ಪುಟಗಳು

ಬುಧವಾರ, ಜನವರಿ 29, 2014

ಬ್ರಿಟಿಷರು ತೊಲಗಿದರೂ ಮತಾಂತರಿಗಳು ತೊಲಗಲೇ ಇಲ್ಲ

ಬ್ರಿಟಿಷರು ತೊಲಗಿದರೂ ಮತಾಂತರಿಗಳು ತೊಲಗಲೇ ಇಲ್ಲ

                      2005ರ ಜನವರಿ. 1.25ಲಕ್ಷದಷ್ಟು ಜನ ಜಕ್ಕೂರಿನ ವಾಯುನೆಲೆ ಮೈದಾನದಲ್ಲಿ ತಮ್ಮ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸೇರಿದ್ದರು! ಅಲ್ಲೊಬ್ಬ ಪವಾಡ ಪುರುಷ ಆ ಪಾಪಿಗಳನ್ನು ಉದ್ಧರಿಸಲು ಬಂದಿದ್ದ! ಆತ ಅಲ್ಲಿದ್ದವರ ರೋಗರುಜಿನಗಳನ್ನು ಗುಣಪಡಿಸುತ್ತೇನೆ ಎಂದು ಕಿರುಚುತ್ತಾ ಸಭಾಂಗಣದ ಮೇಲೆ ಅತ್ತಿಂದಿತ್ತಾ ಓಡಾಡುತ್ತಿದ್ದ! ನೆರೆದಿದ್ದವರೆಲ್ಲಾ ಮಂತ್ರಮುಗ್ಧರಂತೆ ಆತನ ಪವಾಡಗಳನ್ನು(!) ವೀಕ್ಷಿಸುತ್ತಿದ್ದರು. ಅವನ ಮಾಯೆಯಿಂದ ಮೂಕಿಯೊಬ್ಬಳು ಮಾತಾಡತೊಡಗಿದಳು, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಗುಣಮುಖನಾದ, ಕಿವುಡನಿಗೆ ಕಿವಿ ಕೇಳಿಸಿತು,....!
                ಯಾವುದೋ ನಾಟಕ ಅಥವಾ ಚಲನಚಿತ್ರದ ದೃಶ್ಯ ಅಂದುಕೊಂಡಿರೇನು? ಏನೂ ಅಲ್ಲ. ಬೆನ್ನಿಹಿನ್ ಎಂಬ ಸ್ವಯಂಘೋಷಿತ ದೇವ ಮಾನವನ ಮತಾಂತರದ ಹೂಟವಿದು. ಅಮೇರಿಕಾದ ಈ ಪಾದ್ರಿ ಮೂಲತಃ ಪ್ಯಾಲೆಸ್ತೈನಿನವ. "ಇಂಡಿಯಾಕ್ಕಾಗಿ ಪ್ರಾರ್ಥಿಸಿ" ಎಂಬ ಈ ಕಾರ್ಯಕ್ರಮದಲ್ಲಿ ಆತ ಭಾಗವಹಿಸಿದ್ದ. ಈತನ ಕಾರ್ಯಗಳನ್ನೆಲ್ಲಾ ಸತ್ಯ ಎಂದು ತಿಳಿದುಕೊಂಡರೆ ನಿಮ್ಮಷ್ಟು ಮೂರ್ಖರು ಯಾರೂ ಇಲ್ಲ. ತಾನು ದೇವರನ್ನು ಸಾಕ್ಷಾತ್ಕರಿಸಿಕೊಂಡಿದ್ದೇನೆ ಎನ್ನುವ ಈತನಿಗೆ ಮಾತು ಕೃತಿಗಳ ಜನರನ್ನು ಯಾಮಾರಿಸುವ ಕಲೆ ಕರಗತ. ಮೊದಲೇ ಸಿದ್ಧಗೊಳಿಸಿದ ಅವನ ಶಿಷ್ಯವೃಂದದಿಂದ ಈ ಕಣ್ಣು ಕಾಣದಂತೆ, ಕಿವಿ ಕೇಳದಂತೆ, ಕಾಲಿಲ್ಲದಂತೆ ನಟನೆ ಮಾಡುವವರನ್ನು ಆಯ್ದುಕೊಳ್ಳುವ ಈತ ಅವರ ಸ್ಪರ್ಷ ಮಾಡಿ ಅವರ ನ್ಯೂನತೆಯನ್ನು ಸರಿಪಡಿಸುತ್ತಾನೆ. ಹೊರಗಿನಿಂದ ಯಾರಾದರೂ ಸಹಾಯ ಯಾಚಿಸಿ ಬಂದರೆ ಒಂದೋ ಇವನು ನೀನು ಪಾಪಿ ಹಾಗಾಗಿ ಸರಿಯಾಗುವುದಿಲ್ಲವೆಂತಲೋ, ಇಲ್ಲ ನಿನಗೆ ದೇವರ ಮೇಲೆ ಭಕ್ತಿ ಕಡಿಮೆಯಾಗಿದೆಯೆಂತಲೂ ಹೇಳಿ ಅವರನ್ನು ಸಾಗ ಹಾಕುತ್ತಾನೆ ಅಥವಾ ಇವನ ಭಕ್ತರು ಅವರನ್ನು ಆ ಸಭೆಯಿಂದಲೇ ಹೊರಹಾಕುತ್ತಾರೆ! ಕಿವಿಗಡಚಿಕ್ಕುವ ಸಂಗೀತದ ಮದ್ಯೆ ಇವನು ಮಾತಾಡುತ್ತಾ ರೋಗಿಗಳಂತೆ ನಟಿಸುತ್ತಾ ಬರುವ ಇವನ ಕಳ್ಳ ಶಿಷ್ಯರಿಗೆ ಪವಾಡದಿಂದ ಗುಣಪಡಿಸುತ್ತಾ ನಡು ನಡುವೆ ತನ್ನ ಕಾರ್ಯಕ್ಕೆ ಧನ ಸಹಾಯ ಮಾಡಿ ಎಂದು ಬೊಬ್ಬಿರಿದ ತಕ್ಷಣ ಇವನ ಪಟಾಲಮು ದೇಣಿಗೆ ಸಂಗ್ರಹಕ್ಕೆ ಶುರು ಮಾಡುತ್ತಿತ್ತು. 2005ರಲ್ಲಿ ಭಾರತಕ್ಕೆ ಬಂದಾಗ ಪ್ರಚಾರಕ್ಕೆಂದು ಬಳಸಲಾಗಿದ್ದ ಫ್ಲೆಕ್ಸ್, ಕರಪತ್ರಗಳಲ್ಲಿ ವಿಗ್ರಹಪೂಜೆ ಮಾಡುವವರು ಪಾಪಿಗಳು, ವಿಗ್ರಹ ಪೂಜೆ ವ್ಯಭಿಚಾರಕ್ಕೆ ಸಮ, ಉನ್ನತಿಗಾಗಿ ಯೇಸುವನ್ನು ಪ್ರಾರ್ಥಿಸಿ ಎಂದೆಲ್ಲ ಮುದ್ರಿಸಲಾಗಿತ್ತು!! ಇದರ ವಿರುದ್ಧ 9 ಪ್ರಕರಣಗಳು ದಾಖಲಾದವು! ಆ ದೇವ ಮಾನವನನ್ನು ಸ್ವಾಗತಿಸಲು ಕರ್ನಾಟಕದ ಜಾತ್ಯಾತೀತ ಕಾಂಗ್ರೇಸ್ ಸರಕಾರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿತ್ತು.  ಆಗಿನ ಮುಖ್ಯಮಂತ್ರಿ ಧರ್ಮಸಿಂಗ್, ದೇವೇಗೌಡ ಸಹಿತ ಹಲವು ಸಚಿವ, ಶಾಸಕರು ಈ ಮತಾಂತರಿಯ ಕಾಲಿಗೆರಗಿದರು. ಉತ್ಪ್ರೇಕ್ಷೆ, ಉನ್ಮಾದ ಮತ್ತು ಜನರನ್ನು ಉದ್ರೇಕಿಸುವ ಮೂಲಕ ಬೆನ್ನಿಹಿನ್ ಮಾಡಿದ್ದು ಮತದ ಹೆಸರಿನ ವ್ಯಾಪಾರ! ಅನೇಕ ಚಾನಲುಗಳು ಈತನ ಕಪಟ ಪವಾಡಗಳನ್ನು ಬಯಲಿಗೆಳೆದಿವೆ. ಅನೇಕ ಕ್ರೈಸ್ತ ವಿದ್ವಾಂಸರೇ ಈತನಿಗೆ ಛೀಮಾರಿ ಹಾಕಿದ್ದಾರೆ. ಆದರೆ ನಮ್ಮವರಿಗೆ ಈತ ಯಾವ ಕೋನದಲ್ಲಿ ದೇವಮಾನವನಾಗಿ ಕಂಡನೋ ತಿಳಿಯದು. 2005ರಲ್ಲೇ ಇವನ ಸಂಸ್ಥೆಯ ವಾರ್ಷಿಕ ಆದಾಯ 100ಮಿಲಿಯನ್  ಡಾಲರ್! ಇತರರ ರೋಗ ಗುಣಪಡಿಸುವ ಈತನಿಗೆ ತನ್ನ ಪತ್ನಿಯ ಮಾದಕ ವ್ಯಸನವನ್ನು ದೂರೀಕರಿಸಲು ಸಾಧ್ಯವಾಗಲಿಲ್ಲವೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ! ಅಂದು ಹಿಂದೂ ಜಾಗರಣ ವೇದಿಕೆ ನಡೆಸಿದ ಪ್ರತಿಭಟನೆಯಿಂದಾಗಿ ಭಾಗವಹಿಸಿದವರ ಸಂಖ್ಯೆ ಕೋಟಿಯಿಂದ ಲಕ್ಷಕ್ಕಿಳಿದಿತ್ತು. ಅಂದರೆ ಬೃಹತ್ ಪ್ರಮಾಣದ ಮತಾಂತರ ತಪ್ಪಿತ್ತು!
            ಈ ಮತಾಂತರಿ ಪಾದ್ರಿ ಈ ಸಾರಿ ಕೂಡಾ ಇಲ್ಲಿ ವಕ್ಕರಿಸುವವನಿದ್ದ. ಜನವರಿ 15ರಿಂದ 19ರವರೆಗೆ ಯಲಹಂಕಾದ ಸೂಪರ್ನೋವಾ ಎರೆನಾದಲ್ಲಿ ನಡೆಯುತ್ತಿರುವ ಪ್ರೇಯರ್ ಕಾನ್ಫರೆನ್ಸಿನಲ್ಲಿ ಭಾಗವಹಿಸಿ ಮಾತನಾಡುವವನಿದ್ದ. ಪ್ರವಾಸಿ ವೀಸಾದಲ್ಲಿ ಬರುವ ಈತನಿಗೆ ಸರಕಾರ ಮಾತಾನಾಡಲು ಯಾವ ಕಾನೂನಿನ ಮುಖಾಂತರ ಅವಕಾಶ ನೀಡಿತೋ ದೇವರೇ ಬಲ್ಲ! ಆದರೆ ಸುದೈವವಶಾತ್ ಸಂಘ ಪರಿವಾರ, ಶ್ರೀರಾಮಸೇನೆ, ಹಿಂದೂ ಜನಜಾಗೃತಿ ಸಮಿತಿಗಳು ನಡೆಸಿದ ಬೃಹತ್ ಪ್ರತಿಭಟನೆಯಿಂದ ಬೆನ್ನಿಹಿನ್ ಆಗಮನ ರದ್ದಾಯಿತು. ಸಾಮೂಹಿಕ ಮತಾಂತರವೂ ತಪ್ಪಿತು. ಆದರೆ ಪ್ರಶ್ನೆ ಉಳಿಯುವುದು ಪ್ರತಿ ಸಲ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವಾಗಲೇ ಈ ಬೆನ್ನಿಹಿನ್ನನ ಆಗಮನ ಏಕಾಗುತ್ತದೆ? ಅಲ್ಲದೆ ಮೌಢ್ಯ ನಿಷೇಧ ಕಾನೂನನ್ನು ಜಾರಿಗೆ ತರಲು ಹೊರಟ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಕ್ರಿಶ್ಚಿಯನ್ ಪಾದ್ರಿಯ ಪವಾಡ ಮೌಢ್ಯತೆ ಎನಿಸಲಿಲ್ಲವೆ?
              ಇಂತಹ ಘಟನೆಗಳಾದಾಗ ನಮ್ಮ ಜನರಿಗೇಕೆ ಅರಿವಾಗೋದಿಲ್ಲ? ಯಾಕೆ ವಿರೋಧಿಸುವುದಿಲ್ಲ? ಪ್ರತಿಭಟಿಸಲು ಹಿಂದೂ ಸಂಘಟನೆಗಳಿವೆ, ನಮಗೇಕೆ ಗೊಡವೆ ಎಂಬ ಅಸಡ್ಡೆಯೇ? ಈ ಅಸಡ್ಡೆಯಿಂದಾಗಿಯೇ ಇಂದು ಗಲ್ಲಿಗಲ್ಲಿಗಳಲ್ಲಿ ಮತಾಂತರವಾಗುತ್ತಿರೋದು! ಕಾಡು-ಗುಡ್ಡಗಳನ್ನೇ ಕಡಿದು ಚರ್ಚು-ಕ್ರೈಸ್ತ ರುದ್ರಭೂಮಿಗಳು ಬೆಳೆಯುತ್ತಿರುವುದು! ಓಂಕಾರದ ಪದಕ ಬೆಳಗಬೇಕಾದ ಕುತ್ತಿಗೆಗಳಲ್ಲಿ ಶಿಲುಬೆ ನೇತಾಡುತ್ತಿರುವುದು! ಹೆಸರಿಗಷ್ಟೇ ಉಳಿದುಕೊಂಡಿರುವ ಈಶಾನ್ಯ ರಾಜ್ಯಗಳು ಕ್ರೈಸ್ತಮಯವಾಗಿ ಬಿಟ್ಟಿರೋದು! ಮಲೆಯಾಳಿಗಳನ್ನು ಮತಾಂತರಿಸಿದ ಈ ಧೂರ್ತರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹೀಗೆ ಇಡೀ ಕರ್ನಾಟಕವನ್ನೇ ಆವರಿಸಿಕೊಳ್ಳುತ್ತಿದ್ದಾರೆ. ಮಲೆನಾಡು ಪ್ರದೇಶಗಳಲ್ಲಿ ಇರುವ ಗುಡ್ಡಗಳನ್ನೆಲ್ಲಾ ಕಡಿಮೆ ಕ್ರಯಕ್ಕೆ ಖರೀದಿಸುವ ಇವರು ಅಲ್ಲೆಲ್ಲಾ ರಬ್ಬರ್ ಬೆಳೆಸಿ ನಮ್ಮವರನ್ನೆಲ್ಲಾ ಹಣದ ಆಮಿಷ ತೋರಿಸಿ ಕ್ರಿಶ್ಚಿಯಾನಿಟಿಗೆ ಬೆಂಡಾಗುವ ರಬ್ಬರಿನಂತೆ ಮಾಡುತ್ತಿರುವುದು ವಿಪರ್ಯಾಸ! ಮಲೆನಾಡಿನ ಕಾಡು-ಗುಡ್ಡಗಳೆಲ್ಲಾ ರಬ್ಬರ್ ಮಯವಾಗುತ್ತಿವೆ. ನಡು ನಡುವೆ ಚರ್ಚುಗಳು ತಲೆ ಎತ್ತುತ್ತಿವೆ.  ಹಸಿರ ಸಿರಿಯಿಂದ ತುಳುಕುತ್ತಿದ್ದ ಗುಡ್ಡಗಳೇ ಇವರ ಹೆಣ ಹೂಳುವ ಭೂಮಿಗಳಾಗಿ ಶಿಲುಬೆಗಳಿಂದ ತುಂಬಿ ಹೋಗುತ್ತಿವೆ! ಸಮಾಜ ಕ್ರಿಶ್ಚಿಯನ್ ಮಯವಾಗುತ್ತಿದೆ!
             ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ, ಮಿಝೋರಾಂ, ಅರುಣಾಚಲ ಪ್ರದೇಶಗಳಲ್ಲಿ ಬುಡಕಟ್ಟು ಜನರನ್ನು ಮತಾಂತರಿಸಿದ ಕ್ರಿಶ್ಚಿಯನ್ನರು ಆ ರಾಜ್ಯಗಳನ್ನು ತಮ್ಮ ಅಧೀನದಲ್ಲಿರಿಸಿಕೊಂಡಿದ್ದಾರೆ. ನಾಗಲ್ಯಾಂಡಿನಲ್ಲಿ 1901ರಲ್ಲಿ 0.59%ನಷ್ಟಿದ್ದ ಕ್ರೈಸ್ತರ ಸಂಖ್ಯೆ 100ವರ್ಷಗಳಲ್ಲಿ 90%ದ ಗಡಿ ದಾಟಿದ್ದು ಹೇಗೆ? ಅಲ್ಲಿದ್ದ ನಾಗಾಗಳೇನು ಬ್ರಹ್ಮಚಾರಿಗಳೇ, ಸಂತಾನ ಹೀನರೇ ಅಥವಾ ನಾಗಾ ಸಂತತಿ ನಶಿಸಿ ಹೋಯಿತೇ? ಮಿಝೋರಾಂನಲ್ಲಿ ಕ್ರೈಸ್ತರ ಸಂಖ್ಯೆ 90%ಗಿಂತಲೂ ಹೆಚ್ಚಿರಲು ಕಾರಣವೇನು? 90ರ ದಶಕದಲ್ಲಿ ಅರುಣಾಚಲ ಪ್ರದೇಶದಲ್ಲಿ ಕ್ರೈಸ್ತರು 225%ದಷ್ಟು ಹೆಚ್ಚಾದದ್ದು ಹೇಗೆ? ಹುಡುಕುತ್ತಾ ಹೋದರೆ ಸಿಗುವ ಉತ್ತರ ಮತಾಂತರ! ದಿಲ್ಲಿಯನ್ನಾಳಿದ ಸರಕಾರಗಳಂತೂ ಈಶಾನ್ಯ ರಾಜ್ಯಗಳಿಗೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಇದು ಮತಾಂತರಿಗಳಿಗೆ ವರದಾಯಕವಾಗಿದ್ದು ಶಿಕ್ಷಣವಿಲ್ಲದ ಬುಡಕಟ್ಟು ಜನ ಅನಾಯಾಸವಾಗಿ ಇವರ ಆಮಿಷಕ್ಕೆ ಒಳಗಾಗುತ್ತಾರೆ. ಮೇಘಾಲಯ, ಅಸ್ಸಾಂ, ತ್ರಿಪುರಾ, ಅರ್ಜುನನ ಪುತ್ರ ಬಬ್ರುವಾಹನನ ಮಣಿಪುರಗಳೂ ಇದರಿಂದ ಹೊರತಲ್ಲ. ತಮಿಳುನಾಡು, ಒರಿಸ್ಸಾ, ಆಂದ್ರಪ್ರದೇಶದಲ್ಲಿ ಕ್ರಿಶ್ಚಿಯಾನಿಟಿ ವ್ಯಾಪಕವಾಗಿ ಹಬ್ಬುತ್ತಿದೆ. ಮುಸಲ್ಮಾನರೂ ಜಿಹಾದೀ ತಂತ್ರಗಳನ್ನು ಬಳಸಿ ಮತಾಂತರಿಸಿದರೆ ಈ ಕ್ರಿಶ್ಚಿಯನ್ ಮತಾಂತರಿಗಳು ಗೆದ್ದಲು ಹುಳದಂತೆ ಇಡೀ ಜನಾಂಗವನ್ನೇ ಸರ್ವನಾಶ ಮಾಡಿ ಬಿಡುತ್ತಾರೆ.
               ಯಾವಾಗ ಮೆಕಾಲೆ ಶಿಕ್ಷಣ ಪದ್ದತಿ ಕಾಲಿರಿಸಿತೋ ಅಂದೇ ಕಪ್ಪು ಚರ್ಮದ ಬ್ರಿಟಿಷರ ಸಂಖ್ಯೆ ಈ ದೇಶದಲ್ಲಿ ಹೆಚ್ಚಾಗತೊಡಗಿತು. ಮೊದ ಮೊದಲು ಪಾಶ್ಚಾತ್ಯ ಅನುಕರಣೆಯಿಂದ ಆರಂಭವಾದ ಈ ವಿಲಾಯತಿ ಪ್ರೇಮ ಕೊನೆಗೆ ಕೊಳ್ಳಿ ಇರಿಸಿದ್ದು ನಮ್ಮ ಅಂತಃಸತ್ವದ ಮೇಲೆಯೇ! ಒಳ್ಳೆಯ ವಿಚಾರವಾದರೆ ಶತ್ರುವಿನಿಂದಲೂ ಸ್ವೀಕರಿಸಬೇಕು. ಆದರೆ ನಾವು ಪಾಶ್ಚಾತ್ಯರ ಯಾವ ವಿಚಾರಗಳನ್ನು ಅನುಕರಣೆ ಮಾಡಬೇಕಿತ್ತೋ ಅದನ್ನು ಅನುಸರಿಸಲಿಲ್ಲ. ಸ್ವಚ್ಚತೆ, ಇತಿಹಾಸವನ್ನು, ಸ್ಮಾರಕಗಳನ್ನು ಕಾಪಿಡುವ ರೀತಿ, ರಾಜಕಾರಣಿಗಳ ಓಲೈಕೆಗೆ ಕಟ್ಟು ಬೀಳದೆ ದೇಶಕ್ಕೆ ಹಿತವಾಗುವುದನ್ನು ಬೆಂಬಲಿಸುವ ನೀತಿ ಇವೆಲ್ಲವನ್ನು ಅನುಸರಿಸುವುದನ್ನು ಬಿಟ್ಟು ನಾವು ಮತಿಹೀನರಂತೆ ಅವರ ಆಹಾರ-ಆಚಾರ-ಅನೈತಿಕ ವಿಚಾರಗಳನ್ನು ಅನುಕರಿಸಿದೆವು. ವಿದೇಶ ಅಂದಾಕ್ಷಣ ಕಿವಿ ಅಗಲಿಸಿ ಕೇಳುವ, ವಿದೇಶಿಗರನ್ನು ದೇವರಂತೆ ಕಾಣುವವರು ಅಡಿಗಡಿಗೆ ಸಿಗುತ್ತಾರೆ. ವಿದೇಶದಿಂದ ಬಂದವುಗಳೆಲ್ಲಾ ಸರ್ವಶ್ರೇಷ್ಠ ಎನ್ನುವ ಭ್ರಮೆ! ತನ್ನ ಮಕ್ಕಳ ದುಃಸ್ಥಿತಿ ಕಂಡು ತಾಯಿ ಭಾರತಿಗೇ ದಿಗ್ಭ್ರಮೆ! ಎಲ್ಲವೂ ಮೆಕಾಲೆ ಶಿಕ್ಷಣದ ಪ್ರಭಾವ. ಇನ್ನೊಂದು ರೀತಿಯಿಂದ ಹೇಳುವುದಾದಲ್ಲಿ ವೈಚಾರಿಕ ಮತಾಂತರ!
                   ನಮ್ಮ ದೇಶದ ವಿಪರ್ಯಾಸವೆಂದರೆ ಬಹುತೇಕ ಮಾಧ್ಯಮಗಳು ಕ್ರಿಶ್ಚಿಯನ್ನರ ಹತೋಟಿಯಲ್ಲಿರುವುದು. ಇವುಗಳು ಪ್ರಸರಿಸುವುದು ಹಿಂದೂ ವಿರೋಧಿ-ದೇಶ ವಿರೋಧಿ ಚಟುವಟಿಕೆಯನ್ನೇ. ಇವುಗಳನ್ನೇ ಅವಲಂಬಿಸಿರುವ ಜನ ಅವರು ಹೇಳಿದ್ದೆಲ್ಲಾ ಸತ್ಯವೆಂದು ಭ್ರಮಿತರಾಗಿಬಿಡುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ನಮ್ಮ ಸಾಧು ಸಂತರ ಮೇಲಾದ ಆಕ್ರಮಣ! ಕಂಚಿ ಶ್ರೀಗಳ ಮೇಲೆ ಕೊಲೆ ಆರೋಪ ಮಾಡಿ ಅವರನ್ನು ಬಂಧಿಸಿದಾಗ ತಿಂಗಳುಗಟ್ಟಲೇ ಅವರನ್ನು ಖಳನಾಯಕನಂತೆ ಚಿತ್ರಿಸಿದವು ಈ ಮಾಧ್ಯಮಗಳು. ಆದರೆ ಅವರು ನಿರ್ದೋಷಿಯೆಂದು ಸಾಬೀತಾದಾಗ ಆ ಸುದ್ದಿಯನ್ನು ಕನಿಷ್ಟ ಎರಡು ನಿಮಿಷ ಪ್ರಸಾರ ಮಾಡುವ ಸೌಜನ್ಯ ತೋರಲಿಲ್ಲ. ಹಿಂದೂ ಭಯೋತ್ಪಾದನೆ ಎಂಬ ಸುಳ್ಳು ಸುದ್ದಿಯನ್ನು ಸತ್ಯಗೊಳಿಸಲು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಸ್ವಾಮೀ ಆಸೀಮಾನಂದ, ಕರ್ನಲ್ ಪುರೋಹಿತ್ ಹಾಗೂ ಇನ್ನಿತರರನ್ನು ಬಂಧಿಸಲಾಯಿತು. ಮಾಧ್ಯಮಗಳು ಬೇಕಾ ಬಿಟ್ಟಿ ಚೀರಾಡಿದವು. ಸಂಘಪರಿವಾರದ ಮೇಲೆ ಹರಿಹಾಯ್ದವು. ವಿಶೇಷ ತನಿಖಾದಳಕ್ಕೆ ಯಾವ ಆರೋಪವನ್ನೂ ಸಿದ್ಧಪಡಿಸಲಾಗಲಿಲ್ಲ. ತಾನು ಮಾಡದ್ದನ್ನು ಒಪ್ಪಿಕೊಳ್ಳಲು ಸಾಧ್ವಿಯವರಿಗೆ ಯಮಯಾತನೆಯನ್ನೇ ನೀಡಿತು ತನಿಖಾ ತಂಡ. ತಲೆಕೆಳಗಾಗಿಸಿ ಚಿತ್ರಹಿಂಸೆ ನೀಡಿದರು. ಹಲವಾರು ಸಲ ಬ್ರೈನ್ ಮ್ಯಾಪಿಂಗ್ ಮಾಡಲಾಯಿತು. ಅವರ ಸಾತ್ವಿಕತೆಯನ್ನು ನಾಶ ಪಡಿಸಲು ಊಟದಲ್ಲಿ ಮೊಟ್ಟೆ ಬೆರೆಸಲಾಯಿತು. ಕರ್ನಲ್ ಪುರೋಹಿತರ ಕೈ ಬೆರಳುಗಳನ್ನೇ ಮುರಿದರು. ಅವರು ನಿರಪರಾಧಿ, ಹಿಂದೂ ಭಯೋತ್ಪಾದನೆ ಎಂಬುದನ್ನು ಸೃಷ್ಟಿಸಲು ಮೇಲಿಂದ ಒತ್ತಡ ಬಂದುದರಿಂದ ಈ ರೀತಿ ವಿಚಾರಣೆ ನಡೆಸಬೇಕಾಯಿತು ಎಂದು ತನಿಖಾ ದಳದ ಸದಸ್ಯರು ಹೇಳಿದರೂ ಇವೆಲ್ಲಾ ಮಾಧ್ಯಮಗಳಿಗೆ ದೊಡ್ಡ ವಿಷಯವಾಗಲೇ ಇಲ್ಲ. ಮೆಡಿಕಲ್ ರಿಪೋರ್ಟಿನಲ್ಲಿ ಹುಡುಗಿಯ ಮೇಲೆ ಬಲಾತ್ಕಾರ ಆಗಲಿಲ್ಲ ಎಂದು ತಿಳಿಸಿದರೂ, ಗುಜರಾತ್ ಮಹಿಳಾ ಆಯೋಗದಿಂದ ಕ್ಲೀನ್ ಚಿಟ್ ಸಿಕ್ಕಿದರೂ, ತಾನು ಹೆತ್ತವರ ಒತ್ತಾಯದಿಂದ ಅವರು ಅಂದಂತೆ ನುಡಿದೆ ಎಂದು ಬಾಲಕಿ ಹೇಳಿದರೂ ಅಸರಾಮ್ ಬಾಪುರನ್ನು ಅತ್ಯಾಚಾರಿಯಂತೆ ಚಿತ್ರಿಸಲಾಯಿತು. ನಿತ್ಯಾನಂದರ ಕೇಸಿನಲ್ಲಿ ನ್ಯಾಯಾಲಯ "ಸ್ಟಾರ್ ವಿಜಯ" ಹಾಗೂ "ಆಜ್ ತಕ್"ಗಳಿಗೆ ಒಂದು ವಾರ ಕಾಲ ಎರಡು ಗಂಟೆಗಳಿಗೊಂದು ಬಾರಿ ಕ್ಷಮೆ ಕೇಳಬೇಕೆಂದು ಸೂಚಿಸಿತು. ಆದರೆ ನಿತ್ಯಾನಂದರ ಚಾರಿತ್ರ್ಯ ವಧೆ ಮಾಡಿದ್ದ ಮಾಧ್ಯಮಗಳು ಈಗ ಮಾಯವಾಗಿದ್ದವು. ಸ್ವಾಮಿ ಕೇಶವಾನಂದ, ಕೃಪಾಲುಜೀ ಮಹರಾಜ್ ಹೀಗೆ ಅನೇಕ ಸಾಧು ಸಂತರು ನಿರ್ದೋಷಿಗಳೆಂದು ಸಾಬೀತಾದಾಗ ಮಾಧ್ಯಮಗಳು ಕ್ಷಮೆ ಕೇಳಲೂ ಇಲ್ಲ. ಅದನ್ನು ಪ್ರಚಾರವೂ ಮಾಡಲಿಲ್ಲ. ಹೀಗಾಗಿ ನಮ್ಮ ಜನರಿಗೆ ತಿಳಿಯಲೂ ಇಲ್ಲ. ಆದರೆ ಇಂತಹುದೇ ವಿಚಾರದಲ್ಲಿ ಪಾದ್ರಿಗಳು, ಮುಲ್ಲಾಗಳು ಸಿಕ್ಕಿಬಿದ್ದಾಗ ಮಾಧ್ಯಮಗಳು ಯಾಕೆ ಸುಮ್ಮನಿರುತ್ತವೆ? ಇದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಕಾಣಸಿಗುವುದು ಮತಾಂತರ ಎಂಬ ಬರ್ಬರೀಯತೆ! ಈ ಮತಾಂತರಿಗಳು ತಮಗೆ ಅಡ್ಡಗಾಲಾದವರ ಮೇಲೆ ವೃಥಾ ಆರೋಪ ಹೊರಿಸಿ ತಮ್ಮದೇ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಬಿಡುತ್ತವೆ. ನಮ್ಮನ್ನಾಳುವ ಸರಕಾರಗಳಲ್ಲೂ ಮತಾಂಧರೇ ತುಂಬಿರುವುದು ಇವರಿಗೆ ಮತ್ತಷ್ಟು ಶಕ್ತಿ ತುಂಬಿದೆ.
                 ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು ಹೀಗೆ ಸಮಾಜದ ಬಹುಮುಖ್ಯ ಅಂಗಗಳಲ್ಲಿ ಪಾತ್ರವಹಿಸಿರುವ ಕ್ರೈಸ್ತರ ಕಾರ್ಯ ಶ್ಲಾಘನೀಯ. ಆದರೆ ಈ ಸೇವೆಗಳ ಹೆಸರಲ್ಲಿ ಮುಗ್ಧರ ಅಸಹಾಯಕತೆಯನ್ನು ಮತಾಂತರಕ್ಕೆ ಅನುಕೂಲವಾಗಿ ಪರಿವರ್ತಿಸಿಕೊಳ್ಳುವ ಇವರ ನರಿ ಬುದ್ದಿ ಹಿಂದೂಗಳಿಗೆ ಅರ್ಥವಾಗದೇ ಇರುವುದು ದೊಡ್ಡ ದುರಂತ. ಹೂ ಮುಡಿಯುವುದನ್ನು, ತಿಲಕ ಇಡುವುದನ್ನು, ರಕ್ಷೆ ಕಟ್ಟುವುದನ್ನು ನಿಷೇಧಿಸಿರುವ ಅದೆಷ್ಟು ಶಿಕ್ಷಣ ಸಂಸ್ಥೆಗಳಿವೆ? ಇವೆಲ್ಲಾ ಮತಾಂತರದ ಮೊದಲ ಮೆಟ್ಟಿಲೇ ಅಲ್ಲವೇ? ಕೇರಳದ ಕೆಲವು ಚರ್ಚುಗಳಲ್ಲಿ ದೀಪ ಬೆಳಗಿಸಲು ಆರಂಭಿಸಲಾಗಿದೆ. ಒಂದು ಚರ್ಚಿನ ಮುಂಭಾಗದಲ್ಲಿ ರಥದ ಮೇಲೆ ಕುಳಿತ ಏಸುವಿನ ಮೂರ್ತಿಯೊಂದನ್ನು ನಿರ್ಮಿಸಲಾಗಿದೆ. ಪತಂಜಲಿಯ ಜಾಗದಲ್ಲಿ ಯೇಸುವನ್ನು ಚಿತ್ರಿಸಿ ಯೋಗಾಸನದ ವಿವಿಧ ಭಂಗಿಗಳನ್ನು ಮುದ್ರಿಸಿ ಮಾರಲಾಗುತ್ತದೆ. ಓಹೋ ಅವರೂ ನಮ್ಮದನ್ನು ಅನುಕರಿಸುತ್ತಾರೆ ಎಂದು ತಿಳಿದರೆ ಬೇಸ್ತು ಬಿದ್ದೀರಿ! ಇವೆಲ್ಲಾ ಮುಗ್ಧ ಜನರನ್ನು ಸೆಳೆಯುವ ರೀತಿ. ಕೇವಲ ಅಕ್ಷರ ಜ್ಞಾನವಿಲ್ಲದವರು ಮಾತ್ರವಲ್ಲ ಸುಶಿಕ್ಷಿತರೂ ಬಲಿಯಾಗುತ್ತಿರುವುದು ಈ ದೇಶದ ದೊಡ್ಡ ದುರಂತ. ನಾವು ಹಬ್ಬಗಳನ್ನು ಆಚರಿಸುವ ರೀತಿಯೂ ಬದಲಾಗುತ್ತಿದೆ. ನಮ್ಮ ಆಚಾರ, ವಿಚಾರ, ಯೋಚಿಸುವ ರೀತಿ ಬದಲಾಗುತ್ತಿದೆ. ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ನಾವು ಸನಾತನಿಗಳಾಗಿ ಉಳಿಯಲು ಸಾಧ್ಯವೇ?

                   "'ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಭೋಧತ' -ಏಳಿ,ಎಚ್ಚರಗೊಳ್ಳಿ! ದುರ್ಬಲತೆಯ ಈ ಮೋಹನಿದ್ರೆಯಿಂದ ಎದ್ದೇಳಿ! ಆತ್ಮವು ಸರ್ವಶಕ್ತ ಸರ್ವಜ್ಞ ಸರ್ವವ್ಯಾಪಿಯಾದುದು. ನಿಮ್ಮ ಅಸ್ಮಿತೆಯನ್ನು ಪ್ರತಿಷ್ಠಾಪಿಸಿ.  ಇಂದು ನಮ್ಮ ಜನಾಂಗಕ್ಕೆ ಅತಿಯಾದ ಆಲಸ್ಯ, ಅತಿಯಾದ ದೌರ್ಬಲ್ಯ, ಅತಿಯಾದ ಮೋಹನಿದ್ರೆ ಆವರಿಸಿದೆ. ಹೇ ಆಧುನಿಕ ಹಿಂದುಗಳೇ, ಈ ಮೋಹನಿದ್ರೆಯಿಂದ ಜಾಗ್ರತರಾಗಿ. ನಿಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಿ. ಪ್ರತಿಯೊಬ್ಬರಲ್ಲೂ ಅದೇ ಅರಿವು ಮೂಡಿಸಿ. ನಿದ್ರೆಯಿಂದ ಆತನನ್ನು ಎಚ್ಚರಿಸಿ. ಆತ್ಮ ಜಾಗ್ರತವಾಗಿ ಎದ್ದಾಗ , ನಿಜಸ್ವರೂಪದ ಅರಿವಾದಾಗ ನಿಮ್ಮಲ್ಲಿ ಸಾಮರ್ಥ್ಯ ಸಂಚರಿಸೀತು, ವೈಭವ ಪ್ರಾಪ್ತಿಯಾದೀತು. ಸೌಜನ್ಯ,ಶುಚಿತ್ವ ಮತ್ತು ಎಲ್ಲ ಮಹತ್ತಮ ಸಂಗತಿಗಳೂ ನಿಮ್ಮದಾದಾವು." ಎಂಬ ಸ್ವಾಮಿ ವಿವೇಕಾನಂದರ ಮಾತುಗಳ ಪಾಲನೆ ಇಂದಿನ ತುರ್ತು ಅವಶ್ಯಕತೆಗಳಲ್ಲಿ ಒಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ