ಪುಟಗಳು

ಮಂಗಳವಾರ, ಸೆಪ್ಟೆಂಬರ್ 9, 2014

ಹರೇ ರಾಮ ಎಂದ ಮುಗ್ಧ ಸುಮನಸನನ್ನೂ ಬಿಡಲಿಲ್ಲವಲ್ಲ ಪಾಪಿಗಳು


             "ಅನ್ಯಾಯವು ಸುಮ್ಮನೆ ಸಾಯುವುದಿಲ್ಲ. ತನ್ನ ಮೇಲೆ ಬೆಳೆದಿರುವ ಎಷ್ಟೋ ಜೀವಿಗಳನ್ನೂ, ಕಟ್ಟಡಗಳನ್ನು ಬಲಿ ತೆಗೆದುಕೊಂಡೇ ಹೋಗುತ್ತದೆ. ಮನುಷ್ಯಕೋಟಿಯು ನೈತಿಕವಾಗಿ, ಆಧ್ಯಾತ್ಮಿಕವಾಗಿ ಕೆಡುಕಿನ ಸ್ಪರ್ದೆಯಿಲ್ಲದೆ ಪೂರ್ಣ ಶಾಂತಿಯಿಂದ ಬಾಳುವ ಕಾಲವು ಬರಲಿ ಎಂದು ಆಶಿಸೋಣ. ಅದು ಎಂದಾದರೂ ಸರಿ. ಅಷ್ಟರವರೆಗೆ ಯುದ್ಧಸಿದ್ಧತೆಯನ್ನು ಅದಕ್ಕೆ ಜೀವನದಲ್ಲಿ ಗೌರವಸ್ಥಾನವನ್ನು ಮಾನವನು ಬಿಡುವಂತಿಲ್ಲ" ಮಹರ್ಷಿ ಅರವಿಂದರ ಮಾತು ಎಷ್ಟು ಅರ್ಥಪೂರ್ಣ. ಆದರೆ ನಾವು ಅದನ್ನು ಮರೆತೇ ಬಿಟ್ಟೆವು. ಈಗ ಶತ್ರುಗಳು ಹೊರಗಿನಿಂದಲ್ಲ. ನಮ್ಮೊಳಗಿನಿಂದಲೇ ನಮ್ಮವರನ್ನೇ ದಾಳವಾಗಿ ಉಪಯೋಗಿಸಿಕೊಂಡು ನಮ್ಮ ದಿಗ್ದರ್ಶಕರನ್ನು ಒಬ್ಬೊಬ್ಬರನ್ನಾಗಿ ನೇಪಥ್ಯಕ್ಕೆ ಸರಿಸಲು ಪ್ರಯತ್ನಿಸಿದಾಗಲೂ, ಯುದ್ಧ ಬಿಡಿ-ಯುದ್ಧ ಸಿದ್ಧತೆ ಹಾಗಿರಲಿ ಕನಿಷ್ಟ ನಮ್ಮ ಅರಿವಿಗೂ ಬರುತ್ತಿಲ್ಲವೆಂದಾದರೆ ವಿಪರ್ಯಾಸವಲ್ಲವೆ?

                ಶಂಕರಾಚಾರ್ಯರು ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಕುಳಿತಿದ್ದಾಗ, ತಬ್ಬಲಿ ಜಿಂಕೆಮರಿಗೆ ಹೆಬ್ಬುಲಿಯೊಂದು ಹಾಲುಣಿಸಿದ್ದನ್ನು ಕಂಡರು. ಅಂತಹ ಶೋಕರಹಿತವಾದ ದೃಶ್ಯವನ್ನು ಕಂಡ ಶಂಕರಾಚಾರ್ಯರು ಅಲ್ಲಿ ಮಠವನ್ನು ಸ್ಥಾಪನೆ ಮಾಡಿ ಆ ಸ್ಥಳವನ್ನು ಅಶೋಕ ಎಂದು ಕರೆದರು. ಅಂತಹ ಶೋಕರಹಿತ ಸ್ಥಳದಲ್ಲಿ ಗೋಮಾತೆಯ ರಕ್ಷಣೆಗಾಗಿ ಕಾಮದುಘಾ(ಕೇಳಿದ್ದನ್ನು ಕೊಡಬಲ್ಲಂತಹ ಗೋಮಾತೆ) ಯೋಜನೆಯನ್ನು ಅಂದರೆ ಅಳಿವಿನ ಅಂಚಿನಲ್ಲಿರುವ ವಿಶಿಷ್ಟ ಭಾರತೀಯ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಜಾಗೃತಿಯನ್ನು ಗೋಸಮ್ಮೇಳನದಂತಹ ಅಪರೂಪದ ಕಾರ್ಯಕ್ರಮಗಳ ಮೂಲಕ ಮಾಡಿಕೊಂಡು ಬಂದವರು ರಾಘವೇಶ್ವರ ಶ್ರೀಗಳು. ಶ್ರೀ ಭಾರತೀ ಗುರುಕುಲ ವಿಶ್ವವಿದ್ಯಾಲಯದ ಮೂಲಕ ವೇದಗಳು, ವೇದಾಂಗಗಳು, ಉಪವೇದಗಳು, ಆಯುರ್ವೇದ, ಅರ್ಥಶಾಸ್ತ್ರ, ಅರುವತ್ತನಾಲ್ಕು ಕಲೆಗಳನ್ನು ಕಲಿಸಿ-ಉಳಿಸಿ-ಬೆಳೆಸುವ ಪ್ರಯತ್ನವನ್ನು ಅನವರತ ನಡೆಸುತ್ತಿದ್ದಾರೆ ಶ್ರೀಗಳು. ಕೊಡಚಾದ್ರಿ ಉಳಿವಿಗಾಗಿ ಯಶಸ್ವಿ ಹೋರಾಟ, ಗೋಕರ್ಣದ ವೈಭವದ ಮರುಸ್ಥಾಪನೆ ಮಾಡಿ, ಜಗತ್ತು ಶೋಕರಹಿತವಾಗಬೇಕು. ಜಗತ್ತು ವೈರಮುಕ್ತವಾಗಬೇಕು. ಸರ್ವರೂ ಸಹಬಾಳ್ವೆ ಮತ್ತು ಸಂತೋಷದಿಂದ ಜೀವನ ನಡೆಸಬೇಕು ಎಂದು ಸರ್ವಥಾ ಪ್ರತಿಪಾದಿಸುತ್ತಾ, ರಾಮಕಥೆಯ ಮೂಲಕ ಜನರ ಮನಸ್ಸಿನಲ್ಲಿರುವ ದುಷ್ಟಪ್ರವೃತ್ತಿಗಳನ್ನು ಕಿತ್ತೊಗೆದು ರಾಮರಾಜ್ಯದ ಕನಸನ್ನು ಸಾಕಾರಗೊಳಿಸಲು ಸರ್ವಪ್ರಯತ್ನ ಮಾಡುತ್ತಿರುವ ಮುಗ್ಧ ಮನಸ್ಸಿನ ಸ್ವಾಮೀಜಿಯ ಮೇಲೆ ಒಂದರ ಹಿಂದೆ ಒಂದು ದುರುದ್ದೇಶಪೂರ್ವಕ ಆರೋಪಗಳನ್ನು ಮಾಡಿ ಶ್ರೀಗಳನ್ನೂ-ಶ್ರೀಗಳ ಭಕ್ತರನ್ನು ನಿತ್ಯ ಶೋಕಿಗಳನ್ನಾಗಿಸುವ ಶತ್ರುಗಳ ಹುನ್ನಾರವನ್ನು ಕಂಡಾಗ ನನಗೆ ಅರವಿಂದರ ಮೇಲಿನ ಮಾತುಗಳು ನೆನಪಿಗೆ ಬಂದವು.

             ಆರೋಪಿ ದಿವಾಕರ ಶಾಸ್ತ್ರಿ ಇವರು ಕೆಲವು ವ್ಯಾವಹಾರಿಕ ಕಾರಣದಿಂದ ಮಠದ ಸೇವೆಯಿಂದ ನಿವೃತ್ತರಾಗಿದ್ದರು; ಆದರೆ ಆಡಳಿತ ಸಮಿತಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಅವರನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಗೆ ಸದಸ್ಯರನ್ನಾಗಿ ಮಾಡಲಾಯಿತು. ಶಾಸ್ತ್ರಿ ಇವರು ಸಾಗರ ಹೊಸಗುಂದದ ಉಮಾಮಹೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿಯವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿದರು. ಅದರ ಲೆಕ್ಕ ಕೇಳಿದ್ದ ಹಿನ್ನೆಲೆಯಲ್ಲಿದಾಗ ಸಿಟ್ಟಾಗಿದ್ದರು. ಅಂದಿನಿಂದ ಶ್ರೀಗಳ ವಿರುದ್ಧ ಆರೋಪ ಮಾಡುವ ಷಡ್ಯಂತ್ರ ಮಾಡುವ ಕೃತ್ಯ ನಡೆಸಿದ್ದರು. ಶ್ರೀಗಳಿಗೆ ‘ಬ್ಲ್ಯಾಕ್ ಮೇಲ್’ ಮಾಡಿ ಮೂರು ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದರು. ಇವೆಲ್ಲ ಪ್ರಕರಣಗಳ ಹಿನ್ನೆಲೆಯಲ್ಲಿ ಆರಕ್ಷಕರು ದಿವಾಕರ ಮತ್ತು ಪ್ರೇಮಲತಾ ಶಾಸ್ತ್ರಿ ದಂಪತಿಗಳನ್ನು ಬಂಧಿಸಿದ್ದರು. ಮಠದ ಅನ್ನ ತಿಂದು ಶ್ರೀಗಳ ಮೇಲೆ ಅತ್ಯಾಚಾರ ಆರೋಪ ಹೊರಿಸಿರುವುದರ ಹಿಂದೆ ಏನೋ ಷಡ್ಯಂತ್ರ ಇದೆ ಎನ್ನುವುದು ಪ್ರತಿಯೊಬ್ಬ ನೀತಿವಂತ ಮನುಜನ ಅಭಿಪ್ರಾಯವಾಗಿದೆ.

                   ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಆತುರದ ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.  ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ರಾಘವೇಶ್ವರ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಗಿರಿನಗರ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿತ್ತು. ಸೋಮವಾರ ಬೆಳಗ್ಗೆ ಈ ಸಂಬಂಧ ಬೆಂಗಳೂರು ಅಧೀನ ನ್ಯಾಯಾಲಯದಲ್ಲಿ ಗಿರಿನಗರ ಪೊಲೀಸ್ ಠಾಣಾಧಿಕಾರಿಗಳು ಅರ್ಜಿ ಸಲ್ಲಿಸಿ ಐಪಿಸಿ ಸೆಕ್ಷನ್ 376ನ್ನು ಸೇರಿಸಲು ಅನುಮತಿ ಕೇಳಿದ್ದಾರೆ. ಆದರೆ ಈ ಅರ್ಜಿಯ ಬಗ್ಗೆ ಯಾವುದೇ ತೀರ್ಪು ನೀಡದೆ ಪರ್ಮಿಟೆಡ್ ಟು ಪುಟಪ್ ಎಂದು ನ್ಯಾಯಾಧೀಶರು ಸಹಿ ಮಾಡಿರುವುದನ್ನೇ ಪರ್ಮಿಟೆಡ್ ಎಂದು ವ್ಯಾಖ್ಯಾನಿಸಿ ಅತ್ಯಾಚಾರ ಪ್ರಕರಣ ದಾಖಲಿಸುವ ಆತುರದ ನಿರ್ಣಯ ಮಾಡಲಾಗಿದೆ. ಇದಲ್ಲದೇ ಹೈಕೋರ್ಟ್‌ಗೂ ಇದೇ ರೀತಿಯ ತಪ್ಪು ಮಾಹಿತಿಯನ್ನು ಒದಗಿಸಲಾಗಿದೆ.  ಈ ಮೂಲಕ ಪ್ರಕರಣವನ್ನು ತಿರುಚಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಮುಂದಾಗಿರುವುದು ಕಂಡುಬರುತ್ತದೆ. ಸಿಐಡಿ ತನಿಖೆಗೆ ಆದೇಶಿಸಿದ ಬಳಿಕವೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಮಧ್ಯ ಪ್ರವೇಶಿಸುತ್ತಿರುವುದು ವಿಚಾರಣೆಯಲ್ಲಿನ ಹಸ್ತಕ್ಷೇಪವನ್ನು ಪ್ರದರ್ಶಿಸುತ್ತಿದೆ. ಪೊಲೀಸರ ಈ ಕ್ರಮವನ್ನು ಪ್ರಶ್ನಿಸಿ ಶ್ರೀಮಠದ ವಕೀಲರು ಅಧೀನ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ತನಿಖೆಯನ್ನು ವಿಳಂಬ ಮಾಡುತ್ತ, ವ್ಯಾಪ್ತಿ ಮೀರಿ ಕಾನೂನು ಸುವ್ಯವಸ್ಥೆ ವಿಭಾಗದ ಮೂಲಕ ತನಿಖೆ ನಡೆಸಲು ಒತ್ತಡ ಹೇರಲಾಗುತ್ತಿದೆ.

              ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 1 ದಿನ ಮುಂದೂಡುವಂತೆ ಹೇಳಿತ್ತು. ಆದರೆ ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಾಲಯ ಪ್ರಕರಣದ ತನಿಖೆಗೆ 1 ವಾರಗಳ ಕಾಲ ತಡೆ ನೀಡಿದೆ. ರಾಮಚಂದ್ರಾಪುರದ ಮಠಾಧೀಶರಾದ ರಾಘವೇಶ್ವರ ಶ್ರೀಗಳ ವಿರುದ್ಧದ  ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ಹಿಂದಿನಿಂದಲೂ ಮಠದ ವಿರುದ್ಧ ಕೆಲವು ದೂರುಗಳ ದಾಖಲಾಗಿದ್ದವು. ದುರುದ್ದೇಶಪೂರ್ವಕವಾಗಿ ಮಠದ ವಿರುದ್ಧ ಕೆಲವರು ಪಿಐಎಲ್‌ಗಳನ್ನು ದಾಖಲಿಸಿದ್ದರು. ಹಾಗಾಗಿ  ರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಭಾರತಿ ಶ್ರೀಗಳನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

             ಹಿಂದೂಗಳೇ ಮೈಕೊಡವಿಕೊಂಡು ಮೇಲೇಳಿ...ಅವರು ಹವ್ಯಕರ ಸ್ವಾಮೀಜೀ...ಏನಾದರೆ ನಮಗೇನು ಎನ್ನುವ ಜಾತಿಬುದ್ಧಿಯನ್ನು ಪ್ರದರ್ಶಿಸಿ ಮತ್ತೊಮ್ಮೆ ಮಗದೊಮ್ಮೆ ಶತ್ರು ತೋಡಿದ ಹಳ್ಳಕ್ಕೆ ಬೀಳದಿರಿ. ನಾವು ಒಗ್ಗಟ್ಟಾಗದಿದ್ದರೆ...ಇವತ್ತು ಸ್ವಾಮೀಜಿ, ನಾಳೆ ನಾವು ಬಲಿಯಾಗುತ್ತೇವೆ. ಒಂದು ಕಡೆಯಿಂದ ಜಿಹಾದಿಗಳು-ಮತಾಂತರಿಗಳು ನಮ್ಮನ್ನು ಜರ್ಝರಿತರನ್ನಾಗಿ ಮಾಡಿದ್ದರೆ ಇನ್ನೊಂದು ಕಡೆಯಿಂದ ಎಡಬಿಡಂಗಿ ಎಡಪಂಥೀಯರು-ಭಾರತ ವಿರೋಧಿಗಳು-ಮತಬ್ಯಾಂಕ್ ರಾಜಕಾರಣಿಗಳು ನಮ್ಮನ್ನು ಒಡೆಯುತ್ತಿದ್ದಾರೆ...
ಹರೇ ರಾಮ ಎಂದ ಮುಗ್ಧ ಸುಮನಸನನ್ನೂ ಬಿಡಲಿಲ್ಲವಲ್ಲ ಪಾಪಿಗಳು...ಹಿಂದೂಗಳೇ ರಾಮನಾಮದ ಬಲ ತೋರಿಸುವ ಕಾಲ ಸನ್ನಿಹಿತವಾಗಿದೆ. "ಅಹಿಂಸಾ ಪರಮೋ ಧರ್ಮ" ಎಂಬುದು "ಧರ್ಮ ಹಿಂಸಾ ತಥೈವಚ" ಎಂದು ಮುಂದುವರೆಯುತ್ತದೆ ಎನ್ನುವುದನ್ನು ಮರೆಯಬೇಡಿ...ಮತ್ತೊಮ್ಮೆ ಅರವಿಂದರ ಮಾತು ಮಾರ್ದನಿಸಲಿ...ಎದ್ದೇಳು ಓ ನನ್ನ ಹಿಂದೂ ಬಂಧು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ