ಪುಟಗಳು

ಮಂಗಳವಾರ, ಫೆಬ್ರವರಿ 4, 2020

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

                  ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಗೌರವ, ಭಕ್ತಿ ಭಾವನೆಗಳಿವೆ. ತಮ್ಮನ್ನು ತಾವು ಜಾತ್ಯಾತೀತ, ಬುದ್ಧಿಜೀವಿ ಎಂದು ಹೇಳಿಕೊಳ್ಳುವ ಅಥವಾ ಕರೆಸಿಕೊಳ್ಳುವವರಿಗಂತೂ ಈ ಸೂಫಿಗಳು ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರದ ಭಾವನೆಗಳಿವೆ. ಅವರು ಮುಲ್ಲಾಗಳಂತಲ್ಲ; ಹಿಂದೂಗಳನ್ನು ಇಷ್ಟಪಡುತ್ತಾರೆ; ಹಿಂದೂ ಧಾರ್ಮಿಕ ಸಾಹಿತ್ಯವನ್ನು ಇಷ್ಟಪಡುತ್ತಾರೆ; ಅಧ್ಯಾತ್ಮದ ಶೋಧದಲ್ಲಿರುವವರು ಎಂದೆಲ್ಲಾ! ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಮತ್ತು ಭಾರತಕ್ಕೆ ಬಂದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಉತ್ತರಪ್ರದೇಶ, ಬಂಗಾಳ, ಪಂಜಾಬ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ.

ಭಾರತದ ಇತಿಹಾಸದ ಗತಿಯನ್ನು ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದವ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನಿಗೆ ಸಹಾಯಕನಾಗಿ ಬಂದವ ಈ ಸೂಫಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಭೋಳೇ ಹಿಂದೂಗಳ ಸ್ನೇಹವನ್ನೂ ಸಂಪಾದಿಸಿದ. ಒಂದಷ್ಟು ಅನುಯಾಯಿಗಳನ್ನು ಪಡೇದುಕೊಂಡ. ರಾಜ್ಯದ ಸಂರಚನೆ, ಇಲ್ಲಿನ ರಾಜರುಗಳ ಯುದ್ಧನೀತಿ, ಅರಸೊತ್ತಿಗೆ ಬದಲಾದರೂ ತನ್ನ ಪಾಡಿಗೆ ತಾನಿರುವ ಸಭ್ಯ ಸಮಾಜವನ್ನೂ ಅರ್ಥೈಸಿಕೊಂಡ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲು ಎಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ ಘೋರಿ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ತರೈನಿನಲ್ಲಿ ತಮ್ಮ ಅರಸ ಕಾಫಿರರನ್ನು ಹೇಗೆ ವಂಚಿಸಿ ಸಾಯಬಡಿದ ಎಂದು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ.  ಮುಂದುವರೆದ ಘೋರಿ ಅಜ್ಮೀರದ ದೇವಾಲಯಗಳನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಈ ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ಚಿಸ್ತಿ ಅಲ್ಲಾನಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು!

13ನೇ ಶತಮಾನದ ಮೊದಲ ದಶಕದಲ್ಲಿ ದೆಹಲಿಯಲ್ಲಿ ಮೊದಲ ಮುಸ್ಲಿಂ ರಾಜ್ಯದ ಸ್ಥಾಪನೆಯಾಗುತ್ತಲೇ ಅಂದಿನ ಮುಸ್ಲಿಂ ಜಗತ್ತಿನ ಎಲ್ಲೆಡೆಯಿಂದ ಸೂಫಿಗಳು ಭಾರತಕ್ಕೆ ಬರಲಾರಂಭಿಸಿದರು. ಇಸ್ಲಾಮೀ ಆಕ್ರಮಣದ ವಿರುದ್ಧ ದಂಗೆಯೆದ್ದ ಮಂಗೋಲರು ಅವರದ್ದೇ ಭಾಷೆಯಲ್ಲಿ ತಿರುಗಿ ಉತ್ತರ ಹೇಳಲಾರಂಭಿಸಿದ ಬಳಿಕವಂತೂ ಇರಾನ್, ಇರಾಕ್, ಟ್ರಾನ್ಸೋಕ್ಸಿಯಾನ್, ಖುರಾಸಾನ್ ಪ್ರಾಂತ್ಯಗಳಿಂದ ಸೂಫಿಗಳು, ಮುಲ್ಲಾಗಳು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಓಡಿ ಬಂದರು. ಆದರೆ ವಿಚಿತ್ರವೆಂದರೆ ಮಂಗೋಲರ ದೌರ್ಜನ್ಯವನ್ನು ತಮ್ಮ ದುಷ್ಕರ್ಮಗಳಿಗೆ ಸಿಕ್ಕ ಫಲ ಎಂದು ವ್ಯಾಖ್ಯಾನಿಸುವ ಬದಲು "ಇಸ್ಲಾಮಿನ ಭಕ್ತಿಯಿಂದ ದೂರ ಸರಿದ ಕಾರಣ ಅಲ್ಲಾ ತಮ್ಮ ಮೇಲೆ ಸಿಟ್ಟುಗೊಂಡಿದ್ದಾನೆ" ಎಂದು ವ್ಯಾಖ್ಯಾನಿಸಿದ ಅವರ ಮತಾಂಧತೆಯ ಕ್ರೌರ್ಯವನ್ನು ಅನುಭವಿಸಿದ್ದು ಆಶ್ರಯಕೊಟ್ಟ ಹಿಂದೂಗಳು! ಮುಂದಿನೆರಡು ಶತಮಾನಗಳಲ್ಲಿ ಮಧ್ಯೋತ್ತರ ಭಾರತದ ದೇವಾಲಯ ಹಾಗೂ ಚೈತ್ಯಾಲಯಗಳ ಅವಶೇಷಗಳ ಮೇಲೆ ಮಸೀದಿ, ಮದ್ರಸಾ, ಖಾಂಕಾಗಳು ಎದ್ದು ನಿಂತವು!

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

             ಅಹ್ಮದ್ ಸಿರ್ಹಿಂದಿ(1564-1624) ಓರ್ವ ಸೂಫಿ. "ಖಡ್ಗದ ಮೂಲಕ ಷರೀಯತ್ತಿನ ಪ್ರಸಾರ ಸಾಧ್ಯ" ಎಂದು ಘೋಷಿಸುತ್ತಿದ್ದ. ಇದನ್ನು S.A.A. ರಿಜ್ವಿ 1965ರಲ್ಲಿ ಬರೆದ "ಮುಸ್ಲಿಮ್ ರಿವೈವಲಿಸ್ಟ್ ಮೂವ್ ಮೆಂಟ್ ಇನ್ ನಾರ್ಥರ್ನ್ ಇಂಡಿಯಾ ಇನ್ ದಿ 16th & 17 th ಸೆಂಚುರಿ" ಪುಸ್ತಕದಲ್ಲಿ ಓದಬಹುದು. ಈತ ಆ ಕಾಲದಲ್ಲಿ ಬಲಶಾಲಿಯಾಗಿದ್ದ ಹಲವು ದೇಶಗಳಿಗೆ ಪತ್ರಗಳನ್ನು ಬರೆಯುತ್ತಿದ್ದ. ಕೆಲ ಪತ್ರಗಳ ಮಾದರಿಗಳನ್ನು ನೋಡಿ... "ಕುಫ್ರ್ ಮತ್ತು ಕಾಫಿರರನ್ನು ಅವಮಾನಿಸುವುದರಲ್ಲೇ ಇಸ್ಲಾಮಿನ ಗೌರವವಿದೆ. ಕಾಫಿರರನ್ನು ಗೌರವಿಸುವವನು ಮುಸ್ಲಿಮರನ್ನು ಅವಮಾನಿಸಿದಂತೆ. ಅವರ ಮೇಲೆ ಜೆಜಿಯಾವನ್ನು ಹೇರುವುದರ ಉದ್ದೇಶ ಅವರಿಗೆ ಚೆನ್ನಾಗಿ ಬಟ್ಟೆ ಧರಿಸಲು ಮತ್ತು ಅದ್ದೂರಿಯಾಗಿ ಬದುಕಲು ಸಾಧ್ಯವಾಗದಂತೆ ಮಾಡುವುದೇ ಆಗಿದೆ. ಅವರು ಯಾವಾಗಲೂ ಭಯಗ್ರಸ್ತರಾಗಿ ನಡುಗುತ್ತಲೇ ಇರಬೇಕು. ಅವರನ್ನು ತಿರಸ್ಕಾರದಿಂದ ನೋಡಬೇಕು. ಇಸ್ಲಾಮಿನ ಗೌರವ ಸಾಮರ್ಥ್ಯಗಳನ್ನು ಎತ್ತಿ ಹಿಡಿಯುವುದೇ ಇದರ ಉದ್ದೇಶ."
"ಭಾರತದಲ್ಲಿ ಗೋವಧೆ ಅತ್ಯಂತ ಶ್ರೇಷ್ಠವಾದ ಮುಸ್ಲಿಂ ಆಚರಣೆಯಾಗಿದೆ. ಕಾಫಿರರು ಜೆಜಿಯಾವನ್ನಾದರೂ ಪಾವತಿಸಿಯಾರು; ಆದರೆ ಗೋವಧೆಗೆ ಎಂದೂ ಒಪ್ಪಲಾರರು". "ಹಿಂದೂಗಳು ಪೂಜಿಸುವ ರಾಮಕೃಷ್ಣ ಕ್ಷುದ್ರ ಜಂತುಗಳು. ಅವರ ತಂದೆ ತಾಯಿಗಳಿಗೆ ಮಾಮೂಲಾಗಿ ಹುಟ್ಟಿದವರು. ರಾಮನಿಗೆ ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಹೀಗಿರುವಾಗ ಬೇರೆಯವರನ್ನು ಅವನು ಹೇಗೆ ರಕ್ಷಿಸಿಯಾನು? ರಾಮ ಮತ್ತು ರಹಮಾನರು ಸಮಾನರೆಂದು ತಿಳಿಯುವುದು ನಾಚಿಕೆಗೇಡು. ಸೃಷ್ಟಿಕರ್ತ ಹಾಗೂ ಒಂದು ಜಂತು ಸಮಾನರಾಗುವುದು ಅಸಂಭವ" "ಕಾಫಿರರಿಗೆ ಹೃದಯದಿಂದ ಶಪಿಸುವುದರ ಜೊತೆಗೆ ದೈಹಿಕವಾಗಿಯೂ ಹಲ್ಲೆ ನಡೆಸಬೇಕು" ಈತನಿಗೂ ಈಗಿನ ಮತಭ್ರಾಂತ ಭಯೋತ್ಪಾದಕ ಝಕೀರ್ ನಾಯಕ್'ನಿಗೂ ಏನು ವ್ಯತ್ಯಾಸವಿದೆ? ಜಹಾಂಗೀರನು ಗುರು ಅರ್ಜುನ ದೇವರನ್ನು ಚಿತ್ರಹಿಂಸೆ ಕೊಟ್ಟು ಕೊಂದ ಬಳಿಕ "ಶಾಪಗ್ರಸ್ಥ ಕಾಫಿರನಾದ ಗೋಬಿಂದವಲ್ ನನ್ನು ವಧಿಸಿದ್ದೊಂದು ಪ್ರಮುಖ ಸಾಧನೆಯಾಗಿದ್ದು, ಹಿಂದೂಗಳ ಮಹತ್ವದ ಸೋಲಿಗೆ ಅದೇ ಕಾರಣ" ಎಂದು ಈತ ಅವನನ್ನು ಪ್ರಶಂಸಿಸಿದ್ದ. 1620ರಲ್ಲಿ ಜಹಾಂಗೀರ್ ಕಾಂಗ್ರಾ ಕೋಟೆಗಳನ್ನು ಗೆದ್ದು ಅಲ್ಲಿನ ದೇವಾಲಯಗಳನ್ನು ನೆಲಸಮ ಮಾಡಿ ಗೋವಧೆಗೈದು, ಮಸೀದಿ ಕಟ್ಟಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿ ಬರೆದ ಪತ್ರದಲ್ಲಿ "...ಸ್ವತಃ ಬಂದು ಆ ಕಲ್ಲುಗಳನ್ನು ತುಂಡರಿಸಬೇಕೆಂದು ನನಗೆ ಆಶೆಯಿತ್ತು. ಆದರೆ ನನ್ನ ವೃದ್ಧ್ಯಾಪ್ಯದಿಂದಾಗಿ ಬರಲಾಗಿಲ್ಲ" ಎಂದಿದ್ದ! ಸೆಕ್ಯುಲರ್ಗಳು ಶಾಂತಿಯುತ ಎಂದು ಸದಾ ಹೊಗಳುವ ಮುಸ್ಲಿಮ್ ಸಮಾಜದಲ್ಲಿ ಈತನನ್ನು ಶಾ ವಲಿಯುಲ್ಲಾನಿಗೆ ಸಮನಾದ ಅತ್ಯುಚ್ಛ ಸೂಫಿ ಹಾಗೂ ಇಸ್ಲಾಮಿನ ಮತಪಂಡಿತ ಎಂದು ಪರಿಗಣಿಸಲಾಗುತ್ತಿದೆ! ಮೌಲಾನ ಅಬುಲ್ ಕಲಾಮ್ ಆಜಾದ್ ತನ್ನ "ತಾಝ್ ಕಿರಾ"ದಲ್ಲಿ ಸಿರ್ಹಿಂದಿಯ ಬಗೆಗೆ "ಈ ಪತ್ರಗಳನ್ನು ಬರೆಯದಿದ್ದರೆ ಮುಸ್ಲಿಂ ಅಮೀರರು ಇಸ್ಲಾಂನಿಂದ ದೂರ ಸರಿಯಬಹುದಿತ್ತು. ಭಾರತದಲ್ಲಿ ಇಸ್ಲಾಮ್ ಬದಿಗೆ ಸರಿಯುವ ಅಪಾಯವಿತ್ತು" ಎಂದು ಬರೆದಿದ್ದಾನೆ. ಮಾತ್ರವಲ್ಲ ಈ ಪತ್ರಗಳು ಹಾಗೂ ಇಂತಹಾ ಹಲವಾರು ಸೂಫಿಗಳ, ಇಸ್ಲಾಮ್ ಮುಲ್ಲಾಗಳ ಪತ್ರಗಳ ಸಂಗ್ರಹವನ್ನು ಪ್ರಕಟಿಸಿದ ಕೆ.ಎ ನಿಜಾಮಿ ಅದನ್ನು ಮೌಲಾನ ಅಬುಲ್ ಕಲಾಮ್ ಆಜಾದ್ಗೆ ಅರ್ಪಿಸಿದ್ದಾನೆ. ಆಜಾದ್ ಅದಕ್ಕೆ ಉತ್ತರಿಸಿದ್ದು ಹೀಗೆ:-"ಈ ಪತ್ರಗಳನ್ನು ಪ್ರಕಟಿಸುವ ಅರ್ಹತೆ ನಿಮಗೆ ಪ್ರಾಪ್ತವಾದುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ. ಇಂತಹದ್ದೇ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ಅಲ್ಲಾ ನಿಮಗೆ ದಯಪಾಲಿಸಲಿ ಎಂದು ಹೃದಯಂತರಾಳದಿಂದ ಪ್ರಾರ್ಥಿಸುತ್ತೇನೆ". ವಿಪರ್ಯಾಸ ಏನೆಂದರೆ ಈತ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ! ಕಾಂಗ್ರೆಸ್ಸಿನಲ್ಲಿ ಎಂತಹಾ "ಕಟ್ಟಾ ರಾಷ್ಟ್ರವಾದಿಗಳು" ಇದ್ದರೆಂಬುದಕ್ಕೆ ಇದು ನಿದರ್ಶನ!

ಮುಸ್ಲಿಮರು ಅತ್ಯಂತ ಗೌರವದಿಂದ ಕಾಣುವ ಷಾಹ್ ವಲಿಯುಲ್ಲಾನ ಕಾಲದಲ್ಲಿ ಭಾರತದಲ್ಲಿ ಇಸ್ಲಾಮ್ ಸಾಮ್ರಾಜ್ಯವನ್ನು ಮರಾಠಾ ಕೇಸರಿ ಪಡೆ ಒಂದು ದಿಕ್ಕಿನಿಂದ ಹಾಗೂ ವೀರ ಜಾಟ್ ಪಡೆ ಇನ್ನೊಂದು ದಿಕ್ಕಿನಿಂದ ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕಾರಣ ಅದು ದುರ್ಬಲಗೊಂಡು ಅವಸಾನದ ಅಂಚಿಗೆ ತಲುಪಿತ್ತು. ಈ ಬಗೆಗಿನ ವ್ಯಥೆಯಿಂದ ಆತ ಹೊರದೇಶಗಳ ಮುಸ್ಲಿಂ ರಾಜರಿಗೆ ಭಾರತವನ್ನು ಆಕ್ರಮಿಸುವಂತೆ ಪತ್ರಗಳನ್ನು ಬರೆದ. "...ಹಿಂದೂಸ್ಥಾನ ಮುಸ್ಲಿಮೇತರರ ಕೈವಶವಾಗಿದೆ. ಅಧಿಕಾರಿ ಹುದ್ದೆಗಳಲ್ಲಿ ಹಿಂದೂಗಳೇ ತುಂಬಿದ್ದಾರೆ. ಮರಾಠರು ಹಾಗೂ ಜಾಟರು ಹಲಾವಾರು ಕೋಟೆಗಳನ್ನು ವಶಪಡಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಲಾಢ್ಯರಾಗಿದ್ದಾರೆ. ಈ ಕಾಲದಲ್ಲಿ ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಈ ಹಿಂದೂ ರಾಜರನ್ನು ಸೋಲಿಸಿ ನೆಲಕಚ್ಚಿರುವ ಮುಸ್ಲಿಮರಿಗೆ ಮರು ಅಧಿಕಾರ ವಹಿಸಿಕೊಡುವುದು ತಮ್ಮಿಂದಲ್ಲದೇ ಬೇರಾರಿಂದಲೂ ಅಸಾಧ್ಯ. ಮತ್ತದು ತಮ್ಮ ಕರ್ತವ್ಯ(ಫರ್ಜ್-ಇ-ಐನ್)ವಾಗಿದೆ. ಕಾಫಿರರ ಬಲ ಇದೇ ರೀತಿ ಮುಂದುವರೆದರೆ ಮುಸ್ಲಿಮರು ಇಸ್ಲಾಮನ್ನು ತ್ಯಜಿಸಬಹುದು. ನೀವು ಶತ್ರುಗಳ ಮೇಲೆ ದಂಡೆತ್ತಿ ಬರುವುದರಿಂದ ನಿಮ್ಮ ಹೆಸರು ಮುಜಾಹಿದೀನ್ ಫಿ ಸಬಿಲಲ್ಲಾ (ಅಲ್ಲಾನ ಸೇವಕರಾದ ಯೋಧರು)ಗಳ ಪಟ್ಟಿಗೆ ಸೇರುತ್ತದೆ..." ಎನ್ನುವ ವಿಸ್ತಾರವಾದ ಪತ್ರವನ್ನು ಅಪ್ಘಾನಿಸ್ತಾನದ ಅಹಮದ್ ಶಾ ಅಬ್ದಾಲಿಗೆ ಬರೆದು ಭಾರತವನ್ನು ಆಕ್ರಮಿಸುವಂತೆ ಆಹ್ವಾನಿಸಿದ. ಅಲ್ಲದೆ ಅಬ್ದಾಲಿಯ ಭಾರತೀಯ ಸ್ನೇಹಿತರಾದ ನಜೀಬುದ್ದೌಲ, ಶೇಖ್ ಮೊಹಮ್ಮದ್ ಅಶೀಕ್, ಷಾಹ್ ಮೊಹಮ್ಮದ್ ಪಹಲ್ತಿ, ಮೊಹಮ್ಮದ್ ಖಾನ್ ಬಲೂಚ್ ಮೊದಲಾದವರಿಗೂ ಯಾವ ರೀತಿ ಈ ಜಿಹಾದಿನಲ್ಲಿ ನೆರವೀಯಬೇಕೆಂದು ಹಲವಾರು ಪತ್ರಗಳನ್ನು ಬರೆದ. ಇವನ ಒತ್ತಾಸೆಯಿಂದಲೇ ಅಬ್ದಾಲಿ ಭಾರತಕ್ಕೆ ಬಂದು ಮರಾಠರನ್ನು ಮೂರನೇ ಪಾಣಿಪತ್ ಯುದ್ಧದಲ್ಲಿ(1761) ಸೋಲಿಸಿದ್ದು. ಈತನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ!

ದರೋಡೆಕೋರನಾಗಿದ್ದು ಕೆಲಸ ಮಾಡಿ ತಿನ್ನಲು ಸೋಮಾರಿತನ ಆವರಿಸಿ ಖಲೀಫಾನೆಂದು ಉದ್ಘೋಷಿಸಿಕೊಂಡು ಮುಜಾಹಿದೀನ್ಗಳನ್ನು ಬೆಳೆಸಿ ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟು ಬಾಲಾಕೋಟ್ ಎಂಬ ಭಯೋತ್ಪಾದಕರ ಸ್ವರ್ಗ ಕಟ್ಟಿ ಇಂದಿನ ಭಯೋತ್ಪಾದಕರಿಗೆ ಮಾತ್ರವಲ್ಲ ಎಲ್ಲಾ ಮುಸ್ಲಿಮರಿಗೆ ಆದರ್ಶನೆನಿಸಿಕೊಂಡ ಬರೈಲಿಯ ಸಯ್ಯದ್ ಅಹ್ಮದ್ ಬರೇಲ್ವಿ ಈ ಅಜೀಜನ ಶಿಷ್ಯ. ತನ್ನ ಹೋರಾಟ ಬ್ರಿಟಿಷರ ವಿರುದ್ಧ ಎನ್ನುತ್ತಾ ಹಿಂದೂ ರಾಜರುಗಳಿಂದ ಹಣವನ್ನೂ ಪಡೆದುಕೊಂಡು, ಹಿಂದೂಗಳ ವಿರುದ್ಧವೇ ಜಿಹಾದ್ ಘೋಷಿಸಿದ ಈತ ಬಲೂಚಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಹಿಂಬಾಲಕರನ್ನು ಗಿಟ್ಟಿಸಿಕೊಂಡು ರಾಜಾ ರಣಜಿತ್ ಸಿಂಗನ ವಿರುದ್ಧ ಜಿಹಾದೀ ದಂಗೆಯೆಬ್ಬಿಸಿದ ಈತ. ರಣಜಿತ್ ಸಿಂಹನನ್ನು ಸೋಲಿಸಲಾಗದ ಬ್ರಿಟಿಷರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಚಯನ ಮಾಡುತ್ತಿದ್ದ ಈತನಿಗೆ ಭದ್ರತೆಯನ್ನೂ ಒದಗಿಸಿದರು. ಅಂತಿಮವಾಗಿ ರಣಜಿತ್ ಸಿಂಹನ ಸೇನಾಧಿಪತಿ ಶೇರ್ ಸಿಂಗನ ಖಡ್ಗಕ್ಕೆ ಬಲಿಯಾದ ಈತನ ಹೆಸರಲ್ಲಿ ಸೂಫಿ ಶಾಖೆಯೇ ಬೆಳೆದಿದೆ. ಮೊನ್ನೆ ಮೊನ್ನೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್-2 ಗೊಳಗಾದ ಬಾಲಾಕೋಟ್ ಇವತ್ತಿಗೂ ಜಿಹಾದೀಗಳಿಗೆ ಪೂಜನೀಯ ಹಾಗೂ ಆಶ್ರಯ ತಾಣ!

ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ. ಸೋಮನಾಥವನ್ನು ನಾಶಪಡಿಸಲು ಮೊಹಮ್ಮದ್ ಘಜ್ನಿಯ ಮನವೊಲಿಸಿದ್ದು ಆತನ ಸೋದರಳಿಯನಾಗಿದ್ದ ಶಾಹಿದ್ ಸಲಾರ್ ಮಸೂದ್ ಘಾಜಿ ಎನ್ನುವ ಸೂಫಿ. ಆತ ತನ್ನ ತಂದೆಯ ಜೊತೆಗೂಡಿ ಭಾರತದ ಅನೇಕ ಕಡೆ ಸಂಚರಿಸಿ ದೇವಾಲಯಗಳನ್ನು ಕೆಡಹಿ ಅಲ್ಲಿ ಮಸೀದಿಗಳನ್ನೂ, ಹಿಂದೂಗಳ ವಿರುದ್ಧ ಹೋರಾಡಿ ಸತ್ತವರಿಗೆ ಸಮಾಧಿಗಳನ್ನೂ ನಿರ್ಮಿಸಿದ. ಅವುಗಳಲ್ಲಿ ಕೆಲವನ್ನು ಇಂದಿಗೂ ಪವಿತ್ರ ಸ್ಥಳಗಳೆಂಬಂತೆ ಹಿಂದೂಗಳೂ ಪೂಜಿಸುತ್ತಿದ್ದಾರೆ! ಮುಸ್ಲಿಮ್ ಆಕ್ರಮಣಕಾರರ ತುಕಡಿಯೊಟ್ಟಿಗೆ ಬಂದು ದೆಹಲಿಯಲ್ಲಿ ಹಲವು ಜನರನ್ನು ಮತಾಂತರಿಸಿದ ಹಜರತ್ ಖ್ವಾಜಾ ನಿಜಾಮುದ್ದೀನ್ ಔಲಿಯಾನಿಗೆ ದೆಹಲಿಯಲ್ಲಿ ದರ್ಗಾವೇ ಇದೆ. ದೆಹಲಿಯ ರೈಲು ನಿಲ್ದಾಣಕ್ಕೆ ಆ ಮತಾಂತರಿ, ಆಕ್ರಮಣಕಾರಿಯ ಹೆಸರಿನ್ನಿಡಲಾಗಿದೆ!

              ಪ್ರಸಿದ್ಧ ಸೂಫಿ ಅಮೀರ್ ಖುಸ್ರು "ಹಿಂದೂ ರಾಜರು ಸೋತಾಗ ಅವರನ್ನು ಆನೆಗಳ ಕಾಲ್ತುಳಿತಕ್ಕೆ ಒಳಪಡಿಸಲಾಯಿತು" ಎಂದು ಸಂತೋಷದಿಂದ ಬರೆಯುತ್ತಾನೆ. ಚಿತ್ತೋರಿನ ವಿಜಯದ ಬಳಿಕ 30ಸಾವಿರ ಹಿಂದೂಗಳನ್ನು ಹತ್ಯೆಗೈಯಲು ಖಿಜ್ರ್ ಖಾನ್ ನೀಡಿದ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ ಆತ "ಇದು ಅಲ್ಲಾನ ಸ್ತುತಿ" ಎಂದೂ, ಮಲ್ಲಿಕಾಫರನು ದಕ್ಷಿಣದ ದೇಗುಲಗಳನ್ನು ನಾಶಪಡಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ "ಬ್ರಾಹ್ಮಣರು ಮತ್ತು ವಿಗ್ರಹಾರಾಧಕರ ರುಂಡಗಳು ಕುತ್ತಿಗೆಯಿಂದ ನರ್ತಿಸಿ ಕೆಳಕ್ಕೆ ಬಿದ್ದು ರಕ್ತದ ಕಾಲುವೆಯೇ ಹರಿಯಿತು, ಇದು ಇಸ್ಲಾಮಿನ ವಿಜಯ" ಎಂದೂ ಬರೆದ. ಭಾರತದಲ್ಲಿ ಇಸ್ಲಾಮಿನ ವಿಜಯವನ್ನು ಆತ ವರ್ಣಿಸಿದ್ದು ಹೀಗೆ:- "ಇಡೀ ದೇಶ, ನಮ್ಮ ಪವಿತ್ರ ಯೋಧರ ಕತ್ತಿಯ ಮೂಲಕ, ಅದರ ಮುಳ್ಳುಗಳನ್ನು ಬೆಂಕಿಯಿಂದ ನಿರಾಕರಿಸಿದ ಕಾಡಿನಂತೆ ಮಾರ್ಪಟ್ಟಿದೆ. ಇಸ್ಲಾಂ ವಿಜಯಶಾಲಿಯಾಗಿದೆ, ವಿಗ್ರಹಾರಾಧನೆಯು ಅಧೀನವಾಗಿದೆ. ಕಾನೂನು , ಜೆಜಿಯಾ ಪಾವತಿಸುವ ಮೂಲಕ ಸಾವಿನಿಂದ ವಿನಾಯಿತಿ ನೀಡದಿದ್ದರೆ, ಹಿಂದೂಸ್ಥಾನವೆಂಬ ಹೆಸರು, ಅದರ ಮೂಲ ಮತ್ತು ಶಾಖೆಗಳನ್ನು ನಂದಿಸಬಹುದಿತ್ತು."

               ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯದ ಜೊತೆ ದಕ್ಷಿಣಕ್ಕೆ ಬಂದ ಮಾಬರಿ ಖಂಡಾಯತ್ ದಖ್ಖನ್ನಿನಲ್ಲಿ(1305) ಹಲವಾರು ಹಿಂದೂ ಸೈನಿಕರನ್ನು ಸ್ವತಃ ಕೊಂದನಲ್ಲದೆ ಬಹು ಸಂಖ್ಯೆಯ ಹಿಂದೂಗಳನ್ನು ಹಾಗೂ ಜೈನರನ್ನು ಮತಾಂತರ ಮಾಡಿದ. ಈತ ಬಿಜಾಪುರದಲ್ಲಿದ್ದ ಬ್ರಾಹ್ಮಣರನ್ನು ಓಡಿಸಿ ಉಳಿದವರ ಮತಾಂತರಕ್ಕೆ ತೊಡಗಿದ. ಸದಾ ಒಂದು ಕಬ್ಬಿಣದ ರಾಡ್ ಹಿಡಿದು ಕಾಫಿರರ ತಲೆ ಒಡೆದ, ಮತಾಂತರ ಮಾಡಿದ ಈತನಿಗೆ ಅದೇ ಕಾರಣಕ್ಕೆ ಖಂಡಾಯತ್ (ಅಂದರೆ ಮೊಂಡಾದ ರಾಡ್) ಎಂಬ ಹೆಸರು ಸೇರಿಕೊಂಡು ಪೀರ್ ಮಾಬರಿ ಖಂಡಾಯತ್ ಎಂದೇ ಕುಖ್ಯಾತನಾದ. ದಕ್ಷಿಣ ಪಂಜಾಬಿನಲ್ಲಿ ನಡೆದ ಮತಾಂತರದ ಹಿಂದೆ ಮುಲ್ತಾನಿನ ಬನ ಅಲ್ ಹಕ್ ಹಾಗೂ ಬಾಬಾ ಫರೀದ ಎಂಬಿಬ್ಬರು ಸೂಫಿಗಳ ಕೈವಾಡವಿತ್ತು. ಝಾಂಗ್ ಜಿಲ್ಲೆಯಲ್ಲಿ ಶೇಖ್ ಫರೀದ್, ಕಛ್ ಪ್ರಾಂತ್ಯದಲ್ಲಿ ಸೈಯದ್ ಅಬ್ದುಲ್ ಖಾದಿರ್ ಗಿಲಾನಿ ಹಾಗೂ ಆತನ ಶಿಷ್ಯ ಸೈಯದ್ ಯೂಸುದ್ದೀನ್, ಬಾಂಬೆ ಪ್ರೆಸಿಡೆನ್ಸಿಯ ನೇಕಾರರ ಮತಾಂತರದ ಹಿಂದೆ ಸೈಯದ್ ಮುಹಮ್ಮದ್ ಗೆಸು ದರಾಜ್, ಉ.ಪ್ರ.ದ ಬುದೌನ್ ಜಿಲ್ಲೆಯಲ್ಲಿ ಗೌಳಿಗರ ಮತಾಂತರ ಹಿಂದೆ ಶೇಖ್ ಜಲಾಲುದ್ದೀನ್ ತಬ್ರಿಜಿ ಎಂಬ ಸೂಫಿಗಳಿದ್ದರು. ಇನ್ನು ಕೆಲವು ಸೂಫಿಗಳು ಇಸ್ಲಾಂನಿಂದಲೇ ದೂರ ಸರಿದು ಬೋಧಿಸಲು ಪ್ರಾರಂಭಿಸಿದಾಗ ಅಥವಾ ತಾನು ದೇವರ ಪ್ರವಾದಿ ಎಂದು ಹೇಳಿಕೊಂಡಾಗ ಅಂತಹಾ ಸೂಫಿಗಳು ಮುಸ್ಲಿಮರಿಂದಲೇ ಕೊಲ್ಲಲ್ಪಟ್ಟರು. ಸೂಫಿ ಶೇಖ್ ರುಕ್ನುದ್ದೀನ್, ಇಮಾಮ್ ಗಜ್ಜಾಲಿಯಂಥವರು ಇದಕ್ಕೆ ಉದಾಹರಣೆ.

            ಇವು ಕೆಲವು ಸೂಫಿಗಳ ಕೃತ್ಯದ ಕೆಲವು ತುಣುಕುಗಳಷ್ಟೇ. ಇಂತಹಾ ಹಲವಿವೆ. ಇವರೆಲ್ಲರ ಕುಕೃತ್ಯಗಳನ್ನು ಅವರೇ ಸ್ವತಃ ಬರೆದಿಟ್ಟರೂ, ಅಥವಾ ಆಗಿನ ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದರೂ ಅಂತಹವುಗಳನ್ನು ಮರೆಮಾಚಿ ಸೂಫಿಗಳೆಂದರೆ ದೇವಮಾನವರು, ಮಹಾನ್ ತಾಂತ್ರಿಕರು ಎಂದು ಆಧುನಿಕ ಇತಿಹಾಸ ಪುಸ್ತಕಗಳಲ್ಲಿ ಬರೆದು ಪೀಳಿಗೆಗಳಿಗೇ ಉರು ಹೊಡೆಸಲಾಗಿದೆ. ಅದಕ್ಕೆ ಸೆಕ್ಯುಲರ್ ಸರಕಾರಗಳ ಅಭಯ"ಹಸ್ತ" ಬೇರೆ! ರಿಚರ್ಡ್ ಮ್ಯಾಕ್ಸ್ ವೆಲ್ ಬರೆದ(1978, ಪ್ರಿನ್ಸ್ ಟನ್) "ಸೂಫಿಸ್ ಆಫ್ ಬಿಜಾಪುರ್:1300-1700" ಅಂತೂ ಇಲ್ಲಿನ "ಸೆಕ್ಯುಲರ್" ಸರಕಾರದಿಂದ ನಿಷೇಧಿಸಲ್ಪಟ್ಟಿತ್ತು! ಸೀತಾರಾಂ ಗೋಯಲರು ಹಲವು ಸೂಫಿಗಳ ನಿಜ ಇತಿಹಾಸವನ್ನು ಅನಾವರಣ ಮಾಡಿದ್ದಾರೆ. ಸೂಫಿ ಸಂತರು ಇಸ್ಲಾಮೀ ಸಾಮ್ರಾಜ್ಯಶಾಹಿಯ ಬೇಹುಗಾರರಾಗಿ ಕೆಲಸ ಮಾಡಿದರು. ಜೊತೆಗೆ ಹಿಂದೂಗಳಿಗೆ ದ್ರೋಹವನ್ನೂ ಬಗೆದರು ಎಂದು ಸೀತಾರಾಮ್ ಗೋಯಲರು ಬರೆದಿದ್ದಾರೆ.  ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!


           ಧ್ಯಾನಾಸಕ್ತಳಾಗಿದ್ದ ಜೀಜಾ ಮಾತೆಗೆ ಕಂಡಿತು ಬೋಳಾಗಿ ನಿಂತಿದ್ದ ದುರ್ಗಮ ಕೊಂಡಾಣ. ತಕ್ಷಣವೇ ಮಗ ಶಿವಾಜಿಗೆ ತನ್ನನ್ನು ಕೂಡಲೇ ಕಾಣಬೇಕೆಂದು ಹೇಳಿಕಳುಹಿದಳು. ತಾಯಿ ಮಗನಿಗೆ ರಾಜಕಾರ್ಯದಲ್ಲಿ ಸಲಹೆ ಸೂಚನೆ ನೀಡುತ್ತಿದ್ದಳು. ಹಾಗಾಗಿ ಏನೋ ರಾಜಕಾರ್ಯವಿರಬೇಕೆಂದು ಶಿವಾಜಿ ರಾಯಗಢದಿಂದ ಓಡೋಡಿ ಬಂದ. ಬಂದವನೇ "ಕೊಂಡಾಣದಲ್ಲಿ ಮುಗಿಲೆತ್ತರಕ್ಕೆ ಭಗವಾಧ್ವಜ ಹಾರಬೇಕು" ಎಂದ ತಾಯಿಯ ಮಾತಿಗೆ ಒಮ್ಮೆಗೆ ಬೆಚ್ಚಿಬಿದ್ದ. ಅದಕ್ಕೆ ಹಲವು ಕಾರಣಗಳಿದ್ದವು.

           ಕೊಂಡಾಣ, ಸಹ್ಯಾದ್ರಿಯ ಶ್ರೇಣಿಯ ಪೂರ್ವ ಭಾಗದಲ್ಲಿ ಸ್ಥಿತವಾಗಿದ್ದ ದುರ್ಗಮ ಕೋಟೆ. ಅದರ ಸುತ್ತಲೂ ಎರಡು ಮೈಲುಗಳಷ್ಟು ದೂರ ಕರಿಗಲ್ಲಿನ ನೈಸರ್ಗಿಕ ರಚನೆ! "ಕತ್ತಲೂ ಕಗ್ಗತ್ತಲೂ| ಸಿಂಹಗಡದ ಕೋಟೆಯ ಸುತ್ತಲು| ಎತ್ತಲೂ ಎತ್ತೆತ್ತಲೂ” ಎಂದು ಕವಿವರ್ಯನೊಬ್ಬ ಕೊಂಡಾಣವನ್ನು ವರ್ಣಿಸಿದ್ದಾನೆ. ಅದಕ್ಕೆ ಹೋಗಲಿದ್ದುದು ಒಂದೇ ದಾರಿ. ಅದು ನೇರವಾಗಿ ದುರ್ಗಕ್ಕಿದ್ದ ಏಕ, ಮುಖ್ಯದ್ವಾರವನ್ನು ಸೇರುತ್ತಿತ್ತು. ಬಹು ಎತ್ತರದಲ್ಲೂ ಇದ್ದುದರಿಂದ ಸುತ್ತಮುತ್ತಲ ಪ್ರದೇಶಗಳನ್ನು, ಬಹಳ ದೂರದವರೆಗಿನ ಚಲನವಲನಗಳನ್ನು ಅಲ್ಲಿದ್ದುಕೊಂಡೇ ವೀಕ್ಷಿಸಬಹುದಿತ್ತು. ಕಡಿದಾದ ಬೆಟ್ಟ, ಕಿರಿದಾದ, ಕೊರಕಲಾದ ದುರ್ಗಮ ದಾರಿ, ಕೋಟೆಯ ಎತ್ತರ ಹಾಗೂ ಅದನ್ನು ಹತ್ತಲು ಅಸಾಧ್ಯವಾದಂತಹಾ ರಚನೆ ಆ ಕೋಟೆಗೆ ವಿಶೇಷ ರಕ್ಷಣೆಯನ್ನು ನೀಡಿತ್ತು. ಅದರ ಜೊತೆಗೆ ಕೋಟೆಯ ಉಸ್ತುವಾರಿಯನ್ನು ಮೊಘಲರ ಪರವಾಗಿ ವಹಿಸಿದ್ದಾತ ಹಲವು ಯುದ್ಧಗಳನ್ನು ಗೆದ್ದ ಅನುಭವವಿದ್ದ ರಜಪೂತ ಸೇನಾನಿ ವೀರ ಉದಯಭಾನು. ಕೋಟೆಯೊಳಗೆ ಅಪಾರ ಪ್ರಮಾಣದ ಆಹಾರ ದಾಸ್ತಾನು, ಶಸ್ತ್ರಾಸ್ತ್ರಗಳೂ ಇದ್ದವು. ಇಂತಹಾ ದುರ್ಗಮ ಕೋಟೆಯನ್ನು ಗೆಲ್ಲುವುದೆಂದರೆ ಅದ್ಭುತವಾದ ಪರಾಕ್ರಮವನ್ನೇ ಮೆರೆಯುವುದರ ಮೊದಲು ಜೀವ ಸಹಿತ ಕೋಟೆಯವರೆಗೆ ತಲುಪುವುದೂ ಹಾಗು ಕೋಟೆ ಏರುವುದೇ ಮಹತ್ಸಾಧನೆಯೆನಿಸುತ್ತಿತ್ತು. ಇದು ಶಿವಾಜಿಗಿದ್ದ ಒಂದು ಚಿಂತೆಯಾಗಿತ್ತು. ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮದುವೆಯ ಸಂಭ್ರಮದಲ್ಲಿರುವವನನ್ನು ಯುದ್ಧಕ್ಕೆ ಹೋಗು ಅನ್ನುವುದಾದರೂ ಹೇಗೆ? ಇತ್ತ ತಾಯಿಯ ಆಜ್ಞೆ ಅತ್ತ ರಾಯಬಾನ ಮದುವೆ ಎಂಬ ಉಭಯಸಂಕಟಕ್ಕೆ ಒಳಗಾದ ಶಿವಾಜಿ.  ಅದರ ಜೊತೆಗೆ ತಾಯಿಯ ಜೊತೆ ಮಾತುಕತೆಗಾಗಿ ಬಂದಾಗ ಆಡಿದ ಚದುರಂಗದಾಟದಲ್ಲಿ ಸೋತದ್ದು ಅಪಶಕುನವೇನೋ ಎಂಬ ಖಿನ್ನತೆಯೂ ಶಿವಾಜಿಯನ್ನಾವರಿಸಿತು.

            ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ತಾನಾಜಿಗೆ ಕರೆ ಕಳುಹಿದ ಶಿವಾಜಿ. ಶಿವಾಜಿಯ ಕರೆ ಬಂದೊಡನೆ ಎಪ್ಪತ್ತು ವರ್ಷ ಪ್ರಾಯದ ತಾನಾಜಿಯ ಭುಜ ಕುಣಿಯಿತು. ಉತ್ಸಾಹದ ಬುಗ್ಗೆಯಾದ ಆತ ತನ್ನ ಮಾವಳಿ ಸಂಗಡಿಗರೊಡನೆ ಬಂದು ಅಪ್ಪಣೆ ಕೇಳಿದ. ಶಿವಾಜಿಯೂ, ಜೀಜಾ ಮಾತೆಯು "ಮಗನ ಮದುವೆ ಮುಗಿಯಲಿ" ಎಂದಾಗಲೂ ಕೇಳದೆ "ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ರಾಯಬಾ ಮಹಾರಾಜ ಶಿವಾಜಿಗೂ ಮಗನ ಸಮಾನ ತಾನೇ. ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡುವೆ" ಎನ್ನುತ್ತಾ ರಣವೀಳ್ಯ ಪಡೆದೇ ಬಿಟ್ಟ.

              ಮಾಘ ಮಾಸದ ಅಮವಾಸ್ಯೆಯ ದಿನ. ಕಗ್ಗತ್ತಲ ರಾತ್ರಿ, ಅಸಾಧ್ಯವಾದ ಚಳಿ, ತೋಳಗಳ ಅರಚಾಟ, ನರಿ-ನಾಯಿಗಳು ಊಳಿಡುತ್ತಿದ್ದವು. ಮರಾಠ ಸಿಂಹಗಳು ಒಂದೊಂದಾಗಿ ಕಡಿದಾದ ಬೆಟ್ಟ ಏರುತ್ತಿದ್ದವು. ಬೆಟ್ಟವನ್ನೇನೋ ಏರಿದ್ದಾಯಿತು. ಕೋಟೆಯೇರುವುದು ಹೇಗೆ? ತಾನಾಜಿ ತಾನು ಸಾಕಿದ್ದ ಉಡ ಯಶವಂತಿಯನ್ನೂ ತನ್ನೊಂದಿಗೆ ಕರೆತಂದಿದ್ದ. ಗೂಡಿನಿಂದ ಅದನ್ನು ಹೊರಬಿಟ್ಟು, ಹಣೆಗೆ ಕುಂಕುಮ ಹಚ್ಚಿ "ಅತ್ಯುತ್ಸಾಹದಿಂದ ಮಹಾರಾಜರು ತಡೆ ಎಂದರೂ ಹಠಬಿಡದೆ ರಣವೀಳ್ಯ ಪಡೆದು ಬಂದಿದ್ದೇನೆ. ಇಷ್ಟರವರೆಗೆ ಮಹಾರಾಜರು ನನ್ನ ಮೇಲಿಟ್ಟಿರುವ ಭರವಸೆ ಮುಕ್ಕಾಗದಂತೆ ಸೆಣಸಿದ್ದೇನೆ. ಇಂದಿನ ನನ್ನ ಗೆಲುವು ನಿನ್ನ ಗೆಲುವನ್ನು ಅವಲಂಬಿಸಿದೆ. ಏರು ಯಶವಂತಿ, ಕೋಟೆಯೇರುವಲ್ಲಿ ಯಶಸ್ವಿಯಾಗು ಎಂದು ನಮಸ್ಕರಿಸಿ ಪ್ರಾರ್ಥಿಸಿ, ಉಡದ ಉದರಕ್ಕೆ ಹಗ್ಗ ಕಟ್ಟಿ ಕೋಟೆ ಏರುವಂತೆ ಸಂಜ್ಞೆ ಮಾಡಿದ. ಯಶವಂತಿ ಕೋಟೆಯನ್ನು ಸರಸರನೆ ಏರಿದಳು. ಕಡಿಮೆ ತೂಕವುಳ್ಳ ಮರಾಠಾ ವೀರನೊಬ್ಬ ಆ ಹಗ್ಗ ಹಿಡಿದು ಮೇಲೇರಿದ. ಬಳಿಕ ಇಳಿಬಿಟ್ಟ ಹಗ್ಗ ಹಿಡಿದು ಮುನ್ನೂರು ಶಿವಸೈನಿಕರು ಕೋಟೆಯ ತುದಿ ತಲುಪಿಯೇ ಬಿಟ್ಟರು.

              ಅಷ್ಟರಲ್ಲಿ ಎಚ್ಚರಗೊಂಡ ಕಾವಲುಗಾರರಿಗೆ ಕೋಟೆಯ ಮೇಲೆ ಮರಾಠ ವೀರರನ್ನು ಕಂಡು ಗಲಿಬಿಲಿಗೊಂಡರು. ಸಾವರಿಸಿಕೊಂಡು ಅಪಾಯದ ಗಂಟೆ ಬಾರಿಸಿದರು. ಕೋಟೆಯೊಳಗೆ ರಜಪೂತರು, ಪಠಾಣರು, ಅಪ್ಘನ್, ಅರಬ್ ಸೈನಿಕರು ಸುಮಾರು ಸಾವಿರಕ್ಕಿಂತಲೂ ಅಧಿಕವಿದ್ದರು. ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬೇರೆ. ಆದರೆ ದಿಢೀರ್ ದಾಳಿಯಿಂದ ಅವರು ಕಂಗೆಟ್ಟಿದ್ದರು. ಜೊತೆಗೆ ಗೋದಾಮಿಗೂ ಬೆಂಕಿ ಬಿತ್ತು. ತಾನಾಜಿ ಮಾಲಸುರೆಯೆಂಬ ವೀರ ಕೇಸರಿಯ ಆಕ್ರಮಣಕ್ಕೆ ಕೊಂಡಾಣ ಅಕ್ಷರಶಃ ನಡುಗಿತ್ತು. ಮಾವಳಿ ವೀರರ ಖಡ್ಗಕ್ಕೆ ಪಠಾಣರು ಆಹುತಿಯಾದರೆ ಒಟ್ಟಾಗಿ ತಾನಾಜಿಯ ಮೇಲೆ ಮುಗಿಬಿದ್ದ ಉದಯಭಾನುವಿನ ದ್ವಾದಶ ಪುತ್ರರ ರಕ್ತದ ರುಚಿಯನ್ನು ತಾನಾಜಿಯ ಖಡ್ಗ ಸವಿದಿತ್ತು. ಅವರೆಲ್ಲರೂ ಸತ್ತು ಬಿದ್ದಾಗ ಕೋಟೆಯ ಪೂರ್ವಭಾಗವೂ ಮರಾಠ ಕೇಸರಿಗಳ ವಶವಾದೊಡನೆ ರಾಯಗಢದಿಂದ ಬಂದಿದ್ದ ಮತ್ತಷ್ಟು ಯೋಧರು ತಾನಾಜಿಯನ್ನು ಕೂಡಿಕೊಂಡರು. ಉದಯಭಾನು ಸ್ವತಃ ತನ್ನ ಮದ್ದಾನೆ ಅಮರಾವತಿಯನ್ನು ತಾನಾಜಿಗೆದುರಾಗಿ ನುಗ್ಗಿಸಿದಾಗ ತಾನಾಜಿ ಆನೆಯ ಬೆನ್ನ ಮೇಲೆ ಜಿಗಿದು ಅದರ ಸೊಂಡಿಲು ಕತ್ತರಿಸಿದ. ರಕ್ತವು ಛಿಲ್ಲೆಂದು ಹಾರುತ್ತಿರುಂತೆ ಆನೆ ಕುಸಿದು ಬಿದ್ದು ಮಣ್ಣ ಮುದ್ದೆಯಾಯಿತು. ಹೀಗೆ ಅಭಿಮನ್ಯುವಿನ ತೆರದಿ ತಾನಾಜಿ ಮೊಘಲ್ ಸೈನ್ಯವನ್ನು ನುಚ್ಚುನೂರು ಮಾಡುತ್ತಿದ್ದಾಗ ತಾನಾಜಿಯ ಮೇಲೆ ಅನಿರೀಕ್ಷಿತವಾಗಿ ಕತ್ತಿ ಏಟೊಂದು ಬಿತ್ತು. ಅವನ ಕೈ ಕತ್ತರಿಸಲ್ಪಟ್ಟಿತು. ಗುರಾಣಿಯೂ ಕಳೆದು ಹೋಯಿತು. ಆ ಕೈಗೆ ಬಟ್ಟೆ ಸುತ್ತಿ ರಣಭಯಂಕರವಾಗಿ ಕಾದು ಉದಯಭಾನುವನ್ನು ನಿತ್ರಾಣನನ್ನಾಗಿಸಿದ ಆತ. ಆದರೆ ಗುರಾಣಿಯಿಲ್ಲದೆ ಹೆಚ್ಚಿನ ಕತ್ತಿಯೇಟುಗಳು ಆತನ ದೇಹಕ್ಕೇ ಬೀಳುತ್ತಿದ್ದುದರಿಂದ ಆ ಗಾಯಗಳಿಂದ ಬಹಳಷ್ಟು ರಕ್ತ ಹೊರ ಹೋಗಿ ತಾನಾಜಿಯ ದೇಹ ನೆಲಕ್ಕುರುಳಿತು. ಅವನ ಜೊತೆಗೆ ಇನ್ನಷ್ಟು ಮರಾಠ ವೀರರು ಬಲಿಯಾಗಿ ಇನ್ನೇನು ಉದಯಭಾನುವಿನ ಕೈಮೇಲಾಗುತ್ತದೆ ಅನ್ನಿಸಿದಾಗ ತಾನಾಜಿಯ ಸೋದರನ ಖಡ್ಗ ಉದಯಭಾನುವಿನ ಉದರವನ್ನು ಬಗಿದು ಹೊರಬಂತು. (ಕೆಲವು ಇತಿಹಾಸಕಾರರ ಪ್ರಕಾರ ತಾನಾಜಿಯೇ ಉದಯಭಾನುವನ್ನು ಸಂಹರಿಸಿದ; ಹಾಗೆಯೇ ತಾನಾಜಿಯ ಸೋದರನ ಹೆಸರಿನ ಬಗೆಗೂ ಭಿನ್ನಾಭಿಪ್ರಾಯಗಳಿವೆ). ಕೊಂಡಾಣ ಹಿಂದೂ ಕೇಸರಿಗಳ ವಶವಾಯಿತು.

           ಶಿವಾಜಿ ಮಹಾರಾಜರಿಗೆ ಕೊಂಡಾಣವನ್ನು ಗೆದ್ದ ಶುಭ ಸುದ್ದಿ ತಲುಪಿತು. ಜೊತೆಗೇ ತಾನಾಜಿ ಹುತಾತ್ಮನಾದ ಸುದ್ದಿಯೂ. ತಾನಾಜಿಯ ಹೌತಾತ್ಮ್ಯಕ್ಕೆ ಮಮ್ಮಲ ಮರುಗಿದ ಶಿವಾಜಿ ತಾನಾಜಿಯ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು “ಗಢ್ ಆಲಾ, ಪಣ್ ಸಿಂಹ ಗೇಲಾ” (ಕೋಟೆಯೇನೋ ಬಂತು ಆದರೆ ಸಿಂಹವೇ ಹೊರಟುಹೋಯಿತು) ಎ೦ದು ಉದ್ಗರಿಸಿ ಬಿಕ್ಕಿ ಬಿಕ್ಕಿ ಅತ್ತ. ಕೋಟೆ ಗೆದ್ದ ಸ೦ತೊಷವನ್ನು ತಾನಾಜಿಯ ಸಾವು ನು೦ಗಿ ಹಾಕಿತ್ತು. ತಾನಾಜಿಯ ಮನೆಯವರಿಗೆ ಹೇಗೆ ಸಮಧಾನಿಸಲಿ ಎನ್ನುವಿನ್ನೊಂದು ಚಿಂತೆ ಶಿವಾಜಿ ಮಹಾರಾಜರ ಎದೆಯನ್ನು ಇರಿಯುತ್ತಿತ್ತು. ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ? ಅದನ್ನು ದಿವಂಗತ ವಿದ್ಯಾನಂದ ಶೆಣೈಯವರು ವಿವರಿಸುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.
"ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!"

            ಆದರೆ ತಾನಾಜಿಯ ದೇಹವನ್ನು ಅವನ ಮನೆಗೆ ತೆಗೆದುಕೊ೦ಡು ಹೋದ ಶಿವಾಜಿಗೆ ತಾನಾಜಿಯ ತಾಯಿ ಹೇಳುತ್ತಾಳೆ... "ಮಹಾರಾಜಾ ಆ ಮಗನಿಗಾಗಿ ನಾನು ಅಳುವುದಿಲ್ಲ. ನನ್ನ ಮಗ ಹಿಂದೂ ಸಾಮ್ರಾಜ್ಯಕ್ಕಾಗಿ ದುಡಿದು ಕೋಟೆಯನ್ನು ಗೆದ್ದು ನಿನಗೆ ಒಪ್ಪಿಸಿ ವೀರಸ್ವರ್ಗ ಪಡೆದ. ಅದಕ್ಕಾಗಿ ನನಗೆ ಗರ್ವವಿದೆ, ಹೆಮ್ಮೆಯಿದೆ. ಒ೦ದು ಸಿ೦ಹ ಹೋದರೇನು? ಇನ್ನೆರಡು ಸಿಂಹಗಳು ಅವನ ಸ್ಥಾನ ತುಂಬು ತ್ತವೆ" ಎಂದು ಕಿರಿಮಗ ಸೂರ್ಯಾಜಿ ಹಾಗೂ ಆಗಷ್ಟೇ ಮದುವೆಯಾಗಿದ್ದ ಮೊಮ್ಮಗ ರಾಯಬಾರ ಕೈಗಳನ್ನು ಶಿವಾಜಿಯ ಕೈಮೇಲೆ ಇಡುತ್ತಾಳೆ. ಉಘೇ ಉಘೇ ವೀರಮಾತೆಗೆ, ವೀರಭೂಮಿಗೆ! ಆ ತಾಯಿಗೆ ತಲೆಬಾಗಿ ನಮಸ್ಕರಿಸಿದ ಶಿವಾಜಿ. ತಾನಾಜಿಗೆ ಕೊಂಡಾಣದಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಅವನ ನೆನಪಿಗಾಗಿ ಸಿಂಹಗಢ ಎಂದು ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ. ಹೌದು ಅದೊಂದು ಸರ್ಜಿಕಲ್ ಸ್ಟ್ರೈಕ್. ದುರ್ಗಮವಾದ, ಎಂಥವರಿಗೂ ಅಸಾಧ್ಯವಾಗಿದ್ದ ಶತ್ರುವಿನ ಗುಹೆಯೊಳಕ್ಕೆ ಹೊಗ್ಗಿ ಆತನನ್ನು ಹೊಡೆದದ್ದು ಮಾತ್ರವಲ್ಲ ಆ ನೆಲೆಯನ್ನೇ ಶಾಶ್ವತವಾಗಿ ತನ್ನದಾಗಿಸಿಕೊಂಡದ್ದು. ಅದು ಮೊಘಲ್ ಸಾಮ್ರಾಜ್ಯದ ಜಂಘಾಬಲವನ್ನೇ ಉಡುಗಿಸಿತು. ತಾನಾಜಿಯ ವೀರಗಾಥೆ, ಬಲಿದಾನ ಮರಾಠರ ಲಾವಣಿಗಳಲ್ಲಿ ನಲಿಯಿತು(ಬಲ್ಲಾಡ್ ಆಫ್ ಸಿಂಹಗಢ್). ಪುರಂದರ ಒಪ್ಪಂದದಲ್ಲಿ ಕಳೆದುಕೊಂಡಿದ್ದ ಕೋಟೆಗಳನ್ನೆಲ್ಲಾ ಮುಂದಿನ ಕೆಲವೇ ತಿಂಗಳುಗಳಲ್ಲಿ ಶಿವಾಜಿ ಗೆದ್ದುಕೊಳ್ಳುವಂತೆ ಮಾಡಿತು.. ಮುಂದಿನ ನಾಲ್ಕು ವರ್ಷಗಳಲ್ಲಿ ಶಿವಾಜಿಯನ್ನು ಛತ್ರಪತಿಯನ್ನಾಗಿಸಿ ವಿಶಾಲ ಹಿಂದೂ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆಯಿತು. ಔರಂಗಜೇಬನ ಮದಾಂಧತೆ, ಮತಾಂಧತೆ, ಮತಾಂತರಗಳ ವಿರುದ್ಧ ಹಿಂದೂ ಸ್ವಾಭಿಮಾನವನ್ನು ಎತ್ತಿ ಹಿಡಿದು ನಿಲ್ಲಿಸಿತು. ಭಾರತಕ್ಕೆ ಭಾರತವೇ ಮೀಸೆ ಬೋಳಿಸಿಕೊಳ್ಳದಂತೆ ಪರಾಕ್ರಮ ಮೆರೆಯಲು ಪ್ರೇರಣೆಯಾಯಿತು.

            ಸ್ವಾತಂತ್ರ್ಯ ವೀರ ಸಾವರ್ಕರ್ "ಬಾಜೀಪ್ರಭು" ಎನ್ನುವ ಗೀತೆಯೊಂದನ್ನು ರಚಿಸಿ ತಾನಾಜಿಯನ್ನು ಕೀರ್ತಿಸಿದ್ದಾರೆ. ಮತ್ತದು ಬ್ರಿಟಿಷರಿಂದ ನಿಷೇಧಕ್ಕೊಳಪಟ್ಟಿತ್ತು! ಈಗ ತಾನಾಜಿ ಬಗೆಗಿನ ಚಲನಚಿತ್ರವೊಂದು ಬಂದಿದೆ. ತನ್ನ ಮಿತಿಯಲ್ಲಿ ಅದು ತಾನಾಜಿಯ ವೀರಗಾಥೆಯನ್ನು ವರ್ಣಿಸಿದೆ. ಇದು ದೇಶ ಬದಲಾಗುತ್ತಿರುವ ಲಕ್ಷಣ. ಭಗವಾ ಸಿಂಹಗಢದಲ್ಲಿ ಮಾತ್ರವಲ್ಲ, ಹಿಂದಿನಂತೆ ಭಾರತಾದ್ಯಂತ ಹಾರಾಡುವ ಕಾಲ ಬರಲಿರುವ ಮುನ್ಸೂಚನೆ.

ಶನಿವಾರ, ಡಿಸೆಂಬರ್ 28, 2019

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ


                ಸಂಶೋಧನೆ...ಸಂಶೋಧನೆ...ಸಂಶೋಧನೆ. ಆತನ ಉಸಿರೇ ಅದರಲ್ಲಿತ್ತು. ಬಹುಮುಖಿ ಪ್ರತಿಭೆಯೊಂದು ವಿಷಯದ ಆಳ ಹೊಕ್ಕು ಶೋಧಿಸಿ ಅದನ್ನು ಸಮಾಜಮುಖಿಯಾಗಿಸಿ "ಇದಂ ನ ಮಮ" ಎಂದು ಸನಾತನ ಧರ್ಮದ ಸಹಜ ಭಾವ ತೋರಿದ ಶ್ರೇಷ್ಠ ಬದುಕು. ಅದು ಮೆಕಾಲೆ ಪ್ರಣೀತ ಶಿಕ್ಷಣದಿಂದ ತಮ್ಮ ಮೆದುಳನ್ನು ಅಡವಿಟ್ಟಿದ್ದ ಭಾರತೀಯ ಸಮಾಜ ಹಾಗೂ ಬ್ರಿಟಿಷರ ಪಳಿಯುಳಿಕೆಗಳ ವಿರುದ್ಧ ಸೆಣಸಾಟ ನಡೆಸಿ ನಿಜ ಇತಿಹಾಸದ ನವನೀತವನ್ನು ಕಡೆದ ಬದುಕು. ಗಣಿತಜ್ಞ, ಇತಿಹಾಸ ಸಂಶೋಧಕ, ಹಿಂದುತ್ವದ ವಿದ್ವಾಂಸ, ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಭಾಷೆಗಳಲ್ಲಿ ಸಾಧನೆಯನ್ನು ನಡೆಸಿದ, ಸಾಹಿತ್ಯವನ್ನು ಸೃಷ್ಟಿಸಿದ, ಅಪಾರ ದೂರದರ್ಶಿತ್ವ ಹೊಂದಿದ್ದ, ಹಲವುಗಳ ಆದ್ಯಪ್ರವರ್ತಕ, ಸಾಂಪ್ರಾದಾಯಿಕ ಸಂಸ್ಕೃತದ ರಸಧಾರೆ, ಹೆಸರಿಗೆ ಅನ್ವರ್ಥವೆನಿಸುವ ನವರತ್ನ ಇತ್ತೀಚೆಗೆ ಮರೆಯಾಯಿತು.

                ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದ ಈ ದೇಶಸ್ಥ ಕುಟುಂಬಕ್ಕೆ ಉತ್ತರಾದಿ ಮಠದ ಸ್ವಾಮಿಗಳಿಂದ ಕೊಡಲ್ಪಟ್ಟ ಬಿರುದು "ನವರತ್ನ". ಮುಂದೆ ಇದು ಹೆಸರಿನಲ್ಲಿ ಮಾತ್ರವಲ್ಲ, ಸಾಧನೆಯಲ್ಲೂ ಹರಿದು ಬಂತು. ನವರತ್ನ ರಾಮರಾಯರಂಥ ಪ್ರಸಿದ್ಧ ವಿದ್ವಾಂಸರನ್ನು ಕಂಡ ಪರಿವಾರದಲ್ಲಿ 1943 ಸೆಪ್ಟೆಂಬರ್ 22ರಂದು ಜನ್ಮತಾಳಿದ ಒಂದು ರತ್ನವೇ ನವರತ್ನ ಶ್ರೀನಿವಾಸ ರಾಜಾರಾಮ್. ಅಪ್ಪ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸರ್ಜನ್. ತಾಯಿ ಭೂಗರ್ಭಶಾಸ್ತ್ರಜ್ಞ, ಉದ್ದಿಮೆದಾರ, ಬಹುಭಾಷಾ ಕೋವಿದ ರಾಮೋಹಳ್ಳಿ ವ್ಯಾಸರಾಯರ ಮಗಳು. ತಾತ ನವರತ್ನ ರಾಮರಾಯರ ಪ್ರಭಾವವೇ ಎಳೆಯ ರಾಜಾರಾಮನಲ್ಲಿ ಹಲವು ಕ್ಷೇತ್ರಗಳ ಅಧ್ಯಯನದ ಆಸಕ್ತಿಯನ್ನು ಬೆಳೆಯಿಸಿತು. ಹತ್ತು ವರ್ಷದವರೆಗೆ ಮನೆಯಲ್ಲೇ ಶಿಕ್ಷಣ; ಬಳಿಕ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರೌಢ, ಪದವಿಪೂರ್ವ ಶಿಕ್ಷಣ; ಬಿಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದ ಮೇಲೆ 1965ರಲ್ಲಿ ಮುಂಬೈಯ ಟಾಟಾ ಪವರ್ ಕಂಪೆನಿಯಲ್ಲಿ, ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣಾ ಕೋಷ್ಠದಲ್ಲಿ ನೌಕರಿ. ಬಳಿಕ ಪೂನಾ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ ಆಧಾರಿತ ನೀರಾವರಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ.

              ಐದು ವರ್ಷದ ಬಳಿಕ ಟಾಟಾ ಪವರ್ ಸಂಸ್ಥೆಯನ್ನು ತೊರೆದು ಗಣಿತ ಹಾಗೂ ವಿಜ್ಞಾನದ ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋಗಲು ನಿರ್ಧರಿಸಿದರು ರಾಜಾರಾಮ್. 1976ರಲ್ಲಿ ಬ್ಲೂಮಿಂಗ್ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ಮತ್ತು ಗಣಿತೀಯ ಭೌತವಿಜ್ಞಾನವನ್ನು ಆರು ವರ್ಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ, ಸಂಶೋಧಿಸಿ ಬರೆದ ಸಂಶೋಧನಾ ಪ್ರಬಂಧಕ್ಕೆ ಸಿಕ್ಕಿದ್ದು ಪಿ.ಹೆಚ್.ಡಿ ಪದವಿ. ಮುಂದಿನ ನಾಲ್ಕು ವರ್ಷ ಒಹಾಯೋದಲ್ಲಿರುವ ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯಲ್ಲಿ ಗಣಿತ ಮತ್ತು ಗಣಕವಿಜ್ಞಾನ ಬೋಧನೆ. ಸಹಜವಾಗಿಯೇ ಅವರನ್ನು ಸಂಶೋಧನಾ ಕ್ಷೇತ್ರ ಕೈಬೀಸಿ ಕರೆಯಿತು. ಮುಂದಿನ ಹನ್ನೆರಡು ವರ್ಷ ಕೈಗಾರಿಕಾ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇಂದು ಲಾಕ್ ಹೀಡ್ ಮಾರ್ಟಿನ್ ಎಂದು ಕರೆಯಲಾಗುವ ಲಾಕ್ಹೀಡ್ ಕಾರ್ಪೊರೇಶನ್ ಎಂಬ ಸಂಸ್ಥೆಗೆ 1980ರಲ್ಲಿ ಸಂಶೋಧಕನಾಗಿ ಸೇರಿದ ಆತ ಗಣಿತ, ಸಂಖ್ಯಾಶಾಸ್ತ್ರ, ಗಣಕವಿಜ್ಞಾನ, ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ಯಂತ್ರಗಳು, ತಂತ್ರಾಂಶ ಅಭಿವೃದ್ಧಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದರು.

             ಆಗ ಜಗತ್ತಿನ ವಿವಿಧ ಪ್ರದೇಶಗಳ ಕೃಷಿ ಸಂಪನ್ಮೂಲಗಳ ಮೌಲ್ಯಮಾಪನ ಮಾಡುವ ಉದ್ದೇಶದಿಂದ ನಾಸಾ ಲ್ಯಾಂಡ್ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುತ್ತಿದ್ದ ಕಾಲ. ಈ ಉಪಗ್ರಹಗಳು ಕಳುಹಿಸುವ ಭೂಮಿಯ ಅಗಾಧ ಪ್ರಮಾಣದ ಚಿತ್ರಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ವರ್ಣ-ಛಾಯೆ ವಿನ್ಯಾಸಗಳ ವ್ಯತ್ಯಾಸಗಳನ್ನು ಗುರುತಿಸಿ ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಊಹಿಸಿ ಯಾವ ಪ್ರದೇಶ ಯಾವ ಕೃಷಿಗೆ ಸೂಕ್ತ ಎಂಬುದರ ನಿಷ್ಕರ್ಷೆ ಮಾಡುವುದು ಮುಖ್ಯ ಕೆಲಸವಾಗಿತ್ತು. ಚಿತ್ರಗಳನ್ನು ವಿಶ್ಲೇಷಿಸುವ ಕೆಲಸದಲ್ಲಿ ತೊಡಗಿದ್ದ ರಾಜಾರಾಮರು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಕಂಡುಕೊಂಡರು. ನಿಖರವಾದ ಮಾಹಿತಿ ಪಡೆದು ಖಚಿತ ನಿರ್ಣಯಕ್ಕೆ ಬರಬೇಕಾದರೆ ಇವೆಲ್ಲವನ್ನೂ ಅರ್ಥಮಾಡಿಕೊಂಡು ತಾನೇತಾನಾಗಿ ಕೆಲಸ ಮಾಡಬಲ್ಲ ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ರೂಪಿಸುವ ಅಗತ್ಯವನ್ನು ಮನಗಂಡು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿಸಿದರು. ತಮ್ಮ ಪ್ರತಿಪಾದನೆಗೆ ಪ್ರತಿಸ್ಪಂದನ ದೊರೆತಾಗ ಅವರು ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ಬರೆದರು. ಖಚಿತತೆ ಮತ್ತು ಕಡಿಮೆ ಸಂಪನ್ಮೂಲ ಬಳಕೆಯಿಂದ ಮನುಷ್ಯ ಸಹಜವಾದ ಹಸ್ತಚಾಲಿತ ದೋಷಗಳನ್ನು ನಿವಾರಿಸಿಕೊಂಡು ನಿಖರ ಲೆಕ್ಕಾಚಾರ ಒದಗಿಸುವ ಈ ತಂತ್ರಾಂಶಗಳ ಬಗ್ಗೆ ನಾಸಾ ನಿಬ್ಬೆರಗಾಗಿ ನೋಡಿತು.

                1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಇತ್ತ ಅವರು ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದುದು ಮಾತ್ರವಲ್ಲದೆ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆದರೂ ನಾಸಾ ಹಾಗೂ ಲಾಕ್ ಹೀಡ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಇವರ ಬೆನ್ನುಹತ್ತುವುದನ್ನು ಬಿಡಲಿಲ್ಲ. ಹಾಗಾಗಿ ನಾಸಾ ಮತ್ತು ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಸ್ವಯಂಚಾಲಿತ ಯಂತ್ರಗಳ ನಿರ್ಮಾಣ(ರೋಬೋಟಿಕ್ಸ್) ಕುರಿತು ಹಲವು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರವನ್ನು ನಡೆಸಬೇಕಾಇತು. ಕೃತಕ ಬುದ್ಧಿಮತ್ತೆ ಬಳಸುವುದೇ ಅಚ್ಚರಿದಾಯಕವಾಗಿದ್ದ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಯಾವ ಕೆಲಸ ಮಾಡಬೇಕೆಂಬುದನ್ನು ತಾವಾಗಿ ನಿರ್ಧರಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ, ಬಾಹ್ಯಾಕಾಶದಲ್ಲಿ ಬಹಳಷ್ಟು ಪ್ರಯೋಜನಕ್ಕೆ ಬರುವ ಈ ಸಂಶೋಧನೆ ವಿಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲಾಯಿತು. ಈ ಸಂಬಂಧ ಅವರು ಬರೆದ ರೋಬೆಕ್ಸ್-85 ಹಾಗೂ ರೋಬೆಕ್ಸ್-87 ನಂತಹಾ ಸಂಶೋಧನಾ ಕೃತಿಗಳು ಇಂದಿಗೂ ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ಯಂತ್ರಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಆವಿಷ್ಕಾರಗಳಿಗೆ ಅಧಿಕೃತ ಆಕರ ಸಾಹಿತ್ಯಗಳಾಗಿವೆ.

              ಮುಂದೆ ರಾಜಾರಾಮ್ ಇದೇ ಪ್ರಕ್ರಿಯೆಯನ್ನು ಉದ್ದಿಮೆಗಳಲ್ಲೂ ಬಳಸಲು ಯತ್ನಿಸಿದರು. ಗಣಕ ಯಂತ್ರಗಳ ನಿರ್ಮಾಣ ಮತ್ತು ವಿನ್ಯಾಸ ಎರಡರಲ್ಲೂ ಒಂದು ಉದ್ದಿಮೆಗೆ ಸೀಮಿತವಾಗಿರುವಂತೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಲು ರೋಬೋಎಡಿಟ್ ಯಂತ್ರಾಂಶವನ್ನು ಸಿದ್ಧಪಡಿಸಿದರು. ಇದು ಯಂತ್ರವೊಂದನ್ನು ಸ್ವಯಂಚಾಲಿತ ಮಾತ್ರವಲ್ಲದೆ ತಾನು ಮುಂದೇನು ಮಾಡಬೇಕೆಂದು ಅರಿತು ಮಾಡುವಂತಹ ಬುದ್ಧಿವಂತಿಕೆಯನ್ನು ಹೊಂದಿದ್ದು ಮುಂದಿನ ಕೈಗಾರಿಕಾ ಕ್ರಾಂತಿಗೆ ಇದು ನಾಂದಿಯಾಯಿತು. ಅವರ ಮುಂದಿನ ಬಹುಮುಖ್ಯ ಸಂಶೋಧನೆ ಕೃತಕ ನರವ್ಯವಸ್ಥೆಯ ಶೋಧನೆ! ಇದಂತೂ ಹಲವು ಸಂಶೋಧಕರನ್ನು, ಉದ್ದಿಮೆದಾರರನ್ನು ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಭವಿಷ್ಯಕ್ಕೆ ಸಾಗಿದ್ದ ರಾಜಾರಾಮರ ಬದುಕನ್ನು ಭಾರತದ ಭೂತಪೂರ್ವ ಇತಿಹಾಸ ಸೆಳೆಯಿತು. ಅವರು ಅಪಾರವಾದ ಕೆಲಸ, ಪ್ರಸಿದ್ಧಿ, ಧನರಾಶಿಯನ್ನು ತೊರೆದು ಜನ್ಮಭೂಮಿಗೆ ಮರಳಿದರು. ಅದಕ್ಕೆ ಕಾರಣರಾದವರು ವಾಮದೇವ ಶಾಸ್ತ್ರಿ ಅಥವಾ ಡೇವಿಡ್ ಫ್ರಾಲಿ. ಮುಂದೆ ನಡೆದದ್ದು ಭಾರತದ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಅಂಶ.

              1995ರಲ್ಲಿ ರಾಜಾರಾಮರು ಡೇವಿಡ್ ಫ್ರಾಲಿಯವರೊಡಗೂಡಿ ಮೂರು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ "ವೇದಿಕ್ ಆರ್ಯನ್ಸ್ & ದಿ ಒರಿಜಿನ್ಸ್ ಆಫ್ ಸಿವಿಲೈಝೇಷನ್" ಎನ್ನುವ, ಬ್ರಿಟಿಷರು ಹಾಗೂ ಅವರ ಅನುವರ್ತಿಗಳ "ಆರ್ಯ ಆಕ್ರಮಣ" ಎಂಬ ಭಾರತದ ಅಂತಃಸತ್ವವನ್ನೇ ನಾಶ ಮಾಡಿದ ಹುಸಿ ಸಿದ್ಧಾಂತವನ್ನು ಸಾಧಾರವಾಗಿ ಬುಡಮೇಲು ಮಾಡಿದ ಸಂಶೋಧನಾ ಕೃತಿಯನ್ನು ರಚಿಸಿದರು. ಪ್ರಾಚೀನ ಜಗತ್ತು ತನ್ನ ವಿಜ್ಞಾನವನ್ನು ಬ್ಯಾಬಿಲೋನ್ ಮತ್ತು ಮೆಸಪೊಟೊಮಿಯಾದಿಂದ ಎರವಲು ಪಡೆದಿದೆ ಎಂದು ಚಾಲ್ತಿಯಲ್ಲಿದ್ದ  ಮಾದರಿಯನ್ನು ಅವರು ಪ್ರಶ್ನಿಸಿದರು. ಮಾತ್ರವಲ್ಲ ಪಾಶ್ಚಿಮಾತ್ಯ ಇಂಡಾಲಜಿಯು ವಿದ್ವಾಂಸರಿಲ್ಲದೆ ಬಳಲುತ್ತಿದೆ. ಅಮೆರಿಕಾ ಮತ್ತು ಯೂರೋಪಿನಲ್ಲಿ ಸಂಸ್ಕೃತ ವಿದ್ವತ್ ಮಟ್ಟ ತುಂಬಾ ಕಡಿಮೆಯಿದ್ದು ಇವರೆಲ್ಲಾ ಹತ್ತೊಂಬನೇ ಶತಮಾನದಲ್ಲಿ ಕೆಲವರು ಮಾಡಿಟ್ಟ ಅನುವಾದಗಳನ್ನೇ ಉರು ಹೊಡೆಯುತ್ತಾ, ಮಾರ್ಕ್ಸ್ ವಾದ ಮತ್ತು ಪ್ರಾಯ್ಡ್ ನ ವಿಶ್ಲೇಷಣಾ ಮಾದರಿಗಳನ್ನೇ ಅನುಕರಿಸುತ್ತಿದ್ದಾರೆ ಎಂದು ಇಂಡಾಲಿಜಿಸ್ಟ್'ಗಳೆಂದು ಪ್ರಶಂಸೆ ಪಡೆಯುತ್ತಾ ಕೂತಿದ್ದ ಮೆಕಾಲೆ ತಲೆಗಳ ಹುಳುಕುಗಳನ್ನು ಜಗತ್ತಿಗೆ ತೋರಿಸಿದರು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ, ವ್ಯಾಟಿಕನ್ನಿನ ಪಾಪಲ್ ಕಛೇರಿಯಲ್ಲಿ ಕ್ರೈಸ್ತೇತರ ಮತಗಳಿಗೆ ಸಲಹೆಗಾರರಾಗಿದ್ದ ಖ್ಯಾತ ಇಂಡಾಲಜಿಸ್ಟ್ ಡಾ. ಕ್ಲಾಸ್ ಕ್ಲೋಸ್ಟರ್ಮೇಯರ್ "ಆರ್ಯ ಆಕ್ರಮಣದ ವಿಷಯದಲ್ಲಿ ಹಳೆಯ ಸಿದ್ಧಾಂತವು ಭಾಷಾ ಶಾಸ್ತ್ರದ ವಾದಗಳ ಮೇಲೆ ನಿಂತಿದ್ದರೆ ಹೊಸದಾಗಿ  ಪ್ರವೇಶಿಸಿದ ಸಿದ್ಧಾಂತ ಖಗೋಳ, ಭೂವೈಜ್ಞಾನಿಕ, ಗಣಿತ ಮತ್ತು ಪುರಾತತ್ವ ಪುರಾವೆಗಳನ್ನು ಒಳಗೊಂಡಿದೆ" ಎಂದು ರಾಜಾರಾಮರು ಹಾಗೂ ಸಂಗಡಿಗರ ಕಾರ್ಯವನ್ನು ಬಹು ಪ್ರಶಂಸಿಸುವ ಕಾರ್ಯವನ್ನು ತಮ್ಮ "ಆರ್ಯ ಆಕ್ರಮಣವಾದವನ್ನು ಪ್ರಶ್ನಿಸುವುದು ಹಾಗೂ ಭಾರತೀಯ ಇತಿಹಾಸವನ್ನು ಪರಿಷ್ಕರಿಸುವುದು" ಎಂಬ ಲೇಖನದಲ್ಲಿ(1998) ಮಾಡಿದ್ದಾರೆ.

                  ಪ್ರಸಿದ್ಧ ಗಣಿತಜ್ಞರೂ, ಆಳವಾಗಿ ಸಂಶೋಧನೆ ಮಾಡುವವರೂ ಆಗಿದ್ದರೂ ರಾಜಾರಾಮರ ಸಂಶೋಧನೆ ಸ್ಥಾಪಿತ ಇಂಡಾಲಜಿಸ್ಟ್'ಗಳನ್ನು ಕೆರಳಿಸಿತು. ಇದಕ್ಕೆ ಕಾರಣಗಳು ಎರಡು; ಒಂದು ಆತ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯಶೋಧನೆಗೆ ಮಾತ್ರ ಮಹತ್ವ ಕೊಟ್ಟಿದ್ದು; ಇನ್ನೊಂದು ಮತಾಂತರಿಗಳನ್ನು ಖಂಡತುಂಡವಾಗಿ ವಿರೋಧಿಸಿ, ಅವರ ಕುಕೃತ್ಯವನ್ನು ಬಯಲು ಮಾಡುತ್ತಿದ್ದುದು ಮಾತ್ರವಲ್ಲದೆ ಸ್ಥಾಪಿತ ಇಂಡಾಲಜಿಯು ಹೇಗೆ ಮತಾಂತರ ಉದ್ಯಮಕ್ಕೆ ಪೂರಕವಾಗಿ ಹೆಣೆಯಲ್ಪಟ್ಟ ಸುಳ್ಳುಗಳ ಸಂತೆಯಾಗಿದೆ ಎಂದು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದು! "ದ ವಿನ್ಸಿ ಕೋಡ್" ಬರುವುದಕ್ಕೆ ಎಷ್ಟೋ ವರ್ಷ ಮೊದಲೇ ಕ್ರೈಸ್ತ ಮತಾಂತರಿಗಳ ಸುಳ್ಳುಗಳನ್ನೆಲ್ಲಾ ಕಿತ್ತೆಸೆದು ಭಾರತದ ನಿಜ ಇತಿಹಾಸವನ್ನು ಜಗತ್ತಿಗೆ ತೋರಿಸಲು ರಾಮ ಸ್ವರೂಪ್, ಸೀತಾರಾಮ್ ಗೋಯಲ್, ನವರತ್ನ ರಾಜಾರಾಮ್, ಡೇವಿಡ್ ಫ್ರಾಲಿ ಮುಂತಾದ ಬೌದ್ಧಿಕ ಪ್ರತಿಭೆಗಳು ಅವರೊಂದಿಗೆ ಮುಖಾಮುಖಿ ಸಮರ ನಡೆಸಿದ್ದರು. ಹೆಚ್ಚು ಹೆಚ್ಚು ಪುರಾತತ್ತ್ವ ಸಂಶೋಧನೆಗಳಿಂದ ಕ್ರೈಸ್ತಮತದ ಮೂಲ ಹಾಗೂ ಅಸ್ತಿತ್ವವಾದಕ್ಕೆ ಬರಬಹುದಾದ ಬಿಕ್ಕಟ್ಟನ್ನು ರಾಜಾರಾಮರು 1997ರಲ್ಲೇ ವಿಶ್ಲೇಷಿಸಿದ್ದರು. ಇಂತಹಾ ನಿಖರ ಸಂಶೋಧನೆ, ಸತ್ಯಪಥದಿಂದಾಗಿಯೇ ಆತ ಶೈಕ್ಷಣಿಕ ವಲಯಗಳಿಂದಲೂ ಹೊರಗೆ ಜಾಜ್ವಲ್ಯಮಾನ ನಕ್ಷತ್ರದಂತೆ ಹೊಳೆದರು. ಅಲ್ಲದೆ ಅವರಲ್ಲಿನ ಗಣಿತಜ್ಞ ಹಾಗೂ ವಸ್ತುವಿಜ್ಞಾನಿ, ಆಗಿದ್ದ ಭಾಷಾಶಾಸ್ತ್ರ ರಚನೆಗಳನ್ನು ಹುಸಿವಿಜ್ಞಾನವೆಂದೇ ಪರಿಗಣಿಸುತ್ತಿದ್ದ.

                2000ನೇ ಇಸವಿಯಲ್ಲಿ ಪ್ರಾಚೀನ ಲಿಪಿ ಶಾಸ್ತ್ರಜ್ಞರೂ, ವೈದಿಕ ವಿದ್ವಾಂಸರೂ ಆಗಿದ್ದ ನಟವರ್ ಝಾರೊಡನೆ ಸೇರಿ ಸಿಂಧೂ ಲಿಪಿಯಲ್ಲಿನ ಹಲವು ಸಂಕೇತಾಕ್ಷರಗಳ ಗೂಢವನ್ನು ಭೇದಿಸುವ "ಡಿ ಡೆಸಿಫೆರೆಡ್ ಇಂಡಸ್ ಸ್ಕ್ರಿಪ್ಟ್: ಮೆಥಡಾಲಜಿ, ರೀಡಿಂಗ್ಸ್, ಇಂಟರ್ಪ್ರೆಟೇಶನ್" ಎನ್ನುವ ಸಂಶೋಧನಾತ್ಮಕ ಗ್ರಂಥವನ್ನು ಬರೆಯುವ ಮೂಲಕ ಹರಪ್ಪನ್ನರದು ವೈದಿಕ ಧಾರೆಯೇ ಎಂದು ಸಿದ್ಧಪಡಿಸಿದರು. ಅವರ ಸರಸ್ವತಿ ನದಿಯ ಬಗೆಗಿನ "ಸರಸ್ವತಿ ನದಿ ಹಾಗೂ ವೇದಕಾಲೀನ ನಾಗರಿಕತೆ" ಎನ್ನುವ ಆಂಗ್ಲ ಭಾಷೆಯಲ್ಲಿನ ಗ್ರಂಥ ಸರಸಿರೆಯ ಹುಟ್ಟು-ಹರಿವು-ಸಾವುಗಳನ್ನು, ವೇದಕಾಲೀನ ನಾಗರಿಕತೆಯ ಕಡೆಗೆ ಅದರ ಪ್ರಭಾವವನ್ನು ಸಮೂಲಾಗ್ರವಾಗಿ ವಿವರಿಸಿದೆ. "ಇತಿಹಾಸದ ರಾಜಕೀಯ", "ಪ್ರೊಫೈಲ್ಸ್ ಇನ್ ಡಿಸೆಪ್ಶನ್", "ಗುಪ್ತ ಪದರುಗಳು: ಭಾರತೀಯ ಸಂಸ್ಕೃತಿಯ 10000 ವರ್ಷಗಳ ಅನ್ವೇಷಣೆ" ಅವರ ಇನ್ನುಳಿದ ಪ್ರಮುಖ ಗ್ರಂಥಗಳು. ಕೃಷ್ಣನ ಬಗೆಗಿನ ಅವರ ವಿಚಾರವನ್ನು ಗಮನಿಸುವಂತಹದ್ದು; ಪುರಾಣಗಳನ್ನು ಮೀರಿ ನೋಡಿದರೆ ಕೃಷ್ಣನ ನೈಜ ವ್ಯಕ್ತಿ ಚಿತ್ರಣ ದೊರಕೀತು. ಆತನೊಬ್ಬ ಪ್ರಾಯೋಗಿಕ ತತ್ತ್ವಜ್ಞಾನಿ. ತನ್ನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕ್ರಿಯಾಧಾರಿತ  ಸಾಂಖ್ಯ ಸಿದ್ಧಾಂತದತ್ತ ಸರಿದು ಕರ್ಮಯೋಗವನ್ನು ಪ್ರತಿಪಾದಿಸಿದ ಶ್ರೇಷ್ಠ ಭಗವದ್ಗೀತೆಯನ್ನು ಕೊಟ್ಟ ಶ್ರೇಷ್ಠ ಮಾನವನಾತ ಎಂದಿದ್ದಾರೆ ರಾಜಾರಾಮ್.

                 ವಿಟ್ಜೆಲ್, ಸ್ಟೀವ್ ಫಾರ್ಮರ್ ಹಾಗೂ ಅವರ ಚೇಲಾಗಳೆಲ್ಲಾ ಸೇರಿಕೊಂಡು ಮಾಧ್ಯಮಗಳಲ್ಲಿ ತಮಗಿದ್ದ ಪ್ರಭಾವವನ್ನು ಬಳಸಿಕೊಂಡು ರಾಜಾರಾಮರನ್ನು ಅಪಹಾಸ್ಯ ಮಾಡುತ್ತಾ ತೇಜೋವಧೆ ನಡೆಸಿದರೂ ಆತ ಧೃತಿಗೆಡಲಿಲ್ಲ. ಆತ ವಂಶವಾಹಿ ಆಧಾರಿತವಾಗಿ ವೈದಿಕ ನಾಗರಿಕತೆ ಮೂಲವನ್ನು ದೃಢೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಈ ಸಂಶೋಧನೆಯಿಂದ ಆರ್ಯರು ಬೇರೆಲ್ಲಿಂದಲೂ ಬಂದವರಲ್ಲವೆಂದೂ ಹತ್ತಾರು ಸಾವಿರ ವರ್ಷಗಳಿಂದಲೂ ಇಲ್ಲಿಯೇ ನೆಲೆಸಿರುವ ಜನಾಂಗವೆಂದೂ, ಆರ್ಯವೆಂದರೆ ಶ್ರೇಷ್ಠ ಎಂಬ ಅರ್ಥವೇ ಹೊರತು ಜನಾಂಗಸೂಚಕವಲ್ಲವೆಂದೂ, ದ್ರಾವಿಡವು ಕೇವಲ ಪ್ರದೇಶಸೂಚಕವೆಂದು ದೃಢಪಡಿಸಿದರು. ಮುಂದಿನ ಅವರ ಸಂಶೋಧನ ಪ್ರಕ್ರಿಯೆ ನವೀಕರಿಸಬಹುದಾದ ಶಕ್ತಿಗಳ ತಂತ್ರಜ್ಞಾನದತ್ತ ತಿರುಗಿತು. ಯೋಜನಾ ಆಯೋಗದಿಂದ ಹೊರಗಿರುವ ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ. ಭಾರತದ ಯೋಜನಾ ಆಯೋಗ 1960ರ ದಶಕದ ಸೋವಿಯತ್ ಯುಗದ ಮನಃಸ್ಥಿತಿಯಲ್ಲೇ ಇಂದಿಗೂ ಉಳಿದುಕೊಂಡಿರುವುದು ಇದಕ್ಕೆ ಕಾರಣ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಭಾಜಪಾ ಸರಕಾರ ಯೋಜನಾ ಆಯೋಗವೆಂಬ ಕೆಲಸಕ್ಕೆ ಬಾರದ ಬಿಳಿಯಾಣೆಯನ್ನು ಕಿತ್ತೆಸೆದು, ನೀತಿ ಆಯೋಗವನ್ನು ಆರಂಭಿಸಿದ್ದು ನೆನಪಿರಬಹುದು. ಸೌರ ವಿದ್ಯುತ್ ಸ್ಥಾವರಗಳನ್ನು ವಿಕೇಂದ್ರೀಕೃತಗೊಳಿಸಿ ಜಲವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳ ಜೊತೆ ಸಂಯೋಜಿಸಬೇಕು. ಜಲವಿದ್ಯುತ್ ಉತ್ಪಾದನೆಗಾಗಿರುವ ಜಲಾಶಯಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚು ಸೌರಶಕ್ತಿಯನ್ನು ಪಡೆಯುವ ಬಗೆಯನ್ನು ಆತ ಪ್ರತಿಪಾದಿಸಿದ್ದರು.

               ಶೈಕ್ಷಣಿಕವಾಗಿ ನಮ್ಮ ದೇಶದ ಇತಿಹಾಸವನ್ನು ತಿರುಚಿದ ಪಠ್ಯಗಳನ್ನು ಓದುವ ನಮ್ಮ ಪೀಳಿಗೆಗಳ ಹಣೆಯಬರಹ ಬದಲಾಗಿಲ್ಲ ನಿಜ. ಆದರೆ ನಮ್ಮ ನಿಜವಾದ ಇತಿಹಾಸವನ್ನು ಅರಿಯುವಂತೆ ಮಾಡಿದ ಕೆಲವೇ ಕೆಲವು ಮಹಾತ್ಮರಲ್ಲಿ ರಾಜಾರಾಮ್ ಒಬ್ಬರು. ತನಗಿದ್ದ ದುಬಾರಿ ವೇತನದ ಕೆಲಸ, ಸ್ಥಾನಮಾನಗಳನ್ನು ಬದಿಗಿಟ್ಟು ದೇಶದ ನಿಜವಾದ ಇತಿಹಾಸವನ್ನು ಸಂಶೋಧಿಸಿ ದೇಶೀಯರ ಸ್ವಾಭಿಮಾನವನ್ನು ಉದ್ದೀಪನಗೊಳಿಸುವ ಮಹತ್ಕಾರ್ಯವನ್ನು ದೇಶ ವಿರೋಧಿಗಳಿಂದ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂದು, ಅವಮಾನವನ್ನು ನುಂಗಿಕೊಂಡು ಮಾಡಿದ ಆತ ನಿಜಾರ್ಥದಲ್ಲಿ ಈ ದೇಶದ ನವರತ್ನ. ಜೀವಿತವಿಡೀ ಆತ ನಡೆಸಿದ್ದು ಸಂಶೋಧನೆ; ಮನುಕುಲದ ಉದ್ಧಾರಕ್ಕಾಗಿ; ತನ್ನ ದೇಶದ ಇತಿಹಾಸವನ್ನು ಎದೆಯುಬ್ಬಿಸಿಕೊಂಡು ಹೇಳುವ ಅವಕಾಶ ಭಾರತೀಯನಿಗೆ ಒದಗಿಸಲಿಕ್ಕಾಗಿ. ಅಂತಹಾ ಪುಣ್ಯಜೀವಿಯನ್ನು ಅದು ಮರೆಯಾದ ಸಮಯದಲ್ಲಾದರೂ ನೆನಪಿಸಿಕೊಳ್ಳುವುದು ಆತನ ಕಾರ್ಯಕ್ಕೆ ಸಲ್ಲಿಸಬಹುದಾದ ಅತ್ಯಲ್ಪ ಕೃತಜ್ಞತೆ!

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ


              ಅದು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಮಟ್ಟದ ಪ್ರಪ್ರಥಮ ಕಾರ್ಯಾಗಾರ. ಆಗ ದತ್ತೋಪಂಥ ಠೇಂಗಡಿಯವರು ಅಂದ ಮಾತುಗಳು ಹಿಂದೂ ಎಂಬ ಜೀವನ ಪದ್ದತಿ ಹೇಗೆ ತನ್ನನ್ನು ಕಾಲ ಕಾಲಕ್ಕೆ ಪಕ್ವಗೊಳಿಸುತ್ತಾ ಸಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ. "ಒಂದೇ ಕಾಲದಲ್ಲಿ ವಿವಿಧ ಪರಿಸ್ಥಿತಿಗಳಲ್ಲಿರುವ ವಿಭಿನ್ನ ಸಮಾಜಗಳಿಗೆ ಒಂದೇ ವಿಚಾರಧಾರೆ ಇರುವುದಿಲ್ಲ. ಹಾಗೆಯೇ ಒಂದು ಸಮಾಜಕ್ಕೆ ಒಂದೇ ವಿಚಾರ ವಿಭಿನ್ನ ಕಾಲಘಟ್ಟಗಳಲ್ಲಿ ಸೂಕ್ತವಾಗಿ ಇರಬೇಕೆಂದೇನೂ ಇಲ್ಲ. ಒಂದು ಸಿದ್ಧಾಂತವು ಆ ಕಾಲದಲ್ಲಿ ಒದಗಿದ ಜ್ಞಾನ ಸಮುಚ್ಛಯದಿಂದ ಮಾತ್ರವೇ ಒಂದು ಆಕಾರವನ್ನು ಪಡೆದುಕೊಳ್ಳುವುದರಿಂದ ಹಾಗೂ ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುವುದರಿಂದ ಒಂದೇ ಚಿಂತನೆಯೂ ಎಲ್ಲಾ ಕಾಯಿಲೆಗಳಿಗೆ ರಾಮಬಾಣವಾಗಲಾರದು" ಎನ್ನುತ್ತಾರೆ ಠೇಂಗಡಿ. ಎಷ್ಟು ಶ್ರೇಷ್ಠ ಚಿಂತನೆ. ಹಾಗೆಂದು ಇದೇನೂ ಹೊಸ ಚಿಂತನೆಯೆಂದೇನೂ ಅಲ್ಲ. ವೇದಗಳು ಘೋಷಿಸಿದ ಚಿಂತನೆಯೇ ಇದು. ಕಾಲಕಾಲಕ್ಕೆ ದೃಷ್ಟಾರರು ಕಂಡುಕೊಂಡ ಮಂತ್ರವೇ ಇದು. ವಿಶೇಷ ಎಂದರೆ ಆ ಚಿಂತನೆ ಈ ಕಾಲದಲ್ಲೂ ಪ್ರವಹಿಸಿದ್ದು. ಅದಕ್ಕೇ ವೇದವು ಅಪೌರುಷೇಯವಾದದ್ದು. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಸದಾ ಕಾರ್ಯಾಚರಿಸುವ ಹಿಂದೂ ಎಂಬ ಜೀವನ ಪದ್ದತಿ ನಿಂತ ನೀರಾಗದೇ ಸನಾತನ ಧರ್ಮವಾದದ್ದು. ಇಂದು ಬಹುತ್ವ ನಾಶವಾಗುತ್ತಿದೆ ಎಂದು ಬೊಬ್ಬಿರಿವ ಪ್ರಭೃತಿಗಳೆಲ್ಲಾ ಅಳವಡಿಸಿಕೊಳ್ಳಬೇಕಾದ ಚಿಂತನೆ ಇದು. ಎಲ್ಲದಕ್ಕೂ ಕೆಂಪು ಬಳಿದು ರಕ್ತ ಹರಿಸಲು ಹೊರಟ ರಕ್ಕಸರಿಗೆ ಬಹುತ್ವದ ನಿಜವಾದ ಅರ್ಥ ಏನು ತಿಳಿಸುವ ಮಾತುಗಳಿವು. ಈ ಧ್ಯೇಯ ಠೇಂಗಡಿಯವರ ಮೂಲಕ ಮಜ್ದೂರ್ ಸಂಘ, ಸ್ವದೇಶೀ ಜಾಗರಣ ಮಂಚ್ ಭಾರತೀಯ ಕಿಸಾನ್ ಸಂಘಗಳಲ್ಲೂ ಪ್ರವಹಿಸಿತು, ಜನಸಂಘಕ್ಕೂ ಹೊಕ್ಕಿತು, ಸಂಸತ್ತಿನೊಳಗೂ ವಿರಾಜಮಾನವಾಯಿತು, ಸಮಾಜದ ನಡುವೆಯೂ ಪ್ರತಿಷ್ಠಿತವಾಯಿತು.

                  ಹೋರಾಟವು ಅನ್ಯಾಯದ ವಿರುದ್ಧವಾಗಿರಬೇಕೇ ಹೊರತು ಯಾವುದೇ ವರ್ಗದ ವಿರುದ್ಧವಲ್ಲ ಎನ್ನುವುದನ್ನು ಆತ ಸ್ಪಷ್ಟಪಡಿಸಿದ್ದರು. ಜನರನ್ನು ಜಾಗೃತಿಗೊಳಿಸುವುದು ಹಾಗೂ ಸಂಘಟನೆಯನ್ನು ಬಲಗೊಳಿಸುವುದರಿಂದ ಬದಲಾವಣೆಯನ್ನು ತರಬಹುದೇ ಹೊರತು ಬರಿಯ ಹರತಾಳಗಳಿಂದಲ್ಲ ಎನ್ನುವುದನ್ನು ಅವರು ಮಾಡಿ ತೋರಿಸಿದರು. "ಜಗತ್ತಿನ ಕಾರ್ಮಿಕರೇ ಒಂದುಗೂಡಿ" ಎನ್ನುವುದನ್ನು ಆತ "ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ" ಅಂತ ಬದಲಾಯಿಸಿದರು. ಹಾಗಾಗಿಯೇ ಕಾರ್ಮಿಕ ಚಳುವಳಿಗಳಲ್ಲಿ ಅಂದಿನವರೆಗೆ ಕಾಣದಿದ್ದ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಬಿಎಂಎಸ್ ಮೂಲಕ ಕೇಳಿ ಬರಲಾರಂಭಿಸಿತು. ಅಂದಿನವರೆಗೆ ಸ್ಪೂರ್ತಿಗಾಗಿ ರಷ್ಯಾ, ಚೀನಾಗಳತ್ತಲೇ ನೋಡುತ್ತಲಿದ್ದ ಕಾರ್ಮಿಕ ಚಳುವಳಿ ಎಡಪಂಥೀಯವೆಂಬ ಏಕ ವಿಚಾರಧಾರೆಯಿಂದ ಹೊರಳಿ ದೇಶೀ ಸೊಗಡಿನತ್ತ ಸಾಗಿತು. ಧ್ವಜದ ಬಣ್ಣ ಕೆಂಪಿನಿಂದ ಕೇಸರಿಯಾಗಿ ಬದಲಾಯಿತು. ಅದರ ಧ್ಯೇಯವು ಶ್ರಮಿಕರ ರಾಷ್ಟ್ರೀಯಕರಣ, ರಾಷ್ಟ್ರದ ಔದ್ಯೋಗೀಕರಣ, ಉದ್ಯೋಗಗಳ ಶ್ರಮಿಕೀಕರಣವೆಂಬ ಬಿಎಂಎಸ್ ಧ್ಯೇಯವಾಗಿ ಪರಿವರ್ತಿತವಾಯಿತು.

                ಠೇಂಗಡಿ ಅನಾಸಕ್ತ ಯೋಗದ ಸಾಕಾರ ಮೂರ್ತಿ. 1975ರಲ್ಲಿ ಜಯಪ್ರಕಾಶ ನಾರಾಯಣರಿಂದ ಸ್ಥಾಪಿಸಲ್ಪಟ್ಟ ಲೋಕಸಂಘರ್ಷ ಸಮಿತಿಯ ನೇತೃತ್ವ ವಹಿಸಿಕೊಂಡ ಠೇಂಗಡಿ ಇಂದಿರಾಗಾಂಧಿ ದೇಶದ ಮೇಲೆ ವಿಧಿಸಿದ್ದ ತುರ್ತುಪರಿಸ್ಥಿತಿ ಹಾಗೂ ಆಕೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟವನ್ನು ರೂಪಿಸಿದವರು. ಆಕೆ ಚುನಾವಣೆಯಲ್ಲಿ ಸೋತು ಜನತಾ ಸರಕಾರ ಅಧಿಕಾರಕ್ಕೆ ಬಂದಾಗ, ಅವರಾಗಿಯೇ ಜನಸಂಘವನ್ನು ಜನತಾ ಸರಕಾರದ ಜೊತೆ ಜೋಡಿಸಿದ್ದರೂ ಮೊರಾರ್ಜಿ ಸಂಪುಟದಲ್ಲಿ ಸಿಕ್ಕ ಮಂತ್ರಿ ಪದವಿಯನ್ನು ನಿರಾಕರಿಸಿದರು. ಮಾತ್ರವಲ್ಲ ರಾಜಕೀಯದಿಂದಲೇ ಹೊರಬಂದುಬಿಟ್ಟರು. ಮುಂದೆ ತಮಗೆ ಪದ್ಮವಿಭೂಷಣದಂತಹಾ ಸಮ್ಮಾನ ಘೋಷಣೆಯಾದಾಗ ಅದನ್ನೂ ನಿರಾಕರಿಸಿದರು. ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳನ್ನು, ಪ್ರಶಸ್ತಿಗಾಗಿ ಆಳುವ ವರ್ಗದ ಕೈ, ಕಾಲು ಹಿಡಿಯುವ ವ್ಯಕ್ತಿಗಳನ್ನೇ ಕಾಣುತ್ತಿರುವ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಯಿದು!

                   ಇಂದಿನ ಕೇಂದ್ರ ಸರಕಾರದ ನೀತಿಗಳಾದ ಸಾರ್ವತ್ರಿಕ ಆರೋಗ್ಯ ಸೇವೆ, ಸರ್ವರಿಗೂ ವಿದ್ಯುತ್ ಆದಿಯಾಗಿ ಇಂಧನಗಳ ಲಭ್ಯತೆ ಎಲ್ಲವೂ ಠೇಂಗಡಿಯವರ ಮೂಲ ಪರಿಕಲ್ಪನೆಗಳೇ. ಮೋದಿ ಸರಕಾರದ ಹೂಡಿಕೆಯ ವಿಧಾನಗಳು ಹಾಗೂ ನೀತಿ ನಿಯಮಗಳು ಹಾಗೂ ಪಿಎಸ್ಯು(PSU)ಗಳನ್ನು ಮಾರಾಟ ಮಾಡುವ ಬದಲು ಷೇರು ಮಾರುಕಟ್ಟೆಗಳಲ್ಲಿ ಪ್ರವೇಶ ಒದಗಿಸಿರುವುದು ಇವು ಠೇಂಗಡಿಯವರು ಪ್ರತಿಪಾದಿಸಿದ ನೀತಿಗಳೇ. ಈ ನೀತಿಯನ್ನು ವಾಜಪೇಯಿ ಸರಕಾರದ ವಿತ್ತ ಸಚಿವ ಯಶ್ವಂತ್ ಸಿನ್ಹಾ ಅನುಸರಿಸದೇ ಇದ್ದಾಗ ಆತ ತಮ್ಮದೇ ಸ್ನೇಹಿತರು, ಸಮಾನ ಮನಸ್ಕರು, ಸಿದ್ಧಾಂತವಾದಿಗಳಿದ್ದ ಸರಕಾರದ ವಿರುದ್ಧವೇ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಯನ್ನೂ ಕೈಗೊಂಡಿದ್ದರು. ಇದು ಒಂದು ಧ್ಯೇಯಕ್ಕಾಗಿ, ತತ್ತ್ವಕ್ಕಾಗಿ ಅವರು ಬಡಿದಾಡುತ್ತಿದ್ದ ರೀತಿ. ಈಗಿನ ಜೀ ಹುಜೂರ್ ಸಂಸ್ಕೃತಿಯ, ಹಣಕ್ಕಾಗಿಯೇ ಕೆಲಸ ಮಾಡುವ ರಾಜಕಾರಣಿಗಳು ಠೇಂಗಡಿಯವರಿಂದ ಕಲಿಯಬೇಕಾದುದು ಸಾಕಷ್ಟಿದೆ!

               ಡಾಕ್ಟರ್ ಹೆಡಗೇವಾರರೊಂದಿಗೆ ಅನುಶೀಲನ ಸಮಿತಿಯಲ್ಲಿದ್ದ ನರೇಂದ್ರ ಭಟ್ಟಾಚಾರ್ಯ ಬಾಲಾಸೋರ್ ಕದನದಲ್ಲಿ ಬಾಘಾ ಜತೀನನ ವೀರ ಮರಣದ ಬಳಿಕ ಮಾರುವೇಷದಲ್ಲಿ ಎಂ.ಎನ್ ರಾಯ್ ಆಗಿ ರಷ್ಯಾ ಪ್ರವೇಶಿಸಿ ತಾಷ್ಕೆಂಟಿನಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷವನ್ನು ಆರಂಭಿಸಿದ. ಮುಂದೆ ಅದೇ ಮಾಸ್ಕೋ ಸಿದ್ಧಾಂತವನ್ನು ಭಾರತಕ್ಕೂ ತಂದ. ಅದರ ಮೂಲಕ ಬೆಳೆದು ಬಂದ ಕಾರ್ಮಿಕ ಸಂಘಟನೆಗಳಿಗೆ ತಮಗಾಗದ ಪ್ರತಿಯೊಂದರ ವಿರುದ್ಧವೂ ಹರತಾಳ, ಹೊಡಿ-ಬಡಿ, ಕೊಚ್ಚು-ಕೊಲ್ಲು ಇವೇ ಧ್ಯೇಯವಾಗಿ ಬೆಳೆಯಿತು. ಅದೇ ಹೆಡಗೇವಾರರು ಚತುರ್ವಿಧ ಪುರುಷಾರ್ಥಗಳನ್ನು ಆಧರಿಸಿದ ಹಿಂದೂ ಜೀವನ ಪದ್ದತಿಯ ನೆಲೆಗಟ್ಟಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಬೆಳೆದು ಬಂದ ಠೇಂಗಡಿಯವರು ಆರಂಭಿಸಿದ ಕಾರ್ಮಿಕ ಸಂಘಟನೆ ಸಾಂಪ್ರದಾಯಿಕ ಹಿಂದೂ ವಿಶ್ವದೃಷ್ಟಿಕೋನವನ್ನು ಅಪ್ಪಿಕೊಂಡು ತೀವ್ರ ವಿರೋಧದ ನಡುವೆಯೂ ಅಪಾರ ಕರ್ತೃತ್ವ ಶಕ್ತಿ ಹಾಗೂ ದೂರದೃಷ್ಟಿಯ ಫಲದಿಂದ ಬೆಳೆದು ಹೆಮ್ಮರವಾಯಿತು.

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು


           ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೆದ್ದಿತು. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು.

                   ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                 ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.

                 ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

               ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.