ಪುಟಗಳು

ಶನಿವಾರ, ಮಾರ್ಚ್ 16, 2013

ರುಧಿರ ತರ್ಪಣ-ಮಾತೃಪೂಜನಾ: ಭಾಗ-೩



ರುಧಿರ ತರ್ಪಣ-ಮಾತೃಪೂಜನಾ: ಭಾಗ-:

ದಿನಕ್ಕೊಂದು ವೇಶ ರಾಸುದಾ ಸಶೇಷ
                ಬಸಂತ್ ಕಲ್ಕತ್ತೆಗೆ ಪಲಾಯನ ಮಾಡಿದರೆ, ರಾಸುದಾ ಡೆಹ್ರಾಡೂನಿಗೆ ಪರಾರಿ. ರಾಸುದಾ ಚಮತ್ಕಾರ ನೋಡಿ. ತನ್ನ ಅರಣ್ಯ ಸಂಶೋಧನಾ ಇಲಾಖೆಯ ನೌಕರರನ್ನೆಲ್ಲಾ ಸೇರಿಸಿ ಬಹಿರಂಗ ಸಭೆಯಲ್ಲಿ ಲಾರ್ಡ್ ಹಾರ್ಡಿಂಗನ ಮೇಲೆ ಆದ ಬಾಂಬು ದಾಳಿಯನ್ನು ಖಂಡಿಸಿದರು. ಇದನ್ನು ಆಂಗ್ಲ ಭಕ್ತರು ಮಾತ್ರವಲ್ಲದೆ ಪೊಲೀಸರು ಕೂಡಾ ಎಷ್ಟು ನಂಬಿದರೆಂದರೆ ರಾಸುದಾ ಸ್ವಯಂ ವೈಸ್ರಾಯ್ ಹಾರ್ಡಿಂಗನ ದರ್ಶನ ಮಾಡಿ ಶೀಘ್ರ ಗುಣಮುಖವಾಗಲೆಂದು ಹಾರೈಸಿ ಬಂದರು. ಮತ್ತೊಮ್ಮೆ ಡೆಹರಾಡೂನಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಕೆಲವು ಜನರನ್ನು ಕಟ್ಟಿಕೊಂಡು ಕೈ ಬೀಸಿ ಹಸ್ತಲಾಘವ ಕೊಟ್ಟು ಹೋದರು. ಮುಂದೊಂದು ದಿನ ಅನುಮಾನಾಸ್ಪದ ವ್ಯಕ್ತಿಗಳ ಚಿತ್ರದಲ್ಲಿದ್ದವ ತನಗೆ ಹಸ್ತಲಾಘವ ಮಾಡಿದವನೊಬ್ಬ ಇರುವುದನ್ನು ಕಂಡು ವೈಸ್ರಾಯ್ ಅದುರಿ ಹೋದ. ಮಾತ್ರವಲ್ಲ ರಾಸುದಾ ಕ್ರಾಂತಿಕಾರಿಗಳೇನಾದರೂ ಸಿಕ್ಕರೆ ತಾನೇ ವಿಷಯ ತಿಳಿಸುವುದಾಗಿಯೂ ಪೊಲೀಸರನ್ನು ನಂಬಿಸಿ ತನ್ಮೂಲಕ ಪೊಲೀಸರು ತಮ್ಮ ಮೇಲಿನವರಿಗೆ ರಾಸುದಾ ಬಗ್ಗೆ ಒಳ್ಳೆ ಅಭಿಪ್ರಾಯ ಬರುವಂತೆ ಪತ್ರ ಬರೆದಿದ್ದೂ ಆಯಿತು.

                      ಚಾಂದನಿ ಚೌಕದ ಬಾಂಬು ಸ್ಫೋಟ ಬ್ರಿಟಿಷರನ್ನು ಗದಗುಟ್ಟಿಸಿದರೆ ಕ್ರಾಂತಿವೀರರಲ್ಲಿ ಮಿಂಚಿನ ಸಂಚಾರವನ್ನೇ ಉಂಟು ಮಾಡಿತು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವೇಳೆಗೆ ನೆಲೆಸಿದ್ದ ಹರದಯಾಳರು "ಯುಗಾಂತರದ ಸುತ್ತೋಲೆ" ಎಂಬ ಸುದೀರ್ಘ ಅಮೋಘ ಲೇಖನ ಬರೆದರು. ಅದು ಬೆಲ್ಜಿಯಂನಲ್ಲಿ ಮುದ್ರಣಗೊಂಡು ದೇಶವಿದೇಶಗಳಲ್ಲಿ ವಿತರಣೆಯಾಯಿತು. ಇತ್ತ ರಾಸುದಾ ಬಂಗಾಳದ ಪೂರ್ಣ ಹೊಣೆಯನ್ನು ಬಾಘಾ ಜತೀನನಿಗೊಪ್ಪಿಸಿ ವಾರಾಣಾಸಿ ಕಡೆ ನಡೆದರು. ಇತ್ತ ಇನ್ನಿತರ ಕಡೆಗಳಲ್ಲಿ ಬಾಂಬು ಸ್ಫೋಟವಾಗುತ್ತಿದ್ದಂತೆ ಅವೆಲ್ಲಾ ಬಾಂಬುಗಳು ಏಕ ಪ್ರಕಾರದವುಗಳೆಂದು, ಒಂದೇ ಕಡೆ ತಯಾರಾದವುಗಳೆಂದೂ ಪೊಲೀಸರಿಗೆ ತಿಳಿದು ಹನುಮಂತ್ ಸಹಾಯ್, ಅವಧ್ ಬಿಹಾರಿ, ಬಲರಾಜ್ ಭಲ್ಲಾ ಬಂಧಿತರಾದರು. ದೀನಾನಾಥ ಅಪ್ರೂವರ್ ಆಗಿ ಬದಲಾದದ್ದೂ ಇದಕ್ಕೆ ಕಾರಣವಾಯಿತು. ಆದರೆ ಹುಲಿ ಸಿಗಲೇ ಇಲ್ಲ. ಇದರಿಂದ ಕಂಗೆಟ್ಟ ಪೊಲೀಸರು ಮಾಸ್ಟರ್ ಅಮೀರ್ ಚಂದರನ್ನೇ ಪ್ರಮುಖ ಆರೋಪಿಯನ್ನಾಗಿಸಿ ಮೊಕದ್ದಮೆ ಆರಂಭಿಸಿದರು. ಇತ್ತ ರಾಸುದಾ ಹೃದಯದ ತೊಂದರೆ ಎಂದು ಹೇಳಿ ಕಛೇರಿಗೆ ವಿನಂತಿ ಪತ್ರ ಕೊಟ್ಟು ಜಾಗ ಖಾಲಿ ಮಾಡಿದರು. ಮತ್ತು ಢಾಕಾ ಹಾಗೂ ಅನುಶೀಲನ ಸಮಿತಿಯನ್ನು ಒಗ್ಗೂಡಿಸಲು ಆರಂಭಿಸಿದರು.

                  ಒಂದು ದಿನ ಬದೂರ್ ಬಾಗ್ನ ಮನೆಯೊಂದರಲ್ಲಿ ಹೊಸ ರಿವಾಲ್ವರ್ ಗಳನ್ನು ಪರಿಶೀಲಿಸುತ್ತಿದ್ದಾಗ ಯಾರದೋ ರಿವಾಲ್ವರಿನಿಂದ ಅಚಾನಕ್ಕಾಗಿ ಒಂದು ಗಂಡು ಹಾರಿ ರಾಸುದಾರ ಮೂರನೇ ಬೆರಳಿಗೆ ತಗುಲಿತು. ಸ್ಫೋಟದ ಕಾರಣ ಪೊಲೀಸರ ಗಮನ ಅತ್ತ ಬರಬಹುದೆಂದು ರಾಸುದಾ ಬೆಡ್ ಶೀಟ್ ಹೊದ್ದುಕೊಂಡು ಹಿಂದಿನ ಬಾಗಿಲಿನಿಂದ ಹೊರಬಿದ್ದು ರಾಜಾಬಜಾರಿನ ಮನೆಗೆ ಬಂದರು. ರಾಸುದಾ ಬಂಧನದ ವಾರಂಟ್ ಹೊರಡಿಸಿ ೧೮ ದಿನಗಳಾಗಿದ್ದವು. ಒಂದು ದಿನ ರಾತ್ರಿ ಸಮಯ ಪೊಲೀಸರು ಲಾಂದ್ರ ಹಿಡಿದುಕೊಂಡು ಮನೆಗೆ ಬರುತ್ತಿರುವುದು ಕಂಡಿತು. ಕೂಡಲೇ ಶಿರೀಷ್ ಚಂದ್ರ ರಾಸುದಾರನ್ನು ಹೊರಕ್ಕೆ ಕಳುಹಿಸಿ ತಾನು ಷೇಕ್ಸ್ ಫಿಯರನ ಪುಸ್ತಕ ಓದುತ್ತಾ ಕುಳಿತ. ರಾಸುದಾ ಮನೆ ಪಕ್ಕದ ಮರ ಏರಿ ಅಲುಗಾಡದೇ ಕುಳಿತರು. ಸುಮಾರು ಒಂದು ಗಂಟೆ ಕಾಲ ಮನೆಯ ಮೂಲೆ ಮೂಲೆ ಹುಡುಕಿದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಬೇಕಾಯಿತು.

ಮಹಾ ಸೈನಿಕ ಕ್ರಾಂತಿ
             ಸದಾ ಸ್ವತಂತ್ರನಾಗಿರಬೇಕೆಂಬ ಮನಸ್ಥಿತಿಯ ರಾಸುದಾಗೆ ಅಡಗಿ ಕೂರುವುದು ಸಹ್ಯವಾಗಲಿಲ್ಲ. ಅವರು ಮಾರುವೇಶದಿಂದ ಕಲ್ಕತ್ತೆಗೆ ಬಂದು ಮುಂದೆ ಕಾಶಿಯನ್ನು ತನ್ನ ಕೇಂದ್ರವಾಗಿಸಿಕೊಂಡು ಪಂಜಾಬ್ ಹಾಗೂ ಬಂಗಾಳವನ್ನು ಬೆಸೆಯುವ ಕಾರ್ಯ ಮುಂದುವರೆಸಿದರು. ಇತ್ತ ಸರಕಾರ ರಾಸುದಾರನ್ನು ಹಿಡಿದು ಕೊಟ್ಟವರಿಗೆ ಕೊಡುವ ಬಹುಮಾನವನ್ನು ಐದರಿಂದ ಹನ್ನೆರಡು ಸಾವಿರಗಳಿಗೆ ಏರಿಸಿತು. ರಾಸುದಾ ಬಗ್ಗೆ ಬರುತ್ತಿದ್ದ ಸುದ್ದಿಗಳಿಂದ ವಿಚಲಿತಗೊಂಡ ಮನೆಯವರು ಕೂಡಾ ಅವರನ್ನು ಹುಡುಕಲಾರಂಭಿಸಿದರು. ತಂದೆಯಂತೂ ಮಗನ ಪರವಾಗಿ ವಕೀಲರನ್ನು ನೇಮಿಸುವ ಪ್ರಯತ್ನದಲ್ಲಿ ತೊಡಗಿದರು. ಇದರಿಂದ ಖೇದಗೊಂಡ ರಾಸುದಾ ತಂದೆಗೆ ರೀತಿ ಮಾಡಕೂಡದೆಂದೂ, ದೇಶಸೇವೆಯೇ ನಿಮ್ಮ ಸೇವೆಯಾಗಬೇಕೆಂದು ಸುದೀರ್ಘ ಪತ್ರ ಬರೆದರು. ಕಾಶಿಯಲ್ಲಿ ರಾಸುದಾ ಒಂದು ದಿನ ಬಂಗಾಳಿಯಂತೆ, ಒಂದು ದಿನ ಸಿಖ್ಖರಂತೆ, ಇನ್ನೊಂದು ದಿನ ಪಠಾಣ, ಆಂಗ್ಲ ಹೀಗೆ ವಿವಿಧ ವೇಶಗಳನ್ನು ಮಾಡುತ್ತಾ ಸಂಘಟನೆಯಲ್ಲಿ ನಿರತರಾದರು. ಮಾತ್ರವಲ್ಲ ಪಂಜಾಬ್, ಕಾಶಿ, ದೆಹಲಿ, ಬಂಗಾಳ, ಢಾಕಾ ಐದೂ ಪ್ರಾಂತ್ಯಗಳ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಅದಕ್ಕೆ ಬಾಘಾ ಜತೀನನನ್ನು ಸರ್ವಾನುಮತದ ನಾಯಕನನ್ನಾಗಿಸಿದರು. ಹಾಗೂ ಅಪ್ರತಿಮ ಕ್ರಾಂತಿವೀರ ದೇಶಭಕ್ತರಿಗೆ ಜನ್ಮವಿತ್ತ ಮಹಾರಾಷ್ಟ್ರವನ್ನೂ ಇದಕ್ಕೆ ಬೆಸೆದು ಒಂದು ಮಹಾಕ್ರಾಂತಿಗೆ ಮುನ್ನುಡಿ ಬರೆದರು.

                 ಅಮೃತಸರದಲ್ಲಿ ಪಂಜಾಬ್ ಮೈಲನ್ನು ರಾಸ್ ಬಿಹಾರಿ ತಡೆದು ನಿಲ್ಲಿಸುವುದೇ ಕ್ರಾಂತಿಗೆ ಸೂಚನೆಯಾಗಿತ್ತು. ಎಲ್ಲ ಪ್ರಾಂತ್ಯಗಳ ಕ್ರಾಂತಿವೀರರನ್ನು ಒಗ್ಗೂಡಿಸಿ ಜತೀನನನ್ನು ನಾಯಕನನ್ನಾಗಿಸಿದ ಸಭೆಯಲ್ಲಿ ರಾಸುದಾ ಎಲ್ಲರಿಗೂ ವಿಭಿನ್ನ ಜವಾಬ್ದಾರಿಗಳನ್ನು ಹಂಚಿದರು. ಅಲಹಾಬಾದಿಗೆ ದಾಮೋದರ ಸ್ವರೂಪ್ ಸೇಠ್ ನನ್ನು ನಾಯಕನಾಗಿಯೂ, ಭಿಭೂತಿ ಭೂಷಣ ಹಲ್ದರ್ ಮತ್ತು ಪ್ರಿಯನಾಥ್ ಭಟ್ಟಾಚಾರ್ಯರನ್ನು ಬನಾರಸಿನ ದಂಡು ಪಾಳಯದಲ್ಲಿ ಸೈನಿಕರನ್ನು ಪ್ರಚೋದಿಸಲು ನೇಮಿಸಿದರು. ಪ್ರಿಯನಾಥ ಭಟ್ಟಾಚಾರ್ಯ ನರೇಂದ್ರನಾಥ್ ಬ್ಯಾನರ್ಜಿಯೊಂದಿಗೆ ಸೇರಿ ಬಂಗಾಳದಿಂದ ಬಾಂಬು ಮತ್ತಿತರ ಶಸ್ತ್ರಾಸ್ತ್ರಗಳನ್ನು ತಂದು ವಿನಾಯಕ ರಾವ್ ಹಾಗೂ ಹೇಮಚಂದ್ರ ದತ್ತರಿಗೆ ಒಪ್ಪಿಸಬೇಕಾಗಿತ್ತು. ಅದನ್ನು ಪಂಜಾಬಿಗೆ ತಲುಪಿಸುವ ಜವಾಬ್ದಾರಿ ಅವರಿಬ್ಬರದು. ನಳಿನಿ ಮೋಹನಗೆ ಜಬಲ್ಪುರ ಹಾಗೂ ಕಾನ್ಪುರಗಳಲ್ಲಿ ಸೈನಿಕ ಪಾಳಯವನ್ನು ಸಂಪರ್ಕಿಸುವ ಕೆಲಸ. ಪಿಂಗಳೆ ಪಂಜಾಬಿಗೆ ನಾಯಕ. ಕಾಶಿಗೆ ಕಾಳಿಪಾದ ಮುಖರ್ಜಿ, ಆನಂದಚರಣ ಭಟ್ಟಾಚಾರ್ಯ. ಬಂಗಾಳದ ಜವಾಬ್ದಾರಿ ಜತೀನನಿಗೆ. ಅದೇ ಸಭೆಯಲ್ಲಿ ರಾಸುದಾ ಸೇತುವೆಗಳನ್ನು ಉಡಾಯಿಸುವ, ಟೆಲಿಗ್ರಾಫ್ ಸಂಪರ್ಕ ಕತ್ತರಿಸುವ, ರೈಲು ಹಳಿಗಳನ್ನು ನಾಶಪಡಿಸುವ, ಸರ್ಕಾರಿ ಬ್ಯಾಂಕು, ಖಜಾನೆಗಳನ್ನು ಲೂಟಿ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕ ತರಬೇತಿ ನೀಡಿದರು. ಮಹಾರಾಷ್ಟ್ರ ಗುಂಪಿಗೆ ಬಿನಯ ಭೂಷಣ ದತ್ತ ನಾಯಕನಾಗಿದ್ದು, ಡಾ|| ನಾರಾಯಣ ರಾವ್ ಸಾವರ್ಕರ( ವೀರ ಸಾವರ್ಕರರ ತಮ್ಮ) , ಭೀಮಾರಾವ್ ಮುಂತಾದವರಿದ್ದರು. ಹೀಗೆ ಎಲ್ಲೆಲ್ಲಿ ಯಾವ ರೀತಿ ಯಾವ ಸಮಯಕ್ಕೆ ಕ್ರಾಂತಿ ಆರಂಭಿಸುವುದೆಂದು ನಿರ್ಧರಿಸಿ ಸಭೆ ಸಮಾಪನಗೊಂಡಿತು.

                   ಇತ್ತ ರಾಸುದಾ ಕಾಶಿ ತೊರೆದು ಪಂಜಾಬ ತಲುಪುತ್ತಿದ್ದಂತೆ ಅಲ್ಲಿ ಇನ್ನೊಂದು ಅಪಾಯ ಕಾದಿತ್ತು. ಪೊಲೀಸರಿಗೆ ಪಂಜಾಬಿನಲ್ಲಿ ಕ್ರಾಂತಿಯ ವಾಸನೆ ಬಡಿದಿತ್ತು. ಹಾಗಾಗಿ ಲಾಹೋರಿಗೆ ಬಂದು ಹೋಗುವವರಿಗೆ, ಹೊಸಬರಿಗೆ, ಗೃಹಸ್ಥರಲ್ಲದವರಿಗೆ ಮನೆಬಾಡಿಗೆ ನೀಡಬಾರದೆಂದು ಕಟ್ಟುನಿಟ್ಟಿನ ಆಜ್ಞೆಯಾಗಿತ್ತು. ಹಾಗಾಗಿ ರಾಸುದಾಗೆ ತಾತ್ಕಾಲಿಕ ಹೆಂಡತಿಯೊಬ್ಬಳು ಬೇಕಾಯಿತು. ಸಮಯದ ಗಂಭೀರತೆ ಅರಿತ ಮಿತ್ರ ರಾಮಚರಣ ದಾಸನ ಹೆಂಡತಿಹಾಗೆ ನಟಿಸಲು ಒಪ್ಪಿಕೊಂಡರು. ಆದರೆ ಅತ್ಯುತ್ತಮ ನಟನಾ ಕೌಶಲಾ ಹೊಂದಿದ್ದರೂ ಇನ್ನೊಬ್ಬರ ಹೆಂಡತಿಗೆ ಗಂಡನಾಗಿ ನಟಿಸುವುದು ಹೇಗೆಂಬ ಆತಂಕ ರಾಸುದಾಗೆ. ಅಮೃತಸರದ ಮುಸ್ಸಮತ್ ಆತ್ರಿಯ ಮನೆಯಲ್ಲಿ ಸಂಸಾರ ಆರಂಭವಾಯಿತು. ಸಂತ ಗುಲಾಬ್ ಸಿಂಗ್ ಧರ್ಮಶಾಲೆಯಲ್ಲಿ ಕಾರ್ಯಕಲಾಪಗಳು, ರಹಸ್ಯ ಸಭೆಗಳು.
                    ರಾಸುದಾ ತುರ್ತಿನಲ್ಲಿ ಝಬೆವಲ್ನಲ್ಲಿ ಬಾಂಬು ಕಾರ್ಖಾನೆಯೊಂದನ್ನು ಸ್ಥಾಪಿಸಿದರು. ಝನೀರ್, ರಾಭೋಂ, ಷಾನೇವಾಲ್, ಮನ್ಸುಲಾನ್, ಛಟ್ಟಾದಲ್ಲಿ ಡಕಾಯಿತಿ ಮಾಡಲಾಯಿತು. ಛಟ್ಟಾದಲ್ಲಿ ಡಕಾಯಿತಿ ಮಾಡುತ್ತಿದ್ದಾಗ ಪೊಲೀಸರೊಂದಿಗೆ ಗುಂಡಿನ ಕಾಳಗ ನಡೆದು ಒಬ್ಬ ಸದಸ್ಯ ಸಿಕ್ಕಿ ಬಿದ್ದು ರಾಸುದಾ ಬಗ್ಗೆ ಪೊಲೀಸರಿಗೆ ಮೊದಲ ಸುಳಿವು ನೀಡಿದ. ವಿಷಯವರಿತ ರಾಸುದಾ ಲಾಹೋರಿಗೆ ಪರಾರಿ. ಇತ್ತ ಕಾಶಿ, ಕಲ್ಕತ್ತೆ, ಜಲಂಧರ್, ಜಕೋಬಾಬಾದ್, ಬನ್ನು, ಕೋಹಟ್, ರಾವಲ್ಪಿಂಡಿ, ಪೇಶಾವರ್, ಹೋತಿಮರ್ದನ್, ಝೀಲಂಗಳಲ್ಲಿ ರಾಸುದಾ ಪಾಳಯ ಬ್ರಿಟಿಷರ ಸೇನೆಯಲ್ಲಿದ್ದ ಭಾರತೀಯ ಸೈನಿಕರನ್ನು ಹುರಿದುಂಬಿಸಿ ಬಂಡಾಯವೇಳಲು ಸಿದ್ಧಗೊಳಿಸಿತು. ಹಳ್ಳಿ, ಗ್ರಾಮಗಳಲ್ಲೂ ಜನರನ್ನು ಸಂಘಟಿಸುವ ಪ್ರಯತ್ನಗಳೂ ನಡೆದವು. ರಾಸುದಾ ಸಹಕಾರಿ ಕರ್ತಾರ್ ಸಿಂಗ್ ತನ್ನ ಸೈಕಲ್ ಮೇಲೆ ದಿನಕ್ಕೆ ೫೦-೬೦ ಮೈಲು ಕ್ರಮಿಸುತ್ತಾ ಗದ್ದರ್ ಸಂದೇಶ ಬಿತ್ತರಿಸುತ್ತಿದ್ದ. ಒಮ್ಮೆಯಂತೂ ತನ್ನನ್ನು ಕಾಯುತ್ತಿದ್ದ ಪೊಲೀಸರ ಎದುರೇ ವೇಗವಾಗಿ ಸೈಕಲ್ ತುಳಿದುಕೊಂಡು ಹೋಗಿದ್ದ! ಮೀಯಾಮೀರ್, ಫಿರೋಜ್ ಪುರದ ಸೈನ್ಯವೂ ಬಂಡಾಯವೇಳಲು ಸಿದ್ಧವಾಯಿತು. ಮೊದಲು ಪಂಜಾಬಿನಲ್ಲಿ ದಂಗೆ ಎದ್ದು ವಿಜಯಧ್ವಜ ಹಾರಿಸಿ ಅಪ್ಘಾನಿಸ್ಥಾನದ ಮನ್ನಣೆ ಪಡೆಯುವುದು  ರಾಸುದಾ ವಿಚಾರವಾಗಿತ್ತು. ರಾಸುದಾ ಧ್ವಜವೊಂದನ್ನು ಸಿದ್ಧ ಪಡಿಸಿದರು. ಇಷ್ಟು ಸಿದ್ದತೆ ಆಗಿದ್ದರೂ ರಾಸುದಾ ಆಲೋಚನೆ ಒಂದಿದ್ದರೆ ವಿಧಿ ಇನ್ನೊಂದು ಬಗೆದಿತ್ತು.
-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ