ಪುಟಗಳು

ಶನಿವಾರ, ಡಿಸೆಂಬರ್ 15, 2012

ಭಾರತ ದರ್ಶನ-೨೨                       ಎರಡೂವರೆ ಶತಮಾನಗಳ ಕಾಲ ಜಗತ್ತಿನ ಕಣ್ಣು ಕೋರೈಸಿದ ಸ್ವರ್ಣಸಾಮ್ರಾಜ್ಯ ವಿಜಯನಗರದ ಹಂಪೆ. ಸಹ್ಯಾದ್ರಿಯ ಗರ್ಭದಲ್ಲಿ ಹೊಸಪೇಟೆಯ ಬಳಿ ಈ ಐತಿಹಾಸಿಕ ಸ್ಥಳವಿದೆ. ೧೫೬೫ರಲ್ಲಿ ವಿಜಯನಗರದ ಪತನವಾದಾಗ ವಿರೋಧಿ ಮತಾಂಧರು ನಡೆಸಿದ ಕೃತ್ಯ ಎಂತಹ ಕ್ರೂರಿಗಳನ್ನು ಕೂಡಾ ನಾಚಿಸುವಂತಹದ್ದು. ಆಗ ನಡೆದ ಮನುಕುಲದ ಮನಕಲಕುವ ಲೂಟಿ ಮತ್ತು ಪೈಶಾಚಿಕ ಕೃತ್ಯಗಳಿಂದ ವಿರೂಪಾಕ್ಷ ಮಂದಿರ ಅದೃಷ್ಟವಶಾತ್ ಪಾರಾಯಿತು. ಪುಣ್ಯ ಸಲಿಲೆ ತುಂಗಭದ್ರೆ ವಿರೂಪಾಕ್ಷನ ಪಾದ ಪ್ರೋಕ್ಷಿಸುತ್ತಿದ್ದಾಳೆ.

                       ರಾಮಾಯಣದ ಸುವರ್ಣ ಸಂಪುಟಕ್ಕೆ ಮೆರುಗು ನೀಡಿದ ತಾಣ ಹಂಪೆ. ಮತಂಗ ಮುನಿಯ ಆಶ್ರಮ ಇಲ್ಲಿನ ಪಂಪಾ ಸರೋವರದ ಸಮೀಪದಲ್ಲಿತ್ತು. ಮಹಾಪರಾಕ್ರಮಿ, ರಾವಣನನ್ನೇ ನಡುಗಿಸಿದ ವಾನರೇಂದ್ರ ವಾಲಿಯ ಕಿಶ್ಕಿಂಧ ಇರುವುದು ಇಲ್ಲೇ. ಜಿತೇಂದ್ರಿಯ, ರಾಮಬಂಟ, ರಾಮಾಯಣದ ಅನರ್ಘ್ಯರತ್ನ ಹನುಮನ ಅಂಜನಾದ್ರಿಯೂ ಇಲ್ಲೇ ಇದೆ. ವಾಲಿಯಿಂದ ತಿರಸ್ಕರಿಸಲ್ಪಟ್ಟು, ಹೆಂಡತಿಯನ್ನು ಕಳೆದುಕೊಂಡ ಸುಗ್ರೀವ ದುಃಖದಲ್ಲಿದ್ದ ಸ್ಥಳ ಋಷ್ಯಮೂಕ ಇದೇ ಪರಿಸರದಲ್ಲಿದೆ. ಇಲ್ಲೇ ಪಂಪಾ ಸರೋವರದ ಬಳಿ ರಾಮಾಂಜನೇಯರ ಸಮ್ಮಿಲನವಾಯಿತು. ಹನುಮ ಅಂದಿನಿಂದ ಪುರುಷೋತ್ತಮನ ದಾಸನಾದ. ಮಾತ್ರವಲ್ಲ ಅಗ್ನಿಸಾಕ್ಷಿಯಾಗಿ ರಾಮ ಸುಗ್ರೀವರ ಸಖ್ಯ ಮಾಡಿಸಿದ. ಶ್ರೀರಾಮನಿಗಾಗಿ ವರುಷಗಳ ಪರ್ಯಂತ ಕಾಯುತ್ತ ಅವನಿಗಾಗಿ ಅವನದೇ ಧ್ಯಾನದಲ್ಲಿ ಆತ್ಮಯಜ್ಞ ಮಾಡಿದ ಶಬರಿಯ ಪವಿತ್ರ ತಾಣವಿದು. ಸಪ್ತಸಾಲಭೇದ, ವಾಲಿವಧೆ ಮುಂತಾದ ಪ್ರಸಂಗ ನಡೆದ ಸ್ಥಳ. ವಿರೂಪಾಕ್ಷ, ವಿಜಯ ವಿಠ್ಠಲರು ನೆಲೆ ನಿಂತ ಅದ್ಭುತ ಸಮನ್ವಯ ಕ್ಷೇತ್ರ.

                        ಇಂತಹ ಪವಿತ್ರ ಸ್ಥಳದಲ್ಲಿ ಹರಿಹರ ಬುಕ್ಕ ದೇವರು ಮಹಾನ್ ತಪಸ್ವಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಶಾಲ ಸಾಮ್ರಾಜ್ಯವನ್ನು ಕಟ್ಟಿದರು. ಈ ಸಾಮ್ರಾಜ್ಯ ವಿಜಯಶಾಲಿ ಹಿಂದುತ್ವದ ಧ್ವಜವನ್ನು ಬಾನೆತ್ತರದಲ್ಲಿ ಮುಕ್ತವಾಗಿ ಹಾರುವಂತೆ ಮಾಡಿತು. ಮುಂದೆ ಎರಡೂವರೆ ಶತಮಾನಗಳ ಕಾಲ ಈ ಪ್ರಭುತ್ವ ಧರ್ಮವೈರಿಗಳಿಗೆ ದಕ್ಷಿಣ ಭಾರತದಲ್ಲಿ ತಲೆ ಎತ್ತಲೂ ಅವಕಾಶ ಕೊಡಲಿಲ್ಲ. ಇಡೀ ರಾಷ್ಟ್ರವನ್ನು ನುಂಗಲಿಕ್ಕೆ ಕಾಡ್ಗಿಚ್ಚಿನಂತೆ ಬಂದ ಇಸ್ಲಾಮಿ ಮತಾಂಧರನ್ನು ಸಾಮ್ರಾಜ್ಯ ಚತುಃಸೀಮೆಯ ಹೊರಗೇ ಎದುರಿಸಿತು. ಇವತ್ತು ದಕ್ಷಿಣದಲ್ಲಿ ಉಳಿದಿರಬಹುದಾದ ಹಿಂದುತ್ವ, ಧರ್ಮಪೀಠಗಳು, ಸ್ಥಾಪತ್ಯ, ಕಲಾವೈಭವಗಳಿಗೆ ಇಡೀ ರಾಷ್ಟ್ರ ವಿಜಯನಗರ ಸಾಮ್ರಾಜ್ಯಕ್ಕೆ ಋಣಿಯಾಗಿರಬೇಕು.

                              ಸಹ್ಯಾದ್ರಿ ಗರ್ಭದ ಮಂಡ್ಯದ ಮೇಲುಕೋಟೆ ರಾಮಾನುಜಾಚಾರ್ಯರ ಲೀಲಾಭೂಮಿ. ಅವರು ಚೋಳರಾಜನ ಕಿರುಕುಳದಿಂದ ನೊಂದು ಮೇಲುಕೋಟೆಗೆ ಬಂದವರು. ೧೩ ವರ್ಷಗಳ ಕಾಲ ಮೇಲುಕೋಟೆ ಅವರಿಗೆ ಆಶ್ರಯ ಕೊಟ್ಟಿತು. ಅಲ್ಲೇ ಅವರು ಚೆಲುವ ನಾರಾಯಣನನ್ನು ಪ್ರತಿಷ್ಠಾಪಿಸಿದರು. ಅವರ ಸಂಪರ್ಕದಿಂದ ಜೈನ ದೊರೆ ಬಿಟ್ಟಿದೇವ ವಿಷ್ಣುವರ್ಧನನಾದ. ಆ ದೊರೆ ವಿಷ್ಣುವರ್ಧನ ಬೇಲೂರು ಚೆನ್ನಕೇಶವ ದೇವಸ್ಥಾನವನ್ನು ಕಟ್ಟಿಸಿದ. ಶ್ರೀ ರಾಮಾನುಜರು ಸಾಮಾಜಿಕ ಸಾಮರಸ್ಯ ಮತ್ತು ದಲಿತರನ್ನು ಮೇಲಕ್ಕೆತ್ತಲು ಒತ್ತಾಸೆ ನೀಡಿದರು. ಭಾರ್ಗವ ಕ್ಷೇತ್ರವಾದ ಉಡುಪಿ ಕೃಷ್ಣನ ಬೀಡು. ದ್ವೈತ ಪ್ರತಿಪಾದಕ ಮಧ್ವರು ಉಡುಪಿಯ ಪಾಜಕದಲ್ಲಿ ಜನಿಸಿದರು. ಅವರಿಂದೊದಗಿದ ಅಷ್ಠಮಠಗಳು ಸಂಸ್ಕೃತಿಯ ಉಳಿಸಲೋಸುಗ ಶ್ರಮಿಸುತ್ತಿವೆ.

                      ಸಹ್ಯಾದ್ರಿಯ ದಕ್ಷಿಣಭಾಗವನ್ನು ಮಲಯಾ ಅಂತ ಕರೆಯುತ್ತೇವೆ. ಅದು ಶ್ರೀಗಂಧದ ನೆಲೆವೀಡು. ಆದ್ವೈತ, ವೇದಾಂತಗಳ ಮೂಲಕ ಬೌಧ್ಧ ಆಕ್ರಮಣದಿಂದ ಹಿಂದು ಧರ್ಮವನ್ನು ಕಾಪಾಡಿ, ಧರ್ಮದ ಪುನರುತ್ಥಾನ ಮಾಡಿ, ಭಾರತದಾದ್ಯಂತ ಸಂಚರಿಸಿ ಅಲ್ಲಲ್ಲಿ ಶಕ್ತಿ, ಹರಿ, ಹರ ಪೀಠಗಳನ್ನು ನಿರ್ಮಿಸಿ ಭಾರತವನ್ನು ಸಮನ್ವಯ ಹಾಗೂ ಏಕತ್ರಗೊಳಿಸಿದ ಶಂಕರಾಚಾರ್ಯರು ಮಲಯಾದ ಗರ್ಭವಾದ ಕಾಲಟಿಯಲ್ಲೇ ಜನಿಸಿದರು. ಇಲ್ಲಿನ ಇನ್ನೊಂದು ಕ್ಷೇತ್ರ ವರ್ಕಳ. ನಾರಾಯಣ ಗುರುಗಳ ಕರ್ಮಭೂಮಿ. ವಿಕೃತ ವರ್ಣವ್ಯವಸ್ಥೆಗೆ ಸಿಲುಕಿ ನರಳುತ್ತಿದ್ದ ಸಮಾಜವನ್ನು ಧರ್ಮ, ಶಿಕ್ಷಣ, ಸಂಸ್ಕಾರ ನೀಡಿ ಮೇಲಕ್ಕೆತ್ತಿ ಕೇರಳವನ್ನು ಕಾಪಾಡಿದ ಮಹಾಪುರುಷ ಆತ. ಮಲಯಾದ ಗರ್ಭದಲ್ಲೇ ಇರುವ ಬೆಟ್ಟ ಶಬರಿಮಲೆ. ರಾಮನಿಗಾಗಿ ಆತ್ಮಯಜ್ಣ್ಯ ಮಾಡಿದ ಮಾತೆ ಶಬರಿಯ ಪಾದ ಸ್ಪರ್ಷದಿಂದ ಪುನೀತವಾದ ಇದರ ನೆತ್ತಿಯಲ್ಲೇ ಹರಿಹರ ಸುತ ಅಯ್ಯಪ್ಪನ ನೆಲೆ.

( ಮುಂದಿನ ಭಾಗ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜನ ಹುಟ್ಟು, ಕೆಚ್ಚು, ಹೆಚ್ಚುಗಳಿಗೆ ಸಾಕ್ಷಿಯಾದ ಸಹ್ಯಾದ್ರಿಯ ಸೀಮೆಯ ಬಗ್ಗೆ.)

2 ಕಾಮೆಂಟ್‌ಗಳು: