ಪುಟಗಳು

ಮಂಗಳವಾರ, ಮಾರ್ಚ್ 27, 2018

ಅಂಬಾ ಎಂಬ ದನಿಯ ನಡುವೆ ರುದ್ರ ನ್ಯಾಸದ ಚಮಕ್

ಅಂಬಾ ಎಂಬ ದನಿಯ ನಡುವೆ ರುದ್ರ ನ್ಯಾಸದ ಚಮಕ್

              "ಪ್ರಜನನೇ ಬ್ರಹ್ಮಾ ತಿಷ್ಠತು | ಪಾದಯೋರ್-ವಿಷ್ಣುಸ್ತಿಷ್ಠತು | ಹಸ್ತಯೋರ್-ಹರಸ್ತಿಷ್ಠತು | ಬಾಹ್ವೋರಿಂದ್ರಸ್ತಿಷ್ಟತು | ಜಠರೇஉಅಗ್ನಿಸ್ತಿಷ್ಠತು | ಹೃದ’ಯೇ ಶಿವಸ್ತಿಷ್ಠತು |....." ಅರುಣ ಕಿರಣ ಇಬ್ಬನಿಯ ಚುಂಬಿಸುವುದಕ್ಕೆ ಮುನ್ನವಲ್ಲಿ ರುದ್ರ ಲಘು ನ್ಯಾಸ ಮೊರೆತ. ಮತ್ತೆ ಹವನದ ಘಮಲು. ಸ್ವಲ್ಪ ಹೊತ್ತಲ್ಲೆ ವಿವಿಧ ಆಸನಗಳ ಯೋಗಾಭ್ಯಾಸದ ಝಲಕ್. ಮತ್ತೆ ದಂಡ ಹಿಡಿದು ಸ್ವರಕ್ಷಣೆಯ ಶಿಕ್ಷಣ. ದಿನವಿಡೀ ಜೀವನ ರೂಪಿಸಲು ಅವಶ್ಯಕವಾದ ವಸ್ತು-ವಿಧಾನ-ವಿಚಾರಗಳ ಪಾಠ. ನಡುವೆ ಸಂಗೀತ, ನಾಟ್ಯಾಭ್ಯಾಸ. ಇವೆಲ್ಲವೂ ಗೋಶಾಲೆಯ ನಡುವಲ್ಲಿ, ಗೋವಿನೆಡೆಯಲ್ಲಿ, ಗೋಸೇವೆ ಮಾಡುತ್ತಾ ನಡೆದರೆ ಅದೆಷ್ಟು ಚೆನ್ನ? ಹೌದು ಇಂತಹಾ ಸಾಧ್ಯತೆಯೊಂದನ್ನು ಸಾಧ್ಯವಾಗಿಸಿದೆ ಗೋತೀರ್ಥ ವಿದ್ಯಾಲಯ.

                ಗೋತೀರ್ಥ ವಿದ್ಯಾಪೀಠ. ಗುಜರಾತಿನ ವಾಣಿಜ್ಯ ರಾಜಧಾನಿ ಅಹ್ಮದಾಬಾದಿನ ಸರ್ಖೇಜ್'ನಲ್ಲಿರುವ ದೇಗುಲ. ಹದಿನೆಂಟು ಗಿರ್ ತಳಿಯ ಗೋತ್ರದ ಗೋವುಗಳ ಸಹಿತ 800ಕ್ಕೂ ಹೆಚ್ಚು ಗೋವುಗಳನ್ನು ಹೊಂದಿರುವ "ಬಂಸೀ ಗಿರ್" ಗೋಶಾಲೆ ಅಲ್ಲಿನ ಗರ್ಭಗುಡಿ. ಗೋ ಸೇವಕ ಗೋಪಾಲ ಸುತರಿಯಾ ಎಂಬವರೇ ಈ ದೇಗುಲದ ಪ್ರೇರಣಾ ಸ್ತ್ರೋತ. ವರ್ತಮಾನಕ್ಕೆ ಅಗತ್ಯವಾದ ಶಿಕ್ಷಣವನ್ನು ಪ್ರಾಚೀನ ಗುರುಕುಲ ಪದ್ದತಿಯಲ್ಲಿ ಗೋಸೇವೆಯ ಜೊತೆ ಜೊತೆಗೆ ನೀಡುವ ವಿದ್ಯಾ ಮಂದಿರವದು. ಶುದ್ಧ ಚಾರಿತ್ರ್ಯ ಹೊಂದಲು ಬೇಕಾದ ಉತ್ತಮ ಸಂಸ್ಕಾರ, ದೇಹ-ಬುದ್ಧಿಗಳೆರಡರ ಬೆಳವಣಿಗೆಗೆ ಬೇಕಾದ ಶಿಕ್ಷಣ, ಆತ್ಮ ಶುದ್ಧೀಕರಣದ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಬೇಕಾದ ಜ್ಞಾನಧಾರೆ ಇಲ್ಲಿ ನಿರತ ಪ್ರವಹಿಸುತ್ತಿದೆ. ಗೋ ಆಧಾರಿತ ಶಿಕ್ಷಣ, ಗೋಸೇವೆಯ ಜೊತೆಜೊತೆಗೆ ಅದರಿಂದ ಸಿಗಬಹುದಾದ ಅಮೃತಸಮಾನ ಆಹಾರ, ಆರೋಗ್ಯ ಎರಡೂ ಎಳೆಯರ ಬೆಳವಣಿಗೆಗೆ ಪೂರಕವಾಗಿದೆ. ವೇದಗಣಿತ, ನಾಡಿ ವಿಜ್ಞಾನ, ಪಂಚಗವ್ಯ ಚಿಕಿತ್ಸೆ, ಜ್ಞಾನ ಚಿಕಿತ್ಸೆ, ಗೋ ಆಧಾರಿತ ವ್ಯವಸಾಯ, ಪಂಚಕರ್ಮ ಚಿಕಿತ್ಸೆ ಹಾಗೂ ಔಷಧಿ ತಯಾರಿಕೆ, ಭಾರತದ ನೈಜ ಇತಿಹಾಸ, ವಿಜ್ಞಾನ ಎಲ್ಲವೂ ನುರಿತ ಶಿಕ್ಷಕರಿಂದ ಕಲಿಸಲಾಗುತ್ತಿದೆ. ಎಳೆಯರನ್ನು ಜೊತೆಗೂಡಿಸಿಕೊಂಡು ಗೋಮೂತ್ರ ಹಾಗೂ ಇತರ ಗೋ ಉತ್ಪನ್ನಗಳನ್ನು ಬಳಸಿಕೊಂಡು ವೇದ ಆಧಾರಿತ ಕೃಷಿ ಪದ್ದತಿಯಿಂದ ಕೃಷಿ ವಿಶ್ವವಿದ್ಯಾಲಯಗಳೇ ಮೆಚ್ಚುವಂತೆ/ಬೆಚ್ಚುವಂತೆ ಅಧಿಕ ಇಳುವರಿ ಪಡೆಯುವ ಪ್ರಯೋಗವೂ ನಡೆಯುತ್ತಿದೆ.

             ಕಳರಿ ವಿದ್ಯೆಯ ತರಬೇತಿ, ಧ್ಯಾನ, ಹವನ, ಯೋಗಾಸನ, ಮಲ್ಲಕಂಬಗಳ ತರಬೇತಿ, ಹಗ್ಗದ ಮೂಲಕ ಮೇಲೇರಿ ಹಗ್ಗದಲ್ಲೇ ವಿವಿಧ ಆಸನಗಳ ಕಲಿಕೆ ಎಲ್ಲವೂ ಇಲ್ಲಿ ಲಭ್ಯ. ಅರ್ಥವಾಗದ ವಿದ್ಯಾರ್ಥಿಗಳಿಗೆ ಮಣ್ಣು, ನೀರು ಹೀಗೆ ಪ್ರಾಕೃತಿಕ ವಸ್ತುಗಳನ್ನು ಬಳಸಿಕೊಂಡು ಕಲಿಸುವ ವಿಧಾನ ಮಂದಮತಿಯನ್ನೂ ಮುಂಚೂಣಿಯಲ್ಲಿರಿಸುತ್ತದೆ. ಸಂಗೀತ-ನಾಟ್ಯಶಿಕ್ಷಣವೂ ಜೊತೆಜೊತೆಗೆ ನಡೆಯುತ್ತಿದೆ. ಒಟ್ಟಾರೆ ಗೋ ಸೇವೆ ಮಾಡುತ್ತಾ, ವೇದ ಮಂತ್ರ ಪಠಣದೊಡನೆ, ಹವನ ಧೂಮವನ್ನಾಘ್ರಾಣಿಸುತ್ತಾ ಸ್ವಸ್ಥ ಶರೀರದೊಂದಿಗೆ ನಡೆಯುತ್ತಿದೆ ಶ್ರವಣ, ಸಂಭಾಷಣ, ಪಠಣ; ಪರೀಕ್ಷೆಯಿಲ್ಲದ ನಿರ್ಭಯ ಶಿಕ್ಷಣ! ಇಂತಹ ಸೌಭಾಗ್ಯ ಬೇಕೆಂದರೂ ಸಿಗದು!

         ಸಂ ತೇ ಗಾವಃ ತಮ ಆವರ್ತಯಂತಿ | ಜ್ಯೋತಿಃ ಯಚ್ಛಂತಿ || ಗೋಕುಲವು ತಮಸ್ಸನ್ನು ಹೋಗಲಾಡಿಸುವ ಜ್ಞಾನದೀಪ ಎಂದಿದೆ ಋಗ್ವೇದ. ಗೋ ಪರವಾದ ಅನೇಕ ಸೂಕ್ತಗಳು ವೇದಗಳಲ್ಲಿವೆ.
" ಆ ಗಾವೋ ಅಗ್ಮನುತ ಭದ್ರಮಕ್ರಂತ್ಸೀದಂತು ಗೋಷ್ಠೇ ರಣಯಂತ್ವಸ್ಮೇ |
ಪ್ರಜಾವತೀಃ ಪುರುರೂಪಾ ಇಹಸ್ಯುರಿಂದ್ರಾಯ ಪೂರ್ವಿರುಷಸೋ ದುಹಾನಾಃ || " - ಸದಾ ಮಂಗಳವನ್ನುಂಟುಮಾಡುವ ಹಸುಗಳು ಬರಲಿ. ಕೊಟ್ಟಿಗೆಯಲ್ಲಿ ಕಲೆತು ನಮ್ಮ ಜತೆಗೆ ಉದ್ಗರಿಸಲಿ. ಇಲ್ಲೇ ತಮ್ಮ ಸಂತತಿಯನ್ನು ಮುಂದುವರೆಸಲಿ - ಎನ್ನುತ್ತಾ ಗೈಯುವ ಪ್ರಾರ್ಥನೆಯೊಂದೆಡೆಯಾದರೆ,
" ಶಿವೋ ವೋ ಗೋಷ್ಟೋ ಭವತು ಶಾರಿಶಾಕೇವ ಪುಷ್ಯತ |
ಇಹ್ಯವೋತ ಪ್ರಜಾಯಧ್ವಂ ಮಯಾ ವಃ ಸೃಜಾಮಸಿ || " - ನಿಮ್ಮ ಕೊಟ್ಟಿಗೆಯು ಮಂಗಲಕರವಾಗಿರಲಿ. ನಿಮಗೆ ಹಿತಕರವಾಗಿರಲಿ. ಜೇನ್ನೊಣಗಳಂತೆ ಅಭಿವೃದ್ಧಿ ಹೊಂದಿರಿ. ಇಲ್ಲಿಯೆ ನಿಮ್ಮ ಸಂತತಿಯನ್ನು ಉತ್ಪಾದಿಸಿರಿ. ನನ್ನೊಡನೆ ನಿಮ್ಮನ್ನು ಹುಲ್ಲುಗಾವಲಿಗೆ ಕೊಂಡೊಯ್ಯುತ್ತೇನೆ - ಎನ್ನುತ್ತಾ ಭಾವಸಲ್ಲಾಪ ಮಾಡುವವರೆಗೆ ವೇದಗಳಲ್ಲಿ ಸೂಕ್ತಗಳು ಹರಡಿವೆ. “ಗೋವುಗಳ ಹಾಲು ಎ೦ತಹಾ ದುರ್ಬಲರನ್ನೂ ಸುಪುಷ್ಟಗೊಳಿಸುತ್ತದೆ. ಕುರೂಪಿಯನ್ನೂ ಸುಂದರಗೊಳಿಸುತ್ತದೆ. ಮನೆಗೆ ಶೋಭೆ ತರುತ್ತದೆ. ಗೋವು ಸರ್ವರಿಗೂ ಸಂಪತ್ತಾಗಿದೆ. ಅದನ್ನು ರಕ್ಷಿಸುವವರು ಬಾಗ್ಯಶಾಲಿಗಳೇ ಸರಿ” ಎಂದು ಗೋವುಗಳನ್ನು ಕೊಂಡಾಡಿದೆ ವೇದ. ವೇದಗಳಲ್ಲಿ ದೇವಮಾತೆ ಎಂದು ಕರೆದದ್ದು ಗೋವನ್ನು ಮಾತ್ರ. ಅಂತಹಾ, ಗೋವುಗಳನ್ನೇ ಕೊಂಡಾಡಿರುವ ವೇದಗಳ ಪಠಣ ಗೋವುಗಳ ಸಮ್ಮುಖದಲ್ಲಿ, ಗೋವುಗಳ ಸೇವೆ ಮಾಡುತ್ತಾ ನಡೆದರೆ...? ಎಂತಹಾ ಭಾವಪೂರ್ಣ ಸನ್ನಿವೇಶವದಾಗಿರಬಹುದು?

               ಆದರೆ ನಮ್ಮಲ್ಲಿನ ಮಂದಮತಿಗಳು ವೇದಕಾಲೀನ ಜನರು ಗೋವನ್ನು ತಿನ್ನುತ್ತಿದ್ದರು, ಗೋಮಾಂಸ ಭಕ್ಷಣೆ ಮಾಡಬಾರದು ಎನ್ನುವುದು ಇಂದಿನ ಬ್ರಾಹ್ಮಣರ ಹೇರಿಕೆ ಎಂದೆಲ್ಲಾ ಬಡಬಡಿಸುತ್ತಾರೆ. ಆದರೆ ವೇದಗಳಲ್ಲೇ ಗೋವನ್ನು ಕೊಲ್ಲಬಾರದೆಂದು ನಿರ್ದೇಶಿಸಿರುವುದನ್ನು ಈ ಪ್ರಭೃತಿಗಳು ಮರೆಯುತ್ತಾರೆ.ಋಗ್ವೇದದ ಎಂಟನೆಯ ಮಂಡಲ,
"ಮಾತಾ ರುದ್ರಾಣಾಂ ದು ಹಿತಾ ವಸೂನಾಂ ಸ್ವಸಾದಿತ್ಯಾನಾಮಮೃತಸ್ಯ ನಾಭಿಃ |
ಪ್ರಮವೋಚಂಚಿಕಿತುಷೇ ಜನಾಯ ಗಾಮನಾಗಾಂ ಅದಿತಿಂ ವಧಿಷ್ಟ (ಸೂಕ್ತ- 101; 15)"
- ರುದ್ರರಿಗೆ ತಾಯಿಯೂ, ವಸುಗಳಿಗೆ ಮಗಳೂ, ಅಮೃತದ ಉತ್ಪತ್ತಿ ಸ್ಥಾನವೂ, ಪಾಪರಹಿತಳೂ, ಪೂಜ್ಯಳೂ ಆದ ದೇವಮಾತೆಯನ್ನು ಕೊಲ್ಲಬೇಡಿರಿ - ಎನ್ನುತ್ತದೆ.
"ವಚೋವಿದಂ ವಾಚಮುದೀರಯಂತೀಂ ವಿಶ್ವಾಭಿರ್ದೀ ಭಿರುಪತಿಷ್ಠ ಮಾನಾಮ್|
ದೇವೀಂ ದೇವೇಭ್ಯಃ ಪರ್ಯೇಯುಷೀಂ ಗಾಮ್ ಆಮಾ ವೃತ್ತ ಮರ್ತ್ಯೋ ದಭ್ರಚೇತಾಃ || ( ಋಗ್ವೇದ-೮ನೇ ಮಂಡಲ, ಸೂಕ್ತ-೧೦೧; ೧೬)
- ಮಾತನ್ನು ಅರಿತುಕೊಳ್ಳುವವಳು, ಮಾತನ್ನು ತಾನೇ ಉಚ್ಚರಿಸುವವಳೂ, ಎಲ್ಲಾ ಬುದ್ಧಿವಂತರಿಂದ ಆಶ್ರಯಿಸಲ್ಪಡುವವಳೂ, ದೇವಿ ಸ್ವರೂಪಳೂ, ದೇವತೆಗಳ ಪೂಜೆಗೆ ಸಹಾಯ ನೀಡುವವಳೂ ಆದ ಗೋವನ್ನು ಹೀನ ಮನಸ್ಸಿನವನು ಮಾತ್ರ ದೂರ ಮಾಡುತ್ತಾನೆ. ವಾಜಸನೇಯ ಸಂಹಿತೆ, "ಗಾಂ ಮಾ ಹಿಂಸೀರದಿತಿಂ ವಿರಾಜಮ್" ಸರ್ವರ ತಾಯಿ ಗೋವನ್ನು ಹಿಂಸಿಸಬೇಡ ಎನ್ನುತ್ತದೆ. ಋಗ್ವೇದದ ೧, ೪, ೫, ೮ ಹಾಗೂ ಹತ್ತನೇ ಮಂಡಲಗಳಲ್ಲಿ ಗೋವನ್ನು ಕೊಲ್ಲಬಾರದ್ದು (ಅಘ್ನ್ಯ) ಎಂದಿದೆ. ಅಥರ್ವ ವೇದದ ಐದನೇ ಕಾಂಡದಲ್ಲಿ ಹಸುವನ್ನು ಕೊಂದು ತಿನ್ನುವವರು ತಮ್ಮ ಪಿತೃಗಳಿಗೆ ಪಾಪವನ್ನು ತಂದು ಕೊಡುತ್ತಾರೆ ಎಂದಿದೆ. ಹನ್ನೆರಡನೇ ಕಾಂಡ ಹಸುವನ್ನು ತಿನ್ನುವವನ ಮಕ್ಕಳು ಮೊಮ್ಮಕ್ಕಳನ್ನು ಬೃಹಸ್ಪತಿ ಸಾಯಿಸುತ್ತಾನೆ ಎಂದಿದೆ. ಋಕ್ಸಂಹಿತೆಯ ಸೂಕ್ತವೊಂದು,
"ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ ಯೋ ಅಶ್ವ್ಯೇನ ಪಶುನಾ ಯಾತುಧಾನಃ |
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||" - ಎನ್ನುತ್ತದೆ. ಯಾವ ರಾಕ್ಷಸನು ಪುರುಷಸಂಬಂಧಿ ಮಾಂಸದಿಂದಲೂ, ಕುದುರೆ ಮೊದಲಾದ ಪ್ರಾಣಿಗಳ ಮಾಂಸದಿಂದಲೂ, ವಧಿಸಲ್ಪಡಬಾರದ ಗೋವಿನ ಮಾಂಸದಿಂದಲೂ ಹೊಟ್ಟೆಯನ್ನು ತುಂಬಿಸಿಕೊಳ್ಳುವನೋ, ಗೋಕ್ಷೀರವನ್ನು ಅಪಹರಿಸುವನೋ ಅಂಥವರ ತಲೆಗಳನ್ನು ಹೇ ಅಗ್ನಿದೇವ! ನಿನ್ನ ಜ್ವಾಲೆಗಳಿಂದ ಸುಟ್ಟು ನಾಶಮಾಡು ಎಂದರ್ಥ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ