ಪುಟಗಳು

ಬುಧವಾರ, ಮಾರ್ಚ್ 7, 2018

ಪುನರ್ ಪಲ್ಲವಿಸಿದೆ ಸರ್ವ ಜ್ಞಾನ ಸಿರಿಯ ಅಂತಃಸತ್ವದ ಶೋಧ

ಪುನರ್ ಪಲ್ಲವಿಸಿದೆ ಸರ್ವ ಜ್ಞಾನ ಸಿರಿಯ ಅಂತಃಸತ್ವದ ಶೋಧ


              ನಿತ್ಯ ಜೀವನದಲ್ಲಿ ಅದೆಷ್ಟು ಮಾಹಿತಿಯನ್ನು ಪಡೆಯುತ್ತೇವೆ. ಈಗಂತೂ ಅಂಗೈಯಗಲದ ವಸ್ತು ಇಡೀ ಜಗತ್ತನ್ನೇ ಬೆಸೆದು ದಶ ದಿಕ್ಕುಗಳಿಂದಲೂ ಮಾಹಿತಿಯ ಪ್ರವಾಹವನ್ನೇ ಹರಿಸುತ್ತದೆ. ದಿನದಿಂದ ದಿನಕ್ಕೆ ಮಾಹಿತಿಯ ಪ್ರಮಾಣ ಬೆಳೆಯುತ್ತಲೇ ಸಾಗುತ್ತಿದೆ. ಈ ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಲು ಬೇಕಾದ ಕಣಜವಾದರೂ ಎಷ್ಟು ದೊಡ್ಡದಿರಬೇಕು? ಅದರಲ್ಲೂ ವೈಯುಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸಿಕೊಳ್ಳಲು, ತಂತ್ರಜ್ಞಾನವನ್ನು ವಿನಾಶಕ್ಕೇ ಬಳಸಿಕೊಳ್ಳುವ ಮನಃಸ್ಥಿತಿಯವರಿಂದ ಆ ಮಾಹಿತಿಯನ್ನು ಗೂಢವಾಗಿರಿಸಲು ಎಷ್ಟು ಪರದಾಡುತ್ತೇವೆ! ಸದ್ಯಕ್ಕಂತೂ ಈ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ಇರಿಸಬಲ್ಲಂತಹ ಸಂಗ್ರಹಾಗಾರವನ್ನು ನಿರ್ಮಿಸುವುದು, ಅದನ್ನು ಕಾಪಾಡಿಕೊಳ್ಳುವುದು ದುಃಸಾಧ್ಯವೇ ಸರಿ. ಆದರೆ ಈ ಎಲ್ಲ ಮಾಹಿತಿಯೂ ಒಂದೇ ಕಡೆ ಒಂದು ಪುಟ್ಟ ಕೋಷ್ಟಕದಲ್ಲಿ "ಗುಪ್ತವಾಗಿ ಸಂಕೇತ ರೂಪದಲ್ಲಿ ಬಂಧಿಯಾದರೆ"(ಎನ್ ಕ್ರಿಪ್ಟ್) ಅದೆಷ್ಟು ಅದ್ಭುತ. ಆದರೆ ಇಂದಿನ ಕಾಲಮಾನದಲ್ಲಿ, ಕಣ್ಣಿಗೆ ಕಂಡದ್ದಷ್ಟೇ ಸತ್ಯ, ಅತೀಂದ್ರಿಯವೆನ್ನುವುದೆಲ್ಲಾ ಮೌಢ್ಯ ಎನ್ನುವ ಯುಗದಲ್ಲಿ, ಕೆಲವರಷ್ಟೇ ಕೆಲವದರಲ್ಲಿ ಪರಿಣಿತರಾಗಿರುವ ಕಾಲಘಟ್ಟದಲ್ಲಿ ಇಂತಹ ಅಪರೂಪದ ಜ್ಞಾನಸಿರಿಯನ್ನು ನಿರ್ಮಿಸಲಾದರೂ ಸಾಧ್ಯವೇ? ಆದರೆ ಅಂತಹುದೊಂದು ಹಿಂದೆ ಇತ್ತು ಎಂದೇನಾದರೂ ಹೇಳಿದರೆ ಅಪಹಾಸ್ಯ ಮಾಡುವವರೇ ಹೆಚ್ಚಾಗಿರುವ ಈ ಸಮಾಜದಲ್ಲಿ ಅದು ಇರುವುದರ ಬಗ್ಗೆಯಾದರೂ ಸಂಶೋಧನೆಯಾಗುವುದು ಸಾಧ್ಯವಿದೆಯೇ? ಆದರೆ ಅಂತಹುದೊಂದು ಇತ್ತು. ಅದರ ಬಗ್ಗೆ ಕೆಲವರಾದರೂ ಸಂಶೋಧನೆಗೆ ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಲೇ ಇದ್ದಾರೆ. ಅದು ಮಾತ್ರ ಮೊಗೆದಷ್ಟು ಮಾಹಿತಿಯನ್ನು ಕೊಡುತ್ತಲೇ ಇದೆ. ವಿಚಿತ್ರವೆಂದರೆ ಯಾವುದರಲ್ಲಿ ಜ್ಞಾನದ ಬೃಹತ್ ಕಣಜವನ್ನೇ ತುಂಬಲಾಗಿದೆಯೋ ಅದರಿಂದ ಜ್ಞಾನವನ್ನೇ ಶೋಧಿಸಬೇಕಾಗಿದೆ; ಅದರ ಮೂಲವನ್ನೂ! ಅದನ್ನೂ! ಅದು ಸಿರಿಭೂವಲಯ. ನಿಜಕ್ಕೂ ಭೂಮಿಯ ಮಾತ್ರವಲ್ಲ ಬ್ರಹ್ಮಾಂಡದ ಜ್ಞಾನ ಸಿರಿಯೇ!

                 ಕ್ರಿ.ಶ. 850ರಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗವೇ ಕನ್ನಡದ ಅತ್ಯಂತ ಪ್ರಾಚೀನ ಕೃತಿ ಎಂದು ಕನ್ನಡಿಗರು ಇಂದಿಗೂ ಭಾವಿಸಿದ್ದಾರೆ. ಆದರೆ ಇದಕ್ಕೂ ಮೊದಲು ಕ್ರಿ.ಶ. 800ರಲ್ಲಿ ರಚನೆಯಾಗಿರುವ ಅಂಕಕಾವ್ಯವೇ ಸಿರಿಭೂವಲಯ. ಅಮೋಘವರ್ಷನಿಗೇ ಗುರುವಾಗಿದ್ದ ಕುಮುದೇಂದು ಎಂಬ ಜೈನ ಮುನಿ ರಚಿಸಿದ ಅತ್ಯದ್ಭುತ ಕಾವ್ಯವದು. ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿನ ಯಲವಳ್ಳಿಯಲ್ಲಿ ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಜೈನಮತ ಪಂಗಡಕ್ಕೆ ಸೇರಿದ, ಅವನೇ ಹೇಳುವಂತೆ "ಸೇನ ಗುಣ ಸದ್ದರ್ಮ ಗೋತ್ರದ ದ್ರವ್ಯಾ೦ಗ ಶಾಖೆ-ಜ್ಞಾತ ವ೦ಶ-ವೃಷಭ ಸೂತ್ರ- ಇಕ್ಷೃರು ವ೦ಶಕ್ಕೆ ಸೇರಿದ ಜೈನ ಬ್ರಾಹ್ಮಣ” ಮನೆತನದಲ್ಲಿ ಆತ ಜನ್ಮ ತಳೆದ. ಜೈನಸಂಪ್ರದಾಯದ ಪ್ರಮುಖ ಗ್ರಂಥಗಳಾದ ಷಟ್ಖಂಡಾಗಮಗಳಿಗೆ ಧವಳಟೀಕೆಯನ್ನು ರೂಪಿಸಿದ ಜೈನ ಸಂಪ್ರದಾಯದ ಅತ್ಯದ್ಭುತ ಸಾಹಿತ್ಯವೆಂದೇ ಕೀರ್ತಿ ಗಳಿಸಿದ "ಪಂಚಧವಳ"ದ ಕರ್ತೃ, ಗಣಿತಜ್ಞನೂ ಸುಪ್ರಸಿದ್ಧ ವ್ಯಾಖ್ಯಾನಕಾರನೂ ಆಗಿದ್ದ ವೀರಸೇನಾಚಾರ್ಯ ಹಾಗೂ ಆತನ ಶಿಷ್ಯ ಜಿನಸೇನಾಚಾರ್ಯರು ಕುಮುದೇಂದು ಮುನಿಯ ಗುರುಗಳಾಗಿದ್ದರು. ಅಂತಹ ಪ್ರತಿಭಾಶಾಲಿ ಗುರುಗಳನ್ನೇ ಮೀರಿಸುವ ಸಾಧನೆ ಮಾಡಿದವನೀತ. 24ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡದ ಇತಿಹಾಸವು ನಾಲ್ಕುಸಾವಿರ ವರ್ಷಗಳ ಹಿಂದಕ್ಕೆ ಸರಿಯಿತು. ಕನ್ನಡ ಅಕ್ಷರಗಳು ಹಾಗೂ ಅಂಕಿಗಳು "ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ" ಎಂದು ಶ್ರೀಕೃಷ್ಣನು ಅರ್ಜುನನಿಗೆ ವಿವರಿಸಿದ್ದನ್ನು ಈ ಗ್ರಂಥ ಹೇಳುತ್ತದೆ. ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಅಂದರೆ ಸಿರಿಭೂವಲಯವು ಕನ್ನಡಭಾಷೆಯ ಪ್ರಾಚೀನತೆ, ಪ್ರಬುದ್ಧತೆ ಹಾಗೂ ಅಮೋಘತೆಯನ್ನು ಪ್ರತಿಪಾದಿಸುತ್ತಿರುವ ಜೀವಂತ ದಾಖಲೆ!

                    ವೇದಗಳ ಕಾಲದಿ೦ದಲೂ ಭರತ ಭೂಮಿಯಲ್ಲಿ ಗುಪ್ತ ಭಾಷೆಗಳಿದ್ದವು. ಸಿರಿ ಭೂವಲಯ ಅ೦ತಹ ಒ೦ದು ಗುಪ್ತಭಾಷೆಯೇ. ಈ ಗ್ರಂಥ ಭಾಷೆಯ ಲಿಪಿ ಕ್ರಮವು ಕಠಿಣವಾಗಿದ್ದು, ಹಳೆಯದ್ದನ್ನು ಬದಿಗೆ ಸರಿಸಿ ಈಗಿನ ಸರಳ ಭಾಷೆಯೊಡನೆಯೇ ಸರಸವಾಡುವ ವಿದ್ವಾಂಸರಿಗೆ ಕಠಿಣವಾದ ಕಾವ್ಯವೆನಿಸಿದ ಸಿರಿಭೂವಲಯ ಬ್ರಹ್ಮಾಂಡದ ಜ್ಞಾನ ಭಂಡಾರ. ಕನ್ನಡ ಮೂಲಭಾಷೆಯಾಗಿರುವ ಸಿರಿ ಭೂವಲಯವನ್ನು 718 ಭಾಷೆಗಳಲ್ಲಿ ಓದಬಹುದು! ಆದರೆ ಅದರಲ್ಲಿ ಅಕ್ಷರಗಳೇ ಇಲ್ಲ! ಕನ್ನಡ ವರ್ಣಮಾಲೆಯ 64 ಅಕ್ಷರಗಳಿಗೆ ಅನ್ವಯವಾಗುವಂತೆ 1 ರಿಂದ 64 ಅಂಕಿಗಳನ್ನು 27 ಉದ್ದ ಹಾಗೂ ಅಡ್ಡಸಾಲುಗಳ ಒಟ್ಟು 729 ಚೌಕಗಳಲ್ಲಿ ಸೂತ್ರಬದ್ಧವಾಗಿ ತುಂಬಿಸಿ ರಚಿಸಲಾಗಿರುವ ಚಚ್ಚೌಕವನ್ನು ಒಂದು ಚಕ್ರ ಎನ್ನಲಾಗುತ್ತದೆ. ಇ೦ತಹ 1270 ಚಕ್ರಗಳೇ ಈ ಗ್ರ೦ಥವೆನಿಸಿದೆ. ಕಾವ್ಯದಲ್ಲಿ ಹಲವು ಅಧ್ಯಾಯಗಳನ್ನು ಹೊಂದಿರುವ 9 ಖಂಡಗಳಿವೆ. ಪ್ರಥಮಖಂಡವಾದ ಮಂಗಳಪ್ರಾಭೃತದಲ್ಲಿ  59 ಅಧ್ಯಾಯಗಳಿವೆ. ನಮಗೆ ಲಭ್ಯವಿರುವುದು ಪ್ರಥಮಖಂಡ ಮಾತ್ರ. 6000 ಸೂತ್ರಗಳನ್ನು ಬಳಸಿ ರಚಿಸಲಾದ ಈ ಅಂಕಕಾವ್ಯವನ್ನು ಓದಲು ಸುಮಾರು 40 ಬಂಧಗಳಿವೆ. 14 ಲಕ್ಷ ಅಕ್ಷರಗಳೂ, ಆರು ಲಕ್ಷದಷ್ಟು ಮೂಲ ಕನ್ನಡ ಪದ್ಯಗಳನ್ನು ಹೊಂದಿರುವ ಈ ಕಾವ್ಯ ಸುಮಾರು ‘ನೂರುಸಾವಿರ ಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯಲ್ಲಿರುವ,  1200 ವರ್ಷಗಳ ಹಿಂದಿನ ಜಾಗತಿಕ ಪರಿಸರದಲ್ಲಿ ಪ್ರಚಲಿತವಿದ್ದ 718 ಭಾಷೆಗಳ ಸಾಹಿತ್ಯ ಸಾಗರವನ್ನು ಒಳಗೊಂಡಿದೆ. ಇದರ ಅಪೂರ್ವ ವಿಷಯ ವ್ಯಾಪ್ತಿಯಲ್ಲಿ ವೈದ್ಯ, ಜ್ಯೋತಿಷ್ಯ, ಭೌತ ರಸಾಯನಾದಿ ಮೂಲವಿಜ್ಞಾನ, ಇತಿಹಾಸ-ಸಂಸ್ಕೃತಿ, ಗಣಿತ, ಅಣುಶಾಸ್ತ್ರ, ಜಲ-ಲೋಹಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಜೈನಸಿದ್ಧಾಂತ, ಧರ್ಮದರ್ಶನ ಶಾಸ್ತ್ರ, ವೇದ, ರಾಮಾಯಣ-ಭಗವದ್ಗೀತೆ, ಲಿಪಿ-ಭಾಷೆ ಎಲ್ಲವೂ ಸೇರಿವೆ. ಹನ್ನೆರಡು ವರ್ಷದಲ್ಲಿ ಕಲಿಯುವ ವಿದ್ಯೆಯನ್ನು ಒಂದು ಅಂತರ್ಮುಹೂರ್ತದಲ್ಲಿ(ಸುಮಾರು 48 ನಿಮಿಷಗಳ ಅವಧಿ) ಕಲಿಸುತ್ತೇನೆ ಎಂದು ಘೋಷಿಸಿದ್ದಾನೆ ಈ ಕವಿ!

                ಕುಮುದೇಂದು ಮುನಿಯ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ಕ್ಕೆ ಮೂಲ ಆಕರಗಳು ಭೂತಬಲಿಯ "ಭೂವಲಯ" ಹಾಗೂ "ಕುಮುಲಬ್ಬೆ"ಯ ಸಿರಿಭೂವಲಯ. ಇದನ್ನು ಸ್ವತಃ ಈ ಕಾವ್ಯವೇ ಸ್ಪಷ್ಟಶಬ್ಧಗಳಲ್ಲಿ ಹೇಳುತ್ತದೆ. ಪ್ರಾಕೃತ, ಕನ್ನಡ ಹಾಗೂ ಸಂಸ್ಕೃತ ಭಾಷಾ ಮಿಶ್ರಣದ "ಪದ್ದತಿ ಗ್ರಂಥ"ವಾಗಿದ್ದ ಸಿರಿಭೂವಲಯದ ಮಹತ್ತರ ಮಾಹಿತಿಗಳೊಂದಿಗೆ ಅಂದಿನ ಕಾಲದಲ್ಲಿದ್ದ ಜಗತ್ತಿನ ಎಲ್ಲಾ ಭಾಷೆ, ವಿಚಾರ, ಕೃತಿ, ವಿಭಾಗಗಳ ಮಾಹಿತಿಯನ್ನು ಮುಂದಿನವರಿಂದ ಪ್ರಕ್ಷಿಪ್ತವಾಗದಂತೆ ತನ್ನದೇ ಆದ ನವಮಾಂಕ ಪದ್ಧತಿಯ ಕನ್ನಡ ಅಂಕಿಗಳಲ್ಲಿ 16000 ಚಕ್ರಗಳ ಸಂಕೇತ ರೂಪದಲ್ಲಿ ಕುಮುದೇಂದು ಮುನಿ ಜೋಡಿಸಿದ. ಅದರ ಮೂಲಪ್ರತಿ ಇಂದು ಲಭ್ಯವಿಲ್ಲ. ಮಲ್ಲಿಕಬ್ಬೆ ಎಂಬ ಸಾಧ್ವಿ ಇದನ್ನು ಕೋರಿಕಾಗದದಲ್ಲಿ ಪ್ರತಿ ಮಾಡಿಸಿ ತನ್ನ ಗುರು ಮಾಘಣನಂದಿಗೆ ದಾನ ಮಾಡಿದ್ದಳೆಂಬ ಮಾಹಿತಿಯಿದೆ. ಹಾಗಿದ್ದರೂ ಸುವಿಶಾಲಪತ್ರದಕ್ಷರಭೂವಲಯ ಹಾಗೂ ಕುಮುದೇಂದು ರೂಪಿಸಿದ ಅಂಕಭೂವಲಯದಲ್ಲಿ ಒಂದಷ್ಟು ವ್ಯತ್ಯಾಸಗಳಿವೆ.

               ಈ ಮಾಯಾಚೌಕದ ಅ೦ಕಿಗಳು ಹೊರಹೊಮ್ಮಿಸುವ ಧ್ವನಿಗಳಿ೦ದ ಸಾಹಿತ್ಯ ಹೊರಹೊಮ್ಮುತ್ತದೆ. ಗ್ರ೦ಥದಲ್ಲಿ ಹೇಳಿರುವ೦ತೆ ಒ೦ದು ರೀತಿಯಿ೦ದ ಓದಿದರೆ ಕನ್ನಡ ಸಾ೦ಗತ್ಯ ಛ೦ದಸ್ಸಿನಲ್ಲಿ ಸಾಹಿತ್ಯವಾಗುತ್ತದೆ. ಪ್ರತಿಯೊಂದು ಸಂಖ್ಯೆಯನ್ನು ಒಂದೊಂದು ಕನ್ನಡ ಅಕ್ಷರದಿಂದ ಬದಲಿಸಿ ಸಿದ್ಧಪಡಿಸಿದ ಪುಟವನ್ನು ವಿವಿಧ ಬಂಧಗಳ ಹಾದಿಯಲ್ಲಿ ವಾಚಿಸಿದರೆ ಅಸಂಖ್ಯಾತ ಸಾಹಿತ್ಯವು ಗ್ರಂಥದಿಂದ ದೊರಕುತ್ತದೆ. ಚಕ್ರದ ಅ೦ಕಿಗಳನ್ನು ಅಕ್ಷರಗಳನ್ನಾಗಿ ಪರಿವರ್ತಿಸಿ ಬ೦ದ ಕನ್ನಡ ಸಾ೦ಗತ್ಯ ಪದ್ಯದಲ್ಲಿ, ಪ್ರತಿ ಪದ್ಯದ ಮೊದಲ ಅಕ್ಷರ ಓದುತ್ತಾ ಹೋದರೆ "ಪ್ರಾಕೃತ ಭಾಷಾ" ಸಾಹಿತ್ಯ ರಚಿತವಾಗುತ್ತದೆ. ಪ್ರತಿ ಪದ್ಯದ ನಡುವಿನ ಅಕ್ಷರ ಓದುತ್ತಾ ಹೋದರೆ "ಸ೦ಸ್ಕೃತ ಭಾಷಾ" ಸಾಹಿತ್ಯವಾಗುತ್ತದೆ. ಹೀಗೆ ಅನೇಕ ರೀತಿಯ ಅಕ್ಷರ ಸ೦ಯೋಜನೆಯಿ೦ದ ತಮಿಳು, ತೆಲುಗು, ಮರಾಠಿ ಇತ್ಯಾದಿ ಹಲವು ಭಾಷಾ ಸಾಹಿತ್ಯ ರಚನೆಯಾಗುತ್ತದೆ. ಪಂಪನಿಗಿಂತಲೂ ಪ್ರಾಚೀನನಾದ ಈ ಮಹಾನ್ ಕವಿಯು ತನ್ನ ಈ ಅಚ್ಚರಿಯ ಕಾವ್ಯದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿ ಬಳಕೆಯಾಗುವ ಕನ್ನಡಭಾಷೆಯನ್ನು ಬಳಸುವ ಮೂಲಕ ಓದುಗರಿಗೆ ವಿಸ್ಮಯವನ್ನುಂಟುಮಾಡಿದ್ದಾನೆ! ಇನ್ನೊ೦ದು ವಿಶೇಷವೆ೦ದರೆ ಈ ಗ್ರ೦ಥದ ಯಾವುದೇ ಭಾಗ ನಾಶವಾದರೂ ಬೇರೆ ಅಧ್ಯಾಯಗಳ ಚಕ್ರಗಳ ಸಹಾಯದಿ೦ದ ನಾಶವಾದ ಭಾಗ ಪುನಃ ರಚಿಸಲು ಅವಕಾಶವಿದೆ. ಒ೦ದು ಚಕ್ರದಿ೦ದ ಅದರ ಹಿ೦ದಿನ ಚಕ್ರವನ್ನು ಪಡೆಯಬಹುದಾದ ಗಣಿತ ಸೂತ್ರವನ್ನು ಗ್ರ೦ಥ ಒಳಗೊ೦ಡಿದೆ. 363 ಮತಧರ್ಮಗಳ ವಿವರಗಳು ಇದರಲ್ಲಿವೆ. "ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು|" ಎಂದು ವಿವರಿಸಿರುವ ಅಣು ವಿಜ್ಞಾನ; ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯದಲ್ಲಿನ ಬಾಹ್ಯಾಕಾಶ ತಂತ್ರಜ್ಞಾನ; "ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ"  ಎನ್ನುತ್ತಾ ವಿವರಿಸಿರುವ ಇಂದಿನ ಅತ್ಯಾಧುನಿಕವಾದ ಗಣಕಯಂತ್ರ ಹಾಗೂ ಮೊಬೈಲ್ ತಂತ್ರಜ್ಞಾನ; ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನ(ಸರ್ವೆ); ಲಿಂಗಛೇಧನವಿಜ್ಞಾನ (ಇಂದಿನ ವ್ಯಾಸೆಕ್ಟಮಿ ಟ್ಯೂಬೆಕ್ಟಮಿ); ಗಣಿತಶಾಸ್ತ್ರ, ಜೀವವಿಜ್ಞಾನ, ಶಿಲ್ಪಶಾಸ್ತ್ರ, ಧರ್ಮಶಾಸ್ತ್ರ, ಪುರಾಣ, ಇತಿಹಾಸ, ಸಂಗೀತ, ನೃತ್ಯ, ಗಣಕಯಂತ್ರಕ್ರಮ, ಆಕಾಶ ವಿಜ್ಞಾನ, ಲೋಹವಿಜ್ಞಾನ, ಪರಮಾಣುವಿಜ್ಞಾನ, ರಸವಿದ್ಯೆ, ಪ್ರಾಣವಾಯು ಪೂರ್ವ ಎ೦ಬ ವೈದ್ಯ ವಿಜ್ಞಾನ ಹೀಗೆ ಸಕಲ ಶಾಸ್ತ್ರಗಳನ್ನು ಗ್ರ೦ಥ ಅಡಗಿಸಿಟ್ಟುಕೊ೦ಡಿದೆ. ಹೀಗೆ ಇದು ಸರ್ವಭಾಷಾಮಯೀ, ಸರ್ವಶಾಸ್ತ್ರಮಯೀ, ಸರ್ವಕಾವ್ಯಮಯೀ ಗ್ರ೦ಥವೇ ಸರಿ.

                  ಜೈನಸಂಪ್ರದಾಯದ ಸಿರಿಭೂವಲಯದಲ್ಲಿ ನಾಟ್ಯಶಾಸ್ತ್ರದ ಭಾಗದಲ್ಲಿ ಕುಮುದೇಂದು ಸ್ತುತಿಸಿರುವುದು ಮೊದಲಿಗೆ ವಾಸುದೇವನನ್ನು, ಕೊನೆಗೆ ಶ್ರೀಲಕ್ಷ್ಮಿಯನ್ನು! ಸಿರಿಭೂವಲಯದಲ್ಲಿ ಋಗ್ವೇದದ ಕುರಿತು ಕುಮುದೇಂದು ಮುನಿ,
"ಅನಾದಿ ನಿಧನಾಂ ವಾಕ್ ದಿವ್ಯ ಈಶ್ವರೀಯಂ ವಚಃ |
ಋಗ್ವೇದೋಹಿ ಭೂವಲಯಃ ಸರ್ವಜ್ಞಾನಮಯೋ ಹಿ ಆಃ || "
ಎನ್ನುತ್ತಾ ವೇದಗಳ ಅಪೌರುಷೇಯತೆಯನ್ನೂ, ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲವೆಂಬ ಸಂಗತಿಯನ್ನೂ ಸಂಶಯಾತೀತವಾಗಿ ನಿರೂಪಿಸುತ್ತಾನೆ. ಋಗ್ವೇದ ಗಾಯತ್ರೀ ಮ೦ತ್ರದಿ೦ದ ಆರ೦ಭವಾಗುತ್ತದೆ೦ದು ಮುನಿ ಇದರಲ್ಲಿ ಹೇಳುತ್ತಾನೆ. ಶಾಕಲ ಶಾಖೆಯ ಋಗ್ವೇದ, "ಅಗ್ನಿಮೀಳೇ ಪುರೋಹಿತಂ" ಎ೦ಬ ಗಾಯತ್ರೀ ಛ೦ದಸ್ಸಿನ ಮ೦ತ್ರದಿ೦ದ ಆರ೦ಭವಾಗುತ್ತದೆ. ವ್ಯಾಸರ ಜಯಾಖ್ಯಾನ(ಮಹಾಭಾರತ)ದ ಭಗವದ್ಗೀತೆಯನ್ನೂ ಸಿರಿಭೂವಲಯ ಒಳಗೊಂಡಿದೆ. ಜೈನ ಮುನಿಯೊಬ್ಬ ತನ್ನ ಗ್ರಂಥದಲ್ಲಿ "ವೇದಗಳೇ ಸಿರಿ ಭೂವಲಯದ ಬೃಹದ್ರೂಪ. ವೇದ, ಮಾತೆಯಿದ್ದ ಹಾಗೆ. ಅದನ್ನಿಲ್ಲಿ ಉದಾಹರಿಸುತ್ತೇನೆ" ಎ೦ದಿರುವುದು ಜೈನರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲು ನೋಡುವವರಿಗೆ ಮುಖಕ್ಕೆ ಹೊಡೆದಂತಾಗುವ ಸಂಗತಿ. ಜೈನಸಂಪ್ರದಾಯವು ಎಷ್ಟೇ ಕೋಟ್ಯಾಂತರ ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಈ ಸಂಪ್ರದಾಯದ ಮೂಲ ಬೇರಿರುವುದು ವೇದೋಪನಿಷತ್ತುಗಳಲ್ಲಿಯೇ. ಈ ವೇದೋಪನಿಷತ್ತುಗಳೆಲ್ಲವೂ ಪಾವನ ತೀರ್ಥಗಳೆಂದೇ ಕುಮುದೆಂದು ಮುನಿಯು ಖಚಿತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿರಿಭೂವಲಯದ ಪ್ರಥಮಕಾಂಡದಲ್ಲಿ ಋಗ್ವೇದಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್ಭೂವಲಯ ಋಗ್, ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿವೆ. ಸಿರಿಭೂವಲಯದ ಪ್ರಾಚೀನ ಹೆಸರನ್ನು ಋಗ್ಮಹಾಬಂಧ ಎಂದು ವಿವರಿಸುವ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್ವೇದವೇ ಮೂಲ ಆಕರ ಎಂಬ ಮೂಲ ಸತ್ಯವನ್ನು ಸಿದ್ಧಪಡಿಸಿದ್ದಾನೆ ಮುನಿ. ಹೀಗೆ ಜಗತ್ತಿನ ಮೊದಲ ಗಣಕಯಂತ್ರವೂ, ಜಗತ್ತಿನ ಪ್ರಥಮ ವಿಶ್ವಕೋಶವೂ, ಪ್ರಥಮ ಹಾಗೂ ಏಕೈಕ ಕನ್ನಡ ಅಂಕಕಾವ್ಯವೂ ಆದ ಸರ್ವಭಾಷಾಮಯೀಭಾಷಾ ಸಿರಿಭೂವಲಯವು ಸೃಷ್ಟಿ-ಸ್ಥಿತಿ-ಲಯಗಳ ರಹಸ್ಯವನ್ನು ವಿವರಿಸಿರುವ, ಜಗತ್ತಿನ ಸಕಲ ಜ್ಞಾನ-ಶಾಸ್ತ್ರಗಳ ಆಗರವಾದ, ಆದಿ ತೀರ್ಥಂಕರನಿಗಿಂತಲೂ ಪ್ರಾಚೀನವಾದ ಅಪೌರುಷೇಯವಾದ ವೇದಗಳನ್ನು ಸಮರ್ಥಿಸಿರುವುದೇ ಅದು ಮೂಲೆಗುಂಪಾಗಲು ಕಾರಣವಾಯಿತೇ?

                ನಂದಿಬೆಟ್ಟಕ್ಕೆ ಹೊಂದಿಕೊಂಡಿದ್ದ ಯಲವಳ್ಳಿಯ ಮೂಲ ಹೆಸರು ಯಲವ ಯಲವಳಾ. ಅದರ ಪಕ್ಕದಲ್ಲೇ ನಂದಗಿರಿಪುರ ಎಂಬ ಹೆಸರಿನ ನಗರವಿದ್ದದ್ದು ಈಗ ಇತಿಹಾಸ. ಕುಮುದೇಂದು ತನ್ನ 1500 ಶಿಷ್ಯ ಸಮೂಹದೊಂದಿಗೆ ಈ ವಿಸ್ತಾರವಾದ ನಗರದಲ್ಲಿದ್ದಿರಬಹುದೇ? ಮಂದರತೀರ್ಥ ಚೈತ್ಯಾಲಯದಲ್ಲಿ ಋಷಭದೇವನಾದಿಯಾಗಿ ಕೃಷ್ಣನಪರ್ಯಂತ ತೀರ್ಥಂಕರರು ಹರಿಪೀಠಸ್ಥಿತರಾಗಿದ್ದರು. ಶಕರಾಯನೃಪಪಾಲಿತ ಪ್ರದೇಶ ಅದಾಗಿತ್ತು. ಯಲವಳ್ಳಿಯ ಸಮೀಪದಲ್ಲಿ ಕುಮುದೇಂದುವಿನಬಾವಿ ಎಂಬ ಪ್ರಾಚೀನವಾದ ಬಾವಿಯೊಂದು ಕೆಲದಿನಗಳ ಹಿಂದಿನ ವರೆವಿಗೂ ಅಸ್ಥಿತ್ವದಲ್ಲಿತ್ತು. ಸಮರ್ಪಕ ಉತ್ಖನನವಿಲ್ಲಿ ನಡೆದರೆ ಕನ್ನಡದ ಆದಿ ಕವಿವರ್ಯನ ಬಗೆಗಿನ ಬಹುತೇಕ ಚಾರಿತ್ರಿಕ ಅಂಶಗಳು ಸಿಗುವ ಸಾಧ್ಯತೆಯಿದೆ.

                   ಈ ಕಾವ್ಯ ಆಸ್ಥಾನ ವಿದ್ವಾಂಸರೂ, ವೈದ್ಯ-ಜ್ಯೋತಿಶಾಸ್ತ್ರಗಳಲ್ಲಿ ವಿಶಾರದರಾಗಿದ್ದ  ಧರಣೇಂದ್ರ ಪಂಡಿತರೆಂಬ ಶತಾವಧಾನಿಗಳಿಂದ ವಂಶಪಾರಂಪರ್ಯವಾಗಿ ರಕ್ಷಿಸಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ ಸಿರಿಭೂವಲಯದ ಬಗ್ಗೆ ಅದ್ಭುತ ಸಂಶೋಧನೆ ಮಾಡಿದವರು ಕರ್ಲಮಂಗಲಂ ಶ್ರೀಕಂಠಯ್ಯನವರು. ಮೂಲಗ್ರಂಥವೆಂದು ಹೆಚ್ಚಿನವರು ಅಂದುಕೊಂಡಿದ್ದ ಗ್ರಂಥಕ್ಕೆ ವಾರಸುದಾರರಾಗಿದ್ದ ಪಂಡಿತ ಯಲ್ಲಪ್ಪಶಾಸ್ತ್ರಿ ಹಾಗೂ ಗ್ರಂಥದ ಅಂತರಂಗ ಶೋಧನೆಯಲ್ಲಿ ತೊಡಗಿದ್ದ ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರು ಈ ಮಹಾನ್ ಗ್ರಂಥದ ಪ್ರಚಾರಕಾರ್ಯದಲ್ಲಿ ತೊಡಗಿದ್ದವರು. 1953ರಲ್ಲಿ ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು ಈ ಗ್ರಂಥದ ಸ್ವಲ್ಪಾಂಶವನ್ನು ಸಂಶೋಧಿಸಿ, ಅಕ್ಷರರೂಪದಲ್ಲಿ ಶ್ರೀಕಂಠಯ್ಯನವರು ಪ್ರಕಟಿಸಿದ್ದರು. ಶ್ರೀಕಂಠಯ್ಯನವರಿಂದ ಬೆಳಕು ಕಂಡ ಸಿರಿಭೂವಲಯಕ್ಕೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ಅಂದಿನ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕನ್ನಡ ಅಂಕಲಿಪಿಯಲ್ಲಿ ರಚನೆಯಾಗಿರುವುದೆಂದು ಪ್ರಚಾರವಾಗಿದ್ದ ಈ ಗ್ರಂಥದ ವಿಚಾರಗಳು ಸಾಕಷ್ಟು ನಿಗೂಢವೆನಿಸಿಕೊಂಡು ಹೆಚ್ಚಿನವರಿಗೆ ಅರ್ಥವಾಗಿರಲಿಲ್ಲ. ಈ ಕಾರಣದಿಂದ ಇದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. 2003ರಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನ ಡಾ|| ವೆಂಕಟಾಚಲಶಾಸ್ತ್ರಿಗಳ ನೇತೃತ್ವದಲ್ಲಿ ಇದನ್ನು ಪರಿಷ್ಕರಿಸಿ ಮರುಮುದ್ರಣ ಮಾಡಿತು. ಆದರೆ ಇವೆಲ್ಲಕ್ಕೂ ಮೂಲವಾಗಿದ್ದು ಸುವಿಶಾಲಪತ್ರದಕ್ಷರಭೂವಲಯವೇ ಹೊರತು ಕುಮುದೇಂದು ಮುನಿಯ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ವಲ್ಲ. ಎರಡಕ್ಕೂ ವ್ಯತ್ಯಾಸ ಇರುವುದನ್ನು ಈ ಮುಂಚೆಯೇ ಸೂಚಿಸಿದೆ. 2010ರಿಂದೀಚೆಗೆ ಹಾಸನದ ಸುಧಾರ್ಥಿಯವರು ಸಿರಿಭೂವಲಯಸಾರ, ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ, ಸಿರಿಭೂವಲಯ ಒಂದು ಮಿಂಚುನೋಟ,  ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ, ಸಿರಿಭೂವಲಯಕೀ ಏಕ್ ಝಾಂಕಿ, ಸಿರಿಭೂವಲಯದ ಒಳನೋಟ ಹೀಗೆ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ದ ಕುರಿತು ಹನ್ನೊಂದು ಕೃತಿಗಳನ್ನು ಯಾವುದೇ, ಯಾರದೇ ನೆರವಿಲ್ಲದೆ, ಏಕಾಂಗಿಯಾಗಿ ತಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಸತತ ಪರಿಶ್ರಮದಿಂದ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಕಟಿಸುವ ಮೂಲಕ, ಅನೇಕರಿಗೆ ಈ ಸಂಕೇತ ಭಾಷೆಯನ್ನು ಕಲಿಸುವ ಮೂಲಕ ನಿಜಾರ್ಥದಲ್ಲಿ ಸಿರಿಭೂವಲಯ ಸುಧಾರ್ಥಿ ಎನಿಸಿಕೊಂಡಿದ್ದಾರೆ. ಈ ಲೇಖನದ ಬಹ್ವಂಶ ಅವರ ಗ್ರಂಥಗಳಿಂದಲೇ ಆರಿಸಿ ತೆಗೆದಿರುವಂತಹದ್ದು. ಆಸಕ್ತರು ಹೆಚ್ಚಿನ ವಿವರಗಳಿಗೆ ಅವರ ಗ್ರಂಥಗಳನ್ನೇ ಪರೀಕ್ಷಿಸಬಹುದು. ಅಧ್ಯಯನದ ಅಪೇಕ್ಷೆ ಉಳ್ಳವರು ಅವರನ್ನೇ(e-mail: sudharthyhassan@gmail.com) ಸಂಪರ್ಕಿಸಬಹುದು.

 ಕರ್ನಾಟಕದಲ್ಲಿ ಪ್ರತೀ ವರ್ಷ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ವಿಶ್ವಮಟ್ಟ, ರಾಷ್ಟ್ರಮಟ್ಟ, ಜಿಲ್ಲೆ, ತಾಲೂಕು ಅಲ್ಲದೇ ಹಲವು ಗ್ರಾಮಗಳಲ್ಲೂ ಸಾಹಿತ್ಯ ಸಮ್ಮೇಳನಗಳು, ವಿವಿಧ ಸಾಹಿತ್ಯ ಉತ್ಸವಗಳೂ ನಡೆಯುತ್ತವೆ. ಆದರೆ ಇಷ್ಟರವರೆಗೆ ಈ ವಿಶ್ವಕಾವ್ಯದ ಬಗೆಗೆ ಅದು ಅಮೋಘವಾದ ಸಾಹಿತ್ಯ ಎನ್ನುವ ಉಧ್ಘಾರವನ್ನು ಹೊರತುಪಡಿಸಿ ಯಾವುದೇ ಚರ್ಚೆಗಳಾಗಲೀ ನಡೆದದ್ದನ್ನು ನಾವು ಕಾಣೆವು. ಕುಮುದೇಂದು ಮುನಿ ವಿಶ್ವಕ್ಕೇ ಸೇರಿದವ. ಆದರೂ ತಮ್ಮ ಮತದವನೆಂಬ ಕಾರಣಕ್ಕೆ ಜೈನರಾದರೂ ಇದರ ಬಗ್ಗೆ ವಿಸ್ತೃತ ಚರ್ಚೆಗಳನ್ನು ಆಯೋಜಿಸಬೇಕಿತ್ತು. ಮಸ್ತಕಾಭಿಷೇಕಗಳು ಹಲವು ನಡೆದರೂ ಈ ಜ್ಞಾನಸಿರಿ ಪುಸ್ತಕಾಭಿಷೇಕ ಆಗಲೇ ಇಲ್ಲ. ಭಾಗ್ಯಗಳ ಮೇಲೆ ಭಾಗ್ಯಗಳನ್ನು ಸುರಿಸುವ ಕರ್ನಾಟಕದ ದೌರ್ಭಾಗ್ಯಾಧಿಪತಿಯಂದ ಇಂತಹ ಸಂಶೋಧನೆಗೆ ಅವಕಾಶ ಸಿಗುವ ಭಾಗ್ಯ ಅಸಂಭವವೇ ಸರಿ. ಹಗರಣ, ವೈಯುಕ್ತಿಕ ಪ್ರತಿಷ್ಠೆ, ಗುಂಪುಗಾರಿಕೆಯ ಗೂಡಾಗಿರುವ ವಿಶ್ವವಿದ್ಯಾಲಯಗಳಿಗೆ ಈ ಕಾವ್ಯವಿದೆಯೆಂಬ ನೆನಪಾದರೂ ಇದೆಯೇ? ಕೇಂದ್ರ ಪತ್ರಾಗಾರದಲ್ಲಿರುವ ಮಾಹಿತಿ ಸಾಮಾನ್ಯರಿಗೆ ಸುಲಭವಾಗಿ ಎಟುಕಲಾರದು. ಅದಕ್ಕಾಗಿ ರಾಜ್ಯದಲ್ಲೇ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಸುಲಭ ಪರಿಹಾರವಾಗಬಲ್ಲ ಈ ವಿಶ್ವಕಾವ್ಯದ ಮಾಹಿತಿ ಸಿಗುವ ವ್ಯವಸ್ಥೆ ಮಾಡುವಂತಹ ಇಚ್ಛಾಶಕ್ತಿಯಂತೂ ನಮ್ಮ ಸರಕಾರಗಳಿಗಿಲ್ಲ. ಕೆಲವೇ ಕೆಲವರು ವೈಯುಕ್ತಿಕ ಆಸಕ್ತಿಯಿಂದ ನಡೆಸುವ ಸಂಶೋಧನಾ ಕಾರ್ಯಕ್ಕೂ  ಸೆಕ್ಯುಲರ್ ಸರಕಾರ ಸಹಾಯ ಮಾಡಲು ಸಾಧ್ಯವೇ? ಅದು ಕೂಡಾ ಪ್ರಾಚೀನ ಜ್ಞಾನವನ್ನು, ಸನಾತನ ಧರ್ಮವನ್ನು ಕೊಂಡಾಡುವ ಕಾವ್ಯ ಸಂಶೋಧನೆಗೆ? ತಮ್ಮದೇ ಪ್ರಾಚೀನ ಕಾವ್ಯದ ಬಗೆಗೆ ಕನ್ನಡಿಗರು ಅಸಡ್ಡೆ ತಾಳಲು ಅದು ವೇದವನ್ನು ಕೊಂಡಾಡಿದ್ದೇ ಕಾರಣವೇ?

1 ಕಾಮೆಂಟ್‌:

  1. ಜಗತ್ತಿನ ಅತ್ಯಚ್ಚರಿಯ ಕಾವ್ಯ ಸಿರಿಭೂವಲಯ ಹಾಗೂ ಅದರ ಕವಿ ಕುಮುದೇಂದುಮುನಿಯನ್ನು ಕುರಿತಂತೆ ನೀವು ರೂಪಿಸಿರುವ ಈ ವಿಸ್ತಾರವಾದ ಲೇಖನ, ಇಂದಿನ ಓದುಗರಿಗೆ ಉಪಯುಕ್ತವಾಗಿದೆ. ಸಂಬಂಧಿಸಿದ ಮಾಹಿತಿಗಳೆಲ್ಲವನ್ನೂ ಅಚ್ಚುಕಟ್ಟಾಗಿ ಸಂಗ್ರಹಿಸಿರುವ ನಿಮ್ಮ ತಾಳ್ಮೆ ಹಾಗೂ ನೈಪುಣ್ಯವು ನಿಮ್ಮ ’ಧೀಶಕ್ತಿಯ’ ಪ್ರತೀಕವಾಗಿದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ