ಪುಟಗಳು

ಭಾನುವಾರ, ಮೇ 18, 2014

ಹಿಂತಿರುಗಿ ನೋಡಿದಾಗ

 
                 ಜಾತ್ಯಾತೀತತೆಯ ಸೋಗಿನಲ್ಲಿ ದೇಶವನ್ನು ಜಾತಿಯ ಆಧಾರದಲ್ಲಿ ಒಡೆದು ವಿನಾಶದತ್ತ ತಳ್ಳಿದ ವಿಚ್ಛಿದ್ರಕಾರಿ ಶಕ್ತಿಗಳ ಅವಸಾನವಾಗಿದೆ. ದೇಶವಿಡೀ ನಮೋ ಎಂದಿದೆ. ಕಾಶಿ ವಿಶ್ವನಾಥ ಸತ್ಯವಂತರನ್ನು ಕೈಬಿಡುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತಲೇ ಇದ್ದಾನೆ. ಸಂಘ ಕಡೆದ ಪುತ್ಥಳಿಯ ಪ್ರತಿಷ್ಠಾಪನೆಗೆ ದೇಶಭಕ್ತಗಢಣ ಕಾತರದಿಂದ ಕಾಯುತ್ತಿದೆ. ದೇಶದ ಜನತೆ ಮೊತ್ತ ಮೊದಲ ಬಾರಿಗೆ ನಿಜವಾದ ಸ್ವಾತಂತ್ರ್ಯದ ಮಧುರ ಸ್ಪರ್ಶವನ್ನು ಅನುಭವಿಸುತ್ತಿದ್ದಾರೆ. ಹಲವು ಶತಮಾನಗಳಿಂದ ದಾಸ್ಯಕ್ಕೊಳಗಾಗಿ ದಾಸ್ಯವನ್ನೇ ಮನೋವೃತ್ತಿಯಾಗಿ ಸ್ವೀಕರಿಸಿದ್ದ ಹಿಂದೂ ತನ್ನ ಅಸ್ಮಿತೆಯನ್ನು ಪುನಃ ಪ್ರತಿಷ್ಠಾಪಿಸುವತ್ತ ದಾಪುಗಾಲು ಹಾಕತೊಡಗಿದ್ದಾನೆ. ತಾಯಿ ಭಾರತಿಯಂತೂ ಶತಶತಮಾನಗಳಿಂದ ಕಾಯುತ್ತಿದ್ದ ಕ್ಷಣ ಕಡೆಗೂ ಒಲಿದು ಆಕೆಯ ಕಣ್ಣಲ್ಲಿ ಕಣ್ಣೀರ ಬದಲು ಆನಂದಭಾಷ್ಪ ಸುರಿಯತೊಡಗಿದೆ. ಇಂತಹ ಒಂದು ದೇಶವನ್ನುಳಿಸುವ ಸಂಗ್ರಾಮದಲ್ಲಿ ಭಾಗಿಯಾಗಿ ನನ್ನದಾದ ಅಳಿಲ ಸೇವೆಯನ್ನು ನೀಡಿದ ಬಗ್ಗೆ ನನಗೆ ಹೆಮ್ಮೆಯಿದೆ.
            ಹೌದು, ಅಂದು ಮೊತ್ತಮೊದಲ ಬಾರಿ ದಕ್ಷಿಣ ಭಾರತದಲ್ಲಿ ಕಮಲವರಳಿದಾಗ ನಮ್ಮ ಮನಸ್ಸು ಕಮಲದಂತೆಯೇ ಅರಳಿತ್ತು. ಆದರೆ ದುರದೃಷ್ಟವೋ ಅದೃಷ್ಟವೋ ಅದನ್ನು ಉಳಿಸಿಕೊಳ್ಳುವ ಭಾಗ್ಯ ನಮ್ಮ ಪಾಲಿಗಿರಲಿಲ್ಲ. ಮತ್ತೆ ಕಮಲವರಳದಿದ್ದದ್ದು ನಮ್ಮ ದುರದೃಷ್ಟವಾದರೂ, ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಯಾವತ್ತೂ ರಾಜಕೀಯದತ್ತ ಮುಖ ಮಾಡದಿದ್ದ ಯುವಜನತೆಯನ್ನು ಮೊದಲ ಬಾರಿಗೆ ದೇಶದ ಬಗ್ಗೆ ಚಿಂತಿಸುವಂತೆ ಮಾಡಿದ್ದು ಅದೃಷ್ಟವೇ ಎಂದು ನಾನು ಭಾವಿಸುತ್ತಾನೆ. ಹುಲಿ ಯಾವಾಗಲೂ ತನ್ನ ಬೇಟೆಯ ಮೇಲೆ ಎರಗಿ ಗುರಿ ಸಾಧಿಸುವ ಮುನ್ನ ಒಂದು ಹೆಜ್ಜೆ ಹಿಂದಿಡುತ್ತದೆ. ಅಂತಹ ವಿಷಮ ಪರಿಸ್ಥಿತಿಯಲ್ಲಿ ನಮಗೆ ಹೊಳೆದದ್ದು ನಮೋ ಸೈನ್ಯ ಕಟ್ಟುವ ಯೋಚನೆ. ಅದು ಖಡ್ಗದ ಅಲಗಿನ ಮೇಲೆ ನಡೆಯುವ ರೀತಿ ಎಂಬುದು ನಮಗೆ ತಿಳಿದಿತ್ತು. ಹಾಗಂತಾ ನಾವು ಅದನ್ನು ಕುರುಡಾಗಿ ಸ್ವೀಕರಿಸಿರಲಿಲ್ಲ. ನರೇಂದ್ರ ಮೋದಿ ಗುಜರಾತಿನಲ್ಲಿ ನಡೆಸಿದ ಅಭಿವೃದ್ಧಿಗಾಥೆಯ ಅಧ್ಯಯನ ಮಾಡಿ, ಈ ದೇಶವನ್ನು ಉಳಿಸಿ ನಮ್ಮ ಕನಸಿನಂತೆ ಮತ್ತೊಮ್ಮೆ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಲು ಸಮರ್ಥ ವ್ಯಕ್ತಿ ಈ ನರೇಂದ್ರ ಎಂಬುದಾಗಿ ಮನಗಂಡೇ ನಾವು ಈ ದುಸ್ಸಾಹಸಕ್ಕೆ ಕೈ ಹಾಕಿದ್ದೆವು. ಹಾಗಂತ ಆಗಿನ ಪರಿಸ್ಥಿತಿಯನ್ನು ನೀವು ಅವಲೋಕಿಸಬೇಕು. ನರೇಂದ್ರ ಮೋದಿ ಪ್ರಧಾನಿ ಅಭರ್ಥಿಯೆಂದು ಇನ್ನೂ ಘೋಷಣೆಯಾಗಿರಲಿಲ್ಲ(ಪಕ್ಷದಿಂದ ಮಾತ್ರವಲ್ಲ, ಸಂಘದಿಂದ ಕೂಡಾ). ಕನ್ನಡದ ಬರಹಗಾರರಲ್ಲಿ ಪ್ರತಾಪ್ ಸಿಂಹ ಒಬ್ಬ ಬಿಟ್ಟರೆ ಉಳಿದವರ್ಯಾರು ನರೇಂದ್ರ ಮೋದಿಯ ಬಗ್ಗೆ ಸತ್ಯಕಥನವನ್ನು ಬರೆದಿರಲಿಲ್ಲ(ಅಂಕಣಗಳು ಬಂದಿದ್ದವು, ಅದು ಬೇರೆ ಮಾತು). ಕೇವಲ ರಾಜಕೀಯ ವಿದ್ಯಮಾನಗಳನ್ನು ಪ್ರತಿನಿಮಿಷ ವೀಕ್ಷಿಸುವ ನಮ್ಮಂಥ ಬಲಪಂಥೀಯ ಮಂದಿಗಷ್ಟೇ ನರೇಂದ್ರ ಮೋದಿಯ ಬಗ್ಗೆ ತಿಳಿದಿತ್ತು. ದೇಶದ ಮಾಧ್ಯಮಗಳು, ತಥಾಕಥಿತ ಬುದ್ಧಿಜೀವಿಗಳು ಸದಾ ನರೇಂದ್ರ ಮೋದಿಯ ಮೇಲೆ ಮುಗಿಬೀಳುತ್ತಲೇ ಇದ್ದರು. ಹಾಗಾಗಿ ಈ ದೇಶದ ಪ್ರಜೆಗಳಿಗೂ ಅದೇ ಮಾನಸಿಕತೆ ಆವರಿಸಿತ್ತು. ಅಂತಹ ಸಂದರ್ಭದಲ್ಲಿ ನಾವು ನಮೋ ಬ್ರಿಗೇಡ್ ಆರಂಭಿಸಿದ್ದೆವು. ಅಂತರ್ಜಾಲದಲ್ಲಷ್ಟೇ ಪ್ರಚಾರ ಮಾಡುತ್ತಿದ್ದವರನ್ನು ಸಮರದ ನೈಜ ಅಂಕಣಕ್ಕಿಳಿಸುವುದು ನಮ್ಮ ಗುರಿಯಾಗಿತ್ತು. ಮೊದಲು ಬೆಂಗಳೂರಿನಲ್ಲಷ್ಟೇ ಆರಂಭಿಸುವುದು ಎಂದು ಯೋಜಿಸಿದ್ದ ನಮಗೆ ಮಂಗಳೂರಿನಲ್ಲಿ ನಮ್ಮದೇ ಉದ್ದೇಶದೊಂದಿಗೆ ಕಾರ್ಯಕ್ಕಿಳಿದಿದ್ದ ನರೇಶ ಶೆಣೈಯವರ ಸಂಪರ್ಕ ದೊರೆತ ಮೇಲೆ ಎಲ್ಲರೂ ಒಂದಾಗಿ ಇಡೀ ಕರ್ನಾಟಕದಲ್ಲಿ ರಣಕಹಳೆ ಮೊಳಗಿಸಲು ಸಿದ್ಧರಾದೆವು. ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಜನತೆಯನ್ನು ನಿದ್ದೆಯಿಂದೆಬ್ಬಿಸಲು ನಮ್ಮ ಕೋರಿಕೆಯನ್ನು ಮನ್ನಿಸಿ ನಮ್ಮ ಜೊತೆಯಾದರು. ಗಮನಿಸಿ ಆಗ ಕರ್ನಾಟಕದಲ್ಲಿ ಭಾಜಪಾ ಆರು ಸ್ಥಾನ ಗಳಿಸುವುದು ಸಂಶಯವಿತ್ತು.
                  ನಾವು ನಮೋ ಬ್ರಿಗೇಡ್ ಉದ್ಘಾಟಿಸುವ ಸಮಯದಲ್ಲಿ ನಮ್ಮ ಬೆಂಗಾವಲಿಗೆ ನಿಂತ ಹಿರಿಯರಿಗೆ, ಹಿತೈಷಿಗಳಿಗೆ, ಪತ್ರಕರ್ತರಿಗೆ ಹಾಗೂ ಜನ ಸಾಮಾನ್ಯರಿಗೆ ಕೃತಜ್ಞತೆ ಹೇಳಲೇಬೇಕು. ಇಂದಿನ ವಿಜಯ ಅವರ ಆಶೀರ್ವಾದದ ಫಲ, ನಮೋ ಮಂತ್ರದ ಬಲ! ಕೆಲವೇ ತಿಂಗಳುಗಳಲ್ಲಿ ನಮೋ ಬ್ರಿಗೇಡ್ ಕರ್ನಾಟಕದಾದ್ಯಂತವಲ್ಲದೆ, ಭಾರತದ ಉಳಿದ ರಾಜ್ಯಗಳಿಗೂ, ವಿದೇಶಗಳಿಗೂ ಪಸರಿಸಿತು. ಜನರು ಸ್ವಯಂಸ್ಪೂರ್ತಿಯಿಂದ ನಮ್ಮ ಜೊತೆಯಾದರು. ನಾವು ಯಾರಲ್ಲೂ ಹಣ ಬೇಡಲಿಲ್ಲ, ಮತ ಬೇಡಿದೆವು. ಕಾರ್ಯಕರ್ತರು ತಮ್ಮ ಜೇಬಿನಿಂದಲೇ ಹಣತೆತ್ತರು. ನಮ್ಮ ತಂಡದಲ್ಲಿದ್ದವರೆಲ್ಲಾ ಸಂಘಪರಿವಾರದಿಂದಲೇ ಬಂದವರು ಅಂತ ನೀವು ತಿಳಿದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ನಮ್ಮ ಜೊತೆಯಾದವರಲ್ಲಿ ಸಂಘದ ಬಗ್ಗೆ ಏನೂ ತಿಳಿಯದವರೂ ಇದ್ದರು. ಇಷ್ಟರವರೆಗೆ ಭಾಜಪಾಕ್ಕೆ ಮತ ಹಾಕದವರೂ ಇದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ಸಿಗೆ ಕೆಲಸ ಮಾಡಿ ತಾಯ್ನಾಡಿನ ಋಣ ತೀರಿಸಲು ನಮೋ ಬೆಂಬಲಿಸಿದವರೂ ಇದ್ದರು. ಮೊದಲ ಬಾರಿಗೆ ಮತಹಾಕುವವರೂ, ದಾಖಲೆಯ ಬಾರಿ ಮತ ಹಾಕಿದವರೂ ಇದ್ದರು. ಭಾಜಪಾವನ್ನು ದ್ವೇಷಿಸುತ್ತಾ ಕೇವಲ ಮೋದಿಗಾಗಿ ನಮೋ ಎಂದವರೂ ನಮ್ಮ ಜೊತೆಗಿದ್ದರು!
                ಜನ ಸಂಪರ್ಕಕ್ಕಾಗಿ ನಮೋಬ್ರಿಗೇಡ್ ಕರಪತ್ರಗಳ ಜೊತೆ ಜೊತೆಗೆ ಮನ ಬಂದಾಗ ಮೋದಿ ಮಾತು ಕೇಳಬಹುದಾದ 'ನಮೋ ಸುನೋ' , 'ನಮೋ ವಾಣಿ' ಪತ್ರಿಕೆ, ರೇಡಿಯೋ 20-20, 'ನಮೋ ಭಾರತ್' ಗೀತ ಕಥನ, 'ನಮೋ ಸಂಚಾರ್', 'ನಮ್ಮ ಮನೆ ನಮೋ ಮನೆ' ಅಭಿಯಾನ, ನಮೋ ಕಾರ್ಡು ಅಬಿಯಾನ, ರಾಜ್ಯದಾದ್ಯಂತ ಸಂಚರಿಸಿದ 'ನಮೋರಥ', ಸಿಎಜಿ ಜೊತೆ ಸೇರಿ ಮಾಡಿದ 'ಚಾಯ್ ಪೆ ಚರ್ಚಾ ವಿಥ್ ನಮೋ' ಅಭಿಯಾನ, ಹೀಗೆ ಹತ್ತು ಹಲವು ವಿಧಾನಗಳ ಮೂಲಕ ನಮೋ ಬ್ರಿಗೇಡ್ ಜನರ ಬಳಿ ತಲುಪಿತು. ನಮೋ ಬ್ರಿಗೇಡಿಗೆ ಪ್ರಶಂಸೆಯ ಜೊತೆಗೆ ಆರೋಪಗಳೂ ಬಂದವು. ಆ ಆರೋಪಗಳ ಶಿಲೆಗಳನ್ನೇ ಒಟ್ಟಾಗಿಸಿ ನಾವು ನಮೋ ಬ್ರಿಗೇಡಿನ ಬೃಹತ್ ಭವನ ಕಟ್ಟಿದೆವು. ನಮೋ ಬ್ರಿಗೇಡಿಯರುಗಳಲ್ಲಿ ಶಿಸ್ತಿಲ್ಲ ಎನ್ನುವವರು ಒಂದು ಅಂಶ ಗಮನಿಸಬೇಕು, ನಮೋ ಬ್ರಿಗೇಡಿನಲ್ಲಿದ್ದವರೆಲ್ಲಾ ಸಂಘದ ಸ್ವಯಂಸೇವಕರಾಗಿರಲಿಲ್ಲ! ಸಂಘದ ಶಿಸ್ತಿಲ್ಲದೆ ಇದ್ದಿರಬಹುದು ಆದರೆ ನಾವೆಂದಿಗೂ ಉಳಿದ ಪಕ್ಷಗಳ ಕಾರ್ಯಕರ್ತರಂತೆ ಗೂಂಡಾಗಿರಿ ಮಾಡಲಿಲ್ಲ. ನಮ್ಮ ಬ್ಯಾನರುಗಳನ್ನು ಅಲ್ಲಲ್ಲಿ ಹರಿದು ಹಾಕಿದರೂ ಸುಮ್ಮನಿದ್ದೆವು. ನಮೋ ಅಭಿಮಾನಿಗಳು ಆಕ್ರಮಣಕಾರಿ ಮನೋಭಾವದವರು ಎನ್ನುವುದನ್ನು ನಾನು ವಿರೋಧಿಸುವುದಿಲ್ಲ. ಯಾಕೆಂದರೆ ನಾವು ನಮೋ ಬಗ್ಗೆ ಸುಳ್ಳು ಸುದ್ದಿಹಬ್ಬಿಸುವುದನ್ನು, ಇಲ್ಲಸಲ್ಲದ ಆರೋಪ ಮಾಡುವುದನ್ನು ಯಾವಾಗಲೂ ವಿರೋಧಿಸುತ್ತೇವೆ. ನಾವು ಸತ್ಯದ ಪರವಾಗಿರುವುದರಿಂದಲೇ ಆಕ್ರಮಣಕಾರಿ ಮನೋಭಾವ ತನ್ನಿಂದ ತಾನೇ ಬರುತ್ತದೆ.
              ಪ್ರಚಾರದ ಸಂದರ್ಭದಲ್ಲಿ ಕಂಡುಬಂದ ಕೆಲವು ಅಂಶಗಳನ್ನು ಪ್ರಸ್ಥಾಪಿಸಲೇಬೇಕು. ಒಂದು ಮುಖ್ಯ ಅಂಶ ಭಾರತೀಯರಲ್ಲಿ ಕಂಡುಬರುವುದೆಂದರೆ ಇತಿಹಾಸ ಜ್ಞಾನದ ಕೊರತೆ, ವಿವೇಚನೆಯ ಕೊರತೆ ಹಾಗೂ ಸಮಕಾಲೀನ ವಿಷಯಗಳ ಒಳಹೊಕ್ಕು ಚಿಂತಿಸಿ ನಿರ್ಧಾರಕ್ಕೆ ಬರುವ ಬುದ್ಧಿಯ ಕೊರತೆ. ಇತಿಹಾಸ ಜ್ಞಾನದ ಕೊರತೆಗೆ ತಿರುಚಿದ ಇತಿಹಾಸವನ್ನು ನಮ್ಮ ಶಿಕ್ಷಣದಲ್ಲಿ ಅಳವಡಿಸಿರುವುದು ಕಾರಣವಾದರೆ, ಮಾಧ್ಯಮಗಳು ಹೇಳುವ ಸಾವಿರ ಸುಳ್ಳನ್ನೇ ಸತ್ಯವೆಂದು ಪರಿಗಣಿಸಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುವುದು ಸಮಕಾಲೀನ ವಿಷಯಗಳ ಬಗ್ಗೆ ಅವರ ಜ್ಞಾನವನ್ನೇ ಬರಿದುಗೊಳಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ನಮೋ ಬ್ರಿಗೇಡ್ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿ ಜನರನ್ನು ಎಚ್ಚರಗೊಳಿಸಿತು. ಪ್ರಚಾರದ ಸಂದರ್ಭದಲ್ಲಿ ತಾವಾಗಿಯೇ ಮುಂದೆ ಬಂದು ನಮ್ಮನ್ನು ಹುರಿದುಂಬಿಸಿದವರೂ ಇದ್ದರು, ನಾವಾಗಿ ಮಾತನಾಡಿಸಿದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರೂ ಇದ್ದರು, ದೇಶ ಮುಳುಗುತ್ತಿರುವ ವೇಳೆಯಲ್ಲೂ ರಾಜಕೀಯ-ಚುನಾವಣೆಯಿಂದ ದೂರ ಸರಿದವರೂ ಇದ್ದರು, ನಿಮಗೆಲ್ಲ ತಲೆ ಸರಿಯಿಲ್ಲ; ಒಂದು ದಿವಸಕ್ಕೆ ಎಷ್ಟು ಹಣ ಕೊಡುತ್ತಾರೆ?; ನೀವೆಲ್ಲಾ ಚಿಕ್ಕವರು, ರಾಜಕೀಯದ ಬಗ್ಗೆ ಅನುಭವವಿಲ್ಲ; ಹೀಗೆಲ್ಲಾ ಹೇಳಿದವರೂ ಇದ್ದರು, ನಾನು ಇಂತಿಷ್ಟು ಮತ ಹಾಕಿಸಿಕೊಡುತ್ತೇನೆ;ನನಗಿಷ್ಟು ಕೊಡಬೇಕು ಎಂದು ಡೀಲು ಮಾಡಿಕೊಳ್ಳುವವರೂ ಇದ್ದರು! ನಮೋ ಬ್ರಿಗೇಡ್ ತನ್ನ ತತ್ವಕ್ಕೆ ಬದ್ಧವಾಗಿ ಮುನ್ನಡೆಯಿತು;ಜನ ಬೆಂಬಲಿಸಿದರು.
                  ಫಲಿತಾಂಶ ನಿಮ್ಮ ಮುಂದಿದೆ. ಆರು ಸ್ಥಾನಗಳನ್ನು ಗೆಲ್ಲುವುದು ಸಂಶಯವಿದ್ದ ಕರ್ನಾಟಕದಲ್ಲಿ ಭಾಜಪಾ ಹದಿನೇಳು ಸ್ಥಾನ ಗೆದ್ದಿದೆ. ಮೂರು ಸ್ಥಾನಗಳಲ್ಲಿ ಹತ್ತುಸಾವಿರಕ್ಕಿಂತಲೂ ಕಡಿಮೆ ಅಂತರದಿಂದ ಸೋತಿದೆ. ಈ ಯಶಸ್ಸಿಗೆ ನಾವೇ ಕಾರಣ ಅಂತ ನಾವು ಹೇಳೋದಿಲ್ಲ. ನಮ್ಮ ಜೊತೆಯಾಗಿ ಕಾರ್ಯಾಚರಿಸಿದ ನಮೋ ಹೆಸರಿನ ಹತ್ತು ಹಲವು ಸಂಘಟನೆಗಳು, ಪ್ರಥಮ ಬಾರಿಗೆ ಬಹಿರಂಗ ಪ್ರಚಾರಕ್ಕಿಳಿದ ಸಂಘದ ಸ್ವಯಂಸೇವಕರು, ಭಜರಂಗದಳ, ವಿಹಿಂಪ ಸೇರಿದಂತೆ ಸಂಘದ ಇತರ ಅಂಗಸಂಸ್ಥೆಗಳು, ಭಾಜಪಾದ ಎಲ್ಲ ಮಿತ್ರವೃಂದಗಳು, ಜನರಲ್ಲಿ ಮತದಾನದ ಜಾಗೃತಿ ಮೂಡಿಸಿ ಚುನಾವಣಾ ಗುರುತು ಚೀಟಿಗೆ ನೋಂದಣಿ ಮಾಡಿಸಿದ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಹಾಗೂ ಇತರ ಸಂಘಸಂಸ್ಥೆಗಳೂ ಈ ಯಶಸ್ಸಿನ ಪಾಲುದಾರರೂ. ಆದರೆ ಇದರಲ್ಲಿ ನಮೋ ಬ್ರಿಗೇಡ್ ಪಾಲು ಹೆಚ್ಚು ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಎಲ್ಲಕ್ಕಿಂತ ಹೆಚ್ಚಾಗಿ "ನಮೋ" ಎಂಬ ಮಂತ್ರವೇ ಈ ಯಶಸ್ಸಿನ ಮೂಲ ಎಂಬುದನ್ನು ಯಾರೂ ಮರೆಯಲಾರರು, ಮರೆಯಬಾರದು.
ನಮ್ಮ ಕನಸು ಸಾಕಾರಗೊಳ್ಳಲು ನಮ್ಮ ಜೊತೆಯಾದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಬಂಧುಗಳಿಗೂ, ಹಿತೈಷಿಗಳಿಗೂ ಕೃತಜ್ಞತೆಗಳು. ನಮ್ಮ ಕನಸು ನನಸಾಗಿದೆ. ಆದರೆ ಮಾಡಬೇಕಾದ ಕೆಲಸ ಬಾಕಿ ಇದೆ. ಭಾರತವನ್ನು ಜಗದ್ಗುರು ಪಟ್ಟದಲ್ಲಿ ಪುನರ್ ಪ್ರತಿಷ್ಠಾಪಿಸಲು ನಮೋಗೆ ನಮ್ಮ ಸಹಕಾರದ ಅವಶ್ಯಕತೆ ಇದೆ. ಅದಕ್ಕಾಗಿ ಮತ್ತೊಮ್ಮೆ ಮಗದೊಮ್ಮೆ ನಮೋ ಎನ್ನುತ್ತಾ ಇರೋಣವೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ