ಪುಟಗಳು

ಸೋಮವಾರ, ಜೂನ್ 16, 2014

ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ

ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ
                ಶತಮಾನಗಳಿಂದ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹಿಡಿದ ಗ್ರಹಣ ಸರಿಯುವ ಸಾಧ್ಯತೆಗಳು ಗೋಚರಿಸಲಾರಂಭಿಸಿವೆ. ನೂತನ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭಾರತೀಯ ದೃಷ್ಟಿಕೋನದ ಶಿಕ್ಷಣದ ಅಳವಡಿಕೆಯ ಪ್ರತಿಪಾದನೆ ಮಾಡುತ್ತಿದ್ದಂತೆ ನೈಜ ರಾಷ್ಟ್ರಭಕ್ತರ ಮನದಲ್ಲಿ ತಮ್ಮ ಕನಸು ಸಾಕಾರಗೊಳ್ಳುವ ಕಾಲ ಬಂತೆಂಬ ಸಂತಸ ಮನೆ ಮಾಡಿದೆ. "ಎನ್‌ಸಿಇಆರ್‌ಟಿ ಪಠ್ಯ ಪ್ರಸ್ತಕಗಳನ್ನು ರಾಷ್ಟ್ರದ ಗುರಿ ಹಾಗೂ ಬದ್ಧತೆಗಳಿಗೆ ಅನುಸಾರವಾಗಿ ಪುನಾರಚಿಸಲಾಗುವುದು. ಅವು ಮಕ್ಕಳಲ್ಲಿ ದೇಶಭಕ್ತಿ ತುಂಬುತ್ತಿರಬೇಕು. ಆಧುನಿಕತೆಯೆಂದರೆ ಪಾಶ್ಚಾತ್ಯೀಕರಣವಲ್ಲ. ನಾವು ಭಾರತೀಯ ಮೂಲದ ದೇಶಭಕ್ತಿ ಹಾಗೂ ಆಧ್ಯಾತ್ಮವನ್ನು ಒಳಗೊಂಡ ಆಧುನಿಕತೆಯನ್ನು ಬಯಸುತ್ತಿದ್ದೇವೆ" ಎಂದು ವಿದ್ಯಾ ಭಾರತಿಯ ಕಾರ್ಯದರ್ಶಿ, "ಶಿಕ್ಷಾ ಬಚಾವೊ" ಎಂಬ ಆಂದೋಲನವನ್ನು ನಡೆಸುತ್ತಿರುವ ಸಂಘ ಪ್ರಚಾರಕ್ ದೀನನಾಥ ಬಾತ್ರ ಹೇಳುತ್ತಿದ್ದಂತೆ ಭಾರತ ಪ್ರೇಮಿಗಳ ಮನಸ್ಸು ಗರಿಬಿಚ್ಚಿ ಕುಣಿಯಲಾರಂಭಿಸಿದೆ.
"ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ!"
               ಹೌದು, ನಾವು ಯಾರು, ಎಲ್ಲಿಂದ ಬಂದೆವು, ಹೇಗೆ ಬಂದೆವು, ಬದುಕಿನಲ್ಲಿ ಏನೇನು ಸಾಧಿಸಿದೆವು, ಏನೇನು ತಪ್ಪುಗಳನ್ನೆಸಗಿದೆವು ಎನ್ನುವುದನ್ನು ಅರಿಯದಿದ್ದರೆ ನಮಗೆ ವರ್ತಮಾನವು ಅರ್ಥವಾಗದು. ಭವಿಷ್ಯತ್ತಿನ ದಾರಿ ಕಾಣದು. ರಾಮಾಯಣವೇ ಗೊತ್ತಿಲ್ಲದವನಿಗೆ ರಾಮಸೇತುವಿನ ಮಹತ್ವ ಹೇಗೆ ತಿಳಿದೀತು? ಅಯೋಧ್ಯೆ ಎಂಬುದು ಪುಣ್ಯಭೂಮಿ ಎಂದು ಹೇಗೆ ಅರಿವಾದೀತು? ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು. ಪ್ರಪಂಚದ ನಾಗರೀಕತೆ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ನಾಗರೀಕತೆಯ ಉತ್ತುಂಗದಲ್ಲಿದ್ದವರು ನಾವು. ಚರಿತ್ರೆ ಕಣ್ಣು ಬಿಡುವ ಮೊದಲೇ ಒಂದು ರಾಷ್ಟ್ರವಾಗಿ ನಾವು ಅರಳಿ ನಿಂತಿದ್ದೆವು. ನಮ್ಮ ದೇಶ ಉಳಿದ ದೇಶಗಳಿಗೆ ಕಲೆ, ವಿಜ್ಞಾನಗಳನ್ನು ಅನುಗ್ರಹಿಸಿತ್ತು. ಶಾಸ್ತ್ರೀಯ ದೃಷ್ಟಿಯನ್ನೂ, ಸತ್ಯಾನ್ವೇಷಣೆಯ ವಿಧಾನವನ್ನೂ ತೋರಿಸಿಕೊಟ್ಟಿತ್ತು. ಸಂಕುಚಿತತೆಯ ಮಾಯೆಯ ಹರಿದು ಅನೇಕತೆಯಲ್ಲಿ ಏಕತೆಯನ್ನು ದರ್ಶಿಸುವ ಸಂಸ್ಕಾರವನ್ನು ತಿಳಿಸಿಕೊಟ್ಟಿತು. ವೇದಗಳೇ ಇಂತಹ ಉತ್ಕೃಷ್ಟ ಸಂಸ್ಕೃತಿಯ ತಾಯಿ ಬೇರು. ಹಾಗಾಗಿ ಭಾರತೀಯತೆಯನ್ನು ಮೂಲೋತ್ಪಾಟನೆ ಮಾಡುವ ಸಲುವಾಗಿಯೇ ನಾನು ವೇದಗಳ ಅನುವಾದದಲ್ಲಿ ತೊಡಗಿದ್ದೇನೆಂದು ಪುಟಕ್ಕೆ ನಾಲ್ಕು ಪೌಂಡುಗಳಂತೆ ಸಂಭಾವನೆ ಪಡೆದು ಋಗ್ವೇದವನ್ನು ಆಂಗ್ಲ ಭಾಷೆಗೆ ಅನುವಾದಿಸಿದ ಮ್ಯಾಕ್ಸ್ ಮುಲ್ಲರ್ ಮಹಾಶಯ ತನ್ನ ಹೆಂಡತಿಗೆ ಪತ್ರ ಬರೆದಿದ್ದ. ಮ್ಯಾಕ್ಸ್ ಮುಲ್ಲರ್ ತನ್ನ 64ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ಸೈಂಟ್ ಜಾನ್ಸ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸದಲ್ಲಿ "ಯೂನಿವರ್ಸಿಟಿ ಪ್ರೆಸ್ ಗಾಗಿ ಈ ಪವಿತ್ರಗ್ರಂಥಗಳ ಪೈಕಿ ಅತಿಮುಖ್ಯ ಗ್ರಂಥಗಳ ಅನುವಾದ ಸರಣಿಯನ್ನು ಪ್ರಕಟಿಸಲು ನಾನು ಒಪ್ಪಿಕೊಂಡಾಗ ಮಿಷನರಿಗಳಿಗೆ ಸಹಾಯ ಮಾಡುವುದೂ ನನ್ನ ಧ್ಯೇಯಗಳಲ್ಲೊಂದಾಗಿತ್ತು" ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾನೆ! 1856ರ ಆಗಸ್ಟ್ 25ರಂದು ಪ್ರತಿಷ್ಠೆಯ ವೇದಗಳ ಅನುವಾದದ ಪ್ರೊಜೆಕ್ಟ್ ಅನ್ನು ತನಗೆ ವಹಿಸಿದ ಕಾರ್ಲ್ ಜೋಸಿಯಾಸ್ ವಾನ್ ಬುನ್ಸೆನ್ ಗೆ ಬರೆದ ಪತ್ರದಲ್ಲಿ " ಸೈಂಟ್ ಪಾಲ್ ಕಾಲದ ರೋಮ್ ಗಿಂತ, ಗ್ರೀಸ್ ಗಿಂತ ಈಗ ಇಂಡಿಯಾ ಕ್ರೈಸ್ತ ಮತಕ್ಕೆ ಪರಿಪಕ್ವ ಸ್ಥಿತಿಯಲ್ಲಿದೆ. ಈ ಹೋರಾಟಕ್ಕೆ ನನ್ನ ಪ್ರಾಣವನ್ನಾದರೂ ಧಾರೆ ಎರೆಯುತ್ತೇನೆ" ಎಂದಿದ್ದ. ಮೆಕಾಲೆಯಂತೂ ಆಂಗ್ಲ ಶಿಕ್ಷಣವನ್ನು ಜಾರಿಗೊಳಿಸಿ ಇನ್ನಿಲ್ಲುಳಿಯುವವರು ಕಪ್ಪು ಚರ್ಮದ ಬ್ರಿಟಿಷರು ಅಂದಿದ್ದ. ಅದರ ಫಲವೇ ನಾವು ಇದು ಕಾಣುತ್ತಿರುವುದು. ನಾವು ನಮ್ಮ ಮಕ್ಕಳಿಗೆ ನೈಜ ಇತಿಹಾಸವನ್ನು ಹೇಳಿಕೊಡುತ್ತಿಲ್ಲ. ನಾವು ಕಣ್ಣು ಮುಚ್ಚಿಕೊಂಡು ನಮ್ಮ ಮಾಜಿ ಪಾಲಕರು ಅವರ ಸ್ವಾರ್ಥಕ್ಕಾಗಿ ಹಲವು ತಲೆಮಾರುಗಳ ಪರ್ಯಂತ ಅರೆದು ಕುಡಿಸಿದ ಅಸತ್ಯಗಳನ್ನೇ ಮೆಲುಕು ಹಾಕುತ್ತಾ ಆರ್ಯರು ವಿದೇಶೀಯರೆಂದೂ, ಎಲ್ಲಿಂದಲೋ ದಂಡೆತ್ತಿ ಬಂದು ಈ ದೇಶವನ್ನು ದೌರ್ಜನ್ಯದಿಂದ ಆಕ್ರಮಿಸಿ ತಮ್ಮ ಅಜ್ಞಾನವನ್ನೂ, ಮತ ಮೌಢ್ಯವನ್ನು ಎಲ್ಲರ ಮೇಲೆ ಹೇರಿದರೆಂದೂ, ಬಿಳಿಯ ದೊರೆಗಳು ಮತ್ತವರ ಈಗಿನ ಹಿಂಬಾಲಕರು ಹೇಳಿದ ಸುಳ್ಳು ಮಾತುಗಳನ್ನೂ, ಮತ ಮೌಢ್ಯದಿಂದ ಬರೆದ ಬರವಣಿಗೆಯನ್ನೂ ಶಾಶ್ವತ ಸತ್ಯಗಳೆಂದೂ ನಂಬುತ್ತಿದ್ದೇವೆ. ನಮ್ಮ ಚರಿತ್ರೆಯನ್ನು ದುರ್ಬುಧ್ಧಿಯಿಂದ ಭೃಷ್ಟಗೊಳಿಸಿದ ವಿದೇಶೀ ಪೀಡೆಯಿಂದ ಮುಕ್ತಿ ಹೊಂದಿದ ನಂತರವೂ ಅವರು ಭೃಷ್ಟಗೊಳಿಸಿದ್ದೇ ನಿಜವಾದ ಚರಿತ್ರೆ ಎಂದು ಭ್ರಮಿಸುತ್ತಿದ್ದೇವೆ.
              ಆರ್ಯರು ಹೊರಗಿನಿಂದ ಬಂದು ಇಲ್ಲಿನ ದ್ರಾವಿಡ ನಾಗರೀಕತೆಯನ್ನು ಧ್ವಂಸಗೊಳಿಸಿದರು ಎಂಬುದು ಶುದ್ಧ ಸುಳ್ಳೆಂದೂ, ಹರಪ್ಪ-ಮೊಹಂಜೋದಾರೋಗಳಲ್ಲಿದ್ದುದು ಶುದ್ಧ ಸನಾತನ ವೈದಿಕ ಸಂಸ್ಕೃತಿಯೆಂದೂ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳು ಮುಕ್ತಕಂಠದಿಂದ ಸಾರಿವೆ. ಈ ನಾಗರೀಕತೆ ಹದಿನೈದು ಲಕ್ಷ ಚದರ ಕಿಮೀಗಳ ವಿಶಾಲ ಪ್ರದೇಶದಲ್ಲಿ ಬೆಳೆದಿತ್ತೆಂದೂ, ಪ್ರಾಚೀನ ಈಜಿಪ್ಟ್-ಮೆಸಪಟೋಮಿಯಾ ನಾಗರೀಕತೆಗಳೆರಡನ್ನು ಸೇರಿಸಿದರೂ ಪ್ರಮಾಣ ಹಾಗೂ ಶ್ರೇಷ್ಠತೆಯಲ್ಲಿ ಇದಕ್ಕೆ ಸರಿಸಾಟಿಯಾಗಲಾರದೆಂದೂ ರುಜುವಾತಾಗಿದೆ. ಈ ವೇದ ನಾಗರೀಕತೆ ಉಚ್ಛ್ರಾಯ ಸ್ಥಿತಿಯಲ್ಲಿ ಬೆಳಗಿದ ದೃಷ್ಠಾಂತಗಳು ಕ್ರಿ.ಪೂ 6500 ಕಾಲದ ಈಗ ಪಾಕಿಸ್ತಾನದಲ್ಲಿರುವ ಮೆಹರ್ ಗಢ್ ಉತ್ಖನನದಲ್ಲಿ ಹೊರಬಿದ್ದುದರಿಂದ ಹರಪ್ಪ ನಾಗರೀಕತೆಗೂ ನಾಲ್ಕು ಸಾವಿರ ವರ್ಷಗಳ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ಸ್ಪಷ್ಟಗೊಂಡಂತಾಗಿದೆ.
               ನಮ್ಮ ಇತಿಹಾಸಕಾರರು ಪರಮ ಪ್ರಮಾಣವಾಗಿ, ಪ್ರಾಚೀನ ಸ್ಥಿತಿಗತಿಗಳಿಗೆ ಸಾಕ್ಷಿಯಾಗಿ ಪರಿಗಣಿಸುವ ಚಾರಿತ್ರಿಕ ಗ್ರಂಥ ಮೆಗಾಸ್ತನೀಸನ "ಇಂಡಿಕಾ"! ಅದರಲ್ಲಿರುವ ಭಾರತದ ಬಗೆಗಿನ ಕೆಲವು ವ್ಯಾಖ್ಯೆಗಳನ್ನು ನೋಡಿ: "ಆ ದೇಶದಲ್ಲಿ ಚಿನ್ನ ಬರುವುದು ಇರುವೆಗಳಿಂದ! ಇರುವೆಗಳು ಬಿಲಗಳನ್ನು ಮಾಡಿ ಚಿನ್ನದ ಪುಡಿಯನ್ನು ಶೇಖರಿಸುತ್ತಾ ಹೋಗುತ್ತವೆ. ಈ ರೀತಿ ಶೇಖರಣೆಯಾದದ್ದು ಬೆಟ್ಟದಷ್ಟು ಎತ್ತರಕ್ಕೆ ಬೆಳೆಯುತ್ತದೆ. ಇರುವೆಗಳು ಬಿಲದೊಳಕ್ಕೆ ಹೋದ ಸಂದರ್ಭ ನೋಡಿಕೊಂಡು ಅಲ್ಲಿನ ಮರುಭೂಮಿಗಳಲ್ಲಿನ ಮನುಷ್ಯರು ಚಿನ್ನವನ್ನು ಅಗೆದು ಕುದುರೆ ಬಂಡಿಗಳಲ್ಲಿ ಹೇರಿಕೊಂಡು ಅತ್ಯಂತ ವೇಗವಾಗಿ ಸಾಗುತ್ತಾರೆ. ಈ ಸುದ್ದಿ ತಿಳಿದ ಇರುವೆಗಳು ಅವರೊಂಡಿಗೆ ಛಲದಿಂದ ಹೋರಾಡುತ್ತವೆ. ಆ ಇರುವೆಗಳಿಗೂ ಚಿನ್ನದ ಬೆಲೆ ಗೊತ್ತು. ಅದಕ್ಕಾಗಿಯೇ ಪ್ರಾಣವನ್ನು ಪಣವಾಗಿಟ್ಟು ಹೋರಾಡುತ್ತವೆ". ನಮ್ಮ ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವುದು ಇದೇ ಇಂಡಿಕಾ ಗ್ರಂಥದಲ್ಲಿರುವ ಚಂದ್ರಗುಪ್ತ ಮೌರ್ಯನ ರಾಜ್ಯಾಡಳಿತದ ವರ್ಣನೆ! ಹಾಗಾದರೆ ಅದು ಐತಿಹಾಸಿಕವಾಗಿ ಎಷ್ಟು ಸತ್ಯವಿರಬಹುದು? ಕ್ರಿ.ಪೂ. 63ರಲ್ಲಿ ಹುಟ್ಟಿದ ಸ್ಟಾರ್ಬೋ ತನ್ನ ದೇಶದ ಮಹಾನ್ ಇತಿಹಾಸಕಾರರ ಬಗ್ಗೆ "ಇಲ್ಲಿಯವರೆಗೆ ಇಂಡಿಯಾದ ಬಗ್ಗೆ ಬರೆದವರೆಲ್ಲಾ ಸುಳ್ಳು ಬುರುಕರು. ಇವರ ಪೈಕಿ ಡಿಮ್ಯಾಚಸ್, ಮೆಗಾಸ್ತನೀಸರನ್ನು ನಂಬಲು ಸಾಧ್ಯವಿಲ್ಲ. ಮನುಷ್ಯರು ಮಲಗಬಹುದಾದಷ್ಟು ಅಗಲ ಕಿವಿಯುಳ್ಳವರನ್ನು,ಬಾಯಿ ಮೂಗು ಇಲ್ಲದವರನ್ನು, ಒಕ್ಕಣ್ಣರನ್ನು, ಕಾಲಬೆರಳು ಹಿಂದಕ್ಕೆ ತಿರುಗಿದವರನ್ನು ಕುರಿತು ಅನೇಕ ಕಟ್ಟುಕಥೆಗಳನ್ನು ಹೆಣೆದರು. ಚಿನ್ನಕ್ಕಾಗಿ ಅಗೆಯುವ ಇರುವೆಗಳನ್ನೂ, ಎತ್ತು,ಜಿಂಕೆಗಳನ್ನು ನುಂಗುವ ಹಾವುಗಳ ಕುರಿತು ಹೇಳಿ ಒಬ್ಬರೊನ್ನೊಬ್ಬರು ಸುಳ್ಳುಗಾರರೆಂದು ಆರೋಪಿಸಿಕೊಂಡರು." ಎಂದಿದ್ದಾನೆ. ಇಂದಿನ ಇತಿಹಾಸಕಾರರಿಗೆ ಸಿಕ್ಕಿರುವುದು ಮೆಗಾಸ್ಥನೀಸನ ಮೂಲ ರಚನೆಯೇ ಎಂಬುದರ ಬಗ್ಗೆಯೂ ಸಂಶಯವಿದೆ. ಇಂತಹ ಇತಿಹಾಸ ಗ್ರಂಥವನ್ನು ಆಧರಿಸಿ ನಮ್ಮ ಪಠ್ಯಪುಸ್ತಕಗಳನ್ನು ರಚಿಸಿದವರು ಜಗತ್ತೇ ಗೌರವಿಸುವ ವೇದ-ಉಪನಿಷತ್ತುಗಳನ್ನು ಪಠ್ಯದಲ್ಲಿ ಅಳವಡಿಸುವಾಗ ವಿರೋಧಿಸುತ್ತಾರೆಂದರೆ ಅವರದ್ದು ಕೇವಲ ಭಾರತ ವಿರೋಧಿ ಮಾತ್ರವಲ್ಲ, ಇತಿಹಾಸ ವಿರೋಧಿ ಮಾನಸಿಕತೆ ಎಂಬುದು ಸ್ಪಷ್ಟವಲ್ಲವೇ? ಅಲ್ಲದೆ ಇಂತಹ ಕಟ್ಟುಕಥೆಗಳನ್ನು ನಂಬುವ ಇವರು ಆಧುನಿಕ ಸಂಶೋಧನೆಗಳಿಂದಲೂ "ಇಂತಹುದ್ದೊಂದು ಆಗಿಹೋಗಿದೆ" ಎಂದು ರುಜುವಾತಾದ ರಾಮಾಯಣ-ಮಹಾಭಾರತ-ಪುರಾಣಾದಿಗಳನ್ನೇ ಕಟ್ಟುಕಥೆಗಳೆನ್ನುತ್ತಾರೆಂದರೆ ಅವರು ದೇಶದ್ರೋಹಿಗಳೇ ಅಲ್ಲವೇ? ರೋಮಿಲಾ ಥಾಪರ್, ಆರ್.ಎಸ್. ಶರ್ಮಾ, ಬಿಪಿನ್ ಚಂದ್ರ, ಸತೀಶ್ ಚಂದ್ರ, ಹಾಗೂ ಅರ್ಜುನ್ ದೇವನಂತಹ ಇತಿಹಾಸಕಾರರು ಇಂದಿಗೂ ಆರ್ಯ-ದ್ರಾವಿಡದ ಹಿಂದೆ ಸುತ್ತುತ್ತಿರುವ ಬ್ರಿಟಿಷ್ ಮಾನಸಿಕತೆಯ ಇತಿಹಾಸಕಾರರು. ಇವರ ಇತಿಹಾಸ ಗ್ರಂಥಗಳನ್ನಾಧರಿಸಿಯೇ ನಮ್ಮ ಇತಿಹಾಸದ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ.
               ಕೇವಲ ಆರ್ಯ ದ್ರಾವಿಡ ಕಟ್ಟುಕಥೆ ಮಾತ್ರವಲ್ಲ ಮಿಕ್ಕುಳಿದ ಇತಿಹಾಸವನ್ನೂ ತಿರುಚಿದ ಕೀರ್ತಿ ಆಂಗ್ಲರಿಗೂ ಅವರ ಹಿಂಬಾಲಕರಿಗೂ ಸಲ್ಲುತ್ತದೆ. ಕ್ರಿ.ಪೂ 16 ಶತಮಾನದ ಮೌರ್ಯರ ಚಂದ್ರಗುಪ್ತನನ್ನು ಕ್ರಿ.ಪೂ.4ನೇ ಶತಮಾನದ ಅಲೆಕ್ಸಾಂಡರ್ ಸಮಕಾಲೀನ ಚಂದ್ರಗುಪ್ತನೆಂದು ಪ್ರಸ್ತುತಪಡಿಸಿದರು.ಇದಕ್ಕೆ ಉತ್ಖನನದ ಆಧಾರವೂ ಇದೆ. ಅಲ್ಲದೆ ಇನ್ನೊಂದು ಮಹತ್ವದ ಆಧಾರ ಕೌಟಿಲ್ಯನ ಗ್ರಂಥಗಳಲ್ಲಿ ಹಾಗೂ ಅಲೆಗ್ಸಾಂಡರನ ಸಮಯದಲ್ಲಿ ಭೇಟಿ ನೀಡಿದ ಮೆಗಾಸ್ತನೀಸನ ಗ್ರಂಥಗಳಲ್ಲಿ ಸಾಮ್ಯತೆ ಇಲ್ಲದಿರುವುದು ಮತ್ತೊಂದು ಪ್ರಮುಖ ಅಂಶ! ಇಂದಿಗೂ ನಮ್ಮ ಶಕ ಪುರುಷರಾಗಿರುವ ವಿಕ್ರಮಾದಿತ್ಯ, ಶಾಲಿವಾಹನರನ್ನು ಕಸದ ಬುಟ್ಟಿಗೆ ಎಸೆದುಬಿಟ್ಟರು. ಇನ್ನು ವಿಲಿಯಂ ಜೋನ್ಸ್ ಎಂಬ ಮಹಾ ಇತಿಹಾಸಕಾರನಂತೂ ಇಬ್ಬರು ಬುದ್ಧರನ್ನು ಸೃಷ್ಟಿಸಿದ. ಒಬ್ಬನನ್ನು ದ್ವಾಪರಯುಗದ ಕೊನೆಗೂ ಇನ್ನೊಬ್ಬನನ್ನು ಕಲಿಯುಗದ ಸಾವಿರವರ್ಷಗಳು ಸಂದ ಬಳಿಕ ಮತಸ್ಥಾಪಕನನ್ನಾಗಿಸಿದ. ಬುದ್ಧನ ಬಗೆಗಂತೂ ಒಬ್ಬೊಬ್ಬ ಇತಿಹಾಸಕಾರ ಒಂದೊಂದು ಕಾಲ ಘಟ್ಟವನ್ನು ನಮೂದಿಸಿದ್ದಾರೆ. ಕಲ್ಹಣನ ರಾಜತರಂಗಿಣಿಯ ದಾಖಲೆಯಂತೆ ಕ್ರಿ.ಪೂ. 1234ರ ಕಾಲದ ಕಾಶ್ಮೀರದ ರಾಜ ಅಭಿಮನ್ಯುವಿನ ಸಮಯದಲ್ಲಿ ಬೌದ್ಧ ಮತ ಆ ರಾಜ್ಯದಲ್ಲಿತ್ತು. ಆದರೆ ನಮ್ಮ ನವ ಇತಿಹಾಸಕಾರರು ಮತವು ವ್ಯಾಪಿಸಿದ್ದ 800 ವರ್ಷಗಳ ಬಳಿಕ ಮತಪ್ರವರ್ತಕನಿಗೆ ಜನ್ಮ ಕೊಟ್ಟರು. ಅಲ್ಲದೆ ಕ್ರಿ.ಪೂ 509ರಲ್ಲಿ ಹುಟ್ಟಿದ ಶಂಕರಾಚಾರ್ಯರನ್ನೂ ಕ್ರಿ.ಶ 788ರ ಅಭಿನವ ಶಂಕರರನ್ನಾಗಿಸಿದರು.
                    ಇನ್ನು ಮಹಮದೀಯರ ದಾಳಿಯನ್ನೂ, ಅವರನ್ನು ದೇವಾಂಶ ಸಂಭೂತರೆನ್ನುವಷ್ಟು ಹೊಗಳಿ ಬರೆದಿರುವುದನ್ನು ನೋಡಿ ಈ ದೇಶದ ಬಗ್ಗೆ ಅಭಿಮಾನವಿರುವ ಪ್ರತಿಯೊಬ್ಬನೂ ಅಸಹ್ಯಪಟ್ಟುಕೊಳ್ಳುತ್ತಾನೆ. ತೈಮೂರ್, ಘಜ್ನಿ, ಘೋರಿ, ಮೊಘಲರು, ಬಹಮನಿಗಳು ನಡೆಸಿದ ಮತಾಂತರ-ಕೊಲೆ-ಅತ್ಯಾಚಾರ-ಲೂಟಿ-ಮೋಸ, ಹಿಂದೂ ರಾಜರಿಂದ ಸೋತು ಔದಾರ್ಯದಿಂದ ಬದುಕುಳಿದು ಮತ್ತೆ ಮೋಸದಿಂದ ಕೊಲೆ ಮಾಡಿದ್ದನ್ನು ಮುಚ್ಚಿಟ್ಟು ಭಾರತೀಯರದ್ದು ಬರೇ ಸೋಲಿನ ಇತಿಹಾಸ ಎಂಬಂತೆ ಬರೆದರು. ಇದರಿಂದಾಗಿಯೇ ಇಂದಿಗೂ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದಲ್ಲಿ ತೊಡಕಾಗಿರುವುದು, ತೇಜೋಮಹಾಲಯ ತಾಜ್ ಮಹಲ್ ಆಗಿ ಕೆಳಗಿನ ಅಂತಸ್ಥಿನ ಕೊಠಡಿಗಳು ಮುಚ್ಚಿರುವುದು, ಮಥುರಾ-ಕಾಶಿಗಳಲ್ಲಿ ದೇವಾಲಯಗಳನ್ನೇ ನಾಶಮಾಡಿ ರಚಿತವಾದ ಮಸೀದಿಗಳು ಉಳಿದುಕೊಂಡಿರುವುದು! ಅತ್ತ ವಿಜಯನಗರದ ಇತಿಹಾಸವನ್ನೂ ಪಠ್ಯಪುಸ್ತಕಗಳಲ್ಲಿ ನಮೂದಿಸಲಿಲ್ಲ. ಇತ್ತ ಛತ್ರಪತಿ ಶಿವಾಜಿಯಂತಹ ಅಪ್ರತಿಮ ಭಾರತ ವೀರನನ್ನು ದರೋಡೆಕೋರನೆಂದು ಹೇಳಿ ಭಾರತೀಯ ಜನಮನದಿಂದ ದೂರೀಕರಿಸುವ ಪ್ರಯತ್ನ ಮಾಡಿದರು. ಪುರೂರವ-ರಾಣಾ ಪ್ರತಾಪ-ರಾಣಾ ಸಂಗ-ಪೃಥ್ವಿರಾಜ ಚೌಹಾನರಿಗೂ ಜಾಗ ಸಿಗಲಿಲ್ಲ. ಹಿಂದೂಗಳ ಆಶ್ರಯದಲ್ಲಿ ಅದರಲ್ಲೂ ರಜಪೂತರ ಸೂರಿನಡಿಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ! ದ್ರೋಹ ಮಾಡುವುದು ಮೊಘಲರ ಹುಟ್ಟುಗುಣವಾಗಿತ್ತು! ಆದರೆ ರಾಣಾಸಾಲ್ ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಹುಮಾಯೂನನಿಗೆ ಆಶ್ರಯ ನೀಡಿದ!ಅದೇ ಹುಮಾಯೂನ ಆಶ್ರಯ ನೀಡಿದವರ ವಿರುದ್ದವೇ ಯುದ್ದಕ್ಕಿಳಿದ! ಎಡ ಮಾನಸಿಕತೆಯ ಇತಿಹಾಸಕಾರರು ಇವೆಲ್ಲವನ್ನೂ ಮುಚ್ಚಿಟ್ಟರು! ಇತಿಹಾಸ ತಿಳಿಯದ ನಮ್ಮವರು ತನ್ನನ್ನು ಬಾಲ್ಯದಲ್ಲಿ ಪೊರೆದ ಬೈರಾಂಖಾನನ ಪತ್ನಿಯನ್ನೇ ಆತ ಸತ್ತ ನಂತರ ತನ್ನ ಜನಾನಕ್ಕೆ ಸೇರಿಸಿಕೊಂಡವನನ್ನು "ಅಕ್ಬರ್ ದಿ ಗ್ರೇಟ್" ಅನ್ನುತ್ತಲೇ ಮತಾಂತರವಾಗುತ್ತಿದ್ದಾರೆ.
            ಬ್ರಿಟಿಷರು ಬರೆದ ಇತಿಹಾಸವನ್ನೇ ನಂಬಿದ ಇತಿಹಾಸಕಾರರು ಬ್ರಿಟಿಷರನ್ನು ಹಾಡಿ ಹೊಗಳದೇ ಇದ್ದಾರೆಯೇ? ಬಹುಷ ಸ್ವಾತಂತ್ರ್ಯ ವೀರ ಸಾವರ್ಕರ್ "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂಬ ಕೃತಿ ಬರೆಯದೇ ಇರುತ್ತಿದ್ದರೆ ಅದು ಎಂದಿಗೂ "ದಂಗೆ"ಯಾಗಿಯೇ ಉಳಿದುಬಿಡುತ್ತಿತ್ತೇನೋ! ಆದರೇನು ಅಂತಹ ನೈಜ ಇತಿಹಾಸ ಬರೆದ ಸಾವರ್ಕರರನ್ನೇ ಇತಿಹಾಸದ ಪಠ್ಯಪುಸ್ತಕದಿಂದ ತೆಗೆದುಬಿಟ್ಟು ಸೇಡು ತೀರಿಸಿಕೊಂಡು ಬಿಟ್ಟರಲ್ಲಾ ನಮ್ಮ ಮಹಾನ್ ಇತಿಹಾಸಕಾರರು! ಕೇವಲ ಸಾವರ್ಕರ್ ಮಾತ್ರವಲ್ಲ ಫಡಕೆ, ಆಜಾದ್, ಭಗತ್ ಸಿಂಗರಂತಹ ಅಸಂಖ್ಯ ಕ್ರಾಂತಿಕಾರಿಗಳು, ಕೊನೆಗೆ ಸುಭಾಷರಿಗೂ ನ್ಯಾಯ ಒದಗಿಸಲಿಲ್ಲ! ವಂದೇ ಮಾತರಂ ವಿಭಜನೆಯಾದುದನ್ನು, ಗಾಂಧಿ-ನೆಹರೂಗಳ ಆಷಾಢಭೂತಿತನ-ಅಧಿಕಾರದಾಹವನ್ನು, ವಿಭಜನೆಯ ನೆಪದಲ್ಲಿ ನಡೆದ ಮಾರಣ ಹೋಮ, ಮೋಪ್ಲಾ ದಂಗೆಯಂತಹವುಗಳನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟರು!
              ಜನಸಂಘ ಅಧಿಕಾರದಲ್ಲಿದ್ದಾಗ ಪಠ್ಯಪುಸ್ತಕಗಳ ಬದಲಾವಣೆಗೆ ಪ್ರಯತ್ನಿಸಿತ್ತಾದರೂ ಭಾರತ ವಿರೋಧಿ ಮಾನಸಿಕತೆಯವರೇ ಎಲ್ಲೆಲ್ಲೂ ತುಂಬಿಕೊಂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಮೊತ್ತಮೊದಲಿಗೆ ಇತಿಹಾಸದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಮುಂದಾದ ಕೀರ್ತಿ ಉತ್ತರಪ್ರದೇಶದ ಕಲ್ಯಾಣ್ ಸಿಂಗ್ ಸರಕಾರಕ್ಕೆ ಸಲ್ಲಬೇಕು(1992). ಆಗ ಆರನೆಯ ತರಗತಿಯ ಇತಿಹಾಸ ಪಠ್ಯದಲ್ಲಿ ಭಾರತದ ಮೇಲಿನ ಬಾಬರನ ಬರ್ಬರ ದಾಳಿ ಹಾಗೂ ಅಯೋಧ್ಯೆಯ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ ಇತಿಹಾಸದ ನೈಜ ಚಿತ್ರಣವನ್ನು ಅಳವಡಿಸಲಾಯಿತು. ಅಲ್ಲದೆ ಆರ್ಯ ಆಕ್ರಮಣದ ಪೊಳ್ಳು ವಾದವನ್ನು ಕೂಡಾ ಕಿತ್ತೆಸೆಯಲಾಯಿತು. ಕಲ್ಯಾಣ್ ಸಿಂಗ್ ರಾಜ್ಯಾದಾದ್ಯಂತ 2500 "ಸರಸ್ವತಿ ವಿದ್ಯಾಲಯ"ಗಳನ್ನು ನಿರ್ಮಿಸಿ ಅಲ್ಲಿ ನೈಜ ಇತಿಹಾಸ ಹಾಗೂ ರಾಷ್ಟ್ರೀಯತೆಯ ಶಿಕ್ಷಣವನ್ನು ಅಳವಡಿಸಿದರು. 1994ರಲ್ಲಿ ದೆಹಲಿಯ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ರಾಷ್ಟ್ರೀಯ ಶಿಕ್ಷಣವನ್ನು ಅಳವಡಿಸುವ ಸಲುವಾಗಿ ವಿಜಯ್ ಕುಮಾರ್ ಮಲ್ಹೋತ್ರಾ ನೇತೃತ್ವದ 27 ಜನರ ಸಮಿತಿಯೊಂದನ್ನು ರಚಿಸಿದರು. ಈ ಸಮಿತಿ ವೇದ ಹಾಗೂ ಭಗವದ್ಗೀತೆಯ ಕೆಲವು ಅಂಶಗಳನ್ನು ಪಠ್ಯಗಳಲ್ಲಿ ಅಳವಡಿಸುವಂತೆಯೂ, ಪ್ರತಿಯೊಂದು ಶಾಲೆಗಳಲ್ಲಿ ವಂದೇಮಾತರಂ ಕಡ್ಡಾಯವಾಗಿ ಹಾಡಿಸುವಂತೆ ಸೂಚನೆ ನೀಡಿತು. 8ನೇ ತರಗತಿ ಪಠ್ಯದಲ್ಲಿ ಕುತುಬ್ ಮಿನಾರ್ ಅನ್ನು ಕಟ್ಟಿದ ಶ್ರೇಯವನ್ನು ಕುತುಬ್-ಉದ್ದೀನ್-ಐಬಕ್ ಗೆ ಕೊಡದೇ ಅದರ ನೈಜ ನಿರ್ಮಾತೃ ಸಮುದ್ರ ಗುಪ್ತನಿಗೆ ಕೊಟ್ಟಿರುವುದನ್ನು ತಥಾಕಥಿತ ಬುದ್ದಿಜೀವಿಗಳು ವಿರೋಧಿಸುವುದರೊಂದಿಗೆ ಖುರಾನಾ ತಮ್ಮ ಯೋಜನೆಯಿಂದ ಹಿಂದೆ ಸರಿಯಬೇಕಾಯಿತು.
             ಮುರಳಿ ಮನೋಹರ ಜೋಷಿಯವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಬ್ರಿಟಿಷರು ಹಾಗೂ ಬ್ರಿಟಿಷ್ ಮಾನಸಿಕತೆಯವರಿಂದಾಗಿ ಪಠ್ಯಪುಸ್ತಕಗಳಲ್ಲುಳಿದ ತಿರುಚಿದ ಇತಿಹಾಸವನ್ನು ತೆಗೆದು ಹಾಕಿ ಅದರಲ್ಲಿ ನೈಜ ಇತಿಹಾಸವನ್ನು ಸೇರ್ಪಡೆಗೊಳಿಸುವ ಉದ್ದೇಶದಿಂದ ಇತಿಹಾಸದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ನಿರ್ದೇಶನ ನೀಡಿದರು. ಜೆ.ಎಸ್. ರಜಪೂತ ಅವರನ್ನು ಜುಲೈ 1999 ರಲ್ಲಿ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ರಾಷ್ಟ್ರೀಯ ಕೇಂದ್ರ (ಎನ್ ಸಿ ಇಆರ್ ಟಿ) ನಿರ್ದೇಶಕ ನೇಮಿಸಲಾಯಿತು. ವಿದ್ಯಾ ಭಾರತಿಯ ಕಾರ್ಯದರ್ಶಿ, ಶಿಕ್ಷಾ ಬಚಾವೊ ಎಂಬ ಆಂದೋಲನವನ್ನು ನಡೆಸುತ್ತಿರುವ ಸಂಘ ಪ್ರಚಾರಕ್ ದೀನನಾಥ ಬಾತ್ರ, NCERT ನಿರ್ದೇಶಕ ಜೆ.ಎಸ್. ರಜಪೂತ್, ಆರ್ಗನೈಸರ್ ಅಂಕಣಕಾರ ಅತುಲ್ ರಾವತ್, "ಪಾಂಚಜನ್ಯ"ದ ಸಂಪಾದಕ ತರುಣ್ ವಿಜಯ್ ಇತಿಹಾಸದ ಪಠ್ಯಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಎಂದಿನಂತೆ ಎಡಪಂಥೀಯ ಮಾನಸಿಕತೆಯ ಇತಿಹಾಸಕಾರರು ಹಾಗೂ ಬುದ್ದಿಜೀವಿಗಳು ಅಲ್ಲದೆ ಬಿಜೆಪಿಯೇತರ ಸರಕಾರಗಳಿಂದ ವಿರೋಧ ವ್ಯಕ್ತವಾಯಿತು. ಅಲ್ಲದೆ  128 ಪುಟಗಳ NCFSE ಡಾಕ್ಯುಮೆಂಟಿನಲ್ಲಿದ್ದ ಕೆಲ ಸಾಲುಗಳ ಮೇಲೆ ಎಡಪಂಥೀಯರಿಂದ ವಿರೋಧ ವ್ಯಕ್ತವಾಯಿತು. "ಧರ್ಮವೆಂದರೆ ಜೀವನದ ಅಗತ್ಯ ಮೌಲ್ಯಗಳ ಮೂಲ ಮಾತ್ರವಲ್ಲ ಮೌಲ್ಯಗಳ ಉತ್ಪಾದಕವೂ ಹೌದು" ಎಂಬ ಸಾಲಿನ ಮೇಲೆ ವಿರೋಧ ವ್ಯಕ್ತಪಡಿಸಿದ ಬುದ್ದಿ ಜೀವಿಗಳ ಮಾನಸಿಕತೆ ಎಂಥದಿರಬಹುದು? ಧಾರ್ಮಿಕ ಮೌಲ್ಯಗಳ ಅಧ್ಯಯನವನ್ನು ಸಮಾಜ ಶಾಸ್ತ್ರದಲ್ಲಿ ಸೇರಿಸುವುದು ವಿಧಿ 28(1)ರ ಉಲ್ಲಂಘನೆ ಎಂದು ಎಡ ಪಂಥೀಯರು ಸರ್ವೋಚ್ಛ ನ್ಯಾಯಲಯದಲ್ಲಿ ದೂರು ಸಲ್ಲಿಸಿದ್ದರು. ಆದರೆ ಎಂ.ಬಿ. ಶಾಹ್, ಎಚ್.ಕೆ ಸೆಮಾ ಹಾಗೂ ಡಿ.ಎಂ.ಧರ್ಮಾಧಿಕಾರಿಗಳಿದ್ದ ಪೀಠ ಅರ್ಜಿದಾರರ ದೂರು ಕೇವಲ ಕಾಲ್ಪನಿಕ ಹಾಗೂ ಅಪಕ್ವವಾದದ್ದು ಎಂದು ಅದನ್ನು ತಳ್ಳಿ ಹಾಕಿತ್ತು. ಅಲ್ಲದೆ ನ್ಯಾಯಾಲಯ NCERTಗೆ ಹೆಚ್ಚು ಪರಿಷ್ಕರಣೆ ಮಾಡಲು ಅನುಮತಿಸುತ್ತದೆ ಎಂದೂ ಹೇಳಿತು. 2002ರ ಸೆಪ್ಟೆಂಬರಿನಲ್ಲಿ ಮುರಳಿ ಮನೋಹರ ಜೋಷಿಯವರ ಪರಿಷ್ಕೃತ ಪಠ್ಯಪುಸ್ತಕಗಳ ವಿತರಣೆಗೆ ಸುಪ್ರಿಮ್ ಕೋರ್ಟ್ ಅನುಮತಿ ನೀಡಿತ್ತು. ಇತ್ತೀಚೆಗೆ ಕರ್ನಾಟಕದಲ್ಲಿ ಭಾಜಪಾ ಸರಕಾರ ಶಾಲೆಗಳಲ್ಲಿ ಭಗವದ್ಗೀತಾ ಅಭಿಯಾನವನ್ನು ಕೈಗೊಂಡಾಗ ಇದೇ ಆಂಗ್ಲ ಮಾನಸಿಕತೆ "ಶಿಕ್ಷಣದ ಕೇಸರೀಕರಣ" ಎಂದು ರಾದ್ದಾಂತ ಮಾಡಿದ್ದು ನೆನಪಿರಬಹುದು!
            ನಂಬಿಕೆ ಹಾಗೂ ಆಚರಣೆಗಳನ್ನು ಬದಲಾಯಿಸಿಕೊಳ್ಳುವ ಬಲವಂತದ ಅಥವಾ ಆಮಿಷಕ್ಕೊಳಗಾದ ಮತಾಂತರ ಎಷ್ಟು ಅಪಾಯಕಾರಿಯೋ ವೈಚಾರಿಕ ಮತಾಂತರವೂ ಅಷ್ಟೇ ಅಪಾಯಕಾರಿ. ಈ ವೈಚಾರಿಕ ಮತಾಂತರಗೊಂಡವರಲ್ಲಿ ಕೆಲವರು ಗೊತ್ತಿದ್ದೇ ಮತಾಂತರಕ್ಕೊಳಗಾದವರು, ಇನ್ನು ಕೆಲವರು ಸ್ಥಾನ-ಮಾನ-ಧನಗಳ ಚಟದಿಂದ ಮತಾಂತರಕ್ಕೊಳಗಾದವರು, ಮತ್ತೂ ಕೆಲವರು ತಮ್ಮ ನೈಜ ಇತಿಹಾಸವನ್ನು ತಿಳಿಯದೆ, ತಿಳಿದುಕೊಳ್ಳಲು ಪ್ರಯತ್ನಿಸದೇ ಮತಾಂತರಗೊಂಡವರು! ಈ ಮೂರನೇ ವರ್ಗ ದ ಮತಾಂತರವನ್ನು ತಡೆಯಬೇಕಾದರೆ ಮುಂದಿನ ಪೀಳಿಗೆಗೆ ನೈಜ ಇತಿಹಾಸವನ್ನು ತಿಳಿಸಲೇಬೇಕು. ಆ ಮೂಲಕ ಮೊದಲೆರಡು ವರ್ಗವನ್ನು ಕಿತ್ತೆಸೆಯಬಹುದು!ಭಾರತವನ್ನು ಮತ್ತೆ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಬಹುದು! ಭಾರತೀಯತೆಯನ್ನು ಮೂಲೋತ್ಪಾಟನೆ ಮಾಡಲೆಂದೇ ರಚಿತವಾದ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳಿಗೆ ಬೋಧಿಸಿಕೊಂದು ಬಂದು ಅವರನ್ನು ಆಂಗ್ಲ ಮಾನಸಿಕತೆಯವರನ್ನಾಗಿ ಮಾಡಿ ನಮಗೆ ನಾವೇ ಕಲ್ಲುಚಪ್ಪಡಿ ಹಾಕಿಕೊಂಡಿರುವುದು ಸಾಕು. ಕಾಲ ಪಕ್ವವಾಗಿದೆ. ಇದು ನೈಜ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ "ಸಕಾಲ"!
            ಕೇವಲ ಇತಿಹಾಸವನ್ನು ಮಾತ್ರವಲ್ಲ, ನಮ್ಮ ವಿಜ್ಞಾನ-ಗಣಿತಗಳ ಪಠ್ಯಪುಸ್ತಕಗಳ ಬದಲಾವಣೆಯೂ ಅನಿವಾರ್ಯ. ಮೂಲವಿಜ್ಞಾನಕ್ಕೆ ಸಿಗಬೇಕಾದ ಪ್ರಾಮುಖ್ಯತೆ ಸಿಗದಿರುವುದು, ವೃತ್ತಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗೆ ಸರಿಯಾಗಿ ಪಠ್ಯಗಳು ಆಧುನೀಕರಣಗೊಳ್ಳದಿರುವುದು, ಸಂಶೋಧನಾ ಕ್ಷೇತ್ರಕ್ಕೆ ಸಿಗದಿರುವ ಮಹತ್ವ, ಪ್ರತಿಭಾ ಪಲಾಯನ ಎಲ್ಲವೂ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನೇ ಸೂಚಿಸುತ್ತವೆ. ಅಷ್ಟಕ್ಕೂ ನಾವು ನಮ್ಮಲ್ಲಿ ಅಣುವಿಜ್ಞಾನಿ ಕಣಾದ, ವೈಮಾನಿಕ ತಂತ್ರಜ್ಞ ಭರದ್ವಾಜ, ವೈದ್ಯ ವಿಶಾರದ ಚರಕ-ಸುಶ್ರುತ, ಗಣಿತಜ್ಞ ಭೋದಾಯನ-ಭಾಸ್ಕರಾಚಾರ್ಯ, ಖಗೋಳ ಶಾಸ್ತ್ರಜ್ಞ ಆರ್ಯಭಟ-ವರಾಹಮಿಹಿರಾದಿಯಾಗಿ ಇದ್ದರೆಂದು ಬರಿಯ ಹೆಮ್ಮೆಪಟ್ಟುಕೊಂಡು ಸುಮ್ಮನಿದ್ದುಬಿಟ್ಟರೇನು ಪ್ರಯೋಜನ. ಅಂತಹವರನ್ನು ಮರುಸೃಷ್ಟಿ ಮಾಡಬೇಕಿದೆ. ಅದಕ್ಕಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾಗಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ