ರಾಷ್ಟ್ರಭಾವ
"ನಾನು
ಶತ್ರುಗಳನ್ನು ಸದೆಬಡಿಯುವುದಕ್ಕೆ ಮುಂಚೆ ಮೃತ್ಯು ನನ್ನ
ಮುತ್ತಿಕ್ಕಲು ಬಂದರೆ ನಾನು ಆ
ಮೃತ್ಯುವನ್ನೇ ಯಮಸದನಕ್ಕಟ್ಟುತ್ತೇನೆ"
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮೇಜರ್
ಮನೋಜ್ ಕುಮಾರ್ ಪಾಂಡೆ ಎಂಬ
ಅಪ್ರತಿಮ ಯೋಧ ಆಡಿದ ಈ
ಮಾತು ಕೇಳಿದ ಎಂತಹವನಿಗಾದರೂ ರೋಮಗಳು
ನಿಮಿರಿ ನಿಲ್ಲಲೇಬೇಕು. ನಮ್ಮ ಸೈನಿಕರೆಂದರೆ ಹಾಗೆಯೇ,
ಪ್ರಾಣವನ್ನೇ ಪಣವಾಗಿಟ್ಟು ಜಯಸಿರಿಯನ್ನು ತಂದುಕೊಡುತ್ತಾರೆ. ಆದರೆ ಈ ದೇಶದ
ದೌರ್ಭಾಗ್ಯ ನೋಡಿ. ಕೆಲವೇ ದಿವಸಗಳ
ಹಿಂದೆ ಪಾಕಿಗಳು ನಮ್ಮ ಸೈನಿಕರೀರ್ವರ
ರುಂಡ ಚೆಂಡಾಡಿದರು. ಐವರು ಯೋಧರ ಹತ್ಯೆ
ಮಾಡಿದರು. ನಮ್ಮ ರಕ್ಷಣಾ ಸಚಿವ
ಕೊಂದವರು ಪಾಕ್ ಸಮವಸ್ತ್ರದಲ್ಲಿ ಬಂದ
ಭಯೋತ್ಪಾದಕರು ಎಂದು ಬಿಟ್ಟರು. ಇದನ್ನು
ಸರಕಾರದ ಇಬ್ಬರು ಮಂತ್ರಿಗಳು ಸಮರ್ಥಿಸಿದ್ದೂ
ಆಯಿತು. ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಸ್ತರದಲ್ಲಿ ಮುಖ ಉಳಿಸಿಕೊಳ್ಳಲು ಇಷ್ಟು
ಸಾಕಿತ್ತು. ಅದೇ ಸಂದರ್ಭದಲ್ಲಿ ಬಿಹಾರದ
ಜೆಡಿಯು ಸಚಿವ ಭೀಮ್ ಸಿಂಗ್
ಎಂಬಾತನಂತೂ ಜನರು ಸೇನೆ ಸೇರುವುದೇ
ಸಾಯುವುದಕ್ಕೆ ಎಂದುಬಿಟ್ಟ. ಪ್ರತಿಭಟನೆಗಳಾದವು, ಪ್ರತಿಕೃತಿಗಳನ್ನು ದಹಿಸಲಾಯಿತು. ಕೆಲವೇ ದಿವಸ, ಎಲ್ಲರಿಗೂ
ಮರೆತೇ ಹೋಯಿತು. ಸರಕಾರಕ್ಕೂ ಬೇಕಿದ್ದುದು
ಅದೇ!
ಯಾಕೆ ಹೀಗೆ? ಸೈನಿಕರೆಂದರೆ
ಯಾಕಿಷ್ಟು ನಿಕೃಷ್ಟ ಭಾವ? ಪ್ರಧಾನಿಯಿಂದ
ಹಿಡಿದು ಜನಸಾಮಾನ್ಯನವರೆಗೆ ದೇಶವೆಂದರೆ ಯಾಕೀ ಅಸಡ್ಡೆ? ದೇಶದ
ಮೇಲೆ ದಾಳಿಯಾದಾಗ, ದೇಶದೆಲ್ಲೆಡೆ ಭಯೋತ್ಪಾದಕ ಕೃತ್ಯಗಳಾದಾಗ, ನಕ್ಸಲರು ನಾಗರಿಕರ ಮೇಲೆ
ದಾಳಿ ಮಾಡಿ ಕೊಂದಾಗ ಯಾಕೆ
ಮನಸ್ಸು ರೊಚ್ಚಿಗೇಳುವುದಿಲ್ಲ? ನಮ್ಮ ದನ ಕರುಗಳ
ಕತ್ತು ಸೀಳಿದಾಗ, ಪಕ್ಕದ ಮನೆಯ ಹುಡುಗಿಯೊಬ್ಬಳು
ಲವ್ ಜಿಹಾದಿಗೆ ಬಲಿಯಾದಾಗ ಕುಟುಂಬಕ್ಕೆ ಕುಟುಂಬವೇ ಮತಾಂತರಗೊಂಡಾಗ ನಮ್ಮ ಅಂತಃಕರಣವೇಕೆ ಮಿಡಿಯೋದಿಲ್ಲ?
ಹದಿಹರೆಯದ ಹುಡುಗ ಹುಡುಗಿಯರಲ್ಲಿ ಈ
ದೇಶದ ಇತಿಹಾಸದ ಬಗ್ಗೆ ಕೇಳಿ
ನೋಡಿ...ಉತ್ತರ ಶೂನ್ಯ! ನಮ್ಮ
ಯುವ ಜನಾಂಗ ಸಿನಿಮಾ ನಟರನ್ನು
ಹೀರೋಗಳಾಗಿ ಕಂಡು ಅವರನ್ನೇ ಅನುಕರಿಸುತ್ತಾ
ಸಾಮಾಜಿಕ ಜಾಲ ತಾಣಗಳಲ್ಲಿ ಜಾಲಾಡುತ್ತಾ
ಸರಸ ಸಲ್ಲಾಪಗಳಲ್ಲಿ
ಮುಳುಗೇಳುತ್ತಿದೆ. ಇತ್ತ ನಗರವಾಸಿಗಳು ಸೂಟು-ಬೂಟು-ಕೋಟು ಧರಿಸಿ
ಪಾಶ್ಚಾತ್ಯರ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ
ಅತ್ತ ಹಳ್ಳಿಗಳೂ ಪಾಶ್ಚಾತ್ಯಮಯವಾಗುತ್ತಿವೆ. ಪ್ರತಿಯೊಬ್ಬ ತಂದೆ ತಾಯಂದಿರು ತನ್ನ
ಮಗ ವೈದ್ಯನೋ, ಇಂಜಿನಿಯರಾಗಿಯೋ ಹಣ ಸಂಪಾದಿಸಬೇಕೆಂದು ಬಯಸುತ್ತಾರಲ್ಲದೆ
ಸೈನಿಕನಾಗಬೇಕು ಅಥವಾ ಸ್ವಯಂಸೇವಕನಾಗಬೇಕು ಎಂದು
ಯಾಕೆ ಬಯಸೋದಿಲ್ಲ? ಪಕ್ಕದ ಮನೆಯಲ್ಲೇ ಶಿವಾಜಿ
ಹುಟ್ಟಿ ಬರಬೇಕೆಂಬ ಮನಸ್ಸೇಕೆ?
"ಗಾಯಂತಿ
ದೇವಾಃ ಕಿಲ ಗೀತಕಾನಿ ಧನ್ಯಾಸ್ತು
ಯೇ ಭಾರತ ಭೂಮಿಭಾಗೇ|
ಸ್ವರ್ಗಾಪವರ್ಗಾಸ್ಪದಹೇತುಭೂತೇ
ಭವಂತಿ ಭೂಯಃ ಪುರುಷಾಃ ಸುರತ್ವಾತ್||
ಎಂದು ದೇವತೆಗಳೇ ಹಾಡಿ ಹೊಗಳಿದ ಈ
ರಾಷ್ಟ್ರದಲ್ಲಿ ಹೀಗೇಕಾಗುತ್ತಿದೆ? ಎಲ್ಲೋ ತಪ್ಪಿದ್ದೇವೆ ಎಂದನ್ನಿಸುತ್ತಿಲ್ಲವೇ?
"ಗತವನ್ನು ಮರೆತ ದೇಶಕ್ಕೆ
ಭವಿಷ್ಯವೂ ತಮವೇ!"
ಹೌದು, ನಾವು ಯಾರು, ಎಲ್ಲಿಂದ
ಬಂದೆವು, ಹೇಗೆ ಬಂದೆವು, ಬದುಕಿನಲ್ಲಿ
ಏನೇನು ಸಾಧಿಸಿದೆವು, ಏನೇನು ತಪ್ಪುಗಳನ್ನೆಸಗಿದೆವು ಎನ್ನುವುದನ್ನು
ಅರಿಯದಿದ್ದರೆ ನಮಗೆ ವರ್ತಮಾನವು ಅರ್ಥವಾಗದು.
ಭವಿಷ್ಯತ್ತಿನ ದಾರಿ ಕಾಣದು. ರಾಮಾಯಣವೇ
ಗೊತ್ತಿಲ್ಲದವನಿಗೆ ರಾಮಸೇತುವಿನ ಮಹತ್ವ ಹೇಗೆ ತಿಳಿದೀತು?
ಅಯೋಧ್ಯೆ ಎಂಬುದು ಪುಣ್ಯಭೂಮಿ ಎಂದು
ಹೇಗೆ ಅರಿವಾದೀತು?
ಪ್ರಪಂಚದ ನಾಗರೀಕತೆ ಇನ್ನೂ
ಶೈಶವಾವಸ್ಥೆಯಲ್ಲಿದ್ದಾಗ ನಾಗರೀಕತೆಯ ಉತ್ತುಂಗದಲ್ಲಿದ್ದವರು ನಾವು. ಚರಿತ್ರೆ ಕಣ್ಣು
ಬಿಡುವ ಮೊದಲೇ ಒಂದು ರಾಷ್ಟ್ರವಾಗಿ
ನಾವು ಅರಳಿ ನಿಂತಿದ್ದೆವು. ನಮ್ಮ
ದೇಶ ಉಳಿದ ದೇಶಗಳಿಗೆ ಕಲೆ,
ವಿಜ್ಞಾನಗಳನ್ನು ಅನುಗ್ರಹಿಸಿತ್ತು. ಶಾಸ್ತ್ರೀಯ ದೃಷ್ಟಿಯನ್ನೂ, ಸತ್ಯಾನ್ವೇಷಣೆಯ ವಿಧಾನವನ್ನೂ ತೋರಿಸಿಕೊಟ್ಟಿತ್ತು. ಸಂಕುಚಿತತೆಯ ಮಾಯೆಯ ಹರಿದು ಅನೇಕತೆಯಲ್ಲಿ
ಏಕತೆಯನ್ನು ದರ್ಶಿಸುವ ಸಂಸ್ಕಾರವನ್ನು ತಿಳಿಸಿಕೊಟ್ಟಿತು. ವೇದಗಳೇ ಇಂತಹ ಉತ್ಕೃಷ್ಟ
ಸಂಸ್ಕೃತಿಯ ತಾಯಿ ಬೇರು. ಹಾಗಾಗಿ
ಭಾರತೀಯತೆಯನ್ನು ಮೂಲೋತ್ಪಾಟನೆ ಮಾಡುವ ಸಲುವಾಗಿಯೇ ನಾನು
ವೇದಗಳ ಅನುವಾದದಲ್ಲಿ ತೊಡಗಿದ್ದೇನೆಂದು ಮ್ಯಾಕ್ಸ್ ಮುಲ್ಲರ್ ಮಹಾಶಯ ತನ್ನ
ಹೆಂಡತಿಗೆ ಪತ್ರ ಬರೆದಿದ್ದ. ಮೆಕಾಲೆಯಂತೂ
ಆಂಗ್ಲ ಶಿಕ್ಷಣವನ್ನು ಜಾರಿಗೊಳಿಸಿ ಇನ್ನಿಲ್ಲುಳಿಯುವವರು ಕಪ್ಪು ಚರ್ಮದ ಬ್ರಿಟಿಷರು
ಅಂದಿದ್ದ. ಅದರ ಫಲವೇ ನಾವು
ಇದು ಕಾಣುತ್ತಿರುವುದು. ನಾವು ನಮ್ಮ ಮಕ್ಕಳಿಗೆ
ನೈಜ ಇತಿಹಾಸವನ್ನು ಹೇಳಿಕೊಡುತ್ತಿಲ್ಲ. ನಾವು ಕಣ್ಣು ಮುಚ್ಚಿಕೊಂಡು
ನಮ್ಮ ಮಾಜಿ ಪಾಲಕರು ಅವರ
ಸ್ವಾರ್ಥಕ್ಕಾಗಿ ಹಲವು ತಲೆಮಾರುಗಳ ಪರ್ಯಂತ
ಅರೆದು ಕುಡಿಸಿದ ಅಸತ್ಯಗಳನ್ನೇ ಮೆಲುಕು
ಹಾಕುತ್ತಾ ಆರ್ಯರು ವಿದೇಶೀಯರೆಂದೂ, ಎಲ್ಲಿಂದಲೋ
ದಂಡೆತ್ತಿ ಬಂದು ಈ ದೇಶವನ್ನು
ದೌರ್ಜನ್ಯದಿಂದ ಆಕ್ರಮಿಸಿ ತಮ್ಮ ಅಜ್ಞಾನವನ್ನೂ, ಮತ
ಮೌಢ್ಯವನ್ನು ಎಲ್ಲರ ಮೇಲೆ ಹೇರಿದರೆಂದೂ,
ಬಿಳಿಯ ದೊರೆಗಳು ಮತ್ತವರ ಈಗಿನ
ಹಿಂಬಾಲಕರು ಹೇಳಿದ ಸುಳ್ಳು ಮಾತುಗಳನ್ನೂ,
ಮತ ಮೌಢ್ಯದಿಂದ ಬರೆದ ಬರವಣಿಗೆಯನ್ನೂ ಶಾಶ್ವತ
ಸತ್ಯಗಳೆಂದೂ ನಂಬುತ್ತಿದ್ದೇವೆ. ನಮ್ಮ ಚರಿತ್ರೆಯನ್ನು ದುರ್ಬುಧ್ಧಿಯಿಂದ
ಭೃಷ್ಟಗೊಳಿಸಿದ ವಿದೇಶೀ ಪೀಡೆಯಿಂದ ಮುಕ್ತಿ
ಹೊಂದಿದ ನಂತರವೂ ಅವರು ಭೃಷ್ಟಗೊಳಿಸಿದ್ದೇ
ನಿಜವಾದ ಚರಿತ್ರೆ ಎಂದು ಭ್ರಮಿಸುತ್ತಿದ್ದೇವೆ.
ಯಾವ ಶಿಕ್ಷಣ ನಮ್ಮನ್ನು
ಈ ಮಣ್ಣಿನೊಡನೆ ಬೆಸೆಯುತ್ತಿತ್ತೋ,
ಯಾವುದು ನಮಗೆ ನನ್ನ ದೇಶ,
ನನ್ನ ಸಂಸ್ಕೃತಿ ಎಂಬುದನ್ನು ಹೃದಯದಲ್ಲಿ ಅಂಕುರಿಸಿ ಸದಾ ಜಾಗೃತಾವಸ್ಥೆಯಲ್ಲಿರಿಸುತ್ತಿತ್ತೋ ಅಂತಹ ಶಿಕ್ಷಣ ವ್ಯವಸ್ಥೆಯನ್ನು
ಕಳೆದುಕೊಂಡೆವು. ಇದರಿಂದಾಗಿ ನಾವು ಈಗ ಚಿಂತನಾ
ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮಲ್ಲಿ ಆತ್ಮಾಭಿಮಾನ ಪುಟಿಯುತ್ತಿಲ್ಲ. ಆತ್ಮಗೌರವ ಮೊದಲೇ ಇಲ್ಲ ಎಂಬಂತಾಗಿದೆ.
ಧರ್ಮಗ್ಲಾನಿಯಾಗಿ, ಜನ ಸಂಸ್ಕೃತಿ ವಿಹೀನರಾಗುತ್ತಿದ್ದಾಗ
ಸೃಷ್ಟಿಗೊಂಡ ದಾಸ ಸಾಹಿತ್ಯದ ಪ್ರೇರಣೆಯಿಂದ
ಮನೆಮನೆಗಳಲ್ಲಿ ಭಜನೆಗಳಾಗುತ್ತಿದ್ದವು. ಈಗ ಎಷ್ಟು ಮನೆಗಳಲ್ಲಿ
ಭಜನೆ ಮಾಡುತ್ತಾರೆ, ದೀಪ ಉರಿಸುತ್ತಾರೆ, ವನದೇವಿ,
ಭೂದೇವಿಗೆ ನಮಸ್ಕರಿಸುತ್ತಾರೆ? ಹಿರಿಯರೇ ಮಾಡದಿದ್ದ ಮೇಲೆ
ಮಕ್ಕಳಿಗಾದರೂ ತಿಳಿಯೋದು ಹೇಗೆ?
ಅದಕ್ಕಾಗಿಯೇ ನಮ್ಮ ಶಿಕ್ಷಣ ಪದ್ದತಿ
ಬದಲಾಗಬೇಕಾಗಿದೆ. ಮಕ್ಕಳಿಗೆ ನೈಜ ಇತಿಹಾಸ ಬೋಧಿಸಬೇಕಾಗಿದೆ.
ವಿಜ್ಞಾನದ ತುತ್ತ ತುದಿಯಲ್ಲಿದ್ದ ನಾಗರೀಕತೆಯನ್ನು
ಮತ್ತೆ ಎತ್ತಬೇಕಾದರೆ ಈ ಮಣ್ಣಿನ ಕಣಕಣದಲ್ಲಿ
ಬೆರೆಯುವ ವಿದ್ಯೆ ನೀಡಬೇಕಾಗಿದೆ. ಸಮಾಜದ
ಪ್ರತಿಯೊಂದು ವರ್ಗಕ್ಕೂ ಧಾರ್ಮಿಕ, ಲೌಕಿಕ ಶಿಕ್ಷಣ ದೊರೆತು
ವೇದದಲ್ಲಿರುವ ವಿಜ್ಞಾನ ಹೊರಬರಬೇಕು. ಇದಕ್ಕಾಗಿ
ಅಲ್ಲಲ್ಲಿ ನೆಲೆನಿಂತು ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಬೆನ್ನುಲುಬಾಗಿ ನಿಲ್ಲುವ ಅಧಿಕಾರ ವರ್ಗ
ಬೇಕು. ಭಾರತೀಯತೆಯನ್ನು ಎತ್ತಿ ಹಿಡಿಯುವ ಸರಕಾರ
ಅಧಿಕಾರಕ್ಕೆ ಬರಬೇಕು. ಆಗ ಸ್ವದೇಶಿ
ವಸ್ತುಗಳನ್ನು ಉಪಯೋಗಿಸುವ ಮನಸ್ಸು ಬೆಳೆಯುತ್ತದೆ. ತಾನು
ಕೂಡಾ ಅಂತಹುದನ್ನು ಉತ್ಪಾದಿಸಿ ವಿದೇಶದಲ್ಲೂ ದೇಶದ ಹೆಸರು ಪಸರಿಸಬೇಕೆಂಬ
ಛಲ ಜನ ಮನದಲ್ಲಿ ಮೂಡುತ್ತದೆ.
ಈ ದೇಶೀ ಭಾವ
ಮುಂದಿನ ಪೀಳಿಗೆಗೂ ಪಸರಿಸುತ್ತದೆ.
ಧರ್ಮ ಸಂಸ್ಕೃತಿಯಿಲ್ಲದೆ ದೇಶವಿಲ್ಲ.
ಭವತಾರಿಣಿಯೂ ಭಾರತಿಯೂ ಒಬ್ಬಳೇ ಎಂಬ
ಭಾವ ಮೂಡದಿದ್ದರೆ ಭಾರತ ಉಳಿಯುವುದಿಲ್ಲ. ನನ್ನ
ಸಂಸಾರ, ನನ್ನ ಜಾತಿ, ನನ್ನ
ಮಠ, ನಮ್ಮ ಸ್ವಾಮೀಜೀ ಎಂಬ
ಸಂಕುಚಿತತೆ ತೊರೆದು ನನ್ನ ದೇಶ
ನನ್ನ ಜನ ಎಂಬ ಸನಾತನ
ಧರ್ಮ ನೀತಿಯನ್ನನುಸರಿಸದಿದ್ದರೆ ಹಿಂದೂ ಉಳಿಯಲಾರ, ಹಿಂದೂಸ್ಥಾನ
ಉಳಿಯಲಾರದು.
--ವಂದೇ
ಮಾತರಂ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ