ಪುಟಗಳು

ಭಾನುವಾರ, ಮಾರ್ಚ್ 22, 2015

ರವಿಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ



ರವಿಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ
ಕತ್ತಿಗೆ ಸುತ್ತಿಕೊಂಡಿದ್ದ ವಸ್ತ್ರ ಬಿಗಿಯಾಗದೇ ಅಗಲವಾಗಿ ಬಿಡಿಸಿಕೊಂಡತಿಂತ್ತು. ನಾಲಿಗೆ ಹೊರಚಾಚಿರಲಿಲ್ಲ. ಕಣ್ಣುಗಳು ಹೊರಬರದೆ ನಿದ್ರಿಸಿರುವ ರೀತಿಯಲ್ಲಿದ್ದವು. ದೇಹದ ಭಾರಕ್ಕೆ ಫ್ಯಾನ್ ಜಖಂ ಆಗಿರಲಿಲ್ಲ. ಮೈ ಮೇಲೆ ಗಾಯವಿತ್ತು. ಶರೀರದ ಬಣ್ಣ ಬದಲಾಗಿತ್ತು. ಮೀಡಿಯಾಗಳಿಗಿಂತಲೂ ಮುಂಚೆಯೇ ಹೋದರು ಗೃಹ ಸಚಿವರು! ಪೋಸ್ಟ್ ಮಾರ್ಟಮ್ ಮುನ್ನವೇ ಕಮೀಷನರ್ ಸಾಹೇಬರು ಆತ್ಮಹತ್ಯೆ ಎಂದು ಘೋಷಿಸಿಯೇ ಬಿಟ್ಟರು. ಗೃಹ ಸಚಿವ ಮೀಸೆಯಡಿ ನಗುತ್ತಾ ನಾಚಿಕೆಯಿಲ್ಲದೆ ಅದನ್ನೇ ಹೇಳಿಬಿಟ್ಟರು. ಸಾಂತ್ವನ ಹೇಳುವ ಬದಲು ಶವಪರೀಕ್ಷೆ ನಡೆಯುವ ಸ್ಥಳಕ್ಕೆ ಹೋದ ಮುಖ್ಯಮಂತ್ರಿ ಅದನ್ನೇ ಅನುಮೋದಿಸಿಬಿಟ್ಟರು. ನಿದಿರೆಯ ಕಣ್ಣೋ? ಮದಿರೆಯ ಅಮಲೋ? ಭಯದ ಕರಿನೆರಳೋ? ಜನರಿಗೆ ನಂಬುಗೆ ಬರಲಿಲ್ಲ. ಸಿಬಿಐ ತನಿಖೆಗೆ ಪಟ್ಟು ಹಿಡಿದರು. ಕೆಲವು ಜೀವಗಳು ಬಲಿಯಾದವು. ಒಂದಷ್ಟು ಜನ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟದ್ದಾಯಿತು. ಕೆಲ ಐಎಎಸ್ ಅಧಿಕಾರಿಗಳು ಪ್ರಧಾನಿಗಳಿಗೆ ಪತ್ರ ಬರೆದರು. ಮುಖ್ಯಮಂತ್ರಿ ಬಗ್ಗಲೇ ಇಲ್ಲ.
ಜಗವ ಬೆಳಗುತ ತನ್ನ ಕಾರ್ಯವನ್ನು ಚ್ಯುತಿಯಿಲ್ಲದೆ ಮಾಡುವ ಕರ್ಮಸಾಕ್ಷಿ ರವಿ! ರವಿಯೂ  ತಾನಿದ್ದ ಸ್ಥಳವನ್ನು ತನ್ನ ಕರ್ತವ್ಯ ನಿಷ್ಠೆ, ಖಡಕ್ ನಿರ್ಧಾರ, ಪ್ರಾಮಾಣಿಕತೆ, ಸೇವಾ ಮನೋಭಾವದಿಂದ ಬೆಳಗಿದಾತ. ಕಡುಬಡತನಕ್ಕೇ ಸವಾಲೊಡ್ಡಿ ಕೆಎಎಸ್ ಬರೆದು ಸಂದರ್ಶನವನ್ನೂ ನೀಡುವಲ್ಲಿವರೆಗೂ ಮುನ್ನುಗ್ಗಿದ ಪರಿಶ್ರಮಿ. ಐಎಎಸ್ ಪರೀಕ್ಷೆ ಬರೆಯಲು ಅಧ್ಯಯನಕ್ಕೆ ಕೇಳಿದ ರಜೆ ಸಿಗದಿದ್ದಾಗ ಮೇಲಾಧಿಕಾರಿಗಳ ಕೊಂಕು, ಅಹಮಿಕೆಗೆ ಬಗ್ಗದೆ ಸರ್ಕಾರೀ ನೌಕರಿಗೆ ರಾಜೀನಾಮೆಯಿತ್ತು ಐಎಎಸ್ ಬರೆದ ಛಲ ಬಿಡದ ತ್ರಿವಿಕ್ರಮ. ಕೋಲಾರದ ಜಿಲ್ಲಾಧಿಕಾರಿಯಾಗಿ ಭ್ರಷ್ಟರಿಗೆ ನೀರಿಳಿಸಿದ್ದರು. ಅವರ ಖಡಕ್ ನಿರ್ಧಾರಗಳು ಕೋಲಾರದ ಕೆಲವು ಶಾಸಕರ ಬುಡವನ್ನೇ ಅಲುಗಾಡಿಸಿದ್ದವು. ಇದಕ್ಕೆ ಪೂರಕವೆಂಬಂತೆ ವರ್ತೂರ್ ಪ್ರಕಾಶ್ ಅಧಿಕಾರಿಯೊಬ್ಬನಿಗೆ ಕರೆ ಮಾಡಿ " ಡಿಸಿ ರವಿಯನ್ನು ವರ್ಗಾವಣೆ ಮಾಡುತ್ತೇನೆ. ದೂರನ್ನು ವಾಪಸು ತೆಗೋ" ಎಂದು ಅಧಿಕಾರಿಯೊಬ್ಬನಿಗೆ ಬೆದರಿಸಿದ ಅಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಹರಿದಾಡುತ್ತಿದೆ. ಬಡವರೊಬ್ಬರ ಬಳಿ ತಮ್ಮ ಕೆಳಗಿನ ಅಧಿಕಾರಿಯೊಬ್ಬ ಲಂಚ ತೆಗೆದುಕೊಂಡಿದ್ದ ಸುದ್ದಿ ಕೇಳಿದೊಡನೆ ವ್ಯಗ್ರರಾಗಿ ಅಧಿಕಾರಿಗೆ ಛೀಮಾರಿ ಹಾಕಿದ್ದರು. ರವಿಯ ಮಾವ ಹನುಮಂತರಾಯಪ್ಪ, "ರವಿ  ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್ ಗ್ರೂಪಿನ ಅಕ್ರಮಗಳಿಗೆ ಕಡಿವಾಣ ಹಾಕಲೆತ್ನಿಸಿದಾಗ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕಾನ್ಫಿಡೆಂಟ್ ಗ್ರೂಪಿನ ಪರವಾಗಿ ನಿಂತು ರವಿಯನ್ನು ಬೆದರಿಸಿದ್ದರು. ಕಾರಣವಾಗಿ ರವಿಯನ್ನು ಬೆಂಗಳೂರಿಗೆ ವರ್ಗಾಯಿಸಿ ಎಂದು ನಾನು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ" ಎಂದಿರುವುದು ರವಿಯ ಹತ್ಯೆಯ ಹಿಂದಿನ ಭೃಷ್ಟ ವ್ಯವಸ್ಥೆಯ ಕಡೆಗೆ ಬೊಟ್ಟು ಮಾಡುತ್ತಿದೆ. ರವಿಯ ವರ್ಗಾವಣೆಯ ಹಿಂದೆ ಮುಖ್ಯಮಂತ್ರಿಗಳ ಆಪ್ತವರ್ಗವಿದ್ದದ್ದಂತೂ ಸೂರ್ಯ ಸತ್ಯ!
ಬೆಂಗಳೂರಿಗೆ ವರ್ಗಾವಣೆಯಾದ ಮೇಲೆ  ತಿಮಿಂಗಿಲಗಳಿಗೇ ಬಲೆ ಬೀಸಿದ್ದರು. ಒಂದೇ ತಿಂಗಳಲ್ಲಿ 67 ಭ್ರಷ್ಟರನ್ನು ಹಿಡಿದುಹಾಕಿ ಸರಕಾರಕ್ಕೆ ಬರಬೇಕಿದ್ದ 130 ಕೋಟಿ ತೆರಿಗೆ ವಸೂಲು ಮಾಡಿದ್ದರು. ಇನ್ನೂ ಒಂದಷ್ಟು ಭೃಷ್ಟರನ್ನು ಹಿಡಿಯುವುದಿದೆ ಎಂದು ನಿರ್ಭೀತಿಯಿಂದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಗೃಹ ಸಚಿವರ ಒಡೆತನದಲ್ಲಿದ್ದ ಕಂಪೆನಿಯ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ರವಿ. ಹೀಗೆ ಯೋಜನೆ ರೂಪಿಸಿದ್ದ ಕೆಲದಿನಗಳಲ್ಲೇ ಕೊಲೆಯಾಗಿ ಹೋದರು ರವಿ. ಕೊಲೆಗೀಡಾಗುವ ಮುನ್ನ ತನಗೆ ಬಂದ ಕರೆಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ರವಿ ಕೋಪದಿಂದ ಕೂಗಾಡಿದ್ದರು ಎನ್ನುವ ಅಂಶವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಕರೆಯ ಜಾಡು ಹಿಡಿದು ಹೊರಟರೆ ಕೊಲೆಯ ಹಿಂದಿನ ಕಾಣದ "ಕೈ"ಗಳು ಪತ್ತೆಯಾಗುವುದು ಸ್ಪಷ್ಟ. ವಿರೋಧ ಪಕ್ಷಗಳು ಮಾತ್ರವಲ್ಲ, ಇಡೀ ರಾಜ್ಯದ ಜನತೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದಾಗಲೂ ಬಗ್ಗಲಿಲ್ಲ ಸಿದ್ದರಾಮಯ್ಯ. ಸಿಬಿಐಗೆ ಬೇಡ, ಸಿಐಡಿಗೆ ಇದರ ತನಿಖೆ ಕೊಡೋಣ ಎನ್ನುತ್ತ ಅಲ್ಲಿನ ದಕ್ಷ ಅಧಿಕಾರಿ ಪ್ರಣಬ್ ಮೋಹಾಂತಿಯವರನ್ನು ಎತ್ತಂಗಡಿ ಮಾಡಿಬಿಟ್ಟರು. ಜನರ ಟೀಕೆಗೆ ಬೆದರಿ ವರ್ಗಾವಣೆ ರದ್ದು ಮಾಡಿದರು. ಐದು ದಿನದಿಂದ ಅನ್ನನೀರು ಬಿಟ್ಟಿದ್ದ ಅವರ ಸೋದರತ್ತೆಯ ಜೀವವೂ ಹೋಯಿತು. ಜನರ ಮಾತಿಗೆ ಬಗ್ಗದೆ ತಮ್ಮ ಅಧಿನಾಯಕಿ ಆಜ್ಞೆ ಮಾಡಿದಾಗ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಿದ್ಧರಾದರೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರುವುದು ಕರ್ನಾಟಕಕ್ಕೋ ಅಲ್ಲಾ ಕಾಂಗ್ರೆಸಿಗೋ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಸರ್ಕಾರದ ಎಲ್ಲಾ ನಡೆಗಳು, ಸರಕಾರವನ್ನು ಬೆಂಬಲಿಸಿದವರು ಕೊಟ್ಟ ಹೇಳಿಕೆಗಳೆಲ್ಲಾ ರವಿಯವರನ್ನು ಕೊಲೆ ಮಾಡಲಾಗಿದೆ ಎನ್ನುವ ಅಂಶಕ್ಕೆ ಮತ್ತಷ್ಟು ಪುಷ್ಠಿ ಒದಗಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿಗರ ಹಾಗೂ ಅವರ ಚೇಲಾಗಳ ಮಾನಗೆಟ್ಟ ಕಾರ್ಯವೆಂದರೆ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ರವಿಯ ಚಾರಿತ್ರ್ಯವಧೆ ಮಾಡಲಾರಂಭಿಸಿದ್ದು. ಅವರದೇ ಬ್ಯಾಚಿನ ಅವರ ಸ್ನೇಹಿತೆಯ ಜೊತೆ ಅಫೇರ್ ಇತ್ತು, ಸಾಯುವ ಮುನ್ನ ಆಕೆಗೆ ಸಂದೇಶ ಕಳುಹಿಸಿದ್ದರು ಎನ್ನುವ ಕಪೋಲಕಲ್ಪಿತ ಕಥೆಗಳನ್ನು ಹರಿಯಬಿಟ್ಟದ್ದು. ರವಿ ತಮ್ಮ ಹೆಂಡತಿಯ ಜೊತೆ ನಿಂತಿರುವ ಚಿತ್ರವನ್ನೇ ಅಪ್ಲೋಡ್ ಮಾಡಿ ಆಕೆ ರವಿಯ ಸ್ನೇಹಿತೆ ಎಂದು ಅರಚಾಡಿದ್ದು. ಇದರಲ್ಲೊಂದು ವ್ಯವಸ್ಥಿತ ಪಿತೂರಿಯೇ ಇದೆ. ವ್ಯಂಗ್ಯವೆಂದರೆ ತಾವು ಮಹಿಳಾ ಮತ್ತು ಮಾನವ ಹಕ್ಕುಗಳ ಪರ ಎಂದು ಪೋಸುಕೊಡುವ ಬುದ್ದು ಜೀವಿಗಳೆಲ್ಲಾ ರವಿಯ ಕೊಲೆಯ ಸಮಯದಲ್ಲಿ ಕಾಣೆಯಾಗಿದ್ದು ಈಗ ತಮ್ಮ ಅನ್ನದಾತ ಸರಕಾರ-ಮಂತ್ರಿಗಳನ್ನು ರಕ್ಷಿಸಿಕೊಳ್ಳಲು ತಮ್ಮ ಹೊಟ್ಟೆ ಹೊರೆಯುವ ಸಲುವಾಗಿ ಇಬ್ಬರು ಹೆಣ್ಣುಮಕ್ಕಳ ಮೇಲೆ ಅನ್ಯಾಯವೆಸಗುತ್ತಿರೋದು! ನಾಚಿಕೆಯಾಗಬೇಕು "ರಾವಣ" ಸಂತತಿಗೆ. ತಮ್ಮ ದಾಹ ತೀರಿಸಿಕೊಳ್ಳಲು ಇನ್ನೊಬ್ಬರ ಪ್ರಾಣ ಮಾನ ಕಳೆಯಲೂ ಹೇಸದ ಇಂತಹವರಿಂದ ರಾಜ್ಯ ಆಳಲ್ಪಡುತ್ತಿದೆಯಲ್ಲ. ಜನತೆ ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡುತ್ತಿದೆ. ಹಾಂ... ಸೂರ್ಯನಿಗೇ ಉಗುಳಹೊರಟವರ ಪಾಡು ಏನಾಗುತ್ತದೆಂದು ತಿಳಿದಿರಲಿ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದಿದ್ದ ನೂರಾರು ಕೋಟಿ ಅವ್ಯವಹಾರವನ್ನು ಬಯಲಿಗೆಳೆದ ದಿಟ್ಟ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರನ್ನು ಸರಕಾರ ನಡೆಸಿಕೊಂಡ ರೀತಿ, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಉಪನೋಂದಣಾಧಿಕಾರಿಯಾಗಿದ್ದ ಎಚ್.ಎಸ್ ಚಲುವರಾಜು ಭ್ರಷ್ಟ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ನೀಡಿದ್ದು, ಸಚಿವರೊಬ್ಬರ ಸಹೋದರನ ಅಕ್ರಮ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿ,ವಿಚಾರಣೆಯನ್ನೂ ಮಾಡಿ ಸತ್ಯದ ಪರ ತೀರ್ಪು ನೀಡಿ, ಸಚಿವರು ವ್ಯತಿರಿಕ್ತ ತೀರ್ಪು ನೀಡುವಂತೆ ಒತ್ತಡ ಹೇರಿದ್ದನ್ನು ದಾಖಲಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿಯವರ ಹಿಂಬಡ್ತಿ ಮತ್ತು ವರ್ಗಾವಣೆ,  ಕರ್ನಾಟಕ ಭವನದ ಕಚೇರಿ ಅಧೀಕ್ಷಕ ವೆಂಕಟೇಶ ಮೂರ್ತಿಯವರ ಎತ್ತಂಗಡಿ, ಬಿಬಿಎಂಪಿ ಕಡತ ಹಗರಣವನ್ನು ಬಯಲಿಗೆಳೆದ ಪ್ರಾಮಾಣಿಕ ಲೋಕಾಯುಕ್ತ ಅಧಿಕಾರಿ ಮಹೇಶ್ ಅವರ ವರ್ಗಾವಣೆ. ಹೀಗೆ ಪ್ರಾಮಾಣಿಕ-ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ನೀಡುವ ಇಂತಹ ಸರ್ಕಾರದಿಂದ ಡಿ.ಕೆ ರವಿಯವರ ಅಸಹಜ ಸಾವಿನ ಸತ್ಯ ಹೊರ ಬಂದೀತೆ?
ಒಟ್ಟಾರೆ ಸರ್ಕಾರಕ್ಕೆ ಪ್ರಕರಣದ ತನಿಖೆ ನಡೆದು ಸತ್ಯ ಹೊರಬರಬೇಕೆನ್ನುವ ಇರಾದೆ ಖಂಡಿತಾ ಇಲ್ಲ. ತಮ್ಮದೇ ಸರಕಾರದ ಸಚಿವರ ಹಸ್ತಕ್ಷೇಪ ಜನತೆಗೆ ತಿಳಿಯುತ್ತಲ್ಲಾ! ಅದಕ್ಕಾಗಿಯೇ ಜನ ಅಷ್ಟು ಕೂಗಾಡಿದರೂ ಸಿಬಿಐಗೆ ಒಪ್ಪಿಸದೇ ಇದ್ದುದು. ಸಿಐಡಿಯಾದರೆ ತಮ್ಮ ಅಧೀನದಲ್ಲಿರುತ್ತದೆ, ತಮಗೆ ಬೇಕಾದ ವರದಿ ತರಿಸಿಕೊಳ್ಳಬಹುದಲ್ಲವೇ. ಅದೇ ಸಿಬಿಐಗೆ ಕೊಟ್ಟರೇ ಸರಕಾರವೇ ಉರುಳಬಹುದು. ಸೋಮವಾರ ಸಿಬಿಐಗೆ ಕೊಡುವುದೆಂದು ನಿರ್ಧರಿಸಿದ್ದರೂ ಸಾಕ್ಷ್ಯ ನಾಶ ಮಾಡಲು ಬೇಕಾದಷ್ಟು ದಿನಗಳು ಅಪರಾಧಿಗಳಿಗೆ ಲಭಿಸಿವೆ. ಒಟ್ಟಾರೆ ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಗಳಿಗೆ ಬೆಲೆ ಇಲ್ಲವೆಂದು ಅಂದು ಸದನದಲ್ಲಿ ತೋಳು ತಟ್ಟಿದ್ದ ಅದೇ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಜನತೆ ಹಾಕಿದ ಮತಕ್ಕೂ! ರವಿ ಸಾವು ಇಡೀ ದೇಶದಲ್ಲಿ ಸಂಚಲನ ಎಬ್ಬಿಸಿದೆ. ಅವರನ್ನು ದೇವರಂತೆ ಪೂಜಿಸುವ ಅನೇಕ ಜನರಿದ್ದಾರೆ. ಹುಟ್ಟೂರಿನಲ್ಲಿ ಅವರ ಶವಸಂಸ್ಕಾರ ನಡೆದಾಗ ಒಟ್ಟಾದವರು ಹತ್ತುಸಾವಿರ ಮಂದಿ! ಜನ ರೊಚ್ಚಿಗೆದ್ದಿದ್ದಾರೆ. ಇಟ್ಟಿಗೆ, ಕಲ್ಲುಗಳನ್ನು ತೆಗೆದುಕೊಂಡು ಭೃಷ್ಟರ ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ. ರವಿಯ ಸಮಾಧಿ ಬಳಿ ತೆರಳುತ್ತಿದ್ದ ಪರಮೇಶ್ವರ್ ಕಾರು ಜಖಂಗೊಂಡಿದೆಯೆಂದಾದರೆ ಜನರ ಆಕ್ರೋಶ ಎಷ್ಟಿರಬಹುದು ಊಹಿಸಿ.
ರಾಜ್ಯದ ಜನತೆ ದುಃಖದ ಮಡುವಿನಲ್ಲಿದೆ. ಯುಗಾದಿಯ ಸಂಭ್ರಮವೂ ಇಲ್ಲ. ರವಿ ಸಾಕಿದ ಮೂಕ ಪ್ರಾಣಿಯೊಂದು ಮನುಷ್ಯನ ದುರಾಚಾರವನ್ನು ಕಂಡು ಮೂಕವಾಗಿ ರೋದಿಸುತ್ತಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ