ಪುಟಗಳು

ಗುರುವಾರ, ಜನವರಿ 21, 2016

ಸತ್ಯದ ಸಮಾಧಿಯ ಮೇಲೆ ಸೆಕ್ಯುಲರ್ ನರ್ತನ

ಸತ್ಯದ ಸಮಾಧಿಯ ಮೇಲೆ ಸೆಕ್ಯುಲರ್ ನರ್ತನ

              ಜಾತಿ ಜಾತಿಗಳನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಜಾತ್ಯಾತೀತತೆ. ತಮ್ಮ ಸಹಾಯಕ್ಕೆ ಒದಗುತ್ತದೆ, ತಮ್ಮ ಮತ ಬ್ಯಾಂಕ್ ಭದ್ರಗೊಳ್ಳುತ್ತದೆ ಎಂದು ಖಾತರಿ ಆದೊಡನೆ ದೇಶದ್ರೋಹವೂ ಸೆಕ್ಯುಲರಿಸಮ್ಮಿನ ಪೆಟ್ಟಿಗೆಯೊಳಗೆ ಭದ್ರವಾಗಿ ಕುಳಿತುಕೊಳ್ಳುತ್ತದೆ. ಈ ಜಾತಿ ರಾಜಕೀಯದಲ್ಲಿ ಮನುಷ್ಯತ್ವ ನಗಣ್ಯವಾಗುತ್ತದೆ. ಭಾವನೆಗಳಿಗೆ ಸಮಾಧಿ ಕಟ್ಟಲಾಗುತ್ತದೆ. ಕೊಳೆತು ನಾರುತ್ತಿರುವ ಶವವನ್ನು ಮುಂದಿರಿಸಿಕೊಂಡು ನರಿ ನಾಯಿಗಳು ಜೊಲ್ಲು ಸುರಿಸುತ್ತಾ ಊಳಿಡುತ್ತಿರುತ್ತವೆ. ಸುಳ್ಳನ್ನು ಮತ್ತೆ ಮತ್ತೆ ಹೇಳಿದಾಗ ಅದೇ ಸತ್ಯವಾಗುವ ಅಪಾಯವಿರುತ್ತದೆ. ಸುಳ್ಳು ಎದ್ದು ಹೊರಟು ಊರ ಜಾತ್ರೆಯಲ್ಲಿ ಜನರ ನಡುವೆ ಕುಣಿಯುತ್ತಿರುವಾಗ ಸತ್ಯ ಇನ್ನೂ ಎದ್ದು ಕುಳಿತುಕೊಳ್ಳುವ ಆಲೋಚನೆಯಲ್ಲಿ ತೊಡಗಿರುತ್ತದೆ. ನಮ್ಮ ಮಾಧ್ಯಮಗಳು, ಬುದ್ಧಿಜೀವಿಗಳು, ಸೆಕ್ಯುಲರುಗಳು ಮಾಡುತ್ತಿರುವುದೂ ಇದನ್ನೇ! ಅದಕ್ಕೆ ಇತ್ತೀಚಿನ ಉದಾಹರಣೆಯೇ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ.

                  ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಯಾಕೂಬ್ ಮೆನನ್ ಅನ್ನು ಗಲ್ಲಿಗೇರಿಸಬಾರದು ಎಂದು ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನೊಳಗೆ ಧರಣಿ ನಡೆಸಿತ್ತು. ಆ ಪ್ರತಿಭಟನೆಯಲ್ಲಿ "ಒಬ್ಬ ಯಾಕೂಬನನ್ನು ಗಲ್ಲಿಗೇರಿಸಿದರೆ ಪ್ರತಿಯಾಗಿ ಸಾವಿರ ಯಾಕೂಬರು ಹುಟ್ಟಿ ಬರುತ್ತಾರೆ" ಎಂದು ಮುಂತಾದ ಘೋಷಣೆಗಳನ್ನೂ ಕೂಗಲಾಗಿತ್ತು. ಇವರ ದೇಶದ್ರೋಹಿ ಕಾರ್ಯವನ್ನು ಸುಶೀಲ್ ಕುಮಾರ್ ನೇತೃತ್ವದಲ್ಲಿ ಎಬಿವಿಪಿ ಆಕ್ಷೇಪಿಸಿತು. ಇದರಿಂದ ಸಿಟ್ಟಿಗೆದ್ದ ಈ ಸಂಘಟನೆಯ ಕಾರ್ಯಕರ್ತರು ಸುಶೀಲ್ ಕುಮಾರ್ ಹಾಗೂ ಇನ್ನಿಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ವಿಚಿತ್ರವೆಂದರೆ ದಲಿತರ ಪರವಾಗಿ ಹೋರಾಡುವ ಈ ಸಂಘಟನೆ ಹಲ್ಲೆ ಮಾಡಿದ್ದ ಆ ಇನ್ನಿಬ್ಬರು ವಿದ್ಯಾರ್ಥಿಗಳು ದಲಿತರು! ಹೈದರಾಬಾದ್ ವಿವಿಯ ಆವರಣದಲ್ಲಿ ನಡೆದ ಈ ಘಟನೆಯ ಕುರಿತು ಆಡಳಿತ ಮಂಡಳಿ ಮೌನ ತಾಳಿತ್ತು. ದೂರು ಕೊಟ್ಟಾಗಲೂ ಕ್ರಮ ಕೈಗೊಳ್ಳದೇ ಇದ್ದಾಗ ಸುಶೀಲ್ ಅನಿವಾರ್ಯವಾಗಿ ಸಚಿವ ಬಂಡಾರು ದತ್ತಾತ್ರೇಯ ಅವರನ್ನು ಸಂಪರ್ಕಿಸಿ ನ್ಯಾಯ ಬೇಡಬೇಕಾಯಿತು. ಬಂಡಾರು ದತ್ತಾತ್ರೇಯ ಈ ವಿಚಾರವನ್ನು ಸಚಿವೆ ಸ್ಮೃತಿ ಇರಾನಿ ಗಮನಕ್ಕೆ ತಂದ ಬಳಿಕ ಈ ಘಟನೆಗೆ ಕಾರಣರಾದ ಐದು ಮಂದಿ ವಿದ್ಯಾರ್ಥಿಗಳನ್ನು ವಿವಿಯ ಹಾಸ್ಟೆಲಿನಿಂದ ತೆಗೆದು ಹಾಕಲಾಗಿತ್ತು. ಆ ಐದು ಮಂದಿಯಲ್ಲಿ ಒಬ್ಬನಾಗಿದ್ದ ರೋಹಿತ್. ಆ ಬಳಿಕ ಉಳಿದ ನಾಲ್ವರೊಡನೆ ಸೇರಿ ಎರಡು ವಾರಗಳ ಕಾಲ ಪ್ರತಿಭಟನೆಯನ್ನೂ ಮಾಡಿದ್ದ ರೋಹಿತ್. ತನ್ನ ಕೃತ್ಯದ ಸಮರ್ಥನೆಗೆ ಜಾತಿ ಸರ್ಟಿಫಿಕೇಟನ್ನು ಎಳೆದು ತಂದಿದ್ದ.

              ಅಂತಹ ರೋಹಿತ್ ಆತ್ಮಹತ್ಯೆ ಮಾಡಿಕೊಂಡ. ಆತ ಬರೆದಿಟ್ಟ ಮೃತ್ಯುಪತ್ರದಲ್ಲಿ "ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಕಾರ್ಲ್ ಸಗಾನ್’ನಂತೆ ವಿಜ್ಞಾನ ಲೇಖಕನಾಗಬೇಕೆಂದು ಬಯಸಿದ್ದೆ. ನನ್ನ ಕನಸುಗಳೆಲ್ಲ ಮುರುಟಿಹೋದ ದುಃಖದಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ" ಎಂದು ಬರೆದು ಅಸುನೀಗಿದ್ದ. ಆದರೆ ಆತನ ಆತ್ಮಹತ್ಯೆಯನ್ನು ಹಲವು ತಿಂಗಳುಗಳ ಹಿಂದೆ ನಡೆದ ಮೇಲಿನ ಪ್ರಕರಣದ ಜೊತೆ ತಳುಕು ಹಾಕಲಾಯಿತು. ಎಬಿವಿಪಿ, ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿಯವರೇ ಅದಕ್ಕೆ ಕಾರಣವೆನ್ನಲಾಯಿತು. ಯಾವಾಗ “ದ ಹಿಂದೂ” ಪತ್ರಿಕೆ “ದಲಿತ ವಿದ್ಯಾರ್ಥಿಯ ಅಮಾನವೀಯ ಆತ್ಮಹತ್ಯೆ” ಎನ್ನುವ ಶೀರ್ಷಿಕೆ ಕೊಟ್ಟು ಸುದ್ದಿ ಸೃಷ್ಟಿ ಮಾಡಿತೋ ಆಗ ದಾದ್ರಿ ಘಟನೆಯ ಬಳಿಕ ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಸೆಕ್ಯುಲರುಗಳಿಗೆ ನಿಧಿ ಸಿಕ್ಕಿದಂತಾಯಿತು. ಕೇಂದ್ರ ಸರಕಾರ ದಲಿತ ವಿರೋಧಿ ಎನ್ನುವ ಪ್ರಚಾರವೂ ನಡೆಯಿತು. ಕೆಲವಂತೂ ಗುಜರಾತಿನ ಯಾವುದೋ ಊರಿನಲ್ಲಿರುವ ಅಂಗನವಾಡಿ ಪ್ರಕರಣವನ್ನು ಹಿಡಿದು ಮೋದಿ ದಲಿತ ವಿರೋಧಿ ಎನ್ನುವ ಹಣೆಪಟ್ಟಿಯನ್ನೇ ಕಟ್ಟಿ ಬಿಟ್ಟರು. ಆದರೆ ರೋಹಿತ್ ನಿಜವಾಗಿ ದಲಿತನಾಗಿದ್ದನೆ? ಅಣ್ಣನ ಬಳಿ ಓಬಿಸಿ ಪ್ರಮಾಣಪತ್ರ, ಪರಿವಾರ "ವಡ್ಡರ"(ಓಬಿಸಿ) ಜನಾಂಗ; ಆದರೆ ರೋಹಿತನದ್ದು ಮಾತ್ರ "ಎಸ್.ಸಿ" ಪ್ರಮಾಣಪತ್ರ! ಇಂದು, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಕುಟುಂಬದ ಜಾತಿ ಬದಲಾಯಿಸಬೇಡಿ ಎಂದು ವೇಮುಲನ ಮನೆಯವರು ಅಲವತ್ತುಕೊಳ್ಳುತ್ತಿದ್ದಾರೆ.

              ೨೦೧೦ರಲ್ಲಿ ವಿಶ್ವವಿದ್ಯಾಲಯ ಸೇರಿಕೊಂಡಾಗ ರೋಹಿತ್ ಯಾವುದೇ ದಲಿತ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಆತನ ಸ್ನೇಹಿತರು ಹೇಳುವಂತೆ ಆತನ ವಾಸ್ತವ್ಯದ ಕೋಣೆಯಲ್ಲಿ ವಿವೇಕಾನಂದರ ಚಿತ್ರಗಳು ರಾರಾಜಿಸುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಭಾರತವನ್ನು ಪ್ರೀತಿಸುವ, ಭಾರತದ ಪರವಾದ ಅನೇಕ ಸಂದೇಶಗಳನ್ನೂ ಹಾಕಿದ್ದ. ಮೋದಿಯವರ ಗುಜರಾತ್ ಸೋಲಾರ್ ಪ್ರೊಜೆಕ್ಟ್ ನಿಂದ ಪ್ರಭಾವಿತನಾಗಿದ್ದ. ಆಡಮ್ ಹಾಗೂ ಈವ್ ರ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದ. ಮಾಧ್ಯಮಗಳ ಇಬ್ಬಂದಿತನದ ಬಗ್ಗೆಯೂ ಪ್ರಶ್ನಿಸಿದ್ದ. ರಾಹುಲ್ ಗಾಂಧಿಯ ಬಗ್ಗೆ ಜೋಕ್ ಮಾಡುತ್ತಿದ್ದ. ಸುಬ್ರಹ್ಮಣಿಯನ್ ಸ್ವಾಮಿಯವರು ಕಾಂಗ್ರೆಸ್ಸನ್ನು ಪ್ರಶ್ನಿಸಿ ಹಾಕಿದ್ದ ವಿಚಾರಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅಣ್ಣಾ ಹಜಾರೆಯವರ ಭೃಷ್ಟಾಚಾರ ವಿರೋಧಿ ಹೋರಾಟದಿಂದ ಪ್ರಭಾವಿತನಾಗಿದ್ದ. ದೆಹಲಿಯ ರೇಪ್ ಬಗ್ಗೆ ಸರಕಾರದ ವಿರುದ್ಧ ಸಿಡಿದೆದ್ದಿದ್ದ. ಅಂತಹ ವೇಮುಲ ಬದಲಾಗಿ ಹೋದ. ಆತ ಈಗ ಕೇಜ್ರಿವಾಲರ ಆಪ್ ಅನ್ನು ಅಪ್ಪಿಕೊಂಡ. ಕಮ್ಯೂನಿಸ್ಟ್ ವಿಚಾರಧಾರೆಗಳು ಆತನಿಗಿಷ್ಟವಾದವು. ದಲಿತ ಸಂಘಟನೆಯನ್ನು ಸೇರಿದ. ಓವೈಸಿಯನ್ನು ಹಾಡಿ ಹೊಗಳಲಾರಂಭಿಸಿದ. ಯಾಕೂಬ್ ಮೆನನನ್ನು ಬೆಂಬಲಿಸಿದ. ಹಿಂದುತ್ವ, ಹಿಂದೂಗಳನ್ನು ವಿರೋಧಿಸಿದ. ಎಬಿವಿಪಿಯ ಭಿತ್ತಿಪತ್ರ ಕಂಡಲ್ಲೆಲ್ಲಾ ಹರಿದೆಸೆಯಲಾರಂಭಿಸಿದ.  “ಹಿಂದುತ್ವವನ್ನು ತೋರಿಸುವ ಕೇಸರಿ ಬಣ್ಣ ಎಲ್ಲೇ ಕಂಡರೂ ಹರಿದು ಹಾಕುತ್ತೇನೆ. ವಿಶ್ವವಿದ್ಯಾಲಯದಲ್ಲಿರಲಿ, ಹೊರಗಿರಲಿ, ಅಥವಾ ಮನೆಯಲ್ಲೇ ಆಗಲಿ! ಮನೆಯಲ್ಲಿ ಕೇಸರಿ ಬಣ್ಣದ ಸೀರೆ ಕಂಡರೂ ಹರಿದೆಸೆಯುತ್ತೇನೆ” ಎಂದು ಕಿಡಿ ಕಾರಲಾರಂಭಿಸಿದ. ವಿವಿಯ ಆವರಣದಲ್ಲಿ "ಬೀಫ್ ಫೆಸ್ಟಿವಲ್" ಆಯೋಜನೆ ಮಾಡಿದ್ದ. ಎಬಿವಿಪಿಯ ಹುಡುಗರ ಮೇಲೆ ಆತ ಹಲ್ಲೆ ಮಾಡಿದ್ದಕ್ಕೆ ಒಂದು ಕೇಸು ಕೂಡಾ ದಾಖಲಾಗಿತ್ತು. ಹೀಗೆ ಐದು ವರ್ಷಗಳಲ್ಲಿ ಆತನ ವ್ಯಕ್ತಿತ್ವದಲ್ಲಿ ಅಗಾಧ ಬದಲಾವಣೆಗಳಾದವು.

                "ಒಬ್ಬ ಮನುಷ್ಯನ ಮೌಲ್ಯವನ್ನು ಆತನ ಆ ಸಮಯದ ವ್ಯಕ್ತಿತ್ವ ಹಾಗೂ ಅದರ ಸನಿಹದ ಸಾಧ್ಯತೆಗಳೊಂದಿಗೆ ಗುರುತಿಸಲಾಗುತ್ತದೆ. ಮನುಷ್ಯನನ್ನು ಒಂದು ಮತವಾಗಿ, ಒಂದು ಸಂಖ್ಯೆಯಾಗಿ, ಒಂದು ವಸ್ತುವಾಗಿ ನೋಡಿಕೊಂಡಿದ್ದೇವೆಯೇ ಹೊರತು ಒಂದು ಮನಸ್ಸಾಗಿ ಅಲ್ಲ...." ಎಂದು ಆತ ಬರೆದಿಟ್ಟು ಹೋದ ವಾಕ್ಯ ಆತನ ಮನಸ್ಸಿನ ತುಮುಲವನ್ನು ಬಿಚ್ಚಿಡುತ್ತದೆ. ಅಂದರೆ ತನ್ನಲ್ಲಾದ ಬದಲಾವಣೆ ಸಹಜದ್ದಲ್ಲವೆಂದು ಆತನಿಗೆ ಅರಿವಾಗತೊಡಗಿತ್ತೇ? ದಲಿತರನ್ನು ಮೇಲ್ಜಾತಿಯವರು ಶತಮಾನಗಳಿಂದ ತುಳಿಯುತ್ತಿದ್ದಾರೆ; ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಅವೇ ಹಳಸಲು ಸಾಲುಗಳ ಹಿಂದಿನ ಮರ್ಮವನ್ನು ಆತ ಅರ್ಥ ಮಾಡಿಕೊಂಡಿದ್ದನೇ? ದಲಿತರಲ್ಲಿ ಮೇಲ್ಜಾತಿಯವರ ಬಗೆಗೆ ದ್ವೇಷವನ್ನು ತುಂಬಿ ಅವರನ್ನು ಶಾಶ್ವತವಾಗಿ ತಮ್ಮ ಮತಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುವ ಸೆಕ್ಯುಲರುಗಳ ಹುನ್ನಾರ ಆತನಿಗೆ ಅರಿವಾದಾಗ ಕಾಲ ಮಿಂಚಿ ಹೋಯಿತೆಂಬ ಭ್ರಮೆಯಲ್ಲಿ ಸಿಕ್ಕಿಬಿದ್ದನೇ? ಈ ವಿಷವರ್ತುಲದಿಂದ ಹೊರಬರುವ ಉಪಾಯ ಕಾಣದೆ ವಿಜ್ಞಾನದ ಲೇಖಕನಾಗುವ ತನ್ನ ಕನಸು ಕನಸಾಗಿಯೇ ಉಳಿಯಿತೆಂಬ ಹತಾಷೆ ಆತನಲ್ಲಿ ಮನೆಮಾಡಿತ್ತೇ? ಆತ ಬರೆದಿಟ್ಟ ಸಾಲುಗಳು ಇಂತಹ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.  ಸಮಾಜದ ಸ್ವಾಸ್ಥ್ಯ ಕೆಡಿಸುವ, ಯುವಕರ "ಬ್ರೈನ್ ವಾಷ್" ಮಾಡುವ, ಮನಸ್ಸನ್ನು ವಿಕಾರಗೊಳಿಸಿ ಗೊಂದಲಮಯವಾಗಿಸುವ ಸಿದ್ಧಾಂತವೊಂದು ಜೀವವೊಂದನ್ನು ಹೇಗೆ ಬಲಿ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆ ರೋಹಿತನ ಪ್ರಕರಣ.

             ಆದರೆ ರೋಹಿತ್ ವೆಮುಲಾನ ಚಟ್ಟಕ್ಕೆ ಕೊಟ್ಟ ಬೆಂಕಿಯಲ್ಲಿ ಈಗ ತಾನೆ ಯೂರೋಪ್ ಪ್ರವಾಸ ಮುಗಿಸಿ ಬಂದವರೆಲ್ಲಾ ಚಳಿ ಕಾಯಿಸುತ್ತಿದ್ದಾರೆ. ಮಾಲ್ಡಾದಲ್ಲಿ ಮತಾಂಧರು ಐಸಿಸ್ ಮಾದರಿಯ ದಾಳಿ ಎಸಗಿದಾಗ, ಪಠಾಣ್ ಕೋಟ್ ಭಯೋತ್ಪಾದಕ ದಾಳಿಯಾದಾಗ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಪ್ರಶಾಂತ್ ಪೂಜಾರಿಯಂತಹ ಹಲವು ಮುಗ್ಧರ ಹತ್ಯೆಯಾದಾಗ ತುಟಿಪಿಟಿಕ್ಕೆನ್ನದವರೆಲ್ಲಾ ಈಗ ಬಾಯಿಗೆ ಬಂದಂತೆ ಗಳಹುತ್ತಿದ್ದಾರೆ. ದೇಶಕ್ಕಾಗಿ ಪ್ರಾಣಕೊಟ್ಟ ಮಹಾದಿಕ್, ನಿರಂಜನರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ದಾರಿ ಮರೆತು ಹೋದವರೆಲ್ಲಾ ಈಗ ಹೈದರಾಬಾದಿನಲ್ಲಿ ಠಿಕಾಣಿ ಹೂಡಿದ್ದಾರೆ. ರೈತನೊಬ್ಬನ ಆತ್ಮಹತ್ಯೆಗೆ ಕಾರಣರಾಗಿ ಆತ ರೈತನೇ ಅಲ್ಲ ಎಂದು ಹೇಳಿ ಛೀಮಾರಿ ಹಾಕಿಕೊಂಡವರೆಲ್ಲಾ ರೋಹಿತನ ಜಾತಿ ಬದಲಾಯಿಸಿ ಆಗಿದೆ.

            ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಸರಕಾರ ಬಂದಾಗಿನಿಂದ ಅತೀ ಹೆಚ್ಚು "ಟಾರ್ಗೆಟ್" ಆಗುತ್ತಿರುವವರು ಸಚಿವೆ ಸ್ಮೃತಿ ಇರಾನಿ. ಟಾರ್ಗೆಟ್ ಮಾಡುತ್ತಿರುವವರು ಸೆಕ್ಯುಲರುಗಳು. ಅಂದರೆ ಸ್ಮೃತಿ ಇರಾನಿ ಸರಿಯಾದ ಪಥದಲ್ಲಿದ್ದಾರೆನ್ನುವುದೇ ಅರ್ಥ! ಸ್ಮೃತಿಯ ಕಾರ್ಯಗಳು "ಇಷ್ಟರವರೆಗೆ ತಾವು ನಡೆದದ್ದೇ ದಾರಿ. ಭಾರತ ಇರುವುದು ತಾವು ಕೂತು ಉಣ್ಣಲು" ಎಂದು ಭಾವಿಸಿದವರ ಮತಿಗೆಡಿಸುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ