ಪುಟಗಳು

ಭಾನುವಾರ, ಜನವರಿ 6, 2013

ಭಾರತ ದರ್ಶನ-೨೪

ಭಾರತ ದರ್ಶನ-೨೪:

                      ನೀರು ಕೇವಲ H2O ಅಲ್ಲ. ನಮ್ಮ ಪಾಲಿಗೆ ಅದು ತಾಯಿ. ಭಗವಾನ್ ವೇದವ್ಯಾಸರು "ವಿಶ್ವಸ್ಯ ಮಾತರಃ" ಅಂತ ಹೇಳುತ್ತಾ ನದಿಗಳನ್ನು ಮಾತೃ ಸ್ವರೂಪದಲ್ಲಿ ಕಂಡು ನಮಿಸಿದ್ದಾರೆ. ನದಿಗಳ ಹೆಸರನ್ನು ನಮ್ಮ ಅಕ್ಕ ತಂಗಿಯರಿಗೆ ಇಟ್ಟು ಗೌರವಿಸುವ ಸಂಸ್ಕೃತಿ ನಮ್ಮದು. ಗಾವೋ ವಿಶ್ವಸ್ಯ ಮಾತರಃ. ಗೋವುಗಳಿಗೆ ಕೂಡಾ ಗಂಗಾ, ತುಂಗಾ, ಭದ್ರಾ, ಕಪಿಲಾ, ನಂದಿನಿ...ಅಂತಾ ಹೆಸರಿಟ್ಟು ಗೌರವಿಸುತ್ತೇವೆ. ಶುಭ ಸಮಾರಂಭಗಳಲ್ಲಿ ಗಂಗೆ, ಯಮುನೆ, ಗೋದೆ ಆದಿಯಾಗಿ ಸಪ್ತ ಜಾಹ್ನವಿಗಳನ್ನು ಕಲಶಕ್ಕೆ ಆವಾಹನೆ ಮಾಡಿ ಪೂಜಿಸುತ್ತೇವೆ. ನಮ್ಮ ಸಂಸ್ಕೃತಿ ಅರಳಿದ್ದೇ ನದಿ ತೀರದಲ್ಲಿ. ವೈದಿಕ ಋಷಿಗಳ ಸೂಕ್ತಗಳು ಸಪ್ತ ಸಿಂಧು ಪ್ರದೇಶದಲ್ಲಿ ರಚನೆಯಾದವು.

                    ಋಷಿ ಮುನಿಗಳ ತಪಪ್ರಧಾನ ಸಂಸ್ಕೃತಿ ಗಂಗೆಯ ತೀರದಲ್ಲಿ ಬೆಳಗಿತು. ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ ಸರಯೂ ನದಿ ತೀರದಲ್ಲಿದೆ. ಚಂದ್ರವಂಶೀಯರ ರಾಜಧಾನಿಗಳಾದ ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಗಂಗೆ ಮತ್ತು ಯಮುನೆಯರ ದಡದಲ್ಲಿ ನಿರ್ಮಾಣವಾದವು. ಭಕ್ತಿಪಂಥ ಪರಿಪುಷ್ಟವಾದದ್ದು ಯಮುನೆ ಮತ್ತು ತುಂಗಭದ್ರೆಯರ ದಡದಲ್ಲಿ. ಪ್ರಯಾಗದ ತ್ರಿವೇಣೀ ಸಂಗಮ ಯಜ್ಞಪ್ರಧಾನ ಮತ್ತು ಪೂಜಾಪ್ರಧಾನ ಸಂಸ್ಕೃತಿಗಳ ಸಂಗಮ ಕ್ಷೇತ್ರವಾಯಿತು. ನರ್ಮದಾ ಗೋದೆಯರ ದಡದಲ್ಲಿ ವಿಕ್ರಮ ಶಾಲಿವಾಹನರ ಪರಾಕ್ರಮಗಳು ಪ್ರಕಟಗೊಂಡವು. ಮಹಾರಾಷ್ಟ್ರದ ಭಕ್ತಿ ಸಾಹಿತ್ಯ ಅರಳಿದ್ದು ಗೋದೆಯ ತಟದಲ್ಲಿ. ಶ್ರೀ ಸಮರ್ಥ, ವಿದ್ಯಾರಣ್ಯ, ಶಿವಾಜಿ, ನಾನಾ ಫಡ್ನವೀಸ್, ಹರಿಹರ-ಬುಕ್ಕ, ರಾಮಾಶಾಸ್ತ್ರಿ,..ಒಂದೇ ಮಾತಿನಲ್ಲಿ ಹೇಳೋದಾದರೆ ದಕ್ಷಿಣದ ಸಾಧುತ್ವ, ಸದಾಚಾರ, ನ್ಯಾಯ, ಧರ್ಮನಿಷ್ಠೆ, ಸ್ವದೇಶಿತನ, ಮುತ್ಸದ್ಧಿತನ, ಉದಾರತೆ ಈ ಎಲ್ಲಾ ಸದ್ಗುಣಗಳು ತುಂಗೆ-ಗೋದೆಯರ ವಾತ್ಸಲ್ಯಪೂರ್ಣ ಆರೈಕೆಯಿಂದ ಹೊರಹೊಮ್ಮಿದವು. ಕಾವೇರಿಯಂತು ದಕ್ಷಿಣದ ಗಂಗೆ. ಚೋಳರು, ಪಲ್ಲವರು ಕಾವೇರಿಯನ್ನು ಮುಂದಿಟ್ಟುಕೊಂಡು ತಮ್ಮ ತಮ್ಮ ಪರಾಕ್ರಮ ಮೆರೆದಿದ್ದಾರೆ.

                     ವೈದಿಕ ಸಂಸ್ಕೃತಿಯ ಜ್ವಲಂತ ಅಭಿಮಾನದ ಕೇಂದ್ರವಾಗಿದ್ದ ವಿಜಯನಗರ ಸಾಮ್ರಾಜ್ಯ ಎದ್ದು ನಿಂತಿದ್ದು ತುಂಗಭದ್ರೆಯ ದಡದಲ್ಲೇ. ಸಾಯಣಾಚಾರ್ಯರು ಇದರ ದಡದಲ್ಲೇ ಕುಳಿತು ವೇದಗಳಿಗೆ ಭಾಷ್ಯವನ್ನು ಬರೆದರು. ಹೀಗೆ ಒಂದೊಂದು ನದಿಯು ಒಂದೊಂದು ಸಂಸ್ಕೃತಿಯ ಪ್ರವಾಹ. ಗಂಗೆ ತುಂಗೆಯರ ನಿರ್ಮಲ ಸಲಿಲಗಳ ಸ್ವಚ್ಚ ಶೀತಲ ಅಖಂಡ ಪ್ರವಾಹವನ್ನು ಕಂಡ ಬಳಿಕ ಕವಿಶ್ರೇಷ್ಠರ ಪ್ರತಿಭೆ ಹೊರಬರದೇ ಇದ್ದೀತೇ? ವಾಲ್ಮೀಕಿ, ವ್ಯಾಸ, ಭಾಸ, ಕಾಳೀದಾಸ, ಕಂಬ, ಶಂಕರ, ತುಳಸೀ, ಜಗನ್ನಾಥ ಪಂಡಿತ...ಮುಂತಾದ ಮಹಾಕವಿಗಳು ನದೀ ಸ್ತವನಕ್ಕಾಗಿ ತಮ್ಮ ವಾಗ್ವೈಭವವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡರು.

                    ಈ ತೀರ್ಥಗಳ ಸೇವನೆ ಬಗ್ಗೆ ನಮ್ಮ ಹಿರಿಯರ ನಂಬಿಕೆ ಹೇಗಿತ್ತು?
ಸರಸ್ವತೀ ತೀರ್ಥ ಸೇವನೆಯಿಂದ ಹತ್ತು ದಿವಸದಲ್ಲಿ ಪಾಪ ದೂರವಾಗುತ್ತೆ. ಯಮುನೆಯ ಸೇವನೆಯಿಂದ ಸೋಮಯಾಗದ ಫಲ ಪ್ರಾಪ್ತಿಯಾಗುತ್ತೆ. ಗಂಗೆಯ ಒಂದು ಬಿಂದು ಕುಡಿದರೆ ಸಾಕು ಪಾಪ ದೂರವಾಗುತ್ತೆ. ನರ್ಮದೆಯ ದರ್ಶನ ಮಾತ್ರದಿಂದ, ಕಾವೇರಿ, ಗೋದೆಯರ ಶ್ರವಣ ಮಾತ್ರದಿಂದ ಪಾಪ ದೂರವಾಗುತ್ತೆ ಎನ್ನುವ ನಂಬಿಕೆಯಿದೆ. (ಇವೆಲ್ಲವೂ ಭಾವನೆಗಳು. ಇವನ್ನು ವೈಜ್ಞಾನಿಕ ದೃಷ್ಠಿಯಿಂದ ನೋಡಬಾರದು. ಪ್ರತಿಯೊಂದು ಸಮಾಜಕ್ಕೆ ಶೃದ್ಧೆ ಹಾಗೂ ನಂಬಿಕೆಯ ವಿಷಯಗಳೇ ಆಧಾರವಾಗಿರುತ್ತವೆ.)

                         ಯಮುನಾ ಗಂಗೆಯ ಜೊತೆ ಉಲ್ಲೇಖಿಸಲ್ಪಡುವ ಶ್ರೇಷ್ಥ ನದಿಗಳಲ್ಲೊಂದು. ಹಿಮಾಲಯದಲ್ಲಿ ಜನಿಸುವ ಈಕೆ ಉತ್ತರ ಭಾರತದ ಬಹುದೊಡ್ಡ ಭಾಗವನ್ನು ಹಸಿರುಗೊಳಿಸಿ ಕೊನೆಯಲ್ಲಿ ಗಂಗೆಯಲ್ಲಿ ಲೀನವಾಗಿತ್ತಾಳೆ. ಯಮುನೋತ್ರಿಯಿಂದ ಹೊರಟ ಈಕೆ ಹಿಮಾಲಯ ಶ್ರೇಣಿಗಳಲ್ಲಿ ಸುಮಾರು ೮೦ ಮೈಲುಗಳ ದುರ್ಗಮ ಹಾದಿಯನ್ನು ದಾಟಿ ಮೈದಾನ ಪ್ರದೇಶವನ್ನು ಸೇರುತ್ತಾಳೆ. ಹಿಮಾಲಯದಿಂದ ಬರುವಾಗ ಬೋನ್ಸ್, ಗಿರಿ, ಅಸೆನ್ ಎನ್ನುವ ನದಿಗಳು ಯಮುನೆಯ ಒಡಲನ್ನು ಸೇರುತ್ತವೆ. ಚಂಬಲ್, ಸೇಂಗರ್, ಬೇತಾವ್ ಮತ್ತು ಕೇನ್ ಮೈದಾನಕ್ಕಿಳಿದ ಯಮುನೆಯನ್ನು ಸೇರುತ್ತವೆ. ಮುಂದೆ ಅವಳ ಆಳ, ಅಗಲ, ಹಿರಿಮೆ, ಗರಿಮೆಗಳು ಹೆಚ್ಚುತ್ತಾ ಹೋಗುತ್ತವೆ. ಹೀಗೆ ಮೈದುಂಬಿ ಹರಿಯುವ ಯಮುನೆ ಪ್ರಯಾಗ ಕ್ಷೇತ್ರದಲ್ಲಿ ಗಂಗೆಯನ್ನು ಬಂದು ಸೇರುತ್ತಾಳೆ. ಈ ಸಂಗಮ ಕ್ಷೇತ್ರದಲ್ಲಿ ಮಿಂದು ಪುನೀತರಾಗಲು ವರ್ಷಂಪ್ರತಿ ಲಕ್ಷ ಲಕ್ಷ ಯಾತ್ರಿಕರು ಧಾವಿಸುತ್ತಾರೆ.

                     ಯಮುನೆ ಆಗಾಗ ತನ್ನ ಪಥವನ್ನು ಬದಲಾಯಿಸಿದ ಸಂಗತಿ ಇತಿಹಾಸದಲ್ಲಿ ಗೋಚರವಾಗುತ್ತೆ. ಮೊದಲು ಆಕೆ ಮಧುವನದ ಬಳಿ ಹರಿಯುತ್ತಿದ್ದಳು. ಮಧುವನದಲ್ಲಿ ಯಮುನಾ ತೀರದಲ್ಲಿ ಶತ್ರುಘ್ನನು ಮಥುರಾ ನಗರವನ್ನು ಸ್ಥಾಪಿಸಿದ ಉಲ್ಲೇಖ ರಾಮಾಯಣದಲ್ಲಿದೆ. ಕೃಷ್ಣನ ಸಮಯದಲ್ಲಿ ಯಮುನೆ ಕಠಾರ ಕೇಶವ ದೇವ್ ಎನ್ನುವ ಪುಣ್ಯ ಸ್ಥಳದ ಬಳಿ ಹರಿಯುತ್ತಿದ್ದಳು. ಬೌದ್ಧ ಪಂಥ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಯಮುನೆಯ ಎರಡೂ ದಡಗಳಲ್ಲಿ ಅವರ ಸಂಘಾರಾಮಗಳಲ್ಲಿದ್ದವು. ಆಗ ಯಮುನೆ ಕೇಶವ್ ದೇವ್ ಕ್ಷೇತ್ರದಿಂದ ಸಾಕಷ್ಟು ದೂರ ಸರಿದಿದ್ದಳು. ವಲ್ಲಭ ಸಂಪ್ರದಾಯದ ಸಾಹಿತ್ಯವನ್ನು ಓದಿದರೆ ಯಮುನೆಯ ಇನ್ನಷ್ಟು ವಿವರಗಳು ಸಿಗುತ್ತವೆ. ಅದರ ಪ್ರಕಾರ ಯಮುನೆಯ ಎರಡು ಕವಲುಗಳು ಹರಿಯುತ್ತಿದ್ದವು. ಒಂದು ಕವಲು ನಂದಗಾಂವ್, ಬರಸಾನ್ ಮತ್ತು ಸಂಕೇತ್ ಎನ್ನುವ ಗ್ರಾಮಗಳಲ್ಲಿ ಹರಿದು ಗೋವರ್ಧನದ ಬಳಿ ಜಮುನಾವತ ಎನ್ನುವ ಜಾಗಕ್ಕೆ ಹೋದರೆ, ಇನ್ನೊಂದು ಕವಲು ಬೀರ್ ಘಾಟ್ ಸಮೀಪದಿಂದ ಗೋಕುಲವನ್ನು ಪ್ರವೇಶ ಮಾಡುತ್ತಿತ್ತು. ಮುಂದೆ ಈ ಎರಡು ಕವಲುಗಳು ಒಂದುಗೂಡಿ ಆಗ್ರಾದ ಕಡೆಗೆ ಮುಂದುವರಿಯುತ್ತಿದ್ದವು.

                 ಪುರಾಣದಲ್ಲಿ ಯಮುನೆಯ ಬಗೆಗೆ ಒಂದು ಘಟನೆಯಿದೆ. ಅವಳು ಸೂರ್ಯನ ಮಗಳು, ಯಮನ ತಂಗಿ. ಸೂರ್ಯನಿಗೆ ಸಂಜ್ಞಾದೇವಿ ಮತ್ತು ಛಾಯಾದೇವಿ ಎಂಬಿಬ್ಬರು ಮಡದಿಯರು. ವೈವಸ್ವತನು ಸಂಜ್ಞೆಯಿಂದ ಶೃದ್ಧದೇವ, ಯಮ ಮತ್ತು ಯಮುನೆ ಎಂಬ ಮಕ್ಕಳನ್ನು ಪಡೆದ. ಅರ್ಕನ ಪ್ರಖರತೆಯಿಂದ ಬೇಸತ್ತ ಸಂಜ್ಞಾದೇವಿ ತನ್ನ ನೆರಳಿಗೆ ಜೀವಕಳೆ ಕೊಟ್ಟು ಅಲ್ಲಿ ನಿಲ್ಲಿಸಿ, ತಾನು ತವರಿಗೆ ಅಂದರೆ ತಂದೆ ವಿಶ್ವಕರ್ಮನ ಬಳಿ ತೆರಳಿದಳು. ಅವಳೇ ಛಾಯೆ. ಸೂರ್ಯ ಛಾಯೆಯಿಂದ ಶನಿ, ಸವರ್ಣಿಮನು, ತಪತಿ ಎಂಬ ಮೂರು ಮಕ್ಕಳನ್ನು ಪಡೆದ. ಯಮುನೆ ಮತ್ತು ತಪತಿ ಇಬ್ಬರೂ ಜಲರೂಪ ಧಾರಣೆ ಮಾಡಿ ಲೋಕ ಕಲ್ಯಾಣಕ್ಕೆ ಧುಮುಕಿದರು. ಛಾಯೆಯ ಮಲತಾಯಿ ಧೋರಣೆಯಿಂದ ಕ್ರೋಧಗೊಂಡು ಯಮ ಒದ್ದಾಗ ಅವಳು ಕಾಲು ತುಂಬಾ ಹುಣ್ಣಾಗುವಂತೆ ಶಪಿಸಿದಳು. ನಿಜ ವಿಷಯ ತಿಳಿದ ಸೂರ್ಯ ಗೋಗರೆಯುತ್ತಿದ್ದ ಯಮನ ವ್ರಣ ಗುಣವಾಗುವಂತೆ ಮಾಡಿದ.

                       ಭಾರತದ ರಾಜಧಾನಿ ದೆಹಲಿ ಯಮುನಾ ತೀರದಲ್ಲಿದೆ. ಅನೇಕ ರಾಜಕೀಯ ಘಟನೆಗಳು, ಯುದ್ಧ, ರಕ್ತಪಾತ, ವಿಧ್ವಂಸಗಳನ್ನೀಕೆ ಕಂಡಿದ್ದಾಳೆ. ಪಾಂಡವರು ಖಾಂಡವ ದಹನ ಮಾಡಿ ಇಂದ್ರಪ್ರಸ್ಥ ನಿರ್ಮಿಸಿದ್ದು ಇವಳ ದಡದಲ್ಲೇ. ಆ ಬಳಿಕ ಅನೇಕ ದೇಶೀಯ ಹಾಗೂ ವಿದೇಶೀಯ ಪ್ರಭುತ್ವಗಳನ್ನು ಇಂದ್ರಪ್ರಸ್ಥ ಕಂಡಿದೆ. ರಾಮಚರಿತ ಮಾನಸದ ಕರ್ತೃ ಸಂತ ಕವಿ ತುಳಸೀದಾಸ ಜನಿಸಿದ್ದು ಯಮುನಾ ತೀರದ ರಾಜಾಪುರದಲ್ಲಿ.  ಗಂಗೆ ಯಮುನೆಯರಲ್ಲಿ ಯಮುನೆ ಹಿರಿದಾಗಿ ಗಂಭೀರವಾಗಿ ಕಾಣುತ್ತಾಳೆ. ಕೃಷ್ಣಭಗಿನಿ ದ್ರೌಪದಿಯಂತೆ ಅವಳು ಕೃಷ್ಣವರ್ಣೆಯಾಗಿ ಮಾನಿನಿಯಂತೆ ಕಾಣುತ್ತಾಳೆ. ಇವಳ ಎದುರು ಗಂಗೆ ಪಾಪ ಮುಗ್ಧೆ. ಆದರೇನು ದೇವಾಧಿದೇವ ಮಹಾದೇವನೇ ಆಕೆಯನ್ನು ಶಿರದಲ್ಲಿ ಧರಿಸಿದ್ದಾನೆ ಹಾಗಾಗಿ ಯಮುನೆ ತನ್ನ ಹಿರಿತನವನ್ನು ಗಂಗೆಗೆ ಬಿಟ್ಟು ಕೊಟ್ಟಿದ್ದಾಳೆ.

                  ಯಮುನೆಯ ನೀರಿಗೆ ಸಾಮ್ರಾಜ್ಯ ನಿರ್ಮಾಣದ ಶಕ್ತಿ ಇದೆ ಅಂತ ಕಾಣುತ್ತೆ. ಪಾಂಡವರಿಂದ ಹಿಡಿದು ವಿಧರ್ಮೀ ಔರಂಗ ಜೇಬನವರೆಗೆ, ನಾನಾ ಬಂಡಾಯಗಳಿಂದ ಹಿಡಿದು ಸ್ವಾಮಿ ಶೃದ್ಧಾನಂದರವರೆಗಿನ ಇತಿಹಾಸ ಆಕೆಯ ಸ್ಮರಣ ಸಂಗ್ರಹಾಲಯದಲ್ಲಿದೆ. ಯಮುನೆಯ ದಡದಲ್ಲಿ ಅತ್ಯಾಚಾರಕ್ಕೊಳಗಾದ ಮೊಘಲ್ ಶಾಸಿತ ನಗರಗಳ ಭೇರಿ ನಗಾರಿಗಳು ಶಾಂತವಾಗಿವೆ. ಆದರೆ ಮಥುರಾ ವೃಂದಾವನಗಳ ಕೊಳಲಿನ ಧ್ವನಿ ಇನ್ನೂ ಕೇಳುತ್ತಾ ಇದ್ದೇವೆ. ಯಾವ ಯಮುನೆ ಕಾಳಿಂಗ ಮರ್ಧನವನ್ನು ಕಂಡಳೋ ಅವಳೇ ಕಂಸನ ವಧೆಯನ್ನೂ ಕಂಡಳು. ಹಸ್ತಿನಾವತಿಗೆ ಹೊರಟ ಕೃಷ್ಣನ ಶಾಂತ ರೂಪ ಕಂಡ ಆಕೆ ಕುರುಕ್ಷೇತ್ರದಲ್ಲಿ ಪಾಂಚಜನ್ಯ ಊದಿ ಅರ್ಜುನನನ್ನು ಬಡಿದೆಬ್ಬಿಸಿದ ಯುದ್ಧಕುಶಲ ಗೀತಾಚಾರ್ಯನ ರೂಪದಲ್ಲಿ ಕಂಡು ಆನಂದಿಸಿರಬೇಕು. ಕೊಳಲಿನ ನಾದದೊಡನೆ ಗೀತೆಯ ಸುಸ್ವರವನ್ನೂ ಕೇಳಿದವಳಾಕೆ.

                  ಕೃಷ್ಣ ಪಂಥದ ಭಕ್ತರು ತಮ್ಮೆಲ್ಲಾ ಪ್ರತಿಭೆಯನ್ನು ಯಮುನೆಗೆ ಧಾರೆ ಎರೆದರು. ಕವಿ ನಂದಾದಾಸ್ ಹೇಳುತ್ತಾರೆ- ಮುರಳಿಯ ನಾದದಿಂದ ಎಲ್ಲರೂ ತನ್ನನ್ನು ಮೋಹಿಸುವಂತೆ ಮಾಡಿದ ಮುರಾರಿ ಯಮುನೆಯ ಲಯಕ್ಕೆ ಸೋತು ಹೋದ. ಶಂಕರ ಭಗವತ್ಪಾದರು ಯಮುನೆಯನ್ನು ಕೊಂಡಾಡುವಾಗ ಅವಳ ತೀರದ ಮಂದ ಶೀತಲ ಗಂಧಯುಕ್ತ ಸಮೀರ ಪರಿಶ್ರಮವನ್ನು ಪರಿಹರಿಸುತ್ತೆ. ಅವಳ ಸೌಂದರ್ಯ ಮಾತಿಗೆ ನಿಲುಕದ್ದು. ಅವಳ ಸಹವಾಸದಿಂದ ಇಡೀ ಭೂಮಿಯೇ ಪಾವನವಾಗಿದೆ. ಇಂತಹ ಕಲಿಂದ ಕನ್ಯೆ ಸದಾ ನನ್ನ ಮನದ ಕ್ಲೇಶ ವಿಕಾರಗಳನ್ನು ನಷ್ಟ ಮಾಡಲಿ ಎಂದು ಪ್ರಾರ್ಥಿಸಿದ್ದಾರೆ. ಭಾರತೀಯರ ಮನದಲ್ಲಿ ಅಚ್ಚಳಿಯದ ನಿಚ್ಚಳ ಪ್ರಭಾವ ಬೀರಿರುವ ಈ ನದಿ ಸಮಸ್ತ ಭಾರತೀಯರ ಗೌರವಾದರಗಳಿಗೆ ಪಾತ್ರವಾಗಿದೆ. ಅಂತಹ ಕೃಷ್ಣವರ್ಣೆ ಮುಗುದೆಯನ್ನು ದುರ್ಗಂಧಗೊಳಿಸಿದ ಪಾಪಿಗಳಾದ ನಮಗೇನು ಶಿಕ್ಷೆ ಕೊಟ್ಟುಕೊಳ್ಳಬೇಕು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ