ಪುಟಗಳು

ಮಂಗಳವಾರ, ಜುಲೈ 24, 2012

ಮರೆತು ಹೋದ ಮಹಾವೀರ.....!

ನ್ಯಾಯಾಧೀಶ ಕೇಳುತ್ತಿದ್ದಾನೆಃ ನೀನು ಸಬ್ ಇನ್ಸ್ಪೆಕ್ಟರ್ಗೆ ಕಲ್ಲಿಂದ ಹೊಡೆದೆಯಾ?
"ಹೌದು..." ಹುಡುಗ ಉತ್ತರಿಸಿದ..
"ನಾನು ತಪ್ಪು ಮಾಡಿದೆನೆಂದು ಅನಿಸುತ್ತದೆ...
ಕಲ್ಲಿಂದ ಹೊಡೀಬಾರದಿತ್ತು... ಲಾಠಿಯಿಂದ ಅವನ ತಲೆ ಒಡೆದು ಹಾಕಬೇಕಿತ್ತು. ಪೂಜ್ಯ ಶಂಕರಾನಂದರನ್ನು ಸಾಯಬಡಿದ ಅವನನ್ನು, ನನ್ನ ಕೈಯಲ್ಲಿ ಪಿಸ್ತೂಲ್ ಇದ್ದರೆ ಗುಂಡಿಟ್ಟು ಸಾಯಿಸುತ್ತಿದ್ದೆ!"
"ಏಯ್ ಇದು ನ್ಯಾಯಾಲಯ ಸರಿಯಾಗಿ ಮಾತಾಡು"
"ಹಾಂ ಇದು ನ್ಯಾಯದೇವತೆಗೆ ನೇಣು ಹಾಕೋ ಅನ್ಯಾಯಾಲಯ"
"ಮುಚ್ಚುಬಾಯಿ! ನಿನ್ನ ಹೆಸರೇನು?"
ಕ್ಷಣ ಯೋಚಿಸಿ
"ಆಜಾದ್...!" ವಂದೇ ಮಾತರಂ ಮಾರ್ಧನಿಸಿತು!
"ನಿನ್ನ ಅಪ್ಪನ ಹೆಸರು...?"
"ಸ್ವಾಧೀನತೆ!"
"ನಿನ್ನ ಮನೆ ಎಲ್ಲಿ?"
"ನನ್ನ ಮನೆ... ಸೆರೆಮನೆ!"
ಸಿಟ್ಟಿಗೆದ್ದ ನ್ಯಾಯಾಧೀಶ 12 ಛಡಿ ಏಟುಗಳ ಶಿಕ್ಷೆ ವಿಧಿಸಿದ.
3 ಅಡಿ ಉದ್ದದ ಹುಡುಗನಿಗೆ ಅಡಿಗೆ ನಾಲ್ಕರಂತೆ 12 ಛಡಿ ಏಟು!
ಆದರೆ ಹುಡುಗ ಹೇಳುತ್ತಾನೆ."ಮ್ಯಾಜಿಸ್ಟ್ರೇಟರೆ ಬೇಕಾದರೆ ಇನ್ನೂ ಹೆಚ್ಚೇ ಕೊಡಿ"
ದೃಷ್ಟಾರ ವಿದ್ಯಾನಂದ ಶೆಣೈಯವರ ಆ ಕಂಚಿನ ಕಂಠ ಆಲಿಸುತ್ತಿದ್ದರೆ ಅದೇನೋ ರೋಮಾಂಚನ!
ಮುಂದೆ ಜೈಲಿನ ನಿಯಮದಂತೆ ಕೊಟ್ಟ 3ಆಣೆಯನ್ನು ಜೈಲರನ ಮುಖಕ್ಕೆಸೆದ ಬಾಲಕ
"ಮೈ ಆಜಾದ್ ಹೂಂ! ಆಜಾದ್ ಹೀ ರಹೂಂಗಾ...ಆಜಾದ್ ಹೀ ಮರೂಂಗಾ"
ಎಂಬ ಭೀಷಣ ಪ್ರತಿಜ್ಞೆ ಮಾಡುತ್ತಾನೆ!
ಹೀಗೆ ಚಂದ್ರಶೇಖರ ತಿವಾರಿ ಆಜಾದ್ ಆದ!
ವೇಶ್ಯೆಯೊಬ್ಬಳು ಮಹಡಿಯೊಂದರಲ್ಲಿ ಬಂಧಿಸಿ ಕಾಮಿಸಬಯಸಿದಾಗ ಆ ಮೂರನೇ ಮಹಡಿಯ ಕಿಟಕಿಯಿಂದ ಹಾರಿ ಹೋದ ಅಖಂಡ ಬ್ರಹ್ಮಚಾರಿ!(ಬ್ರಹ್ಮಚರ್ಯವೆಂದರೆ ಇದು!ನಗ್ನ ಹುಡುಗಿಯರೊಡನೆ ಬೆತ್ತಲೆ ಮಲಗುವುದಲ್ಲ!)
ಅದೆಷ್ಟೋ ಕಷ್ಟನಷ್ಟಗಳು ಬಂದಾಗಲೂ ತನ್ನ ಪ್ರತಿಜ್ಞೆ ಮರೆಯದ ಭೀಷ್ಮ!
ಪಂಡಿತ ರಾಮಪ್ರಸಾದ ಬಿಸ್ಮಿಲರ ಪ್ರೀತಿಯ ಶಿಷ್ಯನಾಗಿ, ಭಗತ್ ಸಿಂಗ್ ಮುಂತಾದವರಿಗೆ ನಾಯಕನಾಗಿ ತನ್ನೊಂದಿಗಿದ್ದವರೆಲ್ಲ ವೀರ ಸ್ವರ್ಗವನ್ನಪ್ಪಿದ ನಂತರವೂ ತಾತ್ಯಾಟೋಪೆಯಂತೆ ಏಕಾಂಗಿಯಾಗಿ ಹೋರಾಡಿದ ಮಹಾಪ್ರತಾಪಿ!
ಸಾವಿನಲ್ಲೂ ಪ್ರತಿಜ್ಞೆ ಉಳಿಸಿಕೊಂಡ ಪ್ರಳಯರುದ್ರ!
ತನ್ನ ದೇಶವಾಸಿಗಳಿಂದಲೇ ಅನಾದರಣೆಗೊಳಗಾಗಿ ಮರೆತು ಹೋದ ಮಹಾವೀರ!
"ಹೃದಯ ಮಿಡಿಯುತಿದೆ
ರೋಮ ನಿಮಿರಿ ನಿಂತಿದೆ
ಕಂಬನಿ ಹರಿಯುತಿದೆ
ಎದೆ ತಹತಹಿಸುತಿದೆ
ಮನವು ನಿನ್ನ ಬಾ ಎನ್ನುತಿದೆ
ಜೀವ ಕಾಯುತಿದೆ
ಬರುವೆಯಾ ಓ ಧೀರ!"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ