೇಶದ ಆರ್ಥಿಕ ಉತ್ಪಾದಕತೆಗೆ ಬಲ ಕೊಡುತ್ತಿದ್ದಾರೆ.

 

                       ಇಷ್ಟಿದ್ದರೂ ನಿಮಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಇಷ್ಟವಿಲ್ಲವೆಂದಾದರೆ ನಿಮಗೂ ಜಿಹಾದಿ ಮಾನಸಿಕತೆಗೂ ವ್ಯತ್ಯಾಸವೇ ಇಲ್ಲ...ಯಾಕೆಂದರೆ ಎಲ್ಲೆಲ್ಲಾ ಜಿಹಾದಿ ಮಾನಸಿಕತೆ ತುಂಬಿ ತುಳುಕಾಡುತ್ತಿದೆ ಅಲ್ಲಿ ಅಭಿವೃದ್ಧಿ ಎಂಬುದು ನಿಂತ ನೀರಿನಂತೆ...ಶೂನ್ಯ! ಅಥವಾ ನೀವಿನ್ನೂ ನಿದ್ರಿಸುತ್ತಲೇ ಇದ್ದೀರಿ....ಎಂದರ್ಥ!

ಮಹಾಭಾರತ ಯುದ್ಧರಂಗದಲ್ಲಿ ಭಾವುಕತೆಗೊಳಗಾಗಿ ಶಸ್ತ್ರ ಕೈಚೆಲ್ಲಿ ಕುಳಿತ ಅರ್ಜುನನ್ನು ಕೃಷ್ಣ ಗೀತೋಪದೇಶ ಮಾಡಿ ಎಬ್ಬಿಸಿದ! ಅರ್ಜುನ ಎಂದರೆ ಭಾರತ ಎಂಬರ್ಥವೂ ಇದೆ. ಅವನಾದರೂ ಬಾಂಧವ್ಯದ ಭಾವುಕತೆಗೊಳಗಾಗಿದ್ದ...ನಿಮಗ್ಯಾವ ಭಾವುಕತೆ ಕಾಡುತ್ತಿದೆ? ನಿದ್ದೆಯಲ್ಲಿದ್ದೀರೋ ಅಥವಾ ನಿದ್ದೆ ಬಂದಂತೆ ನಟಿಸುತ್ತಿದ್ದೀರೋ?

ಎದ್ದೇಳು ಅರ್ಜುನ.....!!!
 

 

        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ