ಪುಟಗಳು

ಶನಿವಾರ, ಮಾರ್ಚ್ 2, 2013

ರುಧಿರ ತರ್ಪಣ-ಮಾತೃಪೂಜನಾ: ಭಾಗ-೨:



ರುಧಿರ ತರ್ಪಣ-ಮಾತೃಪೂಜನಾ: ಭಾಗ-:

ಪಂಜರದ ಬಾಗಿಲು ತೆರೆದಿತ್ತು
                   
           ತಂದೆ, ಮಗ ತನ್ನ ಕಣ್ಣೆದುರೇ ಇರಲಿ, ಸಂಭಾಳಿಸಬಹುದೆಂದು ತಾನು ಕೆಲಸ ಮಾಡುತ್ತಿದ್ದ ಶಿಮ್ಲಾದ ಸರಕಾರೀ ಪ್ರೆಸ್ನಲ್ಲಿಯೇ ಕೆಲಸ ಕೊಡಿಸಿದರು. ಆದರೆ ರಾಸುದಾನೊಳಗಿದ್ದ ಹುಟ್ಟು ಹೋರಾಟಗಾರ ಸುಮ್ಮನಿರಬೇಕಲ್ಲ. ಮ್ಯಾನೇಜ್ ಮೆಂಟ್ ಮತ್ತು ಕೆಲಸಗಾರರ ನಡುವೆ ಘರ್ಷಣೆಯಾದಾಗ ಕೆಲಸಗಾರರ ಪರ ವಕಾಲತ್ತು ವಹಿಸಿದ. ಪರಿಣಾಮ ದಿನಂಪ್ರತಿ ಮನೆಯಲ್ಲಿ ಜಗಳ. ಪರಿಣಾಮ ಕೆಲಸಕ್ಕೆ ರಾಜೀನಾಮೆ. ಮನೆಯಿಂದ ಪರಾರಿ. ಸ್ವಾತಂತ್ರ್ಯ ಬಯಸುವ ಮನ ಎಷ್ಟು ದಿನ ಪಂಜರದೊಳಗಿದ್ದೀತು?

               ಡೆಹ್ರಾಡೂನಿನ ಫಾರೆಸ್ಟ್ ರೀಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಸಿಕ್ಕಿತು. ಬಾಸ್ ಸರ್ದಾರ್ ಪೂರಣ ಸಿಂಗ್. ವಸತಿಗಾಗಿ ಪರದಾಡುತ್ತಿದ್ದಾಗ "ಟಾಗೋರ್ ವಿಲ್ಲಾ" (ಶ್ರೀಮಂತ ಪ್ರಪುಲ್ಲನಾಥ ಟಾಗೋರನ ಎಸ್ಟೇಟ್) ಮ್ಯಾನೇಜರ್ ಅತುಲ್ ಚಂದ್ರ ಬೋಸನ ಪರಿಚಯವಾಗಿ ಅದೇ ತೋಟದಲ್ಲಿ ವಾಸಕ್ಕೆ ಮನೆಯೂ ಸಿಕ್ಕಿತು. ಮುಂದೆ ಕ್ರಾಂತಿ ಕಾರ್ಯಕ್ಕೆ ಶ್ರೀಗಣೇಶವಾದದ್ದು ಇಲ್ಲಿಯೇ. ಮೊದಲೇ ಅದ್ಭುತ ಮಾತುಗಾರನಾಗಿದ್ದ ರಾಸುದಾ ತರುಣರ ಸಂಘಟನೆಗಾರಂಭಿಸಿದರು. ತನ್ನ ಮನೆಯಲ್ಲೇ ತರುಣರಿಗೆ ಬಾಂಬ್ ತಯಾರಿಸುವ ವಿಧಾನ ಮತ್ತು ಕ್ರಾಂತಿಯ ತರಬೇತಿಗಳನ್ನಾರಂಭಿಸಿದರು. ತನ್ಮಧ್ಯೆ ಶಿರೀಷ ಚಂದ್ರ ಬೋಸ್ ಎಂಬ ಮಹಾನ್ ಕ್ರಾಂತಿಕಾರಿಯ ಪರಿಚಯವಾಯಿತು. ಅವರಿಂದ ಪ್ರವರ್ತಕ ಸಂಘದ ಹರಿಕಾರ , ಚಂದನ್ ನಗರದ ಕ್ರಾಂತಿಕಾರಿಗಳ ಅನಭಿಷಿಕ್ತ ದೊರೆ ಮೋತಿಲಾಲ ರಾಯರ ಭೇಟಿಯಾಗಿ ತನ್ಮೂಲಕ ಮಹರ್ಷಿ ಅರವಿಂದರ ದರ್ಶನ ಭಾಗ್ಯ ಲಭಿಸಿತು.

             ಒಂದು ದಿನ ಮೋತಿಲಾಲರು ರಾಸುದಾರನ್ನು ತನಗೆ ಅರವಿಂದರು ಗೀತೆಯ ಅಂತರ್ದರ್ಶನ ಮಾಡಿಸಿದ ಅರವಿಂದರು ಅಜ್ಞಾತವಾಸದಲ್ಲಡಗಿದ್ದ ಗುಹೆಯಂತಿದ್ದ ಪುಟ್ಟ ಕೋಣೆಯೊಳಗೆ ಕರೆದೊಯ್ದರು. ಅರವಿಂದರ ನೆನಪಾಗಿ ಮೈ ಮನ ಪುಳಕಗೊಂಡಿತು. ಅರವಿಂದರ ವಾಣಿ ಗುಂಯ್ಗುಡಲಾರಂಭಿಸಿತು. "....ಕ್ರಾಂತಿವೀರನಿಗೆ ಗೀತೆಯೇ ಗುರು. ಆತ್ಮಸಮರ್ಪಣ ಭಾವ ಶ್ರೀಕೃಷ್ಣ ನೀಡಿದ ಸಂದೇಶ. ಅದು  ಪ್ರತಿಯೊಬ್ಬ ಕ್ರಾಂತಿಕಾರಿಗೆ ಆದರ್ಶ....".  ಡೆಹರಾಡೂನಿನ ಮದುವೆ ಮನೆಯೊಂದರಲ್ಲಿ ಜಿತೇಂದ್ರ ಮೋಹನ ಚಟರ್ಜಿಯ ಪರಿಚಯವಾಗಿ ಪಂಜಾಬಿನ ಕ್ರಾಂತಿಕಾರಿಗಳೊಂದಿಗೆ ಅವನಿಗಿದ್ದ ನಂಟು ರಾಸುದಾಗೆ ಪಂಜಾಬಿನ ತನಕ ತನ್ನ ಕ್ರಾಂತಿಸಂಘಟನೆ ವಿಸ್ತರಿಸಲು ನೆರವಾಯಿತು.

          ಅಂತಹ ಅಪ್ರತಿಮ ದೇಶಭಕ್ತನೇ ಈಗ ಬಾಘಾ ಜತೀನನನ್ನು ಭೇಟಿ ಮಾಡಿದ್ದು. ಮಾತ್ರವಲ್ಲ ನಿರಾಲಂಬ ಸ್ವಾಮಿಗಳ ಸಮಕ್ಷಮದಲ್ಲಿ ಕಂಸ-ತೀಲ (ಶ್ರೀ ಕೃಷ್ಣ- ಬಲರಾಮರು ಕಂಸನನ್ನು ವಧಿಸಿದ ಸ್ಥಳ) ದಲ್ಲಿ ಧ್ಯಾನಸ್ಥರಾಗಿ ಶತ್ರು ಸಂಹಾರದ ದೀಕ್ಷೆ ತೊಟ್ಟರು ಅವರೀರ್ವರು. ಧ್ಯಾನಮಗ್ನನಾಗಿದ್ದ ರಾಸುದಾ ಮನದಲ್ಲಿ ಒಂದು ಚಿತ್ರ ಮೂಡತೊಡಗಿತ್ತು. ಅದು ವೈಸ್ ರಾಯ್ ಹಾರ್ಡಿಂಗನ ಚಿತ್ರ!


ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಗದಗುಟ್ಟಿಸಿದ ಬಾಂಬು

                ಚಂದನ್ ನಗರದ ಪ್ರಮುಖ ಬಾಂಬು ತಯಾರಿಕಾ ಕೇಂದ್ರಗಳ ಪೈಕಿ ತನ್ನ ಮನೆಯಲ್ಲಿದ್ದುದನ್ನೇ ಅತೀ ದೊಡ್ಡ ಕೇಂದ್ರವಾಗಿ ಪರಿವರ್ತಿಸಿದ್ದರು ರಾಸುದಾ. ತಯಾರಿಕೆಗೆ ಬೇಕಾದ ನೈಟ್ರಿಕ್ ಆಮ್ಲ ಮತ್ತು ಕಾರ್ಬೋಲಿಕ್ ಆಮ್ಲಗಳನ್ನು ರಾಸುದಾ ಗೆಳೆಯ ವೃತ್ತಿಯಲ್ಲಿ ಅಕ್ಕಸಾಲಿಗನಾಗಿದ್ದ ಅಶುತೋಶ್ ನಿಯೋಗಿ ಸರಬರಾಜು ಮಾಡುತ್ತಿದ್ದ. ರಾಸುದಾ ಈಗ ನಿತ್ಯ ಪ್ರವಾಸಿ. ಎಲ್ಲೇ ಇದ್ದರೂ ತನ್ನ ಬಾಂಬು ಕೇಂದ್ರದ ಮೇಲೆ ನಿಯಂತ್ರಣ ಇದ್ದೇ ಇರುತ್ತಿತ್ತು. ರಾಸುದಾ ದೆಹಲಿ, ಪಂಜಾಬ್, ಸಂಯುಕ್ತ ಪ್ರಾಂತಗಳಲ್ಲಿ ಬಿರುಗಾಳಿಯಂತೆ ಪ್ರವಾಸ ಮಾಡುತ್ತಾ ಸಂಘಟನೆಯ ಕಾರ್ಯದಲ್ಲಿ ತೊಡಗಿದ್ದರು. ಒಂದು ದಿನ ಚಂದನ್ ನಗರದಲ್ಲಿದ್ದರೆ ಮರುದಿನ ಕಲ್ಕತ್ತೆಯಲ್ಲೋ, ಕಾಶಿಯಲ್ಲೋ, ಲಾಹೋರ್ನಲ್ಲೋ, ದೆಹಲಿಯಲ್ಲೋ ಇರುತ್ತಿದ್ದರು.

             ಸ್ವಾಮಿ ನಿರಾಲಂಬರ(ಜತೀಂದ್ರನಾಥ ಬ್ಯಾನರ್ಜಿ) ಕಾರ್ಯಕ್ಷೇತ್ರವಾಗಿದ್ದ ಕಾರಣ ಪಂಜಾಬಿನಲ್ಲಿ ರಾಸುದಾಗೆ ಪೂರಕ ವಾತಾವರಣವಿತ್ತು. ಅಲ್ಲದೇ ಆರ್ಯಸಮಾಜದ ವಿಚಾರಗಳಿಂದಾಗಿ ಪಂಜಾಬಿನಲ್ಲಿ ದೇಶಪ್ರೇಮದ ವಾತಾವರಣವಿತ್ತು. ಜತೀಂದ್ರರಿಂದ ಆಕರ್ಷಿತರಾಗಿ ಲಾಲಾ ಲಜಪತ್ ರಾಯ್, ಸರ್ದಾರ್ ಅಜಿತ್ ಸಿಂಗ್, ಸರ್ದಾರ್ ಕಿಶನ್ ಸಿಂಗ್(ಕ್ರಾಂತಿವೀರ ಭಗತ್ ಸಿಂಗನ ತಂದೆ), ಲಾಲಾ ಅಮರದಾಸ್, ಲಾಲ್ ಚಂದ್ ಫಾಲಕ್ ಮುಂತಾದ ಸಮರ್ಥ ಯುವಕರು ಅಲ್ಲಿ ಸಂಘಟನೆಯ ಜವಾಬ್ದಾರಿ ಹೊತ್ತಿದ್ದರು. ರಾಸುದಾ ಪಂಜಾಬಿಗೆ ಕಾಲಿಟ್ಟದ್ದೇ, ಸ್ವಾಮಿ ವಿವೇಕಾನಂದ ಮತ್ತು ಅರವಿಂದರು ಹಚ್ಚಿದ ಜ್ಯೋತಿಯು ಮಹರ್ಷಿ ದಯಾನಂದ ಸರಸ್ವತಿಯವರು ಹಚ್ಚಿದ ದೀಪದೊಂದಿಗೆ ಕೂಡಿಕೊಂಡಂತಾಯಿತು. ಮಾತ್ರವಲ್ಲ ಲಾಲಾ ಹರದಯಾಳ್ ವಿದೇಶಕ್ಕೆ ಹಾರುವ ಮುನ್ನ ಸಂಘಟಿಸಿದ್ದ ದೇಶಭಕ್ತರ ಗಡಣ ರಾಸುದಾಗೆ ಸಹಾಯಕವಾಯಿತು. ರಾಸುದಾ ಈಗ ಲಾಹೋರ್, ಪಂಜಾಬ್, ದೆಹಲಿ, ಕಾಶಿ, ಬಂಗಾಳ, ಮಹಾರಾಷ್ಟ್ರದ ಎಲ್ಲ ಕ್ರಾಂತಿಕಾರಿಗಳನ್ನು ಏಕಛತ್ರದೊಳಗೆ ತರುವ ಪ್ರಯತ್ನ ಆರಂಭಿಸಿದರು.

              ೧೯೧೧ ಡಿಸೆಂಬರ್ ೧೨ರಂದು ಭಾರತಕ್ಕೆ ಭೇಟಿ ನೀಡಲು ಬಂದಿದ್ದ ಆಂಗ್ಲ ರಾಜ ೫ನೇ ಜಾರ್ಜ್ ಬಂಗಾಳದ ವಿಭಜನೆಯನ್ನು ರದ್ದುಗೊಳಿಸಿರುವುದಾಗಿಯೂ ಸರ್ಕಾರದ ರಾಜಧಾನಿಯನ್ನು ಕಲ್ಕತ್ತೆಯಿಂದ ದೆಹಲಿಗೆ ವರ್ಗಾಯಿಸುವುದಾಗಿಯೂ ಘೋಷಿಸಿದ. ರಾಸುದಾ ಕಾಯುತ್ತಿದ್ದ ಸಮಯ ಈಗ ಒದಗಿ ಬಂದಿತ್ತು.

೧೯೧೨ರ ಡಿಸೆಂಬರ್ ೨೩.

             ವೈಸ್ರಾಯ್ ದೆಹಲಿ ಪ್ರವೇಶಕ್ಕಾಗಿ ರಾಜಧಾನಿ ಸಿಂಗಾರಗೊಂಡಿತ್ತು. ರಂಗವಲ್ಲಿಗಳು, ತಳಿರುತೋರಣ ನಡುವೆ ಸೈನಿಕರಿಂದ ಬ್ಯಾಂಡು ವಾದನ ಹಾಗೂ ಕವಾಯತು. ಎಂಥಾ ದುರವಸ್ಥೆ ನೋಡಿ ಭಾರತೀಯರದ್ದು. ಭವ್ಯೋಪೇತ ವೈಸ್ರಾಯ್ ಮೆರವಣಿಗೆ ನೋಡಲು ಅಪಾರ ಜನಸಂದಣಿ ಸೇರಿತ್ತು. ರೈಲಿನಿಂದಿಳಿದ ವೈಸ್ ರಾಯ್ ಕವಾಯತು ಹಾಗೂ ಮಿಲಿಟರಿ ಗೌರವ ಸ್ವೀಕರಿಸಿ ತನ್ನ ಪತ್ನಿಯೊಡನೆ ಅಂಬಾರಿ ಮೇಲೆ ಕೂತ. ಇತ್ತ ಮಂದಗತಿಯ ಮೆರವಣಿಗೆ ಸಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಮದುವೆ ದಿಬ್ಬಣವೊಂದು ಹೊರಟಿತ್ತು! ಕಚ್ಚೆ ಬಿಗಿದಿದ್ದ ವರ ಮಹಾಶಯನೊಂದಿಗೆ "ಆಭರಣ" ತುಂಬಿದ ಚೀಲವನ್ನು ಸೆರಗಿನ ಮರೆಯಲ್ಲಿರಿಸಿಕೊಂಡು ಹೊರಟಿದ್ದಳು ನವ ವಧು ಲಕ್ಷ್ಮೀ ಬಾಯಿ! ಅವರೊಂದಿಗೆ "ಬಂಧುಗಳೂ" ಕೂಡಾ! ಟಾಂಗಾದಿಂದ ಇಳಿದ ವಧು ಸರಸರನೆ ಮೇಲುಪ್ಪರಿಗೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಕೂಡಿಕೊಂಡಳು. ಆದರೆ ವರನಿಗೆ ಮೇಲೆ ಹೋಗಲು ನೆರೆದಿದ್ದ ಹೆಂಗಳೆಯರು ಅವಕಾಶ ಕೊಡಲಿಲ್ಲ. ಮಹೂರ್ತ ಸಮೀಪಿಸುತ್ತಿತ್ತು!

          ಉಪ್ಪರಿಗೆಯ ಬಳಿ ಆನೆ ಬರುತ್ತಿದ್ದಂತೆಯೇ "ನವ ವಧು" ತನ್ನ ಕೈಚೀಲದಿಂದ ಒಂದು ಆಭರಣ ಹೊರತೆಗೆದಳು. ಅತ್ತ ವರಮಹಾಶಯ ತನ್ನ ಬಲಗೈ ಮೇಲಕ್ಕೆತ್ತುತ್ತಿದ್ದಂತೆ ನವ ವಧು ಲಕ್ಷ್ಮೀಬಾಯಿಯ ಕೈಯಲ್ಲಿದ್ದ ಆಭರಣ ಅಂಬಾರಿಯತ್ತ ಹಾರಿತು. ಕಿವಿಗಡಚಿಕ್ಕುವ ಆಸ್ಫೋಟ!
ನಿಮಿಷಾರ್ಧದಲ್ಲಿ ನವವಧು ಲಕ್ಷೀಬಾಯಿ ಉಪ್ಪರಿಗೆಯಿಂದ ಕೆಳಕ್ಕಿಳಿದಳು. ಕೆಳಗೆ ಬರುವಷ್ಟರಲ್ಲಿ ಅವಳ ಸೀರೆ ಕುಪ್ಪಸಗಳು ಮಾಯವಾಗಿ ರಾಸುದಾ ಬಂಟ ಬಸಂತ್ ಕುಮಾರ್ ಬಿಶ್ವಾಸ್ ಆಗಿ ಮಾರ್ಪಟ್ಟಿದ್ದಳು! ಕಚ್ಚಿ ಪಂಚೆಯ ವರ ಮಹಾಶಯ ಯಾರೆಂದು ಬಲ್ಲಿರಿ?
ರಾಸ್ ಬಿಹಾರಿ ಬೋಸ್...ರಾಸುದಾ...!!!
ಇಬ್ಬರೂ ಅಲ್ಲಿಂದ ಮರೆಯಾದರು. ಮಾವುತ ಸಾವನ್ನಪ್ಪಿ ವೈಸ್ ರಾಯ್ ಹಾರ್ಡಿಂಗನಿಗೆ ಮಾರಣಾಂತಿಕ ಗಾಯಗಳಾದರೂ ದುರದೃಷ್ಟವಶಾತ್ ಅವನು ಸಾವಿನಿಂದ ಪಾರಾಗಿದ್ದ. ಆದರೇನು ಬಾಂಬಿನ ಪ್ರತಿಧ್ವನಿ ಸೂರ್ಯ ಮುಳುಗದ ನಾಡಿನಲ್ಲಿ ಪ್ರತಿಧ್ವನಿಸಿತ್ತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ