ಪುಟಗಳು

ಮಂಗಳವಾರ, ಮಾರ್ಚ್ 27, 2018

ಮತಾಂತರಕ್ಕಿಂತ ಮರಣ ಲೇಸೆಂದ ಧರ್ಮವೀರ

ಮತಾಂತರಕ್ಕಿಂತ ಮರಣ ಲೇಸೆಂದ ಧರ್ಮವೀರ

        ಆ ಧೀರನಿಗೂ ಅವನ ಮಂತ್ರಿಗೂ ಕೋಡಂಗಿಯ ವೇಷ ಹಾಕಿಸಿ, ಟೋಪಿಗೆ ಗಂಟೆ ಕಟ್ಟಿ, ಅವಾಚ್ಯ ಶಬ್ಧಗಳಿಂದ ಕಿಚಾಯಿಸುತ್ತಾ, ಒಂಟೆಗಳ ಮೇಲೆ ಮೆರವಣಿಗೆ ಮಾಡಿಸಿ ಬಾದಷಹನ ಬಳಿ ಕರೆದೊಯ್ಯಲಾಯಿತು. ಬಾದಷಹ ನಿಧಿ-ನಿಕ್ಷೇಪಗಳನ್ನು ಎಲ್ಲಿ ಇಟ್ಟಿದ್ದೀಯಾ ಎಂದು ನಾನಾ ತಂತ್ರಗಳನ್ನು ಉಪಯೋಗಿಸಿ ಕೇಳಿದರೂ ಆತ ತುಟಿಪಿಟಿಕ್ಕೆನ್ನಲಿಲ್ಲ. ಪ್ರಾಣ ಉಳಿಯಬೇಕಿದ್ದರೆ ಇಸ್ಲಾಂ ಸ್ವೀಕರಿಸಬೇಕು ಎಂದು ಷರತ್ತು ಹಾಕಿದರೂ ಮಿಸುಕಾಡಲಿಲ್ಲ. ದಿನಾ ಬಗೆಬಗೆಯ ಚಿತ್ರಹಿಂಸೆ ಕೊಟ್ಟರೂ ಆತ ಆಸ್ಥಾನದಲ್ಲೇ ಬಾದಷಹಾನ ತಪ್ಪುಗಳನ್ನೆಲ್ಲಾ ಪಟ್ಟಿ ಮಾಡಿ ಗಟ್ಟಿ ಸ್ವರದಲ್ಲಿ ಹೇಳಿದನೇ ಹೊರತು ತಾನು ಬದಲಾಗಲಿಲ್ಲ. ಎರಡು ಸಾಲಲ್ಲಿ ಸೈನಿಕರನ್ನು ನಿಲ್ಲಿಸಿ ಅವರ ನಡುವೆ ಅವನನ್ನು ಎಳೆಸಿ ಅವರಿಂದ ಸಾಯ ಬಡಿದು ರಕ್ತ ಸೋರುತ್ತಿದ್ದರೂ ಅವನು ಬದಲಾಗಲಿಲ್ಲ. ಮಾತನಾಡಲು ಸಾಧ್ಯವಾಗದೇ ಹೋದಾಗ ಬರೆಯುವ ಸಾಮಗ್ರಿ ತರಿಸಿಕೊಂಡು ಬಾದಷಹಾ ನನಗೆ ತನ್ನ ಮಗಳನ್ನೇ ಲಂಚವಾಗಿ ಕೊಟ್ಟರೂ ಮತಾಂತರವಾಗಲಾರೆ ಎಂದು ಬರೆದ ಆ ಧೀರ. ಆ ರಾತ್ರಿ ಅವನ ಕಣ್ಣುಗಳನ್ನು ತಿವಿಯಲಾಯಿತು. ಮರುದಿನ ನಾಲಗೆ ಕತ್ತರಿಸಲಾಯಿತು. ಮುಸ್ಲಿಮರನ್ನು ಕೊಂದು, ಬಂಧಿಸಿ, ಮುಸ್ಲಿಮರ ನಗರಗಳನ್ನು ಕೊಳ್ಳೆ ಹೊಡೆದಿಕ್ಕಾಗಿ ಅವನನ್ನು ಕೊಲ್ಲಬೇಕೆಂದು ಖಾಜಿಗಳು ತೀರ್ಪು ನೀಡಿದರು. ಮಾರ್ಚ್ 11ರಂದು ಅವನ ಒಂದೊಂದೇ ಅಂಗಗಳನ್ನು ಕತ್ತರಿಸಿ ಆ ಮಾಂಸವನ್ನು ಅವನ ಎದುರೇ ನಾಯಿಗಳಿಗೆ ಹಾಕಿ ಕ್ರೂರವಾಗಿ ಹಿಂಸಿಸಿ ಕೊಲ್ಲಲಾಯಿತು. ಕತ್ತರಿಸಿದ್ದ ಅವರಿಬ್ಬರ ರುಂಡಗಳಲ್ಲಿ ಹುಲ್ಲು ತುಂಬಿ ಡೋಲು ಬಾರಿಸುತ್ತಾ, ಕಹಳೆಗಳನ್ನೂದುತ್ತಾ ದಖ್ಖನ್ನಿನ ಮುಖ್ಯ ನಗರಗಳಲ್ಲಿ ಪ್ರದರ್ಶಿಸಲಾಯಿತು. ಅಂತಹ ಹೇಯ ಚಿತ್ರಹಿಂಸೆಯನ್ನು ಅನುಭವಿಸಿದರೂ ಮತಾಂತರಕ್ಕಿಂತ ಮರಣವೇ ಮಹಾನವಮಿ ಎಂದ ಆ ಧೀರ ಮತ್ಯಾರಲ್ಲಾ ಹೈಂದವೀ ಸಾಮ್ರಾಜ್ಯದ ಜನಕ ಛತ್ರಪತಿ ಶಿವಾಜಿಯ ಧೀರ ಪುತ್ರ ಸಂಭಾಜಿ! ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟಲು ಸಾಧ್ಯವೇ?

          ದುರಭ್ಯಾಸಗಳೇ ಮೈವೆತ್ತಂತೆ ವಿಲಾಸಿಯಾಗಿ ತಂದೆಯ ಮಾತಿಗೂ ಬಗ್ಗದ ಕಾರಣ ತಂದೆಯ ಆಕ್ರೋಶಕ್ಕೆ ಗುರಿಯಾಗಿ ನಿರ್ಬಂಧದಲ್ಲಿದ್ದ ಹುಡುಗಾಟಿಕೆಯ ಸಂಭಾಜಿ ಬದಲಾದದ್ದು ಕೂಡಾ ಒಂದು ಪವಾಡ! 1980ರಲ್ಲಿ ಚೈತ್ರ ಪೌರ್ಣಮಿಯ ಮಧ್ಯಾಹ್ನ ಅಳುತ್ತಿದ್ದ ತನ್ನ ಬಂಧು-ಬಳಗಕ್ಕೆ ತಾನೇ ಧೈರ್ಯ-ಸಮಾಧಾನ ಹೇಳಿ ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಧ್ಯಾನಸ್ಥನಾಗಿ ಯೋಗಿಯಂತೆ  ಛತ್ರಪತಿ ಶಿವಾಜಿ ಇಹಯಾತ್ರೆಯನ್ನು ಮುಗಿಸಿದಾಗ ಅವನು ಕಷ್ಟಪಟ್ಟು ಮರುಸೃಷ್ಟಿಸಿದ್ದ ಹೈಂದವೀ ಸ್ವರಾಜ್ಯದಲ್ಲಿ ಕಂಡದ್ದು ಶೂನ್ಯತೆಯೇ. ಮಕ್ಕಳೇನೋ ಇಬ್ಬರಿದ್ದರು. ಒಬ್ಬನಂತೂ ದುರಭ್ಯಾಸಗಳ ದಾಸ, ದುರ್ಗುಣಿ. ಸಂಭಾಜಿ! ಅಪ್ಪನಿಗೇ ತಿರುಗಿ ಬಿದ್ದು ಶತ್ರುವಿನೊಂದಿಗೆ ಸೇರಿ ಸಮಸ್ಯೆಯೊಡ್ಡಿದವ. ಕೊನೆಗೇ ಶಿವಾಜಿಯ ಬುದ್ಧಿವಾದಕ್ಕೆ ಮಣಿದು ತಂದೆಯ ಬಳಿಗೆ ಬಂದಿದ್ದ. ಆದರೆ ಮರಳಿದ ಬಳಿಕವೂ ಬದಲಾಗದ ಕಾರಣ ಶಿವಾಜಿಯಿಂದಲೇ ಪನ್ಹಾಳಗಢದಲ್ಲಿ ನಿರ್ಬಂಧಿಸಲ್ಪಟ್ಟಿದ್ದ. ಅಂತಹವನನ್ನು ರಾಜಪಟ್ಟದಲ್ಲಿ ಕೂರಿಸಲು ಬುದ್ಧಿಯಿದ್ದ ಯಾವ ಮಂತ್ರಿ ಒಪ್ಪಿಯಾನು? ಇನ್ನೊಬ್ಬ ಮಗ ರಾಜಾರಾಮ ಹತ್ತರ ಎಳೆ ಹುಡುಗ. ಅವನು ಸ್ವತಂತ್ರನಾಗಿ ರಾಜ್ಯಭಾರ ಮಾಡುವುದಾದರೂ ಹೇಗೆ?  ಸೊಯಿರಾಬಾಯಿ ದಿಢೀರನೇ ಮುಂಚೂಣಿಗೆ ಬಂದು ಮಂತ್ರಿಗಳೀರ್ವರ ಸಹಾಯದಿಂದ ತನ್ನ ಮಗ ರಾಜಾರಾಮನನ್ನು ಪಟ್ಟಕ್ಕೇರಿಸಿದಳು. ಉಳಿದ ಮಂತ್ರಿಗಳಿಗೂ, ಸೈನ್ಯಾಧಿಕಾರಿಗಳಿಗೂ ಅದು ಇಷ್ಟವಾಗಲಿಲ್ಲ. ಇನ್ನೇನು ರಾಜ್ಯ ಅಂತಃಕಲಹಗಳಲ್ಲಿ ಮುಳುಗಿ ಸುಲಭವಾಗಿ ಶತ್ರುಗಳ ವಶವಾಗುತ್ತದೆ ಎನ್ನುವಾಗ ಅಚ್ಚರಿಯೊಂದು ಘಟಿಸಿತು. ಮಾತ್ರವಲ್ಲ, ಮಾತೃಭೂಮಿಯ ಮೇಲಿನ ಅತೀವ ಪ್ರೇಮ, ಕುಸಿಯುತ್ತಿದ್ದ ಧರ್ಮದ ಧಾರಣ, ಚಿತ್ತಶುದ್ಧಿ-ದೀಕ್ಷಾಬದ್ಧನಾಗಿ ಹಿಂದುತ್ವದ ತೋರಣ ಕಟ್ಟಿದ ಶಿವಾಜಿಯ ಬಲಿಷ್ಟ ಸಾಮ್ರಾಜ್ಯ ಇನ್ನೇನು ಔರಂಗಜೇಬನೆಂಬ ಮತಾಂಧನಿಗೆ ಸುಲಭ ತುತ್ತಾಗಬಹುದು ಎಂದೆಣಿಸಿದವರೆಲ್ಲಾ ಕತ್ತು ಮೇಲೆತ್ತಿ ಸದಾ ನೋಡುವಂತೆ ಮಾಡಿತು. ಆಂತರಿಕ ಬಿಕ್ಕಟ್ಟುಗಳನ್ನೆಲ್ಲಾ ನಿವಾಳಿಸಿಕೊಂಡು, ಮಗದೊಮ್ಮೆ ಪುಟಿದೆದ್ದ ಶಿವಶಕ್ತಿ, ಇನ್ನೇನು ಮರಾಠರ ಆಟವನ್ನು ನಿಲ್ಲಿಸಬಹುದೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಮೊಘಲ್ ಸಾಮ್ರಾಜ್ಯದ ಮುಗಿಲು ಮುಚ್ಚಿ ಹೆಗಲು ಸೆಟೆಸಿ ವಿಜೃಂಭಿಸಿತು. ಶಿವಾಜಿ ಉರಿಸಿದ ದೀಪ ಒಬ್ಬನ ಹಿಂದೆ ಒಬ್ಬ ನಾಯಕರಂತೆ ಪ್ರತಿಯೊಬ್ಬರೂ ಕಾಲಕಾಲಕ್ಕೆ ಜವಾಬ್ದಾರಿ ವಹಿಸಿಕೊಂಡು ಮುಂದೆ ಸ್ವಾತಂತ್ರ್ಯ ಸಂಗ್ರಾಮದವರೆಗೂ, ಆ ಮೇಲೂ ಪ್ರತಿಯೊಬ್ಬ ಪ್ರಜೆಯಲ್ಲೂ ಆವಾಹಿಸಿ ನಿರಂತರ ಪ್ರವಹಿಸಿ ಹಲಕೆಲವು ಕಾಲ ಶತ್ರುಗಳ ಜಂಘಾಬಲವನ್ನೇ ಉಡುಗಿಸಿ ಮಹಾರಾಷ್ಟ್ರದ ಕಥನವನ್ನು ಸುವರ್ಣಾಕ್ಷರಗಳಲ್ಲಿ ಬರೆಸಿತು.

               ಹೌದು, ಯಾವ ಸಂಭಾಜಿ ಶಿವಾಜಿಯಂತಹ ಕರ್ಮಯೋಗಿಗೇ ಸಮಸ್ಯೆಯಾಗಿ ಕಾಡಿದ್ದನೋ, ಅಂತಹ ವಿಲಾಸಿ ತಂದೆಯ ಮರಣದ ಸುದ್ದಿ ಕೇಳಿದೊಡನೆ ಬದಲಾದ. ಸ್ವತಃ ಶಿವಾಜಿಯೇ ಅವನಲ್ಲಿ ಆವಾಹನೆಯಾದನೋ ಎನ್ನುವಂತೆ ಅಪ್ರತಿಮ ರಾಜಕೀಯ ಚಾಣಾಕ್ಷತೆ ಮೆರೆದ. ರಾಜಪ್ರಮುಖರ ಜೊತೆ ರಾಯಭಾರ ನಡೆಸಿ, ಎಲ್ಲರನ್ನೂ ತನ್ನ ಕಡೆಗೆ ಒಲಿಸಿಕೊಂಡು ಪನ್ಹಾಳವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಮರಾಠ ಹಾಗೂ ಕೊಂಕಣಗಳ ದಕ್ಷಿಣ ಸೀಮೆಯನ್ನು ವಶಪಡಿಸಿಕೊಂಡು ಐದು ಸಾವಿರ ಸೈನಿಕರೊಡನೆ ಹೊರಟ ಆತ ರಾಯಗಢ ಸೇರಿದಾಗ ಸೈನಿಕರ ಸಂಖ್ಯೆ ಇಪ್ಪತ್ತು ಸಾವಿರಕ್ಕೆ ಮುಟ್ಟಿತ್ತು. ಯಾವುದೇ ಪ್ರತಿರೋಧವಿಲ್ಲದೆ ಸಿಂಹಾಸನಾರೂಢನಾದ ಆತ ಎಲ್ಲ ಒಳಪಿತೂರಿಗಳನ್ನು ಸುಲಭವಾಗಿ ಹತ್ತಿಕ್ಕಿದ. ಸುಖಲೋಲುಪನಾಗಿ ಮದಿರೆ-ಮಾನಿನಿಯರ ದಾಸನಾಗಿದ್ದರೂ, ಅನುಮಾನ ಬಂದವರನ್ನೆಲ್ಲಾ ಕ್ರೂರವಾಗಿ ಶಿಕ್ಷಿಸಿದರೂ, ಕವಿಕುಲೇಶನೊಬ್ಬನನ್ನೇ ಆಪ್ತ ಸಚಿವನನ್ನಾಗಿಸಿ ಮಿಕ್ಕವರನ್ನೆಲ್ಲಾ ದೂರವಿಟ್ಟರೂ ಸಮರ್ಥವಾಗಿ ರಾಜ್ಯಭಾರ ಮಾಡಿದ. ತನ್ನ ವಿರುದ್ಧವೇ ದಂಗೆಯೆದ್ದಿದ್ದ ಮಗ ಅಕ್ಬರನಿಗೆ ಆಶ್ರಯ ನೀಡಿದನೆನ್ನುವ ನೆಪ ಹಿಡಿದು ಸ್ವಯಂ ತಾನೇ ಸರ್ವಶಕ್ತಿಗಳೊಂದಿಗೆ ಯುದ್ಧಕ್ಕೆ ಬಂದರೂ ಔರಂಗಜೇಬನಿಗೆ ಸಂಭಾಜಿಯನ್ನು ಗೆಲ್ಲಲಾಗಲಿಲ್ಲ. "ದುಷ್ಟ ತಂದೆಗೆ ಹುಟ್ಟಿದ ದುರುಳ ಮಗ" ಸಂಭಾಜಿಯ ಸೊಕ್ಕು ಮುರಿಯುತ್ತೇನೆಂದು 1681ರಲ್ಲಿ ಹೊರಟು ಬಂದ ಔರಂಗಜೇಬ ಕಾಲು ಶತಮಾನಕ್ಕೂ ಹೆಚ್ಚು ಕಾಲ ಗೆಲ್ಲಲಾರದ ಯುದ್ಧದಲ್ಲಿ ಕಳೆದು ರಾಜಧಾನಿ ಸೇರದೆ ಹತಾಷೆ, ನಿರಾಶೆಗಳಿಂದ ಅಲ್ಲಿಯೇ ಅಸುನೀಗಬೇಕಾಗಿ ಬಂತೆಂದರೆ ಸಂಭಾಜಿಯ ಪರಾಕ್ರಮವನ್ನು ಊಹಿಸಬಹುದು.

           ಹಿಂದೊಮ್ಮೆ ತನ್ನ ತಂದೆಯ ಯೋಗ್ಯತೆ, ಧ್ಯೇಯ, ದೂರದೃಷ್ಟಿಗಳನ್ನರಿಯದೆ ಮೊಘಲರ ಪಕ್ಷವನ್ನಾಂತು ಸನಾತನ ಧರ್ಮವನ್ನೇ ಮರೆತಿದ್ದ ಸಂಭಾಜಿ ಛತ್ರಪತಿಯಾಗುತ್ತಿದ್ದಂತೆ ಯುದ್ಧ ನಿರ್ವಹಣೆಯಲ್ಲಿ ತನ್ನ ತಂದೆಯನ್ನೇ ಆವಾಹಿಸಿಕೊಂಡ. ಶತ್ರುವಿನ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಅಪ್ರತಿಮನಾದ ಔರಂಗಜೇಬನಂತಹವನೇ ಸಂಭಾಜಿಯನ್ನು ಗೆಲ್ಲಲಾರದಾದ. ನಾಲ್ಕು ವರ್ಷ ನಾನಾ ವಿಧವಾಗಿ ಪ್ರಯತ್ನಿಸಿದರೂ ಸಂಭಾಜಿಯನ್ನು ಗೆಲ್ಲಲು ಅಸಾಧ್ಯವಾದಾಗ ತನ್ನ ಕೊನೆಯ ತಂತ್ರ ಹೂಡಲು ಮುಂದಾದ ಮೊಘಲ್ ದೊರೆ. ಔರಂಗಜೇಬನ ಭೀತಿಯಿಂದ ತಮ್ಮನ್ನು ಉಳಿಸಿಕೊಳ್ಳಲೋಸುಗ ಮರಾಠರಿಂದ ರಕ್ಷಣೆ ಪಡೆಯುತ್ತಾ ಅವರಿಗೆ ಭಾರೀ ಕಪ್ಪವನ್ನು ಸಲ್ಲಿಸುತ್ತಿದ್ದ ಗೋಲ್ಕೊಂಡಾ ಹಾಗೂ ಬಿಜಾಪುರಗಳನ್ನು ವಶಪಡಿಸಿಕೊಂಡರೆ ಸಂಭಾಜಿಯನ್ನು ಆರ್ಥಿಕವಾಗಿ ಕುಗ್ಗಿಸಬಹುದು ಎಂದು ಅವನ ಹಂಚಿಕೆಯಾಗಿತ್ತು. ಆ ಎರಡೂ ರಾಜ್ಯಗಳು ಔರಂಗಜೇಬನಿಗೆ ಸುಲಭವಾಗಿ ವಶವಾದವು. ಆದರೆ ಔರಂಗಜೇಬನ ಈ ಉಪಾಯ ಅವನಿಗೇ ತಿರುವು ಮುರುವಾಯಿತು. ಆ ಎರಡೂ ರಾಜ್ಯಗಳ ಸೈನಿಕರು ಜೀವನೋಪಾಯಕ್ಕಾಗಿ ಮರಾಠರ ತೆಕ್ಕೆಗೇ ಬಂದರು. ಇದರಿಂದ ಸಂಭಾಜಿಯ ಸೈನ್ಯ ವೃದ್ಧಿಯಾಗಿ ಔರಂಗಜೇಬ ಜೀವನಪರ್ಯಂತ ಪರಿತಪಿಸುವಂತಾಯಿತು.

            ಶಿವಾಜಿಯಂತೆ ತಾನಾಳಿದ ಒಂಬತ್ತು ವರ್ಷಗಳ ಪರ್ಯಂತ ಸಂಭಾಜಿಗೆ ಅಕ್ಷರಶಃ ರಣಭೂಮಿಯೇ ಮನೆಯಾಗಿತ್ತು. ಮೊಘಲರು ಒಂದು ಕಡೆಯಾದರೆ ಇನ್ನೊಂದೆಡೆ ಜಂಜೀರಾದ ಸಿದ್ದಿಗಳು; ಆಂಗ್ಲರು ಹಾಗೂ ಪೋರ್ಚುಗೀಸರು ಇನ್ನುಳಿದ ಕಡೆ; ಹೀಗೆ ಸಂಭಾಜಿಯನ್ನು ಕಾಡುತ್ತಲೇ ಇದ್ದರು. ಇವರನ್ನೆಲ್ಲಾ ತನ್ನ ಪ್ರತಾಪದಿಂದಲೇ ನಿವಾರಿಸಿಕೊಂಡರೂ ತನ್ನೊಳಗಿನ ಶತ್ರುಗಳನ್ನು ನಿಗ್ರಹಿಸಲು ಕೊನೆಗೂ ಸಂಭಾಜಿಗೆ ಸಾಧ್ಯವಾಗಲೇ ಇಲ್ಲ. ಐದು ಲಕ್ಷ ಯೋಧರ ಬೃಹತ್ ಸೈನ್ಯವನ್ನು ಸಂಘಟಿಸಿ ಸ್ವತಃ ತಾನೇ ಸಾರಥ್ಯ ವಹಿಸಿ ಒಂಬತ್ತು ವರ್ಷ ಹೋರಾಡಿದರೂ ಔರಂಗಜೇಬನೇ ಸಾಧಿಸಲಾಗದ ಕಾರ್ಯವೊಂದು ವಿಶ್ವಾಸಘಾತಕರಿಂದ ಒಂದೇ ಕ್ಷಣದಲ್ಲಿ ಆಗಿ ಹೋಯಿತು. ಸಂಭಾಜಿಯ ಭಾವ ಗಜೋಜಿ ಷಿರ್ಕೆ ಮೊಗಲ್ ಸರ್ದಾರ್ ಮುಕರಾಬ್ ಖಾನಿಗೆ ಸ್ವಯಂ ದಾರಿ ತೋರಿಸಿ ದುರ್ಭೇದ್ಯವಾಗಿದ್ದ ಸಂಗಮೇಶ್ವರಕ್ಕೆ ಕರೆದುಕೊಂಡು ಬಂದು ಸಂಭಾಜಿಯ ಅಂತ್ಯಕ್ಕೆ ಕಾರಣನಾದ. ಹೀಗೆ ಸಂಭಾಜಿ 1689ರಲ್ಲಿ ಸಂಗಮೇಶ್ವರವೆಂಬ ದುರ್ಭೇದ್ಯ ತಾಣದಲ್ಲಿ ಮೊಘಲರ ಕೈಗೆ ಸಿಕ್ಕಿಬಿದ್ದದ್ದು ಭಾರತ ವಿರೋಧಿ ಚರಿತ್ರೆಕಾರರು ಆರೋಪಿಸಿರುವಂತೆ ಸಂಗಮೇಶ್ವರದಲ್ಲಿ ಕುಡಿದು, ಕುಣಿದು ವಿಲಾಸದಲ್ಲಿ ಮೈಮರೆತಿದ್ದಾಗಲಲ್ಲ; ಸ್ವಂತದವರ ವಿಶ್ವಾಸದ್ರೋಹದಿಂದಾಗಿ!

         ಆ ನಂತರ ನಡೆದದ್ದು ಪೈಶಾಚಿಕ ಕೃತ್ಯ. ವಿಧವಿಧವಾದ ಚಿತ್ರಹಿಂಸೆ ಕೊಟ್ಟಾಗಲೂ ಮತಾಂತರವಾಗಲು ಒಪ್ಪದ ಸಂಭಾಜಿಯನ್ನು ಅಮಾನುಷವಾಗಿ ಅಂಗಾಂಗಗಳನ್ನು ಕತ್ತರಿಸಿ ನರಿನಾಯಿಗಳಿಗೆ ಹಾಕಿ ಕೊಲ್ಲಲಾಯಿತು. ಸಂಭಾಜಿಯ ಆತ್ಮಾರ್ಪಣೆಯ ವಿಚಾರ ತಿಳಿಯುತ್ತಲೇ ಮರಾಠರ ಎದೆಯಲ್ಲಿ ಸೇಡಿನ ಜ್ವಾಲೆ ಧಗಧಗನೇ ಉರಿಯಲಾರಂಭಿಸಿತು. ಸಿಂಹಾಸನಕ್ಕಾಗಿ ಯಾರೂ ಜಗಳವಾಡಲಿಲ್ಲ. ಸಂಭಾಜಿಯನ್ನು ಕೊಂದು ರಾಯಗಢದ ಮೇಲೆ ಆಕ್ರಮಣ ಮಾಡಲು ಔರಂಗಜೇಬ ಬರುತ್ತಿದ್ದಾನೆ ಎಂದು ತಿಳಿದ ಕೂಡಲೇ ಸಂಭಾಜಿಯ ಧರ್ಮಪತ್ನಿ ಏಸೂಬಾಯಿ ಏಳು ವರ್ಷದ ತನ್ನ ಮಗು ಸಾಹುವಿಗೆ ಪಟ್ಟಕಟ್ಟುವುದನ್ನು ಬಿಟ್ಟು ಸ್ವಇಚ್ಛೆಯಿಂದ ಮೈದುನ ರಾಜಾರಾಮನಿಗೆ ಪಟ್ಟ ಕಟ್ಟಿದಳು. ಒಂದು ವೇಳೆ ಮೊಘಲರ ಸೈನ್ಯದೆದುರು ಮರಾಠಾ ಸೇನೆ ಸೋತರೆ ರಾಜನಿಲ್ಲದೆ ರಾಜ್ಯ ಅನಾಥವಾಗುತ್ತದೆಯೆಂದು ತಿಳಿದು ಮಿತ ಪರಿವಾರದೊಂದಿಗೆ ರಾಜಾರಾಮನನ್ನು ಜಿಂಜೀ ಕೋಟೆಗೆ ಕಳುಹಿಸಿದಳು. ರಾಜ ಪ್ರಮುಖರನ್ನೆಲ್ಲಾ ವಿಂಗಡಿಸಿ ಒಬ್ಬೊಬ್ಬರು ಒಂದೊಂದು ಕೋಟೆಯಲ್ಲಿ ತಂಗುವಂತೆ ಮಾಡಿದಳು. ಸ್ವತಃ ತಾನೇ ತನ್ನ ಮಗ ಹಾಗೂ ಅಂತಃಪುರಸ್ತ್ರೀಯರೊಂದಿಗೆ ಮೊಘಲರು ದಾಳಿ ಮಾಡಿದಾಗ ಬಂಧಿಯಾಗಿಹೋದಳು. ಇನ್ನೇನು ಮರಾಠರ ಕಥೆ ಮುಗಿಯಿತೆಂದು ಕನಸಿನ ಗೋಪುರ ಕಟ್ಟುತ್ತಿದ್ದ ಔರಂಗಜೇಬನಿಗೆ ಕೊನೆಗೂ ದೆಹಲಿಗೆ ಹಿಂತಿರುಗಲಾಗಲೇ ಇಲ್ಲ. ಎಂಟು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಜಿಂಜೀಯನ್ನು ವಶಪಡಿಸಿಕೊಂಡನಾದರೂ ರಾಜಾರಾಮನನ್ನು ಬಂಧಿಸಲಾಗಲಿಲ್ಲ. ಅವನು ಸತಾರಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮೊಘಲರನ್ನು ಕಾಡಿದ. ಉಳಿದ ಕಡೆ ಶಿವಾಜಿ ಕಟ್ಟಿದ್ದ ಸಮರ್ಥ ಸರ್ದಾರ ಪಡೆ ಮೊಗಲರನ್ನು ಅಟಕಾಯಿಸಿ ಬಡಿಯಿತು. ಬದುಕಿದ್ದಾಗಿಗಿಂತಲೂ ಹೆಚ್ಚಾಗಿ ಮರಣಿಸಿದ ಮೇಲೆಯೇ ಸಂಭಾಜಿ ಮರಾಠರನ್ನು ಸಾವಿರ ಪಟ್ಟು ಹೆಚ್ಚು ಪ್ರೇರೇಪಿಸಿದ. ಒಂದೊಂದು ಮರಾಠಮನೆಯೂ ಒಂದೊಂದು ಕೋಟೆಯಾಯಿತು. ಪ್ರತಿಯೊಬ್ಬ ಮರಾಠನೂ ಓರ್ವ ಸೈನಿಕನಾದ. ಶಿವಾಜಿಯಿಂದ ತರಬೇತಿ ಹೊಂದಿ, ಸಂಭಾಜಿಯ ಬಲಗೈ ಬಂಟನಾಗಿದ್ದ ಸಂತಾಜಿ ಘೋರ್ಪಡೆ, ಧನಾಜಿ ಯಾದವನ ಜೊತೆ ಸೇರಿಕೊಂಡು ಸೇನಾಧಿಪತಿಯಾಗಿ ಮೊಘಲ್ ಸೇನೆಗಳನ್ನು ಮೃತ್ಯುವಿನಂತೆ ಬೆನ್ನು ಹತ್ತಿದ. ಗೆರಿಲ್ಲಾ ಯುದ್ಧದಲ್ಲಿ ಪರಿಣತನಾಗಿದ್ದ ಸಂತಾಜಿಯ ಹೆಸರು ಕೇಳಿದೊಡನೆ ಮೊಘಲ್ ಸೈನಿಕರು ಬಿಡಿ ಸರದಾರರುಗಳೇ ಗಡಗಡ ನಡುಗುತ್ತಿದ್ದರು. "ಸಂತಾಜಿಯನ್ನು ಎದುರಿಸಿದ ಪ್ರತಿಯೊಬ್ಬ ಸಾವಿಗೀಡಾಗುತ್ತಿದ್ದ ಅಥವಾ ಸೆರೆಯಾಗುತ್ತಿದ್ದ. ಒಂದೊಮ್ಮೆ ತಪ್ಪಿಸಿಕೊಂಡರೂ ಅದು ಎಲ್ಲವನ್ನೂ ಕಳೆದುಕೊಂಡು ಮಾತ್ರ. ಆ ನೀಚ ನಾಯಿಯನ್ನು ಎದುರಿಸಲು ಚಕ್ರವರ್ತಿಯ ಸೈನ್ಯದ ಯಾವನಿಗೂ ಧೈರ್ಯವಿರಲಿಲ್ಲ" ಎಂದು ಔರಂಗಜೇಬನ ಸಮಕಾಲೀನ ಪರ್ಷಿಯನ್ ಚರಿತ್ರಕಾರ ಖಾಫಿಖಾನ್ ಬರೆದಿದ್ದಾನೆ. ಕುದುರೆಗಳು ನೀರು ಕುಡಿಯಲಿಲ್ಲವೆಂದರೆ ಅವಕ್ಕೆ ನೀರಿನಲ್ಲಿ ಸಂತಾಜಿ, ಧನಾಜಿಯರ ಪ್ರತಿಬಿಂಬಗಳು ಕಂಡವೇನೋ ಎಂದು ಭಯಪಡುತ್ತಿದ್ದರಂತೆ. ಸಂತಾ ತನ್ನಿಂದ ಹದಿನೆಂಟು ಮೈಲು ದೂರದಲ್ಲಿದ್ದಾನೆ ಎಂಬ ಸುದ್ದಿ ಕೇಳಿದ ತಕ್ಷಣ ಬೆದರಿದ ಔರಂಗಜೇಬನ ಮುಖ್ಯ ಸೇನಾಧಿಪತಿ ಫಿರುಜ್ ಜಂಗ್ ಅವನನ್ನು ಎದುರಿಸಲು ಹೋಗುವುದಾಗಿ ಸುಳ್ಳು ಘೋಷಣೆ ಹಾಕಿ ಬಿಜಾಪುರ ದಾರಿ ಹಿಡಿಯುತ್ತಿದ್ದನಂತೆ. ಔರಂಗಜೇಬನ ಸೇನೆಯೇನಾದರೂ ತಪ್ಪಿ ಯಾವುದಾದರೂ ಕೋಟೆಯನ್ನು ವಶಪಡಿಸಿಕೊಂಡರೆ ಮೂರೇ ದಿನಗಳಲ್ಲಿ ಮೊಘಲರ ಎಲ್ಲಾ ಸಂಪತ್ತನ್ನು ವಶಪಡಿಸಿಕೊಂಡು ಕೋಟೆಗಳನ್ನು ಮರಾಠ ಸೇನೆ ವಶಪಡಿಸಿಕೊಳ್ಳುತ್ತಿತ್ತು. ಹೀಗೆ ಒಂದು ಹಂತದಲ್ಲಂತೂ ಔರಂಗಜೇಬನ ಸೈನ್ಯವನ್ನು ಧೂಳೀಪಟ ಮಾಡಿ ಅವನ ಮಗಳನ್ನೇ ಬಂಧಿಸಿಬಿಟ್ಟಿತ್ತು ಮರಾಠ ಸೇನೆ.

             ಮುಂದೆ ರಾಜಾರಾಮನ ಪತ್ನಿ ತಾರಾಬಾಯಿಯ ಆಡಳಿತಾವಧಿಯಲ್ಲಂತೂ ದಕ್ಷಿಣ ಮಾತ್ರವಲ್ಲದೆ ಉತ್ತರದ ಹಲವು ಪ್ರಾಂತ್ಯಗಳಲ್ಲಿ ಮರಾಠರದ್ದೇ ಮೇಲುಗೈಯಾಯಿತು. ಈಗ ಅವರು ಕಣ್ಣುಮುಚ್ಚಾಲೆಯ ಗೆರಿಲ್ಲಾ ಯುದ್ಧ ತಂತ್ರವನ್ನು ತ್ಯಜಿಸಿ ಮೊಘಲರೊಡನೆ ನೇರ ಯುದ್ಧಕ್ಕಿಳಿದಿದ್ದರು. ಮೊಘಲರ ಆಡಳಿತ ಪ್ರದೇಶಗಳಲ್ಲಿ ಅವರಿದಲೇ ತೆರಿಗೆ ವಸೂಲಿ ಮಾಡತೊಡಗಿದರು. ಮೊಘಲರ ಸಾಮಗ್ರಿ ಸಾಗಿಸುವ ವಾಹನಗಳನ್ನೇ ನೇರಾನೇರ ದಾಳಿಗಿಳಿದು ವಶಪಡಿಸಿಕೊಳ್ಳುತ್ತಿದ್ದರು. ಔರಂಗಜೇಬನ ಸ್ವಂತ ಪಾಳಯಕ್ಕೇ ನುಗ್ಗಿ ಧಾನ್ಯದ ಮಾರುಕಟ್ಟೆಯನ್ನೇ ಕೊಳ್ಳೆ ಹೊಡೆಯುತ್ತಿದ್ದರು. ಚತುರಂಗ ಬಲದೊಂದಿಗೆ ಮೊಘಲರನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತಾವೇ ಚಕ್ರವರ್ತಿಗಳೆಂಬಂತೆ ದಮ್ಡೆತ್ತಿ ಹೋಗುತ್ತಿದ್ದರು ಎಂದಿದ್ದಾನೆ ವಿದೇಶೀ ಯಾತ್ರಿಕ ಮನುಸ್ಸೀ. ಮರಾಠ ಬೆಟ್ಟದ ಇಲಿಗಳನ್ನು ನಿರಾಯಾಸವಾಗಿ ಬಡಿದಟ್ಟಿ ಕೊಲ್ಲುವೆನೆಂದು 1681ರಲ್ಲಿ ಲಕ್ಷಗಟ್ಟಲೆ ಸೈನ್ಯದೊಂದಿಗೆ ಸಂಭಾಜಿಯನ್ನೆದುರಿಸಲು ಬಂದ ಔರಂಗಜೇಬನಿಗೆ ಇಪ್ಪತ್ತೈದು ವರ್ಷಗಳಾದರೂ ಗೆಲುವು ಮರೀಚಿಕೆಯಾಯಿತು. ಒಬ್ಬ ಸಂಭಾಜಿಯನ್ನು ಕೊಂದೊಡನೆ ಮತ್ತೊಬ್ಬ ಸಂಭಾಜಿ ಅವತರಿಸಿದ. ಅವನು ಹೋದೊಡೆ ಮಗದೊಬ್ಬ...ಕೊನೆಕೊನೆಗೆ ಇಡೀ ಮಹಾರಾಷ್ಟ್ರದಲ್ಲಿ ಅವನಿಗೆ ಸಂಭಾಜೀಯೇ ಕಾಣುವಂತಾಯಿತು. ಕಂಸನಿಗೇ ಕೊನೆಗಾಲದಲ್ಲಿ ಎಲ್ಲೆಲ್ಲೂ ಕೃಷ್ಣರೇ ಕಂಡ ಹಾಗೆ. ಮರಾಠರ ಪ್ರಜಾಯುದ್ಧವಂತೂ ಅವನಿಗೆ ಹುಚ್ಚು ಹಿಡಿಸಿದಂತಾಯ್ತು. ಕೊನೆಕೊನೆಗೇ ತನ್ನ ಖಜಾನೆಯನ್ನೂ ಖಾಲಿ ಮಾಡಿಕೊಂಡು, ಸೈನಿಕರಿಗೆ ವೇತನ ಕೊಡಲೂ ಹಣವಿಲ್ಲದೆ, ಹತಾಷೆ, ನಿರಾಶೆಗಳಿಂದ ಜರ್ಝರಿತನಾಗಿ ತನ್ನ ಮತಾಂಧತೆಯ ಜೀವನವನ್ನು ಕೊನೆಗೊಳಿಸಿದ. ಸುದೀರ್ಘ ಜೀವನದಲ್ಲಿ ಅಸಂಖ್ಯಾತ ಸೇನೆಯೊಂದಿಗೆ ಹಲವರೊಂದಿಗೆ ಯುದ್ಧ ಮಾಡಿ ಗೆದ್ದಿದ್ದರೂ ಅವನಿಗೆ ಮರಾಠರನ್ನು ಗೆಲ್ಲಲಾಗಲೇ ಇಲ್ಲ. ಹಿಂದೂಗಳ ಮೇಲೆ ಜಿಹಾದ್ ಘೋಷಿಸಿದ್ದು ಅವನಿಗೇ ಮುಳುವಾಯಿತು.  ಹಿಂದೂಗಳು ಶಿವಾಜಿಯ ನೇತೃತ್ವದಲ್ಲಿ ಧರ್ಮಶ್ರದ್ಧೆ, ಸ್ವಾತಂತ್ರ್ಯಾಪೇಕ್ಷೆಯನ್ನು ಉದ್ದೀಪಿಸಿಕೊಂಡು ಅವನನ್ನು ನಿದ್ದೆ ಇಲ್ಲದಂತೆ ಮಾಡಿದರು. ಸಂಭಾಜಿಯಂತೂ ಜೀವಂತವಿದ್ದಾಗ ಮಾತ್ರವಲ್ಲದೆ, ಮರಣಿಸಿದ ಬಳಿಕವೂ ಮರಾಠರನ್ನೆಲ್ಲಾ ಆವರಿಸಿಕೊಂಡು ಅವನನ್ನು ಅಟಕಾಯಿಸಿ ಬಡಿದ. ಇದು ಚರಿತ್ರೆಕಾರರು ಜನರ ಮನಸ್ಸಿನಿಂದ ಮರೆಯಿಸಲು ಯತ್ನಿಸಿದ ಧರ್ಮವೀರನೊಬ್ಬನ ನೈಜ ಕಥೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ