ಪುಟಗಳು

ಮಂಗಳವಾರ, ಮಾರ್ಚ್ 3, 2015

ಸೇವೆಯ ಹಿಂದಿನ ತೆರೆ ಸ'ರಿದಾಗ ಕಂಡಿದ್ದು ಮತಾಂತರವೆಂಬ ಪವಿತ್ರ ಸತ್ಯ!

ಸೇವೆಯ ಹಿಂದಿನ ತೆರೆ ಸ'ರಿದಾಗ ಕಂಡಿದ್ದು ಮತಾಂತರವೆಂಬ ಪವಿತ್ರ ಸತ್ಯ!

                     ನೊಬೆಲ್ ಶಾಂತಿ ಪಾರಿತೋಷಕ ಪುರಸ್ಕೃತೆ ಮದರ್ ತೆರೇಸಾ ಅವರ ನಿಸ್ವಾರ್ಥ ಸೇವೆ ಹಿಂದೆ ಮತಾಂತರ ಹುನ್ನಾರವಿತ್ತು ಎಂದು ಸರಸಂಘಚಾಲಕ ಮೋಹನ್ ಭಾಗ್ವತ್ ಜೀ ನೀಡಿದ ಹೇಳಿಕೆ ಸಹಜವಾಗಿಯೇ ವಿವಾದಕ್ಕೊಳಗಾಗಿದೆ. ತೆರೇಸಾ ಎಂದರೆ ಪರೋಪಕಾರ ಬುದ್ಧಿ, ಸ್ವಾರ್ಥರಹಿತ ಸ್ವಭಾವ, ಸಮಾಜಮುಖಿ ಬದುಕು ನಡೆಸಿದ ನಿಗರ್ವಿ, ದೀನದಲಿತರ ಆಶಾಕಿರಣ ಎಂದೇ ಇಂದಿಗೂ ಕೊಂಡಾಡುವವರಿರುವಾಗ ಹಾಗೂ ಬಲಪಂಥೀಯರ ಯಾವುದೇ ಕಾರ್ಯವನ್ನು ಶತಾಯಗತಾಯ ವಿರೋಧಿಸಲೇಬೇಕು ಎನ್ನುವ ಸೆಕ್ಯುಲರುಗಳಿಂದ ತುಂಬಿರುವ ಸಮಾಜದಲ್ಲಿ ಈ ವಿರೋಧ-ವಿವಾದಗಳು ವಿಶೇಷವೇನಲ್ಲ. ಆದರೆ ತನ್ನ ಅನುಪಮ ಸಮಾಜಸೇವೆಗೆಂದೇ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮದರ್ ತೆರೇಸಾ ನಿಜವಾಗಿಯೂ ಸೇವೆಯ ಪ್ರತಿರೂಪವಾಗಿದ್ದರೆ ಅಥವಾ ಶ್ರೀ ಭಾಗವತ್ ಜೀ ಹೇಳಿದಂತೆ ಸೇವೆಯ ಹಿಂದೆ ಮತಾಂತರವೇ ಮುಖ್ಯ ಉದ್ದೇಶವಾಗಿತ್ತೇ ಎನ್ನುವುದು ಪೂರ್ವಾಗ್ರಹ ಪೀಡಿತರಾಗದೇ ವಸ್ತುನಿಷ್ಠವಾಗಿ ವಿಶ್ಲೇಷಿಸಿದಾಗ ಮಾತ್ರ ತಿಳಿದೀತು. ಮಾತ್ರವಲ್ಲ ಭಾರತ ವಿರೋಧಿಗಳು ಹೇಗೆ ಇತಿಹಾಸವನ್ನು ಮರೆಮಾಚಿದಂತೆ ವರ್ತಮಾನವನ್ನೂ ಭಾರತೀಯರಿಂದ ಮುಚ್ಚಿಟ್ಟರು ಎನ್ನುವ ವಿಚಾರ ಅರಿವಾದೀತು.
                   80ರ ದಶಕದಲ್ಲಿ ತೆರೇಸಾರ ಸೇವಾ ಆಶ್ರಮದಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸ್ಥಿತಿಗತಿಗಳನ್ನೆಲ್ಲಾ ಕಣ್ಣಾರೆ ಕಂಡಿದ್ದ "ಏಷಿಯಾ ವೀಕ್" ಮ್ಯಾಗಝೀನಿನ ವರದಿಗಾರನೊಬ್ಬ ಹೇಳಿರುವ ಮಾತುಗಳು ಈ ಸೇವಾ ಮೂರ್ತಿಯ ತೆರೆಮರೆಯ ಸತ್ಯ ಕಥೆಯನ್ನು ತೆರೆದಿಡುತ್ತವೆ. "ಇನ್ನೇನು ಸಾಯುವ ಸ್ಥಿತಿಯಲ್ಲಿರುವ ರೋಗಿಗಳನ್ನು ಆಶ್ರಮದೊಳಗೆ ತರಲಾಗುತ್ತಿತ್ತು. ಅವರನ್ನು ನೆಲದ ಮೇಲೆ ಹಾಗೆಯೇ ಎಸೆಯಲಾಗುತ್ತಿತ್ತು. ಬಹುತೇಕ ಮಲೆಯಾಳಿಗಳಿದ್ದ ದಾದಿಯರ ಪಡೆಯೊಂದು ಇವರನ್ನು ಅಡಿಗಡಿಗೆ ಗದರಿಸುತ್ತಾ ಔಷಧಗಳನ್ನು ನೀಡುತ್ತಿತ್ತು. ಆ ಔಷಧಗಳ್ಯಾವುವು ಗೊತ್ತೇ? "ನೋವು ನಿವಾರಕ ಮಾತ್ರೆಗಳು"! ಆ ವ್ಯಕ್ತಿಗೆ ಪ್ರಜ್ಞೆ ಮರುಕಳಿಸಿದ ಕೂಡಲೇ ಆತನನ್ನು ಮತಾಂತರಿಸುವ ಪ್ರಕ್ರಿಯೆ ಆರಂಭವಾಗುತ್ತಿತ್ತು. ಇವೆಲ್ಲವು ತೆರೇಸಾರ ಸಮ್ಮುಖದಲ್ಲೇ ಅವರ ಮುತುವರ್ಜಿಯಲ್ಲೇ ನಡೆಯುತ್ತಿತ್ತು. ಅಲ್ಲೇ ರೋಗಪೀಡಿತ ಮಕ್ಕಳಿಗೆ ಸದಾ ಬೈಯುತ್ತಾ ಚೀರಾಡುತ್ತಾ ಇದ್ದ ದಾದಿಯರ ಕಣ್ಗಾವಲಿನಲ್ಲಿ ಬೈಬಲಿನ ತರಗತಿಗಳು ನಡೆಯುತ್ತಿದ್ದವು……" ಮತಾಂತರ ನಡೆಸುತ್ತಿಲ್ಲವಾದರೆ ಬೈಬಲ್ ತರಗತಿಗಳೇಕೆ ನಡೆಯುತ್ತಿದ್ದವು. ಸೇವೆಯೆಂದಾಗಿದ್ದರೆ ಯೋಗ್ಯ ಔಷಧಗಳನ್ನು ನೀಡುವ ಬದಲು ನೋವು ನಿವಾರಕ ಮಾತ್ರೆಗಳನ್ನಷ್ಟೇ ನೀಡುತ್ತಿದ್ದದ್ದೇಕೆ? ನೊಬೆಲ್ ಪ್ರಶಸ್ತಿ ಪಡೆದ ಮಹಾಮಾತೆ ರೋಗಿಗಳನ್ನು ಬರೀ ನೆಲದಲ್ಲಿ ಎಸೆಯುತ್ತಿದ್ದದ್ದೇಕೆ? ಒಂದು ವೇಳೆ ತೆರೇಸಾ ಮತಾಂತರ ಮಾಡುತ್ತಿಲ್ಲವಾಗಿದ್ದರೆ, ಮೊರಾರ್ಜಿ ದೇಸಾಯಿ ಸರಕಾರವಿದ್ದಾಗ ಸಂಸತ್ತಿನಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆದು ಬಲವಂತದ ಮತಾಂತರ ಕೂಡದೆಂದು ಹೆಚ್ಚಿನವರು ಪ್ರತಿಪಾದಿಸಿ, ಸಂಸದ ಓಂಪ್ರಕಾಶ್ ತ್ಯಾಗಿ ಬಲವಂತದ ಮತಾಂತರದ ನಿಷೇಧದ ಮಸೂದೆಯನ್ನು ಮಂಡಿಸಹೊರಟಾಗ, ಇದೇ “ಮಹಾನ್ ಸೇವಾ ಮಾತೆ” ಪ್ರಧಾನ ಮಂತ್ರಿಗಳಿಗೆ ಮತಾಂತರವನ್ನು ವಿರೋಧಿಸಕೂಡದೆಂದು ಪತ್ರ ಬರೆದದ್ದೇಕೆ?
                  ತೆರೇಸಾ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಲಕ್ಷಗಟ್ಟಲೆ ಡಾಲರ್ ಹಣ ಬಂದು ಬೀಳುತ್ತಿದ್ದರೂ ಅದರಲ್ಲಿ ರೋಗಿಗಳ ಬಳಕೆಗೆ ಪುಡಿಗಾಸಿನಷ್ಟು ಮಾತ್ರ ಖರ್ಚಾಗಿ ಉಳಿದದ್ದು ಗುಪ್ತ ಖಾತೆಗಳಲ್ಲಿ ಜಮಾವಣೆಯಾಗುತ್ತಿತ್ತು. ಅವರ ಮಿಷನರೀಸ್ ಆಫ್ ಚಾರಿಟಿಸಂಸ್ಥೆಯಲ್ಲಿ ಮರಣಶಯ್ಯೆಯಲ್ಲಿದ್ದ ರೋಗಿಗಳಿಗೆ ಆಂಬ್ಯುಲೆನ್ಸ್ ಸೌಕರ್ಯವೇ ಇರಲಿಲ್ಲ. ಭೋಪಾಲ್ ಅನಿಲ ದುರಂತವಾದಾಗ ಅಲ್ಲಿಗೆ ತೆರಳಿದ ತೆರೇಸಾ ಸಂತ್ರಸ್ಥರ ಸೇವೆ ಮಾಡುವ ಬದಲು ಅವರಿಗೆಲ್ಲ ಏಸುವಿನ ತಾಯಿಯ ಚಿತ್ರವಿರುವ ಪದಕಗಳನ್ನುಹಂಚತೊಡಗಿದರು. ಅವರ ಆಶ್ರಮದಲ್ಲಿ ಕ್ಷಯರೋಗ ಪೀಡಿತರನ್ನು ಪ್ರತ್ಯೇಕಿಸಿ ಇಡದ ಕಾರಣ ರೋಗ ಇನ್ನಷ್ಟು ಹಬ್ಬಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿತ್ತು. ಈ ಮಾನವತೆಯೇ ಮೈವೆತ್ತ ಸೇವಾ ಮೂರ್ತಿ  ಹೈಟಿಯ ಮಾಜಿಸರ್ವಾಧಿಕಾರಿ ಜೀನ್ ಕ್ಲಾಡ್ ಡುವೇಲಿಯರ್ ನಿಂದಲೂ ಹಣ ಪಡೆದು ತನ್ನ ಖಾತೆಗೆ ಜಮಾ ಮಾಡಿಕೊಂಡರು. "ಫೀಟಿಂಗ್ ಸೇವಿಂಗ್ಸ್ ಆಂಡ್ ಲೋನ್ಸ್" ಎನ್ನುವ ಹಣಕಾಸು ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ಮೋಸ ಮಾಡಿ ಅವರ ಬದುಕಿಗೆ ಕೊಳ್ಳಿಇಟ್ಟಿದ್ದ ಚಾರ್ಲ್ಸ್ ಫೀಟಿಂಗ್ಸ್ ಎನ್ನುವ ಧೂರ್ತನ ವಿಚಾರಣೆ ನಡೆಯುತ್ತಿದ್ದಾಗ ಆತನನ್ನು ಕ್ಷಮಿಸಿ ಎಂದು ನ್ಯಾಯಾಧೀಶರಿಗೆ ಹೇಳಿದ್ದಲ್ಲದೆ ಆತನಿಂದ 1.25 ಮಿಲಿಯನ್ ಡಾಲರ್ ಹಣವನ್ನು ದೇಣಿಗೆಯಾಗಿ ಪಡೆದರು. ತನ್ನ ಉದ್ಯೋಗಿಗಳ ಪಿಂಚಣಿ ನಿಧಿಯಿಂದ 450ದಶಲಕ್ಷ ಪೌಂಡ್ನಷ್ಟು ಹಣ ದುರುಪಯೋಗಪಡಿಸಿಕೊಂಡಿದ್ದ ರಾಬರ್ಟ್ ಮ್ಯಾಕ್ಸವೆಲ್ ಎಂಬ ಬ್ರಿಟಿಷ್ ಪ್ರಕಾಶಕನಿಂದಲೂ ತೆರೇಸಾ ಹಣ ಪಡೆದು ಕಳಂಕ ಅಂಟಿಸಿಕೊಂಡರು. ತೆರೇಸಾರ ಮಿಷನರೀ ಆಫ್ ಚಾರಿಟಿ  ಸ್ವೀಕರಿಸಿದ ದೇಣಿಗೆಯ ಶೇ.7ರಷ್ಟು ಮಾತ್ರಸೇವಾ ಕಾರ್ಯಕ್ಕೆ ಬಳಸುತ್ತಿತ್ತು ಎಂದು ‘ಸ್ಟರ್ನ್’ ಎಂಬ ಜರ್ಮನ್ ನಿಯತಕಾಲಿಕ ವರದಿ ಮಾಡಿತ್ತು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದ ತೆರೇಸಾ ಬದಲಾಗಿ "ಭಾರತ ರತ್ನ"ವನ್ನು ಪಡೆದರು.
                       ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ದಂಪತಿಗಳಿಬ್ಬರು ಅನಾಥಾಶ್ರಮದಿಂದ ಮಗುವೊಂದನ್ನು ದತ್ತು ತೆಗೆದುಕೊಳ್ಳಬೇಕೆಂದು ತೆರೇಸಾ ಬಳಿ ಸಮಾಲೋಚಿಸಿದರು. ಆದರೆ ದಂಪತಿಗಳು ಮಗುವೊಂದನ್ನು ನೋಡಿ ದತ್ತಕಕ್ಕೆ ಬೇಕಾದ ಎಲ್ಲಾ ಸಿದ್ಧತೆ ನಡೆದ ಮೇಲೆದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ಮದರ್ ತೆರೆಸಾ ನಿರಾಕರಿಸಿದರು. ಅನಾಥಾಲಯದಲ್ಲಿ ಯಾವುದೇ ಅನಾಥ ಮಕ್ಕಳು ಇಲ್ಲ ಎಂದರು! 7000 ಜನರಿರುವ ಅನಾಥಾಶ್ರಮದಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥಮಗುವಿಲ್ಲ ಎಂದರೆ ಏನರ್ಥ? ವಾಸ್ತವದಲ್ಲಿ ದಂಪತಿಗಳು ದತ್ತಕದ ಮನವಿ ಪತ್ರದಲ್ಲಿ ತಾವು ಪ್ರೊಟೆಸ್ಟಂಟುಗಳೆಂದು ಸೂಚಿಸಿದ್ದೇ ಇದಕ್ಕೆ ಕಾರಣವಾಗಿತ್ತು. ಅಲ್ಲದೆ ತೆರೇಸಾ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ,ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸ ಕುಂಠಿತಗೊಳ್ಳಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’ ಎಂದರು. ಅರೇ, ಹಿಂದೂಗಳಾಗಿದ್ದವರೆಲ್ಲಾ ಕ್ಯಾಥೋಲಿಕ್ ಆದದ್ದು ಹೇಗೆ? ಸೇವೆಯ ಹೆಸರಿನಲ್ಲಿನಮತಾಂತರದಿಂದಲೇ ಅಲ್ಲವೇ? ಅಲ್ಲದೇ ಕ್ಯಾಥೋಲಿಕರನ್ನು ಪ್ರೊಟೆಸ್ಟಂಟರನ್ನಾಗಿಸುವುದರಿಂದ ಮಕ್ಕಳ ಮಾನಸಿಕ ವಿಕಾಸಕ್ಕೆ ಧಕ್ಕೆ ಉಂಟಾಗಬಹುದಾದರೆ ಹಿಂದೂಗಳಾಗಿದ್ದವರನ್ನು ಕ್ಯಾಥೋಲಿಕರನ್ನಾಗಿ ಮತಾಂತರಿಸಿದಾಗ ಈ ಮಹಾನ್ ಸಂತಳಿಗೆ ಅವರ ಮಾನಸಿಕ ವಿಕಸನದ ನೆನಪಾಗಲಿಲ್ಲವೇ?
                      ತೆರೇಸಾ ಎಂದರೆ ಜೀವಂತ ನಡೆದಾಡುವ ದೇವರೆಂದೇ ಭಾವಿಸಿರುವ ಅವರ ಅನೇಕ ಅನುಯಾಯಿಗಳು ಸರ್ಜ್ ಲ್ಯಾರಿವಿ, ಜೆನಿವೈವ್ ಚೆನಾರ್ಡ್ ಮತ್ತು ಕರೋಲ್ ಸೆನೆಚಲ್ ಎಂಬ ಕೆನಡಾದ ಮೂವರು ಪ್ರಾಧ್ಯಾಪಕರು ಆಳವಾದ ಅಧ್ಯಯನ ನಡೆಸಿಬರೆದಿರುವ “The Dark Side of Mother Teresa’ ಎಂಬ ಕೃತಿ ಓದಿದರೆ ಗಾಬರಿಗೊಳಗಾಗಬೇಕಾದೀತು. ತೆರೆಸಾ ನೊಬೆಲ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ‘ಗರ್ಭಪಾತವೆಂಬುದು ಶಾಂತಿಗೆ ವಿರುದ್ಧವಾಗಿರುವ ಕೆಟ್ಟ ಸಂಗತಿ’ ಎಂದಿದ್ದರು.ಅತ್ಯಾಚಾರಕ್ಕೊಳಗಾಗಿ ಗರ್ಭಧರಿಸಿದಾಕೆ ಗರ್ಭಪಾತಕ್ಕೆ ಮುಂದಾದರೆ ಅದು ಶಾಂತಿ ವಿರೋಧಿ ಹೇಗಾಗುತ್ತದೆ? ವಿವಾಹ ವಿಚ್ಛೇದನವನ್ನು ವಿರೋಧಿಸಿದ್ದ ತೆರೇಸಾ ಲೇಡಿ ಡಯಾನಾ ವಿಚ್ಛೇದನಕ್ಕೆ ಸಮ್ಮತಿಸಿದ್ದೇಕೆ? ಎಂದು ಈ ಕೃತಿಯಲ್ಲಿ ಲೇಖಕರು ಪ್ರಶ್ನಿಸಿದ್ದಾರೆ.ಅಲ್ಲದೆ ಆಶ್ರಮದಲ್ಲಿ ರೋಗಿಗಳ, ಮರಣಶಯ್ಯೆಯಲ್ಲಿರುವವರಿಗೆ ಶುಶ್ರೂಶೆ ನಡೆಸುತ್ತಿದ್ದ ರೀತಿ ಸಂಶಯ ತರುವಂತಿತ್ತು. ನಾನಾ ದೇಶಗಳಿಂದ ಅಗಾಧ ಪ್ರಮಾಣದ ಹಣ ಸಂಗ್ರಹಿಸಿದ್ದರೂ ಅದರಲ್ಲಿ ಅಲ್ಪ ಪ್ರಮಾಣದ ಮೊತ್ತವಷ್ಟೇ ರೋಗಿಗಳ ಏಳಿಗೆಗಾಗಿವಿನಿಯೋಗವಾಗುತ್ತಿತ್ತು. ಅವರ ಆಶ್ರಮದಲ್ಲಿ ಔಷಧಿಗಳಾಗಲಿ, ವೈದ್ಯಕೀಯ ಸಾಧನಗಳಾಗಲಿ, ಆಹಾರ ಪದಾರ್ಥಗಳಾಗಲಿ, ಅಷ್ಟೇ ಏಕೆ ನೋವು ನಿವಾರಕ ಮಾತ್ರೆಗಳಾಗಲಿ ಸಮರ್ಪಕವಾಗಿರುತ್ತಿರಲಿಲ್ಲವೆಂದು ಎಂದು ಈ ಕೃತಿ ಹೇಳಿದೆ.
               ತಮ್ಮ "ಹೆಲ್ಸ್ ಏಂಜೆಲ್" ಎನ್ನುವ ತಮ್ಮ ಪುಸ್ತಕದಲ್ಲಿ ಕ್ಯಾಥೋಲಿಕ್ ಸಮುದಾಯ ವಿಶ್ವದ ಬಲಿಷ್ಠ ಹಾಗೂ ಶ್ರೇಷ್ಠ ಸಮುದಾಯವಾಗಿದ್ದು ಚ್ಯಾರಿಟಿ, ಮಿಷನರಿಗಳು ಹಾಗೂ ಮತಾಂತರಗಳು ಅದರ ಮುಖ್ಯ ಕರ್ತವ್ಯವಾಗಿದೆ ಎಂದು ಬರೆದಿದ್ದಾರೆ ತೆರೇಸಾ. 1994ರಲ್ಲಿ ದಲಿತ ಕ್ರೈಸ್ತರ ಪರವಾಗಿ ಧರಣಿ ಕೂತಿದ್ದ ತೆರೇಸಾ ತನ್ಮೂಲಕ ಮತಾಂತರವನ್ನೂ ಕ್ರೈಸ್ತರೊಳಗಿನ ಜಾತಿವ್ಯವಸ್ಥೆಯನ್ನೂ, ಮತಾಂತರಕ್ಕೊಳಗಾದವರನ್ನು ಕೀಳಾಗಿ ನೋಡುವ ತಮ್ಮ ಮನೋವೃತ್ತಿಯನ್ನು ಬಹಿರಂಗಪಡಿಸಿದರು. ತನ್ನ ಆರೋಗ್ಯ ಕೆಟ್ಟಾಗ ವಿಶ್ವದ ಪ್ರತಿಷ್ಟಿತ ದುಬಾರಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದ ತೆರೇಸಾ ತನ್ನ ಆಶ್ರಮದಲ್ಲಿ ರೋಗಿಗಳಿಗೆ ಉಪಯೋಗಿಸುತ್ತಿದ್ದದ್ದು ಅದೇ ಸ್ವಚ್ಛಗೊಳಿಸದ ಸೂಜಿ, ಉಪಕರಣಗಳು, ಕಳಪೆ ಗುಣಮಟ್ಟದ ಔಷಧಿಗಳು. ಬಡಪಾಯಿ ಸ್ವರ್ಗಕ್ಕೆ ಹೋಗಲು ಒಪ್ಪಿದರೆ ಆತನಿಗೆ ಚಿಕಿತ್ಸೆ. ಕಾರಣ ಆತ "ಪವಿತ್ರ"ನಾಗಿ ಸಾಯುತ್ತಾನಲ್ಲವೇ! ಗರ್ಭಪಾತವನ್ನು, ಕುಟುಂಬ ನಿಯಂತ್ರಣವನ್ನು  ವಿರೋಧಿಸಿದ, ಸೇವೆಯ ಸೋಗಿನಲ್ಲಿ ಮತಾಂತರವನ್ನೇ ಉಸಿರಾಡಿದ "ಮಹಾನ್ ಮಾತೆಯೊಬ್ಬಳಿಗೆ" ನೊಬೆಲ್, ಭಾರತರತ್ನ ಸಹಿತ ಅನೇಕ ಪ್ರಶಸ್ತಿಗಳು ಕೊಡಲ್ಪಟ್ಟವು. ಯಾರದೋ ಸಹೃದಯರಿಂದ ಬದುಕಬಹುದಾಗಿದ್ದ, ಅಥವಾ ಬೀದಿಯಲ್ಲಿ ಜಗತ್ತಿನ ಜಂಜಡಗಳಿಲ್ಲದೆ ನಿಶ್ಚಿಂತೆಯಿಂದ ಪ್ರಾಣ ಕಳೆದುಕೊಳ್ಳಬಹುದಾಗಿದ್ದ ಸಾವಿರಾರು ಜೀವಗಳು ಆ "ಸೇವಾ ಮೂರ್ತಿ"ಯ "ಪವಿತ್ರ"ಗೊಳಿಸುವ ಕಾರ್ಯಕ್ಕೆ ಬಲಿಯಾದವಲ್ಲ! ಸೇವೆಯ ಸೋಗಿನಲ್ಲಿ ಮತಾಂತರ ಮಾಡುವ ಕಥೆ ಕೇವಲ ತೆರೇಸಾ ಒಬ್ಬರದ್ದೇ ಅಲ್ಲ. ಬ್ರಿಟಿಷರು ಬಂದಂದಿನಿಂದ ಇಂದಿನವರೆಗೂ ಮುಂದುವರಿಯುತ್ತಲೇ ಇದೆ. ಅಸಂಖ್ಯ ಹಿಂದೂಗಳು ಪ್ರತಿನಿತ್ಯ ಮತಾಂತರವಾಗುತ್ತಲೇ ಇದ್ದಾರೆ. ಆ ಮಿಷನರಿಗಳನ್ನು ಬೆಂಬಲಿಸುವ ಮಂದಿಯೇ "ಘರ್ ವಾಪಸಿ"ಯನ್ನು ವಿರೋಧಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ