ಪುಟಗಳು

ಸೋಮವಾರ, ಡಿಸೆಂಬರ್ 10, 2012

ಭಾರತ ದರ್ಶನ-೨೧              ಹಿಮಾಲಯದಲ್ಲಿ ಇನ್ನೂ ಅನೇಕ ಕ್ಷೇತ್ರಗಳಿವೆ. ಪಶುಪತಿನಾಥ, ಮುಕ್ತಿನಾಥ, ಸ್ವಯಂಭೂನಾಥ, ಮತ್ಸ್ಯೇಂದ್ರನಾಥ, ವೈಷ್ಣೋದೇವಿ, ಹೇಮಕುಂಡ...ಹೀಗೆ ಅಸಂಖ್ಯ ಪವಿತ್ರ ಕ್ಷೇತ್ರಗಳು. ಪಾರ್ವತಿಯ ಸಮ್ಮುಖದಲ್ಲಿ ಪರಶಿವ ಪಾರ್ಥನಿಗೆ ಪಾಶುಪತ ನೀಡಿದ ಪವಿತ್ರ ಕ್ಷೇತ್ರ ಪಶುಪತಿನಾಥ.

          ಕೇವಲ ತೀರ್ಥಕ್ಷೇತ್ರ ಮಾತ್ರವಲ್ಲ, ಹವಾಮಾನದ ದೃಷ್ಠಿಯಿಂದಲೂ ಹಿಮಾಲಯ ನಮಗೆ ಮಹದುಪಕಾರ ಮಾಡಿದೆ. ಕೆಲವೇ ವರ್ಷಗಳ ಹಿಂದೆ ರಷ್ಯಾದಲ್ಲಿ ಅಣುವಿಕಿರಣ ಸೋರಿಕೆ ಆದಾಗ ಭಾರತವನ್ನು ಆ ವಿಷಾನಿಲದಿಂದ ಕಾಪಾಡಿದ್ದು ಇದೇ ಹಿಮಾಲಯ. ದಕ್ಷಿಣ ಸಮುದ್ರದಿಂದ ಬರುವ ಗಾಳಿಯನ್ನು ಹಿಡಿದಿಟ್ಟು ವಿಪುಲ ಜಲವೃಷ್ಟಿಗೈಯ್ಯುತ್ತದೆ. ಹಿಮಾಲಯದಿಂದ ಹರಿದು ಬರುವ ನದಿಗಳಿಂದಾಗಿ ಭಾರತ ಸುಜಲಾಂ ಸುಫಲಾಂ ಆಗಿದೆ. ಹೀಗಾಗಿಯೇ ಹಿಮಾಲಯ ಅಂದ ತಕ್ಷಣ ಈ ನಾಡಿನ ಪ್ರತಿ ಮಗುವಿನ ವೀಣಾ ತಂತಿಯನ್ನು ಸ್ಪರ್ಷ ಮಾಡಿದ ಹಾಗಾಗುತ್ತೆ!

        ಹಿಮಾಲಯದಂತೆಯೇ ದಕ್ಷಿಣದ ರಾಜ್ಯಗಳಿಗೆ ಸಹಾಯಕವಾಗಿ ನಿಂತಿರುವುದು ಸಹ್ಯಾದ್ರಿ. ಕರ್ನಾಟಕಕ್ಕೆ ಸಹ್ಯಾದ್ರಿಯ ಕೊಡುಗೆ ಅಪಾರ. ನಮ್ಮ ದೇಶದ ಪಶ್ಚಿಮದಲ್ಲಿ ದಕ್ಷಿಣೋತ್ತರವಾಗಿ ಹಬ್ಬಿ ನಿಂತಿರುವ ಭವ್ಯ ಗಿರಿಗಹ್ವರ ಸಹ್ಯಾದ್ರಿ. ಕೊಂಕಣ ಸೀಮೆಯ ರತ್ನಾಗಿರಿಯಿಂದ ಮೌನ ತಪಸ್ವಿನಿ ಕನ್ಯಾಕುಮಾರಿಯವರೆಗೆ ತಲೆ ಎತ್ತಿ ನಿಂತ ಭವ್ಯ ಗಿರಿ ಪೀಠವಿದು. ಸಪ್ತಗಿರಿಗಳಲ್ಲೊಂದಾಗಿ ನಮಗೆ ಪ್ರಾತಸ್ಮರಣೀಯವಾಗಿರುವ ಇದು ಹಿಮಾಲಯದ ನಂತರದ ಅತೀ ದೊಡ್ಡ ಪರ್ವತ.

              ತಾಪಿ ನದೀ ತೀರದಿಂದ ಕುಮಾರಿ ಪೀಠದವರೆಗೆ ಹಬ್ಬಿರುವ ಈ ಮಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ತಾಪಿಯಿಂದ ದಕ್ಷಿಣಕ್ಕಿರುವ ೮೦೦ ಮೈಲು ಉದ್ದದ ಸೀಮೆಯೇ ಪ್ರಧಾನ ಸಹ್ಯಾದ್ರಿ. ನಂತರ ಸುಮಾರು ೧೬ ಮೈಲು ಉದ್ದದ ಪಾಲ್ಘಾಟ್ ಕಣಿವೆ. ನಂತರ ಸುಮಾರು ೨೦೦ ಮೈಲು ಉದ್ದದ ಮಲಯ ಪರ್ವತ ಶ್ರೇಣಿ. ಸಹ್ಯಾದ್ರಿ ಶಿಖರಗಳ ಸರಾಸರಿ ಎತ್ತರ ೪೦೦೦ ಅಡಿಗಳು. ಮಹಾರಾಷ್ಟ್ರದ ಕಳುಸುಬಾಯಿ ಅನ್ನೋ ಶಿಖರ ೫೪೨೦ ಅಡಿ ಎತ್ತರವಿದೆ. ಕರ್ನಾಟಕದಲ್ಲಿ ಸಹ್ಯಾದ್ರಿ ಶಿಖರಗಳು ಸುಮಾರು ಆರರಿಂದ ಎಂಟು ಸಾವಿರ ಅಡಿ ಎತ್ತರವಿದ್ದಾವೆ. ನೀಲಗಿರಿ ನಡುವಿನ ದೊಡ್ಡ ಬೆಟ್ಟ ೮೧೨೫ ಅಡಿ ಎತ್ತರವಿದೆ.

            ಸಹ್ಯಾದ್ರಿಯ ಬ್ರಹ್ಮಗಿರಿಯ ತ್ರ್ಯಂಬಕ ಕ್ಷೇತ್ರದಲ್ಲಿ ಗೌತಮ ಮುನಿಯ ತಪಸ್ಸಿನಿಂದಾಗಿ ಗೋದಾವರಿ ಜನಿಸಿದ್ದಾಳೆ. ಕೃಷ್ಣೆ, ಭೀಮೆಯರೂ ಸಹ್ಯಾದ್ರಿಯ ಸಲಿಲೆಗಳೇ. ಇವುಗಳೊಂದಿಗೆ ತುಂಗಾ, ಭದ್ರಾ, ಕಾಳಿ, ಶರಾವತಿ, ವರದಾ, ಕಾವೇರಿ, ಘಟಪ್ರಭಾ, ಮಲಪ್ರಭಾ, ಗಂಗಾವತಿ, ವೇದಾವತಿ, ವಾಶಿಷ್ಠಿ, ನೇತ್ರ, ನಂದಿನಿ, ನಳಿನಿ, ಸೀತಾ, ಕುಮಾರಧಾರ, ಮಾಲತಿ, ಅರ್ಕಾವತಿ, ಮಾಂಡವಿ, ಹೇಮಾ, ಕಪಿಲಾ, ಸುವರ್ಣಾಮುಖಿ...ಎಲ್ಲವೂ ಸಹ್ಯಾದ್ರಿಯ ವರಪ್ರಸಾದ. ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ಆರು ಸಹ್ಯಾದ್ರಿಯ ಮಡಿಲಲ್ಲಿವೆ.

         ಇದರ ಗರ್ಭದಲ್ಲೇ ಪಂಚವಟೀ ಇದೆ.  ಅದೇ ಈಗಿನ ನಾಸಿಕ್. ರಾಮ ಸೀತಾ, ಲಕ್ಷ್ಮಣ ಸಮೇತನಾಗಿ ಹದಿನಾಲ್ಕು ವರ್ಷ ವನವಾಸದ ಬಹುಪಾಲು ಭಾಗವನ್ನು ಕಳೆದ ಪುಣ್ಯಭೂಮಿಯಿದು. ನಾಸಿಕ ಅಂದರೆ ಮೂಗು. ರಾಮನಾಜ್ಞೆಯ ಮೇರೆಗೆ ಮರ್ಯಾದೆ ಮೀರಿ ವ್ಯವಹರಿಸಿದ ಹೆಣ್ಣು, ರಾಕ್ಷಸಿ, ಶೂರ್ಪನಖಿಯ ಮೂಗನ್ನು ಸೌಮಿತ್ರಿ ಕತ್ತರಿಸಿದ ಜಾಗವಿದು. ತನ್ಮೂಲಕ ಕೋಪಗೊಂಡು ಎರಗಿದ ಖರ ದೂಷಣರನ್ನು ರಾಮ ಯಮಪುರಿಗಟ್ಟಿದ ಕ್ಷೇತ್ರವಿದು. ಮಾಯಾಜಿಂಕೆಯಾಗಿ ಬಂದ ಮಾರೀಚ ಮುಕ್ತಿ ಹೊಂದಿದ ಜಾಗ. ಲೋಕ ಮಾತೆ ಸೀತೆಯನ್ನು ಖಳ ರಾವಣ ಅಪಹರಿಸಿ ರಾಮಾಯಣಕ್ಕೆ ತಿರುವು ನೀಡಿದ ಸ್ಥಳ. ದಾಟಬಾರದ, ದಾಟಿದಲ್ಲಿ ಅಪಾಯ ಖಚಿತವಾದ ಲಕ್ಷ್ಮಣ ರೇಖೆ ಸೃಷ್ಠಿಯಾದ ಜಾಗವಿದು. ಮಾತೆ ಸೀತೆಯ ಮಾನ ರಕ್ಷಣೆಗೆ ಪಕ್ಷಿರಾಜ ಜಟಾಯು ಪ್ರಾಣ ಪಣವಿಟ್ಟು ಹೋರಾಡಿದ ಪವಿತ್ರ ಭೂಮಿ. ಭೂಮಿಗಿಳಿದ ಭಗವಂತ ಪತ್ನಿಯನ್ನು ಕಳಕೊಂಡು ಕಣ್ಣೀರ ಕೋಡಿ ಹರಿಸಿದ ಜಾಗ.

            ಇಲ್ಲೇ ಹತ್ತಿರದಲ್ಲಿ ಗೌತಮರ ತಪೋಭೂಮಿ ಇದೆ. ಗೋದೆಯ ಉಗಮ ಇಲ್ಲೇ. ಶಿವ ತ್ರಯಂಬಕೇಶ್ವರನಾಗಿ ನೆಲೆ ನಿಂತ ಸ್ಥಳ. ಕಟಿಯಲ್ಲಿ ಕರವಿಟ್ಟು ಇಟ್ಟಿಗೆಯ ಮೇಲೆ ನಿಂತ ಪಾಂಡುರಂಗನ ಪಂಡರಾಪುರ ಚಂದ್ರಭಾಗ ತೀರದಲ್ಲಿದೆ. ಗೋದೆಯ ದಡದಲ್ಲಿ ಪ್ರತಿಷ್ಠಾನಪುರ ಈಗಿನ ಪೈಠಣ್ ಇದೆ. ಶಕಕರ್ತ ಶಾಲಿವಾಹನನ ರಾಜಧಾನಿ ಇದು. ಎಂಟು ಶತಮಾನಗಳ ಕಾಲ ಸಾಗರೋತ್ತರವಾಗಿ ಭಾರತದ ಸಂಸ್ಕೃತಿಯನ್ನು ಹಬ್ಬಿಸಿ ಮೆರೆಯಿತದು. ಸಮರ್ಥ ರಾಮದಾಸರ ತಪೋಭೂಮಿ ಸಜ್ಜನಘಢ, ಕೊಲ್ಹಾಪುರದ ಮಹಾಲಕ್ಷ್ಮಿ, ಅಜಂತಾ, ಎಲ್ಲೋರಾ, ಅಷ್ಟವಿನಾಯಕ ಕ್ಷೇತ್ರಗಳು ಹೀಗೆ ಅಸಂಖ್ಯ ಕ್ಷೇತ್ರಗಳು ಸಹ್ಯಾದ್ರಿಯ ಗರ್ಭದಲ್ಲಿವೆ. ಸಹ್ಯಾದ್ರಿಯ ತಪ್ಪಲ ಬಸವನ ಬಾಗೇವಾಡಿಯಲ್ಲಿ "ಲಿಂಗ ಮಧ್ಯೇ ಜಗತ್ಸರ್ವಂ ಸತ್ಯಂ ಶಿವಂ ಸುಂದರಂ. ಕಾಯಕವೇ ಕೈಲಾಸ " ಎಂದ ಅಣ್ಣ ಬಸವಣ್ಣನ ಜನನವಾಯಿತು.

4 ಕಾಮೆಂಟ್‌ಗಳು: