ನಿರೀಕ್ಷಿಸಿದಂತೆಯೇ ಆಗಿದೆ. ಸಂಘಟನೆಯೊಂದನ್ನು ಸೃಷ್ಟಿಸಿ ತದನಂತರದಲ್ಲಿ ತತ್ವಗಳನ್ನು ಹುಡುಕಿಕೊಂಡು ಹೋದರೆ ಸಂಘಟನೆಯ ಪರಿಸ್ಥಿತಿ ಏನಾಗಬಹುದು ಎನ್ನುವುದರ ಸ್ಪಷ್ಟ ಚಿತ್ರಣಕ್ಕೆ ತಾನೊಬ್ಬನೇ ಪ್ರಾಮಾಣಿಕ ಎಂದು ಬೀಗುತ್ತಿದ್ದ ಆಮ್ ಆದ್ಮಿ ಪಕ್ಷ ಅಲ್ಲಲ್ಲಾ ಕೇಜ್ರಿವಾಲ್ ಪಕ್ಷ ಸಾಕ್ಷಿಯಾಗಿದೆ. 49 ದಿನಗಳ ಹುಚ್ಚಾಟದ ನಂತರವೂ ದೆಹಲಿಯ ಜನತೆ ಭರವಸೆ ಇಟ್ಟು ಕೊಟ್ಟ ಬಹುಮತಕ್ಕೆ ಕೊಳ್ಳಿ ಇಟ್ಟಿದೆ ಆಪ್! ದಿಲ್ಲಿಯಲ್ಲಿ ನಂಬಲಸಾಧ್ಯ ಚುನಾವಣಾ ಫಲಿತಾಂಶದೊಂದಿಗೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಪದೇಪದೇ ಋಣಾತ್ಮಕ ಕಾರಣಗಳಿಗಾಗಿ ಸುದ್ದಿಯ ಕೇಂದ್ರ ಬಿಂದುವಾಗುತ್ತಿದೆ. ಆಪ್ ಒಳಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುತ್ತಿದೆ. ಆಮ್ ಆದ್ಮಿ ಪಕ್ಷವನ್ನು ಕಾಡುತ್ತಿರುವ ಸಿದ್ಧಾಂತದ ಮರೆವು, ಪಕ್ಷದೊಳಗೆ ನಿಯಂತ್ರಣಕ್ಕಾಗಿ ಮೇಲಾಟ, ವಿಶ್ವಾಸಾರ್ಹತೆಯ ಕೊರತೆಯಂತಹ ಕಾಯಿಲೆಗಳು ಅತ್ಯಂತ ಉಲ್ಬಣಾವಸ್ಥೆಗೆ ತಲುಪಿವೆ. ಅತ್ಯಂತ ಅಶಿಸ್ತನ್ನು ಪ್ರದರ್ಶಿಸುತ್ತಿರುವ ಆಪ್ ನಾಯಕರು ತಾವು ಈಗ ಚಳವಳಿಗಾರರಲ್ಲ; ಆಡಳಿತ ನಡೆಸಬೇಕಾದ ಜನಪ್ರತಿನಿಧಿಗಳು ಎಂಬುದನ್ನೇ ಮರೆತಿದ್ದಾರೆ. ದಿಲ್ಲಿಯ ಜನರು ಆಪ್ ಸರಕಾರವನ್ನು ಬಯಸಿದ್ದು ಇದಕ್ಕಾಗಿಯೇ?
ಕಾಂಗ್ರೆಸ್ ವಿರುದ್ದ ಪ್ರಚಾರ ಮಾಡಿ, ಕಾಂಗ್ರೆಸನ್ನು ಸಂಪೂರ್ಣವಾಗಿ ಕಿತ್ತೆಸೆಯುತ್ತೇವೆಂದು ಡಂಗುರ ಸಾರಿ, ಎಂತಹ ಪರಿಸ್ಥಿತಿಯಲ್ಲಿಯೂ ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಹೇಳಿದ್ದ ಆಮ್ ಆದ್ಮಿ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಸರಕಾರ ರಚಿಸಲು ಕಾಂಗ್ರೆಸ್ ಕೈ ಹಿಡಿದಾಗಲೇ ದೆಹಲಿಯ ಜನತೆ ಎಚ್ಚೆತ್ತುಕೊಳ್ಳಬೇಕಿತ್ತು! ಶೀಲಾ ದೀಕ್ಷಿತ್ ವಿರುದ್ದ 300 ಪುಟಗಳ ಪುರಾವೆ ಇದೆ, ಅಧಿಕಾರಕ್ಕೆ ಬಂದ ಹದಿನೈದು ದಿನಗಳೊಳಗೆ ಶೀಲಾರನ್ನು ಜೈಲಿಗಟ್ಟುತ್ತೇನೆಂದ ಅರವಿಂದ ಅಧಿಕಾರಕ್ಕೆ ಬಂದ ಮೇಲೆ ಭಾಜಪಾಕ್ಕೆ ಸಾಕ್ಷ್ಯಾಧಾರ ಒದಗಿಸಲು ಕೇಳಿದ್ದು ಆಮ್ ಆದ್ಮಿಯ ಬಣ್ಣ ಬಯಲು ಮಾಡಿದ ಮುಖ್ಯ ಅಂಶ! ರಾಜಕೀಯ ಪ್ರವೇಶಿಸುವುದಿಲ್ಲವೆಂದು ಹೇಳುತ್ತಲೇ ಪಕ್ಷ ಕಟ್ಟಿದರು. ಯಾವುದೇ ಪಕ್ಷವನ್ನು ಬೆಂಬಲಿಸಲಾರೆ ಎಂದು ಬಡಬಡಿಸಿ "ಕೈ" ಹಿಡಿದರು. ಚುನಾವಣೆ ಮೊದಲು ನೀಡಿದ ಭರವಸೆಗಳಲ್ಲಿ ಯಾವೊಂದನ್ನೂ ಪೂರೈಸದೇ ಸ್ವಪಕ್ಷೀಯರಿಂದಲೇ ನಿಂದನೆಗೊಳಗಾದರು. ಕಾರಿನಲ್ಲಿ ಸಂಪುಟ ಸಭೆ ನಡೆಸುವುದು, ಬೀದಿಯಲ್ಲಿ ಕಡತ ವಿಲೇವಾರಿ ಮಾಡುವುದು ಪಾರದರ್ಶಕ ಆಡಳಿತವೇ? ನ್ಯಾಯಾಧೀಶರ ಅದಿಕಾರವನ್ನು ಮೊಟಕುಗೊಳಿಸಬೇಕು ಎನ್ನುವುದು, ನ್ಯಾಯಾಂಗ ಕಾರ್ಯಾಂಗದಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುವುದು, ಪ್ರತ್ಯೇಕತವಾದಿಗಳನ್ನು ಪ್ರೋತ್ಸಾಹಿಸುವುದು, ಸಲಿಂಗ ಕಾಮವನ್ನು ಪ್ರೋತ್ಸಾಹಿಸುವುದು, ದೂರವಾಣಿ ಸಂದೇಶದ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಸರ್ಕಾರ ರಚಿಸುವುದು, ನಿತ್ಯ ಬೀದಿಯಲ್ಲಿ ನಿಂತು ಕೂಗಾಡುವುದು, ಸದಾ ಮಾಧ್ಯಮದ ಮುಂದೆ ಬಡಬಡಿಸುವುದು ಒಟ್ಟಾರೆ ಒಂದು ದಿನವೂ ಆಡಳಿತವನ್ನು ನಡೆಸಲೇ ಇಲ್ಲ. ಸೋಮನಾಥ್ ಭರ್ತಿ ನಡುರಾತ್ರಿಯಲ್ಲಿ ಆಫ್ರಿಕಾ ಮಹಿಳೆಯರ ಮನೆಗೆ ನುಗ್ಗಿದ ಪರಿಣಾಮ 22 ಆಫ್ರಿಕನ್ ದೇಶಗಳಿಗೆ ಸಮಜಾಯಿಷಿ ನೀಡಬೇಕಾಗಿ ಬಂತು! ಲೋಕಪಾಲ ವಿಧೇಯಕವನ್ನು ನಿಯಮಾವಳಿಗಳಿಗನುಸಾರವಾಗಿ ಸಲ್ಲಿಸದೇ ಭಾಜಪಾ, ಕಾಂಗ್ರೆಸ್ ಶಾಸಕರು ಬೆಂಬಲಿಸಲಿಲ್ಲವೆಂದು ಕೂಗಾಡಿದರು. ದೇಶ ಮೊದಲು ಜಾತಿ, ಮತವಲ್ಲ ಎಂದವರು ಭಯೋತ್ಪಾದಕಿ ಇಶ್ರತ್ ಜಹಾನ್'ಳದ್ದು ನಕಲಿ ಎನ್ ಕೌಂಟರ್ ಎಂದರು. ಹಿಂದೂಗಳ ಮೇಲೆ ದೌರ್ಜನ್ಯವೆಸಗಿ 32 ಪ್ರಕರಣಗಳನ್ನು ಎದುರಿಸುತ್ತಿರುವ ರಜಾರನ್ನು ಭೇಟಿಯಾಗಿ ಬೆಂಬಲ ಕೋರಿದರು. ತಸ್ಲಿಮಾ ನಸ್ರೀನ್ ವಿರುದ್ದ ಫತ್ವಾ ಹೊರಡಿಸಿದ್ದ ಮೌಲಾನಾ ತೌಕೀರ್ ಹೆಣ್ಣುಮಕ್ಕಳ ಮೇಲೆ ಫತ್ವಾವನ್ನೇ ಹೊರಡಿಸಿಲ್ಲ ಎಂದರು! ಇಷ್ಟೆಲ್ಲಾ ಘನ ಕಾರ್ಯ ಮಾಡಿದರೂ ಜನ ಮತ್ತೊಮ್ಮೆ ಆಶೀರ್ವದಿಸಿದರು. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಸಮೀಕ್ಷೆಗಳು, ನಿರೀಕ್ಷೆಗಳನ್ನೆಲ್ಲ ಬುಡಮೇಲು ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಹಾಕಿತ್ತು. ಆದರೆ, ಆಪ್ ಸರಕಾರದ ಮಧುಚಂದ್ರ ಅವಧಿ ಮುಗಿಯುವ ಮುನ್ನವೇ ಒಳಜಗಳ ಸ್ಫೋಟಗೊಂಡು ಈಗ ತಾರಕಕ್ಕೇರಿದೆ. ದಿನಕ್ಕೊಂದು ವಿವಾದಗಳು, ಹಗರಣಗಳು, ಆರೋಪ- ಪ್ರತ್ಯಾರೋಪಗಳ ಭರಾಟೆಯಲ್ಲಿ ಆಡಳಿತ ಮೂಲೆಗುಂಪಾಗಿದೆ.
ಆಪ್ನಲ್ಲಿ ಈಗ ನಡೆಯುತ್ತಿರುವ ಒಳಜಗಳಗಳ ಛಾಯೆ ಚುನಾವಣೆಗೂ ಮುನ್ನವೇ ಕಾಣಿಸಿಕೊಂಡಿತ್ತು. ಕಿರಣ್ ಬೇಡಿ ಆಪ್ ತ್ಯಜಿಸಿ ಬಿಜೆಪಿ ಸೇರಿದ್ದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದರ ಸೂಚನೆಯಾಗಿತ್ತು ಎಂದರೆ ತಪ್ಪಾಗದು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಏಕಪಕ್ಷಿಯವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಪ್ರಶಾಂತ್ ಭೂಷಣ್ ಮತ್ತು ಯಾದವ್ ಅವರು ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗೆ ಬರೆದ ಪತ್ರಗಳು ಬಹಿರಂಗವಾಗುತ್ತಿದ್ದಂತೆ ಆಮ್ ಆದ್ಮೀಯಲ್ಲಿನ ಭಿನ್ನಮತ-ಒಳಜಗಳ ಬೀದಿಗೆ ಬಂದಿತು. ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್, ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಕಳೆದ ಚುನಾವಣೆಯಲ್ಲಿ ಆಮ್ ಆದ್ಮೀ ವಿರುದ್ಧ ಕೆಲಸ ಮಾಡಿದ್ದರು ಎಂಬ ಆರೋಪ ಮಾಡಿದರು. ಬಳಿಕ ಈ ನಾಯಕರ ಉಚ್ಚಾಟನೆಯೂ ನಡೆಯಿತು. ಈಗ ಅರವಿಂದ ಕೇಜ್ರಿವಾಲ್ - ಮನೀಶ್ ಸಿಸೋದಿಯಾ ನಡುವಣ ಶಾಸಕರ ಕುದುರೆ ವ್ಯಾಪಾರದ ರಹಸ್ಯ ಸಂಭಾಷಣೆಯ ಟೇಪ್ ಬಹಿರಂಗವಾಗಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಆಪ್ ಪರಮೋಚ್ಚ ನಾಯಕ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಕ್ಷವನ್ನು ಉಕ್ಕಿನ ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ ಎನ್ನುವುದು ಒಂದು ಆರೋಪವಾದರೆ ಅವರು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ರಾಜೇಶ್ ಗರ್ಗ್ ಬಹಿರಂಗಪಡಿಸಿರುವ ಟೇಪ್ ಪುಷ್ಟಿಯೊದಗಿಸಿದೆ. ಟೇಪ್ ಸಂಭಾಷಣೆ ಪಕ್ಷದ ಸಿದ್ಧಾಂತಕ್ಕೆ ಬಿಟ್ಟ ತಿಲಾಂಜಲಿಯೇ ಸರಿ. ತತ್ಪರಿಣಾಮ ಗಾರ್ಗ್'ಗೆ ಅಂತಾರಾಷ್ಟ್ರೀಯ ಸಂಖ್ಯೆಯೊಂದರಿಂದ ಜೀವ ಬೆದರಿಕೆ ಕರೆಯೂ ಬಂತು. ಕುದುರೆ ವ್ಯಾಪಾರ ಪ್ರಯತ್ನದ ಸುದ್ದಿ ಹೊರಬೀಳುತ್ತಲೇ ಅಸಮಧಾನಗೊಂಡ ಮಹಾರಾಷ್ಟ್ರದ ಹಿರಿಯ ನಾಯಕಿ ಅಂಜಲಿ ದಮಾನಿಯಾ ಆಪ್ ಗೆ ರಾಜೀನಾಮೆ ನೀಡಿದ್ದೂ ಆಯಿತು. ಅಲ್ಲಿಂದ ಮುಂದೆ ಆಮ್ ಆದ್ಮಿಯಿಂದ ಒಬ್ಬೊಬ್ಬರೇ ಹೊರಬರಲಾರಂಭಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಖರೀದಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಮುಸ್ಲಿಮರಿಗೆ ಆಪ್ ಪಕ್ಷವೊಂದೇ ಪರ್ಯಾಯ ದಾರಿ ಎಂದು ಕೇಜ್ರಿವಾಲ್ ಹೇಳಿರುವ ಆಡಿಯೋ ಟೇಪ್ ಬಿಡುಗಡೆಯಾಗಿದೆ.ಇದರಲ್ಲಿ “ನರೇಂದ್ರ ಮೋದಿ ಅಲೆಯನ್ನು ತಡೆಗಟ್ಟಲು ಮುಸ್ಲಿಮರಿಗೆ ಇರುವ ಪರ್ಯಾಯ ಮಾರ್ಗವೆಂದರೆ ಅದು ಆಮ್ ಆದ್ಮಿ ಪಕ್ಷವೊಂದೇ. ಆಮ್ ಆದ್ಮಿ ಪಕ್ಷದಿಂದ ಮುಸ್ಲಿಂ ಸಮುದಾಯದವರು ಸ್ಪರ್ಧಿಸದಿದ್ದರೂ, ನರೇಂದ್ರ ಮೋದಿ ಅವರನ್ನು ಆಪ್ ಸೋಲಿಸಬೇಕೆಂಬ ಮನಸ್ಥಿತಿ ಮುಸ್ಲಿಮರಲ್ಲಿದೆ” ಎಂದು ಕೇಜ್ರಿವಾಲ್ ಹೇಳಿದ್ದರು. ಪಕ್ಷದೊಳಗೆ ಇಷ್ಟೆಲ್ಲ ಬೆಳವಣಿಗೆಗಳಾಗುತ್ತಿದ್ದರೂ ಬೆಂಗಳೂರಿನಲ್ಲಿ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ತುಟಿಪಿಟಿಕ್ಕೆಂದಿಲ್ಲ.
ನಿಷ್ಕಳಂಕರಿಗೆ ಟಿಕೆಟ್ ಕೊಡುತ್ತೇವೆಂದ ಕೇಜ್ರಿವಾಲ್ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್, ಭಾಜಪಾದಲ್ಲಿ ಬಂಡಾಯವೆದ್ದು ಹೊರಬಂದವರಿಗೆ! ಕಳೆದ ಬಾರಿ ಆಮ್ ಆದ್ಮಿ ಪಕ್ಷದ 28ಶಾಸಕರ ಪೈಕಿ 12ಶಾಸಕರು ಕೊಟ್ಯಾಧಿಪತಿಗಳು! ಈ ಬಾರಿ 44 ಮಂದಿ ಕೋಟ್ಯಾಧಿಪತಿಗಳಾದರೆ 23 ಶಾಸಕರ ಮೇಲೆ ಕ್ರಿಮಿನಲ್ ಕೇಸುಗಳಿವೆ. ಒಟ್ಟಾರೆ ಆಮ್ ಆದ್ಮೀ ಪಕ್ಷದಲ್ಲಿರುವವರು ಆಮ್ ಆದ್ಮೀಗಳೇನಲ್ಲ. ಆದರೆ ಅವರು ತಾವು ಆಮ್ ಆದ್ಮೀಗಳೆಂದೇ ಬಿಂಬಿಸಿಕೊಳ್ಳುತ್ತಾರೆ. "ಆಮ್ ಆದ್ಮಿ ಪಕ್ಷವೂ ಇತರ ಪಕ್ಷಗಳಂತೆಯೇ ಕಾರ್ಯನಿರ್ವಹಿಸುತ್ತಿದೆ. ಇದು ಇನ್ನೊಂದು ಕಾಂಗ್ರೆಸ್. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದ ಪಕ್ಷ ಇಂದು ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿದೆ. ಪಕ್ಷದ ಮೂಲ ಸಿದ್ಧಾಂತವನ್ನೇ ಗಾಳಿಗೆ ತೂರಿದ್ದಾರೆ. ದೆಹಲಿ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಭ್ರಷ್ಟರು. ಪಕ್ಷ ಅಸ್ತಿತ್ವಕ್ಕೆ ಬಂದಾಗ ಜನರಿಗೆ ನೀಡಿದ ಮಾತನ್ನು ಪ್ರಸ್ತುತ ಪಕ್ಷ ಉಳಿಸಿಕೊಂಡಿಲ್ಲ. ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ನೀಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ. ಇದಕ್ಕೆಲ್ಲ ಹಣವನ್ನು ಎಲ್ಲಿಂದ ತರುತ್ತಾರೆ?" ಎಂದು ಹೊರಗಿನವರಲ್ಲ, ಸ್ವತಃ ಆಮ್ ಆದ್ಮಿ ಪಕ್ಷದ ವಿವಿಧ ರಾಜ್ಯ-ಜಿಲ್ಲೆಗಳ ಸ್ಥಾಪಕಾಧ್ಯಕ್ಷರುಗಳು, ಸದಸ್ಯರೇ ಹೇಳುತ್ತಿದ್ದಾರೆಂದರೆ ಪಕ್ಷದ ಪರಿಸ್ಥಿತಿ ಅರ್ಥವಾದೀತು.
ಭ್ರಷ್ಟಾಚಾರ ವಿರುದ್ಧ ಹೋರಾಟ, ವಿಭಿನ್ನ ಮಾದರಿಯ ಆಡಳಿತ, ಗಲ್ಲಿ ಸಭೆಗಳು ಹೀಗೆ ಭಿನ್ನ ದಾರಿ ಹಿಡಿಯುವ ನಿರೀಕ್ಷೆ ಹುಟ್ಟಿಸಿದ್ದ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಒಂದೂ ಒಳ್ಳೆಯ ಸುದ್ದಿಗಳಿಲ್ಲದೆ ಋಣಾತ್ಮಕ ಸುದ್ದಿಗಳನ್ನೇ ಹೊರ ಹಾಕುತ್ತಿದೆ. ಆಪ್ ಒಳಜಗಳಕ್ಕೆ ಕಾರಣವಾಗಿರುವ ಕಾಯಿಲೆಗಳು ಎಲ್ಲ ರಾಜಕೀಯ ಪಕ್ಷಗಳನ್ನೂ ಕಾಲಕಾಲಕ್ಕೆ ಭಾದಿಸಿರುವ ಹಳೆಯ ರೋಗಗಳು. ಆಪ್ನಂತಹ "ವಿಭಿನ್ನ”, "ಪ್ರಾಮಾಣಿಕ" ರಾಜಕೀಯ ಪಕ್ಷವನ್ನೂ ಅವೇ ಹಳೆಯ ರೋಗಗಳು ಕಾಡುತ್ತಿವೆ. ಅರೇ ಸಿದ್ಧಾಂತ ಬಿಟ್ಟಿದ್ದಾರೆ ಎನ್ನಲೂ ಆ ಪಕ್ಷಕ್ಕೆ ಸಿದ್ಧಾಂತವಾದರೂ ಎಲ್ಲಿತ್ತು? ಎಲ್ಲವನ್ನೂ ಉಚಿತವಾಗಿ ಕೊಡುತ್ತೇನೆಂದು ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದ ಕೇಜ್ರೀವಾಲ್ ಪಕ್ಷ ಎಂದಿನಂತೆ ತನ್ನ ಪ್ರಹಸನಗಳನ್ನು ಉಚಿತವಾಗಿ ಕೊಡುತ್ತಿದೆ. ಮಾಧ್ಯಮಗಳಿಗೆ ಟಿ.ಆರ್.ಪಿ ಯೂ, ದೇಶದ ಜನರಿಗೆ ಮನರಂಜನೆಯೂ ಸಿಕ್ಕಿದರೆ ದೆಹಲಿಯ ಮೂರ್ಖ ಮತದಾರ ಕೈ ಕೈ ಹಿಸಿದುಕೊಳ್ಳುತ್ತಿದ್ದಾನೆ ಪ್ರಾಮಾಣಿಕ ಪಕ್ಷದಲ್ಲಿನ "ಬಹುತ್ ಪ್ರಾಮಾಣಿಕ್"ರನ್ನು ಕಂಡು!ಅರೇ ಪ್ರಾಮಾಣಿಕ ಪದದ ಅರ್ಥವೇ ಬದಲಾಗಿ ಹೋಯಿತೇ?
ಗೂಗ್ಲಿ: ಒಂದು ಸಲ ತಪ್ಪು ಮಾಡಿದರೆ "ಸರಿ"! ಬಿಟ್ಟು ಬಿಡಬಹುದು!...ಬಾರಿ ಬಾರಿ ತಪ್ಪು ಮಾಡಿದರೆ...?( ಕೇಜ್ರಿವಾಲ್ ಬಗೆಗೆ ಹೇಳಿದ್ದಲ್ಲ...ದೆಹಲಿಯ ಜನತೆಗೆ!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ