ಪುಟಗಳು

ಸೋಮವಾರ, ಮೇ 27, 2013

ಆಜ್ಯ...ಹವಿಸ್ಸು...ಆತ್ಮಾಹುತಿ!!!


ಆಜ್ಯ...ಹವಿಸ್ಸು...ಆತ್ಮಾಹುತಿ!!!


            ಎಳವೆಯಲ್ಲಿ ಪಠ್ಯ ಪುಸ್ತಕಗಳಲ್ಲಿ ಇರುತ್ತಿದ್ದ ಕಥೆ, ಹಳೆಗನ್ನಡದ ಕಾವ್ಯ, ಇತಿಹಾಸದ ಯಾವುದೇ ಘಟನೆ ಇರಲಿ ಅದನ್ನು ಮೊದಲೇ ಓದದಿದ್ದರೆ ಸಮಧಾನ ಇರುತ್ತಿರಲಿಲ್ಲ. ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಅಚಾನಕ್ಕಾಗಿ ಕೆಲವು ಹೆಸರುಗಳ ಉಲ್ಲೇಖ ಕಂಡು ಬಂತು. "ವಿ. ದಾ. ಸಾವರ್ಕರ್, ಆಜಾದ್, ಭಗತ್ ಸಿಂಗ್ ಕ್ರಾಂತಿಕಾರಿಗಳಾಗಿದ್ದರು. ಸಶಸ್ತ್ರ ಹೋರಾಟದಲ್ಲಿ ನಂಬಿಕೆ ಇರಿಸಿದ್ದ ಅವರು ಯುವಕರನ್ನು ಕ್ರಾಂತಿ ಸಂಘಟನೆಗೆ ಸೆಳೆದು ಕೊಳ್ಳುತ್ತಿದ್ದರು. ಆದರೆ ಕ್ರಾಂತಿಕಾರಿಗಳ ಹೋರಾಟ ಯಶಸ್ಸು ಕಾಣದೇ ಸಂಘಟನೆ ಮುರುಟಿ ಹೋಯಿತು."
ಇಷ್ಟೇ!
                 ಆಗಲೇ ನನ್ನ ಮನದೊಳಗೇ ಒಂದು ಅನುಮಾನದ ಹುತ್ತ ಮೊಳಕೆಯೊಡೆದಿತ್ತು. ಕ್ರಾಂತಿಕಾರಿಗಳೆಂದೆನಿಸಿಕೊಂಡವರು ಸಂಘಟನೆ ಮಾಡಿ ಹೋರಾಟ ನಡೆಸಿದ್ದು ಇತಿಹಾಸದ ಪುಟದಲ್ಲಿ ಒಂದೆರಡು ವಾಕ್ಯಗಳಿಗೆ ಸೀಮಿತಗೊಳ್ಳಲು ಕಾರಣವೇನು? ಅವರಿಗೆ ಯಶ ಸಿಗಲಿಲ್ಲ ಹಾಗೂ ಸಂಘಟನೆ ಮುರುಟಿ ಹೋಯಿತು ಎಂಬುದು ಎಷ್ಟು ಸತ್ಯ? ಕೇವಲ ಒಂದು ದಿವಸ ಉಪವಾಸ ಕೂತು ಆರಾಮವಾಗಿ ಜೈಲಿನಲ್ಲಿ ಶಿಕ್ಷೆ(?!) ಅನುಭವಿಸಿದ್ದನ್ನು ಪುಟಗಟ್ಟಲೇ ವರ್ಣಿಸಿದುದರ ಹಿಂದಿನ ಮರ್ಮವೇನು?
                ಅದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಸೆಳೆದದ್ದು ಮೊದಲ ಹೆಸರು...ವಿ. ದಾ. ಸಾವರ್ಕರ್...ಯಾರವರು? ಅವರ ಪೂರ್ಣ ನಾಮಧೇಯವೇನು? ಅವರ ತತ್ವಗಳೇನು? ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರವಲ್ಲ ಇತಿಹಾಸಕ್ಕೆ ಅವರ ಕೊಡುಗೆ ಏನು?
ಉತ್ತರ ಸಿಗುವುದು ಅಷ್ಟು ಸುಲಭವಿರಲಿಲ್ಲ. ಯಾಕೆಂದರೆ ನನ್ನ ಸುತ್ತಮುತ್ತಲಿನವರಿಗೆ ಅದರ ಅರಿವಿರಲಿಲ್ಲ. ಪಠ್ಯದಲ್ಲೇ ಅವರ ಹೆಸರುಗಳನ್ನು ಉಲ್ಲೇಖಿಸಲು ಹಿಂದೆ ಮುಂದೆ ನೋಡುವ ಆಳುವ ಜನ ಪ್ರತಿನಿಧಿ(!)ಗಳು ಅವರ ಚರಿತ್ರೆಯನ್ನು ಪ್ರಕಟಿಸಲು ಅನುಕೂಲ ಮಾಡಿ ಕೊಟ್ಟಾರೇ?
                   ಆಗ ಸಿಕ್ಕಿದ್ದೇ ಆತ್ಮಾಹುತಿ! ಪೊಳ್ಳು ಇತಿಹಾಸದ ಸುಳಿಯಿಂದ ತಪ್ಪಿಸಿಕೊಂಡು ಬರಲು ಒದ್ದಾಡುತ್ತಿದ್ದ ನನಗೆ ದೊರಕಿದ ಆಸರೆ ಅದು! ಹೌದು
ಯಾವ ಹೆಸರು ನನ್ನನ್ನು ನೈಜ ಇತಿಹಾಸದ ಅಧ್ಯಯನಕ್ಕೆ ತೆರೆದುಕೊಳ್ಳುವಂತೆ ಕರೆದು ಹೇಳಿತ್ತೋ ಅದೇ ಹೆಸರು ಪುಸ್ತಕ ಓದಿ ಮುಗಿಸುವುದರೊಳಗೆ ನನ್ನ ಆದರ್ಶ ದೈವವಾಗಿಬಿಟ್ಟಿತ್ತು!

ವೀರ ಸಾವರ್ಕರ್!
                 ಹೆಸರು ಕೇಳಿದೊಡನೆ ಶಕ್ತಿಯ ಒಂದು ಪ್ರವಾಹವೇ ದೇಹವಿಡೀ ಸಂಚರಿಸಿದಂತಾಗುತ್ತದೆ. ಭಾವತೀವ್ರತೆಯಿಂದ ಮನಸ್ಸು ಮಹಾಪುರುಷನನ್ನು ಪ್ರತ್ಯಕ್ಷ ನೋಡಲು ಹಪಹಪಿಸುತ್ತದೆ. ಅಬ್ಬಾ ಎಂತಹ ವ್ಯಕ್ತಿತ್ವ ಅದು! ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿ. ನಿರಂತರ ಅಂತಃಪ್ರವಾಹವಾಗಿ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಸ್ವಾತಂತ್ರ್ಯ ವೀರ ನೀನೆನಗೆ ಧಣಿ. ಹುಲು ಮಾನವ ನೀನವಗೆ ಮಣಿ. ಅದು ಭವ್ಯ ಭಾರತದ ಮುಕುಟಮಣಿ!

    ಅನೇಕ ಬಾರಿ ನಾನು ಯೋಚನೆಗೆ ಬಿದ್ದದ್ದಿದೆ, ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧಿಸಲು ಸಾಧ್ಯವೇ? ಒಂದೊಂದು ಘಟನೆ ನೆನಪಿಸಿಕೊಳ್ಳಿ.

. ಇನ್ನೂ ಬುದ್ದಿ ಬೆಳೆಯದ ವಯಸ್ಸಿಗೆ " ಅಮ್ಮಾ ಭವಾನಿ, ಅಮ್ಮನನ್ಯಾಕೆ ಬಲಿ ತೊಗೊಂಡೆ. ಅಮ್ಮನ ಬದಲು ನನ್ನನ್ನು ಬಲಿ ತೆಗೆದುಕೋ" ಎಂದು ಅರ್ಧ ರಾತ್ರಿಯಲ್ಲಿ ಕಾಳಿಯ ವಿಗ್ರಹದ ಬಳಿ ಕುಳಿತು ಪ್ರಾರ್ಥಿಸಿತು ಹಾಲುಗಲ್ಲದ ಮಗು!
. ಎಲ್ಲರೂ ಛಾಪೇಕರ್ ಸಹೋದರರು ಕೊಲೆಗಡುಕರು ಎಂದು ಜರೆಯುತ್ತಿದ್ದಾಗ "ಇಲ್ಲ, ಅವರು ಅಪ್ರತಿಮ ದೇಶಭಕ್ತರು. ಅವರು ಮಾಡಿದ್ದು Rand ಕೊಲೆಯಲ್ಲ. ಅದು ವಧೆ, ಸಂಹಾರ" ಎಂದ ಹುಡುಗ.
.ನಟ್ಟ ನಡು ರಾತ್ರಿ ತಾಯಿ ಭವತಾರಿಣಿಯಿಂದ ದೇಶಸೇವೆಯ ಆತ್ಮಾಹುತಿಯ ದೀಕ್ಷೆ ದೊರಕಿಸಿಕೊಂಡ ೧೩ ವರ್ಷದ ಹುಡುಗ.
. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ೧೫ ವರ್ಷದ ಪೋರ.
. ಮಿತ್ರಮೇಳ ಎಂಬ ಸಂಘಟನೆ ಸ್ಥಾಪಿಸಿ ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದ ಗಂಡುಗಲಿ.

. ದಾಸ್ಯವೇ ಶ್ರೇಷ್ಠ, ಇಂಗ್ಲೀಷರೇ ದೇವರು, ಮನವಿಗಳೇ ಪೂಜೆ, ಅವರು ಕೊಡೋ ಶಿಕ್ಷೆಯೇ ಪ್ರಸಾದ ಎಂದು ಜನರೆಲ್ಲಾ ತಮ್ಮ ಕ್ಷಾತ್ರತೇಜ ಕಳೆದುಕೊಂಡಿದ್ದಾಗ ಸ್ವಾತಂತ್ರ್ಯವೇ ಶ್ರೇಷ್ಠ, ಭಾರತಿಯೇ ತಾಯಿ, ಕ್ರಾಂತಿಯೇ ಪೂಜೆ, ಆತ್ಮಾಹುತಿಯೇ ಪ್ರಸಾದ ಎಂದು "ಅಭಿನವ ಭಾರತ" ಎಂಬ ನವಪೀಳಿಗೆಯನ್ನು ಸಂಘಟಿಸಿದ ವೀರ.
. ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ.
. ಭಾರತದಲ್ಲಿ ವಿದೇಶೀ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶಾಭಿಮಾನಿ.
. ಸ್ವರಾಜ್ಯ ಎಂದುಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ " ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ" ಎಂದು ಘೋಷಿಸಿದ ಮೊಟ್ಟ ಮೊದಲ ರಾಜಕೀಯ ಮುಂದಾಳು.
೧೦. ದಾಸ್ಯರಕ್ಕಸನ ಎದೆಮೆಟ್ಟಲು ಪ್ರಯತ್ನ ಪಟ್ಟುದ್ದಕ್ಕಾಗಿ ತಾನು ಗಳಿಸಿದ ಬಿಎ ಪದವಿಯನ್ನು ಕಳೆದುಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ.

೧೧. ಕ್ರಾಂತಿಕಾರಿ ಚಟುವಟಿಕೆಗಳನ್ನು ನದೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್.
೧೨. ಹಿಂದೂಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ಪರರಾಷ್ಟ್ರಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಮೊಟ್ಟಮೊದಲ ಭಾರತೀಯ ತರುಣ.
೧೩. ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಮೊಟ್ಟ ಮೊದಲ ಲೇಖಕ.
೧೪. ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಪ್ರಪ್ರಥಮ ರಾಜಕೀಯ ಆರೋಪಿ.
೧೫. ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟ ಮೊದಲ ರಾಜಕೀಯ ಕೈದಿ.

೧೬. ವಿಶ್ವದ ರಾಜಕೀಯ ಚರಿತ್ರೆಯಲ್ಲೇ ೫೦ ವರ್ಷಗಳ, ಎರಡೆರಡು ಕರಿನೀರ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು.
೧೭. ಅತೀ ಸಣ್ನ ಕಿಂಡಿಯ ಮುಖಾಂತರ ತನ್ನ ಯೋಗಾಭ್ಯಾಸದ ಬಲದಿಂದ ಶರೀರವನ್ನು ಸಂಕುಚಿಸಿ ಹಡಗಿನಿಂದ ಜಿಗಿದು ಸಮುದ್ರ ಈಜಿದ ಸಾಹಸಿ.



೧೮. ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ ಇಲ್ಲದಿದ್ದರೂ, ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳ ಕಾವ್ಯ ರಚಿಸಿ ಬಾಯಿ ಪಾಠ ಮಾಡಿ ೧೪ ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ!
೧೯. ಅದು ದಂಗೆ ಅಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿ ಅದರ ಬಗ್ಗೆ ಸಾಕ್ಷ್ಯಾಧಾರಿತ ಗ್ರಂಥ ಬರೆದ ಪ್ರಪ್ರಥಮ ವ್ಯಕ್ತಿ.
೨೦. ತಾನು ಮಾತ್ರವಲ್ಲದೆ ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದ ಅಧ್ವರ್ಯು.

೨೧. ಸಿಂಹದ ಗುಹೆಯೊಳಗೆ ನುಗ್ಗಿ ಅದರ ಕೇಸರ ಹಿಡಿದು ಬಡಿದ ನರಸಿಂಹ.
೨೨. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಸಾಗರ ಈಜಿದ ಶೂರ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕ.
೨೩. ನಿಮಗೆ ಅಚ್ಚರಿಯಾಗಬಹುದು. ಸಾವರ್ಕರ್ ನೀವೀಗ ಬಳಸುವಂತಹ ಅನೇಕ ಪದಗಳನ್ನು ಸೃಷ್ಟಿ ಮಾಡಿದರು. ಕೆಲವು ರೂಢಿರಹಿತ ಪದಗಳನ್ನು ಕೂಡಾ ಬಳಕೆಗೆ ತಂದರು. ಅಂತಹ ಕೆಲವು ಪದಗಳು:
ಮಹಾವಿದ್ಯಾಲಯ, ಪ್ರಾಚಾರ್ಯ, ಪ್ರಾದ್ಯಾಪಕ, ಪ್ರಭೋಧಿಕ, ವಾಯುದಳ, ದೂರಧ್ವನಿ, ದ್ವನಿಕ್ಷೇಪಕ, ವಿಧಿಮಂಡಲ, ಅರ್ಥ ಸಂಕಲ್ಪ, ಚಿತಪಠ, ನೇಪಥ್ಯ, ಛಾಯಾಚಿತ್ರ, ದಿಗ್ದರ್ಶಕ, ಕ್ರಮಾಂಕ, ದಿನಾಂಕ, ವಾಚನಾಲಯ, ಉಪಸ್ಥಿತ, ಮಹಾಪೌರ, ವ್ಯಂಗ್ಯಚಿತ್ರ, ವಿಶೇಷಾಂಕ, ಲಾಭಾಂಶ, ಭಾಗಾಂಶ, ಸಂಸತ್ತು, ಲೋಕಸಭಾ, ನಗರಪಾಲಿಕಾ, ಮಹಾಪಾಲಿಕಾ, ಹುತಾತ್ಮ, ಉಚ್ಛಾಂಕ, ನಭೋವಾಣಿ, ಸಚಿವಾಲಯ, ಸ್ಥಾನಕ, ರುಗ್ಣಾಲಯ, ಪ್ರಮಾಣಪತ್ರ,....ಇತ್ಯಾದಿ
೨೪. ವಿಗ್ರಹಗಳನ್ನು ಒಡೆಯುತ್ತಾ ಹೋರಾಟ ನಡೆಸುತ್ತಿದ್ದ ಸುಭಾಷರನ್ನು ಕರೆದು ಹೊರದೇಶಗಳಿಗೆ ತೆರಳಿ ಸೈನ್ಯ ಕಟ್ಟಿ ಹೋರಾಟ ನಡೆಸುವಂತೆಯೂ ಅಲ್ಲಿ ತಮಗೆ ರಾಸ್ ಬಿಹಾರಿ ಬೋಸ್, ಲಾಲಾ ಹರದಯಾಳ್ ಸಹಾಯ ಮಾಡುತ್ತಾರೆಂದು ತಿಳಿಸಿ ಸುಭಾಷರಮ್ ಅಂತಿಮ ಹೋರಾಟಕ್ಕೆ ಶಿಲಾನ್ಯಾಸ ಮಾಡಿದರು.
೨೫. ಸಾವರ್ಕರ್ ಬರೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಗ್ರಂಥ ಕ್ರಾಂತಿಸಂಘಟನೆಗಳಿಗೆ ಭಗವದ್ಗೀತೆಯಾಯಿತು.

೨೬. ನಾಥೂರಾಮ ಗೋಡ್ಸೆಯಂತಹ ಅನೇಕ ಅಪ್ಪಟ ಭಾರತ ಭಕ್ತರಿಗೆ ಗುರುವಾದರು.
೨೭. ಹಿಂದೂ ಮಹಾಸಭಾವನ್ನು ಕಟ್ಟಿ ಬೆಳೆಸಿದರು. ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತರು.
೨೮. ಅಸ್ಪೃಷ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಎಲ್ಲರ ವಿರೋಧದ ನಡುವೆ " ಪತಿತ ಪಾವನ " ಮಂದಿರ ನಿರ್ಮಿಸಿ ಅಲ್ಲಿ ಎಲ್ಲ ಹಿಂದೂಗಳಿಗೂ ಮುಕ್ತಪ್ರವೇಶ ದೊರಕಿಸಿಕೊಟ್ಟರು.
೨೯. ಚಳುವಳಿ ಎಂಬುದನ್ನು ಮೊದಲು ಹುಟ್ಟು ಹಾಕಿದ್ದೇ ಸಾವರ್ಕರ್. ಅಂಡಮಾನಿನಲ್ಲಿ ಗಾಣ ಎಳೆಯುತ್ತಾ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಕಾಲಕ್ಕೆ ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ದಿ ಚಳವಳಿ ನಡೆಸಿದರು.


        ಹೇಳುತ್ತಾ ಹೋದಂತೆ ಮುಗಿಯದ ಕಥನವಿದು...ಸಾವರ್ಕರ್ ಎಂದರೆ ಹಾಗೆಯೇ ಅವರು ಯಾವ ಕ್ಷೇತ್ರವನ್ನು ಪ್ರವೇಶಿಸಿದರೂ ಅಲ್ಲೊಂದು ಕ್ರಾಂತಿಯಾಗುತ್ತಿತ್ತು. ಅದು ಮುಕ್ತ ಸಮಾಜವಿರಲಿ, ಅಮುಕ್ತ ಕಾರಾಗೃಹವಿರಲಿ...ಎಲ್ಲೆಡೆಯೂ ಕ್ರಾಂತಿ...ಆಜ್ಯ...ಹವಿಸ್ಸು...ತರ್ಪಣ...ಆತ್ಮಾಹುತಿ
ಶಿವಾಜಿಯ ಅಪರಾವತಾರವದು!
ಇಂದವರ ೧೩೦ನೇ ಜನ್ಮದಿನದಂದು ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನ.
ವಂದೇ ಮಾತರಂ...ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ...


 ಪೂರ್ಣಾಹುತಿ:     ಇಂದಿರಾ ಗಾಂಧಿ ಜೈಲಿನಲ್ಲಿದ್ದ ತನ್ನ ತಂದೆಯನ್ನು ನೋಡಿ ಬಂದು ಬರೆಯುತ್ತಾಳೆ ಅಲ್ಲಿದ್ದದ್ದು ಒಂದೇ ಒಂದು ಮಂಚ, ನಾಲ್ಕೇ ನಾಲ್ಕು ಕುರ್ಚಿ, ಒಂದು ಮೇಜು!
ಇದೆಂತಹಾ ಜೈಲು ಶಿಕ್ಷೆ ಸ್ವಾಮಿ? ಅಂಡಮಾನಿನ ಕರಿನೀರ ಶಿಕ್ಷೆಯೆಲ್ಲಿ ಇದೆಲ್ಲಿ? ಗಾಣ ಎಳೆಯುತ್ತಾ, ಹುಳು ಹುಪ್ಪಟೆಗಳು ಬೆರಕೆಯಾಗಿರೋ ಆಹಾರ ತಿನ್ನುತ್ತಾ ಕೈಯಲ್ಲಿ ತೆಂಗಿನ ನಾರು ತೆಗೆದು ಗೋಣಿಚೀಲ ಹೊಲಿಯುತ್ತಾ ಪಟ್ಟ ಕಷ್ಟ ಕೋಟಲೆಯನ್ನು ಯಾವ ಪಠ್ಯ ಪುಸ್ತಕದಲ್ಲಿ ಪ್ರಕಟಿಸುತ್ತಾರೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ