ಪುಟಗಳು

ಮಂಗಳವಾರ, ಫೆಬ್ರವರಿ 18, 2014

ಭಕ್ತಿ, ನಂಬಿಕೆ ಇಲ್ಲದಿದ್ದರೆ ಮಂದಿರವೂ ಮಸಣವಾದೀತು!

   ಭಕ್ತಿ, ನಂಬಿಕೆ ಇಲ್ಲದಿದ್ದರೆ ಮಂದಿರವೂ ಮಸಣವಾದೀತು!
            ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅಲ್ಲಿ ಇತಿಹಾಸದ ನೆನಪುಗಳಿವೆ, ಪಾಠವಿದೆ! ಕಲಾವಿದನೊಬ್ಬನ ಕೈಚಳಕದಿಂದ ಸಿದ್ಧಗೊಂಡ ಕಲಾ ವೈಭವವು ಗತದ ಹಿರಿಮೆ-ಗರಿಮೆಯನ್ನು ಸಾರುತ್ತದೆ. ಅಲ್ಲಿ ವೇದ-ವೇದಾಂಗಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿದ್ದವು. ಭಾರತೀಯ ಕಲೆಗಳ ಪೋಷಕ ತಾಣಗಳಾಗಿದ್ದವು. ಅಲ್ಲಿ ಜಂಜಡದ ಬದುಕಿನ ಬವಣೆಗಳಿಂದ ಮುಕ್ತನಾಗಿ ಕ್ಷಣಕಾಲ ಶಾಂತಿಯಿಂದಿರಲು ಸಾಧ್ಯವಿತ್ತು. ಬ್ರಿಟಿಷರ ಕಾಪಟ್ಯದಿಂದಲೋ ನಮ್ಮವರದೇ ಮೂಢತ್ವದಿಂದಲೋ ಜಾತಿಯ ಒಳಸುಳಿಗೆ ಅವು ಸಿಲುಕಿದರೂ ದಶಕಗಳ ಹಿಂದಿನವರೆಗೂ ಅಲ್ಲಿ ಅಧ್ಯಾತ್ಮವನ್ನೂ ಸವಿಯಬಹುದಿತ್ತು. ಶಾಂತಿಯನ್ನು ಪಡೆಯಬಹುದಿತ್ತು. ಆದರೆ ಯಾವಾಗ ಆಳುಗರ ಕೆಟ್ಟ ದೃಷ್ಠಿ ದೇಗುಲಗಳ ಮೇಲೆ ಬಿತ್ತೋ ಅವರ ಮತ ಬ್ಯಾಂಕಿಗೆ ಈ ದೇವಾಲಯಗಳ ನಿಧಿಗಳು ಜಮಾವಣೆಯಾಗತೊಡಗಿದವು! ಅಲ್ಲಿನ ಲೌಕಿಕ ಹಾಗೂ ಅಲೌಕಿಕ ಸೌಂದರ್ಯಗಳೆರಡೂ ಸೊರಗತೊಡಗಿತು!
      ಹೌದು, ದೇವಾಲಯಗಳನ್ನು ತನ್ನ ಸ್ವಾಧೀನ ಮಾಡಿಕೊಳ್ಳುವ ಸರ್ಕಾರ ದೇವಾಲಯಗಳ ಅಮೂಲ್ಯ ವಾಸ್ತುಶಿಲ್ಪದ ಪರಂಪರೆಯನ್ನು ವಿವೇಚನಾರಹಿತವಾಗಿ ನಾಶಪಡಿಸುತ್ತಿದೆ. ಎಷ್ಟೋ ದೇವಾಲಯಗಳ ಶಿಲ್ಪಕಲಾ ವೈಭವ ಹಾಗೂ ಶಾಸನಗಳು ಧೂಳು, ಮರಳು ಮೆತ್ತಿ ನಾಶವಾಗುತ್ತಲೇ ಇವೆ. ಇತ್ತೀಚೆಗೆ ಕಾಂಕ್ರೀಟಿಕರಣದ ಭರದಲ್ಲಿ ಸೇಲಂ ಸಮೀಪದ ನಾಸಿಯನೂರ್ ದೇವಾಲಯದಲ್ಲಿ ಇಡೀ ಮಂಟಪದೇ ನಾಪತ್ತೆಯಾಯಿತು! 300ವರ್ಷಗಳಿಗೂ ಹಿಂದಿನ ಪ್ರಾಚೀನ ಸ್ಮಾರಕಗಳನ್ನು ನವೀಕರಿಸುವುದಲ್ಲ, ಯಥಾಸ್ಥಿತಿ ಕಾಪಾಡಬೇಕು ಎನ್ನುವ ವಿಚಾರವಾದರೂ ಸರ್ಕಾರೀ ಅಧಿಕಾರಿಗಳಿಗೆ ತಿಳಿದಿದೆಯೇ?  ಇತ್ತೀಚೆಗೆ ತಮಿಳುನಾಡಿನ ಮಧುರೈ, ರಾಮೇಶ್ವರಂ, ಕನ್ಯಾಕುಮಾರಿಯಂತಹ ಸುಪ್ರಸಿದ್ದ ದೇವಾಲಯಗಳನ್ನು ದರ್ಶಿಸುವ ಭಾಗ್ಯ ಒದಗಿ ಬಂದಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಧೂಳು ಹಿಡಿದಿರುವ ವಿಗ್ರಹಗಳು, ಕಲಾ ಕೆತ್ತನೆಗಳು, ಭಿತ್ತಿ ಚಿತ್ರಗಳು, ಶಿಲಾ ಶಾಸನಗಳು, ವರ್ಷಾನುಗಟ್ಟಲೆ ನೀರೆ ಸೋಕದ ಪ್ರಾಂಗಣಗಳು, ದೇಗುಲದೊಳಗೇ ಸರಕಾರ ಪ್ರಾಯೋಜಿತ ಅಂಗಡಿಗಳು ಇವುಗಳನ್ನೆಲ್ಲಾ ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಅಲ್ಲಿನ ಸ್ಥಿತಿ ಕಂಡು ಬಹುಷ ದೇವರೇ ಓಡಿ ಹೋಗಿರಬಹುದು! ಭಾರತದ ದಕ್ಷಿಣದ ಭೂಶಿರ ಭುವನ ಮನೋಹರಿ ಕನ್ಯಾಕುಮಾರಿ. ಅಲ್ಲಿ ತಪಸ್ಸು ಮಾಡುತ್ತಿರುವ ತಾಯಿ ಪಾರ್ವತಿಯ ದೇವಾಲಯವಿದೆ. ಆ ದೇವಾಲಯದ ಒಳಹೊಕ್ಕು ನೋಡಿದರೆ ಖೇದವೆನಿಸುತ್ತದೆ. ಧೂಳು, ಮಣ್ಣುಗಳಿಂದ ಮಸುಕಾಗಿರುವ ಸ್ಥಂಭಗಳು, ಕಲಾಕೃತಿಯಿರುವ ಗೋಡೆಗಳು, ಪ್ರಾಂಗಣಗಳು. ಇದು ಒಳಗಿನ ಸ್ಥಿತಿಯಾದರೆ ಹೊರಗಿನದು ಮತ್ತೊಂದು ಬಗೆ! ದೇಗುಲದ ಸುತ್ತ ಅದೆಷ್ಟು ಚರ್ಚುಗಳು! ದೇವಾಲಯಗಳ ಸಮೀಪವೇ ಇರುವ ಮಸೀದಿಗಳು, ದೇವಾಲಯಗಳ ಒತ್ತಟ್ಟಿಗೇ ಇರುವ ಚರ್ಚುಗಳು, ಇವೆಲ್ಲವೂ ಹಿಂದುಗಳ ಸಹಿಷ್ಣುತೆಯ ಲಾಭ ಪಡೆದು ನಡೆಸುವ ಮತಾಂತರ ಕೇಂದ್ರಗಳೆಂದು ಎಂತಹವನಿಗಾದರೂ ತಿಳಿದು ಬಿಡುತ್ತದೆ. ಹಾಗಾದರೆ ಸರಕಾರ  ದೇವಾಲಯಗಳ ಪಕ್ಕದಲ್ಲಿ ಚರ್ಚು-ಮಸೀದಿಗಳ ನಿರ್ಮಾಣಕ್ಕೆ ಯಾಕೆ ಅವಕಾಶ  ಮಾಡಿಕೊಡುತ್ತದೆ?
                 ವೇದಗಳು ಜ್ಞಾನದ ಆಗರ. ಅವುಗಳ ಕುರಿತ ಸಂಶೋಧನೆ ವೇದಭೂಮಿ ಭರತ ಖಂಡದಲ್ಲಿ ನಡೆಯಬೇಕಿತ್ತು. ಕನಿಷ್ಟ ಪಕ್ಷ ದೇವಾಲಯಗಳಲ್ಲಿ ಆ ಕುರಿತಾದ ಪ್ರಕ್ರಿಯೆಗೆ ಉತ್ತೇಜನ ಕೊಡಬೇಕಿತ್ತು. ಆದರೆ ಹಿಂದೆ ದೇವಾಲಯಗಳ ಆಶ್ರಯದಲ್ಲಿ ನಡೆಯುತ್ತಿದ್ದ ಅದೆಷ್ಟೋ ವೇದ ಪಾಠ ಶಾಲೆಗಳು ಮುಚ್ಚಿ ಹೋಗಿವೆ. ತಮ್ಮ ಸ್ವಂತ ಆಸಕ್ತಿಯಿಂದ ವೇದ ಪ್ರಸಾರ ಮಾಡುವವರಿಗೆ ಸಹಕರಿಸದ ವೇದ ವಿರೋಧಿ ಸರಕಾರಗಳಿಂದ ವೇದ ಪ್ರಸಾರಕ್ಕೆ ಸಹಾಯವನ್ನು ನಿರೀಕ್ಷಿಸುವುದೇ ಮೂರ್ಖತನವಾದೀತು. ಅದಕ್ಕೆ ಸರಿಯಾಗಿ ಹೆಚ್ಚಿನ ದೇಗುಲಗಳಲ್ಲಿ ದೇವರ ಮೆರವಣಿಗೆಯ ವೇಳೆ ವೇದಮಂತ್ರ ಪಠಣದಂತಹ ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುವ ಸಿಬ್ಬಂದಿಗೆ ಯಾವುದೇ ಸಂಬಳ ನೀಡಲಾಗುವುದಿಲ್ಲ. ಇತ್ತೀಚೆಗೆ  ನಟರಾಜ ದೇವಾಲಯವನ್ನು ಸರ್ಕಾರದ ಕಪಿಮುಷ್ಠಿಯಿಂದ ತಪ್ಪಿಸಲು ಸುಬ್ರಮಣಿಯನ್ ಸ್ವಾಮಿ ಯಶಸ್ವಿಯಾದರು. ಅವರು ಹೇಳುವಂತೆ "ಶ್ರೀರಂಗಂನಲ್ಲಿ ದಿನದ ಪೂಜಾದಿ ಕೈಂಕರ್ಯವನ್ನು ನೆರವೇರಿಸುವ 36 ಮಂದಿ ಅರ್ಚಕರಿದ್ದು ಅವರಿಗೆ ನಿಗದಿತ ಮಾಸಿಕ ವೇತನವಿಲ್ಲ. ಭಕ್ತರು ನೀಡುವ ದಕ್ಷಿಣೆ ಹಾಗೂ ಸೇವೆಯ ರಶೀದಿ ಮಾರಾಟದಿಂದ ಸಿಗುವ ಹಣದಲ್ಲಿನ ಪಾಲು ಮಾತ್ರ ಅವರ ಆದಾಯ. ಆದರೆ ದೇವಾಲಯದಲ್ಲಿರುವ ಕಾವಲುಗಾರ, ಕಾರು ಚಾಲಕ ಮುಂತಾದ ಸರ್ಕಾರದಿಂದ ನೇಮಕಗೊಂಡ ನೌಕರರಿಗೆ ಪ್ರತಿ ತಿಂಗಳಿಗೆ 8,000ದಿಂದ ರೂ. 20 ಸಾವಿರದವರೆಗಿನ ಸಂಬಳವಿದೆ. ಈ ನೌಕರರು ದೇವಸ್ಥಾನದ ಯಾವುದೇ ಧಾರ್ಮಿಕ ಕೆಲಸದಲ್ಲಿ ಭಾಗಿಯಾಗುವುದಿಲ್ಲ. ತಿರುನಲ್ವೇಲಿಯ ಪ್ರಸಿದ್ಧ ನೆಲ್ಲಿಯಪ್ಪಾರ್ ದೇವಾಲಯದಲ್ಲಿ ದಿನದ ಪೂಜೆ ನಡೆಸುವ ಅರ್ಚಕರಿಗೆ ಮಾಸಿಕ ವೇತನವೇನೋ ಇದೆ. ಎಷ್ಟು ಗೊತ್ತೆ? ತಿಂಗಳಿಗೆ ರೂ.55ರಿಂದ 72ರ ತನಕ." ಹೌದು ದಿನಕ್ಕೆ 5 ರೂ. ಇದ್ದರೆ ಹೊಟ್ಟೆ ತುಂಬ ಊಟ ಮಾಡಬಹುದೆಂದು ಹೇಳುವ, ದಿನಕ್ಕೆ 120 ರೂಪಾಯಿ ದುಡಿದರೆ ಐದು ಜನ ಇರುವ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎನ್ನುವ ರಾಜಕಾರಣಿಗಳ ಪಾಲಿಗೆ ಇವರೆಲ್ಲಾ ಶ್ರೀಮಂತರೇ!
               ಕುಕ್ಕೆ ದೇವಸ್ಥಾನದ ಆದಾಯ 2010-11ನೇ ಸಾಲಿನಲ್ಲಿ 44.82 ಕೋ.ರೂ.ಗಳಿದ್ದರೆ 2011-12ನೇ ಸಾಲಿನಲ್ಲಿ 58.29 ಕೋ.ರೂ.ಗೇರಿತ್ತು. ಕೊಲ್ಲೂರು ದೇವಳದ ಆದಾಯ 17.48 ಕೋ.ರೂ.ಗಳಿಂದ 20 ಕೋ.ರೂ.ಗಳಿಗೆ ಏರಿಕೆಯಾಗಿತ್ತು. ಕಟೀಲು ದೇವಸ್ಥಾನದ ಆದಾಯ 10.07 ಕೋ.ರೂ.ಗಳಿದ್ದುದು ಮರುವರ್ಷ 11.5 ಕೋ.ರೂ.ಗೆ ಏರಿಕೆಯಾಗಿತ್ತು. ಕುಕ್ಕೆ ದೇವಸ್ಥಾನದ ಆದಾಯ ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನದಾಗಿದ್ದು ಬಳಿಕ ಕೊಲ್ಲೂರು, ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಲೆಮಹದೇಶ್ವರ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮೊದಲಾದವುಗಳಿವೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 125 ಎ ವರ್ಗದ ದೇವಾಲಯಗಳು, 179 ಬಿ ವರ್ಗದ ದೇವಾಯಗಳು ಇದ್ದು, ಎ ವರ್ಗದ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋ.ರೂ., 2011-12ನೇ ಸಾಲಿನಲ್ಲಿ 261.14 ಕೋ.ರೂ., ಬಿ ವರ್ಗದ ದೇವಾಲಯಗಳಿಂದ 20.18 ಕೋ.ರೂ. ಹಾಗೂ 21.58 ಕೋ.ರೂ. ಆದಾಯ ಬಂದಿದೆ. ಅಷ್ಟಕ್ಕೂ ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೊಳಪಡಿಸುತ್ತಿರುವುದೇಕೆ? ಈ ದೇಗುಲಗಳಿಂದ ಬಂದ ಆದಾಯವನ್ನು ಅಲ್ಲಿ ಸಮರ್ಪಕವಾದ ವ್ಯವಸ್ಥೆ ಏರ್ಪಡಿಸಲು, ಅಲ್ಲಿ ಕೈಂಕರ್ಯ ಮಾಡುವವರಿಗೆ ಸೂಕ್ತ ವೇತನ ನೀಡಲು ಸರಕಾರ ಏಕೆ ಬಳಸುವುದಿಲ್ಲ? ಮುಜರಾಯಿ ಇಲಾಖೆಗೆ ಒಳಪಟ್ಟ ಹಲವು ದೇವಾಲಯಗಳಿಗೆ ಸರಕಾರದಿಂದ ಬರುವ ವಾರ್ಷಿಕ ತಸ್ತೀಕ್ ಕೇವಲ 165ರೂ! ಅಲ್ಲಿ ಕೆಲಸ ಮಾಡುವ ಅರ್ಚಕರಿಗಾಗಲಿ ಅಥವಾ ಇತರರಿಗಾಗಲಿ ಸಂಬಳ ನಾಸ್ತಿ! ಅಂತಹ ಎಷ್ಟೋ ದೇವಾಲಯಗಳು ಗತಿ ಗೋತ್ರವಿಲ್ಲದೆ ಪಾಳು ಬಿದ್ದು ಹೋದದ್ದಿದೆ. ಹಲವು ದೇಗುಲಗಳನ್ನು ಊರವರೇ ಚಂದಾ ಎತ್ತಿ ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುವುದಿದೆ. ದೇವಾಲಯಗಳಿಂದ ಬರುವ ಆದಾಯವನ್ನು ಮಸೀದಿ,ಮದರಸಾ, ಚರ್ಚುಗಳಿಗೆ ಹಂಚುವ ಸರಕಾರಗಳು ಪಾಳು ಬಿದ್ದ ದೇವಾಲಯಗಳನ್ನು ಜೀರ್ಣೋದ್ದಾರ ಯಾಕೆ ಮಾಡುವುದಿಲ್ಲ?
            ದೇವಾಲಯಗಳು ಒಂದು ಕಾಲದಲ್ಲಿ ನಮ್ಮ ಸಂಸ್ಕೃತಿಯ ಪೋಷಣೆ ಮಾಡುತ್ತಿದ್ದವು. ಭಾರತೀಯ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡುವುದರ ಮೂಲಕ ಕಲಾವಿದನೂ ಗುರುತಿಸಲ್ಪಡುತ್ತಿದ್ದ, ಕಲೆಯೂ ಬೆಳೆಯುತ್ತಿತ್ತು. ಉತ್ಸವಗಳ ಸಮಯದಲ್ಲಿ ತೇರು ನಿರ್ಮಾಣ, ಚೆಂಡೆ-ವಾದ್ಯಗಳು, ಡೆಕ್ಕೆ ಬಲಿ, ದೇವರ ಉತ್ಸವ ಮೂರ್ತಿಯನ್ನು ಹೊತ್ತು ಮಾಡುವ ನರ್ತನ, ಶಾಸ್ತ್ರೀಯ ಸಂಗೀತ-ನೃತ್ಯ, ಹೀಗೆ ಹತ್ತು ಹಲವು ಪ್ರತಿಭೆಗಳ ಪ್ರದರ್ಶನಕ್ಕೂ ಒಂದು ವೇದಿಕೆ ಸಿಗುತ್ತಿತ್ತು. ಸರಕಾರ ತನ್ನ ವಶಕ್ಕೆ ತೆಗೆದುಕೊಂಡ ನಂತರ ಮೇಲ್ವಿಚಾರಕರಾಗಿರುವ ಅಧಿಕಾರಿಗಳಿಗ ಅಸಡ್ಡೆಯಿಂದಲೋ, ನಂಬಿಕೆ ಇಲ್ಲದಿರುವುದರಿಂದಲೋ ಅಥವಾ ಸರಕಾರದ ಕುಟಿಲ ನೀತಿಯ ಫಲವಾಗಿ ಇವೆಲ್ಲವೂ ಕಣ್ಮರೆಯಾಗುತ್ತಿವೆ. ಹಿಂದೆ ಧಾರ್ಮಿಕ ಹಾಗೂ ನೈತಿಕ ಶಿಕ್ಷಣ ಬೋಧಿಸುವುದರ ಮೂಲಕ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದ ದೇವಾಲಯಗಳು ಇಂದು ಬರೇ ಡಾಂಭಿಕ ಆಚರಣೆಗಳ ಆಗರವಾಗುತ್ತಿವೆ. ಗಣೇಶೋತ್ಸವಗಳಂತೂ ಕರ್ಕಶ ಸಿನಿಮಾ ಹಾಡುಗಳ, ಕುಡಿದು ಕುಣಿಯುವ ಮತಿಗೇಡಿಗಳ ದೊಂಬರಾಟವಾಗಿರುವಾಗ ಸರಕಾರದ ಹಿಂದೂ ವಿರೋಧಿ ನೀತಿಯಿಂದ ಇಂತಹ ಅಪದ್ದಗಳು ದೇವಾಲಯಗಳ ಒಳ ಹೊಕ್ಕರೂ ಆಶ್ಚರ್ಯವಿಲ್ಲ.
             ಭಕ್ತರು ನಂಬಿಕೆ, ಭಕ್ತಿಯಿಂದ ಅರ್ಪಿಸಿದ ಈ ಹಣವನ್ನು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅಥವಾ ಕನಿಷ್ಟ ಹಿಂದೂ ಸಮಾಜದ ಅವಶ್ಯಕತೆಗಳ ಪೂರೈಕೆಗೆ ಬಳಸಬೇಕಲ್ಲವೆ? ಆದರೆ ಈ ಹಣ ಹಂಚಿಕೆಯಾಗುವುದು ಮದರಸಾ, ಚರ್ಚುಗಳಿಗೆ! ಮುಂದೆ ಬಳಕೆಯಾಗೋದು ಮತಾಂತರ, ಜಿಹಾದೀ ಭಯೋತ್ಪಾದನೆಗಳಿಗೆ! ಅಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹಣ ನಮ್ಮನ್ನೇ ಕೊಲ್ಲಲು ಬಳಕೆಯಾಗುತ್ತಿದೆ! ಇದಕ್ಕೆ ಪೂರಕವಾಗಿ ಮನದಲ್ಲಿ ಮೂಡುವ ಇನ್ನೊಂದು ಪ್ರಶ್ನೆಯೆಂದರೆ ತಾನು ‘ಮತ ನಿರಪೇಕ್ಷ, ಸಮಾಜವಾದಿ’ ಎಂದು ಬೊಂಬಡಾ ಬಜಾಯಿಸುವ ಸರ್ಕಾರ ಕೇವಲ ಹಿಂದುಗಳ ಪೂಜಾಸ್ಥಳಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದೇಕೆ? ಮುಸ್ಲಿಂ ಮತ್ತು ಕ್ರೈಸ್ತ ಮತೀಯ ಸಂಸ್ಥೆಗಳ ಕಡೆಗೆ ಸರ್ಕಾರದ ಗಮನವೇ ಹೋಗುವುದಿಲ್ಲವೇಕೆ?ನಮ್ಮ ದೇವಾಲಯಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಇಲ್ಲದಿದ್ದರೆ ಈ ಘಜನಿ ಘೋರಿಗಳು ಅವುಗಳನ್ನು ಮುಕ್ಕಿ ತಿಂದಾರು! ಮೊದಲೇ ನೈಜ ಇತಿಹಾಸವನ್ನು ತಿರುಚಿ ಪಠ್ಯ ಪುಸ್ತಕ ರಚಿಸುವ ದೇಶದ್ರೋಹಿ ಸರಕಾರಗಳಿಂದಾಗಿ ಮುಂದಿನ ಪೀಳಿಗೆಗೆ ದೇವಾಲಯಕ್ಕೂ ಚರ್ಚು, ಮಸೀದಿಗಳಿಗೂ ವ್ಯತ್ಯಾಸವೇ ತಿಳಿಯಲಿಕ್ಕಿಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ