ಪುಟಗಳು

ಮಂಗಳವಾರ, ಫೆಬ್ರವರಿ 19, 2013

ಯುಗಪುರುಷ

ಯುಗಪುರುಷ

                    ಹೌದು ಆತ ಕೆಲವರ ಪಾಲಿಗೆ ದಾರಿ ತಪ್ಪಿದ ದೇಶಭಕ್ತ. ಆದರೆ...ಆದರೆ ನಮ್ಮ ಪಾಲಿಗೆ ಹಿಂದೂ ಅಂದರೆ ಹೇಗಿರಬೇಕು ಅಂತ ತಿಳಿಸಿಕೊಟ್ಟ ಆರಾಧ್ಯ ದೈವ. ಆತನಲ್ಲಿ ಪರಶಿವನ ಪರಾಕ್ರಮ ಮತ್ತು ಕರುಣೆ, ರಾಮನ ಆದರ್ಶ, ಕೃಷ್ಣನ ತಂತ್ರ, ಚಾಣಕ್ಯನ ನೀತಿ...ಹೀಗೆ... ಹೀಗೆ ಎಲ್ಲವೂ ಮೇಳೈಸಿದ್ದವು. ಪರಕೀಯರ ಆಕ್ರಮಣಗಳಿಂದ ಜರ್ಝರಿತವಾಗಿ, ಬಾಡಿ ಬಸವಳಿದಿದ್ದ ಹಿಂದೂವಿಗೆ ನವ ಚೈತನ್ಯ ತುಂಬಿದವನಾತ.

                     ಆದರೆ ಆತನ ಬಗ್ಗೆ ನಮಗೆಷ್ಟು ತಿಳಿದಿರಬಹುದು. ಪಠ್ಯ ಪುಸ್ತಕದಲ್ಲೆಲ್ಲೋ ಅರ್ಧ ಪುಟ( ಈಗಂತೂ ಅದೂ ಕಾಣೆಯಾಗಿದೆ).

                    ಹೌದು..ನನಗೂ ಗೊತ್ತಿದ್ದದ್ದು ಅಷ್ಟೆ. ಆದರೆ.....ಆದರೆ ಯಾವಾಗ ದೃಷ್ಟಾರ ದಿ|| ವಿದ್ಯಾನಂದ ಶೆಣೈಜೀಯವರ ಆ ವಾಗ್ವೈಭವ ಕಿವಿಗೆ ಬಿತ್ತೋ ಆಗ ನಾನು ಆ ಭೋರ್ಗರೆತಕ್ಕೆ ಕೊಚ್ಚಿ ಹೋದೆ. ಹೊ. ವೆ. ಶೇಷಾದ್ರಿಜೀಯವರ "ಯುಗಪುರುಷ" ನನ್ನ ಭಾವವನ್ನು ಮೀಟಿ ಆ ಮಹಾಪುರುಷನ ಅನ್ವೇಷಣೆಗೆ ನಾಂದಿ ಹಾಡಿತು. ಹಾಗಾಗಿಯೇ ಕನಿಷ್ಟ ಆತನ ಜನ್ಮದಿನದಂದಾದರೂ ಅವನನ್ನು ನೆನಪಿಸಿಕೊಳ್ಳಬೇಡವೆ. ಇದನ್ನು ಬರೆಯುವಾಗ, ಓದುವಾಗ ನನಗಾದಂತೆ ನಿಮ್ಮ ಮನಸ್ಸು ಅವನಿಗಾಗಿ ಹಾತೊರೆದರೆ ನಾ ಧನ್ಯ...ಆ ಭಾರತಿ ಧನ್ಯಳು....ಮುಂದೆ ವಿದ್ಯಾನಂದ ಶೆಣೈಯವರ ಮಾತಿನ ಓಘಕ್ಕೆ ಸಾಟಿಯಾಗುತ್ತೀರಲ್ಲ...ಭಾರತ ದರ್ಶನದ ಆಯ್ದ ಭಾಗ...

                 ಸಹ್ಯಾದ್ರಿಯ ಇನ್ನೊಂದು ವಿಶೇಷ ಎಂದರೆ, ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅಂತಹ ಹಿಂದೂ ಹೃದಯ ಸಾಮ್ರಾಟನಿಗೆ ಜನ್ಮ ನೀಡೋ ಭಾಗ್ಯ ದೊರೆತುದು. ಹೌದು ಶಿವಾಜಿಯ ಹೆಸರು ಕೇಳಿದೊಡನೆ ಹಿಂದೂವಿನ ಕಂಗಳ ಕಾಂತಿ ಪ್ರಜ್ವಲಿಸತೊಡಗುತ್ತೆ. ಒಂದು ವೇಳೆ ಹಾಗಾಗಾದೇ ಇದ್ದರೆ ಅವ ಹಿಂದುವಾಗಿದ್ದೇನು ಪ್ರಯೋಜನ?

                    ಹೌದು, ಇಂದಿನ ಪೀಳಿಗೆಗೆ ಶಿವಾಜಿಯ ಬಗ್ಗೆ ಗೊತ್ತಿಲ್ಲ. ಗೊತ್ತುಪಡಿಸಿಕೊಳ್ಳುವ ಮನಸ್ಥಿತಿಯೂ ಇಲ್ಲ. ಕಾರಣ ಅವೆರಡನ್ನು ನಾವು ಹೇಳಿಕೊಟ್ಟಿಲ್ಲ! ನಮ್ಮ ಪಠ್ಯ ಪುಸ್ತಕಗಳಲ್ಲಿ ಶಿವಾಜಿಗೆ ಕಲ್ಪಿಸಿರೋದು ಕೇವಲ ಒಂದೇ ಪುಟದ ವ್ಯಾಖ್ಯೆ! ಅದರಲ್ಲಿ ಅರ್ಧ ಪುಟ ಅವನ ಭಾವಚಿತ್ರಕ್ಕೆ ಹೋದರೆ ಉಳಿದರ್ಧದಲ್ಲಿ ಅವನನ್ನು ವರ್ಣಿಸುವುದು ಹೇಗೆ ಸಾಧ್ಯ? ಈಗಂತು ಆ ಒಂದು ಪುಟವೂ ಉಳಿದಿಲ್ಲ. ಬ್ರಿಟಿಷ್ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿದ ಇತಿಹಾಸ ಕಥನವನ್ನು ನಮ್ಮವರೂ ಸರಿಪಡಿಸಲಿಲ್ಲ. 'ಮಹಾತ್ಮ' ಅಂತ ಕರೆಯಿಸಿಕೊಂಡ ಕೆಲವು ದೇಶದ್ರೋಹಿಗಳಿಗೆ ಈ ಹಿಂದೂ ಹೃದಯ ಸಾಮ್ರಾಟ ದಾರಿ ತಪ್ಪಿದ ದೇಶಭಕ್ತರಲ್ಲೊಬ್ಬನಾಗಿಬಿಟ್ಟ. ಅವನ ಭಟ್ಟಂಗಿಗಳು ಈ ಛತ್ರಪತಿಯನ್ನು ಇತಿಹಾಸದ ಪುಟಗಳಿಂದಲೇ ತೆಗೆದು ಹಾಕುವ ಪ್ರಯತ್ನ ಮಾಡಿದರು, ಮಾಡುತ್ತಲೇ ಇದ್ದಾರೆ!

                  ಶಿವಾಜಿಯ ಮಹತ್ವ ನಮಗೆ ಅರಿವಾಗೋದು ಯಾವಾಗ?
ಅಕಸ್ಮಾತ್ ಆತ ಹುಟ್ಟದೇ ಇರುತ್ತಿದ್ದರೆ ಏನಾಗುತ್ತಿತ್ತು?
ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಅಂತಹ ಸಂದರ್ಭದಲ್ಲಿ ಶಿವಾಜಿ ಎದ್ದು ಬಂದ!

ಬಾಲ ಶಿವಾಜಿ ಹೇಳಿದ್ದೇನು?
" ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್|"

                 ನಮ್ಮ ಸ್ಥಿತಿ ಹೇಗಿತ್ತು ಆವಾಗ?

ಭೂಷಣ ಅನ್ನೋ ಕವಿ ಹೇಳುತ್ತಾನೆ,

"ಕಾಶಿಜೀ ಕೀ ಕಳಾ ಜಾತೀ
ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ
ಸುನ್ನತ್ ಹೋತಿ ಸಬ್ ಕೀ||"

ಅಂದರೇನು?
ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!

                 ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದಾಗ ಅದರ ಸಂರಕ್ಷಣೆಗಾಗಿ ಎದ್ದು ಬಂದ ಶಿವಾಂಶ ಆತ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ! ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಸಿಲುಕಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ!

                   ಸ್ವರಾಜ್ಯದ ರಕ್ಷಣೆಗಾಗಿ ಜನರನ್ನು ಜೋಡಿಸಲು ಯತ್ನಿಸಿದ. ನಾಡಿನಲ್ಲಿ ಅವನಿಗೆ ಸಹಕಾರ ಸಿಗಲಿಲ್ಲ. ನಮ್ಮ ಪರಂಪರೆಯೇ ಹಾಗೆ! ಗೆಲುವು ಖಚಿತವಾಗುವವರೆಗೆ ನಾವು ಯಾರಿಗೂ ಸಹಾಯ ಮಾಡೋಲ್ಲ. ಇದು ಇಂದು ನಿನ್ನೆಯ ಮಾತಲ್ಲ. ರಾಮ ರಾವಣರ ಯುದ್ಧ ನಡೆದಾಗ ದೇವತೆಗಳು ಜೈಕಾರ ಹಾಕುತ್ತಿದ್ದರು. ಯಾರಿಗೆ ಅಂತ ಗೊತ್ತಿಲ್ಲ. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ! ಶ್ರೀರಾಮ ಭುವಿಗಿಳಿದ ಭಗವಂತ ಅವನು ಗೆಲ್ಲಲೇಬೇಕು ಆದರೆ ನಂಬೋದು ಹ್ಯಾಗೆ? ಯಾಕೆಂದರೆ ರಾಮ ಸೈನ್ಯ ಸಮೇತ ಅಯೋಧ್ಯೆಯಿಂದ ಬಂದವನಲ್ಲ. ಅವನ ಸೈನ್ಯವೋ ಕಪಿಗಳ ಹಿಂಡು. ಒಂದು ಹೇಳಿದರೆ ಹತ್ತು ಮಾಡುವಂತಹವು. ಹೀಗಿರುವಾಗ ಅವನು ಗೆಲ್ಲಬಹುದು ಅಂತ ನಂಬಿ ಜೈಕಾರ ಹಾಕೋದು ಹೇಗೆ? ಅಕಸ್ಮಾತ್ ರಾವಣ ಗೆದ್ದರೆ ಸುಮ್ಮನೇ ಬಿಟ್ಟಾನೆಯೇ? ಹಾಗಂತ ರಾವಣನಿಗೆ ಜೈಕಾರ ಹಾಕಿ ರಾಮ ಗೆದ್ದರೆ ರಾಮನಿಗೆ ಮುಖ ತೋರ್ಸೋದು ಹೇಗೆ? ಅದಕ್ಕೆ ರಗಳೆಯೇ ಬೇಡ. ಸುಮ್ಮನೇ ಜೈ ಅಂದು ಬಿಡೋದು! ೮೦ ದಿವಸದ ಯುದ್ಧ ಮುಗಿಯಿತು. ರಾವಣನ ಪಕ್ಷದ ಪ್ರಮುಖರೆಲ್ಲ ನೆಲಕಚ್ಚಿದರು. ೮೧ನೇ ದಿವಸ. ಆಗಸ್ಥ್ಯರು ಬಂದು ರಾಮನಿಗೆ ಆದಿತ್ಯ ಹೃದಯ ಮಂತ್ರ ಉಪದೇಶಿಸಿದರು. ಇನ್ನು ರಾಮ ಗೆಲ್ಲೋದು ಖಚಿತ ಎಂದಾದಾಗ ಇಂದ್ರ ರಾಮನಿಗೆ ಸಾರಥಿ ಮಾತಲಿ ಸಹಿತವಾಗಿ ತನ್ನ ರಥ ಕಳುಹಿಸಿಕೊಟ್ಟ. ಅಲ್ಲಿಯ ತನಕ ರಥಿಕ ರಾವಣ, ವಿರಥಿ ರಾಮ! ಅಂದರೆ ಗೆಲ್ಲುವವರ ಪರ ನಿಂತರೆ ಲಾಭಕರ ಎಂಬ ಚಿಂತನೆ!

                ಶಿವಾಜಿಗೂ ಹಾಗೆ. ನಗರದಲ್ಲಾರು ಬೆಂಬಲಿಸಲಿಲ್ಲ. ಹಳ್ಳಿಗಳಿಗೆ ಹೋದ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳನ್ನು ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಛ್ಛಳಿಯದೆ ಉಳಿದು ಬಿಟ್ಟಿತು.

                   "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಹೇಗೆ ಯಶಸ್ವಿಯಾಯಿತು ನೋಡಿ! ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ..... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು.

ನೆನಪು ಮಾಡಿಕೊಳ್ಳಿ,
                   ಒಂದು ದಿನ ಜೀಜಾ ಮಾತೆ ಕೊಂಡಾಣದತ್ತ ಕೈ ತೋರಿಸಿ ಅಲ್ಲಿ ಭಗವಾಧ್ವಜ ಹಾರಬೇಕು ಅಂತ ಹೇಳುತ್ತಾಳೆ. ಮಾತೆಯ ಮಾತೆಂದರೆ ಅದು ಆಜ್ಞೆ ಅಲ್ವಾ? ಆದರೆ ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ಅವನ ಮಗನ ಮದುವೆ. ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮನೆಯಲ್ಲಿ ಮದುವೆ ಇರೋವಾಗ ಯಾರಾದರೂ ಯುದ್ಧಕ್ಕೆ ಹೊರಡೋಕಾಗುತ್ತಾ? ಆದರೆ ತಾನಾಜಿಗೆ ಜೀಜಾ ಮಾತೆಯ ಮನದಿಚ್ಛೆ ತಿಳಿಯಿತು. ಜೀಜಾ ಮಾತೆಯ ಬಳಿ ಬಂದು " ತಾಯಿ ನಿಮ್ಮಾಸೆ ಎನಗಾಜ್ಞೆ" ಎನ್ನುತ್ತಾನೆ. ಆಗ ಜೀಜಾ ಮಾತೆ ಮಗೂ ನಿನ್ನ ಮಗನ ಮದುವೆ ಮುಗಿಯಲಿ ಎಂದಾಗ ಅವ ಹೇಳೊ ಮಾತು ಕೇಳಿ, " ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ಶಿವಾಜಿ ರಾಜ. ನನ್ನ ಮಗ ಅವನಿಗೂ ಮಗನಂತೆಯೇ ತಾನೇ? ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡ್ತೇನೆ." ಹೀಗೆ ರಣವೀಳ್ಯ ಪಡೆದೇ ಬಿಟ್ಟ.

                ಶಿವಾಜಿಯ ಸೈನ್ಯ ಕೊಂಡಾಣವನ್ನು ಗೆದ್ದಿತು. ಆದರೆ ತಾನಾಜಿಯ ಬಲಿದಾನವಾಯಿತು. ಸುದ್ದಿ ತಿಳಿದ ಶಿವಾಜಿಯ ಬಾಯಿಂದ  ಅಶ್ರುಧಾರೆಯೊಂದಿಗೆ ಹೊರಬಂದ ಮಾತು " ಗಢ್ ಆಲಾ, ಪಣ್ ಸಿಂಹ ಗೇಲಾ"- ಕೋಟೆ ಬಂತು ಆದರೆ ಸಿಂಹ ಹೊರಟು ಹೋಯಿತು. ತಾನಾಜಿಗೆ ಆ ಕೋಟೆಯಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಸಿಂಹಗಢ ಅಂತ ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ.

                   ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ?
ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!

೧೩ ವರ್ಷದ ರಾಯಬಾ ಮದುವೆಯಾಗ್ತಿದ್ದ ಹಾಗೆ ತಂದೆಯನ್ನು ಕಳೆದುಕೊಂಡ. ತಂದೆಯ ೧೨ನೇ ದಿವಸದ ಕೆಲಸ ಮುಗಿಸಿ ೧೮ನೇ ದಿವಸ ಅಪ್ಪನ ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕುತ್ತಾನೆ. ತಂದೆಯ ಕೆಲಸ ಪೂರೈಸಲು!

ಯಾವ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ದೇಶಭಕ್ತಿಯ ಶಿಕ್ಷಣ ಕೊಡಲಾಗುತ್ತೆ? ಅದಕ್ಕಾಗಿಯೇ ಸಹ್ಯಾದ್ರಿಯ ಬಳಿ ಬಂದಾಗ ಶಿವಾಜಿ ಕಣ್ಮುಂದೆ ಬರೋದು!

                         ಹೀಗೆ ತನ್ನ ಪರಾಕ್ರಮ, ಬುದ್ಧಿಶಕ್ತಿಯಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಮಹಾರಾಜರು ಸ್ವರಾಜ್ಯಕ್ಕೆ ಜೋಡಿಸಿದರು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಪ್ರತ್ಯಕ್ಷ ಔರಂಗಜೇಬನ ಅರಮನೆ ಹೊಕ್ಕು, ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬರುತ್ತಾರೆ! ತನ್ನ ಕೊಲ್ಲ ಬಂದ ಬಿಜಾಪುರದ ಸೊಕ್ಕಿನ ದೈತ್ಯ ಸರದಾರ ಅಫಜಲ ಖಾನನನ್ನು ಹೆಡೆಮುರಿ ಕಟ್ಟಿದರು. ಕೊನೆಗೊಮ್ಮೆ ೧೬೭೪ರ ಆನಂದ ನಾಮ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿಯ ದಿನ ರಾಯಗಢದಲ್ಲಿ ಸಿಂಹಾಸನವೇರಿ ಛತ್ರಪತಿಯಾಗಿ ನಮ್ಮ ಸಮಾಜದ ಶೃದ್ಧಾಕೇಂದ್ರವಾದರು. ಶಿವಾಜಿಯನ್ನನುಸರಿಸಿ ಹೋದ ಮರಾಠ ಕುದುರೆಗಳು ಮೊಘಲರನ್ನು ಮೆಟ್ಟಿ, ಕಾಬೂಲ್ ನದಿಯ ನೀರನ್ನು ಕುಡಿದು ತಮ್ಮ ಸ್ವರಾಜ್ಯ ದಾಹ ತಣಿಸಿಕೊಳ್ಳುತ್ತವೆ. ಎಂತಹ ರೋಮ ಹರ್ಷಕ ಇತಿಹಾಸವಿದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ