ಪುಟಗಳು

ಭಾನುವಾರ, ಫೆಬ್ರವರಿ 24, 2013

ಭಾರತ ದರ್ಶನ - ೨೭ಭಾರತ ದರ್ಶನ - ೨೭:

              ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದು ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂತಹ ಶಾಂತಿಪ್ರಿಯರ ನಗರವದಾಗಬೇಕು ಎಂಬ ಭಾವನೆಯಿಂದ ಅಯೋಧ್ಯೆಯೆಂದು ಅದನ್ನು ಕರೆಯಲಾಯಿತು.
" ಮನುನಾ ಮಾನವೇಂದ್ರೇಣ  ಸಾಪುರೀ ನಿರ್ಮಿತಾಸ್ವಯಂ"  ಅಂದರೆ ಮಾನವೇಂದ್ರನಾದ ಮನುವಿನಿಂದ ಸ್ವಯಂ ನಿರ್ಮಾಣಗೊಂಡ ನಗರವದೆಂದು ರಾಮಾಯಣದಲ್ಲಿ ವಾಲ್ಮೀಕಿಗಳು ತಿಳಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿ "ವಿಶ್ವಜಿತ್" ಎಂಬ ಯಜ್ಞ ನಡೆಸಿದ ತಾಣ. ಇಕ್ಷ್ವಾಕು ವಂಶವನ್ನು ರಘುವಂಶವನ್ನಾಗಿಸಿದ ರಾಜಾ ರಘುವಿನ ರಾಜಧಾನಿ. ಬ್ರಹ್ಮರ್ಷಿ ವಸಿಷ್ಠರ ಸಲಹೆಯಂತೆ ದಶರಥ ಚಕ್ರವರ್ತಿ ಋಷ್ಯಶೃಂಗರ ನೇತೃತ್ವದಲ್ಲಿ "ಪುತ್ರಕಾಮೇಷ್ಟಿ" ಯಾಗ ನಡೆಸಿದ ಸ್ಥಳ. ಸ್ವತಃ ಭಗವಂತನೇ ದಶರಥ ಸುತನಾಗಿ ಬಂದು, ರಾಜನಾಗಿ ನಿಂದು ತನ್ನ ಪುರುಷೋತ್ತಮತ್ವವನ್ನು ಪ್ರಕಟಿಸಿದ ಸಾಕೇತಪುರದ ದರ್ಶನದಿಂದ ಪುಳಕಗೊಳ್ಳದವರ್ಯಾರು?
             ಅಯೋಧ್ಯೆಯಲ್ಲಿ ಕಾಲಿರಿಸುತ್ತಿದ್ದಂತೆ ಮನಸ್ಸು ಯುಗಾಂತರಕ್ಕೆ ಧಾವಿಸುತ್ತದೆ. ಅಜ-ಇಂದುಮತಿಯರ ವಿವಾಹವಾದ ತಾಣ ಯಾವುದು? ದಶರಥ ಕುವರಿ ಶಾಂತಾಳನ್ನು ಋಷ್ಯಶೃಂಗರು ವರಿಸಿದ ಸ್ಥಳ ಎಲ್ಲಿದೆ? ಭೂಜಾತೆ ಸೀತೆ ಹೇಮದುಪ್ಪರಿಗೆಯಲ್ಲಿ ಅತ್ತೆಯರೊಂದಿಗೂ ಅರಮನೆಯ ಪರಿಜನರೊಂದಿಗೆ ಸಂಭ್ರಮ, ಸಡಗರದಿಂದಿರುತ್ತಿದ್ದ ಅಂತಃಪುರ ಎಲ್ಲಿತ್ತೋ? ಭಕ್ತಾಗ್ರಣಿ ಮಾರುತಿಯು ರಾಘವನ ಚರಣವನ್ನು ಎಲ್ಲಿ ಸೇವಿಸುತ್ತಿದ್ದನೋ? ಎಲ್ಲವನ್ನೂ ನೋಡುವ ಆಸೆ.
            ಅಯೋಧ್ಯೆ ಸರಯೂ ತೀರದಲ್ಲಿದೆ. ಸರಯೂ ಬಹಳ ಧನ್ಯೆ. ಶ್ರೀರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಬಸಿರಲ್ಲೇ ಅಡಗಿಸಿಕೊಂಡ ಪಾವನೆ. ಗಂಗಾ, ಯಮುನಾ, ಸರಸ್ವತಿಯರೊಂದಿಗೆ ಋಗ್ವೇದದಲ್ಲಿ ಸ್ಮರಿಸಲಾಗಿರುವ ಸರಯೂ ಮಾನಸದಲ್ಲಿ ಜನಿಸಿ ಅಯೋಧ್ಯೆಯನ್ನು ಆಲಂಗಿಸಿ ಹರಿದಿದ್ದಾಳೆ. ಗಂಗೆ ಹರಿ ಪಾದದಿಂದ ಹೊರಟರೆ, ಸರಯೂ ಅವನ ಕಣ್ಗಳಿಂದ ಹೊರಟಳು. ಆದ್ದರಿಂದಲೇ ಅವಳನ್ನು ನೇತ್ರಾ ಅಂತಲೂ ಕರೆದರು. ರಾಮ ಸೇವೆಯಿಂದ ರಾಮಗಂಗಾ ಎಂದೂ, ವಸಿಷ್ಟರ ಪಾದ ಪೂಜೆಯಿಂದ ವಾಸಿಷ್ಠೀ ಎಂದೂ ಉಲ್ಲೇಖಿತಳಾಗಿದ್ದಾಳೆ. ರಾಮನವಮಿಯಂದು ತೀರ್ಥರಾಜ ಪ್ರಯಾಗ ಸ್ವತಃ ಅಯೋಧ್ಯೆಗೆ ಬಂದು ಸರಯೂ ನದಿಯಲ್ಲಿ ಸ್ನಾನ ಮಾಡುತ್ತದೆ ಎಂಬುದು ಭಾವುಕರ ನಂಬಿಕೆ.
             ಮನುವಿನ ಬಳಿಕ ಅಯೋಧ್ಯೆಯನ್ನು ಕ್ರಮವಾಗಿ ಇಕ್ಷ್ವಾಕು, ವಿಕುಕ್ಷಿ,...ಮುಂತಾದವರು ಆಳಿದರು. ಮನುವಿನಿಂದ ೨೦ ತಲೆಮಾರುಗಳ ಬಳಿಕ ಯುವನಾಶ್ವನ ಮಗನಾದ ಮಾಂಧಾತನು ಅಯೋಧ್ಯೆಯ ಪ್ರತಿಷ್ಟೆಯನ್ನು ಹೆಚ್ಚಿಸಿದನು. ಸತ್ಯಕ್ಕೆ ಹೆಸರಾದ ರಾಜ ಹರಿಶ್ಚಂದ್ರ ಮಾಂಧಾತನ ನಂತರ ಬಂದವರಲ್ಲಿ ಪ್ರಸಿದ್ಧನು. ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾದ ಆತ ಸತ್ಯಕ್ಕಾಗಿ ಸಕಲವನ್ನೂ ತೊರೆದು ಸ್ಮಶಾನವಾಸಿಯಾದ. ಸುಂಕ ಕೊಡದ ಕಾರಣಕ್ಕಾಗಿ ಮಗನ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದ ಅವನು ವಿಶ್ವಾಮಿತ್ರರ ಪರೀಕ್ಷೆಯಲ್ಲಿ ಗೆದ್ದು ಶಿವನನ್ನೂ ಪ್ರತ್ಯಕ್ಷೀಕರಿಸಿಕೊಂಡು ಅಯೋಧ್ಯೆಯ ಸಿಂಹಾಸನವನ್ನು ಪುನಃ ಅಲಂಕರಿಸಿದ. ಮುಂದೆ ಸಮುದ್ರವನ್ನು ಸಾಗರವನ್ನಾಗಿಸಿದ ಸಗರ ಮತ್ತವನ ಮಕ್ಕಳು, ಅಂಶುಮಂತ, ದಿಲೀಪ, ಭಗೀರಥ, ರಘು, ಅಜ, ದಶರಥ ಮುಂತಾದ ರಾಜರ್ಷಿಗಳು ಅಯೋಧ್ಯೆಯನ್ನಾಳಿದರು. ಮಾಲಿಕೆಯಲ್ಲಿ ೬೫ನೆಯ ಪ್ರಭು ಶ್ರೀರಾಮಚಂದ್ರ. ಹೀಗೆ ಸೂರ್ಯವಂಶೀಯರ ಭವ್ಯ ಆಡಳಿತಕ್ಕೆ ಒಳಪಟ್ಟಿತು ಅಯೋಧ್ಯೆ. ಮಹಾಭಾರತದ ಯುದ್ಧದ ಸಮಯದಲ್ಲಿ ಬೃಹದ್ಬಾಹು ಅಯೋಧ್ಯೆಯ ರಾಜನಾಗಿದ್ದ. ಯುದ್ಧದಲ್ಲಿ ಅಭಿಮನ್ಯುವಿನ ಬಾಣಕ್ಕೆ ತುತ್ತಾದ. ಜೈನರ ೨೪ ತೀರ್ಥಂಕರರಲ್ಲಿ ೨೨ ಮಂದಿ ಸೂರ್ಯವಂಶದವರು. ಪ್ರಥಮ ತೀರ್ಥಂಕರನಾದ ಋಷಭದೇವ ಅಥವಾ ಆದಿನಾಥ ಅಯೋಧ್ಯೆಯ ರಾಜನಾದ ನಾಭಿಯ ಮಗ. ಅಜಿತ, ಅಭಿನಂದನ, ಸುಮತಿ, ಅನಂತ, ಅಚಲ ಎಂಬ ತೀರ್ಥಂಕರರು ಜನಿಸಿದ್ದು ಅಯೋಧ್ಯೆಯಲ್ಲಿಯೇ. ಆದಿನಾಥನಿಗೆ ಜ್ಞಾನೋದಯವಾದದ್ದು ಅಯೋಧ್ಯೆಯ ಬಳಿಯಲ್ಲೇ.
            ಬೌದ್ಧ ಧರ್ಮಕ್ಕೆ ಪೋಷಣೆ ಸಿಕ್ಕಿದ್ದು ಕೋಸಲದ ರಾಜರಾದ ಪ್ರಸೇನಜಿತ ಮತ್ತು ವಿಶಾಖರಿಂದ. ಬುದ್ಧ ತನ್ನ ೧೬ ಚಾತುರ್ಮಾಸ್ಯ ವ್ರತಗಳನ್ನು ಅಯೋಧ್ಯೆಯಲ್ಲೇ ನಡೆಸಿದ್ದ. ಬೌದ್ಧ ಭಿಕ್ಷುಗಳ ಬದುಕಿಗೆ ಸಂಬಂಧಿಸಿದ ವಿಧಿ-ನಿಷೇಧಗಳ ರಚನೆಯಾದದ್ದು ಅಯೋಧ್ಯೆಯಲ್ಲೇ. ಫಾಹಿಯಾನ್ ಮತ್ತು ಹ್ಯೂಯೆನ್ ತ್ಸಾಂಗ್ ಎಂಬ ಚೀನೀ ಯಾತ್ರಿಕರು ಅಯೋಧ್ಯೆಯನ್ನು ಸಂದರ್ಶಿಸಿದ್ದಾರೆ. ಹ್ಯುಯೆನ್ ತ್ಸಾಂಗನ ಕಾಲದಲ್ಲಿ ಅಯೋಧ್ಯೆಯಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳಿಗೆ ಸೇರಿದ ೩೦೦೦ ವಿದ್ಯಾರ್ಥಿಗಳು ಅಸಂಗ ಮತ್ತು ವಸುಬಂಧು ಎಂಬ ವಿದ್ವಾಂಸರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸುತ್ತಿದ್ದರು. ಅಯೋಧ್ಯೆಯ ಮಣಿಪ್ರಭಾತ ಎಂಬಲ್ಲಿ ಕುಳಿತು ಬುದ್ಧ ಪ್ರವಚನ ಮಾಡುತ್ತಿದ್ದ. ಅಲ್ಲಿ ಅಶೋಕನ ಕಾಲದ ಒಂದು ಸ್ತೂಪವಿದೆ. "ಬುದ್ಧ ಚರಿತ" ಮತ್ತು "ಸೌಂದರನಂದ" ಎಂಬ ಎರಡು ಮಹಾಕಾವ್ಯ ರಚಿಸಿದ ಸಂಸ್ಕೃತದ ಪ್ರಸಿದ್ಧ ಕವಿ, ನಾಟಕಕಾರ ಮತ್ತು ದಾರ್ಶನಿಕನಾದ ಅಶ್ವಘೋಷ ಅಯೋಧ್ಯೆಯ ನಿವಾಸಿ. ಅವನು ಹಾಡುವಾಗ ಕುದುರೆಗಳು ಮೇಯುವುದನ್ನು ನಿಲ್ಲಿಸಿ ಗಾಯನವನ್ನಾಲಿಸುತ್ತಿದ್ದವಂತೆ. ಅದಕ್ಕಾಗಿಯೇ ಅವನು ಬೌದ್ಧದೀಕ್ಷೆ ಪಡೆದಾಗ ಅವನಿಗೆ ಅಶ್ವಘೋಷ ಎಂದು ಹೆಸರಿಡಲಾಯಿತು. ಬೌದ್ಧಧರ್ಮದ ಜ್ಞಾನಕೋಶ ಎಂದೇ ಪರಿಗಣಿತವಾಗಿರುವ "ಅಭಿಧರ್ಮಕೋಶ" ಅಯೋಧ್ಯೆಯಲ್ಲೇ ರಚಿಸಲ್ಪಟ್ಟಿತು.

              ಗುರುನಾನಕರಿಗೆ ಅಯೋಧ್ಯೆಯಲ್ಲಿರುವಾಗಲೇ ದೈವಸಾಕ್ಷಾತ್ಕಾರವಾಯಿತು. ಅವರಿಗೆ ಬ್ರಹ್ಮಸಾಕ್ಷಾತ್ಕಾರವಾದ ಸ್ಥಳದಲ್ಲಿ ಬ್ರಹ್ಮಕುಂಡವಿದ್ದು ಅಲ್ಲಿ ಒಂದು ಗುರುದ್ವಾರವನ್ನು ಕಟ್ಟಿಸಲಾಗಿದೆ. ಭಗವಾನ್ ವಿಷ್ಣುವಿನ ಶೀರ್ಷಸ್ಥಾನದಂತಿರುವ ಅಯೋಧ್ಯೆ ಮತ್ಸ್ಯಾಕಾರದಲ್ಲಿದೆ ಎಂದು ಸ್ಕಾಂದಪುರಾಣದಲ್ಲಿದೆ. ಶ್ರೀರಾಮನ ಕಾಲದಲ್ಲಿ ಅಯೋಧ್ಯೆ ೧೨ ಯೋಜನ ಉದ್ಧ ಮತ್ತು ಮೂರು ಯೋಜನ ಅಗಲದ ಒಂದು ಮಹಾನಗರವಾಗಿತ್ತು. ವ್ಯವಸ್ಥಿತವಾದ ಮಾರುಕಟ್ಟೆ, ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಾಜಬೀದಿಗಳು, ಬಲಿಷ್ಟವಾದ ಶಸ್ತ್ರಸಜ್ಜಿತ ಸೇನೆ, ಕೊರತೆಯಿಲ್ಲದ ಅರ್ಥವ್ಯವಸ್ಥೆ, ದುಃಖದೈನ್ಯಗಳಿಂದ ಮುಕ್ತವಾದ ದೇಶಭಕ್ತ ಪ್ರಜಾಕೋಟಿ. ಒಟ್ಟಿನಲ್ಲಿ ದೇವ ದುರ್ಲಭ ನಗರ. ತುಳಸೀದಾಸರಂತೂ " ವೇದ ಪುರಾಣಗಳಲ್ಲಿ ವೈಕುಂಠದ ವರ್ಣನೆ ಮಾಡಿದ್ದರೂ ಅಯೋಧ್ಯೆಗಿಂತ ಹೆಚ್ಚಿನ ಆನಂದ ನನಗೆಲ್ಲೂ ಸಿಗದು" ಎಂದಿದ್ದಾರೆ.

               ರಾಜಾ ವಿಕ್ರಮಾದಿತ್ಯ ಅಯೋಧ್ಯೆಯನ್ನು ಜೀರ್ಣೋದ್ಧಾರ ಮಾಡಿದ. ಗುಪ್ತರ ಕಾಲದಲ್ಲೂ ಅಯೋಧ್ಯೆಗೆ ರಾಜಧಾನಿಯ ಗೌರವವಿತ್ತು.  ೧೧೯೩ರಲ್ಲಿ ಶಹಾಬುದ್ದೀನ್ ಘೋರಿ ಅಯೋಧ್ಯೆಯನ್ನು ಆಕ್ರಮಣ ಮಾಡಿದ. ಮುಂದೆ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದವು. ೧೫೨೬ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಬಾಬರ್ ೧೫೨೮ರಲ್ಲಿ ಅಯೋಧ್ಯೆಯ ಮೇಲೆ ಆಕ್ರಮಣ ನಡೆಸಿದ. ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆಗೋಸ್ಕರ ತನ್ನ ಸೇನಾನಿ ಮೀರ್ ಬಾಕಿ ತಾಶ್ಕಂದಿ ಎಂಬಾತನನ್ನು ಬಾಬರ್ ಅಯೋಧ್ಯೆಯ ಶ್ರೀರಾಮ ಜನ್ಮ ಸ್ಥಾನ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಲು ನೇಮಿಸಿದ. ಆಕ್ರಮಣದ ಸುದ್ದಿ ತಿಳಿದಾಗ ಸುತ್ತಲಿಂದ ಸಶಸ್ತ್ರ ಹಿಂದೂ ಸೈನಿಕರು ಬಂದರು. ಮೀರ್ ಬಾಕಿಯ ಬಳಿ ತೋಪಿತ್ತು. ಹದಿನೈದು ದಿನಗಳವರೆಗೆ ಘನಘೋರ ಯುದ್ಧ ನಡೆಯಿತು. ಭಯಂಕರ ಯುದ್ಧದಲ್ಲಿ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರ ಸಾವಿನ ಬಳಿಕ ಮೀರ್ ಬಾಕಿ ಮಂದಿರವನ್ನು ನಾಶಗೊಳಿಸಿದ. ಸಂದರ್ಭದಲ್ಲಿ ಭಿತಿ ಸಂಸ್ಥಾನದ ದೊರೆ ಮೆಹತಾವ ಸಿಂಹ ತೀರ್ಥಯಾತ್ರೆಗೆಂದು ಅಯೋಧ್ಯೆಗೆ ಬಂದಿದ್ದ. ಶೃದ್ಧಾಕೇಂದ್ರದ ಮೇಲಿನ ಆಕ್ರಮಣದಿಂದ ಕ್ರುದ್ಧನಾಗಿ ರಣರಂಗ ಸೇರಿ ಹೋರಾಡಿ ವೀರಮರಣವನ್ನಪ್ಪಿದ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ ಮಾತ್ರ. ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್,  ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್, ಮುಂತಾದ ಅನೇಕ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಹಿಂದೂ ವೀರರ ಬಲಿದಾನ ಅಂದಾಯಿತು. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಇತಿಹಾಸಕಾರ ಬಾರಾಬಂಕಿ ತನ್ನ "ಗೆಜೆಟಿಯರ್"ನಲ್ಲಿ ಬಾಬರ್ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ ಅಂತ ಬರೆದಿದ್ದಾನೆ.
ಹಿಂದೂಗಳು ಸುಮ್ಮನುಳಿದರೆ?
                ಇಲ್ಲ. ಪಾವನ ತೀರ್ಥಕ್ಷೇತ್ರದ ಮುಕ್ತಿಗಾಗಿ ಬಾಬರನ ಕಾಲದಿಂದ ಸುಮಾರು ಎಪ್ಪತ್ತಾರು ಬಾರಿ ಹೋರಾಟ ನಡೆದಿದೆ. ಬಾಬರನ ಆಳ್ವಿಕೆಯಲ್ಲಿ ಯುದ್ಧಗಳು, ಹುಮಾಯೂನನ ಕಾಲದಲ್ಲಿ ೧೦ ಯುದ್ಧಗಳು, ಅಕ್ಬರನ ಕಾಲದಲ್ಲಿ ೨೦ ಯುದ್ಧಗಳು, ಔರಂಗಜೇಬನ ಕಾಲದಲ್ಲಿ ೩೦ ಯುದ್ಧಗಳು, ಷಹದತ್ ಆಲಿಯ ಕಾಲದಲ್ಲಿ , ನಾಸಿರುದ್ದೀನ್ ಹೈದನ ಕಾಲದಲ್ಲಿ , ವಾಜಿದ್ ಆಲಿಯ ಕಾಲದಲ್ಲಿ , ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ನಡೆದವು. ಪಾವನ ಕ್ಷೇತ್ರದಲ್ಲಿ ೧೯೪೦ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. ೨೨-೧೨-೧೯೪೯ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ ೧೯೮೬ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧಿತವಾಗಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. ೧೯೮೦ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ ೧೯೮೬ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು.
              ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕಾರಸೇವೆಗಳು ನಡೆದವು. ೧೯೯೨ರ ಡಿಸೆಂಬರ್ ೬ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು. ಆದರೆ ಭವ್ಯ ಮಂದಿರದ ಕನಸು ನನಸಾಗಲಿಲ್ಲ.

             ಅಯೋಧ್ಯೆಯ ಬಗ್ಗೆ ರಾಮನಿಗೆ ಎಷ್ಟು ಮಮತೆಯಿತ್ತೆಂದರೆ ವಿಭೀಷಣ ಸಂತಸದಿಂದ ಕೊಡಮಾಡಿದ ಸ್ವರ್ಣ ಲಂಕೆಯನ್ನೂ ತಿರಸ್ಕರಿಸಿ "ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂದು ಅನುಜ ಲಕ್ಷ್ಮಣನಿಗೆಂದ. ರಾಮನಾಮೋಚ್ಚಾರದಿಂದ ದರೋಡೆಕೋರ ರತ್ನಾಕರ ವಾಲ್ಮೀಕಿಯಾಗಿ ಬದಲಾದ. ರಾಮಕತೆ ತುಳಸಿ, ಕಂಬ, ಕುವೆಂಪು, ಡಿವಿಜಿ ಮುಂತಾದ ಕವಿಪುಂಗವರನ್ನು ಭಾರತಕ್ಕೆ ನೀಡಿತು. ರಾಷ್ಟ್ರ ಪುರುಷ ದೈವೀಪುರುಷನ ಹೆಮ್ಮೆಯನಗರ ಮನುಕುಲದ ಮೊದಲ ರಾಜಧಾನಿಯಾದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗದೇ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಅರ್ಥ ಬರದು.

1 ಕಾಮೆಂಟ್‌:

  1. ನನಗೆ ಶ್ರೀನಿವಾಸನ ಮೂಗು ಮತ್ತು ಹಣೆಯನ್ನು ಆವರಿಸಿರುವ ಬಿಳಿ ಪಟ್ಟಿಯ ಬಗ್ಗೆ ಮಾಹಿತಿ ಬೆಕಿತ್ತು. ತಿಳಿಸುವಿರ?

    ಪ್ರತ್ಯುತ್ತರಅಳಿಸಿ