ಪುಟಗಳು

ಶನಿವಾರ, ಮೇ 18, 2013

ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-೧



ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-:

ಏಡನ್!
ಅಲ್ಲಿ ಫಡಕೆ(ವಾಸುದೇವ ಬಲವಂತ ಫಡಕೆ) ಕಿಡಿ ಆರಿತು.

ಭಗೂರು!
ಇಲ್ಲಿ ಅದೇ ಕಿಡಿ ಜ್ವಾಲೆಯಾಗಿ ಸ್ವಾತಂತ್ರ್ಯ ವೀರನಾಗಿ ಸ್ವಾತಂತ್ರ್ಯದ ದಿವ್ಯಾಗ್ನಿ ಮೊರೆಯಿತು.


            ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಭವತಾರಿಣಿಯ ಭವ್ಯ ವಿಗ್ರಹ. ಮಂದಾಸನದಲ್ಲಿ ಮಂಡಿಸಿ ಮಂದಹಾಸ ಬೀರುತ್ತಿದ್ದಾಳೆ ಮಹಾತಾಯಿ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಹುಡುಗನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ಣಿಸುತ್ತಿದ್ದಾನೆ...

   "ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ?
   
                  ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ ಹಾಗೂ ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆ ಮನೆಯನ್ನೇ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸರ್ವರ ಹಿತಕ್ಕಾಗಿ ಅಂದರೆ ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ರಾಮ ರಾವಣನನ್ನು ವಧಿಸಿದ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.

                 ಅಮ್ಮಾ ಫಡಕೆ ಆರಂಭಿಸಿದ ದೀಕ್ಷೆ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ. ಇನ್ನು ಮುಂದೆ ನನ್ನೀ ಜೀವನ ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡಲು ಮುಡಿಪಾಗಿಡುವೆ. ಕೇವಲ ನಾನು ಮಾತ್ರವಲ್ಲ ನನ್ನ ಪರಿವಾರ, ಬಂಧು-ಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ನನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಎಲ್ಲವನ್ನೂ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸಾಗಿ ಅರ್ಪಿಸುತ್ತೇನೆ. ವಂದೇ ಮಾತರಂ...
ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ..."

                ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಅಂತಃಕರಣವನ್ನು ಪುಳಕಿತಗೊಳಿಸಿತು. ಅದು ಕೋಲ್ಮಿಂಚು! ಅದು ಮಾತೆಯ ಅನುಗ್ರಹ!

ಯಾರೀ ಹುಡುಗ???!!!!!

                    ಅವನ ಓರಗೆಯ ಹುಡುಗರು ಆಡಿಕೊಂದಿರಬಹುದಾದ ವಯಸ್ಸಿಗೇ ಪ್ರತಿಜ್ಞೆ ಮಾಡುತ್ತಿದ್ದಾನಲ್ಲ! ತಾಯಿಯ ಬಗ್ಗೆ, ದೇಶದ ಬಗ್ಗೆ, ತತ್ವಗಳ ಬಗ್ಗೆ, ಮೌಲ್ಯಗಳ ಬಗ್ಗೆ, ಧರ್ಮದ ಬಗ್ಗೆ, ರಾಜತಾಂತ್ರಿಕತೆಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ  ಮಾತಾಡುತ್ತಿದ್ದಾನಲ್ಲ!

"ಸ್ವಜನಳಾತೇ ಐಕುನಿ ಹೋತಿ ತಪ್ತ ತರುಣ ತೇ ಅರುಣ ಜಣೇ
ದೇಶ ಸಾಠೀ ಪ್ರಾಣಾ ದೇತಿ ಧನ್ಯ ಧನ್ಯ ತ್ಯಾ ಕಾ ನ್ಹ ಮಣೇ? ||
ಶತಾವಧೀ ತೇ ಜನ್ಮಾಯೇತಿ ಮರೋನಿ ಜಾತೀ ಗಣತೀ
ದೇಶಸಾಠೀ ಮರತೀ ತ್ಯಾಂಸೀ ದೇಶಪಿತೇ ಕಿ ಬುಧ ಮ್ಹಣತೀ||"

ಎಂದು ನಡು ರಾತ್ರಿಯಲ್ಲಿ ಸ್ವಾತಂತ್ರ್ಯ ಕಾವ್ಯ ಸೃಷ್ಠಿ ಮಾಡುತ್ತಿದ್ದಾನಲ್ಲ!

"ಕಾರ್ಯ ಸೋಡುನಿ ಅಪುರೇ ಪಡತಾ ಝಂಜತ?ಖಂತಿ ನಕೋ| ಫುಢೇ
ಕಾರ್ಯ ಚಾಲವೂ ಗಿರವಿತ ತುಮಚ್ಯಾ ಪರಾಕ್ರಮಾಚೇ ಆಮ್ಹೀ ಧಡೇ||"

ಎಂದು ಛಾಪೇಕರ್ ಸಹೋದರರಿಗೆ ವಚನ ಕೊಡುತ್ತಿದ್ದಾನಲ್ಲ!
ಯಾರವನು?

ಮತ್ಯಾರಿರಲು ಸಾಧ್ಯ? ಎಳವೆಯಲ್ಲೇ ಅಂಥಾ ಚಿಂತನೆ ಮತ್ಯಾರಿಗೆ ಬರಲು ಸಾಧ್ಯ?
ತಾತ್ಯಾ!
ಇತಿಹಾಸದಲ್ಲಿ ಸ್ವಾತಂತ್ರ್ಯ ವೀರನೆಂದೇ ಕರೆಸಿಕೊಂಡ ಏಕೈಕ ವ್ಯಕ್ತಿ....ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್!

                  ಹೌದು. ಮಹಾರಾಷ್ಟ್ರದಾದ್ಯಂತ ಘೋರ ಕ್ಷಾಮ ತಲೆದೋರಿತ್ತು. ಆಗಲೇ ಕಾಲಿಟ್ಟಿತ್ತು ಪ್ಲೇಗ್. ನಾಸಿಕದ ಕಲೆಕ್ಟರ್ Rand ಎಂಬ ದುರುಳ ಪ್ಲೇಗಿಗಿಂತಲೂ ಹೆಮ್ಮಾರಿಯಂತೆ ವರ್ತಿಸುತ್ತಿದ್ದ. ಒಂದು ಮನೆಯಲ್ಲಿ ಯಾರಿಗಾದರೂ ರೋಗ ಕಾಣಿಸಿಕೊಂಡರೆ ಮನೆಯವರಿಗೆಲ್ಲರಿಗೂ ಬಹಿಷ್ಕಾರ ಹಾಕಿ ಊರ ಹೊರಗೆ ಹಾಕಲಾಗುತ್ತಿತ್ತು. ರೋಗದಿಂದ ಸತ್ತವರ ಜೊತೆ ಆರೋಗ್ಯವಂತರನ್ನೂ ಜೀವಂತ ಸುಡಲಾಗುತ್ತಿತ್ತು. ಸ್ತ್ರೀಯರ ಮಾನಭಂಗ, ಆಸ್ತಿ ಪಾಸ್ತಿ ಲೂಟಿ, ಮನೆ ಮನೆಗೇ ಬೆಂಕಿ ಹಚ್ಚುವ ಕಾರ್ಯ ಯಥೇಚ್ಛವಾಗಿ ನಡೆಯಿತು. ಸಿಡಿದೆದ ಛಾಪೇಕರ್ ಸಹೋದರರು( ದಾಮೋದರ ಹಾಗೂ ಬಾಲಕೃಷ್ಣ ) ಕುದಿದು ಛಾಪೇಕರ್ ಕ್ಲಬ್ ಸ್ಥಾಪಿಸಿ ಶಸ್ತ್ರಾಸ್ತ್ರ ಸಂಗ್ರಹಿಸಿ Rand ಸಂಹಾರ ಮಾಡಿದರು. ಮಾಹಿತಿ ಕೊಟ್ಟ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿಗೆ ಛಾಪೇಕರ್ ಪಾಳಯದ ಮರಿಸಿಂಹ ವಾಸುದೇವ ಛಾಪೇಕರ್ ತಕ್ಕ ಶಿಕ್ಷೆ ವಿಧಿಸಿತು. ಮೂವರೂ ಸಂತೋಷದಿಂದ ನೇಣುಗಂಬಕ್ಕೆ ಕೊರಳೊಡ್ಡಿದರು. ಆದರೆ ಜನ ತಮ್ಮ ರಕ್ಷಣೆಗಾಗಿ ಮಡಿದ ವೀರರನ್ನೇ ಕೊಲೆಗಡುಕರೆಂದು ಕರೆದು ಅವಮಾನಿಸಿದರು.

ಅಂತಹ ಸಂದರ್ಭದಲ್ಲೇ ಬಾಲ ತಾಯಿಯ ಪದತಲದಲ್ಲಿ ಪ್ರತಿಜ್ಞೆ ಮಾಡಿದ್ದು. ಅದೂ ನಟ್ಟ ನಡು ರಾತ್ರಿ!

ಮುಂದುವರಿಯುವುದು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ