ಪುಟಗಳು

ಭಾನುವಾರ, ಆಗಸ್ಟ್ 10, 2014

ಪ್ರಕೃತಿಯನ್ನು ದಹಿಸುತ್ತಿದೆ ಮಾನವನ ವಿಕೃತಿ

ಪ್ರಕೃತಿಯನ್ನು ದಹಿಸುತ್ತಿದೆ ಮಾನವನ ವಿಕೃತಿ
               ಕಳೆದ ಕೆಲವು ದಿವಸಗಳ ಹಿಂದೆ ಕೇಳಿ ಬರುತ್ತಿದ್ದ ಮಾತು ಅನಾವೃಷ್ಟಿ...ಈಗ ಅತಿವೃಷ್ಟಿ! ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ ಇನ್ನು ಕೆಲವೆಡೆ ಒಂದು ಹನಿಯೂ ಇಲ್ಲ. ಕುಡಿಯುವ ನೀರಿಗೂ ತತ್ವಾರ. ಆಷಾಢ ಮಾಸದಲ್ಲಿ ನಿರಂತರ ಮಳೆಯಿಂದ ಚಳಿ ಹಿಡಿಸುತ್ತಿದ್ದ ಮಲೆನಾಡ ಪ್ರಾಂತ್ಯದಲ್ಲಿ ಅಗಾಧ ಮಳೆ ಸುರಿಯುತ್ತಿದ್ದಾಗ್ಯೂ ಧಗೆ ತಡೆಯಲಾಗದ ಪರಿಸ್ಥಿತಿ. ಹಿಂದೆ ಇದ್ದಂತೆ ಕ್ರಮವಾಗಿ ಬರುತ್ತಿದ್ದ ಮಳೆ-ಚಳಿ-ಬೇಸಗೆಗಳು ಇಂದು ಅಸ್ತವ್ಯಸ್ತ. ಯಾಕೆ ಹೀಗೆ ಎಂದು ಚಿಂತಿಸುವ ವ್ಯವಧಾನ ಹಣದ ಹಿಂದೆ ಓಡುತ್ತಿರುವ ಇಂದಿನ ಪೀಳಿಗೆಗೆ ಇದೆಯೇ? ನಗರೀಕರಣ, ಹಣದ ಹಪಹಪಿ, ಕೃಷಿಕರ ಕಡೆಗಣನೆಯೇ ಇದಕ್ಕೆ ಕಾರಣಗಳೆನ್ನುವುದು ಕಣ್ಣಿಗೆ ರಾಚುತ್ತಿರುವ ಸತ್ಯ. ಮಲೆನಾಡಿನಲ್ಲಿ ಕೃಷಿಗೆ ಸರಿಯಾದ ಮೌಲ್ಯವಿರದೇ ಇದ್ದಾಗ ಜೀವ ಉಳಿಸಿಕೊಳ್ಳಲು ಅಡಿಕೆ ಗಿಡ ಕಡಿದು, ಇದ್ದ ಗದ್ದೆಗಳನ್ನು ಒಡೆದು ರಬ್ಬರ್ ಬೆಳೆದುದರ ಪರಿಣಾಮ ಇಂದು ಗೋಚರವಾಗುತ್ತಿದೆ. ಪಶ್ಚಿಮ ಘಟ್ಟಗಳ ಜೀವರಾಶಿಯನ್ನು ಪೊರೆಯುವ ಸಸ್ಯಸಂಕುಲ ಜೀವ ಕಳೆದುಕೊಂಡು ರಬ್ಬರ್ ಗುಡ್ಡಗಳಾಗಿರುವುದು ವಿಪರ್ಯಾಸ. ಇನ್ನು ರಸ್ತೆ ಬದಿಗಳಲ್ಲಿ ಅಕೇಶಿಯಾಗಳದ್ದೇ ಕಾರುಬಾರು. ಇದ್ದ ನೀರಿನಂಶವನ್ನು ಹೀರಿಕೊಂಡು ಮಣ್ಣಿನ ಜೀವೋತ್ಪಾದಕ ಗುಣವನ್ನೆಲ್ಲಾ ಹೀರಿ ಬರಡಾಗಿಸಿ ತಾವು ಮಾತ್ರ ಬದುಕುವ ಈ ರಬ್ಬರ್, ಅಕೇಶಿಯಾಗಳು ಇಡೀ ಜೀವಸಂಕುಲವನ್ನೇ ನಿಧಾನವಾಗಿ ಆಪೋಶನಗೈಯ್ಯುತ್ತಿರುವುದು ಮಾನವನ ಗಣನೆಗೆ ಬಾರದಿರುವುದು ದುರಂತ.
            ಮಲೆನಾಡಿನಲ್ಲಿ ಗುಡ್ಡದಿಂದ ಇಳಿದು ಬರುವ ಶುದ್ಧ ಸ್ಫಟಿಕ ಅಬ್ಬಿಯ ನೀರನ್ನೇ ಬಳಸುತ್ತಿದ್ದಿದ್ದು ತಿಳಿದಿರಬಹುದು. ಆದರೆ ಅಂತಹ ಚಿತ್ರಣ ಇಂದು ಮರೆಯಾಗಿದೆ. ಬಯಲು ಪ್ರದೇಶಗಳಲ್ಲಿ ಕೆರೆಗಳು ಬತ್ತಿ ಹೋಗುತ್ತಿವೆ. ಕಾರಣವೇನು? ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಧಾರಣಾಶಕ್ತಿ ಭೂಮಿಯಲ್ಲಿ ಕುಸಿದಿದೆ. ಮಳೆಗೆ ಮೈಯೊಡ್ಡಿ ನಿಲ್ಲುತ್ತಿದ್ದ ಬಂಡೆಗಳು ಪುಡಿಯಾಗಿ ರಸ್ತೆಗಳಿಗೋ, ಕಟ್ಟಡಗಳಿಗೋ ಬಳಕೆಯಾಗುತ್ತವೆ. ಇದ್ದ ಮರಗಳನ್ನು ಕಡಿದುದರ ಪರಿಣಾಮ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಗುಡ್ಡಗಳಿಗೆ ಇಲ್ಲವಾಗಿದೆ. ಒರತೆಗಳ ಮೂಲವಾಗಿದ್ದ ಬೆಟ್ಟಗಳೂ ಹಣದಾಸೆಗೆ ಬಟ್ಟಬಯಲಾಗುತ್ತಿವೆ. ಕಾಂಕ್ರೀಟಿಕರಣದ ನಡುವೆ ನೀರು ಇಂಗುವುದು ಹೇಗೆ? ನೀರಿನ, ಭೂಮಿಯ ಒಟ್ಟಾರೆ ಪರಿಸರದ ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ ಪಾರಂಪರಿಕ ವ್ಯವಸ್ಥೆಯೊಂದನ್ನೇ ನಾಶ ಮಾಡಿ, ನಿಸರ್ಗದತ್ತ ಸಂಪನ್ಮೂಲಗಳನ್ನು ಕಸಿದುಕೊಂಡು, ಕೃಷಿ ಬದುಕು ಡೋಲಾಯಮಾನವಾಗಿದೆ. ಈ ತಪ್ಪಿರುವ ನಿಸರ್ಗ ಕ್ರಮ ಕೇವಲ ಮಲೆನಾಡು, ಬಯಲುಸೀಮೆ ಒಳಗೊಂಡಿರುವ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ತರಭಾರತದ್ದೂ, ಉತ್ತರವನ್ನು ಪೊರೆಯುತ್ತಿರುವ ಭೌಮಿಕ-ಜೈವಿಕ-ಆಧ್ಯಾತ್ಮಿಕ ವಿಸ್ಮಯಗಳನ್ನೊಳಗೊಂಡ ಹಿಮಾಲಯದ್ದೂ ಇದೇ ಪರಿಸ್ಥಿತಿ!
               ಶತಮಾನದ ಅತ್ಯಂತ ಭೀಕರ ದುರಂತವಾದ ಉತ್ತರಾಖಂಡದ ಮೇಘಸ್ಫೋಟ ಸಂಭವಿಸಿ ಒಂದು ವರ್ಷ ಕಳೆದಿದೆ. ನಾಲ್ಕು ದಿನಗಳ ಪರ್ಯಂತ ನಡೆದ ದುರಂತದಿಂದ ತತ್ತರಿಸಿದ ರಾಜ್ಯಕ್ಕೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಅನಾಹುತದ ಪ್ರಮಾಣವನ್ನು ಎಷ್ಟಿರಬಹುದು. ಕುಂಭದ್ರೋಣ ಮಳೆಯೊಂದಿಗೆ ಹಿಮಪಾತವೂ ಸೇರಿ ಮಂದಾಕಿನಿ, ಅಲಕಾನಂದಗಳು ರೌದ್ರರೂಪ ತಾಳಿದವು. ಯಾತ್ರಿಕರು, ರಸ್ತೆ, ಸೇತುವೆ, ಕಟ್ಟಡ, ವಾಹನಗಳು, ವಿದ್ಯುತ್ ಸ್ಥಾವರಗಳು... ಎಲ್ಲವೂ ನಿರ್ನಾಮವಾದವು. ಹಿಮಾಲಯದ ತಪ್ಪಲಿನ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಲಕ್ಷಾಂತರ ಮಂದಿಯನ್ನು ಸೇನೆ, ಗುಜರಾತ್ ಸರಕಾರ, ರಾ.ಸ್ವ.ಸಂ.ದ ಸದಸ್ಯರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಿದರು. ಸುಮಾರು 6,000ಕ್ಕೂ ಹೆಚ್ಚು ಜನ ಮರಣವನ್ನಪ್ಪಿದ್ದರೆ, ಉತ್ತರಾಖಂಡ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದರು. ಅಂತಹ ಮೇಘಸ್ಫೋಟ ಅಷ್ಟು ಪ್ರಮಾಣದಲ್ಲಲ್ಲದಿದ್ದರೂ ಈ ಬಾರಿ ಮತ್ತೆ ಸಂಭವಿಸಿದೆ. ಧಾರಾಕಾರ ವರ್ಷಧಾರೆ, ಹಿಮಪಾತ, ಭೂಕುಸಿತದಿಂದಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ವೈಪರೀತ್ಯಗಳಿಂದ ಕೆಲವು ದಿನಗಳ ಪರ್ಯಂತ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಈಗಷ್ಟೇ ಆರಂಭಗೊಂಡಿದೆ.
               ಈ ರೀತಿಯಾಗಿ ಒಮ್ಮಿಂದೊಮ್ಮೆಲೇ ಪ್ರಕೃತಿ ಮುನಿಯಲು ಕಾರಣವೇನು ಎಂದು ಯೋಚಿಸತೊಡಗಿದರೆ ಕಾಣಿಸತೊಡಗುವುದು ಮತ್ತದೇ ಮಾನವ ಅತಿಕ್ರಮಣ. ಹೆಚ್ಚುತ್ತಿರುವ ಅಣಿಕಟ್ಟು, ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ, ಹೋಟೆಲ್, ವಸತಿ ಗೃಹಗಳು ಪರಿಸರಕ್ಕೆ ಅಪಾರ ಧಕ್ಕೆ ಉಂಟುಮಾಡಿದುದೇ ಈ ದುರಂತಕ್ಕೆ ಕಾರಣವೆಂದು ಪರಿಸರ-ಭೂ ವಿಜ್ಞಾನಿಗಳ ವರದಿ ಹೇಳುತ್ತಿದೆ. ಮೇಘ ಸ್ಫೋಟದಿಂದ ಭೂಮಿಗೆ ಧುಮುಕುವ ನೀರು, ಅದರ ಹರಿವು ಮತ್ತು ಅದರಿಂದಾಗುವ ಹಾನಿಯ ಮಟ್ಟವನ್ನು ಕಡಿಮೆ ಮಾಡುವುದು ಪರ್ವತಗಳಿಂದ ಮಾತ್ರ ಸಾಧ್ಯ. ಮಂದಾಕಿನಿ ನದಿಗೆ ಮೂಲ ನೀರು ಬರುವುದು ಚೌರಾಬಾರಿ ಮತ್ತು ಅದರೊಂದಿಗಿನ ಅಗಣಿತ ಹಿಮಜಲ ಬುಗ್ಗೆಗಳಿಂದ. ಅವೆಲ್ಲಾ ವೃತ್ತಾಕಾರದಲ್ಲಿ ಹರಿದು ಕೆಳಗಿನ ಕೇದಾರ ನಗರವನ್ನು ಬಳಸಿ ಹರಿಯುತ್ತವೆ. ಈ ಸರೋವರಗಳಲ್ಲಿ ಮಂಜಿನ ಸವಕಳಿ ಸಹಜ. ಹಿಮಾಲಯ ಶ್ರೇಣಿಯಲ್ಲಿನ ಕಟ್ಟಡ-ಕಾಮಗಾರಿ-ಜನ ದಟ್ಟಣೆ ಮೇಲ್ಪದರದಲ್ಲಿ ಹಿಮ ಕುಸಿಯುವಂತೆ ಮಾಡಿ ಈ ಸ್ಥಳದಲ್ಲಿರುವ ನದಿಯ ಒತ್ತಡವನ್ನು ಹೆಚ್ಚಿಸುತ್ತಿದೆ. ಅಲ್ಲದೆ ಕೇದಾರ ನಾಥದ ಹಿಂಭಾಗದಲ್ಲಿರುವ ಬಟ್ಟಲಾಕಾರದ ಸರೋವರವು, ಕಣಿವೆಯಲ್ಲಿ ಚಂಡ ಮಾರುತದ ಅಲೆಗಳನ್ನು ಉಂಟುಮಾಡುವುದು. ಸರ್ಕಾರ ಇದಾವುದನ್ನೂ ಅರಿಯದೆ ಸಾಲುಸಾಲು ಜಲವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಿದ್ದು ಸ್ವಾಭಾವಿಕವಾಗಿಯೇ ಅಲ್ಲಿನ ಭೌಗೋಳಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿತು. ಮಂದಾಕಿನಿ ಕಣಿವೆಯ ಇಳಿಜಾರು ಪ್ರದೇಶಗಳಲ್ಲಿ ಬೆಳೆಯುವ ಹುಲ್ಲು, ಪೈನ್ ಮತ್ತು ಬರ್ಚ್ ಮರಗಳು ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿಲ್ಲ.  ಇದ್ದ ನೈಸರ್ಗಿಕ ತಡೆಗೋಡೆಗಳು ಜಲವಿದ್ಯುತ್ ಕಾಮಗಾರಿಗೋ, ಕಟ್ಟಡಗಳ ನಿರ್ಮಾಣಕ್ಕೋ ಬಳಕೆಯಾಗಿ ಸತ್ವಹೀನವಾಗಿವೆ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಮಿತಿಯಲ್ಲಿರಬೇಕು. ಪರಿಸರ ಹಾನಿ ನಿಲ್ಲಿಸದೇ ಇದ್ದರೆ ಇಂತಹ ಘಟನೆಗಳು ಆಗುತ್ತಲೇ ಇರುತ್ತವೆ.
               ಹಿಮಾಲಯದ ಶಿಖರಗಳು, ನದಿಗಳು ಹಾಗೂ ಅವುಗಳ ಪಾವಿತ್ರ್ಯತೆ ಉಳಿಯಬೇಕಾದರೆ ಪಾದಚಾರಿ ಯಾತ್ರೆಯೇ ಸಮರ್ಪಕವಾದದ್ದು. ಪರ್ವತಗಳನ್ನು ಅಗೆದಗೆದು ಸಡಿಲಗೊಳಿಸಿ ರಸ್ತೆಗಳನ್ನು ಮಾಡಿದ್ದುದರಿಂದ, ದುರಾಸೆಯಿಂದ ಕಾಡುಗಳನ್ನು ಕಡಿದು ಕಟ್ಟಡ ಕಾಮಗಾರಿ ಮಾಡಿದ್ದುದರಿಂದ ಅಲ್ಲಿ ದುರಂತಗಳು ಸಂಭವಿಸುತ್ತಲೇ ಇವೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ದೇಶದ ರಕ್ಷಣೆಯ ದೃಷ್ಟಿಯಿಂದ ಹಿಮಾಲಯದ ತುದಿಗಳಲ್ಲಿ ರಸ್ತೆ-ರೈಲುಮಾರ್ಗಗಳನ್ನು ಮಾಡಲೇ ಬೇಕಾದ ಅನಿವಾರ್ಯತೆಗೆ ದೇಶ ಸಿಲುಕಿದೆ. ಟಿಬೆಟನ್ನು ಆಕ್ರಮಿಸಿದ ಚೀನೀಯರು ಹಿಮಾಲಯದ ಭಾಗಗಳಲ್ಲಿ ರಸ್ತೆ-ರೈಲು ಮಾರ್ಗಗಳನ್ನು ಮಾಡಿ, ಅಣು ಪರೀಕ್ಷೆಗೂ ಆ ನೆಲವನ್ನು ಬಳಸಿಕೊಂಡು ದೇಶದ ಚಿಂತೆಯನ್ನು ಹೆಚ್ಚಿಸಿರುವುದರಿಂದ ಕನಿಷ್ಟ ಈ ಸೌಲಭ್ಯಗಳನ್ನು ಒದಗಿಸಲೇಬೇಕಾಗುತ್ತದೆ. ಆದರೆ ಉಳಿದ ಅನಗತ್ಯ ಕಾಮಗಾರಿಗಳಿಗೆ ಕಡಿವಾಣಹಾಕಲೇಬೇಕು. ಆಗ ಹಿಮಾಲಯ ಹಿಮಾಲಯವಾಗಿಯೇ ಉಳಿಯುತ್ತದೆ. ಪ್ರಕೃತಿಯೆಂಬ ಆಲಯವನ್ನು ಕೆಡಿಸದೇ ಕಾಪಾಡೋಣ. ಆಗ ಅದು ನಮ್ಮನ್ನು ಪೊರೆಯುತ್ತದೆ.

2 ಕಾಮೆಂಟ್‌ಗಳು:

  1. ನಿಮ್ಮ ಆಧ್ಯಾತ್ಮದ ಲೇಖನಗಳು ಖ್ಯಾತ ಬರಹಗಾರರಾದ ತೀರ್ಥರಾಮ್ ಒಳಲಂಬೆ ಅವರು ಬರೆದ 'ಧ್ಯಾನ' ಅನ್ನೋ ಪುಸ್ತಕದ ಸಾಲುಗಳು..ತಾವು ಅವರ ಹೆಸರನ್ನೇ ಹಾಕಬಹುದಿತ್ತಲ್ಲ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಬಹುಷಃ ನೀವು "ನೀ ಎನಗಿದ್ದರೆ ನಾ ನಿನಗೆ" ಎಂಬ ಲೇಖನದ ಬಗ್ಗೆ ಹೇಳುತ್ತಿದ್ದೀರಿ. ಅವರ ಪುಸ್ತಕ ತುಂಬಾ ಆಳಕ್ಕೊಯ್ಯುವುದರಿಂದ ಈ ಲೇಖನ ಬರೆವಾಗ ಘಟನೆಗೆ ಸಂಬಂಧಿಸಿದಂತೆ ಓದಿರುವ ಸಾಲುಗಳೇ ಯಥಾವತ್ತಾಗಿ ಬಂದಿರಬಹುದು. ಆದರೂ ಅದು ಕೃತಿ ಚೌರ್ಯಕ್ಕೇ ಸಮ. ಅದಕ್ಕಾಗಿ ಕ್ಷಮೆ ಇರಲಿ. ಹೀಗಾಗದಂತೆ ಎಚ್ಚರವಹಿಸುತ್ತೇನೆ. ಬೇರ್ಯಾವ ಲೇಖನಗಳಲ್ಲೂ ಈ ರೀತಿಯಾಗಿಲ್ಲ ಎನ್ನುವ ಭಾವನೆ ನನ್ನದು.

      ಅಳಿಸಿ