ಪುಟಗಳು

ಭಾನುವಾರ, ಫೆಬ್ರವರಿ 8, 2015

ಶ್ರೀ ವಸುಂಧರೆಯ ಜ್ಞಾನಸಿರಿಗರ್ಭ ಈ ಜಂಭೂದ್ವೀಪ



ಶ್ರೀ ವಸುಂಧರೆಯ ಜ್ಞಾನಸಿರಿಗರ್ಭ ಈ ಜಂಭೂದ್ವೀಪ
           ಅನ್ಯ ಭಾಗಗಳಲ್ಲಿ ಜನವಸತಿಯೇ ಇಲ್ಲದಿದ್ದ ಕಾಲದಲ್ಲಿ ನಾವು ನಾಗರೀಕತೆಯ ತುತ್ತ ತುದಿಗೇರಿದ್ದೆವು. ಉಳಿದೆಡೆ ಹುಟ್ಟು ಸಾವುಗಳ ಬಗ್ಗೆ ಜಿಜ್ಞಾಸೆಯೇ ಇಲ್ಲದಿದ್ದ ಸಮಯದಲ್ಲೇ ನಮ್ಮಲ್ಲಿ ಸಾವಿನಾಚೆಗಿನ ಬದುಕಿನ ಅವಿಷ್ಕಾರಗಳು ನಡೆದಿತ್ತು. ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನ,  ಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು...ಇವೇ ಮುಂತಾದುವುಗಳು ನಡೆಯುತ್ತಿದ್ದು ಒಂದು ಸುಸಂಸ್ಕೃತ ಸಮಾಜ ವ್ಯವಸ್ಥೆ ರೂಪುಗೊಂಡಿತ್ತು. ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು! ಒಂದು  ರಾಷ್ಟ್ರದ ವೈಭವಪೂರ್ಣ ಭವಿತವ್ಯದ ಆಧಾರಸ್ತಂಭ ತರುಣ ವೃಂದವನ್ನು ನಿರ್ಮಾಣ ಮಾಡುವ ಕಾರ್ಯವು  ಆ ನಾಡಿನ ವಿದ್ಯಾಮಂದಿರಗಳನ್ನವಲಂಬಿಸಿರುತ್ತದೆ. ರಾಷ್ಟ್ರದ ಘನತೆ, ಗೌರವಗಳಿಗೆ ಧಕ್ಕೆ ತಾರದೆ ವರ್ತಿಸುವ  ಯುವಕ ಸಮೂಹವನ್ನು ನಿರ್ಮಿಸುವ  ಈ ಗುರುತರ ಜವಾಬ್ದಾರಿಯುತ ಕಾರ್ಯವನ್ನು ಪ್ರಾಚೀನ ಭಾರತದ ತಕ್ಷಶಿಲಾ, ನಲಂದಾ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದವು. ಈ ವಿದ್ಯಾಮಂದಿರಗಳು ಕೇವಲ ಭಾರತದಲ್ಲಷ್ಟೇ ಅಲ್ಲ; ವಿಶ್ವದ ನಾನಾ ಮೂಲೆಗಳಲ್ಲಿಯೂ ಭಾರತದ ಕೀರ್ತಿಯನ್ನು  ಮೊಳಗಿಸಿವೆ. ಭಾರತದ ವಿದ್ಯಾಮಂದಿರಗಳಲ್ಲಿ ಅಭ್ಯಸಿಸದಿದ್ದರೆ ವಿದ್ಯೆಯು ಪೂರ್ಣವಾಗಲಿಲ್ಲ ಎಂಬ ಪ್ರತೀತಿಯು ಆಗಿನ ಕಾಲದಲ್ಲಿತ್ತು.
               ತಕ್ಷಶಿಲಾವು ಭಾರತದ ಅತಿ ಪ್ರಾಚೀನ ವಿಶ್ವವಿದ್ಯಾಲಯವಾಗಿದೆ.  ದೇಶ ವಿದೇಶಗಳಿಂದ ವಿದ್ವಾಂಸರ ಆಕರ್ಷಕ ಕೇಂದ್ರವಾಗಿದ್ದ ತಕ್ಷಶಿಲೆಯಲ್ಲಿ ಆರ್ಯಪುತ್ರ ಚಾಣಕ್ಯನಂತಹ ಸುಪ್ರಸಿದ್ಧ ರಾಜನೀತಿಜ್ಞರೂ, ಅಜಾತಶತ್ರು ರಾಜನ  ಆಸ್ಥಾನ ವೈದ್ಯನಾಗಿದ್ದ ಕೌಮಾರ ಜೀವಕನಂತಹ ಶಲ್ಯ ಚಿಕಿತ್ಸಕ(Surgeon)ರೂ ವಿದ್ಯಾರ್ಥಿಗಳಾಗಿದ್ದರೆಂದಮೇಲೆ, ತಕ್ಷಶಿಲೆಯ ಖ್ಯಾತಿ ಅರ್ಥವಾದೀತು. ಆಗಿನ  ಕಾಲದಲ್ಲಿ ಆಯುರ್ವೇದ, ಅರ್ಥಶಾಸ್ತ್ರ ಮತ್ತು ರಾಜನೀತಿ ಕಲಿಯಲು ಇದ್ದ ಒಂದೇ ಸ್ಥಾನವೆಂದು  ಹೆಸರು ಪಡೆದಿದತ್ತು ತಕ್ಷಶಿಲಾ.  ಪ್ರಾರಂಭದಲ್ಲಿ ವೈದಿಕ ಸಂಸ್ಕೃತಿಯ ಕೇಂದ್ರವಾಗಿದ್ದು ಕ್ರಮೇಣ ಬೌದ್ಧಮತ  ಜ್ಞಾನಕ್ಕೆ ಪ್ರಮುಖ ಕೇಂದ್ರವಾದ ಈ ತಕ್ಷಶಿಲಾ ವಿಶ್ವವಿದ್ಯಾಲಯವು  ಸುಮಾರು ಒಂದು ಸಾವಿರ  ವರ್ಷಗಳ ಕಾಲದವರೆವಿಗೆ ಬೆಳಗಿ, ಜಗತ್ತಿನ ಪ್ರತಿಯೊಂದು ಮೂಲೆಗೂ ಭಾರತೀಯತೆಯ ಬೆಳಕನ್ನು ಹರಡಿತು. ಕ್ರಿ. ಪೂ. ಐದನೇ ಶತಮಾನದಿಂದ ಕ್ರಿ. ಶ.  6ನೆ ಶತಮಾನದವರೆಗೆ ಬಾಳಿ ಬೆಳಗಿದ ಈ ಪ್ರಾಚೀನತಮ ವಿದ್ಯಾಕೇಂದ್ರವು ಆರನೆ ಶತಮಾನದಲ್ಲಿ  ಹೂಣರ ಧಾಳಿಗೆ ಸಿಲುಕಿ ನಾಶವಾಯಿತು. ಆದರೆ ವಿಜ್ಞಾನಿಗಳ ಇತ್ತೀಚಿನ  ಸಂಶೋಧನೆಯಿಂದ ಪುನಃ ಬೆಳಕಿಗೆ ಬಂದಿದೆ. ಆ ಕಾಲದಲ್ಲಿಯೇ ಭಾರತದಲ್ಲಿ ಪಾತ್ರೆಗಳು ಬಳಕೆಯಲ್ಲಿದ್ದುದು ಕಾಣಬರುತ್ತದೆ. ಬ್ರಾಹ್ಮಿ ಮತ್ತು ಖರೋಷ್ಟ್ರೀ ಲಿಪಿಯಲ್ಲಿ ಬರೆದ ಬ್ರಾಹ್ಮಣ-ಬೌದ್ಧದರ್ಶನ-ಸಾಹಿತ್ಯ-ಅರ್ಥಶಾಸ್ತ್ರ ಮತ್ತು ವೈದ್ಯಗ್ರಂಥಗಳೂ ಅಲ್ಲಿ ದೊರೆತಿವೆ. ಈ ಸಂಶೋಧನೆಯ ಗರ್ಭದಿಂದ ತಕ್ಷಶಿಲೆಯ ಹಾಗೂ ಭಾರತದ ಮತ್ತಷ್ಟು ಮಾಹಿತಿ ಹೊರಬೀಳಬಹುದು.
          ನಳಂದಾ ಬಿಹಾರದ ರಾಜ್ ಗರ್ ನಲ್ಲಿದ್ದು, ನೇಪಾಳಕ್ಕೆ ತಾಗಿಕೊಂಡಿದೆ. ನಳಂದಾ ವಿವಿ ಕುಮಾರಗುಪ್ತನ ಕಾಲದಲ್ಲಿ ಕ್ರಿ.ಶ 424 ಸ್ಥಾಪನೆಯಾಗಿತ್ತು.  ನಳಂದಾ ವಿಶ್ವವಿದ್ಯಾಲಯವು ವಿಶ್ವಕ್ಕೆ ಭಾರತೀಯ ಜ್ಞಾನ, ವಿಜ್ಞಾನ, ಧರ್ಮಶಾಸ್ತ್ರ, ಸಾಹಿತ್ಯ, ಕಲೆ, ದರ್ಶನಶಾಸ್ತ್ರ, ಶಿಲ್ಪ ಶಾಸ್ತ್ರ, ಸಂಸ್ಕೃತಿ ಮತ್ತು ನಾಗರೀಕತೆಗಳನ್ನು ಕಲಿಸಿಕೊಟ್ಟಿತು. “ನಳಂದಾದಲ್ಲಿ ಓದದಿದ್ದರೆ, ವಿದ್ಯಾಭ್ಯಾಸವು  ಪೂರ್ಣವಾಗಲಿಲ್ಲ” ಎನ್ನುವ ಖ್ಯಾತಿ ನಳಂದಾಕ್ಕಿತ್ತು. ನಳಂದಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆಗಾಗಿ, ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಜಾತಿ-ಮತ-ಪಂಥಗಳ ಬೇಧಭಾವನೆಗಳಿಲ್ಲದೆ ಬರುತ್ತಿದ್ದರು. ಚೀನಾ, ಜಪಾನ್, ಬರ್ಮಾ, ಮಲಯ, ಕೊರಿಯಾ, ಟಿಬೆಟ್, ಇಂಡೋನೇಷ್ಯಾ, ಪರ್ಷಿಯಾ, ಟರ್ಕಿ ಮುಂತಾದ ಅನೇಕ ಕಡೆಗಳಿಂದ ಜ್ಞಾನ ಪಿಪಾಸುಗಳು ಬಂದು ನಳಂದದಲ್ಲಿ ತಮ್ಮ ಜ್ಞಾನತೃಷೆಯನ್ನು ತೀರಿಸಿಕೊಳ್ಳುತ್ತಿದ್ದರು. ಪ್ರಮುಖವಾಗಿ ಬೌದ್ಧ ಅಧ್ಯಯನ, ವೈದ್ಯಕೀಯ, ಗಣಿತ, ಖಗೋಳ, ರಾಜಕೀಯ ಮತ್ತು ಯುದ್ಧಕಲೆ, ವೈದ್ಯ, ದರ್ಶನ, ಸಾಹಿತ್ಯ, ಕಲಾ, ಅರ್ಥಶಾಸ್ತ್ರಾದಿ ವಿಷಯಗಳಲ್ಲಿ ಅತಿ ಉಚ್ಛ ಶಿಕ್ಷಣ ಇಲ್ಲಿ ದೊರೆಯುತ್ತಿತ್ತು. ಇಲ್ಲಿ ಕೇವಲ ಪುಸ್ತಕ ಪ್ರಾಧಾನ್ಯದ ಶಿಕ್ಷಣ ದೊರೆಯದೇ ಪ್ರಾಯೋಗಿಕ ಶಿಕ್ಷಣ ದೊರೆಯುತ್ತಿತ್ತು. ನಳಂದಾ ವಿಶ್ವವಿದ್ಯಾನಿಲಯವು 20ನೇ ಶತಮಾನದ ಆಧುನಿಕ ವಿಶ್ವವಿದ್ಯಾನಿಲಯಗಳಿಗೆ ಅನೇಕ ವಿಧಗಳಲ್ಲಿ ಮಾರ್ಗದರ್ಶಕವಾಗಿದೆ. ನಳಂದಾ ಅಂತಿಂಥ ವಿವಿಯಲ್ಲ. ಆ ಕಾಲಕ್ಕೇ ಅತಿ ದೊಡ್ಡದಾಗಿತ್ತು. ಸುಮಾರು 14 ಎಕರೆ ವಿಸ್ತಾರದಲ್ಲಿ, 8 ಪ್ರತ್ಯೇಕ ಪ್ರಾಂಗಣ, 8 ದೇಗುಲಗಳು, ಧ್ಯಾನಕೇಂದ್ರಗಳು, ತರಗತಿ, ಕೊಳಗಳು ಮತ್ತು ಉದ್ಯಾನಗಳು ಇದ್ದವು. ಇದರೊಂದಿಗೆ 9 ಮಾಳಿಗೆಯ ವಿಸ್ತೃತ ಗ್ರಂಥಾಲಯವೂ ಅಲ್ಲಿತ್ತು. ಹತ್ತು ಸಾವಿರ ವಿದ್ಯಾರ್ಥಿಗಳೂ ಹಾಗೂ ಸಾವಿರದೈನೂರು ಮಂದಿ ಅಧ್ಯಾಪಕರಿದ್ದರೆಂದರೆ ನಳಂದಾ ವಿಶ್ವವಿದ್ಯಾಲಯದ ಅಗಾಧತೆಯನ್ನು ಊಹಿಸಬಹುದು. ವಿದ್ಯಾರ್ಥಿ ವೃಂದವು  ಎಂಟು ತರಗತಿಗಳಾಗಿ, ಮೂರುನೂರು ಪ್ರಕೋಷ್ಠಗಳಾಗಿಯೂ ವಿಂಗಡಿಸಲ್ಪಟ್ಟಿದ್ದಿತು. ಸಭಾಭವನ, ವಿದ್ಯಾರ್ಥಿಗಳ ವಾಸಕ್ಕಾಗಿ ಮುನ್ನೂರು ಛಾತ್ರವಾಸಗಳಿದ್ದವು. ನಳಂದಾ ವಿಶ್ವವಿದ್ಯಾನಿಲಯದ ಪುಸ್ತಕಾಲಯವು ಲಕ್ಷಾಂತರ ಪುಸ್ತಕಗಳ, ಹಸ್ತಪ್ರತಿಗಳ ಆಗರವಾಗಿತ್ತು. ರತ್ನಸಾಗರ, ರತ್ನೋದಧಿ ಮುತ್ತುರತ್ನ ರಂಜಕವೆಂಬ ಹೆಸರಿನ ನಾಲಂದಾ ವಿಶ್ವವಿದ್ಯಾಲಯದ ಪುಸ್ತಕಾಲಯಗಳು ಭಾರತದ ಸ್ವರ್ಣಿಮ ಇತಿಹಾಸದಲ್ಲಿ ಬರೆದಿಡಬೇಕಾದ ಗ್ರಂಥಭಂಡಾರಗಳು. ನಲಂದಾ ವಿದ್ಯಾಲಯದ ಕಾಲದಲ್ಲಿ ಬೌದ್ಧಮತವು ರಾಜಮನ್ನಣೆ ಪಡೆದಿದ್ದುದರಿಂದ ವಜ್ರಯಾನ, ಹೀನಾಯಾನ, ಮಹಾಯಾನಾದಿ ಸರ್ವಬೌದ್ಧ ಗ್ರಂಥಗಳಿಗೂ, ಬೌದ್ಧತತ್ವಗಳಿಗೂ ನಾಲಂದ ಕೇಂದ್ರವಾಗಿದ್ದಿತು. ಚೀನಾದ ಪ್ರವಾಸಿ ಹ್ಯುಎನ್ ತ್ಸಾಂಗ್ ನಳಂದಾ ವಿವಿಯ ವೈಭವದ ಬಗ್ಗೆ ಬರೆದಿದ್ದಾನೆ. ಅಲ್ಲದೇ ಉತ್ಖನನದ ವೇಳೆ ದೊರಕಿದ ಸಾಕಷ್ಟು ಮಾಹಿತಿಗಳೂ ನಳಂದಾದ ಬಗೆಗಿನ ಅಪಾರ ಮಾಹಿತಿಯನ್ನು ಒದಗಿಸಿವೆ. 1197ರವರೆಗೆ ಈ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿದ್ದು, ಟರ್ಕಿಯ ಭಕ್ತಿಯಾರ್ ಖಿಲ್ಜಿಯ ದಾಳಿಯೊಂದಿಗೆ ಜರ್ಝರಿತಗೊಂಡು ನಾಶವಾಯಿತು. ನಳಂದಾ ವಿಶ್ವವಿದ್ಯಾಲಯಕ್ಕೆ ಖಿಲ್ಜಿ ದಾಳಿ ಮಾಡಿದ ಬಳಿಕ ಅಲ್ಲಿನ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ. ಅನೇಕ ಅಪೂರ್ವ ದಾಖಲೆ, ಅಧ್ಯಯನ ಪರಿಕರಗಳಿದ್ದ ಈ ಗ್ರಂಥಾಲಯಗಳು ಸುಮಾರು ಆರು ತಿಂಗಳ ಕಾಲ ನಿರಂತರ ಉರಿದವು. ಅಂದರೆ ಅಲ್ಲಿನ ಗ್ರಂಥ ಸಂಗ್ರಹ ಯಾವ ಪ್ರಮಾಣದಲ್ಲಿದ್ದಿರಬಹುದು ಎಂದು ಅಂದಾಜಿಸಬಹುದು.
         ಸಮಧಾನದ ವಿಷಯವೆಂದರೆ ನಳಂದಾ ವಿವಿಗೆ ಪುನರ್ಜನ್ಮ ನೀಡುವ ಪ್ರಯತ್ನ ಯಶಸ್ಸು ಕಾಣುತ್ತಿದೆ. 2006ರಲ್ಲಿ ಬಿಹಾರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ್ದ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಪುನರ್ನಿರ್ಮಾಣದ ಬಗ್ಗೆ ಹೇಳಿದ್ದರು. ಬಳಿಕ ಈ ಬಗ್ಗೆ ಸಂಸತ್ತಿನಲ್ಲಿ "ನಳಂದಾ ವಿವಿ ಮಸೂದೆ'ಯೂ ಅಂಗೀಕಾರಗೊಂಡಿತ್ತು. 2010 ನ.25ರಲ್ಲಿ ರಾಷ್ಟ್ರಪತಿಗಳ ಅಂಗೀಕಾರದೊಂದಿಗೆ ನಳಂದಾ ನಿರ್ಮಾಣಕ್ಕೆ ಮತ್ತೆ ಚಾಲನೆ ದೊರಕಿತ್ತು. ಬಿಹಾರ ಸರ್ಕಾರ 443 ಎಕರೆ ವಿವಿ ಗಾಗಿ ಜಮೀನು ನಿಗದಿಪಡಿಸಿತ್ತು. ನಳಂದಾ ಪುನರುಜ್ಜೀವನಕ್ಕೆ ಜಪಾನ್, ಸಿಂಗಾಪುರ, ಚೀನಾ ದೇಶಗಳೂ ಸುಮಾರು 1 ಸಾವಿರ ಕೋಟಿಗೂ ಮಿಕ್ಕಿ ಸಂಶೋಧನೆ, ಉತ್ಖನನ ಇತ್ಯಾದಿಗಳಿಗೆ ಆರ್ಥಿಕ ನೆರವನ್ನು ನೀಡಿವೆ. ಅಲ್ಲದೇ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕಾಂಬೋಡಿಯಾ, ಸಿಂಗಪುರ, ಬ್ರೂನಿ, ಮ್ಯಾನ್ಮಾರ್, ಲಾವೋಸ್, ಚೀನಾ, ಜಪಾನಿನೊಂದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ 500 ಕೋಟಿಗೂ ಮಿಕ್ಕಿ ನೆರವನ್ನು ಕೇಂದ್ರ ಸರ್ಕಾರವೂ ನೀಡಿದೆ. ಪರಿಣಾಮ 800 ವರ್ಷಗಳ ಬಳಿಕ  ವಿವಿಯಲ್ಲಿ ತರಗತಿಗಳು ಆರಂಭವಾಗಿವೆ.
             ವಿಕ್ರಮಶಿಲಾ ವಿದ್ಯಾಲಯವು ಈಗಿನ ಭಾಗಲಪುರ ಜಿಲ್ಲೆಯ ಸುಲ್ತಾನಗಂಜ್ ಬಳಿ ಇತ್ತು. ವಿದ್ಯಾಮಂದಿರದ ನಾಲ್ಕೂ ಕಡೆ, ವಿಸ್ತೃತವಾದ ತೋರಣವಿತ್ತು. ಪ್ರತಿಯೊಂದು ದ್ವಾರದಲ್ಲಿಯೂ ಒಂದೊಂದು ಪ್ರವೇಶಿಕಾ ಪರೀಕ್ಷಾ ಗೃಹವಿತ್ತು. ಇವುಗಳಲ್ಲಿ ಒಬ್ಬ ದಿಗ್ಗಜ ವಿದ್ವಾನನಿರುತ್ತಿದ್ದ. ವಿದ್ಯಾಮಂದಿರದಲ್ಲಿ ಪ್ರವೇಶಿಸಬೇಕಾದ ವಿದ್ಯಾರ್ಥಿಯು ಈ ದ್ವಾರಸ್ಥ ಪಂಡಿತರ ಪರೀಕ್ಷೆ ಅನುಮತಿ ಇಲ್ಲದೆ ಪ್ರವೇಶಿಸುವಂತಿರಲಿಲ್ಲ. ತಾಂತ್ರಿಕ ಜ್ಞಾನ ಪ್ರಸಾರಣೆಗೆ ವಿಕ್ರಮಶಿಲಾ ವಿದ್ಯಾಲಯವು  ಕೇಂದ್ರವಾಗಿತ್ತು.  ಮಹಾಜ್ಞಾನಿಯೂ  ಸಂತನೂ ಆಗಿದ್ದ ಶ್ರೀ ಜ್ಞಾನದೀಪಂಕರನು ಇದರ ಕುಲಪತಿಯಾಗಿದ್ದನು.  ರತ್ನವಜ್ರ, ಲೀಲಾವಜ್ರ, ಕೃಷ್ಣ ಸಮರವಜ್ರ, ತಥಾಗತ ರಕ್ಷಿತ, ಭೋ ಭದ್ರ, ನರೇಂದ್ರ ಮತ್ತು  ಕಮಲರಕ್ಷಿತರೇ ಮೊದಲಾದ ಅಷ್ಟ ಮಹಾಪಂಡಿತರ ಸತತ ಪರಿಶ್ರಮದಿಂದ ಜ್ಞಾನವು ಸತತ ಧಾರೆಯಾಗಿ  ಇಲ್ಲಿ ಹರಿಯುತ್ತಿತ್ತು. ಈ ಎಂಟು ಜನವಲ್ಲದೆ, ಇನ್ನೂ 108 ಮಂದಿ ಅಧ್ಯಾಪಕರು ಇಲ್ಲಿದ್ದರು. ವಿಕ್ರಮಶಿಲಾ ವಿಶ್ವವಿದ್ಯಾಲಯದಲ್ಲಿ ಧರ್ಮ, ಸಾಹಿತ್ಯ, ದರ್ಶನ, ನ್ಯಾಯ, ಮಂತ್ರಶಾಸ್ತ್ರಕ್ಕೆ  ಹೆಚ್ಚು ಪ್ರಾಧಾನ್ಯವಿತ್ತು. ನಳಂದಾದಂತೆ ವಿಕ್ರಮ ಶಿಲೆಯಲ್ಲಿಯೂ  ತಾಂತ್ರಿಕ - ಮಾಂತ್ರಿಕ ವಿದ್ಯೆಗೆ ಬಹಳ ಪ್ರಾಶಸ್ತ್ಯವಿತ್ತು. ಎಲ್ಲಾ ವಿದ‍್ಯಾರ್ಥಿಗಳ ಊಟೋಪಚಾರಗಳನ್ನು  ವಿದ್ಯಾಲಯವೇ ವಹಿಸಿತ್ತು. ವಿದೇಶಗಳಲ್ಲಿದ್ದ ವಿದ್ಯಾಕೇಂದ್ರಗಳಿಗೆ, ವಿಕ್ರಮ ಶಿಲೆಯ ಕುಲಪತಿಯಾದ ಜ್ಞಾನತೀರ್ಥಂಕರನು ಭೇಟಿಕೊಟ್ಟು ಅವುಗಳನ್ನು ವ್ಯವಸ್ಥಿತಗೊಳಿಸಿದನು. 1193ರಲ್ಲಿ ಪಾಲ ವಂಶದ ಅರಸರ ಅಪಜಯದಿಂದ  ವಿಕ್ರಮಶಿಲೆಯೂ ನಾಮಾವಶೇಷ ವಾಗಬೇಕಾಯಿತು. ಮಹಮ್ಮದಬಿನ್ ಅಕ್ತಿಯಾರನ ನೇತೃತ್ವದಲ್ಲಿ  ಭಾರತವನ್ನು ಸೂರೆಗೊಂಡ ಮಹಮ್ಮದೀಯರು  ವಿಕ್ರಮಶಿಲಾವನ್ನು  ಹೇಳಹೆಸರಿಲ್ಲದ ಹಾಗೆ ಮಾಡಿದರು.
          ಈ ಮೂರು ವಿಶ್ವವಿದ್ಯಾಲಯಗಳು ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿದ ಜ್ಞಾನಭಂಡಾರಗಳು. ಒಂದೊಂದು  ಕಾಲದಲ್ಲಿ ಒಂದೊಂದು ವಿಶ್ವವಿದ್ಯಾನಿಲಯವು ವೈಭವ ಶಿಖರವನ್ನೇರಿತ್ತು. ಭಾರತದ ಉಚ್ಚತಮ ಸಾಮಾಜಿಕ ಮತ್ತು ಸಾಂಸ್ಕೃತಿಕ  ಜೀವನಕ್ಕೆ ಆಗಿನ ಕಾಲದ  ವಿದ್ಯಾಭ್ಯಾಸದ ಪದ್ಧತಿಯೇ  ಕಾರಣವಾಗಿತ್ತು. ಇವುಗಳಲ್ಲದೇ ಸಮಗ್ರ ಭಾರತದಲ್ಲಿ , ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ  ಪ್ರಮುಖ ಕೇಂದ್ರಗಳಿದ್ದವು. ‘ಗುರುಕುಲಗಳು’ ಎಲ್ಲೆಡೆಯಲ್ಲೂ ಇದ್ದುವು. 1790ರ ಸುಮಾರಿಗೆ ಬಂಗಾಳದ ನವದ್ವೀಪ ವಿಶ್ವವಿದ್ಯಾಲಯದಲ್ಲಿ  ೧೧೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಅಲ್ಲಿ ೧೫೦ ಜನ ನುರಿತ ಅಧ್ಯಾಪಕರಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ವ್ಯಾಕರಣ-ತತ್ವಶಾಸ್ತ್ರವನ್ನು ಅಭ್ಯಸಿಸುತ್ತಿದ್ದರಾದರೂ ಅವರಿಗೆ ಉಳಿದೆಲ್ಲಾ ಶಿಕ್ಷಣ ಶಾಲೆಗಳಲ್ಲಿ ಅಥವಾ ಮನೆಯಲ್ಲಿಯೇ ಸಿಗುತ್ತಿತ್ತು. ಒಬ್ಬನೇ ಅಧ್ಯಾಪಕ ಸಣ್ಣ ಸಮೂಹಗಳಿಗೆ ಬೋಧಿಸುವ ಪರಿಪಾಠವೂ ಇತ್ತು. ನಳಂದಾ, ತಕ್ಷಶಿಲೆ ಹಾಗೂ ವಿಕ್ರಮಶಿಲೆಗಳು ವಿಶಾಲ ಗುರುಕುಲಗಳಾಗಿದ್ದುವೇ ವಿನಾ ಅವುಗಳಿಂದ ಭಿನ್ನವಾಗಿರಲಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಸಹಸ್ರಾವಧಿ ಇದ್ದರೂ  ವೈಯಕ್ತಿಕವಾಗಿ, ವಿದ್ಯಾರ್ಥಿಯ ಮನೋಗತಕ್ಕನುಗುಣವಾಗಿ ಶಿಕ್ಷಣ ಕೊಡುತ್ತಿದ್ದುದೇ ಆಗಿನ ಕಾಲದ ವಿದ್ಯಾಭ್ಯಾಸ ವೈಶಿಷ್ಟ್ಯವಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ