ಗಂಧರ್ವರ
ನಾಡಿನಲ್ಲಿ ಈಗ ರಕ್ಕಸರದ್ದೇ ಅಬ್ಬರ
ಸುಮಾರು
6000ದಷ್ಟಿದ್ದ ಸೇನಾ ಪಡೆ ಝನ್ ದೇವಾಲಯದೊಳಗೆ ನುಗ್ಗಿತು. ದಳಪತಿ ವಿಗ್ರಹದ ಕೈಯನ್ನು ಮುರಿದ. ಅದರ
ಕಣ್ಣಿಗಂಟಿಸಿದ್ದ ಮಾಣಿಕ್ಯವನ್ನು ಕಿತ್ತು ತೆಗೆದ! ವಿಸ್ತಾರವಾದ ಭೂಪ್ರದೇಶದಲ್ಲಿ ಲೂಟಿ, ಸುಲಿಗೆ
ಮಾಡಿ ಗುಲಾಮರನ್ನು ಪಡೆಯಲು, ವಿಗ್ರಹಾರಾಧಕ "ಪತಿತ"ರನ್ನು "ಪಾವನ"ಗೊಳಿಸಲು
ಇದರಿಂದ ಸಾಧ್ಯವಾಯಿತು. ಈ ರೀತಿ ವಿಗ್ರಹ ಭಂಜನೆ, ಸಮಾಜ-ಸಂಸ್ಕೃತಿ-ನಾಗರೀಕತೆಯ ನಾಶವನ್ನು ಇಸ್ಲಾಮೀಗಳಲ್ಲದೆ
ಬೇರಾರು ಮಾಡಲು ಸಾಧ್ಯ? ಕ್ರಿ.ಶ 653ರಲ್ಲಿ ಭಾರತಕ್ಕೂ ಜಗತ್ತಿನ ಉಳಿದ ಭಾಗಕ್ಕೂ ನೆಲಮಾರ್ಗದ ಕೊಂಡಿಯಂತಿದ್ದ
ಭವ್ಯ "ರಾಜ ಪಥ"ವೊಂದರ ನಾಶಕ್ಕೆ ಅರಬ್ಬರು ಮುನ್ನುಡಿ ಬರೆದದ್ದು ಹೀಗೆ! ಈ ರಾಜ ಪಥ ಮತ್ಯಾವುದೂ
ಅಲ್ಲ, ಗಾಂಧಾರ! ಮಹಾಪತಿವ್ರತೆ ಗಾಂಧಾರಿಯ ತವರು. ಸುರಲೋಕದ ಸುಸ್ವರ ಗಾಯಕ ಗಂಧರ್ವರ ನೆಲೆವೀಡು. ಬುದ್ಧನ
ಬೌದ್ಧಿಕತೆಯನ್ನು ಜಗತ್ತಿಗೇ ಪರಿಚಯಿಸಿದ ರಹದಾರಿ! ಜರತುಷ್ಟ್ರನ ಜನ್ಮಭೂಮಿ.
ವೇದಗಳಲ್ಲಿ ಗಂಧರ್ವರನ್ನು ಸುರಲೋಕದ ಹಾಡುಗಾರರನ್ನಾಗಿ
ಚಿತ್ರಿಸಲಾಗಿದೆ. ಸಂಹಿತೆಗಳಲ್ಲಿ ಗಂಧರ್ವರೆಂದರೆ ಒಂದು ನಿರ್ದಿಷ್ಟ ಜಾಗಕ್ಕೆ ಸೇರಿದವರಾಗಿದ್ದು ಅವರನ್ನು
ಗಾಂಧಾರರೆಂದು, ಸಂಗೀತವನ್ನು ಉನ್ನತ ಸ್ತರಕ್ಕೊಯ್ದವರೆಂದು ಉಲ್ಲೇಖಿಸಲಾಗಿದೆ. ಇದಕ್ಕೆ ಪೂರಕವಾಗಿ
ಒಂದು ಕಾಲದಲ್ಲಿ ಉಪಖಂಡದ ಈ ಭಾಗ ಪೌರಾತ್ಯ ಹಾಗೂ ಮೆಡಿಟರೇನಿಯನ್ ಸಂಗೀತದ ಸಂಗಮವಾಗಿತ್ತು. ಭಾರತದ
ಉಳಿದ ಭಾಗಗಳಲ್ಲೂ ಈ ಪ್ರದೇಶವನ್ನು ಗಾಂಧಾರವೆಂದೇ ಕರೆಯಲಾಗುತ್ತಿತ್ತು. ವಾಯು ಪುರಾಣದಲ್ಲಿ ಗಾಂಧಾರವನ್ನು
ಭರತವರ್ಷದ ಒಂಬತ್ತು ಭಾಗಗಳಲ್ಲಿ ಒಂದೆಂದು ಹೇಳಲಾಗಿದೆ. ಮಹಾಭಾರತದ ಸಮಯದಲ್ಲಿ ಗಾಂಧಾರ ಶಕುನಿಯ ಆಳ್ವಿಕೆಗೆ
ಒಳಪಟ್ಟಿತ್ತು. ಆ ಸಮಯದಲ್ಲಿ ಹಸ್ತಿನೆ ಹಾಗೂ ಗಾಂಧಾರಗಳ ಮಧ್ಯೆ ವಿನಿಮಯ ಪದ್ದತಿ ಬಲವಾಗಿ ಬೇರೂರಿತ್ತು.
ಸಿಂದೂ ನಾಗರೀಕತೆಯ ಉತ್ಖನನ ಸಂದರ್ಭದಲ್ಲಿ ಸಿಕ್ಕಿದ ಹತ್ತು ಸಾವಿರ ವರ್ಷಕ್ಕೂ ಹಳೆಯದಾದ(ಕ್ರಿ.ಪೂ
8000) ನಗರ ಮೆಹರ್ ಘಡ್ ಇರುವುದು ಈ ಗಾಂಧಾರದಲ್ಲೇ! ಕಂದಹಾರ್ ಎಂದು ಈಗ ಕರೆಯಲ್ಪಡುತ್ತಿರುವ ಅಪ್ಘಾನಿಸ್ಥಾನದ
ನಗರ, "ಖ್ವಾಂಧಾರ್" ಎನ್ನುವ ಗಾಂಧಾರದ ಒಂದು ಭಾಗದ ಹೆಸರಿನಿಂದ ಉದ್ಭವವಾಗಿದೆ. ಸರಸ್ವತಿ
ಇಲ್ಲಿ "ಹರಹ್ವೈತಿ" ಆಗಿದೆ. ಸರಯೂ "ಹರಯೂ" ಆಗಿದೆ. ಫಖ್ತೂನ್ ಎಂಬ ಪದ
"ಪಕ್ಥನ" ಎಂಬುದರ ಅಪಭ್ರಂಶ. ಗಾಂಧಾರವು ಬಹುಕಾಲದವರೆಗೆ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು.
ಇಲ್ಲಿ ನಡೆದ ಉತ್ಖನನದಲ್ಲಿ ನೂರಾರು ಸ್ತೂಪಗಳು, ಬುದ್ಧನ ವಿಗ್ರಹಗಳು, ಧಮ್ಮಪದದ ಪ್ರತಿಗಳು ಮುಂತಾದ
ಬಹುಮೂಲ್ಯ ವಸ್ತುಗಳು ದೊರಕಿವೆ. ಗಾಂಧಾರದಾದ್ಯಂತ ಬೌದ್ಧರು ಅನೇಕ ಗುಹಾ ದೇವಾಲಯಗಳನ್ನು ನಿರ್ಮಿಸಿದ್ದರು.
ಇಲ್ಲಿನ ಪ್ರಮುಖ ಭಾಷೆಯಾದ "ಪುಶ್ತೋ" ಸಂಸ್ಕೃತದ ಒಂದು ಶಾಖೆ. ಅಪ್ಘಾನ್ ವಿಶ್ವವಿದ್ಯಾಲಯದಲ್ಲಿ
ಸಂಸ್ಕೃತ ವಿಭಾಗವೂ ಇತ್ತು. ಪಾರ್ಸೀ ಮತ ಸ್ಥಾಪಕನಾದ ಜರತುಷ್ಟ್ರನ ಜನ್ಮಭೂಮಿಯಿದು. ವೇದ ಕಾಲ, ರಾಮಾಯಣ-ಮಹಾಭಾರತ
ಕಾಲಗಳಲ್ಲಿ ಭಾರತ-ಪರ್ಷಿಯಾದ ಮಧ್ಯೆ ಸುದ್ದಿ-ಸಂದೇಶಗಳ ಮಧ್ಯವರ್ತಿಯಾಗಿಯೂ, ವಿಶ್ವ ವ್ಯಾಪಾರ ಮತ್ತು
ಸಂಸ್ಕೃತಿಯ ಕೇಂದ್ರವಾಗಿಯೂ ಮುಂಚೂಣಿಯಲ್ಲಿದ್ದ ಗಾಂಧಾರ ಮುಂದೆ ಶತಮಾನಗಳ ಕಾಲ ಬೌದ್ಧ ತತ್ವಗಳ ಬೌದ್ಧಿಕ
ಕೇಂದ್ರವಾಗಿ ಸ್ತೂಪಸ್ತೋಮಗಳಿಂದ ಕಂಗೊಳಿಸುತ್ತಿತ್ತು. ಇತ್ತೀಚೆಗೆ ತಾಲಿಬಾನಿಗಳ ಪೈಶಾಚಿಕತೆಗೆ ಬಲಿಯಾದ
ಒಂದು ಕಾಲದ ಬೌದ್ಧರ ಪ್ರಮುಖ ಪಟ್ಟಣ ಬಾಮಿಯನ್ ಎಂಬಲ್ಲಿದ್ದ 53 ಮೀ ಹಾಗೂ 35 ಮೀ ಎತ್ತರದ ಎರಡು ಭವ್ಯ ಬೌದ್ಧ ವಿಗ್ರಹಗಳು
ಇತ್ತೀಚಿನವರೆಗೂ ಇದಕ್ಕೆ ಸಾಕ್ಷೀಭೂತವಾಗಿ ನಿಂತಿದ್ದವು.
ಭಾರತದ ವಾಯುವ್ಯದಿಂದ ಬಂದ ಆಕ್ರಮಣಕಾರಿಗಳಿಗೆ ಸಿಕ್ಕಿದ್ದ ಏಕೈಕ ನೆಲಮಾರ್ಗ ಖೈಬರ್-ಬೋಲಾನ್
ಕಣಿವೆಗಳಿರುವುದು ಇಲ್ಲಿಯೇ.
ಭಾರತದೊಂದಿಗೆ
ಮಧ್ಯ ಹಾಗೂ ಪೂರ್ವ ಏಷ್ಯಾಗಳನ್ನು ಜೋಡಿಸುತ್ತಿದ್ದ ವ್ಯಾಪಾರ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದ
ಗಾಂಧಾರ ಪೇಷಾವರ, ಸ್ವಾತ್, ಕಾಬೂಲ್ ಕಣಿವೆಗಳನ್ನೊಳಗೊಂಡು, ಉತ್ತರ ಭಾರತದ 16 ರಾಜ್ಯಗಳಲ್ಲಿ ಒಂದಾಗಿತ್ತು
ಎನ್ನುವುದು ಬೌದ್ಧರ ಬರಹಗಳಿಂದ ತಿಳಿದು ಬರುತ್ತದೆ. ಕ್ರಿ. ಪೂ 5ನೇ ಶತಮಾನದವರೆಗೆ ಪರ್ಷಿಯಾದ ಅರಸ
ಒಂದನೇ ಡೇರಿಯಸನ ಪ್ರಾಂತ್ಯಗಳಲ್ಲೊಂದಾಗಿದ್ದ ಇದನ್ನು ಕ್ರಿ. ಪೂ ನಾಲ್ಕನೇ ಶತಮಾನದ ಮಧ್ಯ ಭಾಗದಲ್ಲಿ
ಅಲೆಗ್ಸಾಂಡರ್ ನಂದವಂಶೀಯರನ್ನು ಸೋಲಿಸಿ ತನ್ನದಾಗಿಸಿಕೊಂಡ. ಕ್ರಿ.ಪೂ 329ರಲ್ಲಿ ಅಲೆಗ್ಸಾಂಡರನ ವಶವಾದ ಕಂದಹಾರ್ ಕ್ರಿ.ಪೂ
305ರಲ್ಲಿ ಗ್ರೀಕರು ಚಂದ್ರಗುಪ್ತನಿಗೆ ಶರಣಾಗತರಾದಾಗ ಮತ್ತೆ ಭಾರತದ ತೆಕ್ಕೆಗೆ ಬಂತು. ಈ ಹಿರಿಮೆಯನ್ನು
ಅಶೋಕನ ಒಂದು ಶಾಸನ ಸಾರಿ ಹೇಳುತ್ತಿದೆ. ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಗಾಂಧಾರದಲ್ಲಿ ಅಶೋಕ
ಚಕ್ರವರ್ತಿಯ ಆಳ್ವಿಕೆಯ ಕಾಲದಲ್ಲಿ ತನ್ನನ್ನೂ ಒಳಗೊಂಡು ಏಷ್ಯಾದ ಬಹುತೇಕ ಭಾಗಗಳಲ್ಲಿ ಬೌದ್ಧ ಮತದ
ವಿಸ್ತರಣೆಗೆ ಸಾಕ್ಷೀಭೂತವಾಯಿತು. ಕ್ರಿ.ಶ ಏಳನೆಯ ಶತಮಾನದಲ್ಲಿ ಅರಬ್ಬರ ಬರ್ಬರತೆಗೆ ಸಾಕ್ಷಿಯಾದ ಕಂದಹಾರ್,
ಹತ್ತನೆಯ ಶತಮಾನದಲ್ಲಿ ಘಜನಿಗಳ ಪದಾಘಾತಕ್ಕೆ ಸಿಲುಕಿತು. ಮೊದಲು ಚೆಂಗಿಸ್ ಖಾನನೆಂಬ ಖೂನಿಯ ದಾಳಿಗೆ
ನಾಶವಾದ ಇದು ಮುಂದೆ ತೈಮೂರ್ ಹಾಗೂ ಮೊಘಲರ ದಾಳಿಗೆ ತುತ್ತಾಯಿತು. ಬಾಬರನಂತೂ ತನ್ನ ಪೈಶಾಚಿಕತೆಯನ್ನು
ಜಗತ್ತಿಗೆ ಸಾರುವ ಸಲುವಾಗಿ ನಲವತ್ತು ದೈತ್ಯ ಮೆಟ್ಟಿಲುಗಳುಳ್ಳ, ಸುಣ್ಣದ ಕಲ್ಲುಗಳನ್ನು ಕತ್ತರಿಸಿ
ನಿರ್ಮಿಸಲಾದ ಬೆಟ್ಟವೊಂದರಲ್ಲಿ ತನ್ನ ಜೈತ್ಯ ಯಾತ್ರೆಯನ್ನು ಕೆತ್ತಿಟ್ಟಿದ್ದಾನೆ! 1747ರಲ್ಲಿ ಕಂದಹಾರ್
ಏಕೀಕೃತ ಅಪ್ಘಾನಿಸ್ಥಾನದ ಮೊದಲ ರಾಜಧಾನಿಯಾಯಿತು.
ಗಾಂಧಾರ,
ಸಿಂಧ್, ಬಲೂಚಿಸ್ತಾನ, ಪಂಜಾಬ್ ಪ್ರಾಂತಗಳು ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಪರ್ಷಿಯಕ್ಕಿಂತಲೂ ಭಾರತದ
ಆಳ್ವಿಕೆಗೇ ಒಳಪಟ್ಟಿದ್ದವು ಎಂದು ಇತಿಹಾಸಕಾರ ಆಂಡ್ರೆ ವಿಂಗ್ ಹೇಳುತ್ತಾನೆ. ಅಲ್ಲದೆ ಅರಬ್ ಭೌಗೋಳಿಕ
ತಜ್ಞರು ಹಿಂದೂಸ್ಥಾನದ ಸಾಮ್ರಾಜ್ಯ ಎಂದು ಹೇಳುತ್ತಿದ್ದ ಬಗೆಗೆ, ಬೌದ್ಧರ ನಗರ ಕೇಂದ್ರಿತ ನಾಗರೀಕತೆ-ಶಿಕ್ಷಣ-ಮಠಗಳ
ಬಗೆಗೆ ಬರೆದಿದ್ದಾನೆ. ಗಾಂಧಾರವು ಬೌದ್ಧರ ಎರಡನೇ ಮನೆಯಾಗಿತ್ತೆಂದೂ, ಪುರುಷಪುರ(ಪೇಷಾವರ) ಮೌರ್ಯರ
ದೂರದ ರಾಜಧಾನಿಯಾಗಿ, ಇವೆರಡೂ ಸಾಂಸ್ಕೃತಿಕ ಹಾಗೂ ವ್ಯಾಪಾರ ಕೇಂದ್ರಗಳಾಗಿದ್ದ ಬಗೆಗೆ ಉಲ್ಲೇಖಿಸಿದ್ದಾನೆ.
ಭಾರತ-ಟಿಬೇಟಿಯನ್ ಬೌದ್ಧ ಮತದ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಸ್ಥಾಪಕನೆನ್ನಲಾದ ಪದ್ಮ ಸಂಭವ ಗಾಂಧಾರದವನೇ.
ಮೌರ್ಯರು ಬೃಹತ್ ಸೈನ್ಯವನ್ನು ಹೊಂದಿದ್ದಾಗ್ಯೂ ಸಾಗರೋತ್ತರವಾಗಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು
ಮನ ಮಾಡಿರಲಿಲ್ಲ ಎಂದು ಗ್ರೀಕ್ ಇತಿಹಾಸಕಾರ ಪ್ಲೈನಿ ಬರೆದಿದ್ದಾನೆ. ಪುರುಷಪುರದಲ್ಲಿ ಕಾನಿಷ್ಕ ನಾಲ್ಕನೆಯ ಬೌದ್ಧ ಮಹಾ ಸಭೆಯನ್ನು
ಆಯೋಜಿಸಿದ್ದ. ಆಗ ಸ್ಥಾಪಿಸಿದ ಕಾನಿಷ್ಕ ವಿಹಾರ ಶತಮಾನಗಳ ಪರ್ಯಂತ ತೀರ್ಥಸ್ಥಾನವಾಗಿ ಕಂಗೊಳಿಸಿ ಏಷ್ಯಾದ
ಉಳಿದ ಭಾಗಗಳಿಗೆ ಬೌದ್ಧ ಮತ ಪಸರಿಸುವ ಕೇಂದ್ರವಾಗಿ ಬೆಳೆಯಿತು. ಕುಶಾನರು ಬೌದ್ಧರ ಮಹಾಯಾನ ಪಂಥವನ್ನು
ಇಲ್ಲಿ ಪಸರಿಸಿದರಲ್ಲದೇ ಅಲ್ಲಿ ಗಾಂಧಾರ-ಮಥುರಾ ಚಿತ್ರಕಲಾಶಾಲೆಯನ್ನು ಸ್ಥಾಪಿಸಿ ತಮ್ಮ ವ್ಯಾಪಾರವನ್ನು
ರೋಮಿನವರೆಗೂ ವೃದ್ಧಿಸಿದರು. ಇದಕ್ಕೆ ರೋಮಿನಲ್ಲಿ ದೊರೆತ ನಾಣ್ಯಗಳು ಹಾಗೂ ಚಿತ್ರಕಲೆಗಳೇ ಸಾಕ್ಷಿ!
ಭಾಮಿಯಾನದ ಗುಹೆಗಳಲ್ಲಿ ವಾಸಿಸುತ್ತಿದ್ದ ಬೌದ್ಧ ಸನ್ಯಾಸಿಗಳಿಂದ ಪ್ರಭಾವಿತನಾದ ಹ್ಯುಯೆನ್ ತ್ಸಾಂಗ್
ಅಲ್ಲಿನ 53.5 ಮೀ ಎತ್ತರದ ಬುದ್ಧನ ಬೃಹತ್ ವಿಗ್ರಹದ ಬಗೆಗೂ, ಅಲ್ಲದೆ ಅಲ್ಲಿ ಆ ಸಮಯದಲ್ಲಿ ನೆಲೆಸಿದ್ದ
ಶಾಕ್ತರ ಬಗೆಗೆ ಉಲ್ಲೇಖಿಸಿದ್ದಾನೆ. ಅಲ್ಲದೆ ವಿಂಕ್ ಒಂಬತ್ತನೇ ಶತಮಾನದವರೆಗೂ ಪವಿತ್ರ ಪರ್ವತದ ತುದಿಯಲ್ಲಿ
ಸ್ಥಾಪಿಸಲಾಗಿದ್ದ ಶೈವರ ದೇವತೆ "ಝನ್"ನ ದೇವಾಲಯ ಝಾಮಿಂಡವಾರ್ ಇಸ್ಲಾಮ್ ಆಕ್ರಮಣದವರೆಗೆ
ಯಾತ್ರಾಸ್ಥಳವಾಗಿ ಕಂಗೊಳಿಸುತ್ತಿತ್ತು ಎಂದಿದ್ದಾನೆ. ಚೀನಾದಲ್ಲಿ ಇದನ್ನೇ ಸುನಾ ಎನ್ನುತ್ತಾರೆ. ಹೀಗಾಗಿ,
ಅಲ್ಲದೆ ಆತ ಶೈವರದ್ದು ಎಂದು ಉಲ್ಲೇಖಿಸಿರುವ ಕಾರಣ ಅದು ಮುಲ್ತಾನಿನಲ್ಲಿದ್ದ ಸೂರ್ಯ ದೇವಾಲಯಕ್ಕೆ
ಸಂಬಂಧಿಸಿರುವ ಸಾಧ್ಯತೆ ಹೆಚ್ಚು. ಉತ್ಖನನ ಸಂದರ್ಭದಲ್ಲಿ ಗಾಂಧಾರದಲ್ಲಿ ಶಿವ ಹಾಗೂ ದುರ್ಗೆಯ ಬಹುರೂಪೀ
ವಿಗ್ರಹಗಳು ದೊರಕಿರುವುದರಿಂದ, ಅಲ್ಲದೆ ಹಿಂದೂಗಳು ಶಿವನನ್ನು ಪರ್ವತವಾಸಿ, ಪರ್ವತಗಳೊಡೆಯನೆಂದು ಪೂಜಿಸುವುದರಿಂದ
ಅದು ಶಿವ ದೇವಾಲಯವೇ ಆಗಿರಬಹುದು. ಮೆಕ್ಕಾ-ಮದೀನಾದಂತಹ ಕಡೆಗಳಲ್ಲೇ ಶಿವ ದೇವಾಲಯಗಳಿದ್ದಾಗ ಭಾರತಕ್ಕೆ
ಹತ್ತಿರವಾಗಿದ್ದ ಈ ಭಾಗದಲ್ಲಿ ಶಿವ ದೇವಾಲಯವಿರುವುದೇನೂ ಅಚ್ಚರಿಯ ವಿಷಯವಲ್ಲ.
ಕ್ರಿ.ಶ
786ರಲ್ಲಿ ಖಲೀಫ್ ಮನ್ಸೂರ್ ಸಿಂಧ್ ಪ್ರಾಂತವನ್ನು ಆಳುತ್ತಿದ್ದಾಗ ಭಾರತಕ್ಕೆ ಕಳಿಸಿದ್ದ ಅಧಿಕಾರಿಗಳು
ಹಾಗೂ ವಿದ್ವಾಂಸರು ಬ್ರಹ್ಮಗುಪ್ತನ ಬ್ರಹ್ಮಸಿದ್ಧಾಂತ ಹಾಗೂ ಖಂಡಖಾಧ್ಯಕವನ್ನು ತಮ್ಮೊಂದಿಗೆ ಒಯ್ದರು.
ಇದೇ ಮುಂದೆ ಅರಬ್ಬರ ಖಗೋಳ ವಿಜ್ಞಾನದ ಬೆಳವಣಿಗೆಗೆ ಕಾರಣವಾಯಿತು. ಅಲ್ಲದೆ ಸಂಖ್ಯಾಶಾಸ್ತ್ರ, ವೈದ್ಯ
ಶಾಸ್ತ್ರ, ಲೋಹ ಶಾಸ್ತ್ರ, ವಿಷಶಾಸ್ತ್ರ, ಗಣಿತ ಶಾಸ್ತ್ರ, ಔಷಧ ಶಾಸ್ತ್ರ, ತತ್ವ ಶಾಸ್ತ್ರಗಳು ಭಾರತದಿಂದಲೇ
ಅರಬ್ಬರಿಗೆ ಪರಿಚಯವಾದವು ಎಂದಿದ್ದಾನೆ ಆಲ್ಬೆರೂನಿ. ಹನ್ನೆರಡನೆಯ ಶತಮಾನದ ಸ್ಪೈನಿನ ಭೂಗರ್ಭ ಶಾಸ್ತ್ರಜ್ಞ
ಆಲ್ ಇದ್ರಿಸಿ ಗಾಂಧಾರದಿಂದ ಬೇರೆ ಕಡೆಗೆ ಕಬ್ಬಿಣ, ಹತ್ತಿ, ನೀಲಿ(ಇಂಡಿಗೋ)ಗಳು ರಫ್ತು ಆಗುತ್ತಿದ್ದ
ಬಗೆಗೆ ಬರೆದಿದ್ದಾನೆ. ತಾವು ಆಕ್ರಮಣ ಮಾಡುವ ವೇಳೆ ಸುವ್ಯವಸ್ಥಿತ ಆಡಳಿತದಿಂದ ಸಂಪದ್ಭರಿತವಾಗಿದ್ದ
ಗಾಂಧಾರದ ಬಗೆಗೆ ಅನೇಕ ಅರಬ್ ವಿದ್ವಾಂಸರು ಬರೆದಿದ್ದಾರೆ.
ಗಾಂಧಾರದ
ರಾಜಧಾನಿ ತಕ್ಷಶಿಲೆ. ರಾಮಾಯಣದ ಪ್ರಕಾರ ಭರತನಿಂದ ಸ್ಥಾಪಿಸಲ್ಪಟ್ಟ ಈ ನಗರಕ್ಕೆ ಭರತನ ಮಗ "ತಕ್ಷ"ನ
ಹೆಸರಿಡಲಾಯಿತು. ತಕ್ಷನೇ ಇಲ್ಲಿನ ಮೊದಲ ಅರಸ. ಮಹಾಭಾರತದ ಮೊದಲ ಪಠಣ ನಡೆದದ್ದು ಇಲ್ಲೇ ಎಂದು ಹೇಳಲಾಗಿದೆ.
ಬೌದ್ಧ ಸಾಹಿತ್ಯಗಳಲ್ಲಿ ಅದರಲ್ಲೂ ಜಾತಕಕಥೆಗಳಲ್ಲಿ ಗಾಂಧಾರದ ರಾಜಧಾನಿಯಾಗಿಯೂ, ಜ್ಞಾನಕೇಂದ್ರವಾಗಿಯೂ
ವಿಪುಲ ಉಲ್ಲೇಖಗಳಿರುವ ತಕ್ಷಶಿಲೆಯ ಅವಶೇಷಗಳನ್ನು ಪಾಕಿಸ್ತಾನದ ರಾವಲ್ಪಿಂಡಿಯ ಸನಿಹ ಈಗಲೂ ಕಾಣಬಹುದು.
ಭಾರತ, ಮಧ್ಯ ಏಷ್ಯಾ, ಹಾಗೂ ಪಶ್ಚಿಮ ಏಷ್ಯಾವನ್ನು ಜೋಡಿಸುವ ಸಂಪದ್ಭರಿತವಾದ, ಸುವ್ಯವಸ್ಥಿತವಾದ, ಸಮರ್ಥ
ಆಡಳಿತವಿರುವ ನಗರ ಎಂದು ತಕ್ಷಶಿಲೆಯನ್ನು ಅಲೆಗ್ಸಾಂಡರನೊಡನೆ ಬಂದ ಗ್ರೀಕ್ ಇತಿಹಾಸಕಾರರೂ ಹಾಡಿ ಹೊಗಳಿದ್ದಾರೆ.
ಮೆಗಾಸ್ತನೀಸ್ ಇದನ್ನು "ರಾಜ ಹೆದ್ದಾರಿ" ಎಂದು ಕರೆದಿದ್ದಾನೆ. ಕ್ರಿ.ಶ ಒಂದನೇ ಶತಮಾನದಲ್ಲಿ
ಇಲ್ಲಿಗೆ ಭೇಟಿ ನೀಡಿದ ಟಯಾನದ ಸಂತ ಅಪೊಲೋನಿಯಸನ ಜೀವನ ಚರಿತ್ರೆಯಲ್ಲಿ ಕೋಟೆಗಳಿಂದ ಆವೃತವಾದ ಈ ನಗರ
ವಾಸ್ತುಶಿಲ್ಪ ಹಾಗೂ ಗಾತ್ರದಲ್ಲಿ ಅಸ್ಸೀರಿಯಾದ ಪುರಾತನ ಜನನಿಬಿಡ ನಗರಕ್ಕೆ ಸಮರೂಪ ಸೌಂದರ್ಯ ಹೊಂದಿದೆ
ಎನ್ನಲಾಗಿದೆ. ಬುದ್ಧನ ಸಾವಿರ ವರುಷಗಳ ತರುವಾಯವೂ ಫಾಹ್ಸೀನ್ ಎಂಬ ಬೌದ್ಧ ಯಾತ್ರಿಕ ಬೌದ್ಧ ಮತದ ಔನ್ನತ್ಯದ
ಕೇಂದ್ರ ಎಂದಿದ್ದಾನೆ. ಆದರೆ ಏಳನೇ ಶತಮಾನದಲ್ಲಿ ಹ್ಯುಯೆನ್ ತ್ಸಾಂಗ್ ಬಂದಾಗ ತಕ್ಷಶಿಲೆ ಮತಾಂಧರ ದಾಳಿಗೆ
ಸಿಲುಕಿ ನಾಶವಾಗಿತ್ತು. ಪುರುಷಪುರ ಪ್ರಾಚೀನ ಸಂಸ್ಕೃತ
ಸಾಹಿತ್ಯಕ್ಕೆ ಹೆಸರಾಗಿತ್ತು ಎಂದು ಇತಿಹಾಸಕಾರರಾದ ಸ್ಟ್ರಾಬೋ, ಅರ್ರಿಯನ್ ಹಾಗೂ ಭೂಗೋಳತಜ್ಞ ಟಾಲೆಮಿಯ
ಬರಹಗಳಲ್ಲಿ ಕಾಣಸಿಗುತ್ತದೆ. ಕಾನಿಷ್ಕ ಪುರುಷಪುರವನ್ನು ಕುಶಾನರ ರಾಜಧಾನಿಯನ್ನಾಗಿ ಮಾಡಿದ್ದ. ನಾಶವಾದ
ದೊಡ್ಡ ಬೌದ್ಧ ಸ್ತೂಪದ ಅವಶೇಷಗಳು ಇಂದಿಗೂ ಬೌದ್ಧ ಮತ ಅಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎನ್ನುವುದನ್ನು
ನೆನಪಿಸುತ್ತವೆ! ಇಂತಹ ಪುರುಷಪುರದ ಅವಸಾನ ಆರಂಭವಾದದ್ದು ಕ್ರಿ.ಶ 988ರಲ್ಲಿ...ಇಸ್ಲಾಮ್ ಅಲ್ಲಿಗೆ
ಕಾಲಿಟ್ಟಾಗ! ಪುರುಷಪುರದ ಹೆಸರನ್ನು ಪೇಷಾವರ ಎಂದು ಬದಲಾಯಿಸಿದವನು ಅದೇ "ದಿ ಗ್ರೇಟ್"
ಎಂದು ನಕಲಿ ಇತಿಹಾಸಕಾರರಿಂದ ಕರೆಯಲ್ಪಟ್ಟ ಮತಾಂಧ ಮೊಘಲ್ ದೊರೆ ಅಕ್ಬರ್!
ಹದೀಸ್-ಗಳಲ್ಲಿ
ಹಿಂದೂಸ್ಥಾನದ ಮೇಲೆ ದಾಳಿ ಮಾಡುವುದು ತನ್ನ ಮಹತ್ವಾಕಾಂಕ್ಷೆಯೆಂದೂ, ಹಿಂದೂಗಳ ಮೇಲೆ ಯುದ್ಧ ಸಾರುವುದರಿಂದ
ನರಕದಲ್ಲಿನ ಬೆಂಕಿಯಿಂದ ರಕ್ಷಿಸಿಕೊಳ್ಳಬಹುದೆಂದು ಹಾಗೂ ದೇವರು ಕ್ಷಮಿಸುತ್ತಾನೆಂದು ಬರೆದುದನ್ನೇ
ಕುರುಡಾಗಿ ಅನುಕರಿಸಿದ ಇಸ್ಲಾಮೀಗಳು ಝನ್ ದೇವಾಲಯವನ್ನು ನಾಶ ಮಾಡಿ ಕಾಬೂಲ್, ಬಾಮಿಯಾನ್, ಘಜನಿಗಳಲ್ಲಿ
ಹೆಣ್ಣು, ಹೊನ್ನು, ಮಣ್ಣು ಹೀಗೆ ಸಕಲರ ಮೇಲೂ ಅತ್ಯಾಚಾರವೆಸಗಿದರು. ಮಹಮದ್ ಆಲ್ ಖಾಸಿಂ ಮುಲ್ತಾನಿನ
ಮೇಲೆ ದಾಳಿಯೆಸಗಿದಾಗ ಸಕಲೈಶ್ವರ್ಯಗಳಿಂದ ಕಂಗೊಳಿಸುತ್ತಿದ್ದ ಅಲ್ಲಿನ ಸೂರ್ಯ ದೇವಾಲಯವೇ ನಗರದ ಸಂಪತ್ತಿನ
ಮೂಲವೆಂದು ಬಗೆದು ಆ ದೇವಾಲಯವನ್ನು ಸೂರೆಗೊಂಡು ವಿಗ್ರಹದ ಮೇಲಿದ್ದ ಚಿನ್ನ, ಮುತ್ತು, ರತ್ನಗಳನ್ನು
ತೆಗೆದುಕೊಂಡು ದನದ ಮಾಂಸವನ್ನು ವಿಗ್ರಹದ ಕುತ್ತಿಗೆಗೆ ಮಾಲೆಯಂತೆ ಹಾಕಿ, ಆ ನಗರದಲ್ಲೇ ಜನನಿಬಿಡವಾಗಿದ್ದ
ಸ್ಥಳದಲ್ಲಿ ಮಸೀದಿಯೊಂದನ್ನು ನಿರ್ಮಿಸಿದ! ಮರದ ವಿಗ್ರಹವನ್ನು ಹಾಗೆಯೇ ಬಿಟ್ಟದ್ದಕ್ಕೂ ಕಾರಣವಿತ್ತು.
ಹಿಂದೂಗಳು ಮತ್ತೆ ಶುದ್ಧೀಕರಿಸಿ ಚಿನ್ನಾಭರಣಗಳನ್ನು ವಿಗ್ರಹಕ್ಕೆ ಹಾಕುತ್ತಾರೆಂದೂ, ಒಂದು ವೇಳೆ ಸೋಲಬೇಕಾಗಿ
ಬಂದ ಸಂದರ್ಭದಲ್ಲಿ ವಿಗ್ರಹವನ್ನು ನಾಶಮಾಡುವ ಮಾತನ್ನಾಡಿದರೆ ಹಿಂದೂಗಳು ಶರಣಾಗತರಾಗಿ, ತನ್ನ ಕಾರ್ಯ
ಸರಾಗವಾಗಿ ನೆರವೇರುತ್ತದೆಯೆಂಬ ದುರಾಲೋಚನೆ! ಆಹಾ ಎಂತಹ ಧರ್ಮಸಹಿಷ್ಣು!!! ಆದರೆ ಆತನಿಗಿದ್ದ ಬುದ್ಧಿಮತ್ತೆ
ಮುಂದೆ ಬಂದವರಿಗಿರಲಿಲ್ಲ. ಹತ್ತನೇ ಶತಮಾನದಲ್ಲಿ ಬಂದವರು ವಿಗ್ರಹವನ್ನು ಜೊತೆಗೆ ಪೂಜಾರಿಗಳನ್ನೂ ಕತ್ತರಿಸಿ
ಹಾಕಿದರು.
ಕಂದಹಾರಿನ
ಸಮೀಪ ಘಜನಿ ಸಾಮ್ರಾಜ್ಯದ ಸ್ಥಾಪನೆ ಮಾಡಿದವನು ಹಿಂದೊಮ್ಮೆ ಟರ್ಕಿಗಳ ಗುಲಾಮನಾಗಿದ್ದ ಇರಾನಿನ ಮುಸ್ಲಿಮ್!
ಆತನ ಮಗನೇ ಮಹಮ್ಮದ್. ಘಜನವಿಗಳನ್ನೆಲ್ಲಾ ಮತಾಂತರ ಮಾಡಿದ ಈತ ಇಡೀ ಗಾಂಧಾರವನ್ನು ಇಸ್ಲಾಮೀಕರಣಗೊಳಿಸಿ
ಅಲ್ಲಿನ ಸಂಪತ್ತನ್ನೆಲ್ಲಾ ಸೂರೆಗೊಂಡ. ಅಲ್ಲಿ ಎಲ್ಲವೂ ಖಾಲಿಯಾದ ಮೇಲೆ ಆತನ ಕಣ್ಣು ಬಿದ್ದದ್ದು ಭಾರತ
ಉಳಿದ ಸಂಪದ್ಭರಿತ ಭಾಗಗಳತ್ತ! ಹದಿನೇಳು ಬಾರಿ ಸೋಮನಾಥದ ಮೇಲೆ ದಾಳಿಯಿಟ್ಟು ಪ್ರತಿಬಾರಿಯೂ ಮಣಗಟ್ಟಲೆ
ಚಿನ್ನಾಭರಣ-ಸಂಪತ್ತನ್ನು ದೋಚಿಕೊಂಡು ಹೋದ. ಹಲವು ಊರುಗಳಿಗೇ ಬೆಂಕಿ ಹಚ್ಚಿದ. ವಿಗ್ರಹಗಳನ್ನು ಕೊಂಡು
ಹೋಗಿ ಮಸೀದಿಗಳಿಗೆ ಮೆಟ್ಟಿಲನ್ನಾಗಿ ಹಾಕಿದ. ಲಕ್ಷಾಂತರ ಹಿಂದೂಗಳ ಮಾರಣ ಹೋಮ ನಡೆಸಿದ. ಬಲವಂತದ ಮತಾಂತರ
ನಡೆಸಿ ಈಗಿನ ಮತಾಂಧರಿಗೆ ಆದರ್ಶಪ್ರಾಯನಾದ. ಘಜನಿ ಪಾಶವೀಯತೆ ಉಳಿದ ಅಪ್ಘನ್ ರಾಜರಿಗೆ ಹಾಗೂ ಮೊಘಲರಿಗೆ
ಆದರ್ಶಪ್ರಾಯವಾಯಿತು. ಅಪ್ಘಾನಿನ ಅರಸನಾದವನಿಗೆ ಮೊದಲಿಗೆ ಕಾಣುತ್ತಿದ್ದುದು ಭಾರತವೇ! ಘೋರಿ ದೆಹಲಿಯ
ಮೇಲೆ ದಾಳಿ ಮಾಡಿ ದೇವಾಲಯಗಳನ್ನೆಲ್ಲಾ ಧ್ವಂಸಗೊಳಿಸಿ ತಾನೇ ಸುಲ್ತಾನನೆಂದು ಘೋಷಿಸಿಕೊಂಡ. ಘೋರಿಯಿಂದ
ಹಿಡಿದು ಔರಂಗಜೇಬನವರೆಗೆ, ಅಲ್ಲದೆ ಅಳಿದುಳಿದ ಪುಂಡು ಮುಸ್ಲಿಮ ದೊರೆಗಳವರೆಗೆ ಎಲ್ಲರೂ ಭಾರತವೆಂಬ
ಧರೆಯ ಮೇಲಿನ ಸ್ವರ್ಗವನ್ನು ನರಕ ಸಮಾನ ಮಾಡಿಟ್ಟರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ