ಪುಟಗಳು

ಶನಿವಾರ, ಜನವರಿ 19, 2013

ಭಾರತ ದರ್ಶನ - ೨೫

ಭಾರತ ದರ್ಶನ - ೨೫:

                      ಗಂಗೆ ಅಂದರೆ ನಮಗೆ ಮುಕ್ತಿ, ಮೋಕ್ಷಗಳ ಸಂಕೇತ. ಭಕ್ತಿಯ ಪ್ರತೀಕ. ಅವಳು ಈ ದೇಶದ ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ಬದುಕಿನ ಕೇಂದ್ರವಾಗಿದ್ದಾಳೆ.  ಜೀವನದಲ್ಲಿ ಒಮ್ಮೆಯಾದರೂ ಗಂಗೆಯನ್ನು ನೋಡಬೇಕು ಅಥವಾ ಆ ತೀರ್ಥವನ್ನು ಕುಡಿಯಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಇರುವ ಮಹದಭಿಲಾಷೆ.  ಗಂಗೆಯನ್ನು ದಾಟೋದು ಅಂದರೆ ಜನನ ಮರಣಗಳ ಚಕ್ರವನ್ನು ದಾಟೋದು ಈ ಭವಬಂಧನದಿಂದ ಮುಕ್ತಿ ಹೊಂದುವುದು ಎಂದರ್ಥ. ಗಂಗಾಜಲವನ್ನು ಅಮೃತ ಎಂದು ತಿಳಿದ ದೇಶ ನಮ್ಮದು. ಇದು ಮೂಢ ನಂಬಿಕೆ ಅಲ್ಲ. ವಾಗ್ಭಟ ತನ್ನ ಅಷ್ಟಾಂಗ ಹೃದಯದಲ್ಲಿ ಗಂಗಾಜಲ ಅಮೃತಮಯವಾದ ಆರೋಗ್ಯಕರವಾದ ಅಂಶಗಳನ್ನು ಹೊಂದಿದೆ ಅಂತ ಸಾರಿ ಸಾರಿ ಹೇಳಿದ್ದಾನೆ.ಕೊಳಕಾದ ನೀರನ್ನು ಶುದ್ಧೀಕರಿಸಿಕೊಂಡು ಮತ್ತೆ ಪುನಶ್ಚೇತನಗೊಳಿಸಬಲ್ಲ ಗುಣ ಗಂಗಾಜಲದಲ್ಲಿದೆ ಅಂತ ಆತ ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾನೆ. ನಮ್ಮೆಲ್ಲಾ ಪ್ರಾಚೀನ ಸಾಹಿತ್ಯಗಳಲ್ಲಿ ಗಂಗೆ ವರ್ಣಿತಳಾಗಿದ್ದಾಳೆ. ಇದರ ಒಂದು ಗುಟುಕು ನೀರನ್ನು ಸೇವಿಸಿದವರ ಹತ್ತಿರ ಯಮದೂತರು ಸುಳಿಯೋದಿಲ್ಲವಂತೆ. ಅಂದ ಮೇಲೆ ಇದರ ಪ್ರಭಾವ ಎಷ್ಟಿರಬೇಕು?

                      ನಮ್ಮ ಪಾಲಿಗೆ ಗಂಗೆ ಬರಿ ನೀರಲ್ಲ. ಅದು ನಮ್ಮ ನಾಡಿನ ಉಸಿರು. ಆಕೆ ನಮ್ಮ ಮೈ ಮನಗಳನ್ನು ಪಾವನಗೊಳಿಸುವವಳು. ದಿವ್ಯ ರಥವಾಹಿನಿ. ಮೂರು ಲೋಕದಲ್ಲಿ ಹರಿಯುವವಳು. ಭುವಿಯಲ್ಲಿ ಗಂಗೆಯಾಗಿ, ಸುರಲೋಕದಲ್ಲಿ ಅಲಕೆಯಾಗಿ, ಪಿತೃ ಲೋಕದಲ್ಲಿ ವೈತರಣಿ ಅಂತ ಕರೆಯಲ್ಪಟ್ಟಿದ್ದಾಳೆ. ಅದಕ್ಕಾಗಿ ಅವಳನ್ನು ತ್ರಿಪಥಗಾ ಅಂತಾ ಕರೆಯುತ್ತೇವೆ. ಗಂಗೆಯ ಸ್ಮರಣ ಮಾತ್ರದಿಂದ ಶಮನವಾಗುತ್ತೆ ಪಾಪ. ದರ್ಶನದಿಂದ ಸಾರ್ಥಕವಾಗುತ್ತೆ ಕಣ್ಣು. ಬದುಕು ಮಂಗಲಮಯವಾಗುತ್ತೆ. ಗಂಗೆಗೆ ಸಮನಾದ ತೀರ್ಥವಿಲ್ಲ, ಕೇಶವನಿಗೆ ಹಿರಿದಾದ ದೇವರಿಲ್ಲ ಎನ್ನುವುದು ಮಹಾಭಾರತದ ಒಂದು ಮಾತು. ಗೀತೆಯಲ್ಲಂತೂ ಕೃಷ್ಣ ನದಿಗಳಲ್ಲಿ ನಾನು ಜಾಹ್ನವಿ ಅಂತ ಘೋಷಣೆ ಮಾಡಿದ್ದಾನೆ.

                 ಗಂಗೆಯ ಬಗ್ಗೆ ಈ ಶೃದ್ಧೆ ಕೇವಲ ನಮ್ಮ ದೇಶದಲ್ಲಿ ಮಾತ್ರ ಇದೆ ಅಂತ ಭಾವಿಸಬೇಡಿ. ಇಡೀ ಜಗತ್ತಿನಲ್ಲಿ ಗಂಗೆಯ ಬಗ್ಗೆ ಅಸದೃಶವಾದ ಭಾವನೆಯನ್ನು ನಾವು ನೋಡಬಹುದು. ಇತಿಹಾಸದಲ್ಲಿ ಹುಚ್ಚು ದೊರೆ ಅಂತ ವರ್ಣಿಸಲ್ಪಟ್ಟ ಮೊಹಮದ್ ಬಿನ್ ತುಘಲಕ್ ಸ್ನಾನಕ್ಕೆ, ಪಾನಕ್ಕೆ ಗಂಗಾಜಲ ಬಳಸುತ್ತಿದ್ದ. ಗಂಗೆಯ ನೀರನ್ನು ದೌಲತಾಬಾದ್ಗೆ ತರಲು ನಲವತ್ತು ದಿನಗಳು ಹಿಡಿಯುತ್ತಿದ್ದವು. ಅರಮನೆಯಲ್ಲಿರಲಿ, ಪ್ರವಾಸದಲ್ಲೇ ಇರಲಿ ಆತ ಗಂಗೆಯ ನೀರನ್ನೇ ಬಳಸುತ್ತಿದ್ದ. ಮತಾಂಧ, ಹಿಂದೂದ್ವೇಷಿ ಔರಂಗಜೇಬ ಗಂಗಾವೃತವನ್ನು ಮಾಡಿಸಿದ್ದ. ಗಂಗೆಯ ಬಗ್ಗೆ ಅವನಿಗೆ ಅಷ್ಟೊಂದು ಶೃದ್ಧೆ ಇತ್ತು. ಈ ಮಾತನ್ನು ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಫ್ರೆಂಚ್ ಇತಿಹಾಸಕಾರ ಬಾರ್ನಿಯರ್ ಬರೆದಿಟ್ಟಿದ್ದಾನೆ. ೧೭ನೇ ಶತಮಾನದ ಡಚ್ ಪ್ರವಾಸಿ ಫ್ರಾನ್ಸಿಸ್ಕೋ ಪೆಲ್ಸಾರ್ಟ್ಸ್ ಹೇಳುತ್ತಾನೆ " ಗಂಗಾಜಲ ನೂರುವರ್ಷ ಇಟ್ಟರೂ ಕೊಳೆಯೋದಿಲ್ಲ. ಹುಳುಗಳು ಹುಟ್ಟುವುದಿಲ್ಲ."

ಗಂಗೆ ಭುವಿ ಸೇರಿದ ಬಗೆ ಹೇಗೆ?
                    ಅಯೋಧ್ಯಾ ಸಾಮ್ರಾಟ ಸಗರ ಅಶ್ವಮೇಧ ಮಾಡುತ್ತಿದ್ದಾಗ ಇಂದ್ರ ಕುದುರೆಯನ್ನು ಕದ್ದು ಬಿಟ್ಟ. ಸಗರ ತನ್ನ ೬೦ ಸಾವಿರ ಮಕ್ಕಳಿಗೆ ಹಯವನ್ನು ಎಲ್ಲಿದ್ದರೂ ಹುಡುಕಿ ತರುವಂತೆ ಆಜ್ಞಾಪಿಸಿದ. ಸಗರ ಪುತ್ರರು ಹರಿಯನ್ನರಸುತ್ತಾ ಪಾತಾಳಕ್ಕೂ ಹೋದರು. ಅಲ್ಲಿ ಧ್ಯಾನಮಗ್ನ ಕಪಿಲನ ಪಕ್ಕ ಅಶ್ವ ನಿಂತಿತ್ತು. ಸಗರಪುತ್ರರು ಮುನಿಯೇ ಕದ್ದಿರಬೇಕೆಂದು ಅವನ ಮೇಲೆರಗಿದರು. ಕಣ್ತೆರೆದ ಕಪಿಲ ಕಿಡಿಯಾದ. ಸಗರ ಪುತ್ರರು ಹಿಡಿ ಬೂದಿಯಾದರು. ಚಿಂತಿತನಾದ ಸಗರ ಮೊಮ್ಮಗ ಅಂಶುಮಂತನನ್ನು ಕಳುಹಿಸಿದ. ಅವನೂ ಎಲ್ಲೆಡೆ ಸುತ್ತಿ ಪಾತಾಳಕ್ಕೆ ಬಂದು ನಡೆದ ಸಂಗತಿ ತಿಳಿದ. ಪಿತೃಗಳಿಗೆ ತಿಲಾಂಜಲಿ ನೀಡಲು ನೀರಿಲ್ಲ. ಆಗ ಸಗರಪುತ್ರರ ಸೋದರಮಾವ ಗರುಡ ಪ್ರತ್ಯಕ್ಷನಾಗಿ ಅಂಶುಮಂತನನ್ನು ಸಂತೈಸಿ " ಇದು ವಿಧಿಲೀಲೆ. ಮೊದಲು ಹಯದೊಂದಿಗೆ ಅಯೋಧ್ಯೆಗೆ ಪಯಣಿಸಿ ಯಜ್ಞವನ್ನು ಪೂರೈಸು. ನಂತರ ಗಂಗೆಯನ್ನು ಒಲಿಸಿ ಭೂಮಿಗೆ ಕರೆತಂದು ಅಂಜಲಿ ನೀಡು" ಎಂದ. ಯಜ್ಞ ಸಾಂಗವಾಗಿ ನೆರವೇರಿತು. ಸಗರ ದುಃಖದಲ್ಲೇ ಸ್ವರ್ಗವಾಸಿಯಾದ. ಅಂಶುಮಂತ ಮಗ ದಿಲೀಪನಿಗೆ ರಾಜ್ಯವನ್ನೊಪ್ಪಿಸಿ ಹಿಮಾಲಯ ಸೇರಿ ತಪಸ್ಸನ್ನಾಚರಿಸಿದ. ಗಂಗೆ ಬರಲೇ ಇಲ್ಲ. ಹಣ್ಣಾದ ಅಂಶುಮಂತ ಭಗವಂತನ ಅಂಶವಾದ. ಈಗ ದಿಲೀಪನೂ ಮಗ ಭಗೀರಥನಿಗೆ ಪಟ್ಟ ಕಟ್ಟಿ ತಂದೆಯ ಕೆಲಸ ಮುಂದುವರೆಸಿದ. ಗಂಗೆಯನ್ನು ತರಲಾಗದೆ ತಂದೆಯ ಹಾದಿ ಹಿಡಿದ.

                 ಭಗೀರಥ ಹಿಮಾಲಯದ ಗೋಕರ್ಣ ಎಂಬ ದುರ್ಗಮ ಸ್ಥಳದಲ್ಲಿ ತಪಸ್ಸನ್ನಾಚರಿಸಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ಗಂಗೆಯ ರಭಸ ತಡೆಯಲು ಶಿವನನ್ನು ಒಲಿಸಿಕೋ. ಇಲ್ಲದಿದ್ದರೆ ಭೂಮಿ ಛಿದ್ರವಾದೀತು ಎಂದು ಸಲಹೆ ನೀಡಿದ. ಭಗೀರಥನ ತಪಸ್ಸಿಗೆ ಮೆಚ್ಚಿದ ಶಿವ ಗಂಗಾಧರನಾಗಲು ಒಪ್ಪಿದ. ಗಂಗೆ ಬಾನಿನಿಂದ ಭೂಮಿಗೆ ಧುಮುಕಿದಳು. ಶಿವನನ್ನು ಕೊಚ್ಚಿಕೊಂಡು ಪಾತಾಳಕ್ಕೆ ಹೋಗುವ ಇಚ್ಛೆ ಅವಳದು. ಅವಳ ಹಮ್ಮು ತಿಳಿದ ಶಿವ ತನ್ನ ಜಟೆಯಲ್ಲಿ ಬಂಧಿಸಿಟ್ಟ. ಭಗೀರಥನಿಗೋ ಇನ್ನೊಂದು ಸಮಸ್ಯೆ. ಪುನಃ ಶಿವನನ್ನು ಪ್ರಾರ್ಥಿಸಿದ. ಶಿವ ಮೆಚ್ಚಿ ತನ್ನ ಜಟೆಯ ಏಳು ಸಂಧಿಗಳಿಂದ ಗಂಗೆಯನ್ನು ಹರಿಯಬಿಟ್ಟ. ಸಪ್ತಗಂಗೆಗಳವು- ಪೂರ್ವಕ್ಕೆ ಹ್ಲಾದಿನೀ, ಪಾವನೀ, ನಳಿನೀ ಮತ್ತು ಪಶ್ಚಿಮಕ್ಕೆ ಸುಚಕ್ಷು, ಸೀತಾ, ಸಿಂಧು. ಏಳನೆಯ ಕವಲು ಬಾಗೀರಥಿಯಾಗಿ ಭಗೀರಥನ ಜೊತೆ ದಕ್ಷಿಣಕ್ಕೆ ಬಂತು. ಆದರಿನ್ನೂ ಆಕೆಯ ಅಹಂ ಕಮ್ಮಿಯಾಗಿರಲಿಲ್ಲ. ದಾರಿಯಲ್ಲಿ ಜಹ್ನು ಋಷ್ಯಾಶ್ರಮವನ್ನು ಕೊಚ್ಚಿ ಹರಿದಳು. ಮುನಿದ ಮುನಿ ಯೋಗಬಲದಿಂದ ಭಾಗೀರಥಿಯನ್ನು ಕುಡಿದೇಬಿಟ್ಟ. ಭಗೀರಥ ಪ್ರಾರ್ಥಿಸಲು ಮನ್ನಿಸಿ ಕಿವಿಯಿಂದ ಅವಳನ್ನು ಹೊರಗೆ ಬಿಟ್ಟ. ಹೀಗೆ ಜಹ್ನುವಿನ ಒಡಲು ಸೇರಿ ಹೊರಬಂದು ಜಾಹ್ನವಿಯಾದಳು. ಮುಂದೆ ಪಾತಾಳಕ್ಕಿಳಿದು ಸಗರ ಪುತ್ರರ ಭಸ್ಮವನ್ನು ತೋಯಿಸಿ ಸದ್ಗತಿ ಕರುಣಿಸಿದಳು.

                   ಗಂಗೆ ಸಮುದ್ರ ಮಟ್ಟದಿಂದ ೧೩,೮೦೦ ಅಡಿಗಳಷ್ಟು ಎತ್ತರದಲ್ಲಿ ಗಂಗೋತ್ರಿಯ ಬಳಿಯ ಗೋಮುಖದಿಂದ ಇಳಿಯುತ್ತಾಳೆ. ಅಲ್ಲಿ ಗಂಗೆ ಶಿವ ಭಗೀರಥರ ವಿಗ್ರಹಗಳಿವೆ. ಗಂಗೆಗೆ ಹಲವು ಹೆಸರುಗಳು. ಬದರಿಯಿಂದ ಹರಿದು ಬರುವಾಗ ಅಲಕನಂದೆಯಾಗಿ, ಕೇದಾರದಿಂದ ಮಂದಾಕಿನಿ, ಗಂಗೋತ್ರಿಯಿಂದ ಭಾಗೀರಥಿ. ದೇವಪ್ರಯಾಗದಲ್ಲಿ ಮಂದಾಕಿನೀ, ಮಹಾಗಂಗಾ, ರಾಮಗಂಗಾ, ಕೃಷ್ಣಗಂಗಾ, ವಿಷ್ಣುಗಂಗಾ, ಕಾಳಿಗಂಗಾ, ಮುಂತಾದ ಎಲ್ಲ ಕವಲುಗಳು ಒಂದುಗೂಡುತ್ತವೆ. ಪರ್ವತಗಳ ಕೊರಕಲುಗಳಲ್ಲಿ ಅಡ್ಡಾದಿಡ್ಡಿ ಹರಿಯುವ ಗಂಗೆ ಹರಿದ್ವಾರದಲ್ಲಿ ತುಂಬಿ ಹರಿಯುತ್ತಾಳೆ. ಆದ್ದರಿಂದಲೇ ಅದು ಗಂಗಾದ್ವಾರ. ದಕ್ಷಯಜ್ಞ ನಡೆದ ಕನಖಲ ಇಲ್ಲೇ ಇದೆ. ತಂದೆಯಿಂದ ಅವಮಾನಿತಳಾದ ಸತಿ ದೇಹತ್ಯಾಗ ಮಾಡಿದ್ದು ಇಲ್ಲೇ. ಗಂಗೆ ಶಂತನುವನ್ನು ವರಿಸಿ ಗಾಂಗೇಯನಿಗೆ ಜನ್ಮವಿತ್ತಿದ್ದು ಇಲ್ಲೇ. ತೀರ್ಥರಾಜ ಪ್ರಯಾಗದಲ್ಲಿ ಯಮುನೆಯನ್ನು ಸೇರುತ್ತಾಳೆ ಗುಪ್ತಗಾಮಿನಿಯಾಗಿ ಬರುವ ಸರಸ್ವತಿಯ ಜೊತೆಗೆ. ಶ್ರೀರಾಮನ ಸಮಯದಲ್ಲಿ ಭರದ್ವಾಜರು ಇಲ್ಲೇ ನೆಲೆಸಿದ್ದರು. ಬಿಳಿನೀರ ಗಂಗೆ ಮತ್ತು ಕೃಷ್ಣವರ್ಣೆ ಯಮುನೆಯ ಸಂಗಮ ಪ್ರಯಾಗದಲ್ಲಿ ಮಿಂದವರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಋಗ್ವೇದದ ಖಿಲಭಾಗದಲ್ಲಿ ವರ್ಣಿತವಾಗಿದೆ.

                    ಜಗತ್ತಿನ ಯಾವುದೇ ಭಾಗಕ್ಕೂ ಹೋಗಿ ನೋಡಿ, ಎಲ್ಲಿ ನಮ್ಮ ಪೂರ್ವಜರ ಪದಚಿಹ್ನೆಯನ್ನು ಕಾಣುತ್ತೇವೆಯೋ ಅಲ್ಲಿ ಗಂಗೆಯ ಬಗ್ಗೆ ಶೃದ್ಧೆಯ ಭಾವನೆಯನ್ನೂ ಈಗಲೂ ನೋಡಬಹುದು. ಒಮ್ಮೆ ನಮ್ಮ ಇತಿಹಾಸಕಾರ ಡಾ|| ಲೋಕೇಶ್ ಚಂದ್ರ ರಷ್ಯಾಕ್ಕೆ ಹೋಗಿದ್ದರು. ಇವರು ಬರುತ್ತಿರೋ ಸುದ್ಧಿ ತಿಳಿದ ಅಲ್ಲಿನ ಜನ ಬರೋವಾಗ ಗಂಗಾಜಲ ತನ್ನಿ ಅಂತ ಹೇಳಿದರು. ಇವರಿಗೆ ಆಶ್ಚರ್ಯ. ಕಮ್ಯೂನಿಷ್ಟರ ದೇಶದಲ್ಲಿ ಗಂಗೆ ಮೇಲೆ ಭಕ್ತಿ! ಆದರೂ ಇವರು ತೆಗೆದುಕೊಂಡು ಹೋದರು. ಸೈಬೀರಿಯಾ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಜನ ಗಂಗಾಜಲ ಬೇಡಿದರು. ಆಗ್ರಹ ಮಾಡಿದರು. ಅಲ್ಲೇ ಗಂಗೆಯನ್ನು ವಿತರಿಸಬೇಕಾಯಿತು. ಉದ್ಧರಣೆ ಇರಲಿಲ್ಲ. ಬೆರಳಲ್ಲೇ ಗಂಗೆಯನ್ನು ವಿತರಿಸಬೇಕಾಯಿತು. ಆ ನೂಕು ನುಗ್ಗಲಲ್ಲಿ ಸ್ವಲ್ಪ ಗಂಗಾಜಲ ಬಿದ್ದು ಬಿಟ್ಟಿತು. ಆ ರಷ್ಯಾ ಜನ ಗಂಗಾ ಜಲ ಬಿದ್ದ ಆ ನೆಲವನ್ನು ಹಣೆಗೊತ್ತಿಕೊಂಡರು. ಅದೆಂತಾ ಶೃದ್ಧೆ ಅದು.

                    ನಮ್ಮ ದಕ್ಷಿಣ ಪೂರ್ವದಲ್ಲಿ ಆಗ್ನೇಯ ದಿಕ್ಕಿನಲ್ಲಿರೋ ಇಂಡೋನೇಷಿಯಾವನ್ನು ನಾವು ಗಮನಿಸಬೇಕಾಗುತ್ತೆ. ಅದೊಂದು ಇಸ್ಲಾಮಿ ರಾಷ್ಟ್ರ. ಅಲ್ಲಿನ ಜನ ಭಾರತಕ್ಕೆ ಬಂದು ವಾಪಾಸು ಹೋಗುವಾಗ ಗಂಗಾಜಲ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿನ ಜನರೂ ಕಳುಹಿಸುವಾಗ ಗಂಗಾಜಲ ತನ್ನಿ ಅಂತ ಹೇಳಿಕಳುಹಿಸುತ್ತಾರೆ. ಅದು ಮುಸ್ಲಿಂ ರಾಷ್ಟ್ರವಾದರೂ ಸಾಂಸ್ಕೃತಿಕವಾಗಿ ಭಾರತದ ಪಡಿಯಚ್ಚು. ಅದರ ಪುರಾತನ ಹೆಸರು ದ್ವೀಪಾಂತರ. ಈ ಹೆಸರು ಇಂಡೋನೇಷಿಯಾದ ಗ್ರಂಥಗಳಲ್ಲೂ ಕಾಳಿದಾಸನ ಮೇಘದೂತದಲ್ಲೂ ಉಲ್ಲೇಖಗೊಂಡಿದೆ. ಇಂಡೋನೇಷಿಯಾದ ಬಹುಸಂಖ್ಯಾತರು ಮುಸ್ಲಿಮರಾದರೂ ಅವರು ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಹೆಮ್ಮೆಯಿರುವಂತಹವರು. ಅಲ್ಲಿನ ಬಾಲಿ ದ್ವೀಪದ ಆಕಾಶವಾಣಿ ಪ್ರತಿನಿತ್ಯ ಗಾಯತ್ರಿಮಂತ್ರ ಮತ್ತು ವೇದಘೋಷಗಳೊಂದಿಗೆ ತನ್ನ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುತ್ತೆ. ಆ ರಾಷ್ಟ್ರದ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಹಿಂದು ನಡವಳಿಕೆಯನ್ನು ಕಂಡಾಗ ಹೆಮ್ಮೆಯೆನಿಸುತ್ತದೆ.

               ಎರಡನೇ ಮಹಾಯುದ್ಧದ ಬಳಿಕ ದಾಸ್ಯದಿಂದ ವಿಮೋಚನೆಗೊಂದ ಆ ರಾಷ್ಟ್ರದ ಮೊದಲ ಅಧ್ಯಕ್ಷ ಸುಕರ್ಣೋ. ಅವರ ತಂದೆಗೆ ಮಹಾಭರತದ ಕರ್ಣನ ಪಾತ್ರ ಬಲು ಅಚ್ಚುಮೆಚ್ಚು. ಕರ್ಣ ಒಳ್ಳೆಯವನಾಗಿದ್ದರೂ ಅಧರ್ಮದ ಪರ ವಹಿಸುದುದರಿಂದ ಸಾಮಾನ್ಯವಾಗಿ ಮಕ್ಕಳಿಗೆ ಅವನ ಹೆಸರನ್ನು ಇಡೋದಿಲ್ಲ. ಆದರೆ ತನ್ನ ಮಗ ಅವನಿಗಿಂತ ಒಳ್ಳೆಯ ಕರ್ಣನಾಗಲಿ ಎಂಬ ಉದ್ದೇಶದಿಂದ ಸುಕರ್ಣೋ ಎಂದು ಹೆಸರಿಟ್ಟರಂತೆ. ಎಷ್ಟು ಸುಂದರ ಚಿಂತನೆ ಇದು. ಸುಕರ್ಣೋ ಹೆಂಡತಿ ಹೆಸರು ರತ್ನಸಾರಿಕಾ ದೇವಿ. ಮಗಳ ಹೆಸರು ಮೇಘವತೀ ಸುಕರ್ಣೋ ಪುತ್ರಿ. ಸುಹೃತ, ಸುದರ್ಶನ ಇವೆಲ್ಲಾ ಅಲ್ಲಿ ಸಾಮಾನ್ಯ. ಹಿಂದೊಮ್ಮೆ ಸುಕರ್ಣೋ ಅವರ ಜೊತೆ ಭಿನ್ನಾಭಿಪ್ರಾಯ ಬಂದಾಗ ವಿರೋಧ ಪಕ್ಷದ ಸದಸ್ಯರು ಪಾರ್ಲಿಮೆಂಟಿನಲ್ಲಿ ಅವರನ್ನು ದುರ್ಯೋಧನ ಎಂದು ಬೈದಿದ್ದರು. ಅಲ್ಲಿನ ನಾಟಕಗಳಿಗೆ ರಾಮಾಯಣ, ಮಹಾಭಾರತಗಳೇ ಸ್ಪೂರ್ತಿ. ಘಟೋತ್ಕಚ ಅಲ್ಲಿನ ಜನಪ್ರಿಯ ಪಾತ್ರಗಳಲ್ಲೊಂದು. ಇಂಡೋನೇಷಿಯಾದ ಸಂವಿಧಾನದ ಹೆಸರು ಪಂಚಶೀಲ. "ಧರ್ಮೋ ರಕ್ಷತಿ ರಕ್ಷಿತಃ" ಅನ್ನುವುದು ಅಲ್ಲಿನ ಧ್ಯೇಯ ವಾಕ್ಯ. ನಮ್ಮ ದೇಶದ್ದು ಇಂಡಿಯನ್ ಏರ್ ಲೈನ್ಸ್ ಆದರೆ ಆ ದೇಶದ್ದು ಗರುಡ ಏರ್ ಲೈನ್ಸ್. ನಮ್ಮ ಪೋಲಿಸ್ ಇಲಾಖೆಯ ಚಿಹ್ನೆ ಗಂಡಭೇರುಂಡ. ಅಲ್ಲಿನ ರಾಷ್ಟ್ರೀಯ ಪೋಲಿಸ್ ಇಲಾಖೆಯ ಚಿಹ್ನೆ ಹನುಮಂತ. ಇಂಡೋನೇಷಿಯಾದ ಪಾರ್ಲಿಮೆಂಟ್ ಭವನದ ಮುಂದುಗಡೆ ಶ್ರೀಕೃಷ್ಣನ ಗೀತಾರಥದ ಆಕೃತಿಯನ್ನು ನಿಲ್ಲಿಸಿದ್ದಾರೆ. ಬಾಲಿ ದ್ವೀಪದಲ್ಲಿರುವ ವಿಶ್ವವಿದ್ಯಾಲಯದ ಹೆಸರು ಉದಯನ್ ಯೂನಿವರ್ಸಿಟಿ. ಅದರ ಪ್ರಾಂಗಣದಲ್ಲಿ ಭವ್ಯವಾದ ಸರಸ್ವತಿಯ ವಿಗ್ರಹವಿದೆ. ಜಾವಾದ ಪ್ರಾಂಬಣದ ಬ್ರಹ್ಮಾನಂದ ದೇಗುಲ ಅತ್ಯಂತ ಪ್ರಾಚೀನವಾದದ್ದು. ನೂರ ನಲವತ್ತು ಅಡಿ ಎತ್ತರದ ಇದರ ಶಿಖರ ಮುಗಿಲು ಚುಂಬಿಸುವಂತಿದೆ. ಇವತ್ತು ಸನಾತನ ಸಂಸ್ಕೃತಿಯನ್ನು ದ್ವೇಷಿಸುವ, ವಿಶ್ವವಿದ್ಯಾಲಯಕ್ಕೆ ಮತಾಂಧರ ಹೆಸರಿಟ್ಟು ಭಯೋತ್ಪಾದಕರನ್ನು ಸೃಷ್ಟಿ ಮಾಡಬಯಸುವ ಭಾರತ ಮುಸಲ್ಮಾನರು ಮತ್ತವರ ಎಂಜಲಾಸೆಗೆ ಕೈಒಡ್ಡಿರುವ ಬುದ್ಧಿ (ಇಲ್ಲದ,ಲದ್ದಿ ತಿನ್ನುವ) ಜೀವಿಗಳು ಇದನ್ನು ಗಮನಿಸಬೇಕು.

                      ಜಗತ್ತಿನಲ್ಲಿ ಮೂರು ಅಂತರಾಷ್ಟ್ರೀಯ ರಾಮಾಯಣ ಮೇಳಗಳಿವೆ. ಕಾಂಬೋಡಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷಿಯಾ. ನಮ್ಮ ಅಯೋಧ್ಯೆಯಲ್ಲೂ ಇಂತಹ ಒಂದು ಮೇಳವಿಲ್ಲ. ಇಂಡೋನೇಷಿಯಾ ಬಿಡುಗಡೆ ಮಾಡಿದ ಒಂದು ನೋಟಿನ ಮೇಲೆ ಗಣೇಶನ ಚಿತ್ರ ಮುದ್ರಿತವಾಗಿತ್ತು. ನಮ್ಮಲ್ಲಿ ಇದನ್ನು ಕಲ್ಪಿಸಿಕೊಳ್ಳೋದಿಕ್ಕಾದರೂ ಸಾಧ್ಯ ಇದೆಯೇ? ಈ ದ್ವೀಪಕಲ್ಪ ಭಾರತಕ್ಕೆ ನೀಡಿರುವ ಸ್ಥಾನವನ್ನು ನೋಡಿದರೆ ಹೃದಯ ಪುಳಕಗೊಳ್ಳುತ್ತೆ. ಹೀಗೆ ಹಿಂದೆ ಹಿರಿಯರು ಜಗತ್ತನ್ನು ತಮ್ಮ ಸಾಂಸ್ಕೃತಿಕ ಸತ್ಯ ಮತ್ತು ಸತ್ವದಿಂದ ಪ್ರಭಾವಿತರನ್ನಾಗಿ ಮಾಡಿದ್ದರು. ಆ ಚಿಹ್ನೆಗಳನ್ನು ಇವತ್ತಿಗೂ ನೋಡುತ್ತಿದ್ದೇವೆ.

                     ಗಂಗೆ ಆಗಾಗ್ಗೆ ತನ್ನ ಗತಿಯನ್ನು ಬದಲಿಸಿದ್ದಾಳೆ. ಮೊದಲು ಹಸ್ತಿನೆ ಗಂಗೆಯ ದಡದಲ್ಲಿತ್ತು. ಈಗ ಗಂಗೆಯ ಒಡಲೊಳಗಿದೆ. ಇದಾದದ್ದು ನಿಚಕ್ನುವಿನ ಕಾಲದಲ್ಲಿ. ಬಳಿಕ ಆತ ಕೌಶಾಂಬಿಗೆ ತನ್ನ ರಾಜಧಾನಿಯನ್ನು ಬದಲಾಯಿಸಿದ. ಜಗನ್ನಾಥ ಪಂಡಿತ ೧೬-೧೭ನೇ ಶತಮಾನದಲ್ಲಿದ್ದ ಪ್ರಸಿದ್ಧ ಸಂಸ್ಕೃತ ಕವಿ. ಅಲಕೆಯ ಝಲಕಿಗೆ ಮನಸೋತು ಗಂಗಾಲಹರೀ ಎಂಬ ಖಂಡಕಾವ್ಯ ಬರೆದ. ಅದು ತನ್ನ ನಾದ ಮಾಧುರ್ಯದಿಂದ , ಲಯದ ಮೋಡಿಯಿಂದ ಎಲ್ಲರ ಹೃದಯ ಸೂರೆಗೊಂಡಿದೆ. ಹೇಗಿದೆ ಎಂದರೆ ಸ್ವತಃ ಗಂಗೆಯೇ ಮೆಚ್ಚಿ ಉಬ್ಬಿ ಅವನ ಕಾಲ್ತೊಳೆದಳಂತೆ! ೧೮೫೭ರ ಸ್ವಾತಂತ್ರ್ಯಸಂಗ್ರಾಮದ ಕಹಳೆ ಊದಿದ್ದು ಗಂಗಾತೀರದ ಕಾನ್ಪುರದಲ್ಲಿ. ಕುಂಭಮೇಳ ನಡೆಯುವ ನಾಲ್ಕು ಸ್ಥಳಗಳಲ್ಲಿ ಎರಡು ಸ್ಥಳಗಳಾದ ಹರಿದ್ವಾರ ಮತ್ತು ಪ್ರಯಾಗ ಇರುವುದು ಗಂಗಾತೀರದಲ್ಲಿ. ಅಪ್ರತಿಮ ದೇಶಭಕ್ತ ಚಂದ್ರಶೇಖರ ತಿವಾರಿ "ಆಜಾದ್" ಎಂಬ ವಿಶೇಷಣ ಗಳಿಸಿದ್ದು ಗಂಗಾತೀರದ ಕಾಶಿಯಲ್ಲಿ. ಪಂಡಿತ ಮದನ ಮೋಹನ ಮಾಳವೀಯರು ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ಬುದ್ಧನ ಪ್ರಥಮ ಪ್ರವಚನ ನಡೆದದ್ದು ಇಲ್ಲೇ.

                    ಹೀಗೆ ನದಿಗಳ ಬಗ್ಗೆ ನಮ್ಮ ಹಿರಿಯರು ನಿರ್ಮಾಣ ಮಾಡಿದ್ದ ಶೃದ್ಧೆಯನ್ನು ದುರ್ಬಲಗೊಳಿಸಿದ್ದುದರಿಂದ ಗಂಗೆ ಇವತ್ತು ಕೊಳಕಾಗಿದ್ದಾಳೆ. ಗಂಗೆ ತನ್ನನ್ನು ತಾನು ಸ್ವಚ್ಚಗೊಳಿಸಬಲ್ಲ ಸಾಮರ್ಥ್ಯದಿಂದ ವಂಚಿತಳಾಗಿದ್ದಾಳೇನೋ ಎಂದು ಅನ್ನಿಸುತ್ತೆ. ವಿಶೇಷವಾಗಿ ಹರಿದ್ವಾರದಿಂದ ಬರಬೇಕಾದರೆ, ಕಾಶಿಯ ಬಳಿ ನಿಂತು ನೋಡಬೇಕಾದರೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಭಾರತದ ಜೀವ ಗಂಗೆ ಕೊಳಕಾಗಿದ್ದಾಳೆ ಅಂದರೆ  ಅವಳ ಮಕ್ಕಳಾದ ನಮಗೆ ಆಪತ್ತು ಬಂದಿದೆ ಅಂತಲೇ ಅರ್ಥ. ಗಂಗೋದಕವನ್ನಿನ್ನು ಕುಡಿಯುವ ಹಾಗಿಲ್ಲ. ಸ್ನಾನ ಮಾಡುವ ಹಾಗಿಲ್ಲ. ಅಷ್ಟೊಂದು ನಾವು ಕೊಳಕು ಮಾಡಿದ್ದೇವೆ. ಅದನ್ನು ಶುದ್ಧ ಮಾಡುವ, ಪಾವನ ಮಾಡುವ ಕೆಲಸವನ್ನು ನಾವೇ ಮಾಡಬೇಕು. ಇಂಗ್ಲೆಂಡಿನ ಜನ ಥೇಮ್ಸ್ ನದಿಯ ಬಗ್ಗೆ ಪ್ರೀತಿ ಇಟ್ಕೊಂಡಿದ್ದಾರೆ, ಶೃದ್ಧೆ ಅಂತ ಅಲ್ಲ. ಕೇವಲ ಥೇಮ್ಸ್ ಬಗ್ಗೆ ಪ್ರೀತಿ ಇಟ್ಕೊಂಡಿರೋ ಜನ ಅದನ್ನು ಶುದ್ಧ ಮಾಡಬಹುದಾದರೆ ಗಂಗೆಯನ್ನು ತಾಯಿ ಅಂತ ಭಾವಿಸೊ ನಾವ್ಯಾಕೆ ಗಂಗೆಯನ್ನು ಶುದ್ಧ ಮಾಡುವುದಕ್ಕೆ ಸಾಧ್ಯ ಇಲ್ಲ. ನಾವೆಲ್ಲರೂ ಭಗೀರಥನ ರೂಪದಲ್ಲಿ ಎದ್ದು ನಿಲ್ಲಬೇಕಾಗಿದೆ. ನಮ್ಮ ಜೀವಗಂಗೆಯನ್ನು ಸ್ವಚ್ಚ ಮಾಡಬೇಕಾಗಿದೆ.
ವಂದೇ ಮಾತರಂ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ