ಪುಟಗಳು

ಸೋಮವಾರ, ಫೆಬ್ರವರಿ 17, 2014

ಝಾಡುವಿನ ಜಾಡು ಹಿಡಿದು ಹೊರಟಾಗ

ಝಾಡುವಿನ ಜಾಡು ಹಿಡಿದು ಹೊರಟಾಗ

                ಅಂತೂ 49 ದಿನಗಳ ಮಂಗನಾಟ ಅಂತ್ಯವಾಯಿತು! ಅದು ಪೂರ್ಣ ವಿರಾಮವೇ ಇರಲೆಂದು ಜನ ಬಯಸಿದರೆ ಭವ್ಯ ಭಾರತದ ಕನಸಿಗೆ ನೀರೆರೆದಂತಾಗುತ್ತದೆ. ಇಲ್ಲವಾದಲ್ಲಿ ಕಾಟ್ಜು ಹೇಳಿದಂತೆ 92% ಭಾರತೀಯರು ಮೂರ್ಖರು ಎನ್ನುವುದನ್ನು ಸಾಬೀತು ಮಾಡಿದ ಹಾಗೆಯೇ!  ಇದ್ದ 49 ದಿನವೂ ಒಂದಲ್ಲ ಒಂದು ರಗಳೆಯೇ. ಕಳ್ಳು ಕುಡಿದ ಮಂಗನಿಗೆ ಚೇಳೊಂದು ಕುಟುಕಿದರೆ ಹೇಗೆ ವರ್ತಿಸುತ್ತದೋ ಅದೇ ರೀತಿ. ದೆಹಲಿಯ ಜನಗಳ ಪುಣ್ಯ ಆ ನಾಟಕಕ್ಕೊಂದು ತೆರೆ ಎಳೆಯಲಾಯಿತು. ಅದು ತಾತ್ಕಾಲಿಕವಿರಬಹುದು ಆದರೆ ಬಹುತೇಕ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಂತೂ ಸತ್ಯ!

             ಅಣ್ಣಾ ಹಜಾರೆಯವರ ಭೃಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಬೆಳಕಿಗೆ ಬಂದು ಮುಂದೆ ಆ ಆಂದೋಲನದ ರೂವಾರಿ ಅಣ್ಣಾ ಹಜಾರೆಯವರನ್ನೇ ಪಕ್ಕಕ್ಕೆ ತಳ್ಳಿ ತನ್ನ ರಾಜಕೀಯ ಉದ್ದೇಶವನ್ನು ಪೂರೈಸಿಕೊಳ್ಳಲು ಹೊರಟ ಅರವಿಂದ ಕೇಜ್ರಿವಾಲರ ಹಿಂದಿರುವ "ಕೈ" ಯಾವುದು ಎಂದು ನೋಡ ಹೊರಟರೆ ಸಿಗುವುದು ಫೋರ್ಡ್ ಫೌಂಡೇಶನ್ ಹಾಗೂ ಮತ್ತದೇ ಕಾಂಗ್ರೆಸ್! ದಾನ ಧರ್ಮದ ಹೆಸರಲ್ಲಿ ಜಾಗತಿಕ ರಾಜಕಾರಣದ ಮೇಲೆ ದೊಡ್ದಣ್ಣನ ಪ್ರಭುತ್ವವನ್ನು ಹೇರಲು ಗುಪ್ತವಾಗಿ ಕಾರ್ಯಾಚರಿಸುವ ಈ ಫೋರ್ಡ್ ಫೌಂಡೇಶನ್ ಅಮೇರಿಕಾದ ಗುಪ್ತಚರ ಸಂಸ್ಥೆಯಾದ ಸಿಐಎಯ ಮುಖವಾಡ! ಒಂದು ದೇಶದ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು, ಇತಿಹಾಸಕಾರರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಸಂಸ್ಥೆಗಳು, ಪ್ರಕಾಶಕರು...ಹೀಗೆ ಎಲ್ಲಾ ವಲಯದ ಪ್ರಭಾವಿಗಳನ್ನು ಹಣದ ಮೂಲಕ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಫೋರ್ಡ್ ಫೌಂಡೇಶನ್ ಮುಂದೆ ಅಲ್ಲಿ ಬರುವ ಸರಕಾರದ ಮೇಲೆ ತನ್ನ ಪ್ರಭಾವ ಬೀರಲು ಈ ಎಲ್ಲಾ ಸಿದ್ದತೆ ನಡೆಸುತ್ತದೆ. ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋದಿಯಾ, ಮಲ್ಲಿಕಾ ಸಾರಾಭಾಯ್, ಯೋಗೇಂದ್ರ ಯಾದವ್, ತೀಸ್ತಾ ಸೆತಲ್ವಾಡ್, ಜಾವೇದ್ ಆನಂದ್, ಅಮರ್ತ್ಯ ಸೇನ್ ಇವರಿಗೆಲ್ಲಾ ಫೋರ್ಡ್ ಫೌಂಡೇಶನ್ ಧನ ಸಹಾಯ ಮಾಡಿದೆ ಮಾಡುತ್ತಲೇ ಇದೆ. ಇವರೆಲ್ಲಾ ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡವರೇ. ಇನ್ನೊಂದು ಅಂಶವೆಂದರೆ ಇಲ್ಲಿರುವ ಹೆಚ್ಚಿನವರು ಮೋದಿ ವಿರೋಧಿಗಳು ಹಾಗೂ ಭಾರತೀಯ ಸಂಸ್ಕೃತಿಯ ಅಂದರೆ ಸನಾತನ ಸಂಸ್ಕೃತಿಯ ವಿರೋಧಿಗಳು!
ಪೊರಕೆ ಹಿಡಿದವರೇನು ಸಾಚಾಗಳೇ?
                 ಅಜ್ಮಲ್ ಕಸಬ್ ಗೆ ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಗೆ ವಿನಂತಿ ಪತ್ರ ಕಳುಹಿಸಿದ್ದ, ಸೋನಿಯಾ ಗಾಂಧಿಯ ರಾಷ್ಟ್ರೀಯ ಸಲಹಾ ಸಮಿತಿಯ ಭಾಗವಾಗಿದ್ದ ಅರುಣಾ ರಾಯ್; ನಕ್ಸಲರ ಪರ ಸಹಾನುಭೂತಿ ಹೊಂದಿ ಅವರ ಮಧ್ಯವರ್ತಿಯಾಗಿದ್ದು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದೆನ್ನುತ್ತಾ ಅಸಂಬದ್ಧ ಹೇಳಿಕೆ ನೀಡುವ ಪ್ರಶಾಂತ್ ಭೂಷಣ್; ನಕ್ಸಲ್ ಪರ ಧೋರಣೆ ಹೊಂದಿದ್ದಕ್ಕಾಗಿ ಛತ್ತೀಸಘಡದ ಹಳ್ಳಿಯೊಂದರಿಂದ ಒದ್ದೋಡಿಸಲ್ಪಟ್ಟಿದ್ದ ಐಎಸ್ಐ ಏಜೆಂಟರೊಂದಿಗೆ ಸಂಪರ್ಕದಲ್ಲಿರುವ ಮೇಧಾ ಪಾಟ್ಕರ್; ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಸಮಿತಿಯ ಮಾಜಿ ಸದಸ್ಯ, ಸಿಪಿಐ(ಎಮ್‌ಎಲ್)ನ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ, ನಕ್ಸಲ್ ಪರ ಧೋರಣೆಗೆ ಹೆಸರಾದ, 'ಇಂಡಿಯಾ ಸ್ಟೂಡೆಂಟ್ಸ್ ಅಸೋಷಿಯೇಷನ್‌' ನ ಅಧ್ಯಕ್ಷ ಗೋಪಾಲ್ ರಾಯ್; ಸ್ಪ್ಯಾಮರ್ ಆಗಿದ್ದು ಸ್ಪ್ಯಾಮ್ ಮಿಂಚಂಚೆ ಕಳುಹಿಸಲೆಂದೇ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಾಲ ಪತ್ರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ, ಇತ್ತೀಚೆಗೆ ಉಗಾಂಡ ಯುವತಿಯರ ಮನೆಗೆ ಅಪರಾತ್ರಿಯಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿ ಎಲ್ಲೆಡೆ ಛೀಮಾರಿ ಹಾಕಿಸಿಕೊಂಡ ಸೋಮನಾಥ್ ಭಾರ್ತಿ; ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರಿಗೆ ತನ್ನ ಪಟಾಲಂ ಜೊತೆ ತೆರಳಿ ಲೈಂಗಿಕ ಕಿರುಕುಳ ನೀಡಿದ ಮನೋಜ್ ಕುಮಾರ್; FCRA ನಿಧಿಯನ್ನು ದುರುಪಯೋಗಪಡಿಸಿಕೊಂಡ ಕ್ರಿಸ್ಟಿನಾ ಮೇರಿ; ಪಾಠ ಮಾಡದೇ ಸಂಬಳ ಪಡೆಯುತ್ತಿದ್ದ, ತ್ರಿಮೂರ್ತಿಗಳನ್ನು ಅವಹೇಳನ ಮಾಡಿ ಭಾಷಣ ಮಾಡಿದ್ದ, ಭೂ ಖರೀದಿ ವ್ಯವಹಾರಕ್ಕೆ ಸಂಬಂಧಿಸಿ ಹಣದ ಬೇಡಿಕೆ ಇಟ್ಟಿದ್ದ ಕುಮಾರ್ ವಿಶ್ವಾಸ್; ಭೂ ಖರೀದಿ ವ್ಯವಹಾರ ಸಮಸ್ಯೆ ಬಗೆ ಹರಿಸಲು ನಗದು ಬೇಡಿಕೆ ಇಟ್ಟ ಶಾಝಿಯಾ ಇಲ್ಮಿ; ಇವರೆಲ್ಲಾ ಆಮ್ ಆದ್ಮಿಯ ನಾಯಕರುಗಳು!
                     ಕೇಜ್ರಿವಾಲರ ಎನ್ ಜಿ ಓ ನ ನೋಂದಾವಣೆ ಬಗ್ಗೆ ಅನೇಕ ಸಂಶಯಗಳಿವೆ ಹಾಗೂ ಅದರ ಹೆಸರಿನಲ್ಲೂ ಗೊಂದಲವಿದೆ. ಅದು ಹೊಂದಿರುವ ಕಾನೂನು ಹೇಳಿಕೆಯ ಪ್ರಕಾರ ""ಪರಿವರ್ತನ್" ಯಾವುದೇ ಸಂಸ್ಥೆ ಅಥವಾ ಟ್ರಸ್ಟ್ ಕಾಯಿದೆಯಡಿ ನೋಂದಣಿಯಾಗಿಲ್ಲ, ಅದು ಜನರ ಚಳುವಳಿಯಾಗಿದ್ದು ಆದಾಯ ತೆರಿಗೆ ವಿನಾಯಿತಿ ಹೊಂದಿರುವ ಜನರ ಕೂಡಿಕೆಯಾಗಿದೆ." ಆದರೆ ಅರವಿಂದ ಕೇಜ್ರಿವಾಲ್ 2002ರಲ್ಲಿ ಪರಿವರ್ತನ್ ಗೆ ಕೊಡ ಮಾಡಿದ ದೇಣಿಗೆಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ, ಪರಿವರ್ತನ್ ಸೆಕ್ಷನ್ 12A ಅಡಿಯಲ್ಲಿ ನೋಂದಾಯಿತವಾಗಿದೆಯೆಂದು  ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದರು! ಅಂದರೆ ಆವತ್ತೇ ಅವರು ಜನತೆಗೆ ಹಸಿ ಸುಳ್ಳು ಹೇಳಲಾರಂಭಿಸಿದ್ದರು! ಪರಿವರ್ತನ್ ನೋಂದಾಯಿಸಿದ ಸಂಸ್ಥೆಯಲ್ಲವೆಂದಾದರೆ ಜನ ಸುನ್ ವೈ ಅಭಿಯಾನದ ಸಂದರ್ಭದಲ್ಲಿ ವಿಶ್ವ ಬ್ಯಾಂಕಿನಿಂದ ಅವರು ಸ್ವೀಕರಿಸಿದ ಹಣ ಹೇಗೆ ಚಲಾವಣೆಯಾಯಿತು? ಯಾಕೆಂದರೆ ವಿಶ್ವ ಬ್ಯಾಂಕ್ ಸ್ವೀಕರಿಸಿದ ಹಣಕ್ಕೆ ಸರಿಯಾದ ಕೆಲಸವನ್ನು ಪರಿವರ್ತನ್ ಮಾಡಿಲ್ಲವೆಂದು ಉಲ್ಲೇಖಿಸಿತ್ತು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಈಜಿಪ್ಟ್ ತಹ್ರೀರ್ ದಂಗೆಗೆ ಪರೋಕ್ಷ ಕಾರಣಳಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕಿ ಶಿಮ್ರಿತ್ ಲೀ "ಪಿಂಕ್ ರೆವೆಲ್ಯೂಷನ್" ಅನ್ನು ಭಾರತದಲ್ಲಿ ಮಾಡುವಂತೆ ಕೇಜ್ರಿವಾಲರಿಗೆ ಸಲಹೆ ನೀಡಿದ್ದೇಕೆ? 2003ರಲ್ಲಿ ದೆಹಲಿಯಲ್ಲಿ ದೋಷಪೂರಿತ ಮೀಟರುಗಳ ಅನುಸ್ಥಾಪನೆ ಹಾಗೂ ವಿದ್ಯುತ್ ಹೆಚ್ಚಳದ ಬಿಕ್ಕಟ್ಟಿನಲ್ಲಿ ಕೇಜ್ರಿವಾಲರ ಹೆಸರು ಉಲ್ಲೇಖವಾಗಿತ್ತು. 2012ರಲ್ಲಿ ವೆಬ್ ಸೈಟುಗಳ ಪರಿಶೀಲನೆ ನಡೆದಾಗ ಅರವಿಂದ ಕೇಜ್ರಿವಾಲರ ಪರಿವರ್ತನ್ ಹಾಗೂ ಕಬೀರ್ ವೆಬ್ ಸೈಟುಗಳೆರಡೂ ಮುಚ್ಚಲ್ಪಟ್ಟಿದ್ದೇಕೆ? ದೇಶದ್ರೋಹಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದುದರಿಂದ ಡಚ್ ನಿಂದ ಬರುವ ಎಲ್ಲಾ ದೇಣಿಗೆಗಳನ್ನು 2002ರಿಂದಲೇ ನಿಷೇಧಿಸಲಾಗಿತ್ತು. ಆದರೆ ಅರವಿಂದ ಕೇಜ್ರಿವಾಲರ ಸಂಸ್ಥೆ ನಿಷೇಧದ ನಂತರವೂ ಅಲ್ಲಿಂದ ದೇಣಿಗೆ ಪಡೆದದ್ದು ಹೇಗೆ ಮತ್ತು ಏಕೆ? ಇಂತಹ ಸೂಕ್ಷ್ಮ ವಿಚಾರಗಳು ಆಮ್ ಆದ್ಮಿಗೆ ತಿಳಿಯುವುದಿಲ್ಲವೆಂಬ ಸತ್ಯ ಕೇಜ್ರಿವಾಲರಿಗೆ ಗೊತ್ತು. ಹಾಗಾಗಿಯೇ ನಮ್ಮ ಜನ ಮತ್ತೆ ಮತ್ತೆ ಮೂರ್ಖರಾದದ್ದು!
              ಇನ್ನು ಸದಾ ಮೋದಿಯನ್ನು ವಿರೋಧಿಸುವ ಮಾಧ್ಯಮಗಳು ಈಗ ಅರವಿಂದ ಕೇಜ್ರಿವಾಲರನ್ನು ದೇವರಂತೆ ಬಿಂಬಿಸುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಯಾಕೆಂದರೆ ಆಪ್ ನ ನಾಯಕರುಗಳಾದ ಮನೀಶ್ ಸಿಸೋಡಿಯಾ ಝೀ ಚಾನಲ್‌ನ ಮಾಜಿ ಪತ್ರಕರ್ತ, ಯೋಗೇಂದ್ರ ಯಾದವ್ ಸಿಎನ್‌ಎನ್ ಐಬಿಎನ್‌ನ ಮಾಜಿ ಪತ್ರಕರ್ತ, ಶಾಜಿಯಾ ಇಲ್ಮಿ ಮಾಜಿ ಪತ್ರಕರ್ತೆ ಮತ್ತು ಅಶುತೋಷ್ ಐಬಿಎನ್7ನ ಮಾಜಿ ವ್ಯವಸ್ಥಾಪಕ ಸಂಪಾದಕ! ಭಾರತೀಯತೆಯನ್ನು ವಿರೋಧಿಸುವ ಮಾಧ್ಯಮಗಳು ಈ ದೇಶದ್ರೋಹಿಗಳನ್ನು ಬೆಂಬಲಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
              ಕೇಜ್ರಿವಾಲರ ಸರಳತೆಯ ಬಗ್ಗೆ ಹೇಳುವುದಾದರೆ ಅದು ಮಾಧ್ಯಮಗಳು ಕೇಜ್ರಿವಾಲರಿಗೆ ವಿಪರೀತ ಪ್ರಚಾರ ಕೊಡಲು ಬಳಸಿದ ವಿಧಾನವಷ್ಟೇ! ಸರಳತೆಯ ವಿಷಯಕ್ಕೆ ಬಂದರೆ ಅನೇಕ ರಾಜಕಾರಣಿಗಳು ನಮಗೆ ಕಾಣ ಸಿಗುತ್ತಾರೆ. ಇಂದಿಗೂ ಸರಕಾರೀ ಬಂಗಲೆಗೆ ಹೋಗದೆ ತಮ್ಮ ಎಂದಿನ ಸಣ್ಣ ಮನೆಯಲ್ಲಿ ವಾಸಿಸುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸರಕಾರೀ ವಾಹನ ಬಳಸದೆ ತಮ್ಮ ತಂದೆಯ ಮನೆಯಲ್ಲಿ ವಾಸಿಸುವ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಐಐಟಿ ಪದವೀಧರನಾದರೂ ಯಾವುದೇ ಭದ್ರತೆ ತೆಗೆದುಕೊಳ್ಳದೆ, ಸ್ವಂತ ವಾಹನವನ್ನಷ್ಟೇ ಬಳಸುತ್ತಾ ತಮ್ಮ ಹೆಂಚಿನ ಮನೆಯಲ್ಲೇ ವಾಸಿಸುತ್ತ ಸರಳ ಜೀವನ ನಡೆಸುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, 12 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದರೂ ಆಸ್ತಿಯಲ್ಲಿ ಏರಿಕೆಯಾಗದ ನರೇಂದ್ರ ಮೋದಿಯವರ ಸರಳತೆಯ ಮುಂದೆ ದಿನದಿಂದ ದಿನಕ್ಕೆ ಬಣ್ಣ ಬದಲಾಯಿಸಿದ ಅರವಿಂದರ ಸರಳತೆ ಅವರ ಭಜನಾ ಮಂಡಳಿಗಳ ಆಲಾಪನೆಯಷ್ಟೇ! ಮೊದಲು ಸರಕಾರೀ ಬಂಗಲೆ, ವಾಹನ ಬೇಡವೆಂದಿದ್ದ ಕೇಜ್ರಿವಾಲ್ ಆಮೇಲೆ ಇದನ್ನೆಲ್ಲಾ ಬಳಸಿಕೊಂಡಿರುವುದು ಅವರ ಗೋಸುಂಬೆತನವನ್ನು ಬಯಲು ಮಾಡಿತು!
             ಕಾಂಗ್ರೆಸ್ ವಿರುದ್ದ ಪ್ರಚಾರ ಮಾಡಿ, ಕಾಂಗ್ರೆಸನ್ನು ಸಂಪೂರ್ಣವಾಗಿ ಕಿತ್ತೆಸೆಯುತ್ತೇವೆಂದು ಡಂಗುರ ಸಾರಿ, ಎಂತಹ ಪರಿಸ್ಥಿತಿಯಲ್ಲಿಯೂ ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಹೇಳಿದ್ದ ಆಮ್ ಆದ್ಮಿಗೆ ಸರಕಾರ ರಚಿಸಲು ಕಾಂಗ್ರೆಸ್ ಸಹಾಯವೇ ಬೇಕಾದದ್ದು ವಿಪರ್ಯಾಸ! ಶೀಲಾ ದೀಕ್ಷಿತ್ ವಿರುದ್ದ 300 ಪುಟಗಳ ಪುರಾವೆ ಇದೆ, ಅಧಿಕಾರಕ್ಕೆ ಬಂದ ಹದಿನೈದು ದಿನಗಳೊಳಗೆ ಶೀಲಾರನ್ನು ಜೈಲಿಗಟ್ಟುತ್ತೇನೆಂದ ಅರವಿಂದ ಅಧಿಕಾರಕ್ಕೆ ಬಂದ ಮೇಲೆ ಭಾಜಪಾಕ್ಕೆ ಸಾಕ್ಷ್ಯಾಧಾರ ಒದಗಿಸಲು ಕೇಳಿದ್ದು ಆಮ್ ಆದ್ಮಿಯ ಬಣ್ಣ ಬಯಲು ಮಾಡಿದ ಮುಖ್ಯ ಅಂಶ! ನಿಷ್ಕಳಂಕರಿಗೆ ಟಿಕೆಟ್ ಕೊಡುತ್ತೇವೆಂದ ಕೇಜ್ರಿವಾಲ್ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್, ಭಾಜಪಾದಲ್ಲಿ ಬಂಡಾಯವೆದ್ದು ಹೊರಬಂದವರಿಗೆ! ಆಮ್ ಆದ್ಮಿ ಪಕ್ಷದ 28ಶಾಸಕರ ಪೈಕಿ 12ಶಾಸಕರು ಕೊಟ್ಯಾಧಿಪತಿಗಳು! ದೆಹಲಿಯಲ್ಲಿ ನೀರು ಸರಬರಾಜು ಇಲ್ಲದೇ ಇರುವ ಮನೆಗಳ ಸಂಖ್ಯೆ 38.6%. ಇವರಿಗೆ ಉಚಿತ ನೀರು ಸಿಗುವುದಿಲ್ಲ. ಅದೇನಿದ್ದರೂ ಉಳಿದ ಆರ್ಥಿಕವಾಗಿ ಅನುಕೂಲ ಹೊಂದಿರುವ ವರ್ಗಕ್ಕೆ ಮಾತ್ರ! ದೆಹಲಿಗೆ ಅರವಿಂದ, ಕೇಂದ್ರಕ್ಕೆ ಮೋದಿ ಎಂದು ಜನರನ್ನು ಯಾಮಾರಿಸಿ ಮತ ಕಸಿದುಕೊಂಡ ಕೇಜ್ರಿವಾಲ್ ಈಗ ಮೋದಿ ವಿರುದ್ದ ಸ್ಪರ್ದಿಸಬಯಸಿದ್ದಾರೆ! ರಾಜಕೀಯ ಪ್ರವೇಶಿಸುವುದಿಲ್ಲವೆಂದು ಪಕ್ಷ ಕಟ್ಟಿದರು. ಯಾವುದೇ ಪಕ್ಷವನ್ನು ಬೆಂಬಲಿಸಲಾರೆ ಎಂದು ಬಡಬಡಿಸಿ "ಕೈ" ಹಿಡಿದರು. ಚುನಾವಣೆ ಮೊದಲು ನೀಡಿದ ಭರವಸೆಗಳಲ್ಲಿ ಯಾವೊಂದನ್ನೂ ಪೂರೈಸದೇ ಸ್ವಪಕ್ಷೀಯರಿಂದಲೇ ನಿಂದನೆಗೊಳಗಾದರು. ದೇಶ ಮೊದಲು ಜಾತಿ, ಮತವಲ್ಲ ಎಂದವರು ಇಶ್ರತ್ ಜಹಾನ್ ಳದ್ದು ನಕಲಿ ಎನ್ ಕೌಂಟರ್ ಎಂದರು. ಹಿಂದೂಗಳ ಮೇಲೆ ದೌರ್ಜನ್ಯವೆಸಗಿ 32 ಪ್ರಕರಣಗಳನ್ನು ಎದುರಿಸುತ್ತಿರುವ ರಜಾರನ್ನು ಭೇಟಿಯಾಗಿ ಬೆಂಬಲ ಕೋರಿದರು. ತಸ್ಲಿಮಾ ನಸ್ರೀನ್ ವಿರುದ್ದ ಫತ್ವಾ ಹೊರಡಿಸಿದ್ದ ಮೌಲಾನಾ ತೌಕೀರ್ ಹೆಣ್ಣುಮಕ್ಕಳ ಮೇಲೆ ಫತ್ವಾವನ್ನೇ ಹೊರಡಿಸಿಲ್ಲ ಎಂದರು!
           ಇರಲಿ ಸರಕಾರ ರಚಿಸಿದ ನಂತರವಾದರೂ ಸರಿಯಾಗಿ ಆಡಳಿತ ನಡೆಸಿದ್ದಾರೆಯೇ?ಕಾರಿನಲ್ಲಿ ಸಂಪುಟ ಸಭೆ ನಡೆಸುವುದು, ಬೀದಿಯಲ್ಲಿ ಕಡತ ವಿಲೇವಾರಿ ಮಾಡುವುದು ಪಾರದರ್ಶಕ ಆಡಳಿತವೇ? ನ್ಯಾಯಾಧೀಶರ ಅದಿಕಾರವನ್ನು ಮೊಟಕುಗೊಳಿಸಬೇಕು ಎನ್ನುವುದು, ನ್ಯಾಯಾಂಗ ಕಾರ್ಯಾಂಗದಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುವುದು, ಪ್ರತ್ಯೇಕತವಾದಿಗಳನ್ನು ಪ್ರೋತ್ಸಾಹಿಸುವುದು, ಸಲಿಂಗ ಕಾಮವನ್ನು ಪ್ರೋತ್ಸಾಹಿಸುವುದು, ದೂರವಾಣಿ ಸಂದೇಶದ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಸರ್ಕಾರ ರಚಿಸುವುದು, ನಿತ್ಯ ಬೀದಿಯಲ್ಲಿ ನಿಂತು ಕೂಗಾಡುವುದು, ಸದಾ ಮಾಧ್ಯಮದ ಮುಂದೆ ಬಡಬಡಿಸುವುದು ಒಟ್ಟಾರೆ ಒಂದು ದಿನವೂ ಆಡಳಿತವನ್ನು ನಡೆಸಲೇ ಇಲ್ಲ ಈ ಸರಕಾರ. ಸೋಮನಾಥ್ ಭರ್ತಿ ನಡುರಾತ್ರಿಯಲ್ಲಿ ಆಫ್ರಿಕಾ ಮಹಿಳೆಯರ ಮನೆಗೆ ನುಗ್ಗಿದ ಪರಿಣಾಮ 22 ಆಫ್ರಿಕನ್ ದೇಶಗಳಿಗೆ ಸಮಜಾಯಿಷಿ ನೀಡಬೇಕಾಗಿ ಬಂತು! ಹಾಟ್ ಲೈನ್ ಮೂಲಕ ಮೊದಲ ದಿನವೇ 4500 ದೂರುಗಳು ಬಂದವಂತೆ! ಅವುಗಳಿಗೆ ಪರಿಹಾರ ನಾಸ್ತಿ. ಮೋದಿಯವರ "ಸ್ವಾಗತ್"ನಂತಹ ಬಿಗಿಯಾದ ಪಾರದರ್ಶಕ ವ್ಯವಸ್ಥೆಯೆಲ್ಲಿ, ಈ ಕೇಜ್ರಿವಾಲರ ಹಾಟ್ ಲೈನಿನ ಬೂಟಾಟಿಕೆಯೆಲ್ಲಿ?ಸಂದೇಶದ ಮುಖೇನ ಜನಾಭಿಪ್ರಾಯ ಪಡೆದು ಸರ್ಕಾರ ರಚಿಸಿದ ಕೇಜ್ರಿವಾಲ್ ಅಭ್ಯರ್ಥಿಯನ್ನು ನಿಲ್ಲಿಸುವಾಗ, ಶಾಸಕರಿಗೆ ಸಚಿವ ಸ್ಥಾನ ಕೊಡುವಾಗ, ಲೋಕಸಭೆಗೆ ಸ್ಪರ್ದಿಸುವ ಕುರಿತು, ಹಾಗೂ ಈಗ ಸರಕಾರವನ್ನು ವಿಸರ್ಜಿಸುವಾಗ ಜನರ ಅಭಿಪ್ರಾಯ ಯಾಚಿಸಿದ್ದಾರೆಯೇ? ಅಷ್ಟಕ್ಕೂ ಲೋಕಪಾಲಕ್ಕೆ ಭಾಜಪಾ, ಕಾಂಗ್ರೆಸ್ ಶಾಸಕರು ಬೆಂಬಲಿಸಲಿಲ್ಲವೆಂದು ಹೇಳುವ ಕೇಜ್ರಿವಾಲರದ್ದು ಅದೂ ಕೂಡಾ ಹಸಿ ಸುಳ್ಳೆಂದು ಸಾಬೀತಾಗಿದೆ. ಲೋಕಪಾಲ ವಿಧೇಯಕವು ನಿಯಮಾವಳಿಗಳಿಗನುಸಾರವಾಗಿ ಸಲ್ಲಿಸಲಾಗಿಲ್ಲವೆಂದು ಸ್ಪೀಕರ್ ಲೆಫ್ಟಿನೆಂಟ್ ಗವರ್ನರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿತವಾಗಿದೆ! ಹೇಳುತ್ತಾ ಹೋದರೆ ಮುಗಿಯದು.
           ಅರುಣ್ ಜೇಟ್ಲಿ ಹೇಳಿದಂತೆ ಮೊದಲು ರಾಜಕೀಯ ಪಕ್ಷವೊಂದನ್ನು ಕಟ್ಟಿ ಆಮೇಲೆ ಸಿದ್ಧಾಂತ ಮತ್ತು ಸದಸ್ಯರನ್ನು ಹುಡುಕುತ್ತಾ ಹೋಗುವುದರಲ್ಲಿ ಅಪಾಯವಿದೆ. ಅದರಿಂದಾಗಿಯೇ ಇಂದು ಆಮ್ ಆದ್ಮಿಯಲ್ಲಿ ಆಮ್ ಆದ್ಮಿಯ ಬದಲಾಗಿ ಭಾರತ ವಿರೋಧಿಗಳು, ಮಾವೋವಾದಿಗಳು, ಸ್ವಯಂಘೋಷಿತ ವಿಚಾರವಾದಿಗಳು, ತಮ್ಮ ಸಿದ್ಧಾಂತವನ್ನು ಹೇರಲೆತ್ನಿಸುವವರು ಸೇರಿ ಅದು ದೆಹಲಿಯಲ್ಲಿ ಅರಾಜಕತೆಯನ್ನು ಸೃಷ್ಟಿಸಿರೋದು!  ಈಗ ಲೋಕಸಭೆಗೆ ಸ್ಪರ್ದಿಸಲು ಸಜ್ಜಾಗುತ್ತಿರುವ ಪೊರಕೆ ಪಕ್ಷಕ್ಕೆ ಮತದಾರರು ಪೊರಕೆ ತೋರಿಸುತ್ತಾರೋ ಇಲ್ಲವೋ ಎಂಬುದರ ಮೇಲೆ ದೇಶದ ಭವಿಷ್ಯವೂ ನಿಂತಿದೆ. ಜನ ಭೃಷ್ಟಾಚಾರ ನಿರ್ಮೂಲನೆಯೆಂಬ ಖೆಡ್ಡಾದಲ್ಲಿ ಬಿದ್ದು ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜೀ ಮಾಡಿಕೊಂಡರೆ ಜಗದ್ಗುರು ಭಾರತ ಬಿಡಿ ಭಾರತ ಉಳಿಯುವುದೇ ಕನಸಾದೀತು. ಎಚ್ಚರ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ