ಪುಟಗಳು

ಶುಕ್ರವಾರ, ಫೆಬ್ರವರಿ 8, 2013

ಭಾರತ ದರ್ಶನ - ೨೬



ಭಾರತ ದರ್ಶನ - ೨೬:

                    ಅತ್ಯಂತ ಪ್ರಾಚೀನ ಕಾಲದಿಂದ ನಾಡಿನಾದ್ಯಂತ ನಿಂತಿರುವ ಪುಣ್ಯ ಕ್ಷೇತ್ರಗಳು ನಮ್ಮ ರಾಷ್ಟ್ರಭಾವದೊಂದಿಗೆ ಸ್ಪಂದಿಸುತ್ತಾ ಬಂದಿವೆ. ಅವು ಸಮನ್ವಯದ ಸಾಧನಗಳಾಗಿಯೂ ಭಾರತದ ಏಕತೆಯ ಜೀವಂತ ಸಾಕ್ಷಿಗಳಾಗಿಯೂ ಕೆಲಸ ಮಾಡಿವೆ. ನಮ್ಮ ಶ್ರೇಷ್ಠ ಸಂಸ್ಕೃತಿಯ ವಿಕಾಸ ಹಾಗೂ ಪ್ರಸಾರಕ್ಕೆ ಕ್ಷೇತ್ರಗಳ ಕೊಡುಗೆ ಅಪಾರ. ನಾವು ಮುಂಜಾನೆ ಸ್ಮರಿಸಿ ಕೃತಜ್ಞತೆ ಸಲ್ಲಿಸುವ ಅನೇಕ ಸಂಗತಿಗಳಲ್ಲಿ ಮೋಕ್ಷದಾಯಕ ಸಪ್ತಪುರಿಗಳು ಸೇರಿವೆ.
"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಆವಂತಿಕಾ
 ಪುರಿ ದ್ವಾರಾವತೀ ಚೈವ ಸಪ್ತೈಚ ಮೋಕ್ಷದಾಯಕಾಃ ||"
                ಇದು ನಾವು ಮುಂಜಾನೆ ಹೇಳುವ ಶ್ಲೋಕಗಳಲ್ಲೊಂದು. ಎಲ್ಲ ಕ್ಷೇತ್ರಗಳಿಂದ ಆಧ್ಯಾತ್ಮಿಕ ಚಿಂತನೆ ಜೊತೆಗೆ ಭೌತಿಕ ಅಭ್ಯುದಯದ ಮಾರ್ಗದರ್ಶನವು ಸಿಕ್ಕಿದೆ. ಇವು ನಮ್ಮ ನಾಡಿನ ಸಂಸ್ಕೃತಿ ಮತ್ತು ಮೌಲ್ಯಗಳ ರಕ್ಷಣಾ ಕೇಂದ್ರಗಳಾಗಿದ್ದರಿಂದಲೇ ಇವುಗಳ ಮೇಲೆ ಮತಾಂಧರ ಬರ್ಬರ ಆಕ್ರಮಣಗಳು ನಡೆದವು. ಕ್ಷೇತ್ರಗಳೇ ಧೃಡತೆ ಮತ್ತು ಗತಿಶೀಲತೆಯ ಕೇಂದ್ರಬಿಂದುಗಳು ಎಂದು ಶತ್ರುಗಳಿಗೆ ಸ್ಪಷ್ಟವಾಗಿ ತಿಳಿದಿತ್ತು. ನಮ್ಮ ಭಕ್ತಿ ಮತ್ತು ನಿಷ್ಠೆಗಳು ದೇಶದ ಯಾವುದೋ ಒಂದು ಭಾಗಕ್ಕೆ ಮೀಸಲಾಗಿಲ್ಲ. ಉತ್ತರದ ಬದರಿ, ಕೈಲಾಸ, ಮಾನಸ ಸರೋವರದಿಂದ ದಕ್ಷಿಣದ ರಾಮೇಶ್ವರ, ಕನ್ಯಾಕುಮಾರಿಯ ತನಕ, ಪಶ್ಚಿಮದ ಹಿಂಗುಲಾತದಿಂದ ಪೂರ್ವದ ಕಾಮಾಖ್ಯದವರೆಗೆ ನಮ್ಮಲ್ಲೊಂದು ವೈಚಾರಿಕ ಸ್ವಾತಂತ್ರ್ಯ ಇದೆ. ಹೀಗಾಗಿ ಹತ್ತಾರು ಪಂಥಗಳು ರೂಪುಗೊಂಡಿವೆ. ಶೈವ, ವೀರಶೈವ, ವೈಷ್ಣವ, ಶ್ರೀವೈಷ್ಣವ, ಶಾಕ್ತ, ಗಾಣಪತ್ಯ, ಬೌದ್ಧ, ಜೈನ, ಸಿಖ್ ಹೀಗೆ ಹತ್ತು ಹಲವು ಪಂಥಗಳು ದೇಶದಾದ್ಯಂತ ತಮ್ಮ ಪುಣ್ಯಕ್ಷೇತ್ರಗಳನ್ನು ಕಂಡುಕೊಂಡು ಇಡೀ ರಾಷ್ಟ್ರವನ್ನು ತಮ್ಮ ತೀರ್ಥಕ್ಷೇತ್ರವನ್ನಾಗಿ ಭಾವಿಸಿವೆ.

                ಯಾತ್ರಿಕ ಶಿವಭಕ್ತನಾಗಿದ್ದರೆ ರಾಮೇಶ್ವರದಿಂದ ಕೈಲಾಸದವರೆಗೆ ಹೋಗುತ್ತಾನೆ. ದ್ವಾದಶ ಜ್ಯೋತಿರ್ಲಿಂಗಗಳ ರೂಪದಲ್ಲಿ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿರುವುದನ್ನು ನೋಡುತ್ತಾನೆ. ಸೌರಾಷ್ಟ್ರದ ಸೋಮನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಲ, ನರ್ಮದಾ ತೀರದ ಓಂಕಾರೇಶ್ವರ, ಪರಳಿಯ ವೈದ್ಯನಾಥ, ಢಾಕಿನಿಯ ಭೀಮಶಂಕರ, ತಮಿಳುನಾಡಿನ ಸೇತುಬಂಧ ರಾಮೇಶ್ವರ, ದಾರುಕಾವನದ ನಾಗೇಶ್ವರ, ಕಾಶಿಯ ವಿಶ್ವನಾಥ, ನಾಸಿಕದ ಬಳಿ ಗೋದಾವರಿ ಉಗಮದಲ್ಲಿ ನೆಲೆನಿಂತ ತ್ರ್ಯಂಬಕೇಶ್ವರ, ಹಿಮಾಲಯದ ಕೇದಾರನಾಥ, ಮತ್ತು ಎಲ್ಲೋರದ ಘೃಶ್ಮೇಶ್ವರ ಹೀಗೆ ಇಡೀ ರಾಷ್ಟ್ರವೇ ಶಿವಸ್ವರೂಪಿ ಅಂತ ಅನಿಸುತ್ತೆ. ಶಿವನ ಅಡಿ ರಾಮೇಶ್ವರವಾದರೆ, ಕೇದಾರ ಅವನ ಮುಡಿ. ಕಾಶಿ ಮತ್ತು ಕಂಚಿ ಅವನ ಎರಡು ಕಣ್ಣುಗಳು ಅಂತ ಬ್ರಹ್ಮಾಂಡ ಪುರಾಣ ವರ್ಣನೆ ಮಾಡುತ್ತೆ.
                ವೀರಶೈವ ಪಂಥದವರು ಆಗಮೋಕ್ತ ಪಂಚಾಚಾರ್ಯ ಪರಂಪರೆಯ ಪಂಚಪೀಠಗಳಾದ ಬಾಳೆಹೊನ್ನೂರು, ಶ್ರೀಶೈಲ, ಉಜ್ಜಯಿನಿ, ಕಾಶಿ ಮತ್ತು ಕೇದಾರಗಳ ಮೂಲಕ ಇಡೀ ರಾಷ್ಟ್ರವನ್ನು ಅವರು ಜೋಡಿಸಿದ್ದಾರೆ. ನರ ನಾಡಿಗಳಂತೆ ದೇಶದ ತುಂಬಾ ಹಬ್ಬಿರುವ ನೂರೆಂಟು ವೈಷ್ಣವ ಕ್ಷೇತ್ರಗಳಿಂದ ಭಾರತ ವಿಷ್ಣು ಸ್ವರೂಪ ಎಂದು ವೈಷ್ಣವ, ಶ್ರೀವೈಷ್ಣವರ ಭಾವನೆ. ವಿಷ್ಣು ಕಂಚಿ, ಗುರುವಾಯೂರು, ಶ್ರೀರಂಗಂ, ಶ್ರೀರಂಗಪಟ್ಟಣ, ಶಿವನಸಮುದ್ರ, ಮೇಲುಕೋಟೆ, ಪಾಜಕ, ಉಡುಪಿ, ತಿರುಪತಿ, ಫಂಡಾರಪುರ, ಅಯೋಧ್ಯೆ, ಮಥುರೆಯಿಂದ ಬದರಿಯ ತನಕ ಪಶ್ಚಿಮದ ದ್ವಾರಕೆಯಿಂದ ಪೂರ್ವದ ನವದ್ವೀಪದವರೆಗೆ ನೂರೆಂಟು ವೈಷ್ಣವ ತೀರ್ಥಗಳು.
              ನಮ್ಮ ರಾಷ್ಟ್ರದ ಪ್ರತಿಯೊಂದು ಪ್ರಾಂತ್ಯದಲ್ಲೂ, ಪ್ರತಿ ಭಾಷೆಯಲ್ಲೂ ಶೈವ ವೈಷ್ಣವ ಸಂತರು ಅವತರಿಸಿದ್ದಾರೆ. ಅಸ್ಸಾಮಿನ ಶ್ರೀ ಶಂಕರದೇವ್, ಬಂಗಾಳ ಮತ್ತು ಒರಿಸ್ಸಾದ ಶ್ರೀ ಚೈತನ್ಯ ಮಹಾಪ್ರಭು, ಆಂದ್ರ ತಮಿಳುನಾಡುಗಳಲ್ಲಿ ತ್ಯಾಗರಾಜ, ಕಂಬ, ಶ್ರೀಮದ್ ರಾಮಾನುಜರು, ವೈಷ್ಣವ ಸಂತರಾದ ಶ್ರೀ ಆಳ್ವಾರುಗಳು, ಶೈವ ಸಂತರಾದ ನಾಯನ್ಮಾರರು, ಕೇರಳದಲ್ಲಿ ಶ್ರೀಶಂಕರ ಭಗವತ್ಪಾದರು, ನಾರಾಯಣಗುರುಗಳು, ಕರ್ನಾಟಕದಲ್ಲಿ ಮಧ್ವ, ಶ್ರೀಪಾದ, ವ್ಯಾಸ, ವಾದಿರಾಜ, ಪುರಂದರ, ಕನಕ ಯತಿವರೇಣ್ಯರು, ಬಸವ, ಅಲ್ಲಮ, ಅಕ್ಕಮಹಾದೇವಿ, .......ಶರಣ ಶ್ರೇಷ್ಠರು, ಮಹಾರಾಷ್ಟ್ರದಲ್ಲಿ ಜ್ಞಾನದೇವ, ಸೋಪಾನದೇವ, ಏಕನಾಥ, ಮುಕ್ತಿನಾಥ, ನಿವೃತ್ತನಾಥ, ಮುಕ್ತಾಬಾಯಿ, ನಾಮದೇವ, ತುಕಾರಾಮ, ಗಾಡಿಗಿ ಮಹಾರಾಜ್, ಶ್ರೀಗುಲಾಬರಾವ್ ಮಹಾರಾಜ್, ಛೋಕಾಮೆಳಾ, ಗುಜರಾತಿನ ನರ್ಸೀ ಮೆಹ್ತಾ, ರಾಜಸ್ತಾನದ ಮೀರಾಬಾಯಿ, ಪಂಜಾಬಿನ ಗುರುನಾನಕರಿಂದ ಗುರುಗೋವಿಂದ ಸಿಂಹರ ತನಕ, ಸಿಂಧದಲ್ಲಿ ಶ್ರೀ ಜೂಲೈ ಲಾಲ್, ಉತ್ತರ ಪ್ರದೇಶದಲ್ಲಿ ವಾಲ್ಮೀಕಿ, ವ್ಯಾಸರಿಂದ ಕಬೀರ್, ತುಲಸೀದಾಸರವರೆಗೆ ಸಹಸ್ರಾರು ವಿಭೂತಿಪುರುಷರ ಮಾಲಿಕೆ ರಾಷ್ಟ್ರದಲ್ಲಿದೆ.
               ಭಕ್ತ ಶಾಕ್ತನಾದರೆ ದೇಶದಾದ್ಯಂತ ನೆಲೆಗೊಂಡಿರುವ ೫೧ ಶಕ್ತಿಪೀಠಗಳು ಅವನನ್ನು ಕರೆಯುತ್ತವೆ. ಕನ್ಯಾಕುಮಾರಿ, ಕಂಚಿ ಕಾಮಾಕ್ಷಿ, ಮಧುರೈ ಮೀನಾಕ್ಷಿ, ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡಿ, ಶ್ರೀಶೈಲದ ಭ್ರಮರಾಂಭ, ಕೊಲ್ಹಾಪುರದ ಮಹಾಲಕ್ಷ್ಮಿ, ಉಜ್ಜೈನಿಯ ಮಾಂಗಲ್ಯ ಚಂಡಿಕಾ, ಪ್ರಯಾಗದ ಶ್ರೀ ಲಲಿತಾ, ಕಾಶಿಯ ಅನ್ನಪೂರ್ಣ, ಪಟ್ನಾದ ಭವಾನಿ, ಢಾಕಾದ ಭವಾನಿ, ಕಲ್ಕತ್ತೆಯ ಕಾಳಿ, ಅಸ್ಸಾಮಿನ ಕಾಮಾಕ್ಷಿ, ಶ್ರೀನಗರದ ಕ್ಷೀರ ಭವಾನಿ, ಬಲೂಚಿಸ್ತಾನದ ಹಿಂಗುಲಾಂಬಿಕೆ, ಹಿಮಾಲಯದ ತಪ್ಪಲಿನ ವೈಷ್ಣೋದೇವಿ ಮತ್ತು ಜ್ವಾಲಾಮುಖಿ, ತ್ರಿಪುರಾದ ತ್ರಿಪುರಸುಂದರಿ, ಕುರುಕ್ಷೇತ್ರದ ಭದ್ರಕಾಳಿ, ಹರಿದ್ವಾರದ ಮಮ್ಸಾ ದೇವಿ, ಗಂಡಕಿ, ಉಮಾ, ನಾರಾಯಣಿ,...ಹೀಗೆ ೫೧ ಶಕ್ತಿಪೀಠಗಳು ಭಾರತವನ್ನು ಜೋಡಿಸಿವೆ. ತಂತ್ರಚೂಡಾಮಣಿಯಲ್ಲಿ ಶಕ್ತಿಪೀಠಗಳ ವಿವರಗಳಿವೆ. ತನ್ಮೂಲಕ ಭಾರತ ಅಂದರೆ ಶಕ್ತಿಸ್ವರೂಪಿಣಿ ದುರ್ಗಾ ಅನ್ನೋ ಭಾವನೆ ಬೆಳೆಯಿತು.
                     ಸಿಖ್ ಪಂಥದ ಸ್ಥಾಪಕ ಗುರುನಾನಕ್ ದೇವ್ ಮೂಲತಃ ಓರ್ವ ವೈಷ್ಣವ ಸಂತ. ಪರಂಪರೆಯಂತೆ ಅವರು ಕೂಡಾ ಬಲೂಚಿಸ್ತಾನದಿಂದ ಬರ್ಮಾದವರೆಗೆ ದಕ್ಷಿಣದಿಂದ ಉತ್ತರದ ಹೇಮಕುಂಡದವರೆಗೆ ಯಾತ್ರೆಗೈದಿದ್ದಾರೆ. ಅಯೋಧ್ಯೆಯಲ್ಲಿ ತಪಸ್ಸನ್ನಾಚರಿಸಿದ ಅವರಿಗೆ ಅಲ್ಲೇ ಜ್ಞಾನೋದಯವಾಯಿತು. ಅವರೇ ಬರೆದ ಜಪ್ ಜೀ ಅನ್ನುವ ಗ್ರಂಥದಲ್ಲಿ ೬೮ ಪವಿತ್ರ ತೀರ್ಥಗಳ ಭಕ್ತಿಯುಕ್ತ ವರ್ಣನೆಯಿದೆ. ಸಿಖ್ ಅನ್ನೋದು ಶಿಷ್ಯ ಅನ್ನುವ ಸಂಸ್ಕೃತ ಶಬ್ಧದ ಅಪಭೃಂಶ. ಸಿಖ್ ಪಂಥದ ಹತ್ತು ಮಂದಿ ಗುರುಗಳ ಹೆಸರುಗಳನ್ನು ಗಮನಿಸಿ- ಶ್ರೀ ನಾನಕ್ ದೇವ್, ಶ್ರೀ ಅಂಗದ ದೇವ್, ಶ್ರೀ ಅಮರ ದಾಸ್, ಶ್ರೀ ರಾಮ್ ದಾಸ್, ಶ್ರೀ ಅರ್ಜುನ ದೇವ್, ಶ್ರೀ ಹರಗೋವಿಂದ, ಶ್ರೀ ಹರರಾಯ್, ಶ್ರೀ ಹರಿಕೃಷ್ಣ, ಶ್ರೀ ತೇಗ್ ಬಹದ್ದೂರ್, ಶ್ರೀ ಗುರುಗೋವಿಂದ ಸಿಂಹ ಇವೆಲ್ಲವೂ ನಮ್ಮ ಪುಣ್ಯ ಪುರುಷರ ಹೆಸರುಗಳೇ. ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್ ದಲ್ಲೇ ಸಾವಿರಾರು ಸಲ ರಾಮ, ಗೋವಿಂದ, ಮುಕುಂದ, ಮಾಧವ, ಪರಬ್ರಹ್ಮ, ಹರಿ, ಪ್ರಭು, ಗೋಪಾಲ, ಪರಮೇಶ್ವರ ಎಲ್ಲಾ ಶಬ್ಧಗಳಿವೆ. ನಮ್ಮ ಧರ್ಮ ರಕ್ಷಣೆಗಾಗಿ ಶ್ರೀ ಗುರು ಅರ್ಜುನ ದೇವ್, ಶ್ರೀ ಗುರು ತೇಗ್ ಬಹಾದ್ದೂರ್ ಬಲಿದಾನ ಮಾಡಿದರು. ಶ್ರೀ ಗುರು ಗೋವಿಂದ ಸಿಂಹರ ನಾಲ್ಕೂ ಮಕ್ಕಳು ಎಳೇ ವಯಸ್ಸಿನಲ್ಲಿಯೇ ದೇಶಧರ್ಮಗಳ ಸಲುವಾಗಿ ಬಲಿದಾನ ಮಾಡಿದರು. ಅಮೃತಸರ, ಆನಂದಪುರ, ಪಟ್ನಾ, ದೆಹಲಿ, ನಾಂದೇಡ್, ಬೀದರ್, ಹಿಮಾಲಯದ ಹೇಮಕುಂಡ, ಪಾಕಿಸ್ತಾನದಲ್ಲಿರುವ ನನ್ಖಾನ ಸಾಹೇಬ್ ಮತ್ತು ಪಂಜಾಬ್ ಸಾಹೇಬ್ ಸಿಖ್ಖರ ಪವಿತ್ರ ಕ್ಷೇತ್ರಗಳು.
                          ಜಗತ್ತಿನ ಎಲ್ಲಾ ಬೌಧ್ಧರಿಗೆ ಭಾರತವೇ ಪವಿತ್ರ ಕ್ಷೇತ್ರ. ಅದರಲ್ಲೂ ಪ್ರಮುಖವಾಗಿ ಬುದ್ಧನು ಜನಿಸಿದ ಲುಂಬಿನಿ,  ಸಿದ್ಧಾರ್ಥ ಬುದ್ಧನಾದ ಗಯಾ, ಬುದ್ಧನ ಪ್ರಥಮ ಪ್ರವಚನ ನಡೆದ ಕಾಶೀ ಸಮೀಪದ ಸಾರಾನಾಥ, ಹಾಗೂ ಬುದ್ಧ ತನ್ನ ೮೦ನೇ ವಯಸ್ಸಿನಲ್ಲಿ ನಿರ್ವಾಣ ಹೊಂದಿದ ಸ್ಥಾನ ಕುಶೀನಗರ ಇವು ನಾಲ್ಕು ಪರಮ ಪವಿತ್ರ ಕ್ಷೇತ್ರಗಳು. ಇವಲ್ಲದೇ ಬುದ್ಧನ ಚರಣ ಸ್ಪರ್ಷದಿಂದ ಪುನೀತವಾದ ಸಾಂಖಾಶಯ, ಶ್ರಾವಸ್ಥಿ, ರಾಜ್ಯಾಗ್ರಹ, ಕೌಶಾಂಬಿ, ಅಯೋಧ್ಯಾ, ವೈಶಾಲಿ, ಪಾಟಲೀಪುತ್ರ ಇವೆಲ್ಲವೂ ಪವಿತ್ರ ಎನಿಸಿವೆ. ಬುದ್ಧನ ಮರಣಾನಂತರ ಅವನ ಅಸ್ಥಿಗಳನ್ನು ಕ್ಷೇತ್ರಗಳಲ್ಲಿಟ್ಟು ಅಲ್ಲೆಲ್ಲಾ ಸ್ಥೂಪಗಳನ್ನು ಕಟ್ಟಿದ್ದಾರೆ. ಅವೆಲ್ಲವೂ ತೀರ್ಥರೂಪವೇ. ಹೀಗೆ ದೇಶದಾದ್ಯಂತ ಸಹಸ್ರಾರು ಸ್ಥೂಪಗಳು, ಚೈತ್ಯಗಳು, ವಿಹಾರಗಳಿವೆ.
                     ಜೈನರು ತಮ್ಮ ತೀರ್ಥ ಕ್ಷೇತ್ರಗಳನ್ನು ಸಿದ್ಧ ಮತ್ತು ಅತಿಶಯ ಕ್ಷೇತ್ರಗಳು ಅಂತ ವಿಂಗಡಿಸಿದ್ದಾರೆ. ತೀರ್ಥಂಕರರು, ಸಾಧುಗಳು, ಸಿದ್ಧರು ನಿರ್ವಾಣ ಹೊಂದಿದ ಸ್ಥಳಗಳನ್ನು ಸಿದ್ಧ ಕ್ಷೇತ್ರಗಳು ಅಂತ ಪರಿಗಣಿಸಿದರೆ ವಿಶೇಷ ಘಟನೆಗಳು ನಡೆದ ಕ್ಷೇತ್ರಗಳನ್ನು ಅತಿಶಯ ಕ್ಷೇತ್ರ ಅಂತ ಭಾವಿಸುತ್ತಾರೆ. ಅಷ್ಟ ಪಾದ, ಸಂಮೇಧ ಶಿಖರ, ಪಾವಾಪುರಿ, ಅಯೋಧ್ಯಾ, ಅಬು ಪರ್ವತ್, ಗಿರಿನಾರ್, ಶತ್ರುಂಜಯ ಹಾಗೂ ಕರ್ನಾಟಕದ ಶ್ರವಣ ಬೆಳಗೊಳ, ಹೊಂಬುಜ, ಮೂಡಬಿದ್ರೆ,ಕಾರ್ಕಳ, ವೇಣೂರು, ಧರ್ಮಸ್ಥಳ, ವರಂಗ ಜೈನರ ಪವಿತ್ರ ಕ್ಷೇತ್ರಗಳು. ಹೀಗೆ ನಮ್ಮನಾಡಿನ ಎಲ್ಲಾ ಪಂಥಗಳು ಭಾರತವನ್ನು ತೀರ್ಥ ಸ್ವರೂಪದಲ್ಲಿ ಕಂಡಿವೆ. ನಮ್ಮ ರಾಷ್ಟ್ರದ ಆತ್ಮವನ್ನು ದುರ್ಬಲಗೊಳಿಸುವ ಕೆಲಸ ಯಾವ ಪಂಥದಿಂದಲೂ ಆಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ