ರುಧಿರ ತರ್ಪಣ-ಮಾತೃಪೂಜನಾ: ಭಾಗ-೪:
ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು
ರಾಸುದಾ ಬೆನ್ನ ಹಿಂದೆ ಅವರಿಗರಿಯದಂತೆ
ಷಡ್ಯಂತ್ರವೊಂದು ನಡೆದಿತ್ತು. ಅವರ ಗುಂಪಿನಲ್ಲಿದ್ದ ಕೃಪಾಲ್
ಸಿಂಗ್ ಮತ್ತು ನವಾಬ್ ಖಾನ್
ಬ್ರಿಟಿಷರ ಒಲವು ಗಳಿಸಲು ಸಂಗ್ರಾಮದ
ಎಲ್ಲಾ ವಿಚಾರ ಅರುಹಿದರು. ಒಂದು
ದಿನ ಸಭೆ ನಡೆಸುತ್ತಿದ್ದಾಗ ಕೃಪಾಲ್
ಪೊಲೀಸರಿಗೆ ಮಾಹಿತಿ ಒದಗಿಸಿದ. ಕೃಪಾಲನ
ವರ್ತನೆ ಕಂಡು ಅನುಮಾನಗೊಂಡ ರಾಸುದಾ
ತಮ್ಮ ಯೋಜನೆ ಬದಲಾಯಿಸಿದರು. ಕೃಪಾಲನ
ಮಾಹಿತಿ ಆಧರಿಸಿ ಬಂದ ಪೊಲೀಸರು
ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಇತ್ತ ಕೃಪಾಲನ ಮಾಹಿತಿ
ಆಧರಿಸಿ ಪೊಲೀಸರು ಬಂಡಾಯವೇಳಲು ಸಿದ್ಧವಾಗಿದ್ದ
ತುಕಡಿಗಳನ್ನು ನಿಶ್ಯಸ್ತ್ರೀಕರಣಗೊಳಿಸಿದರು. ಅನೇಕ ಕಡೆ ಕ್ರಾಂತಿಕಾರಿ
ಸೈನಿಕರು ತಿರುಗಿಬಿದ್ದರು. ಫಿರೋಜ್ ಪುರದಲ್ಲಿ ಬ್ರಿಟಿಷರಿಗೂ
ಕ್ರಾಂತಿಕಾರಿ ಸೈನಿಕರಿಗೂ ಸಮರವೇ ನಡೆದು ಹೋಯಿತು.
ಸರಕಾರಿ ಸೈನ್ಯ ಮೆಷಿನ್ ಗನ್
ಬಳಸಿ ೫೦ ಯೋಧರನ್ನು ಸಾಯಿಸಿತು.
ಲಾಹೋರ್ ಸುತ್ತುವರಿದ ಪೊಲೀಸರು ರಾಸುದಾಗಾಗಿ ಶೋಧಿಸಿದರು.
ರಾಸುದಾ ಸಿಗದಿದ್ದರೂ ಕ್ರಾಂತಿಕಾರಿಗಳ ಎಲ್ಲಾ ಶಸ್ತ್ರ, ಸಲಕರಣೆಗಳು,
ಬಾಂಬುಗಳು, ಸಾಹಿತ್ಯ, ಧ್ವಜಗಳು, ಬಾಂಬು ಉತ್ಪಾದಿಸುವ ಸಲಕರಣೆಗಳು,
ವಿಷ್ಣು ಪಿಂಗಳೆ ತಂದಿದ್ದ ದೊಡ್ಡ
ಪ್ಲಟೂನನ್ನೇ ನಾಶಪಡಿಸಬಹುದಾದ ಬೃಹತ್ ಬಾಂಬುಗಳು ಪೊಲೀಸರಿಗೆ
ಸಿಕ್ಕಿದವು. ಪಂಜಾಬಿನ ಸಮಚಾರ ತಿಳಿದ
ಬಂಗಾಳಿ ಕ್ರಾಂತಿವೀರರು ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರ ತಳೆದರು.
ತನ್ನ ಪ್ರಯತ್ನ ನೀರಿನ
ಮೇಲಣ ಹೋಮದಂತಾದುದನ್ನು ಕಂಡ ರಾಸುದಾ ಕಾಶಿಗೆ
ಬಂದರು. ಆದರೆ ಅದು ಬಾಣಲೆಯಿಂದ
ಬೆಂಕಿಗೆ ಬಿದ್ದಂತಾಯಿತು. ಪೊಲೀಸರ ಬಲವಾದ ವ್ಯೂಹದ
ಮಧ್ಯೆಯೇ ರಾಸುದಾ ಸ್ವಾಮಿ ವಿದ್ಯಾನಂದರ
ಗಿಧೋರಿಯಾ ಮಠದಲ್ಲಿ ಆಶ್ರಯ ಪಡೆದರು.
ಸ್ವಾಮಿ ವಿದ್ಯಾನಂದರ ಪೂರ್ವಾಶ್ರಮದ ಹೆಸರು ಮಾನವೇಂದ್ರ ಚಟರ್ಜಿ.
ಆತ "ಸಂಧ್ಯಾ" ಎಂಬ ಕ್ರಾಂತಿ ಪತ್ರಿಕೆಯ
ವ್ಯವಸ್ಥಾಪಕರಾಗಿದ್ದರು.
ರಾಸುದಾ ತನ್ನ ಸಹಕಾರಿಗಳನ್ನು ಭೇಟಿಯಾಗಲು
ದಶಾಶ್ವಮೇಧ್, ಹನುಮಾನ್ ಘಾಟ್ ಗಳನ್ನು
ಬಳಸುತ್ತಿದ್ದರು. ದಿನಕ್ಕೊಂದು ವೇಷ ಧರಿಸುತ್ತಿದ್ದ ರಾಸುದಾರನ್ನು
ಪತ್ತೆ ಹಚ್ಚುವುದೇ ಅವರ ಸಹಕಾರಿಗಳಿಗೆ ದೊಡ್ದ
ಸಮಸ್ಯೆಯಾಗುತ್ತಿತ್ತು. ಇತ್ತ ಮೀರತಿನಲ್ಲಿ ಬಂಡಾಯವೆಬ್ಬಿಸಲು
ಹೋಗಿದ್ದ ವಿಷ್ಣು ಪಿಂಗಳೆ ನಾದಿರ
ಖಾನನೆಂಬ ದ್ರೋಹಿಯಿಂದಾಗಿ ಸಿಕ್ಕಿ ಬಿದ್ದ. ಹೀಗೆ
ರಾಸುದಾ ಆಪ್ತರಾದ ಆಮೀರ್ ಚಾಂದ್,
ಹನುಮಂತ ಸಹಾಯ್, ಅವಧ್ ಬಿಹಾರಿ,
ಬಾಲಮುಕುಂದ್, ಕರ್ತಾರ್ ಸಿಂಗ್ ಸರಾಬ್,....ವಿಷ್ಣು ಪಿಂಗಳೆ ಎಲ್ಲರೂ
ಸಿಕ್ಕಿಬಿದ್ದರು.
ಪೊಲೀಸರು ಬರುವ ಸೂಚನೆಯರಿತ ರಾಸುದಾ
ಶಚೀಂದ್ರನೊಂದಿಗೆ ಕಲಕತ್ತೆಗೆ ತೆರಳುವ ಯೋಜನೆ ಹಾಕಿಕೊಂಡರು.
ಆದರೆ ಸಿದ್ಧತೆ ಮಾಡುತ್ತಿದ್ದಂತೆ ಪೊಲೀಸರು
ಮನೆ ಮನೆ ತಪಾಸಣೆ ಮಾಡುತ್ತಾ
ಬರುತ್ತಿರುವುದು ಕಂಡಿತು. ಸ್ವಲ್ಪ ಹೊತ್ತಿನಲ್ಲೇ
ಪೊಲೀಸರ ಎದುರೇ ಇಬ್ಬರು ಸ್ತ್ರೀಯರು
ಪೂಜಾ ಸಾಮಗ್ರಿ ಹಿಡಿದುಕೊಂಡು ದೇವಸ್ಥಾನಕ್ಕೆ
ಹೊರಟರು! ಇತ್ತ ಶಚೀನ್ ಹಾಗೂ
ನಳಿನಿ ಮೋಹನ್ ತಮ್ಮ ನಾಯಕನೇಕೆ
ಇನ್ನೂ ಬಂದಿಲ್ಲ ಎಂದು ಚಡಪಡಿಸುತ್ತಿದ್ದರೆ
ಸುಂದರ ಸ್ತ್ರೀಯೊಬ್ಬಳು ಅವರೆದುರು ಪ್ರತ್ಯಕ್ಷಳಾದಳು. ಪರೀಕ್ಷಿಸಿದ ಅವರಿಬ್ಬರಿಗೂ ನಗು ತಡೆಯಲಾಗಲಿಲ್ಲ. ಮಿತ್ರನ
ಹೆಂಡತಿಯಿಂದ ಸೀರೆ ಪಡೆದ ರಾಸುದಾ
ನವ ಯುವತಿಯಂತೆ ಅಲಂಕರಿಸಿಕೊಂಡು ದೇವಾಸ್ಥಾನಕ್ಕೆ ಬಂದಿದ್ದರು!
ಚಂದನ್ ನಗರ ತಲುಪುತ್ತಿದ್ದಂತೆ ರಾಸುದಾ
ಆಪ್ತ ಶಿರೀಷ್ ಚಂದ್ರ ಹೌರಾದಲ್ಲಿ
ಬಂಧಿತನಾದ ಆಘಾತಕಾರಿ ಸುದ್ದಿ ತಿಳಿಯಿತು. ಈಗ
ತನ್ನ ಮುಂದಿನ ನಡೆಯನ್ನು ನಿಶ್ಚಯಗೊಳಿಸಿದ ರಾಸುದಾ
ಇಲ್ಲಿದ್ದು ಅಡಗಿಕೊಂಡು ಸುಮ್ಮನೇ ಕೂರುವುದು ವ್ಯರ್ಥವೆಂದು
ತಾನು ಜಪಾನಿಗೆ ತೆರಳಿ ಸಂಘಟನೆಯನ್ನೂ,
ಶಸ್ತ್ರ ಸರಬರಾಜು ಮಾಡುವುದಾಗಿಯೂ, ಕ್ರಾಂತಿವೀರರೆಲ್ಲಾ
ಜತೀನನ ನೇತೃತ್ವದಲ್ಲಿ ಕ್ರಾಂತಿ ಕಾರ್ಯ ಮುಂದುವರೆಸಬೇಕೆಂದು
ತನ್ನ ಸಂಗಡಿಗರ ಸಭೆ ಕರೆದು
ತನ್ನ ಮನಸ್ಸಿನ ಅಭಿಮತ ವಿಶದ
ಪಡಿಸಿದರು.
ಹುಲಿ ಹಾರಿತು
ರಾಸುದಾಗೆ ಕಲ್ಕತ್ತೆ ಕೂಡಾ ಅಪಾಯವಾಗುವ ಲಕ್ಷಣ
ಗೋಚರಿಸಿದ ಕೂಡಲೇ ನವದ್ವೀಪಕ್ಕೆ ತನ್ನ
ವಾಸ್ತವ್ಯ ಬದಲಾಯಿಸಿದರು. ಅಲ್ಲಿ ಭಟ್ಟಾಚಾರ್ಯ ಬ್ರಾಹ್ಮಣರಂತೆ
ವೇಷ ಮರೆಸಿದರು. ಎಷ್ಟೆಂದರೆ ಪೊಲೀಸರು ಅನುಮಾನವಿಲ್ಲದೇ ಆಶೀರ್ವಾದ
ಬೇಡುವಷ್ಟು! ರಾಸುದಾ ಜಪಾನ್ ಸೇರುವ
ಉಪಾಯ ಯೋಚಿಸಲಾರಂಭಿಸಿದರು. ಆಗಷ್ಟೇ ರವೀಂದ್ರನಾಥ ಟ್ಯಾಗೋರರ
ನೇತೃತ್ವದಲ್ಲಿ ಸಾಂಸ್ಕೃತಿಕ ನಿಯೋಗವೊಂದು ಜಪಾನಿಗೆ ತೆರಳುವ ತಯಾರಿಯಲ್ಲಿರುವುದು
ತಿಳಿಯಿತು. ರಾಸುದಾ ತಾನು ಪ್ರಿಯನಾಥ
ಟ್ಯಾಗೋರ್ ಎಂಬ ಹೆಸರಿಟ್ಟುಕೊಂದು ತಾನು
ಆ ನಿಯೋಗದ ಸಂಚಾಲಕನಂತೆ
ನಟಿಸಲಾರಂಭಿಸಿದರು. ಅದೇ ಹೆಸರಿನಲ್ಲಿ ಪಾಸ
ಪೋರ್ಟಿಗೆ ಅರ್ಜಿ ಹಾಕಿದ ಆತ
ಪೊಲೀಸರು ತನಗಾಗಿ ಕಣ್ಣಿಗೆ ಎಣ್ಣೆ
ಹಚ್ಚಿ ಹುಡುಕಾಟ ನಡೆಸಿದ್ದರೂ ತಾನೇ
ಪೊಲೀಸ್ ಕಮೀಷನರ್ ಕಛೇರಿಗೆ ತೆರಳಿ
ಅವನ ಕೈಯಿಂದಲೇ ಐಡೆಂಟಿಟಿ ಕಾರ್ಡು ಪಡೆದು ಹಸ್ತಲಾಘವ
ಮಾಡಿ ಹೊರಬಂದಿದ್ದರು!
"ನಿಪ್ಪಾನ್
ಯುಸೆನ್" ಎಂಬ ಹಡಗು ಕಂಪೆನಿಯ
'ಸನುಕಿಮಾರು' ಎಂಬ ಹಡಗಿನಲ್ಲಿ ಸಾಮಾನ್ಯ
ದರ್ಜೆಯ ಟಿಕೇಟು ಖರೀದಿಸಿದ ರಾಸುದಾ
ಜಪಾನಿಗೆ ಹಾರುವ ಸಿದ್ಧತೆಯಲ್ಲಿದ್ದರೆ ಅತ್ತ
ಅವರ ಜೊತೆಗಾರರು ಒಬ್ಬೊಬ್ಬರಾಗಿ ಗಲ್ಲಿಗೇರಲು ಸಿದ್ಧವಾಗುತ್ತಿದ್ದ ದಾರುಣವಾರ್ತೆ ಕಿವಿಗಪ್ಪಳಿಸಿ ದುಃಖತಪ್ತರಾಗಿ ಮೌನವಾಗಿ ಕುಸಿದು ಕುಳಿತು
ಬಿಡುತ್ತಿದ್ದರು. ತನ್ನ ಆತ್ಮೀಯರನ್ನೆಲ್ಲಾ ಕಳೆದುಕೊಂಡ
ರಾಸುದಾ ತನ್ನ ತಾಯ್ನೆಲದಿಂದಲೂ ಶಾಶ್ವತವಾಗಿ
ದೂರ ಹೋಗುವಂತಹ ದುರ್ಭರ ಕ್ಷಣ ಅದೆಂದು
ಅವರೆಂದಾದರೂ ಎಣಿಸಿದ್ದರೆ? ತನ್ನ ಪ್ರಾಣಪ್ರಿಯ ಪಿಸ್ತೂಲನ್ನು
ಪ್ರಾಣಪ್ರಿಯ ಸ್ನೇಹಿತ ಶಚೀಂದ್ರನಿಗೆ ನೀಡಿದಾಗ
ತನ್ನ ದೇಹದ ಮುಖ್ಯ ಭಾಗವೊಂದನ್ನು
ಕಳೆದುಕೊಂಡ ಅನುಭವ ರಾಸುದಾಗಾಗಿತ್ತು. ಪ್ರಾಣಪ್ರಿಯ
ನಾಯಕನ ಅಗಲುವಿಕೆಯನ್ನು ಭಾರ ಕಂಗಳಿಂದ ಶಚೀನ್
ನೋಡುತ್ತಿರಲು ಮತ್ತೆಂದೂ ತಾಯಿನಾಡಿನ ಕಡೆ ಬರಲಾಗದೇ ಜಪಾನಿನ
ನೆಲದ ಮೇಲೆ ನಿಂತು ಭಾರತದ
ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಆಯಾಮ ನೀಡಲು
ಹೊರಟಿದ್ದ ಮಹಾಯೋಧನನ್ನು ಸಾಗಿಸಿಕೊಂಡು 'ಸನುಕಿಮಾರು' ಹೋಗುತ್ತಿತ್ತು.
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್:
೧೯೧೫ ಮೇ ೧೨ರಂದು ಹೊರಟ
ರಾಸುದಾ ಜೂನ್ ೧೫ರಂದು ಜಪಾನ್
ತಲುಪಿದರು. ಜರ್ಮನಿಯ ರಾಯಭಾರಿಯೊಂದಿಗೆ ಮಾತುಕತೆ
ನಡೆಸಿದ ರಾಸುದಾ ಶಸ್ತ್ರ ಸಹಾಯದ
ಬೇಡಿಕೆ ಮುಂದಿಟ್ಟರು. ಇಬ್ಬರು ಚೀನಿಯರೊಂದಿಗೆ ಕಳುಹಿಸಿದ
ಆ ೧೨೯ ಪಿಸ್ತೂಲುಗಳು,
೧೨ಸಾವಿರ ಸುತ್ತು ಗುಂಡುಗಳು ಷಾಂಗೈ
ಪೊಲೀಸರ ವಶವಾದವು. ತನ್ನ ಸಹಕಾರಿ ಅಬನಿನಾಥನನ್ನು
ತನ್ನ ಯೋಜನೆಯ ಬಗ್ಗೆ ತಿಳಿಸಲು
ಭಾರತಕ್ಕೆ ಕಳುಹಿಸಿದರೆ ಆತನನ್ನು ಸಿಂಗಾಪುರದಲ್ಲಿ ೧೯೧೫
ಸೆಪ್ಟೆಂಬರಿನಲ್ಲಿ ಬಂಧಿಸಿದೊಡನೆ ರಾಸುದಾ ಯೋಜನೆಗಳು ಪೊಲೀಸರಿಗೆ
ತಿಳಿದು ಹೋಯಿತು. ಆದರು ಛಲ
ಬಿಡದ ತ್ರಿವಿಕ್ರಮನಂತೆ ಜರ್ಮನ್ ರಾಯಭಾರಿಯ ಬೆನ್ನ
ಹಿಂದೆ ಬೇತಾಳನಂತೆ ಬಿದ್ದ ರಾಸುದಾ ಎರಡು
ಹಡಗು ತುಂಬಾ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು
ಕಳುಹಿಸುವ ವ್ಯವಸ್ಥೆ ಮಾಡಿದರು. ಆದರೆ ಅದೂ ಬ್ರಿಟಿಷರಿಗೆ
ತಿಳಿದು ಅವನ್ನು ಮುಟ್ಟುಗೋಲು ಹಾಕಿಕೊಂಡರು.
ಲಾಲಾ ಲಜಪತ್ ರಾಯ್ ಜಪಾನಿಗೆ
ಬಂದಾಗ ರಾಸುದಾ ಹೇರಂಭಗುಪ್ತನೊಡನೆ ಸೇರಿಕೊಂಡು
ಒಂದು ಬಹಿರಂಗ ಸಭೆ ಏರ್ಪಡಿಸಿ
ಜಪಾನಿನಲ್ಲಿ ನೆಲೆಸಿರುವ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಹಕರಿಸಬೇಕೆಂದು ಕರೆ ಕೊಟ್ಟರು. ಬ್ರಿಟಿಷರ
ವಿರುದ್ಧ ಬಹಿರಂಗವಾಗಿಯೇ ಗುಡುಗಿದ ರಾಸುದಾ, ಲಾಲ್
ಹಾಗೂ ಹೇರಂಭಗುಪ್ತರನ್ನು ಗಡೀಪಾರು ಮಾಡುವಂತೆ ಬ್ರಿಟಿಷ್
ಸರಕಾರ ಜಪಾನಿಗೆ ತಾಕೀತು ಮಾಡಿತು.
ಲಾಲ್ ಅಮೇರಿಕಾಕ್ಕೆ ಹೋದರೆ ರಾಸುದಾ ಜಪಾನಿನಲ್ಲೇ
ಉಳಿದರು. ಬ್ರಿಟಿಷ್ ಸರಕಾರ ೫ ದಿವಸದೊಳಗೆ
ರಾಸುದಾರನ್ನು ಬಂಧಿಸಬೇಕೆಂದು ತನ್ನ ಕೊನೆಯ ನಿರ್ಧಾರವನ್ನು
ಜಪಾನಿಗೆ ತಿಳಿಸಿತು. ಬೆದರಿದ ಜಪಾನ್ ಬಂಧನದ
ವಾರಂಟ್ ಹೊರಡಿಸಿತು. ರಾಸುದಾ ಭೂಗತರಾದರು. ಆದರೆ
ಜಪಾನೀಯರ ಮಧ್ಯೆ ಭಾರತೀಯನೊಬ್ಬ ಭೂಗತನಾಗುವುದು
ಅಷ್ಟು ಸುಲಭದ ಮಾತಲ್ಲ.
ಒಂದು ದಿನ ರಾಸುದಾ ಹಾಗೂ
ಹೇರಂಭಗುಪ್ತ ಟೋಕಿಯೋ ರಸ್ತೆಯಲ್ಲಿ ನಡೆಯುತ್ತಿದ್ದಾಗ
ಪೊಲೀಸರ ಕಣ್ಣಿಗೆ ಬಿದ್ದರು. ಇನ್ನೇನು
ಪೊಲಿಸರು ಅವರನ್ನು ಬಂಧಿಸ ಬೇಕೆನ್ನುವಷ್ಟರಲ್ಲಿ
ಕಾರೊಂದು ಭರ್ರನೆ ಬಂದು ಅವರನ್ನು
ಹತ್ತಿಸಿಕೊಂಡು ಹೋಯಿತು. ಮತ್ತೆ ಅದು
ನಿಂತದ್ದು ಜಪಾನಿನ ಸಮುರಾಯ್ ಯೋಧರ
ನಾಯಕ ತೊಯಾಮ ಮನೆಯಲ್ಲಿ. ಅವರ
ಬಳಿ ಸುಳಿಯಲು ಅಧಿಕಾರಿಗಳಿಗ್ಯಾರಿಗೂ ಧೈರ್ಯವಿರಲಿಲ್ಲ.
ಜಪಾನಿನ ಜನರ ಪ್ರೀತಿ, ಆದರ,
ಗೌರವಗಳಿಗೆ ಪಾತ್ರನಾಗಿದ್ದ ಆ ವ್ಯಕ್ತಿಗೆ ಭಗವಾನ
ಬುದ್ಧನ ಜನ್ಮಭೂಮಿಯಾಗಿದ್ದ ಭರತ ಖಂಡವೆಂದರೆ ಅತೀವ
ಪ್ರೀತಿ, ಪೂಜ್ಯ ಭಾವ. ಭಾರತದ
ಸ್ವಾತಂತ್ರ್ಯ ಹೋರಾಟಗಾರರೆಡೆಗೆ ಅಪಾರ ಸಹಾನುಭೂತಿ. ರಾಸುದಾ
ಹಾಗೂ ಹೇರಂಭರ ಚಪ್ಪಲಿ ಕಾಯುತ್ತಾ
ನಿಂತಿದ್ದ ಪೊಲೀಸರಿಗೆ ಅವರಿಬ್ಬರು ಜಪಾನೀಯರ ಕಿಮೊನೋ ಉಡುಪು
ಧರಿಸಿ ತಮ್ಮ ಮುಂದೆಯೇ ಹಾದು
ಹೋದದ್ದು ತಿಳಿಯಲೇ ಇಲ್ಲ. ರಾಸುದಾ
ಗೆ ಐಸೋಸೋಮಾ ದಂಪತಿಗಳು ಆಶ್ರಯ
ಒದಗಿಸಿದರು. ೪ ತಿಂಗಳಲ್ಲಿ ತೊಯಾಮಾ
ಪ್ರಯತ್ನದಿಂದ ಸರಕಾರ ವಾರಂಟ್ ಹಿಂದಕ್ಕೆ
ಪಡೆಯಿತು.
ಆದರೆ ಕ್ರೂರಿ ಬ್ರಿಟಿಷ್ ಸರಕಾರ
ಸುಮ್ಮನಿರಬೇಕಲ್ಲ. ರಾಸುದಾರನ್ನು ಮುಗಿಸಿ ಹಾಕಲು ಜಪಾನಿ
ಗೂಂಡಾಗಳನ್ನು ನೇಮಿಸಿತು. ಆದರೆ ಚಾಣಾಕ್ಷ ರಾಸುದಾ
ಗುಪ್ತಚರರ ಕಣ್ಣುಗಳಿಂದಲೂ ಮಾಯವಾಗಿ ಬಿಡುತ್ತಿದ್ದರು. ಕೊನೆಗೇ
ತೊಯಾಮಾ ರಾಸುದಾಗೆ ಸಂಪೂರ್ಣ ರಕ್ಷಣೆ ಸಿಗಬೇಕಾದರೆ
ರಾಸುದಾ ಜಪಾನ್ ಪ್ರಜೆಯಾಗುವುದೇ ಸೂಕ್ತ
ಎಂದು ಸೂಚಿಸಿದರು. ಅದಕ್ಕೆ ಜಪಾನೀ ಯುವತಿಯನ್ನು
ಮದುವೆಯಾಗುವುದೊಂದೇ ದಾರಿ. ಆದರೆ ಹೆಣ್ಣು
ಕೊಡುವವರ್ಯಾರು? ಆಗ ಸೋಮಾ ದಂಪತಿಗಳು
ತಮ್ಮ ಸಂಪ್ರದಾಯಕ್ಕೆ ವಿರುದ್ಧವಾದರೂ ರಾಸುದಾ ರಕ್ಷಣೆಗಾಗಿ ತಮ್ಮ
ಮಗಳು ತೋಷಿಕೋಳನ್ನು ೧೯೧೮ರಲ್ಲಿ ಮದುವೆ ಮಾಡಿಸಿದರು. ಆದರೂ
ಹಾದಿ ಸುಗಮವಾಗಲಿಲ್ಲ. ಗೂಢಚಾರರಿಂದಾಗಿ ವಾರಕ್ಕೊಮ್ಮೆ ಮನೆ ಬದಲಾಯಿಸಬೇಕಾದ ಪರಿಸ್ಥಿತಿ.
ಹೀಗೆ ೫ ವರ್ಷದ ತರುವಾಯ
ಜಪಾನೀ ಪೌರತ್ವ ಸಿಕ್ಕಿತು.
೧೯೨೪ರಲ್ಲಿ ರಾಸುದಾ "ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್"
ಹುಟ್ಟು ಹಾಕಿದರು. ಟೋಕಿಯೋ ಅದರ ಕೇಂದ್ರ
ಬಿಂದು. ಸ್ವಾತಂತ್ರ್ಯ ಸಾಧನೆಯ ಸಲುವಾಗಿ ಅದರ
ಚಟುವಟಿಕೆಗಳು ನಿರಂತರವಾಗಿ ಸಾಗಿದವು. ಸುಭಾಷ್ ಜಪಾನಿಗೆ ಬಂದಿಳಿದಾಗ
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಹೆಮ್ಮರವಾಗಿ ಬೆಳೆದಿತ್ತು.
ಸ್ವಾತಂತ್ರ್ಯ ವೀರ ಸಾವರ್ಕರರ ಸಲಹೆಯಂತೆ
ವಿದೇಶದಿಂದ ಹೋರಾಟ ನಡೆಸಲು ಬರುತ್ತಿದ್ದ
ಸುಭಾಷರಿಗೆ ರಾಸುದಾ ಜಪಾನಿನಲ್ಲಿ ಎಲ್ಲಾ
ಸಿದ್ಧಗೊಂಡಿರುವುದಾಗಿಯೂ ಜರ್ಮನಿ, ಇಟಲಿಗಳಲ್ಲಿ ಶಸ್ತ್ರ
ಸಹಾಯ ಪಡೆದು ಬರುವಂತೆ ಸಂದೇಶ
ಕಳುಹಿಸಿದರು. ಅಷ್ಟರಲ್ಲೇ ರಾಸುದಾ ಬಯಸಿದ್ದ ಭಾಗ್ಯ
ಬಂದೇ ಬಿಟ್ಟಿತು. ಯಾವ ಮೊದಲ ಮಹಾಯುದ್ಧದ
ಕಾಲದಲ್ಲಿ (೧೯೧೪) ಭಾರತದ ಸ್ವಾತಂತ್ರ್ಯ
ಸಂಗ್ರಾಮದ ಸಲುವಾಗಿ ವಿದೇಶಗಳ ಸಹಾಯ
ಪಡೆಯಲು ಆರಂಭಿಸಿದ್ದರೋ ಅಂತಹ ಪ್ರಯತ್ನಕ್ಕೆ ೨೮
ವರ್ಷಗಳ ತರುವಾಯ ದ್ವಿತೀಯ ಮಹಾಯುದ್ಧ
ಅವಕಾಶ ಹಾಗೂ ಫಲ ಒದಗಿಸಿತ್ತು.
ಈ ನಡುವೆ ರಾಸುದಾ
ಆರೋಗ್ಯ ಕೆಟ್ಟಿತು. ೧೯೪೩ರ ಜುಲೈ ೪ರಂದು
ಸಿಂಗಾಪುರದ ಸಾರ್ವಜನಿಕ ಸಮಾರಂಭದಲ್ಲಿ ತನ್ನ ಇಂಡಿಯನ್ ಇಂಡಿಪೆಂಡೆನ್ಸ್
ಲೀಗನ್ನು ಸುಭಾಷರಿಗೊಪ್ಪಿಸಿ ಅವರನ್ನು ಅದರ ಹಾಗೂ
ಮಹಾಸಂಗ್ರಾಮದ ಮಹಾನಾಯಕರನ್ನಾಗಿಸಿ ತಾವು ನೇಪಥ್ಯಕ್ಕೆ ಸರಿದು
ಅಮರರಾದರು.
ಧನ್ಯ ನೀ ರಾಸುದಾ
!
ಜನನೀ ಜನ್ಮ ಭೂಮಿಶ್ಚ ಸ್ವಾರ್ಗಾದಪಿ
ಗರೀಯಸೀ
ಆಧಾರ:
"ರುಧಿರಾಭಿಷೇಕ"-ಶ್ರೀ ಬಾಬು ಕೃಷ್ಣಮೂರ್ತಿ
"ವಿಪ್ಲವ ನಾಯಕ ರಾಸ
ಬಿಹಾರಿ ಬಸು" - ತಿರುಮಲೆ ರಂಗಾಚಾರ್ಯ
" ಮೈ ನೇ ಭಾರತ್
ವರ್ಷ ಕ್ಯೋಂ ಛೋಡಾ?"- ರಾಸ್
ಬಿಹಾರಿ ಬೋಸ್(ಆತ್ಮ ಕಥನ)
ಮನದಾಳದ ಮಾತು:
ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ, ಅಪಾರ ಬುದ್ಧಿಮತ್ತೆಯಿದ್ದರೂ ಅವೆಲ್ಲವನ್ನೂ
ಬಿಟ್ಟು ಮಾತೃಭೂಮಿಗಾಗಿ ತನ್ನ ಸರ್ವಸ್ವವನ್ನೂ ಬಳಸಿ,
ನಾನಾ ವೇಷಗಳನ್ನು ಮಾಡಿಕೊಂಡು ಬ್ರಿಟಿಷರ ಕೈಗೆ ಒಮ್ಮೆಯೂ ಸಿಗದೇ
ಸ್ವತಂತ್ರನಾಗಿ ಬಾಳಿ, ಮಹಾಸಂಗ್ರಾಮಕ್ಕೆ ಸಿದ್ಧತೆ
ಮಾಡಿ, ಅನೇಕ ವೈಫಲ್ಯಗಳಾದರೂ ಧೃತಿಗೆಡದೇ
ಸಾಯುವ ತನಕ ಬ್ರಿಟಿಷರನ್ನು ಕಾಡಿದ
ಅಮರ ಮೂರ್ತಿ ರಾಸುದಾಗೆ ಸಾಷ್ಟಾಂಗ
ಪ್ರಣಾಮಗಳು.
ಒಬ್ಬ ಬೋಸ್ ಮೊದಲ ಸಂಗ್ರಾಮದಲ್ಲಿ
ಸಿದ್ಧತೆ ಮಾಡಿ ವೈಫಲ್ಯ ಅನುಭವಿಸಿದರೂ
ಅದರ ಫಲವನ್ನು ಎರಡನೇ ಮಹಾಯುದ್ಧದವರೆಗೆ
ಒಯ್ದು ಅದನ್ನು ಇನ್ನೊಬ್ಬ ಬೋಸ್
ಯಶಸ್ವಿಗೊಳಿಸುವಂತೆ ಪ್ರೇರೇಪಿಸಿದನಲ್ಲಾ! ಆ ಬೋಸ್ ದ್ವಯರಿಗೆ
ಪ್ರಣಾಮಗಳು.
ಇವರಿಬ್ಬರನ್ನೂ
ಮಾತ್ರವಲ್ಲದೇ ಅಸಂಖ್ಯ ಕ್ರಾಂತಿವೀರರನ್ನು ಪ್ರೋತ್ಸಾಹಿಸಿದ
ತನ್ನ ತನು, ಮನ, ಮನೆ,
ಪರಿವಾರ, ಬಂಧು, ಬಳಗ, ಸ್ನೇಹಿತ
ವರ್ಗ ಮಾತ್ರವಲ್ಲ ತನ್ನ ಸಂಪರ್ಕದಲ್ಲಿ ಬಂದ
ಎಲ್ಲರನ್ನೂ ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸನ್ನಾಗಿಸಿದ ನನ್ನ ಆರಾಧ್ಯ ಮೂರ್ತಿ
ಅಪ್ರತಿಮ ದೇಶಭಕ್ತ, ವೀರ ಶಿವಾಜಿಯ ಅಪರಾವತಾರ
ಸ್ವಾತಂತ್ರ್ಯ ವೀರ ಸಾವರ್ಕರರಿಗೆ ಪ್ರಣಾಮಗಳು.
ಯಾಕೆ ಬರೆದೆ?
೧. ಇತಿಹಾಸದ ಈ ನಾಯಕ
ಡೋಂಗಿ ನಾಯಕರ ಡೋಂಗಿ ಚರಿತ್ರೆಗಳ
ಮಧ್ಯೆ ಮರೆಯಾಗಿ ಹೋಗಬಾರದೆಂದು
೨. ವಿಫಲಗೊಂಡರೂ ಸೋಲರಿಯದ, ಯುದ್ಧ ನಡೆಸಿಯೂ ಸಿಕ್ಕಿಬೀಳದ
ಕೊನೆಯವರೆಗೂ ಸ್ವತಂತ್ರನಾಗುಳಿದು ಮಹಾಸಂಗ್ರಾಮಕ್ಕೆ ಸಲಕರಣೆಗಳೆಲ್ಲವನ್ನೂ ಒದಗಿಸಿದ ರಾಸುದಾ ಜೀವನ
ಪ್ರತಿಯೊಬ್ಬ ಹಿಂದೂವು ಅನುಸರಿಸಬೇಕಾದ ನೀತಿಯೆಂದು
ವಂದೇ ಮಾತರಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ