ಪುಟಗಳು

ಶನಿವಾರ, ಫೆಬ್ರವರಿ 23, 2013

ರುಧಿರ ತರ್ಪಣ-ಮಾತೃ ಪೂಜನ: ಭಾಗ-೧

ರುಧಿರ ತರ್ಪಣ-ಮಾತೃ ಪೂಜನ: ಭಾಗ-೧

       ಬೃಂದಾವನದ ರಾಜಮಾರ್ಗ. ಎಲ್ಲೆಲ್ಲೂ ತಲೆ ಬೋಳಿಸಿಕೊಂಡು, ಗಂಧದ ನಾಮ ಧರಿಸಿ, ಬಿಳಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಾ ಓಡಾಡುತ್ತಿರುವ ಅನಾಥ ವಿಧವೆಯರು, ಊರು ತುಂಬಾ ಓಡಾಡುತ್ತಿರುವ ಕಾವಿಧಾರಿಗಳು( ಸಾಧುಗಳೆಷ್ಟೋ, ಕಪಟಿಗಳ್ಯಾರೋ ಶಿವನೇ ಬಲ್ಲ!)...ಈ ದೃಶ್ಯಗಳನ್ನು ನೋಡುತ್ತಾ ಮನದಲ್ಲಿ ಕೃಷ್ಣ ಭಗವಾನನ ಪ್ರೇಮ, ತಂತ್ರ-ಪ್ರತಿತಂತ್ರ, ಧೈರ್ಯ, ಕುಶಲಮತಿ ರಾಜಕಾರಣ, ತ್ಯಾಗದ ಗುಣಗಳನ್ನು ಮೆಲುಕು ಹಾಕುತ್ತಾ ಬಿರಬಿರನೇ ನಡೆದು ಬರುತ್ತಿದ್ದಾನೆ ಜತೀನ್.....ಬಾಘಾ ಜತೀನ್....ಅರ್ಥಾತ್ ಜತೀನ್ ಮುಖರ್ಜಿ. ಅವನೇ ಒಂದು ವಿಶೇಷ, ಅವನ ಹೆಸರು ಇನ್ನೊಂದು ವಿಶೇಷ...ಕಡುಗತ್ತಲಿನಲ್ಲಿ ಬರಿಗೈಯಿಂದ ಹುಲಿಯನ್ನು ಕೊಂದ ಧೀರ ಅವನು...ಅದಕ್ಕಾಗಿಯೇ ಅವನು "ಬಾಘಾ" ಜತೀನ್! ಕಟ್ಟು ಮಸ್ತಿನ ಹುರಿಯಾಳು, ಯೋಗದಿಂದ ಸುದೃಢವಾದ ದೇಹ, ಸೇನಾಧಿಪತಿ ಪಟ್ಟಕ್ಕೆ ಯೋಗ್ಯ. ಹಾಗೆಂದು ಮಹರ್ಷಿ ಅರವಿಂದರಿಂದಲೇ ಆಶೀರ್ವದಿಸಲ್ಪಟ್ಟು ರಣವೀಳ್ಯ ಪಡೆದವನು. ಬಂಗಾಳಿ ಕ್ರಾಂತಿಪಾಳಯಕ್ಕೆ ನಾಯಕನೀಗ! ಅಂತಹವನಿಗೆ ಇಲ್ಲೇನು ಕೆಲಸ? ಅದೂ ಪ್ರೇಮದುದ್ಯಾನದಲ್ಲಿ!

           ಬಂದವನೇ ನಿಂತಿದ್ದು ಒಂದು ಆಶ್ರಮದ ಮುಂದೆ. ಅವನ ಸ್ವಾಗತಕ್ಕೆಂದೇ ಎದ್ದು ಬಂದಿದ್ದರು ಸ್ವಾಮಿ ನಿರಾಲಂಬರು. ಅವರಿಗೆ ಪಾದಾಭಿವಂದನ ಮಾಡಿದ ಜತೀನ್. ಕುಶಲೋಪರಿಗಳು ನಡೆದವು. ಮಾತಾಡುತ್ತಿದ್ದಂತೆಯೇ ಧ್ಯಾನಸ್ಥರಾದರು ನಿರಾಲಂಬರು. ನಿರಾಲಂಬರ ಪೂರ್ವಾಶ್ರಮದ ಹೆಸರು ಜತೀಂದ್ರನಾಥ ಬ್ಯಾನರ್ಜಿ. ಅತ್ತ ಅರವಿಂದರು ಬಂಗಾಳದಲ್ಲಿ ಕ್ರಾಂತಿ ನೇತೃತ್ವ ವಹಿಸಿದ್ದರೆ ಇತ್ತ ಪಂಜಾಬಿನಲ್ಲಿ ಜತೀಂದ್ರಬ್ಯಾನರ್ಜಿ ವಹಿಸಿದ್ದರು. ಅರವಿಂದರು ತಪಶ್ಚರ್ಯೆಗೆ ತೆರಳಿದರೆ ಇತ್ತ  ಕೆಲವು ನಾಯಕರ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಸನ್ಯಾಸ ಸ್ವೀಕರಿಸಿದ್ದರು ಜತೀಂದ್ರನಾಥ ಬ್ಯಾನರ್ಜಿ. ಆದರೆ ಕ್ರಾಂತಿಕಾರಿಗಳ ಒಡನಾಟ, ಸಂಘಟನೆ, ಮಾರ್ಗದರ್ಶನ ನಡೆದೇ ಇತ್ತು. ಅಂತೆಯೇ ಜತೀನ್ ಅವರನ್ನು ಭೇಟಿಯಾಗಲು ಬಂದಿದ್ದು. ಅಂದರೆ ಈಗಿನ ಜತೀಂದ್ರ ಪೂರ್ವದ ಜತೀಂದ್ರರ ಮಾರ್ಗದರ್ಶನ ಪಡೆಯಲು ಬಂದಿದ್ದ. ಕೇವಲ ಮಾರ್ಗದರ್ಶನವೇ?...ಅಲ್ಲ. ಅಲ್ಲಿ ೧೮೫೭ರ ಕ್ರಾಂತಿಯ ಪುನಾರವರ್ತನೆಗೆ ಕೆಸರುಗಲ್ಲು ಹಾಕುವುದಿತ್ತು. ಅಲ್ಲಿ ಮತ್ತೊಬ್ಬ ಬರುವವನಿದ್ದ. ಮುಂದೆ ಸೈನಿಕ ಕ್ರಾಂತಿಗೆ ಮೂಲಕಿಡಿಯಾದ ಉತ್ತರಭಾರತದಾದ್ಯಂತ ಪಸರಿಸಿದ ಒಂದು ಮಹಾಕ್ರಾಂತಿಗೆ ಭದ್ರ ಬುನಾದಿ ಅಲ್ಲಿ ಆಗುವುದರಲ್ಲಿತ್ತು. ಆಗಲೇ ಧ್ಯಾನಾವಸ್ಥೆಯಿಂದ ಸಹಜತೆಗೆ ಬಂದ ನಿರಾಲಂಬರು ಅವನು ಬರಲು ಒಂದು ವಾರ ಆಗುವುದೆಂದು ಅಲ್ಲಿಯ ತನಕ ಜತೀನ ಸಾಧನೆಯಲ್ಲಿ ಕಳೆಯಬೇಕೆಂದು ತಿಳಿಸಿ ಮತ್ತೆ ಧ್ಯಾನಸ್ಥರಾದರು. ಮರು ಪ್ರಶ್ಣೆಯಿಲ್ಲ.
ಯಾರು  ಆ ವ್ಯಕ್ತಿ?

      ಜತೀನನ ಸಮಯ ಧ್ಯಾನ, ಯೋಗದಲ್ಲೇ ಕಳೆಯುತ್ತಿದೆ. ಈಗವನು ಮಿತಾಹಾರಿ. ಅವನ ದೇಹದಲ್ಲೊಂದು ಹೊಸ ಶಕ್ತಿ ಸಂಚಯನವಾಗುತ್ತಿದೆ. ಮುಖದ ತೇಜಸ್ಸು ಹೆಚ್ಚುತ್ತಿದೆ. ಅವನಲ್ಲಿಗೆ ಬಂದು ಆರು ದಿವಸಗಳು ಗತಿಸಿವೆ. ಏಳನೆಯ ದಿನ ಯೋಗ, ಅಂಗಸಾಧನೆ ಮುಗಿಸಿ ಇನ್ನೇನು ಸ್ನಾನ-ಧ್ಯಾನಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ನಿರಾಲಂಬರ ಧ್ವನಿ ಕೇಳಿಸಿತು.
"ಅಗೋ ಬಂದ". ಜತೀನನ ದೃಷ್ಟಿ ಕ್ಷಣ ಮಾತ್ರದಲ್ಲಿ ದ್ವಾರದ ಕಡೆ ಸರಿಯಿತು. ಬಂಗಾಳಿ ದಿರಿಸು, ಆಳೆತ್ತರ, ತನಗಿಂತ ತುಸು ಚಿಕ್ಕ ಪ್ರಾಯ, ತೇಜಃಪೂರ್ಣ ಮುಖ. ಹಿಂದೊಮ್ಮೆ ನೋಡಿದ ನೆನಪು. ಆ ವ್ಯಕ್ತಿ ನಿರಾಲಂಬರಿಗೆ ಸಾಷ್ಟಾಂಗವೆರಗಿದಾಗ ಆಶೀರ್ವದಿಸಿದ ನಿರಾಲಂಬರು ಜತೀನನ ಕಡೆ ಕೈತೋರಿಸಿ " ಈತನಾರು ಗೊತ್ತೇ?" ಎಂದು ಕೇಳಿದರು. ಅರೆಕ್ಷಣ ಜತೀನನನ್ನು ನೋಡಿದ ಆತ "ಗೊತ್ತಿಲ್ಲದೆ ಏನು" ಎಂದು ಜತೀನನ್ನು ಗಾಢವಾಗಿ ಆಲಂಗಿಸಿದ. ಬೆಂಕಿ, ಗಾಳಿಗಳು ಒಂದಾದಂತಾಯಿತು!
ಯಾರಾತ...?
ರಾಸ್ ಬಿಹಾರಿ ಬೋಸ್...!  ಎಲ್ಲರ ಮೆಚ್ಚಿನ ರಾಸುದಾ...!

ಯಾರೀತ ರಾಸುದಾ...?
            ತಂದೆ ವಿನೋದ ಬಿಹಾರಿ ಬೋಸ್. ತಾಯಿ ಬಂಗಾಳಿ ಕುಲೀನ ಮನೆತನದ ಸರಳತೆಯ ಪತಿಭಕ್ತಿ ಪರಾಯಣೆ. ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ(೧೮೮೬).  ೩ ವರುಷವಾದಾಗ ತಾಯಿ ಸ್ವರ್ಗವಾಸಿಯಾದರು. ತಾತ ಕಾಳಿಚರಣ ಬೋಸ್. ಬರ್ದ್ವಾನಿನ ಸುಬಲ್ದಹ ಗ್ರಾಮದಲ್ಲಿದ್ದ ಆತ ರಾಮಕೃಷ್ಣ ಪರಮಹಂಸರ ಪರಮ ಭಕ್ತರು. ಅವರಿಂದ ಭರತಖಂಡದ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು. ಚಿಕ್ಕಂದಿನಲ್ಲಂತೂ ಬಲು ತುಂಟ. ಜಗಳಗಂಟ. ಆದರೆ ಸಾಹಿತ್ಯ ಪ್ರೇಮಿ. ಭಾರತವನ್ನು ವಂದೇಮಾತರಂನಿಂದ ವಶೀಕರಿಸಿದ ಬಂಕಿ ಬಾಬುಗಳ ಅಭಿಮಾನಿ.

          ಒಂದು ದಿನ ಚಂದನ್ ನಗರದ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲೀಷರ ಬಗ್ಗೆ ಘನ ಅಭಿಪ್ರಾಯ ಹೊಂದಿದ್ದ ಇತಿಹಾಸದ ಪ್ರಾದ್ಯಾಪಕರೊಬ್ಬರು ಪಾಠ ಮಾಡುತ್ತಾ " ಭಾರತೀಯರು ಹೇಡಿಗಳು. ಆದ್ದರಿಂದಲೇ ೧೭ ಮಂದಿ ಕುದುರೆ ಸವಾರರೊಂದಿಗೆ ಬಂದ ಬಖ್ತಿಯಾರ್ ಖಿಲ್ಜಿ ಯಾವ ಅಡೆತಡೆಯಿಲ್ಲದೆ ನಮ್ಮ ದೇಶವನ್ನು ಲೂಟಿ ಮಾಡಿದ. ಗೋರಿ, ಘಜ್ನಿಗಳು ಕೊಳ್ಳೆ ಹೊಡೆದರು. ಆಂಗ್ಲರೇನಾದರೂ ಇರುತ್ತಿದ್ದರೆ ಅವರ ಅವಸಾನವಾಗುತ್ತಿತ್ತು....."  ಎಂದು ಕೊರೆಯಲಾರಂಭಿಸಿದರು. ಇದನ್ನು ಅಲ್ಲಗಳೆದ ರಾಸುದಾ " ನೀವು ಹೇಳುವುದು ಅಪ್ಪಟ ಸುಳ್ಳು. ಯಾರೋ ಕೆಲವರನ್ನು ಹೆಸರಿಸಿ ನಮ್ಮಿಡೀ ಜನಾಂಗವನ್ನು ಹಳಿಯುವುದು ಎಷ್ಟು ಸರಿ? ಪೃಥ್ವಿರಾಜ ಚೌಹಾಣ್ ಹೇಡಿಯೇ? ಪುರೂರವ ಹೇಡಿಯೇ? ಚಂದ್ರಗುಪ್ತ, ಸಮುದ್ರಗುಪ್ತ, ರಾಣಾ ಸಂಗ, ಸಂಗ್ರಾಮ ಸಿಂಹ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯರು ಪುಕ್ಕಲರೇ? ನಮ್ಮವರ ಸದ್ಗುಣಗಳೇ ನಮಗೇ ಮುಳುವಾಯಿತಲ್ಲದೇ ಬೇರೇನಲ್ಲ. ಕೇವಲ ಒಳ್ಳೆಯವರಾಗಿದ್ದರೆ ಪ್ರಯೋಜನವಿಲ್ಲ. ತಂತ್ರಕ್ಕೆ ಪ್ರತಿತಂತ್ರ, ವ್ಯೂಹಕ್ಕೆ ಚಕ್ರವ್ಯೂಹ ರಚಿಸಿ ಕೃಷ್ಣ, ಚಾಣಕ್ಯ, ಶಿವಾಜಿಯರಂತೆ ಸಮರ ನೀತಿ ಅನುಸರಿಸಿದರೇನೇ ನಮಗೆ ಉಳಿಗಾಲ. ಎದುರಾಳಿ ಯುದ್ಧಧರ್ಮ ಪಾಲಿಸಿದಾಗ ಮಾತ್ರ ನಾವು ಧರ್ಮವನ್ನು ಯುದ್ಧದಲ್ಲಿ ಪಾಲಿಸಬೇಕು. ಕಪಟಿಗಳನ್ನು ಕಪಟದಿಂದಲೇ ಒದ್ದೋಡಿಸಬೇಕು. ಆದ್ದರಿಂದ ನಿಮ್ಮ ಮಾತನ್ನು ವಾಪಾಸು ತೆಗೆದುಕೊಳ್ಳಿ" ಎಂದ. ಕುಪಿತಗೊಂಡ ಆ ಆಂಗ್ಲ ಚೇಲಾ "ನಿಲ್ಲಿಸೋ ನಿನ್ನ ವಿತಂಡವಾದ. ಯಾರಲ್ಲಿ ಮಾತನಾಡುತ್ತಿದ್ದೀಯಾ ನೆನಪಿರಲಿ" ಎಂದು ಭುಸುಗುಡುತ್ತಾ ಹೇಳಿದರು. ಹುಡುಗ ಸುಮ್ಮನುಳಿದಾನೇ..ನನ್ನದು ವಿತಂಡವಾದವಲ್ಲ. ವಾಸ್ತವವಾದ. ನಿಮ್ಮದು ಅಭಿಮಾನ ಶೂನ್ಯರ ಮಾತೆಂದು ಅಬ್ಬರಿಸಿದ. ತರಗತಿಯ ಹುಡುಗರಿಂದ ಚಪ್ಪಾಳೆಗಳ ಸುರಿಮಳೆ!
ಆಂಗ್ಲ ಚೇಲಾನಿಗೆ ಮುಖಭಂಗ. ತತ್ಪರಿಣಾಮ ರಾಸುದಾಗೆ ಶಾಲೆಯಿಂದಲೇ ಅರ್ಧಚಂದ್ರ!

           ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು. ವಿವೇಕಾನಂದರ ಸಮಗ್ರ ಕೃತಿಗಳು, ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು. ಜೋಗೇಂದ್ರನಾಥ ವಿದ್ಯಾಭೂಷಣರ "ಮ್ಯಾಝಿನಿ ಚರಿತೆ" ಸೈನ್ಯ ಕಟ್ಟಿ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸುವ ಕನಸಿಗೆ ಹವಿಸ್ಸೊದಗಿಸಿತು. ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ. ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಛಲ ನೂರ್ಮಡಿಯಾಯಿತು. ಯೋಗ, ಅಂಗಸಾಧನೆಯಿಂದ ದೇಹ ಬಲಿಷ್ಟವಾಯಿತು. ಯುದ್ಧಕ್ಕೆ ಬೇಕಾದ ಆತ್ಮವಿಶ್ವಾಸ ಹೆಚ್ಚಿಸಿದ ದೈಹಿಕ ಚಿಂತನೆ ಅದು.

 -ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ