ಪುಟಗಳು

ಮಂಗಳವಾರ, ಮಾರ್ಚ್ 31, 2015

ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ

ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ

                      ಆನಂದ ಪುರ. ತೇಜಸ್ವೀ ಸಿಖ್ ಗುರುವೊಬ್ಬನ ಮುಂದೆ ಕಾಶ್ಮೀರದಿಂದ ಬಂದ ಹಿಂದೂ ಪ್ರಮುಖರ ಗುಂಪೊಂದು ಗೋಳೋ ಎಂದಳುತ್ತಾ ತಮ್ಮ ಬವಣೆಗಳನ್ನರುಹುತ್ತಿದೆ. "ಯುದ್ಧ ವಿದ್ಯೆ ಕಲಿಯುವಂತಿಲ್ಲ, ಆಯುಧಪಾಣಿಯಾಗುವಂತಿಲ್ಲ, ಪಲ್ಲಕಿ ಹತ್ತುವಂತಿಲ್ಲ, ಕುದುರೆಗಳನ್ನು ಬಳಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ವಿಶ್ವನಾಥನ ಮಂದಿರವನ್ನು ಮುರಿದರು, ಮರು ನಿರ್ಮಿಸಿದ ಸೋಮನಾಥವನ್ನೂ ಕೆಡವಿದರು. ಮಥುರಾದ ಅರ್ಧ ಮಸೀದಿಯಾಗಿದೆ. ಸಾವಿರ ಸಾವಿರ ಸಂಖ್ಯೆಯ ದೇವಾಲಯಗಳು, ವಿದ್ಯಾಸಂಸ್ಥೆಗಳ ಸರ್ವನಾಶವಾಗಿದೆ. ಹಿಂದೂಗಳಾಗಿ ಬದುಕಬೇಕಿದ್ದರೆ ಜಿಜಿಯಾ ತಲೆಗಂದಾಯ ಕಟ್ಟಲೇಬೇಕು. ಕಾಶ್ಮೀರವೊಂದರಲ್ಲೇ ಮಣಭಾರದ ಜನಿವಾರ ತುಂಡರಿಸಿ ಬೀಳುತ್ತಿದೆ. ಹಣೆಯ ತಿಲಕದ ಜಾಗದಲ್ಲಿ ರಕ್ತ ಒಸರುತ್ತಿದೆ. ನೀವೇ ನಮ್ಮನ್ನು ಕಾಪಾಡಬೇಕು" ಆಲಿಸಿದ ಗುರು ದೀರ್ಘಾಲೋಚನೆಯಲ್ಲಿ ಮುಳುಗಿದರು. ಆಗ......ಆಗ ಒಂಬತ್ತು ವರ್ಷದ ಅವರ ಮಗ ತನ್ನ ಗೆಳೆಯರೊಡನೆ ಅಲ್ಲಿಗೆ ಬಂದ. ತಂದೆಯ ಗಂಭೀರ ಮುಖಭಾವವನ್ನು ಕಂಡು ಏನಪ್ಪಾ...ಏನಷ್ಟು ತೀವ್ರವಾಗಿ ಯೋಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದ. "ಭೂಮಿಗೆ ಪಾಪಭಾರ ಹೆಚ್ಚಾಗಿದೆ. ಎಲ್ಲಾ ರೀತಿಯಿಂದಲೂ ಯೋಗ್ಯನಾದವನೊಬ್ಬ ಮುಂದೆ ಬಂದು ಬಲಿಯಾಗದ ಹೊರತು ಈ ಕ್ಲೇಶ ತಗ್ಗುವುದಿಲ್ಲ" ಎಂದರು ಗುರುಗಳು. "ಅಂತಹ ಬಲಿದಾನಕ್ಕೆ ನಿಮಗಿಂತಲೂ ಯೋಗ್ಯರಾರಿದ್ದಾರೆ?" ತಟ್ಟನೆ ನುಡಿದ ಆ ಬಾಲಕ. ಗುರುಗಳ ಮುಖ ವಿಕಸಿತವಾಯಿತು. ತನ್ನ ಸಂಕಲ್ಪವನ್ನು ದೈವವೇ ಮಗನ ಬಾಯಲ್ಲಿ ನುಡಿಸಿದಂತಾಯಿತು. "ನನ್ನ ಮತ ಪರಿವರ್ತನೆ ಮಾಡಿದರೆ ನೀವೂ ಕೂಡಾ ಇಸ್ಲಾಮನ್ನು ಸ್ವೀಕರಿಸುವುದಾಗಿ ಚಕ್ರವರ್ತಿಗೆ ತಿಳಿಸಿ. ಗುರುನಾನಕರ ಅನುಗ್ರಹ ನಿಮ್ಮ ಮೇಲಿದೆ" ಎಂದು ಹಿಂದೂಗಳನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟರು. ಆ ತೇಜಸ್ವೀ ಗುರುವರ್ಯನೇ ತೇಜ್ ಬಹಾದ್ದೂರ್. ಒಂಬತ್ತು ವರ್ಷದ ಆ ಮಗು ಗುರು ಗೋವಿಂದ ಸಿಂಗ್!

           ತೇಗ್ ಬಹಾದ್ದೂರ್ ಗುರು ಹರ್ ಗೋವಿಂದ್ ಹಾಗೂ ಬೀಬಿ ನಾನ್ಕಿಯವರ ಕಿರಿಯಪುತ್ರನಾಗಿ 1621 ಏಪ್ರಿಲ್ 1ರಂದು ಜನ್ಮತಳೆದರು. ಅವರ ಮೂಲ ಹೆಸರು ತ್ಯಾಗ್ ಮಾಲಾ. ಬಾಬಾ ಬುದ್ಧ ಹಾಗೂ ಭಾಯಿ ಗುರುದಾಸರಿಂದ ಕತ್ತಿವರಸೆ ಹಾಗೂ ಕುದುರೆ ಸವಾರಿಯ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆದ ತೇಗ್ ಬಹಾದ್ದೂರರಿಗೆ ಹನ್ನೆರಡರ ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಲಾಯಿತು. ಹದಿಮೂರನೇ ವಯಸ್ಸಿನಲ್ಲಿ ತಂದೆಯೊಡನೆ ಸರಿಸಾಟಿಯಾಗಿ ನಿಂತು ಮೊಘಲ ಸರ್ದಾರರೊಡನೆ ಕಾದು ಜಯಶಾಲಿಯಾದಾಗ(ಕರ್ತಾರ್ ಪುರ್ ಕದನ) ಅನುಯಾಯಿಗಳು ಅವರಿಗೆ ತೇಜ್ ಬಹಾದೂರ್ ಎಂಬ ಬಿರುದನ್ನಿತ್ತರು. ಮುಂದೆ ಧ್ಯಾನದಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ ತೇಜ್ ಬಹಾದೂರ್ ತನ್ನ ಪರಂಪರೆಯ ಹಿಂದಿನ ಗುರುಗಳ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದರಾದರೂ ತಂದೆ ಹರ್ ಗೋವಿಂದ್ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡದೆ ಆಗಷ್ಟೇ ಅಕಾಲಿಕ ಮರಣ ಹೊಂದಿದ ತನ್ನ ಹಿರಿಯ ಮಗ ಭಾಯಿ ಗುರುದತ್ತನ ಪುತ್ರ ಹರ್ ರಾಯನನ್ನು ಪೀಠದಲ್ಲಿ ಕುಳ್ಳಿರಿಸಿದರು. ಇದರಿಂದ ಅಸಮಧಾನಗೊಂಡ ಪತ್ನಿಗೆ ಆತ "ನಿನ್ನ ಮಗನೇ ಮುಂದೊಂದು ದಿನ ಉತ್ತರಾಧಿಕಾರಿಯಾಗುತ್ತಾನೆ. ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಒಂದು ಪರ್ವಕಾಲದಲ್ಲಿ ಆತ ಪೀಠವನ್ನಲಂಕರಿಸುವುದು ಮಾತ್ರವಲ್ಲ, ತಾನು-ತನ್ನ ಸಂತತಿಯನ್ನೇ ಮಾತೃಭೂಮಿಗೆ ಅರ್ಪಿಸುವ ಮೂಲಕ ಜಗತ್ಪ್ರಸಿದ್ಧರಾಗಿ ವಂಶದ ಕೀರ್ತಿಯನ್ನು ಬೆಳಗುತ್ತಾರೆ" ಎಂದು ಸಮಾಧಾನಿಸುತ್ತಾರೆ. ತಂದೆಯ ವೃದ್ದಾಪ್ಯದ ಕಾಲದಲ್ಲಿ 9 ವರ್ಷಗಳನ್ನು ಅವರ ಸೇವೆಯಲ್ಲಿ ಕಳೆದು ಅವರ ಮರಣಾನಂತರ ತೇಜ್ ಬಹಾದೂರ್ ಬಾಕಲಾದ ಗುಹೆಯೊಂದರಲ್ಲಿ ಧ್ಯಾನಸ್ಥರಾಗುತ್ತಾರೆ. ಇತ್ತ ಹರ್ ರಾಯ್ ತನ್ನ ಉತ್ತರಾಧಿಕಾರಿಯನ್ನಾಗಿ ತನ್ನದೇ ಕಿರಿಯ ಪುತ್ರ ಹರ್ ಕಿಶನ್ ನನ್ನು ನೇಮಿಸುತ್ತಾರೆ. 1664ರಲ್ಲಿ ಅಸ್ವಸ್ಥನಾದ ಹರ್ ಕಿಶನ್ ತನ್ನ ನಂತರದ ಗುರು ಬಾಕಲಾದಲ್ಲಿರುವುದಾಗಿ ಹೇಳಿ ಮರಣವನ್ನಪ್ಪುತ್ತಾರೆ. ಹುಡುಕುತ್ತಾ ಬಂದ ಭಕ್ತರು ಸೋಧಿ ವಂಶದ 22 ಜನ ತಾವೇ ಗುರುಗಳೆಂದು ಹೇಳಿಕೊಂಡಾಗ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಸಾಮಾನ್ಯ ಘಟನೆಯೊಂದು ಜರಗುತ್ತದೆ. ಮಖಾನ್ ಶಾ ಎನ್ನುವ ಶ್ರೀಮಂತ ವ್ಯಾಪಾರಿ ತನ್ನ ಹಡಗು ಬಿರುಗಾಳಿಗೆ ಸಿಲುಕಿದಾಗ “ತನ್ನನ್ನು ರಕ್ಷಿಸು; 500 ಬಂಗಾರದ ನಾಣ್ಯಗಳನ್ನು ನಿನಗೆ ಅರ್ಪಿಸುತ್ತೇನೆ ಗುರುವರ್ಯ” ಎಂದು ಮೊರೆಯಿಡುತ್ತಾನೆ. ಆತ ಸುರಕ್ಷಿತವಾಗಿ ದಡ ತಲುಪಿದವನೇ ನೇರವಾಗಿ ದೆಹಲಿಗೆ ಗುರು ಹರ್ ಕಿಶನನನ್ನು ಕಾಣಲೆಂದು ಬರುತ್ತಾನೆ. ಹರ್ ಕಿಶನ್ ಮೃತನಾದನೆಂದೂ, ಮುಂದಿನ ಗುರು ಬಾಕಲಾದಲ್ಲಿರುವರೆಂದೂ ಸುದ್ದಿ ತಿಳಿದ ಆತ ನೇರವಾಗಿ ಬಾಕಲಾಕ್ಕೆ ಬರುತ್ತಾನೆ. ಆದರೆ ಅಲ್ಲಿ ಉಳಿದ ಭಕ್ತರಂತೆ ಅವನಿಗೂ ಸಂಧಿಗ್ಧತೆ ಕಾಡುತ್ತದೆ. ಆತ ಅದಕ್ಕಾಗಿ ಪ್ರತಿಯೊಬ್ಬರಿಗೂ ಎರಡೆರಡು ನಾಣ್ಯವನ್ನು ಕೊಟ್ಟು ಗುರುವಾಗಿ ಸ್ವೀಕರಿಸಿ ಇನ್ನೇನು ತೆರಳಬೇಕು ಎನ್ನುವಷ್ಟರಲ್ಲಿ ಒಬ್ಬ ಹುಡುಗ ಗುಹೆಯಲ್ಲಿ ತೇಜ್ ಬಹಾದೂರನೆಂಬ ಯೋಗಿಯಿದ್ದಾನೆ ಎಂದು ಹೇಳಿದುದನ್ನು ಕೇಳಿ ಆತನಿಗೂ ಎರಡು ನಾಣ್ಯವನ್ನು ಅರ್ಪಿಸಲು ಅಲ್ಲಿಗೆ ತೆರಳುತ್ತಾನೆ. ಧ್ಯಾನಸ್ಥರಾಗಿದ್ದ ತೇಜ್ ಬಹಾದೂರ್ ಸಹಜಾವಸ್ಥೆಗೆ ಮರಳುವವರೆಗೆ ಗಂಟೆಗಟ್ಟಲೆಕಾದ ಆತ ಎರಡು ನಾಣ್ಯಗಳನ್ನು ತೇಜ್ ಬಹಾದೂರ್ ಮುಂದೆ ಇರಿಸುತ್ತಾನೆ. ಆಗ ತೇಜ್ ಬಹಾದೂರ್ ನಗುತ್ತಾ "ಯಾಕೆ ನಿನ್ನ ಹರಕೆಗೆ ಭಂಗ ತರುತ್ತಿದ್ದಿ. 500 ನಾಣ್ಯಗಳ ಬದಲು ಕೇವಲ ಎರಡು ನಾಣ್ಯಗಳನ್ನಷ್ಟೇ ನೀಡುತ್ತಿದ್ದೀಯಲ್ಲಾ" ಎನ್ನಲು ಆಶ್ಚರ್ಯಚಕಿತನಾಗಿ ಸಂಭ್ರಮೋಲ್ಲಾಸದಿಂದ 500 ನಾಣ್ಯಗಳನ್ನು ಅರ್ಪಿಸಿದುದಲ್ಲದೆ ತನಗೆ ಗುರು ಸಿಕ್ಕಿದರೆಂದು ಜೋರಾಗಿ ಕಿರುಚುತ್ತಾನೆ. ಭಕ್ತವೃಂದ ಕೂಡಲೇ ಅತ್ತ ಬಂದು ತೇಜ್ ಬಹಾದೂರರನ್ನು ಗುರುವಾಗಿ ಸ್ವೀಕರಿಸುತ್ತದೆ. ಆದರೆ ಅವರಿಗೆ ಆಗ ಸೋಧಿ ಸರದಾರರ ಒಡೆತನದಲ್ಲಿದ್ದ ಅಮೃತಸರದ ಚಿನ್ನದ ಮಂದಿರಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಅಲ್ಲದೆ ಹರ್ ಗೋವಿಂದನ ಇನ್ನೊಬ್ಬ ಮೊಮ್ಮಗ ಧೀರ್ ಮಲ್ ನಿಂದ ಪ್ರಾಣಾಪಾಯವೂ ಎದುರಾಗುತ್ತದೆ. ಅವರೆಲ್ಲರನ್ನೂ ಕ್ಷಮಿಸಿದ ಗುರು ಭಾರತ ಪರ್ಯಟನೆ ಮಾಡಿ ಪೂರ್ವಾಂಛಲದವರೆಗೂ ತನ್ನ ತತ್ವಗಳನ್ನು ಪ್ರಸರಿಸಿ ಆನಂದಪುರಕ್ಕೆ ಬಂದು ನೆಲೆನಿಲ್ಲುತ್ತಾರೆ.

                    ಇಷ್ಟರಾಗಲೇ ದೆಹಲಿಯ ಆ ದೊರೆ ಯಾರೆಂದು ನೀವು ಊಹಿಸಿರಬಹುದು. ಔರಂಗಜೇಬ್! ತನಗೆ ಭಯ ಬಿದ್ದು ಆಗ್ರಾ ಕೋಟೆಯಲ್ಲಿ ಬಾಗಿಲು ಮುಚ್ಚಿಕೊಂಡು ಕೂತಿದ್ದ ತನ್ನ ಮುದಿ ತಂದೆಯನ್ನು ಮಣಿಸಲು ನೀರು ಸರಬರಾಜನ್ನೇ ನಿಲ್ಲಿಸಿ ಬಾಯಾರಿಕೆಯಿಂದ ವಿಲವಿಲನೆ ಒದ್ದಾಡುವಂತೆ ಮಾಡಿದ ಸುಪುತ್ರನಾತ! ಸಿಂಹಾಸನಕ್ಕಾಗಿ ತಂದೆಯನ್ನು ಹಿಂಸಿಸಿ ಅವನ ಪ್ರೀತಿಪಾತ್ರನಾಗಿದ್ದ ತನ್ನ ಅಣ್ಣನ ತಲೆಯನ್ನೇ ಕತ್ತರಿಸಿ ಸುಂದರವಾಗಿ ಪ್ಯಾಕ್ ಮಾಡಿ ತಂದೆಗೆ ಗಿಫ್ಟ್ ಕಳುಹಿಸಿದ ಪುತ್ರ ಶ್ರೇಷ್ಠ! ಮಕ್ಕಳು ತಿರುಗಿ ಬಿದ್ದ ತಪ್ಪಿಗೆ ಎರಡನೆಯ ಹೆಂಡತಿ ನವಾಬ್ ಬಾಯಿಯನ್ನು, ಸಂಗೀತ ಕಲಿತ ತಪ್ಪಿಗೆ ಮಗಳು ಜೇಬುನ್ನೀಸಾಳನ್ನು ಸೆರೆಗೆ ಅಟ್ಟಿದ ಮಹಾಪುರುಷ! ಚಕ್ರವರ್ತಿಯಾದ ಶಿಷ್ಯನನ್ನು ಭೇಟಿಯಾಗಲು ಬಂದ ಗುರುವನ್ನೇ ಅವಮಾನಿಸಿ ಕಳುಹಿಸಿದ ಶಿಷ್ಯರತ್ನ! ತನ್ನವರನ್ನೇ ಬಿಡದ ಅವನು ಕಾಫಿರರನ್ನು ಬಿಟ್ಟಾನೆಯೇ? ಕೇವಲ ತನ್ನ ಸ್ವಾರ್ಥಕ್ಕಾಗಿ ತನ್ನ ಸೋದರರಾದ ದಾರಾ, ಶೂಜಾ, ಮುರಾದ್ ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಿಸಿ, ತಂದೆ ಶಹಜಹಾನನನ್ನು ಆಜೀವ ಕಾರಾಗೃಹದಲ್ಲಿಡಿಸಿ, ತನ್ನ ಸೋದರಿಯರಾದ ರೋಶನಾರಾ, ಜಹನಾರಾ ಮತ್ತು ಗೌಹಾರಾರನ್ನು ಚಿತ್ರವಿಚಿತ್ರವಾಗಿ ಕೊಲ್ಲಿಸಿ ಲಕ್ಷ ಲಕ್ಷ ಹಿಂದೂಗಳನ್ನು ಕೊಲ್ಲಿಸಿ, ಹತ್ತಾರು ಸಾವಿರ ದೇವಸ್ಥಾನಗಳನ್ನು ಕೆಡವಿದ ಔರಂಗಜೇಬ್ 1679 ಏಪ್ರಿಲ್ 2ರಂದು ಕಾಫಿರರ ದೇಶವಾಗಿದ್ದ ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿಸಲು ಹಿಂದೂಗಳ ಮೇಲೆ ಬಹಿರಂಗ ಜಿಹಾದ್ ಘೋಷಿಸಿದ. ದೀಪಾವಳಿ ಮುಂತಾದ ಹಬ್ಬಗಳು, ಜಾತ್ರೆಗಳನ್ನಾಚರಿಸದಂತೆ ಹಿಂದೂಗಳ ಮೇಲೆ ನಿಯಂತ್ರಣ ಹೇರಿದುದಲ್ಲದೆ ಹಿಂದೂಗಳು ಭೂಮಿಯನ್ನು ಕೊಳ್ಳದಂತೆ ಕಾನೂನು ಮಾಡಿದ. ಸರ್ಕಾರೀ ಕೆಲಸಗಳಿಂದ ಹಿಂದೂಗಳನ್ನು ಕಿತ್ತೆಸೆದ. ಜಿಜಿಯಾ ತೆರಿಗೆಯನ್ನು ಹಿಂದೂಗಳ ಮೇಲೆ ಹಾಕಿ ಅವರನ್ನು ಇಸ್ಲಾಮಿಕ್ ಆಡಳಿತದಲ್ಲಿ ಬದುಕಲು ಅವಕಾಶ ಕೊಟ್ಟುದಕ್ಕಾಗಿ ಸುಂಕವನ್ನು ಸಲ್ಲಿಸಬೇಕಾದ ದುರವಸ್ಥೆಗೀಡು ಮಾಡಿದ. ಆ ದಿವಸದಿಂದ ತನ್ನ ಅಧಿಕಾರ, ಧನ, ಸೈನಿಕ ಬಲವನ್ನು ಹಿಂದೂಗಳನ್ನು ಹಿಂಸಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವುದಕ್ಕಾಗಿಯೇ ವಿನಿಯೋಗಿಸಿದ.

                ಅನ್ಯಾಯದ ಜಿಜಿಯಾ ತೆರಿಗೆಯನ್ನು ಮತ್ತೆ ಹೊರಿಸಿದ ಸುದ್ದಿ ಕೇಳಿದ ಕೂಡಲೇ ದೇಶ ಕುತ ಕುತ ಕುದಿಯಿತು. ಅದನ್ನು ತೆಗೆದುಹಾಕೆಂದು ಚಕ್ರವರ್ತಿಗೆ ಮೊರೆಯಿಡಲು ದಿಲ್ಲಿಯಲ್ಲಿ ಸಾವಿರಾರು ಪ್ರಜೆಗಳು ನೆರೆದರು. ಯಮುನೆಯ ತೀರದ ರಾಜಮಹಲಿನಲ್ಲಿ ನಿಂತು ಹೊಸ ತೆರಿಗೆಯನ್ನು ತೆಗೆದು ಹಾಕಬೇಕೆಂದು ಗೋಳಿಟ್ಟರು. ಚಕ್ರವರ್ತಿ ಕೇಳಿಸಿಕೊಳ್ಳಲೇ ಇಲ್ಲ. ಒಂದು ದಿನ ಔರಂಗಜೇಬ್ ಮಸೀದಿಗೆ ಪ್ರಾರ್ಥನೆ ಸಲ್ಲಿಸಲೆಂದು ಹೋಗುತ್ತಿದ್ದಾಗ ರಾಜಮಹಲಿನಿಂದ ಮಸೀದಿಯವರೆಗಿನ ರಾಜಮಾರ್ಗದುದ್ದಕ್ಕೂ ಕಿಕ್ಕಿರಿದು ನೆರೆದ ಹಿಂದುಗಳು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿಕೊಂಡರು. ಆ ಅಪಾರ ಜನಸಮೂಹವನ್ನು ದಾಟಿ ಹೋಗುವುದು ಅವನಿಗೆ ಅಸಾಧ್ಯವಾಯಿತು. ಪ್ರಾರ್ಥನೆಗೆ  ತಟ್ಟನೆ ಆ ದಯಾಮಯ ಪ್ರಭುವಿಗೆ ಒಂದು ಉಪಾಯ ಹೊಳೆಯಿತು. ಕೂಡಲೇ ಗಜಶಾಲೆಯಲ್ಲಿನ ಆನೆಗಳನ್ನು ಆ ಜನಸಮೂಹದ ಮೇಲೆ ಬಿಡಲು ಆಜ್ಞಾಪಿಸಿದ. ಆನೆಗಳು ಅಮಾಯಕ ಜನರ ಮೇಲೆ ಅರಿಭಯಂಕರವಾಗಿ ಮುನ್ನುಗ್ಗಿದವು. ಸಹಸ್ರಾರು ಜನ ಸತ್ತರು. ಹಲವು ಸಾವಿರ ಮಂದಿ ಗಾಯಗೊಂಡರು. ದಾರಿಯುದ್ದಕ್ಕೂ ಹೆಣಗಳ ಸಾಲು. ರಸ್ತೆ ಖಾಲಿ ಆಯಿತು. ಚಕ್ರವರ್ತಿ ಠೀವಿಯಿಂದ ದೇವರ ಪ್ರಾರ್ಥನೆಗೆ ಮಸೀದಿಗೆ ಹೊರಟ. ಆದರೇನು ದಿಲ್ಲಿಯ ಬೀದಿಗಳಲ್ಲಿ ಭುಗಿಲೆದ್ದ ಅಶಾಂತಿ ಕರಿಗಳ ಕಾಲ್ಗೆಳಗೆ ನುಚ್ಚುನೂರಾಗಲಿಲ್ಲ. ಅದು ದಾವಾನೆಲವಾಗಿ ಮಾರ್ಪಟ್ಟಿತು.

              ಅಂತಹ ವಿಷಮ ಪರಿಸ್ಥಿತಿಯಲ್ಲೇ ಹಿಂದೂ ಪ್ರಮುಖರು ಗುರು ತೇಜ್ ಬಹಾದ್ದೂರರಲ್ಲಿ ಮೊರೆ ಇಟ್ಟಿದುದು. ಗುರುಗಳು 1675 ಜುಲೈ 8 ರಂದು ಸಿಖ್ ಸಂಗತ್ ಅನ್ನು ಸಮಾವೇಶಗೊಳಿಸಿ ತನ್ನ ಚಿಕ್ಕಮಗ ಗೋವಿಂದನನ್ನು ಉತ್ತರಾಧಿಕಾರಿಯಾಗಿ ಸಕಲ ಗೌರವ, ಲಾಂಛನಗಳೊಡನೆ ಕೂರಿಸಿದರು. ಆಯ್ದ ಮೂವರು ಶಿಷ್ಯರನ್ನು ಕರೆದುಕೊಂಡು ಕುಟುಂಬ, ಬಂಧು-ಮಿತ್ರ, ಶಿಷ್ಯವರ್ಗದಿಂದ ಬೀಳ್ಗೊಂಡು ಭಕ್ತಾದಿಗಳು ದುಃಖ ತಪ್ತರಾಗಿ ರೋದಿಸುತ್ತಿರಲು ದೆಹಲಿಗೆ ಪಯಣ ಬೆಳೆಸಿದರು. ಇತ್ತ ಸಮಾಚಾರ ತಿಳಿದ ಔರಂಗಜೇಬನಿಗೆ ತೇಜ್ ಬಹಾದೂರ್ ಹೆಸರು ಕೇಳಿದೊಡನೆ ಮೈಯೆಲ್ಲಾ ಧಗಧಗ ಉರಿಯತೊಡಗಿತು. ಕೆಂಡಾಮಂಡಲನಾಗಿ ತೇಜ್ ಬಹಾದೂರರನ್ನು ಹಿಡಿದು ತನ್ನಿರೆಂದು ಆಜ್ಞಾಪಿಸಿದ. ತೇಜ್ ಬಹಾದೂರ್ ಹಾಗವರ ಶಿಷ್ಯರನ್ನು ಬಂಧಿಸಿ ಸಿರ್ ಹಿಂದ್ ನಲ್ಲಿ ಮೂರು ತಿಂಗಳ ಕಾಲ ಸೆರೆಯಲ್ಲಿರಿಸಲಾಯಿತು. ಆನಂತರ ಕಬ್ಬಿಣದ ಪಂಜರದಲ್ಲಿ ಕೂಡಿ ಹಾಕಿ ದೆಹಲಿಗೆ ಒಯ್ದರು. ಇಸ್ಲಾಮಿಗೆ ಮತಾಂತರಗೊಳ್ಳುವೆನೆಂದು ಹೇಳು ಎನ್ನುವಂತೆ ಪೀಡಿಸಿದರು. ಸರಪಳಿಯಿಂದ ಬಿಗಿದು ಅಮಾನುಷವಾಗಿ ಹಿಂಸಿಸಿದರು. ಕ್ಷುಲ್ಲಕ ಆರೋಪಗಳನ್ನು ಮಾಡಿದರು. ಒಮ್ಮೆಯಂತೂ ರಾಣೀವಾಸದ ಕೋಣೆಗಳೆಡೆ ನೋಡುತ್ತಿದ್ದರೆಂಬ ಆರೋಪ. ಔರಂಗಜೇಬ್ ಪ್ರಶ್ನಿಸಿದಾಗ ಆ ಮಹಾಯೋಗಿ "ಸೆರೆಮನೆಯ ಮೇಲಂತಸ್ತಿನಿಂದ ನಾನು ನೋಡಿದ್ದು ನಿನ್ನಂತಃಪುರವನ್ನೋ, ರಾಣಿಯರ ಖಾಸಗಿ ಕೋಣೆಯನ್ನೋ ಅಲ್ಲ. ನಾನು ನೋಡುತ್ತಿದ್ದುದು ನಿನ್ನ ಪರದೆಗಳನ್ನು ಹರಿದೆಸೆದು ನಿನ್ನ ಸಾಮ್ರಾಜ್ಯವನ್ನು ಧ್ವಂಸ ಮಾಡಲು ಸಮುದ್ರ ದಾಟಿಕೊಂಡು ಬರುತ್ತಿರುವ ಯೂರೋಪಿಯನ್ನರತ್ತ" ಎಂದರು.
ಎಷ್ಟು ಆರೋಪಗಳನ್ನು ಮಾಡಿ, ಎಷ್ಟು ಆಸೆ - ಆಮಿಷ, ಯಮ ಯಾತನೆಯನ್ನೊಡ್ಡಿದರೂ ತೇಜ್ ಬಹಾದ್ದೂರ್ ಮಣಿಯಲಿಲ್ಲ. ನಿನಗೇನಾದರೂ ದಿವ್ಯತ್ವವಿದ್ದರೆ ಮಹಿಮೆಯನ್ನೇನಾದರೂ ಮಾಡಿ ತೋರಿಸೆಂದು ಔರಂಗಜೇಬ್ ಕೇಳಿದ. ದೈವ ಸಂಕಲ್ಪಕ್ಕೆ ವಿರುದ್ಧವಾಗಿ ನಡೆಯಬಾರದೆಂದು ಹೇಳಿ ಅವರು ಅದನ್ನು ನಿರಾಕರಿಸಿದರು. ಅದೇ ನೆಪವಾಗಿ ಕಾಫಿರರನ್ನು ಇಸ್ಲಾಂ ಮತಾಚಾರದ ಪ್ರಕಾಋಅ ಶಿಕ್ಷಿಸಲು ಔರಂಗಜೇಬ್ ಚಿತ್ರವಧೆಗೆ ಆಜ್ಞಾಪಿಸಿದ. ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ದೇಹವನ್ನು ಇಬ್ಬಾಗ ಮಾಡಿದರು. ಭಾಯಿ ದಯಾಳನನ್ನು ಕೊತಕೊತ ಕುದಿಯುತ್ತಿದ್ದ ನೀರಿನ ಹಂಡೆಗೆ ಹಾಕಿದರು. ಭಾಯಿ ಸತೀದಾಸನನ್ನು ಹತ್ತಿಯ ರಾಶಿಯಲ್ಲಿ ಹಾಕಿ ಬೆಂಕಿ ಕೊಟ್ಟರು. ಈ ಪೈಶಾಚಿಕ ಕೃತ್ಯಗಳೆಲ್ಲಾ ಕಣ್ಣ ಮುಂದೆಯೇ ಜರುಗಿದರೂ ತೇಜ್ ಬಹಾದ್ದೂರ್ ವಿಚಲಿತರಾಗಲಿಲ್ಲ. ಗುರುಗಳ ಕಣ್ಣುಗಳನ್ನು ಕೀಳಿಸಿದ. ಏನು ಮಾಡಿದರೂ ಮಣಿಯದಿದ್ದಾಗ 1675 ನವೆಂಬರ್ 11ರಂದು ಹಾಡಹಗಲೇ ಎಲ್ಲರೂ ನೋಡುತ್ತಿದ್ದಂತೆಯೇ ಚಾಂದನೀ ಚೌಕದಲ್ಲಿ ಪವಿತ್ರ ಗುರುದೇವರ ತಲೆಯನ್ನು ಕತ್ತರಿಸಿ ಚೆಲ್ಲಿದರು. ಕತ್ತಿಯ ಏಟು ಬೀಳುತ್ತಿರುವಾಗಲೂ ಪ್ರಶಾಂತವದನರಾಗಿ ನಿಶ್ಚಿಂತೆಯಿಂದಿದ್ದ ಅವರ ಪರಿಯನ್ನು ಕಂಡು ಕಟುಕನೂ ಬೆರಗಾದ.

                ಜನತೆ ತಲ್ಲಣಿಸಿತು. ಭಯದಿಂದ ಯಾರೂ ಬಿದ್ದ ದೇಹದ ಬಳಿ ಹೋಗಲಿಲ್ಲ. ಆ ಘೋರವನ್ನು ಕಂಡು ಪ್ರಕೃತಿಯೇ ಅತ್ತಿತು. ಅಂದು ರಾತ್ರಿ ಧಾರಾಕಾರ ಮಳೆ ಸುರಿಯಿತು. ಆ ಜಡಿ ಮಳೆಯಲ್ಲಿ ಕೆಲ ಶಿಷ್ಯರು ರಹಸ್ಯವಾಗಿ ಗುರುಗಳ ಶಿರಸ್ಸನ್ನು ಆನಂದಪುರಕ್ಕೆ ಸಾಗಿಸಿದರು. ಶಿಷ್ಯ ಲಖೀದಾಸ ಮುಂಡವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಬಹಿರಂಗವಾಗಿ ಅಂತ್ಯಕ್ರಿಯೆ ಮಾಡುವ ಅವಕಾಶವಿಲ್ಲದ್ದರಿಂದ ತನ್ನ ಗುಡಿಸಲಲ್ಲಿ ಗುರುಗಳ ದೇಹವಿರಿಸಿ ತನ್ನ ಗುಡಿಸಲಿಗೆ ತಾನೇ ಬೆಂಕಿ ಹಚ್ಚಿ ಬೆಳಗಾಗುವ ಮೊದಲೇ ಗುರುವಿನ ಅಂತ್ಯಕ್ರಿಯೆ ಮುಗಿಸಿದ. ತನ್ನ ತಂದೆಯ ಶಿರಸ್ಸಿಗೆ ಭಕ್ತಿ ಶೃದ್ಧೆಗಳಿಂದ ಯಥಾ ವಿಧಿ ಸಂಸ್ಕಾರ ಪೂರೈಸಿ ವಿಲಪಿಸುತ್ತಿದ್ದ ಭಕ್ತ ಜನರಿಗೆ ಧೈರ್ಯ ತುಂಬಿದ ಪುತ್ರ ಗುರು ಗೋವಿಂದ ಸಿಂಗ್ ಅಚಂದ್ರಾರ್ಕವಾಗಿ ತನ್ನ ತಂದೆಯ ಬಲಿದಾನವನ್ನು ಲೋಕ ಸ್ಮರಿಸುತ್ತದೆಯೆಂದ. ಆದರೆ ನಮ್ಮ ಸೆಕ್ಯುಲರ್ ಚರಿತ್ರೆಕಾರರು ಆ ಅಪ್ರತಿಮ ವೀರ-ಯೋಗಿ-ಬಲಿದಾನಿಯನ್ನು ಸೂರ್ಯ-ಚಂದ್ರರಿನ್ನೂ ಪ್ರಕಾಶಿಸುತ್ತಿರುವಾಗಲೇ ದರೋಡೆಕೋರನನ್ನಾಗಿಸಿದರು. ಯಾರೇನೇ ಒದರಲಿ ಆ ಯೋಗಿಯ ಬಲಿದಾನ ವ್ಯರ್ಥವಾಗಲಿಲ್ಲ. ಅದು ದೀನ-ಹೀನ-ಜೀವಚ್ಛವಗಳಂತೆ ಬದುಕು ಸಾಗಿಸುತ್ತಿದ್ದ ಜನರಿಗೆ ಸಂಜೀವಿನಿಯಾಗಿ ಅವರಲ್ಲಿ ಸ್ಪೂರ್ತಿ ತುಂಬಿತು. ಒಂಬತ್ತು ವರ್ಷ ಪ್ರಾಯದ ಬಾಲ ಗುರು ಗೋವಿಂದ ಸಿಂಗನ ನೇತೃತ್ವದಲ್ಲಿ ಅದು ಹೆದ್ದೆರೆಯಾಗಿ ಮೊಘಲ್ ಸಾಮ್ರಾಜ್ಯಕ್ಕೆ ಅಪ್ಪಳಿಸಿತು. ಆಟ-ಪಾಠಗಳಲ್ಲಿ ತಲ್ಲೀನವಾಗಬೇಕಿದ್ದ ವಯಸ್ಸಿನಲ್ಲಿ ಬಂದ ಗುರುತರ ಜವಾಬ್ದಾರಿಯೊಂದನ್ನು ಆತ ಅದ್ಭುತವಾಗಿ ನಿರ್ವಹಿಸಿದ. "ನರಿಗಳನ್ನು ಹುಲಿಗಳನ್ನಾಗಿ, ಗುಬ್ಬಚ್ಚಿಗಳನ್ನು ಗಿಡುಗಳನ್ನಾಗಿ ಮಾಡಬಲ್ಲ" ಎನ್ನುವ ತನ್ನ ಮೇಲಿನ ಭವಿಷ್ಯವಾಣಿಯನ್ನು ನಿಜಗೊಳಿಸಿದ.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ