ಪುಟಗಳು

ಶುಕ್ರವಾರ, ಮಾರ್ಚ್ 22, 2013

ಸಾಮಗಾನ ಪ್ರಿಯೆ

             ದಕ್ಷಿಣ ಭಾರತದ ದೇಗುಲಗಳಲ್ಲಿ ನನಗೆ ಅತ್ಯಂತ ಇಷ್ಟವಾದ ದೇಗುಲ ಎಂದರೆ ಶೃಂಗೇರಿ. ಶೃಂಗಗಿರಿ ಎಂಬ ಬೆಟ್ಟದ ಮೇಲೆ ಬಿಸಿಲ ಝಳಕ್ಕೆ ತಾಪ ಪಡುತ್ತಿದ್ದ ಕಪ್ಪೆಗೆ ಹಾವೊಂದು ತನ್ನ ಹೆಡೆ ಬಿಡಿಸಿ ರಕ್ಷಣೆ ನೀಡುತ್ತಿದ್ದ ದೃಶ್ಯವನ್ನು ಕಂಡ ಶಂಕರಾಚಾರ್ಯರು ಶ್ರೀ ಚಕ್ರದಲ್ಲಿ ಮಾತೆ ಶಾರದೆಯನ್ನು ಪೂಜಿಸಿ ನಿರ್ಮಿಸಿದ ಈ ದೇವಾಲಯ ತನ್ನ ಸಹಜವಾದ ಪ್ರಕೃತಿ ಸೌಂದರ್ಯ, ನಿರಾಡಂಬರತೆ, ವೇದಘೋಷಗಳಿಂದ ಸಹೃದಯರ ಮನ ಸೆಳೆಯುತ್ತಿದೆ. ತುಂಗಾ ನದಿಯ ಆ ಸಂಜೆಯ ವಿಹಾರ, ಗಿರಿಯೊಡಲ ಪ್ರಾಕೃತಿಕ ಸೊಬಗು ಆಹಾ...ಎಷ್ಟು ಮನೋಹರ...ಶೃಂಗಗಿರಿಯ ವೈಶಿಷ್ಟ್ಯತೆ, ಐತಿಹಾಸಿಕತೆ ಕುರಿತು ಹಿಂದೆ ಬರೆದ ಕವನ...ನಿಮಗಾಗಿ...


ತಿಂಗಳ ಬೆಳಕಲಿ ಶೃಂಗಗಿರಿಯಲಿ ವೀಣಾವಾದನವು
ತಿಂಗಳ ಬೆಳಕ ಶಿರದಲಿ ಧರಿಸಿಹ ಅಂಗಜಾರಿಯ ಸೋದರಿಯು|
ರೋಮಪಾದನ ದುರಿತಾಪಹಾರಿ ಋಷ್ಯಶೃಂಗ ತಪೋಭೂಮಿಯಲಿ
ಮಂಜುಳ ಭಾಷಿಣಿ ವೀಣಾಪಾಣಿ ವಾಣಿ ತುಂಗಾ ವಿಹಾರಿಣಿಯು||

ಬಿಸಿಲ ಝಳಕೆ ತಾಪ ಪಡುತಿಹ ಮಂಡೂಕ ಸಂಕಷ್ಟದೊಳು
ಬದ್ಧವೈರ ಮರೆತು ರಕ್ಷಣೆ ಶೇಷ ಕಾರ್ಯ ವಿಶೇಷವು|
ವೇದಾಂತ ಕೇಸರಿ ಅದ್ವೈತ ಪಸರಿಸಿ ತುಂಗಾ ಸ್ನಾನದ ಧ್ಯಾನದೊಳು
ಆದಿಶಂಕರ ಅರ್ಚಿಸಿ ಮಧುರ ಮಂದಸ್ಮಿತೆ ಶ್ರೀ ಚಕ್ರದೊಳು||

ದ್ವಾದಶ ರಾಶಿಗೆ ದ್ವಾದಶ ಕಂಬವು ಅರ್ಕ ರಶ್ಮಿಯ ತರ್ಕವು
ಕಾಶ್ಯಪ ವಿಭಾಂಡಕ ಮಲಹಾನಿಕರೇಶ್ವರ ಲಿಂಗೈಕ್ಯನು|
ಹಸಿರಿನ ವನಸಿರಿ ಮುನಿಗಳ ತಪಸಿರಿ ಸಹ್ಯಾದ್ರಿಯ ತಪ್ಪಲು
ಷಣ್ಮತ ಸ್ಥಾಪನಾಚಾರ್ಯನ ವಾದವ ಆರ್ಯಖಂಡವೊಪ್ಪಲು||

ಅಭಿನವ ಶಂಕರ ವಿದ್ಯಾರಣ್ಯ ಸನಾತನ ವಿಜಯದ ನಗರವು
ಹಸಿವು ನಿದ್ದೆಯ ಗೆದ್ದ ನೃಸಿಂಹ ಚಂದ್ರಶೇಖರ ಅವಧೂತರು|
ಸಪ್ತಲೋಕಚರಿತ ರಥ ರೂಪ ವಿದ್ಯಾಶಂಕರ ಮಂದಿರ
ಸಾಮಗಾನ ಪ್ರಿಯೆ ರಾಗ ರಾಣಿ ಮಾತಂಗಿಯ ಮೂರ್ತಿ ಸುಂದರ||

ಹಸಿರ ಸಿರಿಯು ಮನಕೆ ಮುದವು ಋಷ್ಯಶೃಂಗ ಪುರಿಯು
ಋಗ್ವೇದ ಅದ್ವೈತ ಸಂಸ್ಕೃತ ಸನಾತನ ಸಂಸ್ಕೃತಿ ಸಿರಿಯು|
ತುಂಗಾ ಸುಧೆಯು ಭಕ್ತಿ ಪ್ರಭೆಯು ಮಂಜುಳ ವೇದ ಘೋಷ
ಸಂಸ್ಕೃತಿ ಸಾಹಿತ್ಯ ಪೋಷಕ ಪ್ರಕ್ರಿಯೆ ಶೃಂಗಪುರಿಯ ವಿಶೇಷ||

2 ಕಾಮೆಂಟ್‌ಗಳು: