ಪುಟಗಳು

ಗುರುವಾರ, ಆಗಸ್ಟ್ 1, 2013

ಕಂಪ ಸೂಸುವ ಸಂಪಿಗೆ

ಅಬ್ಬಾ ಅದೆಂಥಾ ಸೌಂದರ್ಯ. ಪೌರ್ಣಿಮೆಯ ಚಂದಿರನಂತೆ, ಹಾಲು ಚೆಲ್ಲಿದ ಬೆಳದಿಂಗಳಂತೆ... ನಯನಗಳೋ ಮಧುರ ಕಾವ್ಯದ ಒರತೆಗಳು...ಕಂಪ ಸೂಸುವ ಸಂಪಿಗೆಯು ನಾಚಿ ಮುದುಡಿಹುದು ನಿನ್ನ ನಾಸಿಕದ ಲಾಸ್ಯ ನೋಡಿ...ವಿಶಾಲವಾದ ಲಲಾಟವ ನೇವರಿಸುವ ಬಯಕೆ ಮೂಡಿದೊಡೆ ಹುಬ್ಬು ಕುಣಿಸಿ ತಬ್ಬಿಬ್ಬುಗೊಳಿಸುವ ನಿನ್ನ ಸಿರಿ ಸೌಂದರ್ಯದ ಪರಿಗೆ ಕರಗಿ ಒರೆಯಲಾಗದೇ ಕುಳಿತೆ. ಕಮಲವೇ ಕಪೋಲವೋ ಅಥವಾ ಕಪೋಲಗಳೇ ಕಮಲಗಳೋ ಎಂಬ ಭ್ರಮೆಯಲ್ಲೇ ಮುಳುಗಿರಲು ತಿಳಿ ಹಾಸ್ಯಕೆ ಮುಗುಳ್ನಗುವ ಭರದಲ್ಲಿ ಗುಳಿ ಬಿದ್ದ ಕೆನ್ನೆಗಳು ರನ್ನೆಯಾಗಿಸಿವೆ ನಿನ್ನ ಮನದನ್ನೆಯಾಗಿಸುವ ತವಕ... ಸುಂದರ ದಂತ ಪಂಕ್ತಿಗೆ ಬೆಳಕಿನ ರಶ್ಮಿಯದು ಸೋಕಲು ಮಿಂಚು ಹೊಡೆದಂತೆ....ಅಧರದ್ವಯಗಳ ಮಧುರ ಲಾಸ್ಯಕೆ ಸೋತು ಹೋದೆ ನಾ...

ಚಿತ್ರ ಕೃಪೆ: ಯಕ್ಷ ಪ್ರೇಮಿ


ಅಮಮಾ ಅರರೆ
ಇದು ಎಂಥಾ ಚೆಲುವು ಅರಿಯೆ|
ಶಶಿಯು ಜಾರಿ
ಧರೆಗೆ ಬಿದ್ದ ಪರಿಯೆ||

ತಾರೆಗಳೆಲ್ಲ ಜಾರಿ ಸೇರಿ ಹೋದ
ಯೌವನದ ಸೊಬಗು|
ಮಿಂಚು ಕೂಡಾ ನಾಚಿ ಮಿಂಚಿ ಹೋದ
ತನುವ ತಳುಕು ಬಳುಕು||

ಅವಳ ಒನಪು ವೈಯ್ಯಾರಕೆ
ತಂಗಾಳಿ ತಾ ಸೋತಿತೋ|
ಮೃದುಲ ಮೈ ಸಿರಿಯಲಿ
ಜಗದ ಸೊಬಗು ಸೆರೆಯಾಯಿತೋ||

ಮೇಘ ಮರೆಗೆ ಸರಿದ
ಶಶಿಯ ತೆರದಿ ನಗುವು|
ಇಬ್ಬನಿ ತಬ್ಬಿದ ಇಳೆಗೆ
ರವಿ ತೇಜ ಸೋಕಿದ ಚೆಲುವು||

ಮಂದ ಮಾರುತ ಬೀಸಿ
ತವ ಅಂದವ ಸೋಕಿ|
ಚಂದಿರ ನಾಚಿ
ಮರೆಯಾದ ನಿನ್ನಂದಕೆ ಬೆರಗಾಗಿ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ