ಪುಟಗಳು

ಬುಧವಾರ, ಫೆಬ್ರವರಿ 27, 2013

ಅವನನ್ನೆಂತು ಮರೆಯಲಿ?

ಅವನನ್ನೆಂತು ಮರೆಯಲಿ?

                 ಉಳಿದ ಮಕ್ಕಳು ದೇಶ ಅಂದರೆ ಏನೆಂದು ಕೋಶದಲ್ಲಿ ಓದುತ್ತಾ ಆಡೋ ವಯಸ್ಸಿಗೆ ಅವನು "ನಾನು ಸ್ವತಂತ್ರ, ಸ್ವತಂತ್ರನಾಗಿಯೇ ಉಳಿಯುತ್ತೇನೆ, ಸ್ವತಂತ್ರನಾಗಿಯೇ ಅಳಿಯುತ್ತೇನೆ" ಎಂಬ ಭೀಷಣ ಪ್ರತಿಜ್ಞೆಯನ್ನೇ ಮಾಡಿಬಿಟ್ಟ.
ಅದೆಷ್ಟೋ ಕಷ್ಟನಷ್ಟಗಳು ಬಂದಾಗಲೂ ತನ್ನ ಪ್ರತಿಜ್ಞೆ ಮರೆಯದ ಭೀಷ್ಮ!

                ಪಂಡಿತ ರಾಮಪ್ರಸಾದ ಬಿಸ್ಮಿಲರ ಪ್ರೀತಿಯ ಶಿಷ್ಯನಾಗಿ, ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂತಾದವರಿಗೆ ನಾಯಕನಾಗಿ ತನ್ನೊಂದಿಗಿದ್ದವರೆಲ್ಲ ವೀರ ಸ್ವರ್ಗವನ್ನಪ್ಪಿದ ನಂತರವೂ ತಾತ್ಯಾಟೋಪೆಯಂತೆ ಏಕಾಂಗಿಯಾಗಿ ಹೋರಾಡಿದ ಮಹಾಪ್ರತಾಪಿ!

                  ತಂದೆ ತಾಯಿಯ ಆರೋಗ್ಯ ಕೆಟ್ಟಿರಲು ಶುಶ್ರೂಷೆಗೆ ಹಣ ಸಹಾಯ ಮಾಡಲು ಬಂದ ಗುರುಗಳಿಗೆ ತನ್ನಲ್ಲಿಯೇ ಕ್ರಾಂತಿಕಾರ್ಯಕ್ಕೆಂದು ಕೂಡಿಟ್ಟಿದ್ದ ಹಣ ತೋರಿಸಿ "ಇದನ್ನುಪಯೋಗಿಸಿ ನನ್ನ ಹೆತ್ತವರ ಆರೈಕೆ ಮಾಡಬಹುದು. ಆದರೆ ಅಂತಹ ಸ್ಥಿತಿ ಬಂದಾಗ ನನ್ನ ಪಿಸ್ತೂಲಿನ ಎರಡು ಗಂಡುಗಳು ಸಾಕು ಅವರ ಸೇವೆ ಮಾಡಲು" ಎಂದನಲ್ಲ. ಅವನ ದೇಶಪ್ರೇಮಕ್ಕೆ ಏನೆಂದು ಹೇಳಲಿ?

                       ವೇಶ್ಯೆಯೊಬ್ಬಳು ಮಹಡಿಯೊಂದರಲ್ಲಿ ಬಂಧಿಸಿ ಕಾಮಿಸಬಯಸಿದಾಗ ಆ ಮೂರನೇ ಮಹಡಿಯ ಕಿಟಕಿಯಿಂದ ಹಾರಿ ಹೋದ ಅಖಂಡ ಬ್ರಹ್ಮಚಾರಿ. ಶಿಸ್ತು ಅಂದರೆ ಅವನಿಂದ ಕಲಿಯಬೇಕಲ್ಲವೇ?

                  ಸಹವಾಸಿಗಳಿಗೆ ಪ್ರೀತಿಯ ಪಂಡಿತನಾಗಿ, ಆಶ್ರಯ ನೀಡಿದ ಪ್ರತಿಯೊಂದು ಮನೆಯವರ ಪ್ರೀತಿಯ ಮಗನಾಗಿ, ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಲು ವಿವಿಧ ವೇಶಧಾರಿಯಾಗಿ ಕೇವಲ ದೇಶಕ್ಕಾಗಿ ತನ್ನ ಜೀವನ ಸವೆಸಿದನಲ್ಲ. ಅವನಿಗಾಗಿ ಒಂದು ಕಣ್ಣ ಹನಿ ಕೆಳಗುರುಳದಿದ್ದರೆ ಹೇಗೆ?

          ಅಂತಿಮ ಘಳಿಗೆಯಲ್ಲಿ ಅವನ ಅಸಾದೃಶ ಶಕ್ತಿಯ ಪರಿಚಯ ಲೋಕಕ್ಕಾಗಿತ್ತು. ಮೂವತ್ತೆರಡು ನಿಮಿಷಗಳ ಆ ಹೋರಾಟದಲ್ಲಿ ಏಕಾಂಗಿಯಾಗಿ ಚಕ್ರವ್ಯೂಹ ರಚಿಸಿದ್ದ ಖೂಳ ಆಂಗ್ಲರ ವಿರುದ್ಧ ಹೋರಾಡಿದ ಪರಿ ಅನನ್ಯ. ಪ್ರತಿಯೊಂದು ಗುಂಡಿನ ಲೆಕ್ಕ ಇಟ್ಟು ಕೊನೆಯ ಗುಂಡನ್ನು ತನಗೆ ಹೊಡೆದುಕೊಂಡು ತಾಯಿಗೆ ರುಧಿರಾಭಿಷೇಕ ಮಾಡಿದ.
ಸಾವಿನಲ್ಲೂ ಪ್ರತಿಜ್ಞೆ ಉಳಿಸಿಕೊಂಡ ಪ್ರಳಯರುದ್ರ!

ಆದರೇನು...?
ತನ್ನ ದೇಶವಾಸಿಗಳಿಂದಲೇ ಅನಾದರಣೆಗೊಳಗಾಗಿ ಮರೆತು ಹೋದ ಮಹಾವೀರ!

1 ಕಾಮೆಂಟ್‌: