ಪುಟಗಳು

ಶನಿವಾರ, ಮಾರ್ಚ್ 14, 2015

ನೀ ಎನಗಿದ್ದರೆ ನಾ ನಿನಗೆ

                                                    ನೀ ಎನಗಿದ್ದರೆ ನಾ ನಿನಗೆ

              ಅತ್ಯಗತ್ಯ ಸಂದರ್ಭದಲ್ಲಿ ಪ್ರಾಣಿಗಳು  ಮಾನವನಿಗಿಂತ ಬಲು ಬೇಗನೆ ಮೂಲ ಪ್ರಜ್ಞೆಯಿಂದ  ಅಗತ್ಯ ಜ್ಞಾನಗಳನ್ನು ಪಡೆಯುವಲ್ಲಿ ಸಫಲವಾಗುತ್ತವೆ. ಮಾನವನು ತಾನು ಬುದ್ಧಿವಂತನೆಂದು ಪ್ರಯೋಗಕ್ಕಿಳಿಯುವುದರಿಂದ ಗೊಂದಲಕ್ಕೊಳಗಾಗಿ ತನಗೆ ಮಾತ್ರವಲ್ಲ ಪ್ರಕೃತಿಗೇ ಹಾನಿಯನ್ನುಂಟು ಮಾಡುತ್ತಾನೆ. ಖಗ ಮೃಗಾದಿಗಳು ಯಾವತ್ತಿಗೂ ತಮ್ಮ ಧರ್ಮ ಮೀರಿ ನಡೆದುಕೊಳ್ಳುವುದಿಲ್ಲ. ಹುಲಿ ಸಿಂಹಗಳು ಹಸಿವಾದಾಗ ಮಾತ್ರ ಬೇಟೆಯಾಡುತ್ತವೆಯೇ ವಿನಾ ಮೋಜಿಗಾಗಿ ಇತರ ಪ್ರಾಣಿಗಳ ಮೇಲೆ ದೌರ್ಜನ್ಯ ಅಥವಾ ಹಿಂಸೆಯನ್ನು ಮಾಡತೊಡಗುವುದಿಲ್ಲ. ನೀವು ಸಾಕಿದ ನಾಯಿ ನಿಮ್ಮ ಜಾಗದ ಆವರಣದ ಹೊರಗೆ ಯಾರಿಗೂ ಗದರಿಸಲು ಮುಂದಾಗುವುದಿಲ್ಲ. ಹಾಗಂತ ತನ್ನ ಯಜಮಾನನಿಗೆ ನಿಷ್ಠವಾಗಿರುವುದನ್ನು ತಪ್ಪಿಸುವುದಿಲ್ಲ. ಪ್ರಾಣಿಗಳ ಈ ಗೊಂದಲ ಮುಕ್ತ ಸ್ಥಿತಿಯಿಂದಾಗಿ ತಮ್ಮ ಅಸ್ತಿತ್ವದ ಉಳಿವಿನ ಪ್ರಶ್ನೆ ಎದುರಾದಾಗಲೂ ನವ ಪ್ರಜ್ಞೆಯನ್ನು ಪಡೆದು ಆ ವಿಕೋಪದಿಂದ ಪಾರಾಗುವ ದಾರಿಯನ್ನು ಕಂಡುಕೊಳ್ಳುತ್ತವೆ. ಕೈಕಾಲು ಮುರಿದುಕೊಂಡರೂ, ಕೊಳೆತು ನಾರುವ ಗಾಯಗಳಿದ್ದರೂ ಕೆಲವೇ ದಿನಗಳಲ್ಲಿ ಗುಣ ಹೊಂದುವಂತಹ ರೋಗ ನಿರೋಧಕ ಶಕ್ತಿಯನ್ನು, ತಮ್ಮ ದೇಹದಲ್ಲಿ ಪಡೆದುಕೊಳ್ಳುತ್ತವೆ.

                 ಕೆಲವೊಂದು ಜೀವಿಗಳು ತುಂಡಾಗಿ ಕಳಚಿ ಹೋದ ತಮ್ಮ ದೇಹದ ಅಂಗಾಂಗಗಳನ್ನು ಚಿಗುರಿಸಿಕೊಳ್ಳುವ ಶಕ್ತಿಯನ್ನು ಹೊಂದಿವೆ. ನಾಯಿಗಳು ಅಜೀರ್ಣವಾದಾಗ ಕೆಲವೊಂದು ಗಿಡಮೂಲಿಕೆಗಳನ್ನು ಔಷಧಿಯಾಗಿ ಸೇವಿಸುವುದು, ಹುಲ್ಲನ್ನು ಜಗಿದು ವಪನವಾಗುವಂತೆ ಮಾಡಿ ಪಚನ ಕ್ರಿಯೆಯನ್ನು ಸರಾಗವಾಗಿಸುವುದು, ಗಾಯವಾದಾಗ ಬೂದಿಯಲ್ಲಿ ಹೊರಳಾಡಿ ಹುಣ್ಣಾಗದಂತೆ ನೋಡಿಕೊಳ್ಳುವುದು ಇವೆಲ್ಲವೂ ಸಾಮಾನ್ಯವಾಗಿ ಪ್ರಕೃತಿಯೊಡನೆ ಸಾಮಾನ್ಯವಾಗಿ ಬೆರೆತವರೆಲ್ಲರಿಗೂ ತಿಳಿದಿರುವ ಸತ್ಯ. ಕಪ್ಪೆಯಂತಹ ಕೆಲವು ಜೀವಿಗಳು  ಪ್ರಕೃತಿ ವಿಕೋಪದಿಂದ ತಪ್ಪಿಸಿಕೊಳ್ಳಲು ವರ್ಷಗಟ್ಟಲೆ ಕಾಲ ಮಣ್ಣಿನಡಿಯಲ್ಲಿ ಸಮಾಧಿ ಸ್ಥಿತಿಯಲ್ಲಿರುವುದು ಮಲೆನಾಡಿನ ಎಲ್ಲರಿಗೂ ತಿಳಿದ ವಿಚಾರವೇ. ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದ ನಾಯಿಯೊಂದು ತಾನಾಗಿ ಅಡಕೆಯನ್ನು ಜಗಿದು ರಸ ಕುಡಿದು ರೋಗಮುಕ್ತವಾದ ವರದಿಯನ್ನಾಧರಿಸಿ ಸಂಶೋಧನೆ ನಡೆಸಿದಾಗ ಈ ಔಷಧ ಮನುಷ್ಯರಿಗೂ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಅಗಾಧ ಪ್ರಮಾಣದ ವಿದ್ಯುತ್ತನ್ನು ತಮ್ಮ ದೇಹದಲ್ಲಿ ಉತ್ಪಾದಿಸಿ ಎದುರಾಳಿಗೆ ಆಘಾತ ನೀಡಿ ತನ್ನ ಪ್ರಾಣರಕ್ಷಣೆ ಮಾಡಿಕೊಳ್ಳುವ, ದೇಹದಲ್ಲೇ ದೀಪಗಳನ್ನು ಸೃಷ್ಟಿಸಿಕೊಂಡು ರಾತ್ರಿ ಆಹಾರವನ್ನು ಹುಡುಕುವ, ಬಣ್ಣ ಬದಲಾಯಿಸುವ, ರೂಪ ಬದಲಾಯಿಸುವ, ಸಣ್ಣ ಮೀನುಗಳು ಒಗ್ಗಟ್ಟಾಗಿ ಬಲುದೊಡ್ಡ ಮೀನಿನಾಕಾರದಲ್ಲಿ ಚಲಿಸಿ ದೊಡ್ಡ ಮೀನುಗಳಿಂದ ರಕ್ಷಣೆ ಪಡೆಯುವ ವಿವಿಧ ಜಲಚರಗಳ ಜ್ಞಾನಕ್ಕಾಗಿ ಅವೇನು ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಯುವುದಿಲ್ಲ. ಭೂಕಂಪನ, ತ್ಸುನಾಮೀ ಅಲೆಗಳು, ಮಳೆ, ಬಿರುಗಾಳಿಯ ಮುಂತಾದುವುಗಳ ಮಾಹಿತಿಯನ್ನು ಅವು ಸಂಭವಿಸುವ ಮುಂಚಿತವಾಗಿಯೇ ಪಡೆಯುವ ದನಕರುಗಳು, ನಾಯಿ, ಹಾವು, ಅಕ್ಟೋಪಸ್'ಗಳಂತಹ ಅನೇಕ ಪ್ರಾಣಿಗಳಿವೆ. ಕಡಲಾಮೆ ನೀರಿನಿಂದ ಮೇಲೆ ಬಂದು ಮರಳಿನಾಳದಲ್ಲಿ ಮೊಟ್ಟೆಗಳನ್ನಿಟ್ಟು ಅವುಗಳಿಂದ ಮೈಲುಗಟ್ಟಲೆ ಅಂತರದಲ್ಲಿದ್ದುಕೊಂಡು ತಾಯಿ ಮಮತೆಯ ಸಂವೇದನಾ ತರಂಗಗಳನ್ನು ಅವುಗಳಿಗೆ ಸತತವಾಗಿ ರವಾನಿಸುತ್ತಾ ಮೊಟ್ಟೆಗಳಲ್ಲಿ ಮರಿ ಬೆಳೆಯುವುದಕ್ಕೆ ಕಾರಣವಾಗುತ್ತವೆ. ಹಿಮಪ್ರದೇಶದ ಬಾವಲಿಗಳು, ಹಾವುಗಳು, ಹಲ್ಲಿ ಮುಂತಾದ ಪ್ರಾಣಿಗಳು ಹಿಮ ಬೀಳತೊಡಗಿದಾಗ ತಮ್ಮ ಶ್ವಾಸ ಸ್ಥಂಭನಗೊಳಿಸುತ್ತವೆ. ಮುಂದೆ ಹಿಮ ಕರಗತೊಡಗಿದಾಗ ಎಚ್ಚೆತ್ತು ಚಲನೆಗೆ ತೊಡಗುತ್ತವೆ. ಒಣಪ್ರದೇಶದ ಕಪ್ಪೆಗಳು ಮಣ್ಣಿನಡಿ ಸಮಾಧಿಗೊಂಡು ಮಳೆ ಬಂದಾಗ ಮತ್ತೆ ಶ್ವಾಸ ಪಡೆದುಕೊಳ್ಳುತ್ತವೆ. ಪ್ರಕೃತಿಯಲ್ಲಿ ದೊರಕುವ ವಸ್ತುಗಳನ್ನು ಬಳಸಿಕೊಂಡೇ ಪ್ರಕೃತಿಗೆ ಹಾನಿ ಮಾಡದೆ ಗೂಡುಕಟ್ಟುವ ಗೀಜಗನ ಗೂಡಿನೊಳಗೆ ಒಂದೇ ಒಂದು ಹನಿ ನೀರು ಜಿನುಗುವುದಿಲ್ಲ. ಬಾವಲಿಗಳು ಎಂತಹ ಕತ್ತಲಲ್ಲೂ ಯಾವುದೇ ಅಡೆತಡೆಯಿಲ್ಲದೆ ಹಾರಾಡುತ್ತವೆ. ಸಸ್ಯಗಳು ತಮಗೆ ಅನುಕೂಲ ಮಾಡಿಕೊಡುವ ದುಂಬಿ ಕೀಟಗಳನ್ನು ಆಕರ್ಷಿಸಲು ವಿಶೇಷ ಬಣ್ಣ ಸುಗಂಧಗಳನ್ನು ಸೃಷ್ಟಿಸಿಕೊಳ್ಳುತ್ತವೆ. ತಮ್ಮ ಆತಂಕ ಒಡ್ಡುವ ಹುಳು-ಹುಪ್ಪಟೆಗಳ ಹಾವಳಿಯಿಂದ ತಪ್ಪಿಸಲು ತಮಗೆ ಅನುಕೂಲಕಾರಿ ಜೀವಿಗಳಿಗೆ ಹಾನಿಯಾಗದಂತೆ ಕೆಲವೊಂದು ರಾಸಾಯನಿಕಗಳನ್ನು ತಮ್ಮೊಳಗೆ ಸೃಷ್ಟಿಸಿಕೊಳ್ಳುತ್ತವೆ.

                       ಮಾನವನನ್ನು ಹೊರತುಪಡಿಸಿ ಇತರ ಜೀವರಾಶಿಗಳು ತಮ್ಮ ಸಮಸ್ಯೆಗಳಿಗೆ ತಾವೇ ಬಹುಬೇಗನೇ ಪರಿಹಾರ ಕಂಡುಕೊಳ್ಳುವ ಇಂತಹ ಜ್ಞಾನಕ್ಕೆ ಸ್ವಾರ್ಥ, ಮೋಸ ಎನ್ನುವ ವಿಚಾರಗಳು ಅವುಗಳಲ್ಲಿಲ್ಲದಿರುವುದೇ ಕಾರಣ. ಒಂದು ದುಂಬಿ ಸುಮ್ಮನೇ ಮಕರಂದವನ್ನು ಹೀರುವುದಿಲ್ಲ. ಮಕರಂದವನ್ನು ಹೀರಿದ್ದಕ್ಕೆ ಪ್ರತಿಫಲವಾಗಿ ಹೂವಿನಿಂದ ಹೂವಿಗೆ ಪರಾಗಸ್ಪರ್ಶ ಮಾಡಿ ಹೂವು ಕಾಯಿಯಾಗಿ ಆ ಗಿಡದ ವಂಶಾಭಿವೃದ್ಧಿಯಾಗುವಂತೆ ಮಾಡುತ್ತದೆ.ಹಣ್ಣನ್ನು ತಿನ್ನುವ ಹಕ್ಕಿ ತನ್ನ ಹಿಕ್ಕೆಯ ಮೂಲಕ ದೂರಪ್ರದೇಶಗಳಿಗೂ ಹಣ್ಣಿನ ಬೀಜವನ್ನು ತಲುಪಿಸಿ ಆ ಗಿಡದ ವಂಶವನ್ನು ಅಲ್ಲಿ ಬೆಳೆಯುವಂತೆ ಸಹಾಯ ಮಾಡುತ್ತದೆ. ತನ್ನ ಹಲ್ಲುಗಳನ್ನು ಸ್ವಚ್ಛಗೊಳಿಸುವ ಹಕ್ಕಿಗೆ ಗಂಟೆಗಟ್ಟಲೇ ಬಾಯಿ ತೆರೆದು ಸಹಕರಿಸುವ ಮೊಸಳೆ ಕೆಲಸವಾದ ಮೇಲೆ ಗಬಕ್ಕನೆ ನುಂಗಿಬಿಡುವುದಿಲ್ಲ. ಪ್ರಕೃತಿಯಲ್ಲಿ ಏನಿದ್ದರೂ “ನೀ ಎನಗಿದ್ದರೆ ನಾ ನಿನಗೆ” ಎನ್ನುವಂತಹ ಸ್ವಾರ್ಥ ವಂಚನೆಗಳಿಲ್ಲದ ವ್ಯವಹಾರ. ಇದು ತಾನೇ ತಾನಾಗೆ ಜೀವಿಗಳಿಗೆ ತಿಳಿಯದೇ ನಡೆಯುತ್ತದೆ ಎಂದುಕೊಂಡರೂ ಅಲ್ಲಿ ಯಾರೂ ತಮ್ಮ ಸ್ವಾರ್ಥಕ್ಕಾಗಿ ಆ ಕೊಂಡಿಯನ್ನು ನಾಶ ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ಇವೆಲ್ಲಾ ಸಿದ್ಧಾಂತಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ತನ್ನ ಅವಶ್ಯಕತೆಗಿಂತ ಹೆಚ್ಚು ಪ್ರಕೃತಿಯನ್ನು ಉಪಯೋಗಿಸುತ್ತಾನೆ. ಆದರೆ ಪ್ರಕೃತಿಗೆ ಹಿಂದಕ್ಕೇನೂ ಕೊಡುವುದಿಲ್ಲ. ಬದಲಾಗಿ ದುರಾಸೆಯಿಂದ ಅದರ ನಾಶಕ್ಕೆ ತೊಡಗುತ್ತಾನೆ. ಇದ್ದ ಕಾಡುಗಳನ್ನು ಕಡಿದು ಜೀವ ಸಂಕುಲದ ಸರಪಳಿಯನ್ನೆ ಕತ್ತರಿಸುತ್ತಾನೆ. ಹರಿಯುವ ನೀರಿಗೆ ಒಡ್ಡು ಕಟ್ಟಿ ಬೇರೆಡೆಗೆ ಸಾಗಿಸಿ ಮಣ್ಣಿನ ಸತ್ವವನ್ನೇ ಅಡಗಿಸುತ್ತಾನೆ. ಬೀಸುವ ಗಾಳಿಯನ್ನೂ ವಿಷಮಯವಾಗಿಸುತ್ತಾನೆ. ಕಾಂಕ್ರೀಟ್ ಕಾಡುಗಳನ್ನು ಕಟ್ಟಿ ಮಳೆಯ ನೀರು ಇಂಗದಂತೆ ಮಾಡುತ್ತಾನೆ. ಮಣ್ಣು, ತಾನೇ ಬೆಳೆಯುವ ಬೆಳೆ ಹೀಗೆ ಎಲ್ಲವನ್ನೂ ವಿಷಮಯವಾಗಿಸಿ ಅದನ್ನೇ ಸೇವಿಸುತ್ತಾನೆ. ಮತ್ತೊಂದಷ್ಟು ರೋಗಗಳ ದಾಸನಾಗಿ ಅದರ ನಿವಾರಣೆಗೆ ಮತ್ತೆ ಪ್ರಕೃತಿಯ ಮೊರೆ ಹೋಗುತ್ತಾನೆ. ಆಗಲೂ ಕೃತಜ್ಞತಾ ಭಾವ ಅವನಲ್ಲಿರುವುದಿಲ್ಲ. ತನ್ನವರನ್ನೇ ಗುಲಾಮರನ್ನಾಗಿಸಿ ಅದೇ ಪರಮ ಸುಖ ಎಂಬಂತೆ ಮೆರೆಯುತ್ತಾನೆ. ಅಗಾಧವಾದ ಗೋಹತ್ಯೆ ನಡೆಯುತ್ತದೆ. ಕುರಿ, ಆಡು, ಆನೆ, ಹುಲಿ ಹೀಗೆ ಯಾವ ಪ್ರಾಣಿ-ಪಕ್ಷಿಗಳನ್ನೂ ಬಿಡುವುದಿಲ್ಲ. ಕೆಲವೆಡೆ ಕೊಬ್ಬಿದ ಹೋರಿಗಳಿಗೆ ಚುಚ್ಚಿ ಕೊಲ್ಲುವ ಸ್ಪರ್ದೆಗಳನ್ನಿಟ್ಟು ವಿಕೃತ ಸಂತೋಷ ಪಡೆಯಲಾಗುತ್ತದೆ. ಖುಷಿ ಕೊಡಬಲ್ಲಂಥವುಗಳನ್ನೆಲ್ಲಾ ನಾನು ಪಡೆಯಬೇಕು ಎನ್ನುವ ಆಸೆ ಇರುವವನಲ್ಲಿ ಪ್ರಕೃತಿಯ ಬಗೆಗೆ ಪ್ರೀತಿಗಿಂತ ದುರಾಸೆಯೇ ಬೆಳೆದುಬಿಡುತ್ತದೆ.

               ಯಾರೋ ಒಬ್ಬ ಸತ್ಯದ ಒಂದು ತುಣುಕನ್ನು ಹೇಳಿದ. ಆತನ ಅನುಯಾಯಿಗಳೆಂದುಕೊಂಡವರು ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಅನಾವರಣಗೊಂಡ ವಿಚಾರಕ್ಕೆ ತಮ್ಮದನ್ನು ಸೇರಿಸಿ ಸಾರ್ವಕಾಲಿಕ ಮತವನ್ನಾಗಿಸಿದರು. ಸಂಘಟನೆಗಳನ್ನೂ ರೂಪಿಸಿದರು. ಮನುಷ್ಯನ ಯೋಚಿಸುವ ಹಕ್ಕನ್ನೇ ಕಿತ್ತುಕೊಂಡರು. ತಮ್ಮದಲ್ಲದ್ದೆಲ್ಲವನ್ನೂ ಸುಟ್ಟುಹಾಕುವ ಮನಸ್ಥಿತಿಯನ್ನೇ ಹುಟ್ಟುಹಾಕಿದರು. ಅದರ ಫಲ ಇಂದು ರಾಕ್ಷಸ ರೂಪ ತಾಳಿ ಜಗತ್ತನ್ನೇ ಸುಡುತ್ತಿದೆ. ಮಾನವ ತನ್ನ ಸಹಜ ಧರ್ಮವನ್ನು ಮರೆತು ಯಾವುದೋ ಗ್ರಂಥಾಧಾರಿತ ಧರ್ಮಕ್ಕೆ ಜೋತುಬಿದ್ದು ಇಲ್ಲಸಲ್ಲದ ಅಧಿಕಪ್ರಸಂಗಕ್ಕೆ ಕೈ ಹಾಕುತ್ತಾನೆ. ದುಃಖಿಯಾಗುತ್ತಾನೆ. ವಿಜ್ಞಾನವನ್ನೇ ನಂಬುವ ಇಂದಿನ ಜನಾಂಗವು 80%ಕ್ಕೂ ಹೆಚ್ಚು ಖಾಯಿಲೆಗಳಿಗೆ ಪರ್ಯಾಯ ಕ್ರಮದಲ್ಲೇ ಪರಿಹಾರ ಪಡೆಯುತ್ತಿದೆ. ಸುಖವನ್ನು ವಸ್ತುವಿನಲ್ಲೇ ಹುಡುಕುವ ಮಂದಿಗೆ ವಿಜ್ಞಾನವೊಂದು ಮಾಧ್ಯಮವಾದರೂ, ಸಂಪಾದನೆಯಿಂದಲೇ ನೆಮ್ಮದಿ ಸಿಗುವುದಿದ್ದರೆ ಅಮೇರಿಕಾದಲ್ಲಿ ಜನರೇಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ಸಮಾನತೆಯೇ ಎಲ್ಲದಕ್ಕೂ ಪರಿಹಾರವೆಂದಾಗಿದ್ದಲ್ಲಿ ಚೈನಾದಲ್ಲಿ ಎಲ್ಲರೂ ನೆಮ್ಮದಿಯಿಂದಿರಬೇಕಾಗಿತ್ತು! ನಮ್ಮ ಋಷಿಮುನಿಗಳು ಅಷ್ಟೊಂದು ಸುಖೀ ಜೀವನವನ್ನು ನಡೆಸಿದ್ದು ಹೇಗೆ? ಅವರನ್ನು ನೆಮ್ಮದಿಯಲ್ಲಿಟ್ಟದ್ದು ಹಣವಾಗಲೀ ತರ್ಕವಾಗಲೀ ಅಲ್ಲ. ಜ್ಞಾನರ್ಜನೆಯ ದಾಹ. ತಾನಾರೆಂದು ಅರಿತುಕೊಳ್ಳುವ ಇಂಗಿತ. ಪ್ರಕೃತಿಯ ಮಡಿಲಲ್ಲಿದ್ದುಕೊಂಡು ಪ್ರಕೃತಿಯೊಳಗೊಂದಾಗಿ ಅದಕ್ಕೆ ಹಾನಿ ಮಾಡದೆ ಸರಳತೆ, ಯೋಗ, ಧ್ಯಾನ-ಧಾರಣಗಳ ಫಲ. ಇಂದಿಗೂ ಸರಳ ಆಹಾರ ಪದ್ದತಿ, ಯೋಗ, ಪ್ರಾಣಾಯಾಮ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡವರು ಯಾವುದೇ ಗೊಂದಲಗಳಿಲ್ಲದೆ ಆರೋಗ್ಯವಂತ ಜೀವನವನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಮನುಷ್ಯ ಸೃಜನಶೀಲನಾಗಬೇಕಾದರೆ ಬಂಧನಗಳಿರಬಾರದು. ಮಾತ್ರವಲ್ಲ ಆತ ತನ್ನ ಯೋಚಿಸುವ ಅದಕ್ಕಿಂತಲೂ ಮುಖ್ಯವಾಗಿ ವಿವೇಚಿಸುವ ಶಕ್ತಿಯನ್ನು ಕಳೆದುಕೊಳ್ಳಬಾರದು. ವಿವೇಕಾನಂದರು ಹೇಳುತ್ತಾರೆ "ಏಳು, ಎದ್ದೇಳು. ನಿನ್ನ ಭವಿಷ್ಯತ್ತಿನ ನಿರ್ಮಾಣಕ್ಕೆ ಬೇಕಾದ ಶಕ್ತಿ ಸಾಮರ್ಥ್ಯ ನಿನ್ನಲ್ಲೇ ಇದೆ." ಎಂದು. ರಮಣರಂತೂ ತನ್ನ ಬಳಿ ಜ್ಞಾನಾಕಾಂಕ್ಷಿಗಳಾಗಿ ಬಂದವರಿಗೆ "ನಾನು ಯಾರು?" ಎಂಬ ಪ್ರಶ್ನೆಗೆ ಮೊದಲು ನಿನ್ನಲ್ಲೇ ಉತ್ತರವನ್ನು ಕಂಡು ಹಿಡಿ ಎಂದರು. ನೆಮ್ಮದಿ ಎನ್ನುವುದು ದೊಡ್ಡ ದೊಡ್ಡ ಕಟ್ಟಡಗಳಲ್ಲಿ, ಭವ್ಯ ಸಮಾರಂಭಗಳಲ್ಲಿ, ಕೈಗೆ ಸಿಗುವ ಬೃಹತ್ತಾದ ಪಗಾರದಲ್ಲಿ, ಭೂರಿ ಭೋಜನದಲ್ಲಿ, ಮನರಂಜಕ ತಾಣ-ಮಾಧ್ಯಮ-ವಿಚಾರಗಳಲ್ಲಿ ಇಲ್ಲ. ನಿಮ್ಮಲ್ಲೇ ಇದೆ. ನೀವು ಯಾರು, ಯಾಕಾಗಿ ಇಲ್ಲಿ ಬಂದಿರಿ, ಯಾಕಾಗಿ ಇಲ್ಲಿ ಇದ್ದೀರಿ, ಮುಂದೆ ಎಲ್ಲಿ ಹೋಗುವಿರಿ, ಎನ್ನುವುದನ್ನು ಅರಿಯುವುದರಲ್ಲಿದೆ.  ಜೀವ ಕೊಟ್ಟ ಪ್ರಕೃತಿ ಮಾತೆಗೆ ಹಾನಿ ಮಾಡದೇ ಅವಳಲ್ಲೊಂದಾಗಿ ಬದುಕುವುದರಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ