ಪುಟಗಳು

ಮಂಗಳವಾರ, ಮಾರ್ಚ್ 27, 2018

ಕ್ರೌಂಚದ ಶೋಕವೇ ಶ್ಲೋಕವಾಯಿತು...! ರಾಮ ಎನುವ ಪರಬ್ರಹ್ಮದ ಹೆಸರಾಯಿತು!

ಕ್ರೌಂಚದ ಶೋಕವೇ ಶ್ಲೋಕವಾಯಿತು...! ರಾಮ ಎನುವ ಪರಬ್ರಹ್ಮದ ಹೆಸರಾಯಿತು!


                     ಜಗತ್ತಿನಲ್ಲಿ ಎಷ್ಟು ಬಾರಿ ಕ್ರೌಂಚ ಪಕ್ಷಿಗಳನ್ನು ಕೊಲ್ಲಲಿಲ್ಲ? ಆದರೆ ಒಂದೇ ಒಂದು ಬಾರಿ ರಾಮಾಯಣ ಹುಟ್ಟಿತು. ನಾಗಚಂದ್ರ ಹೇಳುತ್ತಾನೆ,"ಬರೆದರೆ ರಾಘವನನ್ನು ನಾಯಕನನ್ನಾಗಿಸಿ ಬರೆಯಬೇಕು. ಆಗ ಕಥೆ ಉದಾತ್ತವಾದೀತು" ರಾಮಾಯಣ-ಭಾರತಗಳು ಸರಸ್ವತಿಯ ಎರಡು ಕಿವಿಯೋಲೆಗಳು. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮೋ ವಿಗ್ರಹವಾನ್ ಧರ್ಮಃ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವಧೂತ ಸದಾಶಿವ ಬ್ರಹ್ಮೇಂದ್ರರಿಗಂತೂ ಅವನು ಬ್ರಹ್ಮವಾಗಿಯೇ ಕಂಡು ಅವರ ಅದೆಷ್ಟೋ ಸಂಗೀತ ಕೃತಿಗಳಿಗೆ ನಾಯಕನಾದ.

              ಸೀತಾ ರಾಮರ ಪರಿಣಯ ಆಗಷ್ಟೇ ಮುಗಿದಿತ್ತು. ರಾಮನ ಯುವರಾಜ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಅಣಿಯಾಗುತ್ತಿತ್ತು. ಎಲ್ಲಿದ್ದಳೋ ಆ ಮಂಥರೆ. ದಶರಥನ ಮೆಚ್ಚಿನ ಮಡದಿ ಕೈಕೆಯ ಕಿವಿಯೂದಿದಳು. ಕೈಕೆಯನ್ನು ಕೈಯಲ್ಲಿ ಹಿಡಿದಾಡಿಸಿದವಳು ಆಕೆ. ದಶರಥ ಹಿಂದೆ ವಾಗ್ದಾನ ಮಾಡಿದ್ದ ವರಗಳನ್ನು ಉಪಯೋಗಿಸುವಂತೆ ಕೈಕೆಯ ಮನವೊಲಿಸಿದಳು. ಕೈಕೆ ಶೋಕಾಗಾರವನ್ನು ಹೊಕ್ಕಳು. ಪ್ರಿಯ ಪತ್ನಿಯ ಹಠಕ್ಕೆ ಕರಗಿ ಹೋಗಿ ಕಾರಣ ಕೇಳಿದ ದಶರಥನ ಎದೆ ಬಿರಿಯಿತು. ಒಂದೆಡೆ ಪ್ರಿಯ ಪತ್ನಿಗೆ ಕೊಟ್ಟ ಮಾತನ್ನು ಉಳಿಸಬೇಕಾದ ಕರ್ತವ್ಯ. ಇನ್ನೊಂದೆಡೆ ಪ್ರಿಯ ಪುತ್ರನ ವಿಯೋಗದ ದುಃಖ.  ತಂದೆ ತಾಯಂದಿರ ವಾತ್ಸಲ್ಯದ ಪುತ್ರನಾಗಿ, ಸದಾ ತನ್ನ ನೆರಳಾಗಿರುವ ಅನುಜರಿಗೆ ಹಿರಿಯಣ್ಣನಾಗಿ, ಗೆಳೆಯರಿಗೆ ನಲ್ಮೆಯ ಸಖನಾಗಿ, ಮಡದಿ ಸೀತೆಯ ಪ್ರೇಮದ ಪತಿಯಾಗಿ, ಗುರು ಹಿರಿಯರಿಗೆ ವಿಧೇಯನಾಗಿ, ಹಿರಿಕಿರಿಯ ಬಡವ-ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಗೌರವ ತೋರುತ್ತಾ ಎಲ್ಲರೊಂದಿಗೂ ಒಡನಾಡುತ್ತಾ ಎಲ್ಲರ ಮನೆಯ ಮಗನಂತೆ ಬೆಳೆದ ರಾಮಚಂದ್ರನ ಅಗಲುವಿಕೆಯೆಂದರೆ…….ಪುತ್ರ ವಾತ್ಸಲ್ಯ ಆತನನ್ನು "ನನ್ನನ್ನು ಕೊಂದು ಪಟ್ಟವೇರು" ಎನ್ನುವ ಹತಾಶೆಗೆ ಮುಟ್ಟಿಸಿತು! ಮನಸ್ಸು ಮಾಡಿದ್ದರೆ ರಾಮ ಅನಾಯಾಸವಾಗಿ ಪಟ್ಟವೇರಬಹುದಿತ್ತು. ಉಳಿದವರಿಗಾದರೋ ಸ್ವತಃ ತಂದೆಯೇ ತನ್ನನ್ನು ಕೊಂದು ಪಟ್ಟವೇರು ಎನ್ನಬೇಕಿರಲಿಲ್ಲ. ಮಾತು ಮುಗಿಯುವುದರೊಳಗೆ ತಂದೆಯ ಶಿರ ಬೇರೆಯಾಗುತ್ತಿತ್ತೋ ಏನೋ. ಕನಲಿದ್ದ ಲಕ್ಷ್ಮಣನಿಗೆ ರಾಮನ ಒಂದು ನಿಟ್ಟುಸಿರಿನ "ಹೂಂಕಾರ" ಸಾಕಾಗುತ್ತಿತ್ತು. ವಸಿಷ್ಠರು ರಾಮನ ಒಂದು ಒಪ್ಪಿಗೆಗೆ ತುದಿಗಾಲಲ್ಲಿ ನಿಂತಿದ್ದರು. ತಾಯಂದಿರ ಪುತ್ರವಾತ್ಸಲ್ಯ, ಬಂಧುಗಳ ಪ್ರೇಮ, ಮಂತ್ರಿ ಮಾಗಧರ ಗೌರವ ರಾಮನನ್ನು ಅನಾಯಾಸವಾಗಿ ಪಟ್ಟದಲ್ಲಿ ಕೂರಿಸುತ್ತಿತ್ತು. ಪ್ರಜೆಗಳ ಅನುರಾಗ ರಾಮನ ದ್ವೇಷಾಸೂಯೆಗಳಿಲ್ಲದ ಸರ್ವಜನ ಹಿತದ ಆಡಳಿತಕ್ಕೆ ಹಾತೊರೆಯುತ್ತಿತ್ತು. ಎಲ್ಲರೂ ರಾಮನ ಪರವಾಗಿದ್ದರು. ಆದರೆ ರಾಮ ಮಾತ್ರ ಕೈಕೆ ಪರವಾಗಿ ನಿಂತ! ಇಲ್ಲ, ರಾಮ ಧರ್ಮದ ಪರವಾಗಿ ನಿಂತ. ವಂಶದ ಗೌರವ ಉಳಿಸಲೋಸುಗ ತನ್ನ ಸುಖವನ್ನು ಬಲಿಕೊಡಲು ಸಿದ್ಧನಾದ. ಬಹುಷಃ ಸಿಂಹಾಸನವೇರಬೇಕೆಂದು ಒತ್ತಾಯಿಸುತ್ತಿದ್ದ ಪ್ರಜೆಗಳಿಂದ ಪಾರಾಗುವುದನ್ನು ಚಿಂತಿಸುತ್ತಿದ್ದ ಏಕಮಾತ್ರ ರಾಜಕುಮಾರನಿರಬೇಕು ಶ್ರೀರಾಮಚಂದ್ರ!

               ವನಗಮನವೇನೂ ರಾಮನಿಗೆ ಹೊಸದಲ್ಲ. ಯಜ್ಞ ಸಂರಕ್ಷಣೆಯ ನೆಪದಲ್ಲಿ ರಾಮ ಲಕ್ಷ್ಮಣರನ್ನು ತನ್ನೊಡನೆ ಕರೆದೊಯ್ದು ಸೂಕ್ತ ಶಿಕ್ಷಣವನ್ನೇ ನೀಡಿದ್ದ ವಿಶ್ವಾಮಿತ್ರ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಆ ಬ್ರಹ್ಮರ್ಷಿ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ.

               ರಾಮ ಕುಟುಂಬದ ಸಂಕೇತ; ಆದರೆ ಅವನದ್ದು ಸಂಕುಚಿತವಲ್ಲದ, ರಾಷ್ಟ್ರೀಯತೆಗೆ ಧಕ್ಕೆ ತರದ ಕುಟುಂಬ ಪ್ರಜ್ಞೆ. ಸೀತಾ ಪರಿಣಯದ ಸಂದರ್ಭದಲ್ಲೂ "ತಂದೆಗೆ ತುಂಬಾ ಒಪ್ಪಿಗೆಯಾದ ಹುಡುಗಿ" ಎನ್ನುವುದು ಅವನಿಗೆ ಇನ್ನಷ್ಟು ಖುಷಿ ಕೊಡುತ್ತದೆ. ಕುಟುಂಬ ಇನ್ನೇನು ವಿಘಟಿತವಾಗುತ್ತದೆ ಎನ್ನುವಾಗ ಅದನ್ನು ಬೆಸೆಯಲು ತ್ಯಾಗಕ್ಕೆ ಮುಂದಾದವ ಆತ. ಆದರೆ ಹಾಗೆ ಮಾಡುವಾಗ ಆತ ರಾಷ್ಟ್ರೀಯತೆಯನ್ನೇನು ಬಲಿ ಕೊಡಲಿಲ್ಲ. ತಂದೆ ವಚನಭೃಷ್ಟನಾಗಬಾರದು ಎನ್ನುವುದು ಅವನ ಉದ್ದೇಶವಾಗಿತ್ತು. ರಾಜ ತಪ್ಪಿ ನಡೆದರೆ ಪ್ರಜೆಗಳಿಗೆ ರಾಜ್ಯಾಂಗದಲ್ಲಿ ವಿಶ್ವಾಸವಿರುವುದಿಲ್ಲ. ಹಾಗಾಗಿ ತಂದೆಯ ಮಾತನ್ನು ನಡೆಸಲು ಆತ ಮುಂದಾದ. ಹಾಗೆ ಮಾಡುವಾಗ ಪ್ರಜೆಗಳಿಗೆ ರಾಮನಂಥ ರಾಜ ಸಿಗದೇ ಅನ್ಯಾಯವಾಗುವುದಿಲ್ಲವೇ? ಇಲ್ಲ, ತನ್ನಷ್ಟೇ ಸಮರ್ಥವಾಗಿ ಭರತ ರಾಜ್ಯವಾಳಬಲ್ಲ ಎನ್ನುವುದು ಅವನಿಗೆ ತಿಳಿದಿತ್ತು. ಹಾಗಾಗಿ ಅಷ್ಟೂ ಜನರೂ ಅವನ ಪರವಾಗಿ ನಿಂತರೂ ಅವನು ಧರ್ಮದ ಪರ ವಹಿಸಿದ. ತನ್ನನ್ನು ಹಿಂದಕ್ಕೆ ಕರೆದೊಯ್ಯಲು ಬಂದ ಭರತನ ಒತ್ತಾಸೆಗೂ ಮಣಿಯದೆ ತಾಯಿಯದ್ದು ತಪ್ಪೆಂದು ಹೀಯಾಳಿಸದೆ ಆಕೆಯನ್ನು ಗೌರವದಿಂದ ಕಾಣು ಎಂದ. ಹೀಗೆ ತಂದೆ-ತಾಯಿ ಸ್ವಾರ್ಥಕ್ಕೆ ಎರವಾಗಿ ಮಾಡಿದ ತಪ್ಪನ್ನು ಅವರನ್ನು ಬೈದಾಡದೆ ನವಿರಾಗಿ, ಸಮಾಧಾನ ಚಿತ್ತದಿಂದ ತಿದ್ದಿ ಕುಟುಂಬವನ್ನುಳಿಸಿದ. ಕುಟುಂಬವನ್ನು ಉಳಿಸಲು ವ್ಯಕ್ತಿಯ ಇಷ್ಟಾನಿಷ್ಟಗಳನ್ನು ಮೀರಬೇಕಾಗುತ್ತದೆ ಎನ್ನುವ ಪಾಠವನ್ನು ಜಗತ್ತಿಗೆ ಕೊಟ್ಟ. ಹೇಗಿತ್ತು ರಾಮರಾಜ್ಯ? ಪ್ರಜೆಗಳು ಜಗಳವಾಡುತ್ತಿರಲಿಲ್ಲ; ವೈಷಮ್ಯ ಉಂಟಾದಾಗಲೂ, "ನೋಡು ರಾಮನ ಮುಖ ನೋಡಿ ನಿನ್ನನ್ನು ಬಿಡುತ್ತಿದ್ದೇನೆ" ಎನ್ನುವಂತಹ ನೈತಿಕ ಭಯ ಪ್ರಜೆಗಳಲ್ಲಿತ್ತು. ರಾಮ ಕುಟುಂಬ ಪ್ರಜ್ಞೆಯನ್ನು ಅಷ್ಟು ವಿಸ್ತರಿಸಿದ್ದ, ಎಲ್ಲರಿಗೂ ಹಿರಿಯಣ್ಣನಂತೆ!

                 ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..
"ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ!!

               "ರಾಮ, ಗುಣಶ್ಲಾಘ್ಯನೂ, ತನ್ನನ್ನು ಬಿಟ್ಟು ಇನ್ನೊಬ್ಬಾಕೆಯನ್ನು ತಿರುಗಿಯೂ ನೋಡದಂತಹ ಸಂಯಮಿಯೂ, ಜಿತೇಂದ್ರಿಯನೂ, ಕಾರುಣ್ಯಮೂರ್ತಿಯೂ, ಧರ್ಮಾತ್ಮನೂ, ಗಾಢ ಪ್ರೀತಿ ತೋರಿಸುವನೂ, ತಂದೆತಾಯಿಗಳ ಸ್ಥಾನವನ್ನು ತುಂಬಿಕೊಡುವಂತಹವನೂ ಆಗಿದ್ದಾನೆ" ಎಂದು ರಾಮನ ಬಗೆಗೆ ಅನುಸೂಯದಳಲ್ಲಿ ಹೆಮ್ಮೆಯಿಂದ ಹೇಳುತ್ತಾಳೆ ಸೀತೆ. ಹೌದು ರಾಮನ ಪ್ರೀತಿ ಅಂತಹುದ್ದು. ಸ್ವತಃ ಸೀತೆಗೆ ಹೆರಳು ಹಾಕುತ್ತಿದ್ದ, ತಾನೇ ಬೇಟೆಯಾಡಿ ಬೇಯಿಸಿ ಸೀತೆಗೆ ತಿನ್ನಲು ಕೊಡುತ್ತಿದ್ದ, ಅವಳ ಕಣ್ಣಂಚಿನ ನೋಟದಿಂದಲೇ ಅವಳ ಬಯಕೆಯನ್ನು ಅರಿತು ಪೂರೈಸುತ್ತಿದ್ದ ಅವನು. ಅದಕ್ಕೇ ದಂಪತಿಗಳೆಂದರೆ ಸೀತಾರಾಮರಂತಿರಬೇಕು ಎನ್ನುವ ಬಯಕೆ ಈ ಸಮಾಜದಲ್ಲಿರೋದು.

                 ಆ ಕಾಲದಲ್ಲಿ ಸಮಾಜದ ಕೆಳ ವರ್ಗಕ್ಕೆ ಸೇರಿದವನಾದ ಗುಹನನ್ನು ಅಪ್ಪಿ ಆಲಂಗಿಸಿದ. ತನಗಾಗಿ ಕಾಯುತ್ತಿದ್ದ ಶಬರಿಯ ಆತಿಥ್ಯವನ್ನು ಎಂಜಲೆಂದು ಬಗೆಯದೇ ತಾಯಿ ಮಗುವಿಗೆ ಕೊಡುವ ಆಹಾರದಂತೆ ಸ್ವೀಕರಿಸಿದ. ದುಃಖದಲ್ಲಿ ಮನಸ್ಸನ್ನು ಒಳಗೆಳೆದುಕೊಂಡು ಕಲ್ಲಾಗಿದ್ದ ಪತಿತೆ ಅಹಲ್ಯೆಯನ್ನು ಉದ್ಧರಿಸಿ ಗೌತಮನಿಗೆ ಒಪ್ಪಿಸಿದ. ಋಷಿಮುನಿಗಳ ಸೇವೆಗೈದು, ಅವರಿಗಿದ್ದ ರಕ್ಕಸರ ಉಪಟಳವನ್ನು ಕೊನೆಗಾಣಿಸಿ ಅವರ ಪ್ರೀತಿಗೆ ಪಾತ್ರನಾದ. ರಾಮನ ಸ್ವಭಾವವೇ ಅವನನ್ನು ಎಲ್ಲರಿಗೂ ಹತ್ತಿರವಾಗಿಸಿತು. ಹಾಗಾಗಿಯೇ ವಾನರರೂ ಅವನ ಜೊತೆಯಾದರು. ರಾಕ್ಷಸರೂ ಅವನ ಬಗ್ಗೆ ಗೌರವ ತಾಳಿದರು.

                ವಾಲಿವಧೆ ಪ್ರಸಂಗವನ್ನು ಕುರಿತು ರಾಮನನ್ನು ದೂಷಿಸುವವರಿದ್ದಾರೆ. "ನನ್ನ ಸೊತ್ತೆಲ್ಲವೂ ನಿನ್ನವು. ನಿನ್ನದೆಲ್ಲವೂ ನನ್ನವೂ; ಪತ್ನಿಯರನ್ನೂ ಸೇರಿಸಿ!" ಎನ್ನುವ ಅಸಹ್ಯ ಒಪ್ಪಂದ ವಾಲಿ-ರಾವಣರ ನಡುವೆ ಆಗಿತ್ತು! ತಮ್ಮನ ಪತ್ನಿ ಮಗಳ ಸಮಾನ. ಅಂತಹ ತಮ್ಮನ ಪತ್ನಿಯನ್ನೇ ತನ್ನ ವಶ ಮಾಡಿಕೊಂಡು ತಮ್ಮನನ್ನು ಓಡಿಸಿದಂತಹ ವ್ಯಕ್ತಿಯನ್ನು ಯುಕ್ತಿಯಿಂದಲ್ಲದೆ ನೇರ ಗೆಲ್ಲಲಾಗುತ್ತದೆಯೇ? ಒಂದು ವೇಳೆ ರಾಮನದ್ದು ತಪ್ಪು ಎಂದಾಗಿದ್ದರೆ ತಾರೆ ವಾಲಿವಧೆಯ ಬಳಿಕ ಸುಗ್ರೀವನ ಕೈ ಹಿಡಿಯುತ್ತಿರಲಿಲ್ಲ. ಅಂಗದ ರಾಮದೂತನಾಗಿ ರಾವಣನ ಬಳಿ ಸಂಧಾನಕ್ಕೆ ಹೋಗುತ್ತಿರಲಿಲ್ಲ. ವಾಲಿಯ ಸಂಸಾರಕ್ಕೇ ಕಾಣದ ಮೋಸ, ಕೆಲವು ಪ್ರಭೃತಿಗಳಿಗೆ ಕಂಡಿತು!

                   ನಾಲ್ಕು ದಿಕ್ಕುಗಳಿಗೂ ತನ್ನ ವಾನರ ಸೇನೆಯನ್ನು ವಿಭಜಿಸಿ ಸೀತಾನ್ವೇಷಣೆಗೆ ಕಳುಹಿಸಿಕೊಟ್ಟ ಸುಗ್ರೀವ. ಆದರೆ ರಾಮ ಮುದ್ರೆಯುಂಗುರ ಕೊಟ್ಟದ್ದು ಹನುಮನಿಗೆ ಮಾತ್ರ. ಹನುಮ ದಕ್ಷಿಣ ದಿಕ್ಕಿಗೆ ಅಂಗದನ ನೇತೃತ್ವದಲ್ಲಿ ಹೊರಟವ. ಅಂತಹ ನಾಯಕ ಅಂಗದನಿಗೂ ಉಂಗುರ ಕೊಡಲಿಲ್ಲ. ಅಂದರೆ ರಾಮನಿಗೆ ವಿಶ್ವಾಸವಿದ್ದದ್ದು ಹನುಮನಲ್ಲಿ ಮಾತ್ರ. ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ಉಳಿದವರು ತಮ್ಮ ಸಾಮರ್ಥ್ಯವನ್ನು ಕಡೆಗಣಿಸಿಬಿಟ್ಟನಲ್ಲಾ ಎನ್ನುವ ಅಸಮಾಧಾನ ಹೊಂದದ ರೀತಿ, ತಮ್ಮ ಸಾಮರ್ಥ್ಯ ಕಡಿಮೆ ಎಂದು ಕುಗ್ಗದ ರೀತಿ ಎಲ್ಲರೆದುರೇ ಹನುಮನಿಗೆ ಉಂಗುರ ಕೊಟ್ಟ. ಇದು ರಾಮನಲ್ಲಿದ್ದ ವ್ಯಕ್ತಿಯಲ್ಲಿದ್ದ ಸಾಮರ್ಥ್ಯವನ್ನು, ಯೋಗ್ಯತೆಯನ್ನು ಗುರುತಿಸುವ, ಹಾಗೆ ಮಾಡುವಾಗ ಉಳಿದವರೂ ಒಪ್ಪುವಂತೆ ಗುರುತಿಸುವ ಗುಣವನ್ನು ಎದ್ದು ತೋರಿಸುತ್ತದೆ. ಹನುಮನೂ ಹಾಗೆ, ನೋಡಿ ಬಾ ಎಂದರೆ ಶತ್ರುಪಾಳಯವನ್ನು ಸುಟ್ಟು ಬಂದವನವನು! ಒಂದೇ ದಿನದಲ್ಲಿ ಯೋಜನಗಟ್ಟಲೆಯ ಸಾಗರ ಹಾರಿ, ಅಶೋಕವನದಲ್ಲಿ ಶೋಕತಪ್ತಳಾದ ಸೀತೆಯನ್ನು ಕಂಡು, ಮುದ್ರೆಯುಂಗುರವಿತ್ತು, ಲಂಕೆಯನ್ನು ಸುಟ್ಟು, ರಾವಣನ ಎದೆಯಲ್ಲಿ ಭೀತಿ ಹುಟ್ಟಿಸಿ, ಚೂಡಾಮಣಿಯನ್ನು ತಂದು ರಾಮನ ಕೈಗಿತ್ತ ಕಾರ್ಯಶೀಲ ಹನುಮ. ಸ್ವಾಮಿ ನಿಷ್ಠೆಗೆ, ಭಕ್ತಿಗೆ ಮತ್ತೊಂದು ಹೆಸರು ಈ ಪವಮಾನ ಸುತ.

                ರಾವಣಾದಿಗಳನ್ನು ಸಂಹರಿಸಿ ಪುಷ್ಪಕವಿಮಾನದಲ್ಲಿ ಹಿಂದಕ್ಕೆ ಬರುವಾಗ ಭರದ್ವಾಜರ ಆಶ್ರಮದಲ್ಲಿ ಉಳಿದುಕೊಂಡು ತನ್ನ ಆಗಮನದ ವಿಚಾರವನ್ನು ಅರುಹಿ ಭರತನ ಮುಖದಲ್ಲಿ ಆಗುವ ಬದಲಾವಣೆಗಳನ್ನು ನನಗೆ ತಿಳಿಸು ಎಂದು ಹನುಮಂತನನ್ನು ಕಳುಹಿಸುತ್ತಾನೆ. ಹದಿನಾಲ್ಕು ವರ್ಷ ರಾಜ್ಯವಾಳಿ ಭರತನಲ್ಲೇನಾದರೂ ರಾಜ್ಯಸೂತ್ರಗಳನ್ನು ತಾನೇ ಉಳಿಸಿಕೊಳ್ಳುವ ಇಚ್ಛೆಯಿದ್ದರೆ ಅವನಿಂದ ಅದನ್ನು ಕಿತ್ತುಕೊಳ್ಳಲು ನಾನು ಇಷ್ಟಪಡುವುದಿಲ್ಲ; ಹೀಗೇ ಎಲ್ಲಾದರೂ ಹೊರಟು ಹೋಗುತ್ತೇನೆ ಎನ್ನುವುದು ಅವನ ಅಭಿಮತವಾಗಿತ್ತು.

               ಕುಡಿದ ಮತ್ತಿನಲ್ಲಿ ಆಡಿದ ಮಾತಾಗಿರಬಹುದು. ಆದರೆ ಅವನು ರಾಮರಾಜ್ಯದ ಪ್ರಜೆ. ದಂಡಿಸಬಹುದು; ಆದರೆ ಕಳಂಕ ಹೋದೀತೇ? ಆಡುವವರ ಬಾಯಿ ನಿಂತೀತೇ? ತನ್ನ ಪತ್ನಿಯ ಚಾರಿತ್ರ್ಯಕ್ಕಿಂತಲೂ ಸಿಂಹಾಸನದ ಗೌರವ ಮುಖ್ಯವಾಗುತ್ತದೆ. ರಾಜಧರ್ಮ; ಜೊತೆಗೆ ಪತ್ನಿಯ ವನಗಮನದ ಬಯಕೆ ನೆನಪಾಯಿತು. ಪ್ರಿಯ ಪತ್ನಿಯ ವಿಯೋಗ ಎನ್ನುವ ದುಃಖವನ್ನೂ ಹತ್ತಿಕ್ಕಿ ರಾಜಾರಾಮನಾದ. ಅಶೋಕ ವನವೂ ಅವಳ ಶೋಕವನ್ನು ಶಮನ ಮಾಡಲಿಲ್ಲ; ರಾಮರಾಜ್ಯವೂ! ಆದರೂ ಆಕೆ "ಕರುಣಾಳು ರಾಘವನೊಳು ತಪ್ಪಿಲ್ಲ" ಎಂದು ದುಃಖ ನುಂಗಿಕೊಂಡು ಮಹಾತ್ಮೆಯಾದಳು. ಕ್ರೌಂಚದ ಕಣ್ಣೀರಿನ ಕಥೆ ಬರೆದವನಿಗೆ ತನ್ನ ನಾಯಕಿಯ ಕಣ್ಣೀರ ಕಥೆ ಬರೆಯುವಾಗ ಕೈಕಟ್ಟಿರಬೇಕು! ಶೋಕವನ್ನೇ ಶ್ಲೋಕವನ್ನಾಗಿಸಿದವನಿಗೆ ಶೋಕತಪ್ತಳಾದ ತನ್ನ ಕಥಾ ನಾಯಕಿಯನ್ನು ಪ್ರತ್ಯಕ್ಷವಾಗಿ ಕಾಣುವಾಗ ಎದೆ ಬಿರಿಯದಿದ್ದೀತೇ?

                     ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಸೀತೆಯ ದುಃಖವನ್ನು ಬರೆದವರಿದ್ದಾರೆ. ಊರ್ಮಿಳೆಯ ಬವಣೆಯನ್ನು ವಿವರಿಸಿದವರಿದ್ದಾರೆ. ಅಹಲ್ಯೆಯ ಪರವಾಗಿ ಕಣ್ಣೀರು ಸುರಿಸಿದವರಿದ್ದಾರೆ! ಆದರೆ ರಾಮನ ದುಃಖವನ್ನು ಕಂಡವರಾರು? ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ! ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ